ಶ್ರೀಕೃಷ್ಣ ಆಲನಹಳ್ಳಿ ಅವರ ಕತೆ | ಆಗಂತುಕ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಬೆಳಿಗ್ಗೆ ನಿದ್ದೆಯಿಂದ ಎಚ್ಚರವಾಗುತ್ತಿದ್ದ ಹಾಗೆ ಕಿಟ್ಟಿಗೆ ಧುತ್ತನೆ ಇವತ್ತು ಯಾರೋ ಬತ್ತಾರೆ ಎನ್ನಿಸಿತು. ಕಣ್ಣುಜ್ಜುತ್ತ ಎದ್ದು ಕೂತವನೆ ಅವ್ವನಿಗೆ ಕರೆದು ಹೇಳಬೇಕೆನ್ನಿಸುವಷ್ಟರಲ್ಲಿ ಅದಾಗಲೆ ಅಜ್ಜಿ, ಅವ್ವ ಮಾಮೂಲು ಲಟಾಪಟಿ ಜಗಳಕ್ಕೆ ತೊಡಗಿದ್ದರು. ದಿನವೂ ಅಷ್ಟೆ. ಏಳುತ್ತಿದ್ದಂತೆ ಏನಾದರೊಂದು ಅಜ್ಜಿಯ ರಾಮಾಯಣ ಇದ್ದೇ ಇರುತ್ತಿತ್ತು. ಇವತ್ತೇಕೋ ಅವ್ವ ತುಂಬ ಗಡುಸಾಗಿ ಮಾತಾಡುವುದು ಕೇಳಿ ಭಯವಾಯಿತು. ಅಜ್ಜಿ, ಅವ್ವ ಜಗಳ ಕಾದಾಗಲೆಲ್ಲ ಅಪ್ಪ, ಅವ್ವನಿಗೆ ಸಾಯಬೀಳ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದುದು ನೆನಪಾಗಿ ಅಪ್ಪನ ಬಗ್ಗೆ ಕೋಪ ಬಂತು. ಮುಖ ತೊಳೆದು ರೊಟ್ಟಿ ತಿನ್ನಲು ಹಜಾರದಲ್ಲಿ ಕೂತಾಗ ಅಂಗಳದ ಸೂರಿನಲ್ಲಿ ಕೂತಿದ್ದ ಕಾಗೆ ಒಂದೇ ಸಮನೆ ಅರಚುತ್ತಿತ್ತು. ಒಳಗಿನ್ನೂ ಅಜ್ಜಿಯ ವಟ ವಟ ನಿಂತಿರಲಿಲ್ಲ. ಮತ್ತೆ ಹಾಗೆ ಕಿರುಚುತ್ತಿರುವುದು ಕಂಡು, ಇವತ್ತು ಯಾರೋ ಬತ್ತಾರೆ. ಬಂದೇ ಬತ್ತಾರೆ, ಕಾಗೆಯೂ ಕರೆಯುತ್ತಿದೆ ಎಂದು ಧುತ್ತನೆ ಮತ್ತೆ ಮತ್ತೆ ಅನ್ನಿಸಿದ್ದನ್ನು ಅವ್ವನಿಗೆ ಹೇಳಿದಾಗ- ‘ಬತ್ತಾನೆ, ಬಂದ್ರೆ ಅವನೇ ಬರ್‍ಬೇಕು’ ಎಂದು ಸಿಟ್ಟಿನಿಂದ ಮಾತನಾಡಿದ್ದು ಅರ್ಥವಾಗದೆ ಕಿಟ್ಟಿ ‘ಯಾರವ್ವ ಅವನು’ ಅಂದ ತುಂಬಾ ಕುತೂಹಲದಿಂದ. ಮತ್ತೆ ರೇಗಿ ‘ಇನ್ಯಾರು ಒಂದೇ ಸಲ ಕರ್‍ಕೊಂಡು ಹೋಗವನು’ ಅನ್ನುತ್ತ ‘ತಿಂದೇಳೊ’ ಎಂದು ತನ್ನ ಬಗ್ಗೆ ಸಿಟ್ಟಾದುದೇಕೆ? ಅವ್ವನೆ ಹೇಳಿತ್ತಲ್ಲವ ಕಾಗೆ ಕರೆದರೆ ಅವತ್ತು ಯಾರಾದರೂ ಬಂದೇ ಬತ್ತಾರೆ ಅಂತ? ಅದಕ್ಕಾಕೆ ಇಷ್ಟು ಕೋಪ?

ದಾರಿಯುದ್ದಕ್ಕೂ ತುಳಿದು ಬಂದಿದ್ದ ಕೆಸರು ಕಾಲುಗಳಲ್ಲಿ ಅಂಟಿಕೊಂಡಿದ್ದು, ಇದೀಗ ಒಣಗಿ ಬಿರುಕುಬಿರುಕಾಗಿ ಚಕ್ಕೆಯೇಳತೊಡಗಿತ್ತು. ಅನಂತಯ್ಯನವರ ಮಗ್ಗಿ ಪಾಠಕ್ಕಿಂತ ಕೆಸರು ಚಕ್ಕೆಗಳನ್ನು ಒಂದೊಂದೇ ಬಿಡಿಸುತ್ತ ಕೂರುವುದೇ ವಾಸಿ ಅನ್ನಿಸಿತು- ಕಿಟ್ಟಿಗೆ. ಕಿಟಕಿಯಾಚೆ ಬರ್‍ರನೆ ಕಾರು ಹೋದ ಸದ್ದು ಕೇಳಿಸಿ ಕೂತಲ್ಲೇ ಕೂತು ನೀಗರಿಸಿ ನೋಡಿದ. ಕಪ್ಪು ಬಣ್ಣದ ಕಾರು ಒಂದಿಷ್ಟು ಕಾಣಿಸಿ ಮಾದನ ಹೊಲದ ಉತಾರಿನಲ್ಲಿ ಇಳಿಯಿತು. ಇದ್ದಕ್ಕಿದ್ದ ಹಾಗೆ ಕಿಟ್ಟಿಗೆ ‘ಯಾರೋ ಬತ್ತಾರೆ’ ಅಂತ ಅನ್ನಿಸಿದ್ದು ನೆನಪಾಗಿ, ಈ ಕಾರಿನಲ್ಲಿ ಬಂದವರು ಅವರೇ ಇರಬೇಕು ಎನಿಸಿ; ಅದು ಮುಂದೆ ಹೊಲಗೇರಿ ಚಡಾವು ಹತ್ತಿ ಬಸಿರಿ ಮರದ ತಿರುವಿನಲ್ಲಿ ತಮ್ಮೂರ ಕಡೆಯ ಓಣಿಗೆ ತಿರುಗುತ್ತದೇನೋ ನೋಡಬೇಕೆಂದುಕೊಂಡು ಎದ್ದು ನಿಂತೊಡನೆ ಅನಂತಯ್ಯ ಗದರಿಸುತ್ತ ‘ಲೋ, ಯಾಕೊ ನಿಂತೆ’ ಅಂತ ಕೇಳಿದಾಗ ಏನು ಹೇಳಬೇಕೆಂದು ತೋಚದೆ ತೆಪ್ಪನೆ ಕೂತ.

*

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊನ್ನೆ ಹಿಡಿದ ಹಾಳು ಜಡಿಮಳೆ ಧೋ ಎಂದು ಕಣ್ಣು ಮುಚ್ಚಿ ಸುರಿದು ಬೆಳಗಷ್ಟೆ ನಿಂತಿತ್ತು. ಆದರೂ ಪೂರ ಹೊಳುವಾಗಿರಲಿಲ್ಲ. ಈಗಲೋ ಇನ್ನೊಂದು ಗಳಿಗೇಲೋ ಹನಿಯೊಡೆಯಲು ಬಿಕ್ಕುತ್ತಿರುವಂತೆ ಕಟ್ಟಿಕೊಂಡಿದ್ದ ಮೋಡಗಳು ಕದಲಿರಲಿಲ್ಲ. ಮತ್ತೆ ಕ್ವಾಟೆ ಮುಗಿಲೆದ್ದು ದಪ್ಪ ದಪ್ಪ ಬಂಡೆಗಳಂಥ ಮೋಡಗಳು ಜಮಾಯಿಸುತ್ತ ಸಂಜೆಗೆ ಮುಂಚೆ ಮಬ್ಬುಕವುಚಿ ಗಂವನ್ನತೊಡಗಿತ್ತು. ಗುಡುಗುವ ಸದ್ದು ಕೇಳಿಸಿದ್ದೆ, ಸ್ಕೂಲು ಬಿಡುವ ಗಂಟೆಯನ್ನೂ ಬಾರಿಸುವ ಮುಂಚೆಯೇ ಪುಸ್ತಕದ ಚೀಲ ಬಗಲಿಗೇರಿಸಿ ನಿಂತುಬಿಟ್ಟ ಕಿಟ್ಟಿಯನ್ನು ಕಂಡ ಅನಂತಯ್ಯ ‘ಸರಿ, ನೀನು ಹೋಗೋ, ಏರಿ ಮೇಲೆ ಜ್ವಾಕೆ, ಜಾರ್‍ತದೆ. ಗುರುಬಸವನ ಅಂಗಡಿ ಅತ್ರ ನಿಮ್ಮೂರವ್ರು ಯಾರಾದ್ರೂ ಇದ್ರೆ ಅವರ ಜೊತೆ ಹೋಗೊ’ ಎಂದು ಹೇಳುತ್ತಿದ್ದಂತೆಯೇ ಸ್ಕೂಲ ಜಗಲಿ ಧುಮುಕಿದ ಕಿಟ್ಟಿ ಬೀದಿಗಿಳಿದಿದ್ದ. ಕೆಸರು ತುಂಬಿದ ಬೀದಿಯಲ್ಲಿ ಹೆಜ್ಜೆ ಇಟ್ಟಾಗಲೆಲ್ಲ ಪಿಚಕ್ಕನೆ ಬೆರಳುಗಳ ನಡುವೆ ರಾಡಿ ಚಿಮ್ಮುವಾಗೆಲ್ಲ ಕಿಟ್ಟಿಗೆ ಏನೋ ಒಂದು ಥರ ಖುಷಿ, ಇನ್ನೂ ದನಕರುಗಳು ಕಾಡಿಂದ ಮೇದು ಮರಳದೆ ಬೀದಿ ಬಿಡುವಾಗಿತ್ತು. ಇಲ್ಲದಿದ್ದರೆ ಇಕ್ಕಟ್ಟಾದ ಬೀದಿಯಲ್ಲಿ ಅವುಗಳ ನಡುವೆ ತಾವು ಮಾಡಿಕೊಂಡು ನಡೆವುದೆ ಸಾಕಾಗಿ ಬಿಡುತ್ತಿತ್ತು. ಕಿಟ್ಟಿ ಏನೋ ಅವಸರವೆನ್ನುವಂತೆ ಕೆಸರು ಚಿಮ್ಮಿಸುತ್ತ, ಚಡ್ಡಿ ಅಂಚಿಗೆ ಅದರ ಕರೆ ಕಟ್ಟುವುದನ್ನು ಗಮನಿಸದೆ ನಡೆಯತೊಡಗಿದ.

ಇದನ್ನು ಓದಿದ್ದೀರಾ?: ಪಿ.ಲಂಕೇಶ್ ಅವರ ಕತೆ | ಕಲ್ಲು ಕರಗುವ ಸಮಯ

ಊರಿನ ಎಲ್ಲ ಕೇರಿಯ ಬೀದಿಗಳು ಬಂದು ಕೂಡುವ ಚಾವಡಿ ಚೌಕದಲ್ಲಿ ಗುರುಬಸವನ ಅಂಗಡಿ. ಸುತ್ತಮುತ್ತಲಿನ ಹಳ್ಳಿಯಿಂದ ಸಾಮಾನಿಗೆ ಬಂದಿದ್ದ ಜನ ಮಳೆ ಬಂದುಬಿಡುತ್ತದೆಂದು ಆತುರ ಮಾಡುತ್ತಿದ್ದರು. ಅವರ ಗುಂಪಿನಿಂದ ಪರಿವಾರದ ಚಾಮ ಗೋಣಿಚೀಲದ ಕೊಪ್ಪೆ ಹಾಕಿಕೊಂಡು ಸೀಮೆ ಎಣ್ಣೆ ಶೀಶೆ ಹಿಡಿದು ಹೊರಗೆ ಬಂದವನೆ ದಾಪುಗಾಲು ಹಾಕುತ್ತ ಹೊರಟಿದ್ದು ಕಂಡು ಕಿಟ್ಟಿ ತಟ್ಟನೆ ಕೂಗಿದ. ಚಾಮ ತಿರುಗಿ ನೋಡಿ ‘ಬನ್ನಿ ಕಿಟ್ಟಪ್ಪ, ಕೆಳ್ಳಟ್ಟಿ ಚೆನ್ನಮಲ್ಲಪ್ಪರ ಜಗಲಿಮ್ಯಾಗೆ ನಿಮ್ಮ ಅಯ್ಯೋರು ಕೂತವ್ರೆ’ ಎಂದು ಕೊಪ್ಪೆ ಹೆಗಲಿನಿಂದ ತಲೆಗೆ ವರ್ಗಾಯಿಸಿ ಹೆಜ್ಜೆಯ ಬೀಸನ್ನು ಕಡಿಮೆ ಮಾಡಿದ. ಚನ್ನಮಲ್ಲಪ್ಪನವರನ್ನು ಕಿಟ್ಟಿ ‘ಮಾವಯ್ಯ’ ಅಂತ ಕರೆಯುತ್ತಿದ್ದ. ಅಜ್ಜ ಇಲ್ಲಿಗೆ ಬಂದಾಗಲೆಲ್ಲ ಅಲ್ಲಿ ಕೂತು ಮಾತಾಡುತ್ತಿದ್ದರು. ಎಷ್ಟೋ ಸಲ ಮಾವಯ್ಯ ಕರೆದು ತಿಂಡಿ ಕೊಟ್ಟಿದ್ದರು. ಅವರ ಹಟ್ಟಿ ಮುಂದೆ ಹಾದು ಹೋಗುವಾಗೆಲ್ಲ ಅತ್ತ ಕಣ್ಣು ಹಾಯಿಸದೆ ಕಿಟ್ಟಿ ಹೋಗುತ್ತಿರಲಿಲ್ಲ. ಕಾಯಿಲೆ ಅಂತ ಅವರು ಮೈಸೂರಿಗೆ ಹೋದದ್ದೇ ಬಂದೇ ಇರಲಿಲ್ಲ. ದಿನವೂ ಇವತ್ತು ಬಂದಾರೇನೊ ನಾಳೆ ಬಂದಾರೇನೊ ಅಂತ ನೋಡಿ ನೋಡಿ ಸಾಕಾಗಿಬಿಟ್ಟಿತ್ತು. ಯಾರಾದರೂ ಕೂತೇ ಇರುತ್ತಿದ್ದ ಅವರ ದೊಡ್ಡ ಜಗುಲಿಗಳು ಬಣಬಣ ಅನ್ನಿಸುತ್ತಿದ್ದರೂ, ಅವರ ಹೆಂಡತಿಯನ್ನೆ ‘ಯಾವಾಗ ಬರ್‍ತಾರೆ ಮಾವಯ್ಯ’ ಅಂತ ಕೇಳಿಬಿಡಬೇಕೆನ್ನಿಸಿದರೂ ಯಾಕೋ ಅವರನ್ನು ಕಂಡದ್ದೇ ಮಾತು ಬರುತ್ತಿರಲಿಲ್ಲ. ಅವರನ್ನು ಕಂಡರೆ ಯಾಕೋ ಭಯ. ಆಗೀಗ ‘ದೇವ್ರಂತ ಮನಸ್ರು ಮಲ್ಲಪ್ಪ, ಅಂತವ್ರಗೆ ಈ ರಾಕಾಸ ತಾಯಿ ಸಿಕ್ಕಿದ್ಲು’ ಅಂತಲೋ, ಇಲ್ಲ ‘ಅವಳು ಬುಡಿ ಬೇವನಹಟ್ಟ ಕಾಳವ್ವನೆ’ ಅಂತಲೊ ಜನ ಅನ್ನುತ್ತಿದ್ದುದು ಕೇಳಿದ್ದ ಕಿಟ್ಟಿಗೆ ಅವರು ತುಂಬಾ ಕೆಟ್ಟವರೆನ್ನಿಸಿಬಿಟ್ಟಿತ್ತು.

ಇದೀಗ ಚಾಮ ಅಜ್ಜಯ್ಯ ಅವರ ಹಟ್ಟಿ ಹತ್ರ ಕೂತವ್ರೆ ಅಂದರೆ ಮಾವಯ್ಯ ಬಂದಿರಬೇಕೆಂದು ಊಹಿಸಿದ ಕಿಟ್ಟಿ ಚಾಮನನ್ನು ಕೇಳಿದ. ಚಾಮ ‘ಬಂದವ್ರೆ’ ಅಂತ ಉದ್ದವಾಗಿ ಉಸಿರು ಬಿಟ್ಟ. ತುಂಬಾ ವಿಚಿತ್ರವೆನಿಸಿತು. ವಾಜರ ತಮ್ಮಣ್ಣನ ಹಟ್ಟಿ ತಿರುವು ದಾಟಿದ ಕೂಡಲೇ ಕಾಣಿಸುವ ಮಾವಯ್ಯನ ಹಟ್ಟಿ ಮುಂದೆ ಸುಮಾರು ಜನರ ಗುಂಪೇ ಕೂಡಿತ್ತು. ಕಪ್ಪು ಬಣ್ಣದ ಆಗ ಕಂಡಿದ್ದ ಕಾರು ಅಲ್ಲಿಯೇ ನಿಂತಿದ್ದು ಕಂಡುದೆ ಯಾಕೋ ಕಿಟ್ಟಿಯ ಎದೆ ಧಸಕ್ಕೆಂದಿತು. ಸ್ಕೂಲಿನಲ್ಲಿದ್ದಾಗ ಹೋದ ಕಾರು ಇಲ್ಲಿಗೇ ಬಂದುಬಿಟ್ಟಿದೆ? ಅವನೆ, ಬೆಳಿಗ್ಗೆ ಬರುತ್ತಾನೆ ಅನ್ನಿಸಿದ್ದವನೆ ಈ ಕಾರಲ್ಲೆ ಬಂದುಬಿಟ್ಟಿದ್ದರೆ?

ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ

ಹಟ್ಟಿಯ ಸಮೀಪ ಬಂದಾಗ ತುಂಬ ಜನ ಹಟ್ಟಿಯೊಳಗೆ ಹೋಗಿ ಬರುತ್ತಿದ್ದರು. ಅಜ್ಜಯ್ಯ ಜಗುಲಿಯಲ್ಲಿ ಕಾಣಿಸಲಿಲ್ಲ. ಸ್ವಲ್ಪ ಹೊತ್ತು ಹಾಗೆ ನಿಂತಿದ್ದ ಕಿಟ್ಟಿ ಮೆಲ್ಲಗೆ ಹಟ್ಟಿಯೊಳಗೆ ನಡೆದ. ಅಜ್ಜಯ್ಯ ಅಂಗಳದ ಮೂಲೆ ಕಂಬಕ್ಕೊರಗಿ ನಿಂತಿದ್ದರು. ಹಜಾರದ ಮಂಚದ ಮೇಲೆ ಯಾರೋ ಮಲಗಿದಂತಿತ್ತು. ಸುತ್ತೆಲ್ಲ ಸುಮಾರು ಜನ ಗೋಡೆ ಕಟ್ಟಿದ್ದರು. ಅವರ ನಡುವೆ ತಲೆ ತುರುಕಿದ ಕಿಟ್ಟಿಯ ಕಣ್ಣಿಗೆ ರಪ್ಪನೆ ಮಂಚದ ಕಾಲುಬುಡಕ್ಕೆ ಚಾಚಿದ ಬಿಳುಚಿ ಸೆಟೆದುಕೊಂಡಿದ್ದ ಪಾದಗಳು ಕಾಣಿಸಿದವು. ಕಂಡುದೆ ಬೆಚ್ಚಿ ತಲೆ ಹೊರಕ್ಕೆಳೆದು ಅಜ್ಜಯ್ಯನ ಹತ್ತಿರ ನಡೆದ. ಅಜ್ಜಯ್ಯನ ಕಣ್ಣಲ್ಲೂ ನೀರು ಬಟ್ಟಾಡುತ್ತಿದ್ದುದನ್ನು ಕಂಡು ಕಿಟ್ಟಿಗೆ ಕಸಿವಿಸಿಯಾಗಿ ಇದೆಲ್ಲ ಏನಂತ ಅರ್ಥವಾಗದೆ ಇನ್ನೊಮ್ಮೆ ಮಂಚದ ಕಡೆ ನಿಂತಲ್ಲೆ ಎಟುಕಿಸಿ ನೋಡತೊಡಗಿದ. ತಟ್ಟನೇ ಅದೇ ಅಂಗಾತ ಸತ್ತು ಬಿದ್ದಿದ್ದ ಮೀನಿನ ಹೊಟ್ಟೆಯ ಹಾಗೆ ಬಿಳುಚಿಕೊಂಡು ಸೆಟೆದಿದ್ದ ಪಾದಗಳು. ಯಾರವೆಂದು ನೋಡಿಬಿಡುವ ಎಂದುಕೊಳ್ಳುತ್ತಿದ್ದಂತೆ ಅವು ಮಾವಯ್ಯ ಅವರವೇ ಆಗಿ ಬಿಟ್ಟಿದ್ದರೆ? ಭಯವಾಯಿತು. ಹಾಗೇಕೆ ಬಿಳುಚಿ ಸೆಟೆದುಕೊಂಡುಬಿಟ್ಟಿವೆ? ಯಾಕೊ ಭಯ ಹೆಪ್ಪುಗಟ್ಟುತ್ತ ನಿಂತಲ್ಲೆ ನಡುಕಬಂತು. ಅಂಗಿಯ ಅಂಚು ಹಿಡಿದು ನಡುಗುತ್ತಿದ್ದ ಕಿಟ್ಟಿಯನ್ನು ಅಜ್ಜಯ್ಯ ‘ಬಾ ಎದುರ್‍ಕೊಂಡೀಯ ಮತ್ತೆ’ ಎಂದು ಹಟ್ಟಿ ಹೊರಗೆ ಕರೆತಂದರು.

ಹೊರಗೆ ಬಂದುದೆ ಹಟ್ಟಿ ಮುಂದೆ ನಿಂತಿದ್ದ ಕಾರು ಅದಾಗಲೆ ಕರ್‍ರಗೆ ಹೊಗೆಯನ್ನು ಬುಗಬುಗ ಉಗುಳುತ್ತ, ಕಿವಿಚಿಟ್ಟಾಗುವಂತೆ ಶಬ್ದ ಮಾಡುತ್ತ, ಬೀದಿಯ ಕೆಸರನ್ನು ಎರಡು ಕಡೆಗೂ ಚಿಮ್ಮಿಸುತ್ತ, ಹುಣಿಸೆಮರದ ಓಣಿಗೆ ಇಳಿದಾಗ ಅದು ಹಾಗೆಯೇ ತಮ್ಮ ಊರಕಡೆಗೇ ಹೊರಟಿತೇನೋ ಅನ್ನಿಸಿತು ಕಿಟ್ಟಿಗೆ.

ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು

ತಾವು ಬರುವುದನ್ನೇ ಕಾಯುತ್ತಿದ್ದ ಗಾಡಿಮೂಕಿ ಮೇಲೆ ಕೂತಿದ್ದ ಚಾಮ ಕೊಪ್ಪೆ ತಲೆಗೇರಿಸಿ ‘ಮಳೆ ಭಾರಿ ಕಾವಾಗದೆ ಗೌಡ್ರೆ, ದಯ್ಮಳೆ ಬಂದ್ರೂ ಬತ್ತೆ ಗೊರಗಿಲ್ಲವಾ’ ಅಂದ. ಅಜ್ಜಯ್ಯ ‘ನಡಿಯೋ ಅಲ್ಲಿ ಆಚಾರಿ ಕುಲುಮೆ ಅಟ್ಟಿತವು ಇಟ್ಟಿವ್ನಿ’ ಎಂದು ಕೆರೆ ಓಣಿಯ ಕಡೇ ಮನೆಯಾಗಿದ್ದ ಅಂಕನಹಳ್ಳಿ ಆಚಾರಿ ಕುಲುಮೆ ಹಟ್ಟಿಗೆ ಬಂದಾಗ, ಕುಲುಮೆ ತಿದಿ ಒತ್ತಿದಾಗೆಲ್ಲ ಬೊರ್‍ರನೆ ಮೊರೆಯುತ್ತ ಚಟಪಟ ಕಿಡಿ ಹಾರುತ್ತ ಉರಿಯುತ್ತಿದ್ದ ಬೆಂಕಿಯಲ್ಲಿ ಗುಳ ಕೆಂಪಗೆ ಕಾದು ಗಣಗುಡುತ್ತಿತ್ತು. ಕೊಟ್ಟಿಗೆಯಲ್ಲಿ ಕೂತಿದ್ದವರು ಅಜ್ಜ ಬಂದುದಕ್ಕೆ ಎದ್ದು ನಿಂತೇ ಇದ್ದರು. ಆಚಾರಿ ಚಿಮಟಿಗೆಯಲ್ಲಿ ಗುಳ ಹಿಡಿದು ಸುತ್ತಿಗೆಯಿಂದ ಬಡಿದು ತೊಟ್ಟು ಮಾಡುವಾಗ ಕೆಂಪಗೆ ಕಬ್ಬಿಣದ ಚೂರು ಸಿಡಿಯುವುದನ್ನೆ ಕಿಟ್ಟಿ ದುರುಗುಟ್ಟಿ ನೋಡುತ್ತ ನಿಂತ. ಕೆಂಪಗಿದ್ದ ಗುಳ ಹಾಗೆ ಕರ್‍ರಗಾಗಿಬಿಟ್ಟಮೇಲೆ ಮತ್ತೆ ಅದನ್ನು ಕುಲುಮೆಯೊಳಗಿಟ್ಟು ಎದ್ದು ಹೋಗಿ ಬಾಯಲ್ಲಿ ತುಂಬಿದ್ದ ಕವಳ ಪಿಚಕ್ಕನೆ ಉಗಿದು ಬಂದು ‘ಅಲ್ಲ ಗೌಡ್ರೆ ಮಲ್ಲಪ್ಪೋರು ಯಂಗಿದ್ದಾಳು, ಯಂಗಾಗ್ಬುಟ್ಟವರೆ! ಅಂಗೆ ರಸಾನೆ ಯಿಂಡಾಕ್ಬುಟ್ಟದೆ, ಅಲ್ಲ ಅದೆಂತ ಕಾಯ್ಲೆ ಅಂತಿನಿ! ಉಳಿಯಾಕಿಲ್ಲ ಅಂತ ಮೈಸೂರಿಂದ್ಲೆ ತಂದ್ಬುಟ್ಟವ್ರೆ ಅಂದ್ರು’ ಅನ್ನುತ್ತ, ಅಜ್ಜ ಕೂರಲು ಮೋಟುಗೋಡೆ ಮೇಲಿದ್ದ ಹಲಗೆ ತುಂಡನ್ನು ತಂದಿಡುತ್ತಿದ್ದ ಹಾಗೆ ಅಜ್ಜಯ್ಯ ‘ಯಾರು ತಾನೆ ಸಾಸ್ವತ ಬುಡು ಆಚಾರಿ. ಎಲ್ಲಾರು ಒಂದಿನ ಅವನು ಬಂದು ಕರದ ಅಂದ್ರೆ ಮುಗೀತು’ ಎಂದವರೆ ಹಲಸಿನ ಎಲೆಯಲ್ಲಿ ತಾವೆ ಕಟ್ಟಿದ್ದ ಹೊಗೆಬತ್ತಿ ಹತ್ತಿಸಿಕೊಂಡು ‘ಬತ್ತೀನಿ ಆಚಾರಿ, ಭಾರಿ ಮಳೆನೆ ಬರಂಗದೆ ನಮ್ಮೈದ ಬ್ಯಾರೆ ಅದೆ’ ಅಂದವರೆ ಗೊರಗನ್ನೆತ್ತಿ ತಲೆಮೇಲೆ ಕವುಚಿಕೊಂಡು ಕಿಟ್ಟಿಯ ಕೈಹಿಡಿದು ಹೊರಟೇಬಿಟ್ಟರು. ಕಿಟ್ಟಿಗೆ ಮತ್ತೆ ಸೋಜಿಗ. ಹೊತ್ತಾರೆ ತನಗೆ ಅನ್ನಿಸಿತ್ತು, ಅದನ್ನೇ ಮತ್ತೆ ಈಗ ಅಜ್ಜಯ್ಯ ಅಂದಿದ್ದು? ಅವರಿಗೂ ಅದೇ? ಬೆಳಗಿನಿಂದ ಒಳಗಿಂದೊಳಗೆ ಕಟ್ಟಿಕೊಳ್ಳುತ್ತಿದ್ದ ಭಯ ಬಿಗಿಯತೊಡಗಿತು.

ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ

ಮಳೆ ಕಾವಿಗೆ ಬೆದರಿದ ಆಡು ದನಗಳ ಹಿಂಡು ಓಣಿ ತುಂಬ ನುಗ್ಗಿ ಬರತೊಡಗಿತ್ತು. ದನಕಾಯುವ ಐಕಳ ‘ಅಲಲ… ವದಾ… ಒಓಕೀ’ ಎಂಬ ಕಾಕು ಓಣಿಯುದ್ದಕ್ಕೂ ಇಡುಗಿತ್ತು. ಓಣಿ ದಾಟಿ ಕೆರೆ ಕೋಡಿಯ ತೋಪಿಗೆ ಬಂದಾಗ ಸಣ್ಣನೆ ಹನಿ ಸಿಡಿಯತೊಡಗಿದುವು. ‘ವಸಿ ಚುರುಕಾಗಿ ನಡಿ ಮೊಗ, ಯಾಕೊ ಮೋಡಾನೆ ಕಸ್ಕಂಡು ಬೀಳ ಅಂಗೆ ಕಾಣದೆ’ ಎಂದು ಚೂಟಾಗಿ ಹೆಜ್ಜೆ ಹಾಕುತ್ತ, ಬುಸ ಬುಸ ಹೊಗೆಬತ್ತಿಯ ಹೊಗೆ ಬಿಡುತ್ತ ನಡೆಯುತ್ತಿದ್ದ ಅಜ್ಜನ ಜೊತೆ ಕಿಟ್ಟಿ ಮೆಲ್ಲಗೆ ಓಡಲೇಬೇಕಾಯಿತು. ಸಿಡಿಯುತ್ತಿದ್ದ ಹನಿಗಳು ಏರಿ ಮೇಲೆ ಬಂದಾಗ ಮತ್ತೆ ನಿಂತವು. ಜಿಡಿಯಿಂದಾಗಿ ಏರಿಯ ಜಿನುಗುಮಣ್ಣು ತಪ್ಪು ಹೆಜ್ಜೆ ಇಟ್ಟರೆ ಸಾಕು, ಸರ್‍ರನೆ ಜಾರಿ ಬಿಡುತ್ತಿತ್ತು. ಜಾಲದ ಮರದಡಿಗೆ ಬಂದಾಗ ಮನಗನಹಳ್ಳಿ ಪಟೇಲರು ಸಿಕ್ಕಿದ್ದೆ ಮಳೆ ಗದಗುಡುವುದನ್ನು ಗಮನಿಸದೆ ಅಜ್ಜಯ್ಯ ಮಾತಾಡುತ್ತ ನಿಂತು ಬಿಟ್ಟರು. ‘ಮಲ್ಲಪ್ಪ ಉಳಿಯಂಗೆ ಕಾಣಾಕಿಲ್ಲ ಪಟೇಲ್ರೆ. ಈಗ್ಲೊ ಆಗ್ಲೊ. ನೀವೇನೇ ಅನ್ನಿ ಬಡ್ಡಿಮಗಂದು ಒಳರೋಗಕ್ಕಿಂತ ಕೆಟ್ದು ಇನ್ನಿಲ್ಲ ಬುಡಿ ಪಟೇಲ್ರೆ’ ಎಂದ ಅಜ್ಜಯ್ಯನ ಮಾತಿಗೆ ಪಟೇಲರು ‘ಅಲ್ಲ ಗೌಡ್ರೆ ಮಲ್ಲಪ್ಪನ ಯೆಡ್ತಿ ನೋಡಿದ್ರೆ ಅಂಗೆ. ಇರೋ ಒಬ್ಳು ಮಗ್ಳು ಅಂತ ಆವಯ್ಯ ಆಪಾಟಿ ಮಾಡ್ದ. ಕಡೇಲಿ ಅವಳು ಅಂಗಾಗ್ಬುಟ್ಲು ಅಂದ್ರೆ. ಅಂಥ ಛಲ ಮಾಡ್ಬಾರ್ದು. ಹೋಗ್ಲಿ ಈಗಾದ್ರು ಬಂದ್ಲಂತ’ ಎಂದು ಕೇಳಿದೊಡನೆ ಅಜ್ಜಯ್ಯ ಸ್ವಲ್ಪ ತಡೆದು ‘ಇಲ್ಲ ಪಟೇಲ್ರೆ, ಆಸ್ಪತ್ರೆಗೆ ತಂದಾಕವ್ರೆ ಅಂತ ಸುದ್ದಿ ಕೇಳಿದ್ರೂ ಒಂದೇ ಸಲ ಈ ಯೆಣ್ಣು ಅತ್ಲಾಗೆ ಮೊಕಾನೆ ಆಕ್ನಿಲ್ಲವಂತೆ’ ಎಂದು ನಿಟ್ಟುಸಿರು ಬಿಟ್ಟು ‘ಸರಿ ನಡಿರಿ ಮಳೆ ಬಂದ್ಬುಡಂಗದೆ’ ಎಂದು ಹೊರಟಾಗ ಕಿಟ್ಟಿಗೆ ಸದ್ಯ ಮುಗಿಯಿತಲ್ಲ ಅನ್ನಿಸಿದರೂ ಗಕ್ಕನೆ ‘ಮಾವಯ್ಯನ ಮಗಳು’ ಎಂಬ ಸುದ್ದಿ ಸಿಕ್ಕಿಕೊಂಡಿತು. ಅವನೆಂದೂ ಅವಳನ್ನು ನೋಡಿದ್ದಿಲ್ಲ. ಕುತೂಹಲ ಉಕ್ಕಿ ಅವಳು ಎಲ್ಲಿಗೆ ಹೋಗಿಬಿಟ್ಟಳು? ಮಾವಯ್ಯನನ್ನ ಬಿಟ್ಟು ಯಾಕೆ? ಎಷ್ಟು ಒಳ್ಳೆಯದು ಮಾವಯ್ಯ? ಯಾಕೆ ಬಂದೇ ಇಲ್ಲಂತೇ? ಈ ರಾತ್ರಿಯೇ ಬಂದುಬಿಟ್ಟರೆ?…

ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು

ಏರಿ ಮುಗಿದು ಹುಣಸೇಮರದ ಓಣಿಗೆ ಇಳಿದು ಬಂದಾಗ ಮತ್ತೆ ಹನಿಯಿಡಲಾರಂಭಿಸಿತು. ಕಿಟ್ಟಿ ಓಣಿಯ ಉದ್ದಕ್ಕೂ ಎಲ್ಲಾದರೂ ಕಾರಿನ ಚಕ್ರದ ಗುರುತು ಕಂಡೀತೆ ಎಂದು ಅರಸಿದ. ಹಿಂಡು ಹಿಂಡು ದನಕರುಗಳ ಹೆಜ್ಜೆ ಗುರುತುಗಳೇ ದಟ್ಟಿಯಿಸಿ ಎಲ್ಲೂ ಚಕ್ರದ ಗುರುತು ಕಾಣಿಸಲಿಲ್ಲ. ಮೆಲ್ಲಗೆ ಮುಸುಕಾಡುತ್ತಿದ್ದ ಮೋಡಗಳು ಈಗ ಇದ್ದಕ್ಕಿದ್ದ ಹಾಗೆ ಗುದ್ದಾಡತೊಡಗಿದ್ದವು. ಓಣಿಯ ಇಬ್ಬದಿಗೂ ದೆವ್ವದ ಹಾಗೆ ಬೆಳೆದು ನಿಂತಿದ್ದ ಕಳ್ಳಿ ಬೇಲಿ ಕತ್ತಲನ್ನು ಕಕ್ಕುತ್ತಿತ್ತು. ಗಾಳಿಯೇ ಸುಳಿಯದ ಓಣಿಯಲ್ಲಿ ಉಸಿರು ಕಟ್ಟಿದಂತಾಗಿ, ಹುಣಿಸೇಮರದಡಿಗೆ ಬಂದಾಗ ದೊಪ್ಪನೆ ಕತ್ತಲೆ ತಮ್ಮ ತಲೆಯ ಮೇಲೆಯೇ ಹರಿದು ಬಿದ್ದಂತಾಗಿ ಕಿಟ್ಟಿ ಬಿಚ್ಚಿದ್ದೆ ಅಜ್ಜಯ್ಯನ ಗೊರಗಿನೊಳಕ್ಕೆ ಹುದುಗಿಕೊಂಡ.

ಹಾಳು ಹನುಮಂತರಾಯನ ಗುಡಿಯ ಪಕ್ಕದ ತೋಪಿನ ಹತ್ತಿರ ಬಂದಾಗ ಬಾವಲಿಗಳ ಕೀಚುದನಿ, ಪಟಪಟ ರೆಕ್ಕೆ ಬಡಿವ ಸದ್ದಿನೊಡನೆ ಮಳೆಯೂ ಪಟಪಟ ಸಿಡಿಯತೊಡಗಿತ್ತು. ತಿಮ್ಮಕ್ಕನ ಹಿತ್ತಲು ದಾಟಿ ಅಂಕದ ಬೇವಿನ ಮರದಡಿ ಬಂದಾಗ ದೊಡ್ಡನಸೆ ಕಾಡಿಂದ ದಡಗುಟ್ಟುತ್ತ ಬರುತ್ತಿದ್ದ ದನಕರುಗಳಿಗೆ ಹಾದಿ ಬಿಟ್ಟು ಮರದ ಬುಡಕ್ಕೆ ಒರಗಿ ನಿಂತ ಅಜ್ಜಯ್ಯನ ಗೊರಗಿನೊಳಗೆ ಹುದುಗಿಕೊಂಡಿದ್ದ ದೇಹವನ್ನು ಮೆಲ್ಲಗೆ ಅನಾವರಣ ಮಾಡಿದ ಕಿಟ್ಟಿ, ತಮ್ಮ ಮನೆ ಮುಂದೆ ಏನಾದರೂ ನಿಂತಿದೆಯೇ ಅಂತ ನೋಡಿದ. ಬೇಸಿಗೆಯಲ್ಲಿ ನೀರು ತುಂಬಿ ತರುವ ಮುರುಕಲು ಪೀಪದ ಗಾಡಿ ಮಾತ್ರ ಹಾಗೆ ನಿಂತಿತ್ತು. ಮತ್ತೇನೂ ಕಾಣಿಸಲಿಲ್ಲ. ಯಾರೊ ಏನೊ ಅಟ್ಟಿಸಿಕೊಂಡು ಬರುತ್ತಿರುವಂತೆ ಅವರಿಂದ ತಪ್ಪಿಸಿಕೊಳ್ಳಲೆಂಬಂತೆ ಕಿರುಚುತ್ತ ದನಗಳನ್ನು ದಬ್ಬುತ್ತ ಬಂದ ಆಳುಮಕ್ಕಳು ಮರದಡಿ ನಿಂತ ಅಜ್ಜಯ್ಯನನ್ನು ಕಂಡವರೆ ತಟ್ಟನೆ ತಡೆದು ಕೊಟ್ಟಿಗೆಯತ್ತ ದನಗಳ ಹಿಂದೆ ಮೆಲ್ಲಗೆ ತೆವಳಿದರು. ತೋಟದ ಕೆಲಸಕ್ಕೆ ಹೋಗಿದ್ದ ಆಳುಗಳಿನ್ನೂ ಹಟ್ಟಿಗೆ ಬಂದಿರಲಿಲ್ಲ. ಕವುಚಿಕೊಂಡಿದ್ದ ಗೊರಗನ್ನು ತೆಗೆದಿಡದೆ ಅಂಗಳದಲ್ಲಿ ನಿಂತಿದ್ದ ಅಜ್ಜಯ್ಯ ಕಾಲು ತೊಳೆಯಲು ನೀರು ತಂದು ನಿಂತ ಅವ್ವನಿಗೆ ‘ವಸಿ ಇರು ಮೊಗ, ಅಂಗ ತ್ವಾಟದ ಕಡೆ ಕಾಲಾಡ್ಕಂಡು ಬಂದ್ಬುಡ್ತೀನಿ’ ಎಂದವರೆ ಹೊರಟೆಬಿಟ್ಟಿದ್ದು ಕಂಡು ಕಿಟ್ಟಿ ಅಜ್ಜನಿಗೆ ಕೂಗಿ ಏನೋ ಹೇಳಬೇಕೆಂದಿದ್ದವನು, ಅವ್ವ ತಕ್ಷಣ ‘ಬಾರೋ ಕಿಟ್ಟಿ ಕೈ ಕಾಲು ತೊಳ್ಕೊ’ ಅಂತ ಕರೆದ ಕೂಡಲೆ ಮಾತಾಡದೆ ಅಂಗಳದ ಬಚ್ಚಲ ಮೂಲೆಗೆ ನಡೆದ. ಅವ್ವ ಹಜಾರದ ದೀಪ ಹತ್ತಿಸಿ ಉಣ್ಣಲು ಇಕ್ಕುವ ತಡಿ ಅಂದರೂ ಕೇಳದೇ ತಾನೆ ತಣಿಗೆ ಎತ್ತಿಕೊಂಡು ಕೋಣೆಗೆ ನಡೆದ, ಅಜ್ಜಿಯಿಂದ ಹೆಚ್ಚು ತುಪ್ಪ ಗಿಟ್ಟಿಸಬಹುದೆಂದು.

ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಉಂಡು ಹೊರಗೆ ಬಂದಾಗ ತೋಟದಿಂದ ಅಪ್ಪ, ಆಳುಗಳು ಎಲ್ಲಾ ಬಂದಿದ್ದರು. ಎಮ್ಮೆ ಕಾಯಲು ಹೋಗಿ ನೆನೆದು ಬಂದಿದ್ದ ಬೊಬ್ಬರಸಿ ಹಳೆ ಒಲೆ ಮೂಲೆಯಲ್ಲಿ ಬೆಂಕಿ ಉರುಬುತ್ತ ಕೂತಿದ್ದ. ಅಪ್ಪ ಇರದಿದ್ದರೆ ಅಷ್ಟರಲ್ಲಿ ಆಗಲೇ ಕಿಟ್ಟಿ ಅಲ್ಲಿಗೆ ಹಾರಿರುತ್ತಿದ್ದ. ಅಪ್ಪ ಉಣ್ಣಲು ಒಳಗೆ ಹೋಗುವುದನ್ನೆ ಕಾಯುತ್ತ ನಿಂತಿದ್ದ ಹಾಗೆ ಇದುವರೆಗೂ ಸಿಡಿಯುತ್ತಲೆ ಇದ್ದ ಮಳೆ ಅನಾಮತ್ತಾಗಿ ದೊಡ್ಡ ದೊಡ್ಡ ಮಡಕೆಗಳಿಂದ ಎತ್ತಿ ಬಗ್ಗಿಸಿದ ಹಾಗೆ, ಅಂಗಳದ ಮೋರಿಯಿಂದ ಕೆರೆಯ ತೂಬೆತ್ತಿ ಬಿಟ್ಟ ಹಾಗೆ ಸುರಿಯತೊಡಗಿ ಅಂಗಳವೆಲ್ಲ ತುಂಬಿ ನೀರು ಹಜಾರಕ್ಕೂ ಏರತೊಡಗಿತು. ಇಡೀ ಹಟ್ಟಿಯನ್ನೇ ಒಮ್ಮೆ ಎತ್ತಿ ಕುಕ್ಕಿದಂತೆ ಫಳಾರನೆ ಮಿಂಚಿ ಗುಡುಗಿದಾಗ ಎಲ್ಲರಿಗೂ ಜೀವ ಜಲ್ಲೆನಿಸಿತು. ಹಜಾರದ ಮಂಚದ ಮೇಲೆ ಕೂತಿದ್ದ ಅಪ್ಪ ‘ಆ ಸಿಡ್ಲು ಮಳೆ ಅಂಗಳಕ್ಕೆ ಒಂದು ಮಚ್ಚೊ ಕೊಡ್ಲಿನೋ ತಂದಾಕೊ ಕಿಟ್ಟೆ’ ಎಂದಾಗ ಅಲ್ಲೆ ನಿಂತಿದ್ದ ಅವ್ವ ನಡುಮನೆಯ ಸಣ್ಣದೀಪ ತಂದು ‘ಬಾ ಕಿಟ್ಟಿ ದೀಪ ಇಡ್ಕೊ ಕಿರುಮನೇಲಿ ಅವೆ ಕೊಡ್ತೀನಿ’ ಎಂದು ಕಿರುಮನೆ ಬಾಗಿಲು ದೂಡಿ ಒಳಗೆ ನಡೆದದ್ದೆ ಕಿಟ್ಟಿ ಇಷ್ಟು ಹೊತ್ತು ಮರೆತುಬಿಟ್ಟಿದ್ದೆಲ್ಲ ನೆನಸಿಕೊಂಡು ತಟ್ಟನೆ ‘ಅವ್ವ ಅವನು ಬಂದನ?’ ಅಂತ ಕೇಳಿದ.

‘ಯಾರೋ ಕಿಟ್ಟಿ?’

‘ಅವನೇ ಕಣವ್ವ.’

‘ಅವನೇ ಅಂದ್ರೆ ಯಾರೋ?’

‘ನೀನೇ ಹೇಳ್ನಿಲ್ಲವ ವೊತ್ತಾರೆ…’

‘ಥೂ ಅನಿಷ್ಟ…. ಬುಡು ಅನ್ನು. ಅಂಗೆಲ್ಲ ಮಾತಾಡ್ಬಾರ್‍ದು ಕಣೋ. ನಡೀ ಆಚೆ’- ಎಂದು ಮಚ್ಚನ್ನು ಎತ್ತಿಕೊಂಡು ಬಂದು ಅಂಗಳಕ್ಕೆ ಬಿಸಾಕಿ ಅಪ್ಪನನ್ನು ಉಣ್ಣಲು ಕರೆದದ್ದೆ, ಅಪ್ಪ ಎದ್ದು ನಿಂತು ಏನೋ ನೆನಪಾದವನಂತೆ, ‘ಅಲ್ಲ ಮುದುಕಯ್ಯರು ಬ್ಯಾಡಿ ಇನ್ಯಾಕೆ ಬನ್ನಿ, ಮಳೆ ಬತ್ತದೆ ಅಂದ್ರು ಕೇಳದೆ ಒಂಟೆಬಿಟ್ರು. ಇವ್ರು ಆ ದಯ್ಮಳೆಗೆ ಸಿಕ್ಕಾಕಂಡು ಎಲ್ಲಿ ವದ್ದಾಡ್ತಾ ಅವ್ರೋ’ ಎಂದು ಹಜಾರದ ಸೂರಿಗೆ ಕಟ್ಟಿದ್ದ ಲಾಟೀನು ಬಿಚ್ಚಿ ಕೊಂಡವರೆ ‘ನೋಡ್ಕೊಂಡು ಬರನ ಬನ್ರೊ’ ಎಂದು ಆಳುಗಳ ಜೊತೆ ಹೊರಟೇಬಿಟ್ಟರು.

ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ

ಅವ್ವ ಅಂದ ಮಾತಿನ ಗುಂಗಿನಲ್ಲಿ ಇದ್ದ ಕಿಟ್ಟಿ, ಹಳೆ ಒಲೆ ಹತ್ತಿರ ಕಜ್ಜಿ ತುರಿಸುತ್ತ ಕೂತ ಬೊಬ್ಬರಸಿಯ ಹತ್ತಿರ ಜಿಗಿದ. ಕತ್ತಲು ಪೂರಾ ಕವಿದುಬಿಟ್ಟಿತು. ಮಳೆ ಜೋರಾಗುತ್ತಲೇ ಇತ್ತು. ಬೊಬ್ಬರಸಿಯ ಪಕ್ಕವೆ ನಿಂತಿದ್ದ ಕಿಟ್ಟಿಗೆ ಬೆಂಕಿ ಉರಿಯ ಆಚೆ ಅಂಗಳದ ಮೂಲೆಯಲ್ಲಿ ಯಾರೋ ಧುತ್ತನೆ ಬಂದು ನಿಂತುದು ಕಂಡು- ಬೆಳಗಿನಿಂದ ಬರುತ್ತಾನೆ ಅನ್ನಿಸಿದ್ದವನು ಬಂದೇಬಿಟ್ಟನೇನೋ ಎಂದು ಮೈಮೇಲೆ ಮುಳ್ಳು ನಿಂತು ಕಣ್ಣಗಲಿಸಿ ನೋಡಿದ. ಮಸಕು ಮಸಕು. ಅಲ್ಲಿ ನಿಂತಿದ್ದವನು ಮೆಲ್ಲಗೆ ಬೆಂಕಿಯೊಳಗಿಂದ ನುಗ್ಗಿ ಬಂದು ಪಕ್ಕದಲ್ಲಿ ಕೂತುಬಿಟ್ಟಂತೆ. ಕಿಟ್ಟಿ ಪಕ್ಕ ಬೊಬ್ಬರಸಿಯನ್ನೆ ಗಾಬರಿಯಿಂದ ನೋಡಿದ. ಕರ್‍ರಗೆ ದೆವ್ವದ ಹಾಗೆ, ಕುರುಚಲು ಗಡ್ಡ ಮೀಸೆಯ, ಪರ ಪರ ಕಜ್ಜಿ ಕೆರೆಯುತ್ತ ಕೂತಿರುವ ಇವನೇ? ಇವನಲ್ಲ. ಇವನು ದಿನವೂ ಇದ್ದವನೆ. ಯಾವತ್ತು ಇವನು ಬಂದದ್ದು? ಮನೆಯೇ ಇಲ್ಲವಂತೆ. ಇವನಿಗೂ ಹೆಂಡತಿ ಮಕ್ಕಳು ಒಬ್ಬರೂ ಇಲ್ಲವಂತೆ. ಪಾಪ, ಜಗಲಿಯ ಮೇಲೆ ಒಬ್ಬನೇ ಮಲಗಿಬಿಡುತ್ತಾನೆ. ಎಲ್ಲೆಲ್ಲೂ ಸುತ್ತಿ ಏನೆಲ್ಲ ಕಂಡುಬಂದವನ ಹಾಗೆ ಎಂಥೆಂಥ ಚಂದದ ಕಥೆ ಹೇಳುತ್ತಾನೆ. ಇದ್ದಕ್ಕಿದ್ದ ಹಾಗೆ, ಒಬ್ಬನೇ ಅಳುತ್ತ ಕೂತುಬಿಟ್ಟಿರುತ್ತಾನೆ ಒಂದೊಂದು ಸಲ. ಅದೆಲ್ಲ ನೆನಪಾಗಿ ಕಿಟ್ಟಿಗೆ ಮತ್ತೆ ಅಯ್ಯೋ ಅನ್ನಿಸಿತು. ಆದರೂ ಯಾಕೋ ಈಗ ಅವನನ್ನು ನೋಡಲು ಭಯ. ಅವನ ಕಡೆ ಮೆಲ್ಲಗೆದ್ದು ಕೈಕಾಲು ಬಡಿಯತೊಡಗಿದ.

‘ಬತ್ತಾನೆ ನೋಡ್ರಯ್ಯಾ ಕರ್‍ರಗೆ ಅಂದ್ರೆ ಕರ್‍ರಗೆ, ಕರಿಮಂಟಿ ಅಂಗೆ ಗೊತ್ತ? ಏನು ಕಾಣಾಕೆ ಇಲ್ಲ. ಕಣ್ಣು, ಮೂಗು ಮುಸುಡಿ ಏನೂ ಕಾಣಾಕೆ ಇಲ್ಲ ಗೊತ್ತ? ಬಂದ ನೋಡ್ಕಳಿ, ಅಂಗೆ ಉದ್ದದ ಹಗ್ಗದ ಸುರುಳಿ ಸುತ್ಕೊಂಡು, ಕ್ವಾಣನ ಮ್ಯಾಲೆ ಧಿಮಾಕ್ಮಾಡ್ಕಂಡು ಯಂಗೆ ಬತ್ತಾನೆ ಗೊತ್ತಾ? ಬಂದವನೆ ಮೊಕಗಿಕ ನೋಡಾಕೆ ಇಲ್ಲ ಗೊತ್ರಾ?

ತಗದ, ಬಿಗದ, ವಗದ- ಆಗೋಯ್ತು ಗೊತ್ರ?’

ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ

ಕಿಟ್ಟಿ ಕಣ್ಣುಜ್ಜಿ ನೋಡಿದ. ಬೊಬ್ಬರಸಿಯೆ. ಆದರೂ ಭಯವಾಗತೊಡಗಿ; ಅವನ ಪಕ್ಕವೇ ನಿಂತುಬಿಟ್ಟಿದ್ದೇನೆಂದು ಇನ್ನೂ ಭಯವಾಗಿ; ಅವನನ್ನು ಕೂಗಿ ಕರೆಯಬೇಕೆನ್ನುವಷ್ಟರಲ್ಲಿ, ಕೋಣೆಯೊಳಗಿನಿಂದ ವಟಗುಡುತ್ತ ಬಂದ ಅಜ್ಜಿ ಬೀದಿ ಕದ ತೆರೆದದ್ದೆ ತಡ ಗಾಳಿ ಬಂದು ಒಳಗೆ ನುಗ್ಗಿತು. ಬೀಸಿದ ಗಾಳಿಗೆ ಹಳೆ ಒಲೆ ಬೆಂಕಿ ಧಗ ಧಗ ಉರಿಯತೊಡಗಿ ಹಟ್ಟಿ ತುಂಬೆಲ್ಲಾ ಬೆಳಕು ತುಂಬಿಕೊಂಡು ಆ ಬೆಳಕಿನಲ್ಲಿ ಯಾರೂ ಕಾಣಿಸದೆ ಕಿಟ್ಟಿಗೆ ಸ್ವಲ್ಪ ನೆಮ್ಮದಿಯೆನಿಸಿತು. ಮಾಡು ಮುಟ್ಟುತ್ತಿದ್ದ ಒಲೆ ಉರಿ ಕಡಮೆ ಮಾಡುತ್ತ ಅವ್ವ ಬೊಬ್ಬರಸಿಯ ಕಡೆ ತಿರುಗಿ ಭಾರತಕ್ಕೆ ತೊಡಗಿತು. ಬೊಬ್ಬರಸಿ ‘ಇಲ್ಲ ಕಣ್ರವ್ವ, ನೆಲ್ಲುಲ್ಲು ವಂದಿಷ್ಟು ಉರಿ ತಾಕಿದರೆ ಸಾಕು, ಆಳುದ್ದ ವುರಿತದೆ’ ಅಂದ. ಉರಿ ಕಡಿಮೆಯಾಗುತ್ತಾ ಮತ್ತೆ ಕತ್ತಲು ತುಂಬಿಕೊಳ್ಳುವ ಮೊದಲೇ ಕಿಟ್ಟಿ ಬೊಬ್ಬರಸಿಯ ಹತ್ತಿರದಿಂದ ಎದ್ದು ನಡುಮನೆಯತ್ತ ನಡೆದ.

ಭಯಂಕರ ಗುಡುಗು, ಕಡಮೆಯಾಗದೆ ಸುರಿಯುತ್ತಲೇ ಇರುವ ಮಳೆ. ಅಜ್ಜನನ್ನು ನೋಡಿ ಬರಲು ಹೋದವರು ಸುಮಾರು ಹೊತ್ತಾದರೂ ಬರಲೇ ಇಲ್ಲ. ಅಜ್ಜಿ, ಅವ್ವ, ಬೊಬ್ಬರಸಿ ಹಟ್ಟಿ ಬಾಗಿಲಲ್ಲಿ ನಿಂತು ಇನ್ನೂ ಯಾಕೆ ಬರಲಿಲ್ಲ ಅಂತ ಆತಂಕದಿಂದ ಕಾಯತೊಡಗಿದರು. ಬೊಬ್ಬರಸಿ ಚಳಿಗೆ ಕಟ ಕಟ ಹಲ್ಲು ಕಡಿಯುತ್ತ ಮತ್ತೆ ಪರಪರನೆ ಕಜ್ಜಿ ಕೆರೆದುಕೊಳ್ಳುತ್ತ ಹಳೆ ಒಲೆಯ ಕೆಂಡ ಕೆದಕುತ್ತ ಕೂತ. ಅವ್ವನ ಸೆರಗು ಕಚ್ಚಿ ನಿಂತಿದ್ದ ಕಿಟ್ಟಿಗೆ, ಅವನು ಅಲ್ಲಿ ಹೋಗಿ ಕೂತಿದ್ದೇ ವಾಸಿ, ಅನ್ನಿಸಿತು. ಹೊರಗೆ ಏನೊಂದೂ ಕಾಣಿಸದಂತೆ ಕಾಡುಗತ್ತಲೆ. ಮನೆಯ ಮುಂದಿನ ತೆಂಗಿನ ಮರಗಳನ್ನು ಮುರಿದು ಬೀಳುವ ಹಾಗೆ ಮುಲುಕಿಸುತ್ತಿರುವ ಗಾಳಿ. ಎಲ್ಲರ ಮುಖಕ್ಕೂ ಇರಿಚಲು ಬಡಿದು ಕಿಟ್ಟಿಯ ಜೀವ ಪುಕಪುಕ ಅನ್ನತೊಡಗಿತು. ಬೆಳಗಿನಿಂದ ಬಿಮ್ಮನೆ ಬಿಗಿದುಕೊಂಡಿದ್ದು ಇನ್ನೂ ಬಿಗಿಯತೊಡಗಿತು. ಕಣ್ಣು ಕುಕ್ಕುವಹಾಗೆ ಜಗ್ಗನೆ ಮಿಂಚಿದಾಗ ಕತ್ತಲು, ಮಳೆಯಲ್ಲಿ ಮುಳುಗಿದ್ದೆಲ್ಲ ಹಠಾತ್ತನೆ ತೆರಕೊಂಡಂತೆ; ಕಣದ ಹೊಲದ ಬೇಲಿಯ ಹತ್ತಿರ ಯಾರೋ ನಿಂತಂತೆ; ಇನ್ನೊಮ್ಮೆ ಮಿಂಚಿದಾಗ ಅವನೇ ಬೆಳೆಯುತ್ತಿದ್ದಂತೆ; ಮಿಂಚಿದಾಗೆಲ್ಲ ಬೆಳೆಯುತ್ತ ಬೆಳೆಯುತ್ತ ಕಣದ ಹೊಲದ ಬೇಲಿಯಾಚಿನ ಬಸಿರಿ ಮರವಾಗಿ ವಾಲಾಡತೊಡಗಿದಂತೆ; ಕಿಟ್ಟಿ ನಿಂತಲ್ಲೆ ಗಡಗಡ ನಡುಗಿದ. ಅವ್ವನ ನಿರಿಗೆಯಲ್ಲಿ ಮುಖ ಮುಚ್ಚಿಕೊಂಡ.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಕಣದ ಹೊಲದ ಕಡೆಯಿಂದ ಯಾರೋ ದಪದಪ ಓಡಿಬರುವ ಸದ್ದಿಗೆ ಎಲ್ಲರಿಗೂ ಉಸಿರು ಕಟ್ಟಿದಂತಾಗಿ, ಓಡುತ್ತ ಬಂದ ಹಲಗ ತೊದಲುತ್ತ ತೊದಲುತ್ತ ಆಗಿಬಿಟ್ಟಿದ್ದು ಹೇಳಿದ್ದೇ, ಎಲ್ಲರೂ ನಿಂತಲ್ಲೆ ಮಳೆಯ ಸದ್ದನ್ನು ಮೀರಿಸುವ ಹಾಗೆ ಅಳುತ್ತ ತಲೆ ಚಚ್ಚಿಕೊಳ್ಳತೊಡಗಿದ್ದು; ದಿಗ್ಭ್ರಾಂತನಾಗಿ ನಡುಗುತ್ತ ನಿಂತಿದ್ದ ಕಿಟ್ಟಿಗೆ ತಡಕೊಂಡಿದ್ದೆಲ್ಲ ಉಕ್ಕಿದಂತಾಗಿ ತಾನೂ ಕಿಟಾರನೆ ಕಿರುಚತೊಡಗಿದ.

ಅಕ್ಕಪಕ್ಕದವರೆಲ್ಲ ‘ಏನಾಯಿತು, ಏನಾಯಿತು’ ಅಂತ ಓಡಿಬಂದು ಕವಿಚಿಕೊಂಡರು. ಹಟ್ಟಿಯ ಮಾಡೆ ಕಿತ್ತುಹೋಗುವಂತೆ ಅಳುತ್ತಿದ್ದವರನ್ನೆಲ್ಲ ಕೆಳಗಲ ಹಟ್ಟಿ ಚಿಕ್ಕಜ್ಜ ಗದರಿಸಿ, ‘ಸ್ವಲ್ಪ ತಡಿರೇ, ಎಲ್ರೂ ಕಿರಚಿ ಇನ್ನೂ ಗಾಬರಿ ಮಾಡಬ್ಯಾಡಿ’ ಎಂದರು. ಗುಡುಗು, ಮಿಂಚು, ಗಾಳಿ, ಮಳೆ. ಏನು ಮಾಡಿದರೂ ಯಾರೂ ಅಳು ನಿಲ್ಲಿಸಲಿಲ್ಲ. ಕಣ್ಣು ಮೇಲಾಗಿ ಬಾಯಿ ತೆರಕೊಂಡು ಅಜ್ಜಯ್ಯನ ಗಂಟಲಲ್ಲಿ ಗೊರಗೊರ ಸದ್ದಾಗುತ್ತಿತ್ತು.

ಅಜ್ಜಯ್ಯನನ್ನು ಹೊತ್ತು ಜಗಲಿಗೊಯ್ದರು.

ಹಟ್ಟಿಯೊಳಗಿದ್ದವರೂ ಬಾಯಿ ಬಡಿದುಕೊಳ್ಳುತ್ತ ಜಗುಲಿಗೆ ಹೊರಟರು. ಉಡಿಯಲ್ಲಿ ಕಿರುಚುತ್ತಿದ್ದ ಕಿಟ್ಟಿಯನ್ನು ಗಮನಿಸದೇ ಅವ್ವ ಕೂಡ ಅಳುತ್ತ ಜಗಲಿಗೆ ನಡೆದದ್ದೆ ಜೀವಕ್ಕೆ ಬಂದಂತಾಗಿ ಕೂತಲ್ಲೆ ಮುಲುಗುಟ್ಟುತ್ತ ಸುತ್ತ ನೋಡಿದ.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಹಟ್ಟಿ ತುಂಬ ದೀಪಗಳು ಉರಿಯುತ್ತಿದ್ದರೂ ಕತ್ತಲೆ ತುಂಬಿಕೊಂಡಂತೆ;

ತಾನೊಬ್ಬನೇ ಆಗಿಬಿಟ್ಟಂತೆ;

ಕೂಗಲಾಗದಂತೆ ಉಸಿರೇ ಇಂಗಿಬಿಟ್ಟಂತೆ;

ಎದ್ದು ಓಡಲು ಆಗದೆ ಕಾಲುಗಳು ಬಿಗಿದುಕೊಂಡಂತೆ;

ಎಲ್ಲ ಎಲ್ಲಾ ಭಯಂಕರವಾಗುತ್ತಿದ್ದಂತೆ;

ಹಾಗೆಯೇ ಧಡಕ್ಕನೆ ಆಗ ಕಂಡಿದ್ದವನು ಅಂಗಳದ ನಡುವೆಯೇ ಬಂದು ಉದ್ದಕ್ಕೆ ನಿಂತುಬಿಟ್ಟಂತೆ;

ಉದ್ದನೆ ಕೈ ಚಾಚುತ್ತಿದ್ದಂತೆ;

ಒಳಗಿದ್ದ ಶಕ್ತಿಯೆಲ್ಲ ಬಾಯೊಳಗಿಂದ ಒಮ್ಮೆಲೆ ಉಕ್ಕಿ ಬಂದಂತೆ ತಟ್ಟನೆ ‘ಅವ್ವ ಅವನು ಬಂದ, ಬಂದ’ ಎನ್ನುತ್ತ ಕಿರುಚಿ; ಕಿಟ್ಟಿ ಪ್ರಜ್ಞೆ ತಪ್ಪಿದ.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

Srikrishna Alanahalli

ಶ್ರೀಕೃಷ್ಣ ಆಲನಹಳ್ಳಿ (1947-1989): ಕವಿ-ಕತೆಗಾರ. ಜನಿಸಿದ್ದು 1947ರ ಏಪ್ರಿಲ್ 3ರಂದು, ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ. ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಪ್ರಮುಖರು. ಕೆಲವು ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಅವರು ನಗರೀಕರಣ ಮತ್ತು ಆಧುನಿಕ ಆರ್ಥಿಕತೆಯ ಸ್ಪರ್ಶಕ್ಕೆ ಸಿಕ್ಕ ಗ್ರಾಮೀಣ ಬದುಕಿನ ಪಲ್ಲಟಗಳನ್ನು ಅತ್ಯಂತ ಸಹಜ ರೀತಿಯಲ್ಲಿ ತಮ್ಮ ಕಥೆ-ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃತಿಗಳು: ಮಣ್ಣಿನ ಹಾಡು, ಕಾಡುಗಿಡದ ಹಾಡು-ಪಾಡು, ಪ್ರಕಟಿಸಲಾಗದ ಪದ್ಯಗಳು, ಡೋಗ್ರಾ ಪಹಾಡಿ ಗೀತೆಗಳು (ಕವನ ಸಂಕಲನಗಳು). ತಪ್ತ, ಫೀನಿಕ್ಸ್ (ಕಥಾ ಸಂಕಲನಗಳು), ಕಾಡು, ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರ, ಗೋಡೆ (ಕಾದಂಬರಿಗಳು), ಮೊದಲ ಮೂರು ಕಾದಂಬರಿಗಳು ವಿವಿಧ ನಿರ್ದೇಶಕರಿಂದ ಚಲನಚಿತ್ರಗಳಾಗಿದ್ದು, ‘ಕಾಡು’ ಚಿತ್ರ ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಅವಲೋಕನ, ಗ್ರಾಮಾಯಣ ಸಮೀಕ್ಷೆ ಅವರು ಸಂಪಾದಿಸಿದ ಕೃತಿಗಳು. ‘ಡೋಗ್ರಿ ಪಹಾಡಿ ಪ್ರೇಮಗೀತೆಗಳು’ ಎಂಬ ಸಂಕಲನದಲ್ಲಿ ಜಮ್ಮು-ಕಾಶ್ಮೀರಿ ಭಾಷೆಯಾದ ಡೋಗ್ರಿ-ಪಹಾಡಿ ಭಾಷೆಯಿಂದ ಡಾ. ಕರಣಸಿಂಗ್‌ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದನ್ನು ಆಲನಹಳ್ಳಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವರ ಕೃತಿಗಳು ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ‘ಮಣ್ಣಿನ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನ ಸಂದಿದೆ. 1989ರ ಜನವರಿ 4ರಂದು ನಿಧನರಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಬಿ.ಸಿ. ದೇಸಾಯಿ ಅವರ ಕತೆ | ಸಾವು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...