ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
“ಮಾವಿನ ಹಣ್ಣು ನನಗೆ ಕೊಡೇ…” ಮೂರು ವರ್ಷದ ಮಗು ರಊಫ್ ಚೀರಿದನು.
“ನನಗೆ ಬಿದ್ದು ಸಿಕ್ಕಿದ್ದು ನಿಂಗೆ ಕೊಡೋಕಾ?…” ಐದು ವರ್ಷದ ಮುಮ್ತಾಜ್ ಹಣ್ಣು ಕಚ್ಚುತ್ತಾ ಕೇಳಿದಳು. ರಊಫ್ ಬಂದು ಮುಮ್ತಾಜಳ ಹಣ್ಣಿಗೆ ಕೈ ಹಾಕಿದನು. ಪರಸ್ಪರ ಹೊಡೆದಾಟ ಅಳು ಆರಂಭವಾಗಿಯೇಬಿಟ್ಟಿತು. ಒಳಗಿನಿಂದ ಅಜ್ಜಿ ಆಮಿನ ಕೂಗಿದಳು.
”ಏ ಜೊಹರಾ… ಎಲ್ಲಿ ಸತ್ತೆ? ಮಕ್ಕಳು ಜಗಳಾಡಿ ಅಳುವುದು ಕೇಳಿಸುವುದಿಲ್ಲವೇ?”
ಅಲ್ಲೇ ಜಗಲಿಯಲ್ಲಿ ಶೂನ್ಯ ದೃಷ್ಟಿಯಿಂದ ಎತ್ತಲೋ ನೋಡುತ್ತಾ ಯೋಚನೆಯಲ್ಲಿ ಮೈ ಮರೆತಿದ್ದ ಜೊಹರಾ ತಾಯಿಯ ಕೂಗಾಟ ಕೇಳಿ ವಾಸ್ತವ ಪ್ರಪಂಚಕ್ಕಿಳಿದಳು. ಒಂಭತ್ತು ತಿಂಗಳ ಹೊಟ್ಟೆ ಹೊತ್ತುಕೊಂಡು ಆಯಾಸದಿಂದ ನಡೆಯುತ್ತಾ ಮಕ್ಕಳ ಬಳಿ ಬಂದಾಕೆ ಇಬ್ಬರಿಗೂ ಒಂದೊಂದು ಗುದ್ದು ಕೊಟ್ಟು ಮಗಳ ಕೈಯಲ್ಲಿದ್ದ ಹಣ್ಣನ್ನು ಕಸಿದು ದೂರ ಎಸೆದಳು. ಮಕ್ಕಳು ಇನ್ನಷ್ಟು ಜೋರಾಗಿ ಅಳತೊಡಗಿದಾಗ “ಬಾಯಿ ಮುಚ್ಚಿ” ಎಂದು ಇನ್ನೊಮ್ಮೆ ಗುದ್ದಿದಳು. ಮಕ್ಕಳು ಅಳುತ್ತಾ ಅಜ್ಜಿಯ ಬಳಿಗೋಡಿ ಅಜ್ಜಿಯನ್ನಪ್ಪಿಕೊಂಡು ದೂರು ಹೇಳಿದರು.
“ನಿನ್ನ ಕೈ ತುಂಡಾಗಿ ಹೋಗಲಿ” ಎಂದು ಮಗಳನ್ನು ಶಪಿಸುತ್ತಾ ಆಮಿನ ರಊಫನನ್ನೆತ್ತಿಕೊಂಡು ಸೊಂಟದ ಮೇಲಿಟ್ಟುಕೊಂಡಳು. ಕೆಲವೇ ದಿನಗಳಲ್ಲಿ ಹೆರಿಗೆಯಾಗುವಂತಿದ್ದ ಜೊಹರಾ ಸಪ್ಪೆಮುಖ ಮಾಡಿಕೊಂಡು, ಹೊಟ್ಟೆ ಎಳೆದುಕೊಂಡು ಬಾಡಿ ಬಸವಳಿದು ಒಳಗಡಿ ಇಟ್ಟಾಗ ತಾಯಿಯೆದೆ ಕರಗಿ ನೀರಾಯಿತು. “ಯಾ ಅಲ್ಲಾ, ನನ್ನನ್ನು ಯಾಕಾದರೂ ಇನ್ನೂ ಉಳಿಸಿದ್ದೀಯಾ?” ಎನ್ನುತ್ತಾ ಮಗಳ ಬಳಿ ಬಂದು, ”ನೋವೇನಾದರೂ ಕಾಣಿಸಿದೆಯೇ?” ಎಂದು ಮೃದುವಾಗಿ ಕೇಳಿದಳು.
‘ಇಲ್ಲ’ ಎಂಬಂತೆ ತಲೆಯಾಡಿಸಿದ ಜೊಹರಾ ಒಳ ಹೋಗಿ ಕೋಣೆಯಲ್ಲಿ ಮಂಚದ ಮೇಲೆ ಬಿದ್ದುಕೊಂಡು ಬೆರಳೆತ್ತಿ ಲೆಕ್ಕ ಹಾಕಿದಳು. ಎಷ್ಟು ತಿಂಗಳು?
ಇಂದಿಗೆ ಸರಿಯಾಗಿ ಮೂರು ತಿಂಗಳು ತುಂಬಿತು ಕಾದರ್ ತನಗೆ ತಲಾಖ್ ನೀಡಿ. ಆ ಮೊದಲಿನ ತನ್ನ ಬದುಕಿಗೂ ಈಗಿನ ಬದುಕಿಗೂ ಎಷ್ಟೊಂದು ವ್ಯತ್ಯಾಸ?
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಸುಂದರವಾದ ಪುಟ್ಟ ಸಂಸಾರ. ಇಬ್ಬರು ಮಕ್ಕಳು. ಚಿಕ್ಕಪುಟ್ಟ ವ್ಯಾಪಾರವೇ ಆದರೂ ಕಾದರ್ ಬರಿಗೈಯಲ್ಲಿ ಮನೆಗೆ ಬಂದದ್ದೇ ಇಲ್ಲ. ಮಕ್ಕಳಿಗಾಗಿ ಬಿಸ್ಕೆಟ್, ಬಾಳೆ ಹಣ್ಣು ಎಂದೂ ತಪ್ಪಿದ್ದಿಲ್ಲ. ಹಸಿ ಮೀನಂತೂ ಇಬ್ಬರಿಗೂ ಬೇಕೇ ಬೇಕು. ಇದ್ದುದರಲ್ಲೇ ನೆಮ್ಮದಿಯ ಬದುಕು.
ಶಾಂತಸಾಗರದಲ್ಲಿ, ಎಳೆ ಬಿಸಿಲಲ್ಲಿ, ಮಂದವಾಗಿ ಬೀಸುತ್ತಿದ್ದ ಗಾಳಿಗೆ ಹಗುರವಾಗಿ ತೊನೆಯುತ್ತಾ ಸಾಗುತ್ತಿದ್ದ ಈ ಪುಟ್ಟ ದೋಣಿಯೂ ಬಿರುಗಾಳಿಗೆ ಸಿಲುಕಿಕೊಂಡಿತು. ಕ್ಷಣ ಮಾತ್ರದಲ್ಲಿ ಎಲ್ಲವೂ ಅದಲು ಬದಲು. ದೋಣಿಯ ಅಂಬಿಗ ನಾಪತ್ತೆ. ಯಾಕೆ ಹೀಗಾಯಿತು?
ಜೊಹರಾ ಶಾಲೆಯ ಮುಖ ಕಾಣದ ಹೆಣ್ಣು. ಮೈ ನೆರೆಯುವವರೆಗೂ ಧಣಿಯ ಮನೆಯಲ್ಲಿ ಚಾಕರಿ ಮಾಡಿದವಳು, ಹೆಣ್ಣೆಂದರೆ ಹೇಗಿರಬೇಕೆಂಬ ಪಾಠಗಳು ಧಣಿಗಳ ಮನೆಯಲ್ಲಿ ಧಾರಾಳ ದೊರೆತಿದ್ದುವು. ಒಡತಿಯಿಂದ ಆಗೀಗ ಏಟು ತಿಂದದ್ದೂ ಇದೆ. ತಾಯಿ ಬಂದಾಗ ದೂರು ಹೇಳಿದ್ದೂ ಇದೆ. ತಾಯಿಯದು ಒಂದೇ ಉತ್ತರ,
“ಹೇಗಾದರೂ ಸಹಿಸಿಕೊ. ಐದು ವರ್ಷ ಕೆಲಸ ಮಾಡಿದ್ದಕ್ಕೆ ಎರಡು ಪವನು ಕೊಡ್ತೇನೇಂತ ಹೇಳಿದ್ದಾರಲ್ಲ? ಈಗ ನೀನು ಇಲ್ಲಿಂದ ಹೊರಟುಬಂದರೆ ಏನೂ ದೊರೆಯದು. ಕಿವಿಗೆ ನಾಲ್ಕು ಅಲಿಕತ್ತು ಹಾಕದಿದ್ದರೆ ನಿನ್ನನ್ನು ಯಾರು ಮದುವೆಯಾಗುತ್ತಾರೆ?”
ಹೌದು, ಹೆಣ್ಣು ಹುಟ್ಟುವುದೇ ಮದುವೆಯಾಗಿ ಮಕ್ಕಳನ್ನು ಹೆರುವುದಕ್ಕಾಗಿ. ಮದುವೆಗೂ ಎಷ್ಟೊಂದು ತೊಡಕುಗಳು!
ಕೊನೆಗೂ ಆಮಿನ ಮಗಳಿಗೊಂದು ಸಂಬಂಧ ಕುದುರಿಸಿಯೇಬಿಟ್ಟಳು. ಹದಿನಾಲ್ಕು ವರ್ಷದ ಶಾಫಿಯನ್ನು ಮುಂದಿಟ್ಟುಕೊಂಡು ಧನಿಗಳ ಮನೆಯಿಂದ ಸಾಲವನ್ನೂ ಪಡೆದಳು. ಮಗಳ ಎರಡು ಪವನಿನೊಡನೆ ತಾನು ದುಡಿದದ್ದನ್ನೂ ಸೇರಿಸಿ, ಮಗಳ ಮದುವೆ ಎಂದು ಹತ್ತು ಮನೆ ತಿರುಗಿ ನಾಲ್ಕು ಪವನಿನ ಆಭರಣ ಮಾಡಿ ಮಗಳಿಗೆ ತೊಡಿಸಿ ಗಂಡನ ಮನೆಗೆ ಕಳಿಸಿದಳು.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಜೊಹರಾ ಮೊದಲ ಹೆರಿಗೆಗೆ ತವರು ಮನೆಗೆ ಬಂದಿದ್ದರೂ ಎರಡನೇ ಹೆರಿಗೆಯಾದದ್ದು ಗಂಡನ ಮನೆಯಲ್ಲೆ. ಹೆಂಡತಿಯ ಬಾಣಂತನದ ಸಮಯದಲ್ಲಿ ಕಾದರ್ ದುಡಿದದ್ದು ಸಾಕಾಗುತ್ತಿರಲಿಲ್ಲ. ಆಗೆಲ್ಲ ಆಮಿನ ತನ್ನ ಕೈಲಾದ ಸಹಾಯ ಮಾಡುತ್ತಿದ್ದಳು. ರಊಫನಿಗೆ ಎರಡು ವರ್ಷ ತುಂಬಿದ ಬಳಿಕ ಆಕೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಎರಡು ಪುಟ್ಟ ಮಕ್ಕಳ ಕೆಲಸದೊಂದಿಗೆ ಗರ್ಭಿಣಿಯ ಆಲಸ್ಯ ಆಕೆಯನ್ನು ಹಣ್ಣು ಮಾಡತೊಡಗಿತ್ತು. ಅತ್ತೆಯಂತೂ ಯಾವ ಕೆಲಸಕ್ಕೂ ಕೈ ಜೋಡಿಸಿದವರೆ ಅಲ್ಲ.
ಆಕೆಗಾಗ ಆರು ತಿಂಗಳು, ಆ ದಿನ ಕಾದರ್ ಮನೆಗೆ ಬಂದವನೇ ಹೆಂಡತಿಯೊಡನೆ, “ನಿನ್ನ ಕಿವಿಯ ಅಲಿಕತ್ತು ಮತ್ತು ಬೆಂಡೋಲೆ ಕೊಡು” ಎಂದನು. ಜೊಹರಾ ಕ್ಷಣಕಾಲ ಅವಾಕ್ಕಾಗಿ “ಯಾಕೆ?” ಎಂದು ಮೆತ್ತಗೆ ಕೇಳಿದಳು.
“ಅದೆಲ್ಲ ನಿನಗೇಕೆ? ಹೇಳಿದಷ್ಟು ಮಾಡು.”
“ಅದೂ… ನನ್ನ ಉಮ್ಮಾ ಹತ್ರ ಕೇಳ್ಬೇಕು.”
“ಈಗ, ನೀನು ನನ್ನ ಹೆಂಡತಿ. ನಾನು ಕೇಳಿದರೆ ಕೊಡಲೇಬೇಕು” ಎಂದು ಜೋರಾಗಿ ನುಡಿದನು.
“ಖರ್ಚಿನ ದಿನಗಳು ಮುಂದಿವೆ. ಈಗಲೇ ಅವುಗಳನ್ನು ನಾನು ಕೊಡಲು ಸಾಧ್ಯವಿಲ್ಲ.” ಕಣ್ಣ ಕೊನೆಯಲ್ಲಾಗಲೇ ಕಣ್ಣೀರು ಇಣುಕತೊಡಗಿತ್ತು.
“ಹೆರಿಗೆಗೆ ನಾನು ಖರ್ಚು ಮಾಡುವುದಿಲ್ಲವಾ? ಮುಂದೆ ಕೂಡಾ ನಾನೇ ಖರ್ಚು ಮಾಡುವವನು. ಈಗ ಅದನ್ನು ಕೊಡು.” ಅಧಿಕಾರವಾಣಿಯಿಂದ ನುಡಿದನಾತ.
“ಉಮ್ಮಾ ಹತ್ರ ಒಂದು ಮಾತು ಕೇಳದೆ ಕೊಡಲಾಗುವುದಿಲ್ಲ” ಜೊಹರಾ ಕೂಡಾ ಹಟದಿಂದೆಂಬಂತೆ ನುಡಿಯುತ್ತಾ ಸೆರಗಿನಿಂದ ಕಣ್ಣೊರೆಸಿಕೊಂಡಳು.
ರಾತ್ರಿ ಮೌನದಲ್ಲೇ ಊಟ ಸಾಗಿತು. ಮಧ್ಯದಲ್ಲಿ ಅತ್ತೆಯೊಮ್ಮೆ ಜೋರಾಗಿಯೇ ಗೊಣಗಿಕೊಂಡಳು, ”ಏನು ಹೆಂಗಸರಪ್ಪ ಈಗಿನ ಕಾಲದವರು! ಗಂಡ ಕೇಳುವಾಗ ಚಿನ್ನ ಕೊಡುವುದಿಲ್ಲವೆನ್ನುವುದೇ? ಇಂತಹ ಹೆಂಡತಿ ಯಾಕಾದರೂ ಬೇಕೊ.”
ಕಾದರ್ ರಾತ್ರಿ ಹೊರ ಜಗಲಿಯಲ್ಲಿ ಮಲಗಿದ. ಜೊಹರಾ ನಿದ್ರೆಯಿಲ್ಲದೆ ಮಲಗಿದ್ದಲ್ಲೇ ಹೊರಳಾಡಿದಳು. ಹೊಟ್ಟೆಯಲ್ಲಿ ಆತನ ಮಗು ಕೈಯನ್ನೊಮ್ಮೆ ಕಾಲನ್ನೊಮ್ಮೆ ತಿರುಗಿಸಿ ತನ್ನ ಇರವನ್ನು ಸೂಚಿಸುತ್ತಿತ್ತು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಬೆಳಿಗ್ಗೆ ಎಂದಿನಂತೆಯೇ ದಿನಚರಿ ಆರಂಭವಾಯಿತು. ಕಾದರ್ ಬಾಗಿಲಲ್ಲಿ ನಿಂತು ಹೆಂಡತಿಯೊಡನೆ, ”ಬೇಗ ಸಿದ್ಧಳಾಗು ನಿನ್ನ ತಾಯಿ ಮನೆಗೆ” ಎಂದು ಮುಖ ಗಂಟಿಕ್ಕಿಕೊಂಡೇ ನುಡಿದನು.
ಜೊಹರಾ ಕ್ಷಣಕಾಲ ಸ್ತಂಭಿತಳಾದರೂ, ಮರುಮಾತಾಡದೆ ಸಿದ್ದಳಾದಳು. ಭಾವರಹಿತವಾದ ಆತನ ಮುಖಭಾವದಿಂದ ಆತನ ಮನದಾಳವನ್ನಳೆಯಲು ಆಕೆಗಂತೂ ಸಾಧ್ಯವಾಗಲಿಲ್ಲ. ಅಂತೂ ಸದ್ಯಕ್ಕೆ ತಾಯಿಯ ಬಳಿ ಹೋಗುವುದು ಆಕೆಗಂತೂ ಸಂತಸದ ವಿಷಯವೇ ಆಗಿತ್ತು.
ಗಂಡ-ಮಕ್ಕಳೊಡನೆ ಮನೆಗೆ ಬಂದ ಮಗಳನ್ನು ಆಮಿನ ಆದರದಿಂದ ಸ್ವಾಗತಿಸಿದಳು. ಅಳಿಯನಿಗೆ ಚಹಾ, ತಿಂಡಿ ನೀಡಿ ಸತ್ಕರಿಸಿದಾಗ ಆತ, “ನನಗೇನೂ ಬೇಡ. ಈಗ ತಾನೇ ಆಗಿದೆ” ಎಂದೆನ್ನುತ್ತಾ ಅತ್ತೆಯೊಡನೆ ಸಮನಾಗಿ ಮಾತೂ ಆಡದೆ ಹೊರಟೇಹೋದನು.
ಅಳಿಯನ ಬದಲಾದ ನಡವಳಿಕೆ ಆಮಿನಳ ತಲೆಯನ್ನು ಕೊರೆಯತೊಡಗಿತು. ”ನಿನ್ನ ಗಂಡನಿಗೇನಾಗಿದೆ? ನೀನೇನಾದರೂ ಆತನೊಡನೆ ಜಗಳಾಡಿದೆಯಾ?” ಆಮಿನ ಮಗಳೊಡನೆ ತನಿಖೆ ಪ್ರಾರಂಭಿಸಿದಳು. ಜೊಹರಾ ಎಲ್ಲವನ್ನೂ ವಿವರಿಸಿದಳು. ಬಳಿಕ,
“ನಾನು ನಾಲೈದು ವರ್ಷ ಧಣಿಗಳ ಮನೆಯಲ್ಲಿ ಮಕ್ಕಳ ಹೇಲು ಬಾಚಿ, ಯಜಮಾನಿಯ ಹೊಡೆತ, ಬೈಗುಳ ತಿಂದು ಸಂಪಾದಿಸಿದ ಒಡವೆ ‘ತೆಗೆದು ಕೊಡು’ ಎಂದಕೂಡಲೇ ಕೊಡಲು ಅದೇನು ಪುಕ್ಕಟೆ ದೊರೆತದ್ದೇ? ನಿಮ್ಮೊಡನೆ ಕೇಳದೆ ಕೊಟ್ಟಿದ್ದರೆ ನೀವಾದರೂ ಸುಮ್ಮನಿರುತ್ತಿದ್ದೀರಾ?”
“ಆದರೂ…” ಆಮಿನ ರಾಗವೆಳೆದಳು.
“ಅವನು ನಿನ್ನ ಗಂಡನಲ್ಲವಾ? ಕೇಳುವಾಗ ಕೊಟ್ಟುಬಿಡಬಹುದಾಗಿತ್ತು. ನನಗೆ ಆಮೇಲೆ ತಿಳಿಸಿದ್ದರೂ ಆಗಿತ್ತು.”
“ಈಗಲೇ ಎಲ್ಲಾ ಖಾಲಿ ಮಾಡುವುದೇ? ರಊಫನ ಬಾಣಂತನದಲ್ಲಿ ನನಗೆಷ್ಟು ತೊಂದರೆಯಾಗಿತ್ತೂಂತ ನಿಮಗೆ ಗೊತ್ತಿಲ್ಲ.”
“ಏನು ಮಾಡುವುದು ಮೋಳೇ?” ಆಮಿನ ಮಗಳ ಮಾತನ್ನು ನಡುವೆಯೇ ತಡೆದಳು. “ಅಲ್ಲಾಹು ನಮ್ಮನ್ನು ಸೃಷ್ಟಿಸಿರುವುದೇ ಕಷ್ಟಪಡುವುದಕ್ಕೇ ಅಲ್ಲವಾ? ಅದೆಲ್ಲ ಹೋಗಲಿ, ಈಗ್ಯಾಕಂತೆ ಅವನಿಗೆ ಹಣ?” ಎಂದು ಕೇಳಿದಳು.
“ಹಣ ಯಾಕೇಂತ ಗಂಡಸರು ಹೆಂಗಸರ ಹತ್ತಿರ ಹೇಳ್ತಾರಾ?”
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
“ಹುಂ ಹೇಗೂ ಬಂದಿದ್ದೀಯಲ್ಲಾ? ನಾಲ್ಕು ದಿನ ಕಳೆಯಲಿ ಮತ್ತೆ ನೋಡುವಾ” ಆಮಿನ ಮಗಳನ್ನು ಸಂತೈಸಿದಳು.
ನಾಲ್ಕು ದಿನವೂ ಕಳೆಯಿತು; ಎಂಟು ದಿನವೂ ಕಳೆಯಿತು. ಅಳಿಯನ ಪತ್ತೆ ಇಲ್ಲ. ಆಮಿನ ಮಗನನ್ನು ಕರೆದು, “ನಿನ್ನ ಭಾವ ಸಿಟ್ಟು ಮಾಡಿಕೊಂಡು ಹೋಗಿದ್ದಾರೋ ಏನೋ. ನೀನು ಹೋಗಿ ರಾಜಿ ಮಾಡ್ಕೊಂಡು ಕರೆದು ಕೊಂಡು ಬಾ” ಎಂದಳು.
ಭಾವನ ಮನೆಗೆ ಹೋದ ಶಾಫಿಯನ್ನು ಗಂಟುಮುಖದಿಂದ ಇದಿರ್ಗೊಂಡವಳು ಆತನ ತಾಯಿ. ಆಕೆ ಮಗನನ್ನು ಕರೆದು, “ನೋಡು, ನಿನ್ನನ್ನು ಆಮಂತ್ರಿಸಲು ನಿನ್ನ ಭಾಮೈದ ಬಂದಿದ್ದಾನೆ. ಹುಂ. ಇನ್ನೇನು, ಹೊರಟು ಬಿಡು” ಎಂದಳು ವ್ಯಂಗ್ಯವಾಗಿ.
ಕಾದರ್ ಒಳಗಿನಿಂದ ಹೊರಬಂದವನು, “ನನ್ನನ್ನು ಕರೆದೊಯ್ಯಲು ಬಂದೆಯಾ? ನಿನ್ನಕ್ಕನಿಗೆ ನಾನು ಬೇಕಾಗಿಲ್ಲ. ನನಗಿಂತ ಚಿನ್ನದೊಡವೆಯೇ ಮುಖ್ಯ ಅವಳಿಗೆ. ಹುಂ ಅದನ್ನು ತೊಟ್ಟುಕೊಂಡು ಮೆರೆಯಲಿ!” ಎಂದು ಖಾರವಾಗಿ ನುಡಿದನು.
ಶಾಪಿ, “ಹಾಗಲ್ಲ ಭಾವಾ…” ಎನ್ನುತ್ತಿದ್ದಂತೆಯೇ ಕಾದರ್ ನಡುವೆಯೇ ತಡೆದು, ”ಹಾಗೂ ಇಲ್ಲ, ಹೀಗೂ ಇಲ್ಲ. ನಾನು ಬರುವುದಿಲ್ಲಾಂತ ನಿನ್ನಕ್ಕನಿಗೆ ಹೇಳು. ಬೇಕಾದರೆ ಅವಳ ತಲಾಖ್ ಕೊಟ್ಟುಬಿಡುತ್ತೇನೆ” ಎಂದನು.
“ಛೇ, ಛೇ ಏನು ಮಾತಾಡ್ತೀರಿ ಭಾವ? ಇಷ್ಟು ಸಣ್ಣ ವಿಷಯಕ್ಕೆಲ್ಲ ತಲಾಖ್ ಹೇಳುವುದೇ? ನೀವೀಗ ಮನೆಗೆ ಬನ್ನಿ. ಚಿನ್ನವನ್ನು ಅವಳಿಂದ ನಾನು ಕೊಡಿಸುತ್ತೇನೆ” ನಯವಾಗಿ ನುಡಿದನು ಶಾಫಿ.
“ಏನೂ ಬೇಕಾಗಿಲ್ಲ. ಅವಳಿಷ್ಟದಂತೆ ನಡೆಯಲು ನಾನೇನು ಅವಳ ನಾಯಿಯೇ? ನನಗಿಷ್ಟವಾದಾಗ ಬರ್‍ತೇನೆ. ಈಗ ನೀನು ಹೋಗು” ಎಂದು ಒರಟಾಗಿ ನುಡಿದನು. ಒಳಗಿನಿಂದ ಅವನ ತಾಯಿ, “ಹಾಗೇ ಹೇಳು ಮಗಾ, ಗಂಡ ಅಂದರೆ ಕೆಲಸದ ಹುಡುಗಾಂತ ತಿಳಿದುಕೊಂಡಿದ್ದಾಳಾ ಅವಳು?” ಎಂದು ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಹೊಯ್ದಳು.
ಶಾಫಿ ಇನ್ನೂ ಇಪ್ಪತ್ತು ವರ್ಷವೂ ತುಂಬದ ಮೀಸೆ ಚಿಗುರುತ್ತಿರುವ ಹುಡುಗ. ಇಂತಹ ವಿಷಯಗಳೆಲ್ಲ ಈವರೆಗೆ ಆತನ ಅನುಭವಕ್ಕೆ ಬಂದಿರಲಿಲ್ಲ. ಆ ಗಳಿಗೆಯಲ್ಲಿ ಆತನಿಗೆ ಕೋಪ ಬಂದದ್ದು ತನ್ನಕ್ಕನ ಮೇಲೆಯೇ. ಅಕ್ಕನಾದರೂ ಯಾಕೆ ಅಷ್ಟೊಂದು ಹಟ ಹಿಡಿಯಬೇಕಾಗಿತ್ತು? ಭಾವ ಕೇಳಿದಾಗ ಒಡವೆ ಕೊಟ್ಟುಬಿಟ್ಟಿದ್ದರೆ ಈ ಕೋಪತಾಪಗಳೊಂದೂ ಇರುತ್ತಿರಲಿಲ್ಲ. ಈಗ ಅಕ್ಕ ಮತ್ತು ಮಕ್ಕಳನ್ನು ಸಾಕುವವರಾರು?
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಆತ ಮನೆಗೆ ಬಂದವನೇ ತಾಯಿಯೊಡನೆಯೂ ಅದೇ ಮಾತಂದನು. “ಭಾವ ಕೋಪದಿಂದ ಕೆಂಡವಾಗಿದ್ದಾರೆ. ಈ ಅಕ್ಕನಿಗೇನೂ ಬುದ್ದಿ ಇಲ್ಲ.”
ಈಗ ಆಮಿನಳಿಗೂ ಈ ಮಾತು ಸರಿ ಎಂದೇ ತೋರಿತು. ಗರ್ಭಿಣಿಯಾದವಳು ಇಬ್ಬರು ಪುಟ್ಟ ಮಕ್ಕಳನ್ನೂ ಕಟ್ಟಿಕೊಂಡು ತವರಿಗೆ ಬಂದರೆ ತಾಯಾದವಳು ಏನು ಮಾಡಬೇಕು? ಮಗಳ ಮದುವೆಯ ಸಾಲವೇ ಇನ್ನೂ ಪೂರ್ತಿ ಸಂದಾಯವಾಗಿಲ್ಲ, ಅದನ್ನು ಬೇಗ ಮುಗಿಸಿ ಮಗನಿಗೊಂದು ಮದುವೆ ಮಾಡಿ ಸೊಸೆಯನ್ನು ಕರೆತರಬೇಕೆಂಬ ಮಹದಾಸೆ ಆಕೆಯದು. ಮಗಳ ಸಂಸಾರ ಪುನಃ ಮಗನ ತಲೆಯ ಮೇಲೆ ಹೇರಲ್ಪಡುತ್ತದೆಯೇ ಎಂಬ ಭಯ ಆಕೆಯನ್ನು ಕಾಡತೊಡಗಿತು.
ಮುಂದಿನ ಶುಕ್ರವಾರ ಆಕೆ ಮತ್ತೊಮ್ಮೆ “ಶಾಫೀ, ನೀನು ಹೇಗಾದರೂ ಭಾವನನ್ನು ಒಪ್ಪಿಸಿ ಕರೆದುಕೊಂಡು ಬಾ,” ಎಂದು ಅಂಗಲಾಚಿದಳು.
“ಆಗಲಿ, ಸಾಯಂಕಾಲ ಹೋಗಿ ಬರುವೆ” ಎಂದನಾತ. ಅಷ್ಟರಲ್ಲಿ ಹೊರಗಿನಿಂದ ಆದಾರೊ, “ಶಾಫೀ” ಎಂದು ಕರೆದಂತಾಯಿತು. ಭಾವ ಬಂದರೇನೊ ಎನ್ನುತ್ತಾ ಶಾಫಿ, ಅವನ ಹಿಂದೆ ಆಮಿನ, ಅವಳ ಹಿಂದೆ ಜೊಹರಾ ಎಲ್ಲರೂ ಸಾಲಾಗಿ ಬಂದರು. ಆದರೆ ಬಂದಾತನು ಮನೆಯ ಅಳಿಯನಾಗಿರದೆ ಮಸೀದಿಯ ಕೆಲಸದ ಮುಕ್ರಿಯಾಗಿದ್ದನು. ಕಾದರ್ ಜೊಹರಾಳಿಗೆ ನೀಡಿದ ತಲಾಖ್ ತೆಗೆದುಕೊಂಡು ಬಂದಿದ್ದನಾತ.
“ಆ ಸೈತಾನ ಹೀಗೂ ಮಾಡಿಬಿಟ್ಟನೇ?” ಎನ್ನುತ್ತಾ ಆಮಿನ ಅಳತೊಡಗಿದಳು. ಶಾಫಿ ಬೆಪ್ಪಾಗಿ ನಿಂತನು. ಜೊಹರಾ ಅಡಿಗೆ ಮನೆಗೆ ತೆರಳಿ ಒಲೆಯ ಮುಂದೆ ಕುಳಿತಳು. ಎದೆಯನ್ನು ಕಲ್ಲು ಮಾಡಿಕೊಳ್ಳುವ ಸನ್ನಾಹದಲ್ಲಿದ್ದಳು ಆಕೆ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಈಗ ಮನೆಯ ಅನಿಷ್ಟಕ್ಕೆಲ್ಲಾ ಹೊಣೆ ಜೊಹರಾ, ಕೋಳಿಮರಿಯನ್ನು ಕಾಗೆ ಎತ್ತಿಕೊಂಡು ಹೋದರೂ ಜೊಹರಾಗೆ ಬೈಗಳು, ಸಕ್ಕರೆ ಮುಗಿದರೂ, ಚಾ ಹುಡಿ ಮುಗಿದರೂ ಆಕೆಯೇ ಕಾರಣ ಎಂಬಂತೆ ತಾಯಿ, ಮಗ ಇಬ್ಬರ ವರ್ತನೆ. ಬಾಳೆಹಣ್ಣು, ಬಿಸ್ಕತ್ತು ತಿಂದು ಅಭ್ಯಾಸವಾದ ಮಕ್ಕಳು ಅವುಗಳಿಗಾಗಿ ಅಳುತ್ತಿದ್ದರು. ಯಾವುದೇ ದುಡಿಮೆಯೂ ತಿಳಿಯದ ಆಕೆ ಮಕ್ಕಳೊಡನೆ ತಾನೂ ಅಳುತ್ತಿದ್ದಳು. ತಾಯಿ ಮತ್ತು ತಮ್ಮನ ಬಿರುನುಡಿಗಳಿಂದ ಮಾನಸಿಕವಾಗಿ ನೋವುಣ್ಣುತ್ತಿದ್ದ ಆಕೆ ಮಕ್ಕಳ ಮೇಲೆ ಹರಿಹಾಯ್ದು ತನ್ನ ನೋವನ್ನಡಗಿಸಿಕೊಳ್ಳಲೆತ್ನಿಸುತ್ತಿದ್ದಳು.
ಗಂಡ ಎಂದರೇನೆಂದು ಕೆಲವೊಮ್ಮೆ ಆಕೆ ಚಾಪೆಯಲ್ಲಿ ಮಲಗಿ ಚಿಂತಿಸುವುದಿತ್ತು. ತಾನು ಕಷ್ಟಪಟ್ಟು ದುಡಿದ ಒಡವೆ ಕೊಡುವುದಿಲ್ಲವೆಂದದ್ದೇ ಮಹಾಪರಾಧವಾಯಿತೇ? ಅದಕ್ಕಾಗಿ ತನ್ನನ್ನೂ ಸ್ವಂತ ಮಕ್ಕಳನ್ನೂ ಈ ರೀತಿ ನಿರ್ಗತಿಕರನ್ನಾಗಿ ಮಾಡಬೇಕೆ? ಗಂಡ ಹೆಂಡತಿಯ ಸಂಬಂಧ ಮೂರು ಬಾರಿ ತಲಾಖ್ ಎಂದೊಡನೆ ಮುಗಿದು ಹೋಯಿತೇ? ಆತನ ಮಗು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದರೂ ಆತನ ರಕ್ತ ತನ್ನ ಮೈಯಲ್ಲಿ ಹರಿದಾಡುತ್ತಿದ್ದರೂ ಈ ಮೂರು ಶಬ್ದಗಳು ತಮ್ಮನ್ನು ಎಂದೆಂದಿಗೂ ಬೇರ್ಪಡಿಸುವಷ್ಟು ಶಕ್ತಿಯುತವಾಗಿದೆಯೇ? ತಾನೂ ಕೂಡಾ ಹೀಗೆಯೇ ಮೂರು ಶಬ್ದಗಳನ್ನುಚ್ಚರಿಸಿ ಆತನನ್ನು ಬಿಡುಗಡೆಗೊಳಿಸಬಹುದೇ? ಸುಮ್ಮನೆ ತಲೆ ತಿನ್ನುವ ಪ್ರಶ್ನೆಗಳು.
ಜೊಹರಾ ಮೂರನೇ ಮಗುವಿಗೆ ಜನ್ಮ ನೀಡಿದಳು. ಗಂಡು ಮಗು ಎಂಬುದು ತಾಯಿ ಮಗಳಿಗೆ ಕೊಂಚ ನೆಮ್ಮದಿ ನೀಡಿತು. ಆದರೆ ಕಿತ್ತು ತಿನ್ನುವ ಬಡತನ. ಗಂಡನಿಂದ ತಲಾಖ್ ಪಡೆದಾಕೆಗೆ ತಾಯಿಯಿಂದ ಯಾವ ಉಪಚಾರ ದೊರೆತೀತು? ಬಾಣಂತಿ ತಾಯಿ ಎದೆಯಲ್ಲಿ ಹಾಲಿಲ್ಲದೆ ಪುಟ್ಟ ಮಗು ಕೈಕಾಲು ಬಡಿದು ಅಳತೊಡಗಿದಾಗ ಆಕೆಯ ಕಣ್ಣಿನಿಂದ ಉರುಳಿದ ಹನಿಗಳು ಮಗುವಿನ ಕೆನ್ನೆಯನ್ನು ತೋಯಿಸಿತು. ಆಮಿನ ಔನ್ಸ್ ಬಾಟ್ಲಿಯಲ್ಲಿ ಒಂದಷ್ಟು ಚಹಾವನ್ನು ತಂದು ಮಗುವಿನ ಬಾಯೊಳಗಿಟ್ಟಾಗ ಮಗು ಅಳು ನಿಲ್ಲಿಸಿ ಸಂಭ್ರಮದಿಂದ ಚೀಪತೊಡಗಿತು. ಜೊಹರಾ ಗೋಡೆಯ ಕಡೆ ಮುಖ ಮಾಡಿ ಮಲಗಿದಳು.
ಮಗುವಿಗೆ ಮೂರು ತಿಂಗಳು ತುಂಬುವುದರಲ್ಲಿತ್ತು. ಜೊಹರಾ ಆ ದಿನ ಕಾಲುವೆಯಲ್ಲಿ ಮಗುವಿನ ಬಟ್ಟೆ ಹಿಂಡಿ ಹೊರಗೆ ಹರವುತ್ತಿದ್ದಾಗ ತನ್ನ ಅತ್ತೆಯ ದೂರದ ಸಂಬಂಧಿ ಫಾತಿಮ್ಮ ಬರುವುದನ್ನು ಕಂಡು ಒಳ ಹೋಗಿ ತಾಯಿಗೆ ಸುದ್ದಿ ಮುಟ್ಟಿಸಿದಳು. ಆಮಿನ ಆಕೆಯನ್ನು ಬರಮಾಡಿಕೊಂಡು ಜಗಲಿಯಲ್ಲಿ ಮಣೆ ಹಾಕಿ ಕುಳ್ಳಿರಿಸಿದಳು. ಅದು ಇದು ಮಾತನಾಡುತ್ತಾ ತನ್ನ ಗೋಳನ್ನು ತೋಡಿಕೊಂಡಳು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
“ನಿಮ್ಮ ಕಾದರ್ ನನ್ನ ಮಗಳಿಗೆ ಎಂತಹ ದುರ್ಗತಿ ತಂದಿತ್ತ? ಗರ್ಭಿಣಿ ಇರುವಾಗ ತಲಾಖ್ ನೀಡಿದ್ದೂ ಅಲ್ಲದೆ ಹೆರಿಗೆಯಾದ ಬಳಿಕ ನಾಲ್ಕು ಕಾಸಾದರೂ ಕಳಿಸಲಿಲ್ಲವಲ್ಲ? ಇಂತಹ ಗಂಡಸರಿಗೆ ಶಿಕ್ಷೆ ಕೊಡುವವರಾರು?”
“ಅದೇ ವಿಷಯ ಮಾತನಾಡೋಣವೆಂದೇ ನಾನೀಕಡೆ ಬಂದೆ. ಅವನಿಗೆ ಈಗ ತುಂಬಾ ಪಶ್ಚಾತ್ತಾಪವಾಗಿದೆ. ಮಕ್ಕಳನ್ನು ನೋಡದೆ ಬೇಜಾರಾಗಿದೆಯಂತೆ. ಅವಳನ್ನು ಅವನು ಪುನಃ ಮದುವೆಯಾಗುತ್ತಾನಂತೆ. ನೀವೇನನ್ನುತ್ತೀರಿ?”
”ಹಾಂ…” ಆಮಿನ ಕಣ್ಣು ಬಾಯಿಬಿಟ್ಟಳು. “ಅದೆಲ್ಲಾ ಅಷ್ಟು ಸುಲಭವಾ?”
“ಏನು? ‘ಒಜ್ಜತ್ತ್’ ಮಾಡಬೇಕು ತಾನೇ? ಮಾಡಿಬಿಟ್ಟರಾಯಿತಪ್ಪ” ಬಂದಾಕೆ ನಿರ್ಲಕ್ಷ್ಯದಿಂದ ಹೇಳಿದಳು.
“ಹೆಣ್ಣುಮಕ್ಕಳು ಅದಕ್ಕೆಲ್ಲ ಒಪ್ಪುತ್ತಾರಾ?”
”ಒಪ್ಪದಿದ್ದರಾಗುತ್ತದಾ? ಮೂರು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಅವಳೇನು ಮಾಡುತ್ತಾಳೆ? ಅಲ್ಲದೆ ಅವನ ಮಕ್ಕಳನ್ನು ಅವನು ಕರೆದೊಯ್ದರೆ ಮತ್ತೆ ಇವಳಿಗೇನಿದೆ? ನೀನು ಹೇಗಾದರೂ ಅವಳನ್ನು ಒಪ್ಪಿಸು.”
“ಅವಳನ್ನು ಒಪ್ಪಿಸುವ ಪ್ರಶ್ನೆ ಅಲ್ಲ, ಅವಳಿಗೆ ಒಮ್ಮೆಯಾದರೂ ಋತು ಸ್ನಾನವಾಗದೆ ಈ ಒಂದು ದಿನದ ಮದುವೆ ಸಾಧ್ಯವಿಲ್ಲವಲ್ಲ? ಕೆಲವು ಹೆಂಗಸರಿಗೆ ಹೆರಿಗೆಯಾದ ಬಳಿಕ ವರ್ಷಗಟ್ಟಲೆ ಮುಟ್ಟಾಗದಿರುವುದೂ ಇದೆ…”
ಬಂದಾಕೆ ಆಮಿನಳ ಮಾತುಗಳನ್ನು ನಡುವೆಯೇ ತಡೆದಳು. “ಅಷ್ಟೆಲ್ಲ ಕಾಯಲಿಕ್ಕಾಗುತ್ತದಾ? ಅವನೀಗ ಮನಸ್ಸು ಬದಲಾಯಿಸಿರುವುದೇ ಒಂದು ಪವಾಡ. ಅವನು ಇನ್ನೊಮ್ಮೆ ಮನಸ್ಸು ಬದಲಾಯಿಸುವುದಿಲ್ಲವೆಂಬ ನಂಬಿಕೆಯಾದರೂ ಎಲ್ಲಿದೆ? ನೀನು ಯಾರಾದರೂ ವೈದ್ಯರಲ್ಲಿಗೆ ಹೋಗಿ ಅವಳು ಮುಟ್ಟಾಗಲು ಏನಾದರೂ ಔಷಧಿ ತಂದುಕೊಡು” ಎಂದು ಸಲಹೆ ನೀಡಿದಳು.
ಆಮಿನ ಯೋಚಿಸುತ್ತಾ ಕುಳಿತಳು. ಹೆಂಗಸರು ಮುಟ್ಟಾಗುವುದು, ಗರ್ಭಿಣಿಯಾಗುವುದೆಲ್ಲವೂ ಪ್ರಕೃತಿ ನಿಯಮ. ಈ ಪ್ರಕೃತಿನಿಯಮವನ್ನೇ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದೇ?
ಜೊಹರಾಳೊಡನೆ ಈ ಮಾತಂದಾಗ ಆಕೆ ಕೆಂಡದಂತೆ ಉರಿದು ಬಿದ್ದಳು. “ಏನು? ಅವರು ತಲಾಖ್ ಕೊಟ್ಟು ಈಗ ನನಗೆ ಶಿಕ್ಷೆ ನೀಡಹೊರಟಿದ್ದಾರಾ? ತಪ್ಪು ಮಾಡಿದ್ದು ನಾನಾ ಅವರಾ?”
”ತಪ್ಪು ಯಾರೇ ಮಾಡಲಿ ಶಿಕ್ಷೆ ಅನುಭವಿಸಬೇಕಾದವರು ಹೆಂಗಸರು. ಅದನ್ನು ಮಾತ್ರ ಮರೆಯಬೇಡ. ಆಕೆ ಹೇಳಿದ ಹಾಗೆ ಕೇಳಿದರೆ ಎಲ್ಲರಿಗೂ ಒಳ್ಳೆಯದು. ನಾನು ನಾಳೇನೇ ವೈದ್ಯರಲ್ಲಿಗೆ ಹೋಗಿ ಬರುವೆ.”
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
“ಉಮ್ಮಾ, ಇದೆಲ್ಲ ನನ್ನಿಂದ ಸಾಧ್ಯವಿಲ್ಲ” ಹಟದಿಂದೆಂಬಂತೆ ನುಡಿದಳಾಕೆ.
“ಹೂಂ…” ಆಮಿನಾಳ ಸಹನೆ ಜಾರತೊಡಗಿತ್ತು. “ನಿನ್ನದು ಯಾವಾಗಲೂ ಹಟವೇ. ಅವನು ಕೇಳಿದಾಗ ಒಡವೆ ಕೊಡದೆ ಹಟ ಮಾಡಿದೆ. ಈಗ ಇದು ಬೇಡ, ಅದು ಬೇಡ ಎಂಬ ಹಟ. ನೀನು ಇಲ್ಲೇ ಇದ್ದರೆ ನಿಮ್ಮನ್ನೆಲ್ಲ ಸಾಕುವವರಾರು? ಶಾಫಿಯಾದರೂ ನಿಮ್ಮನ್ನು ಎಷ್ಟು ಕಾಲ ಸಾಕಿಯಾನು? ಅವನಿಗೂ ಒಂದು ಮದುವೆ, ಸಂಸಾರ ಎಂದಾಗುವುದು ಬೇಡವಾ? ಅಥವಾ ಮಕ್ಕಳನ್ನು ಅವರ ತಂದೆಗೆ ಕೊಟ್ಟು ನೀನು ತಮ್ಮನ ಮನೆಯ ಚಾಕರಿ ಮಾಡುತ್ತೀಯಾ?” ಎಂದು ಮಗಳನ್ನು ದಬಾಯಿಸತೊಡಗಿದಳು. ಆಕೆ ಎಂದೂ ಮಗಳ ವಾದವನ್ನು ಆಲಿಸಿದವಳೇ ಅಲ್ಲ. ಮಗಳ ವೈವಾಹಿಕ ಬದುಕಿನ ಸ್ಥಗಿತಗೊಂಡ ಗಾಲಿಗಳು ಪುನಃ ಚಾಲು ಸ್ಥಿತಿಗೆ ಬಂದರೆ ಸಾಕೆಂಬ ಯೋಚನೆ ಅವಳದು. ಅದಕ್ಕಾಗಿ ಎಂತಹ ಕೀಲೆಣ್ಣೆ ಹಚ್ಚಲೂ ಆಕೆ ಸಿದ್ಧಳೇ. ಯಾವ ತ್ಯಾಗಕ್ಕೂ ಆಕೆ ಸಿದ್ದಳು. ಮಗಳೂ ಕೂಡಾ ಎಲ್ಲಾ ತ್ಯಾಗಕ್ಕೂ ಸಿದ್ಧಳಾಗಲೇ ಬೇಕು.
ಜೊಹರಾ ಮೊದಲಲ್ಲಿ ಹಿಂಜರಿದರೂ ಕ್ರಮೇಣ ಅವಳ ಮನಸ್ಸು ಹದವಾಗತೊಡಗಿತು. ಮಕ್ಕಳ ಹೊಟ್ಟೆ ತುಂಬಿಸುವುದೇ ಆಕೆಗೆ ದೊಡ್ಡ ಹೊರೆಯಾಗತೊಡಗಿತ್ತು. ತಮ್ಮನ ಅಸಡ್ಡೆ, ತಿರಸ್ಕಾರ, ತಾಯಿಯ ನಿಂದೆ, ಮಕ್ಕಳ ಹಸಿವು ಎಲ್ಲವೂ ಅವಳನ್ನು ಹಣ್ಣು ಮಾಡಿತು. ಕೊನೆಗೊಂದು ದಿನ ತಾಯಿಯ ಬಳಿ ತನ್ನ ಸಮ್ಮತಿಯನ್ನೂ ತಿಳಿಸಿದಳು.
ಮರುದಿನವೇ ಆಮಿನ ಊರಿನ ನಾಟಿ ವೈದ್ಯರಲ್ಲಿಗೆ ಹೋದಳು. ಮಾತ್ರೆ, ಕಷಾಯಗಳನ್ನು ತಂದು ಮಗಳಿಗೆ ಕುಡಿಸಿದಳು. ಧರ್ಮದ ನಿಯಮವನ್ನು ಪಾಲಿಸಲು ಪ್ರಕೃತಿ ನಿಯಮದ ವಿರುದ್ಧದ ಹೋರಾಟ ಆರಂಭವಾಯಿತು.
ಒಂದೆರಡು ದಿನಗಳಲ್ಲಿ ಜೊಹರಾಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿತು. “ಕೊಂಚ ಮೈ ಬಿಸಿ, ಅಷ್ಟೆ” ಎಂದು ತಾಯಿ, ಮಗಳಿಬ್ಬರೂ ಅಲಕ್ಷ್ಯ ಮಾಡಿದರು. ಮರುದಿನ ಬಂದ ಫಾತಿಮ್ಮಳೊಡನೆ ಆಮಿನ, “ಇನ್ನೊಂದು ವಾರದಲ್ಲಿ ಎಲ್ಲ ಸರಿಹೋದೀತೆಂದು ವೈದ್ಯರು ಹೇಳಿದ್ದಾರೆ. ಆಮೇಲೆ ಎಲ್ಲವನ್ನೂ ತೀರ್ಮಾನಿಸುವ” ಎಂದು ಹೇಳಿ ಕಳಿಸಿದಳು.
ದಿನಗಳುರುಳುತ್ತಿದ್ದಂತೆ ಜೊಹರಾ ಜ್ವರದ ತಾಪದಲ್ಲಿ ನರಳತೊಡಗಿದಳು. ಕಿಬ್ಬೊಟ್ಟೆಯಲ್ಲಿ ಸಹಿಸಲಸಾಧ್ಯವಾದ ನೋವೂ ಕಾಣಿಸಿಕೊಂಡಿತು. ಮಗಳ ನರಳಾಟ ನೋಡಲಾರದೆ ಆಮಿನ ಮತ್ತೊಮ್ಮೆ ವೈದ್ಯರಲ್ಲಿಗೆ ಹೋಗಿ ಇನ್ನಷ್ಟು ಮಾತ್ರೆ, ಕಷಾಯ ತೆಗೆದುಕೊಂಡು ಬಂದು ಮಗಳಿಗೆ ಕುಡಿಸಿದಳು. ಒಂದು ಹುಂಜವನ್ನು ಆಕೆಯ ತಲೆಯ ಸುತ್ತಲೂ ನಿವಾಳಿಸಿ, ಮಗಳ ಖಾಯಿಲೆ ಬೇಗ ವಾಸಿಯಾಗಲೆಂದು ಊರಿನ ದರ್ಗಾಕ್ಕೆ ಮೀಸಲಿರಿಸಿ ಹರಕೆ ಹೊತ್ತಳು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಮರುದಿನ ಜೊಹರಾಗೆ ರಕ್ತಸ್ರಾವವೂ ಪ್ರಾರಂಭವಾಯಿತು. ಸುಖಾಂತ್ಯದ ಮುನ್ಸೂಚನೆಯೆಂದು ತಾಯಿಯೂ ಮಗಳೂ ಬಿಡುಗಡೆಯ ನಿಟ್ಟುಸಿರಿಟ್ಟರು. ಆದರೆ ದಿನಗಳೆದಂತೆ ಜೊಹರಾ ನಿತ್ರಾಣದಿಂದ ಕುಸಿದಳು. ರಕ್ತಸ್ರಾವ ನಿಲ್ಲುವ ಸೂಚನೆ ಇಲ್ಲದೆ ತಾಯಿ ಮಗಳು ಕಂಗಾಲಾದರು. ಕೊನೆಗೊಮ್ಮೆ ಜೊಹರಾ ಬಹಳ ಕಷ್ಟದಿಂದ ಎದ್ದು ಕುಳಿತು ಮಕ್ಕಳನ್ನು ಸಮೀಪ ಕರೆದಳು. ಇಬ್ಬರನ್ನೂ ಅಪ್ಪಿಕೊಂಡು ಮುದ್ದಿಸಿ, ”ಅಜ್ಜಿ ಹೇಳಿದ ಹಾಗೆ ಕೇಳಿಕೊಂಡಿರಿ” ಎಂದು ಕಷ್ಟದಿಂದ ನುಡಿದಳು. ಮಡಿಲಲ್ಲಿ ಮಲಗಿ ಮೊಲೆ ಚೀಪಿ ಚೀಪಿ ಹಾಲಿಲ್ಲದೆ ಕೈಕಾಲು ಬಡಿದು ಅಳುತ್ತಿದ್ದ ಪುಟ್ಟ ಮಗುವನ್ನೊಮ್ಮೆ ಮುದ್ದಿಸಿ ತಾಯಿಯ ಕೈಯಲ್ಲಿಟ್ಟಳು. “ಉಮ್ಮಾ ನನ್ನನ್ನು… ಇಷ್ಟೆಲ್ಲ… ಯಾತನೆಗೆ ಗುರಿ ಮಾಡಿದ… ನಿನ್ನಳಿಯ, ನನಗೆ ತಲಾಖ್… ಕೊಟ್ಟು ಮತ್ತೊಮ್ಮೆ ನನ್ನನ್ನು ಮದುವೆಯಾಗ ಬಯಸಿದ ನಿನ್ನಳಿಯ… ಎಲ್ಲಿದ್ದಾನೆ?” ಎಂದು ಮಾತುಗಳನ್ನು ಎಳೆದೆಳೆದು ಕೇಳುತ್ತಾ ನಿಧಾನವಾಗಿ ಹಿಂದಕ್ಕೊರಗಿ ದಿಂಬಿನ ಮೇಲೆ ತಲೆ ಇಟ್ಟು ಕಣ್ಣುಗಳನ್ನು ಶಾಶ್ವತವಾಗಿ ಮುಚ್ಚಿದಳು.
ನಿಧಾನವಾಗಿ ಸಂಜೆಗತ್ತಲು ಮನೆಯನ್ನಾವರಿಸತೊಡಗಿತು. ಮಕ್ಕಳ ಅಳು ಚೀರಾಟದೊಡನೆ ಆಮಿನ ಕೂಡಾ, ”ಅಯ್ಯೋ ಮಗಳೇ, ನೀನು ಹೋಗೇ ಬಿಟ್ಟೆಯಾ?” ಎನ್ನುತ್ತಾ ಎದೆ ಬಡಿದು ಅಳತೊಡಗಿದಳು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಸಾರಾ ಅಬೂಬಕ್ಕರ್(1936-2023): ಕೇರಳ ರಾಜ್ಯದ ಕಾಸರಗೋಡು ಸಾರಾ ಅವರ ಹುಟ್ಟೂರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಮತ್ತು ತಾಯಿ ಜೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನೆರವೇರಿತು. ಮುಂದೆ ಅವರು ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೇಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು. ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಪ್ರಕಟಿತ ಕೃತಿಗಳು: ಚಂದ್ರಗಿರಿ ತೀರದಲ್ಲಿ, ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ(ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-2), ತಳ ಒಡೆದ ದೋಣಿ, ಪಂಜರ, ಕನ್ನಡ, ಇಳಿಜಾರು, ಕಾಣಿಕೆ(ಕಾದಂಬರಿಗಳು); ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ಸುಮಯ್ಯಾ(ಜನಪದ ಆಧರಿಸಿದ ಕಥೆಗಳು), ಗಗನ ಸಖಿ(ಕಥಾ ಸಂಕಲನಗಳು); ಐಷಾರಾಮದ ಆಳದಲ್ಲಿ(ಪ್ರವಾಸ ಸಾಹಿತ್ಯ); ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು(ಬಾನುಲಿ ನಾಟಕಗಳು). ಚಂದ್ರಗಿರಿ ತೀರದಲ್ಲಿ ಕಾದಂಬರಿ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.





