ಟಿ.ಜಿ. ರಾಘವ ಅವರ ಕತೆ | ಸಂಕರ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಒ೦ದಷ್ಟು ಹಣ್ಣು ಕೊಂಡು ಕಾರಿನ ಹಿಂದಿನ ಸೀಟಿನಲ್ಲಿಟ್ಟು, ಬಾಗಿಲು ತೆರೆದು ಕೂತಾಗ ಯಾರೊ ತನ್ನನ್ನು ಕರೆದಂತಾಯಿತೆಂದು ಜಗನ್ನಾಥ ಅತ್ತಿತ್ತ ಕಣ್ಣು ಹೊರಳಿಸಿದ. ಇಲ್ಲ ಇದೊಂದು ಭ್ರಮೆ, ಆಗಾಗ ಹಾಗೆನ್ನಿಸುತ್ತದೆ, ಎಂದುಕೊಂಡು ಹಿನ್ನೆಲೆ ಕನ್ನಡಿಯನ್ನು ತನ್ನತ್ತ ವಾಲಿಸಿ ಮುಖ ನೋಡಿಕೊಂಡ. ಕಣ್ಣು ಕಿರಿದಾಗಿಸಿ ತುಟಿಯಮೇಲೆ ನಾಲಗೆಯಾಡಿಸಿ, ಮುಗುಳು ನಗೆ ಚೆಲ್ಲಿ ಆತ್ಮರತಿಯಿಂದ ಟೈ ಗಂಟು ಸರಿಪಡಿಸಿಕೊಂಡ. ಹಿನ್ನೆಲೆ ಕಾಣುವಂತೆ ಕನ್ನಡಿಯನ್ನು ಮತ್ತೆ ಸರಿಸಿ, ಇನ್ನೇನು ಕಾರು ಸ್ಟಾರ್ಟ್ ಮಾಡಬೇಕು ಯಾರೋ ಕಿಟಕಿಯ ಬಳಿ ನಿಂತಂತಾಯಿತು. ದರಿದ್ರ ಭಿಕ್ಷುಕನಿರಬೇಕು, ಹುಬ್ಬುಗಂಟಿಕ್ಕಿ ಅತ್ತ ತಿರುಗಿದ.

“ಕಾಮ್ರೆಡ್, ರಾಣಿಕುಟ್ಟಿ ನಿಮ್ಮನ್ನ ನೋಡ್ಬೇಕಂತೆ” ಎಂದ ವ್ಯಕ್ತಿಯನ್ನು ದಿಟ್ಟಿಸಿದ. ನೀಳ ಮುಖದ ಪಿಳಿ ಪಿಳಿ ಕಣ್ಣಿನ, ಕುರುಚಲು ಗಡ್ಡದ ಮಾಸಿದ ಜುಬ್ಬ ಪೈಜಾಮದ ಯುವಕ. ಯಾರೆಂದು ಹೊಳೆಯದೆ ಜಗನ್ನಾಥ ಗಲಿಬಿಲಿಗೊಂಡ. ಸೂಳ್ಗಾರಿಕೆಗೆ ಇಂತಹ ಆಹ್ವಾನಗಳು ಬರುತ್ತವೆಂದು ಅವನಿಗೆ ಗೊತ್ತಿತ್ತು, ಆದರೆ ಕಾಮ್ರೆಡ್ ಪದ? ಜಗನ್ನಾಥನ ಮಾನಸಿಕ ಗಲಿಬಿಲಿ ಮುಖದಲ್ಲಿ ವ್ಯಕ್ತವಾಯಿತು. ಆತ ಜಗನ್ನಾಥನ ಮುಖವನ್ನೆ ಚೂಪಾಗಿ ನೋಡುತ್ತ ಹೇಳಿದ.

”ಮಮತಾ ದೇವಿ”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಗನ್ನಾಥನಿಗೆ ತಟ್ಟನೆ ನೆನಪಾಯಿತು. ಮಮತಾ! ಒಂದು ದಿನ ಫೋನಿನಲ್ಲಿ “ರಾಣಿಕುಟ್ಟಿ” ಎಂದು ಕರೆದಾಗ “ನನ್ನ ಹೆಸರು ರಾಜಕುಮಾರಿ ಮಮತಾದೇವಿ” ಎಂದು ಕುಕಿಲಿದ್ದಳು.

“ಎಲ್ಲಿದ್ದಾರೆ?”

“ಇಲ್ಲಿಯೆ ಕಾಮ್ರೆಡ್, ನೀವು ಹಣ್ಣು ಕೊಂಡ ಅಂಗಡಿಯ ಮೇಲಿನ ಮನೆ. ನಿಮ್ಮನ್ನು ಕರೆದರು. ನಿಮಗೆ ಕೇಳಿಸಲಿಲ್ಲ. ನನ್ನ ಕಳುಹಿಸಿದರು” ಎಂದ.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಮಹಡಿಯ ಮೇಲಿನಿಂದ ಹೆಸರು ಹಿಡಿದು ಕೂಗಿದ್ದು ಆರ್ಥಿಕಶಾಖೆಯ ಕಾರ್ಯದರ್ಶಿಯ ಅಹಂಗೆ ಚುಚ್ಚಿತು. ಸಬೂಬು ಹೇಳಿ ಪಾರಾಗಲೆ, ಬೇಡವೆ, ಹೋಗಿ ನೋಡಲೆ, ಬೇಡವೆ ಎನಿಸುತ್ತಿದ್ದಂತೆ ಹದಿನೈದು ವರ್ಷಗಳ ಹಿಂದಿನ ಆರು ತಿಂಗಳ ಪರಿಚಯಕ್ಕೆ, ಮುದ್ದು ಮುಖದ ಅರಳು ದೇಹಕ್ಕೆ, ಗುರುಶಿಷ್ಯ ಬಾಂಧವ್ಯಕ್ಕೆ ಮನಸ್ಸು ಬಿಸಿಯಾಗಿ, ಮೃದುವಾಗಿ, ಕಾರಿನಿಂದ ಇಳಿದು ಅವನನ್ನು ಹಿಂಬಾಲಿಸಿದ.

”ನಿಮಗೆ ಹೇಗೆ ಪರಿಚಯ?” ಎಂದ.

“ನಾವು ಕೆಲವು ಮಾರ್ಕ್ಸ್‌ವಾದಿಗಳು ಸಂಜೆ ಸಾಧಾರಣ ಅವರ ಮನೆಯಲ್ಲಿ ಸೇರುತ್ತೇವೆ, ಟ್ಯಾಕ್ಟಿಕ್ಸ್ ಚರ್ಚಿಸುತ್ತೇವೆ, ಕಾಮ್ರೆಡ್.”

ಜಗನ್ನಾಥನಿಗೆ ಆಶ್ಚರ್ಯವಾಯಿತು. ಲಕ್ಷಾಧೀಶನ ಮಗಳು, ಮಾರ್ಕ್ಸ್‌ವಾದ. ಏನಾಗಿರಬಹುದು ಈಕೆಗೆ ಎನಿಸುತ್ತಿದ್ದಂತೆ ತನ್ನ ಗತಕಾಲದ ಆಳದಲ್ಲೆಲ್ಲೂ ಹಸಿಯಾಗಿದ್ದ ‘ನೀವು ಕಳೆದುಕೊಳ್ಳುವುದೇನಿಲ್ಲ, ನಿಮ್ಮ ಸಂಕೋಲೆಗಳನ್ನು ಬಿಟ್ಟು’ ನೆನಪಿಗೆ ಬಂತು. ಆದರೆ ಇವಳು- ತಾನು ಯಾವುದಕ್ಕಾಗಿ ಹಗಲಿರುಳೂ ದುಡಿಯುತ್ತಿದ್ದೇನೊ ಅದನ್ನೆ ಕಳೆದುಕೊಳ್ಳುತ್ತಿದ್ದಾಳೆ, ಪೋಲು ಮಾಡುತ್ತಿದ್ದಾಳೆ ಎನಿಸಿತು. ತಾನೂ ಒಂದು ಕಾಲದಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಮಾರ್ಕ್ಸ್‌ನ ತತ್ವಗಳ ಬಗ್ಗೆ ಚಡಪಡಿಸಿದ್ದ. ಕ್ರಾಂತಿ, ಕಮ್ಯೂನಿಸಂ ಎಂದೆಲ್ಲ ಬಡಬಡಿಸಿದ್ದ. ಐ.ಎ.ಎಸ್. ಪಾಸಾಗಿ ಸರ್ಕಾರಿ ಹುದ್ದೆಯಲ್ಲಿ ಹಾಗೆ, ಹೀಗೆ ಹಣ ಬರತೊಡಗಿದೊಡನೆ ಮಾರ್ಕ್ಸ್ ನಿಧಾನವಾಗಿ ಬಡತನದೊಂದಿಗೆ ಹಿಂದೆ ಸರಿದಿದ್ದ, ಗೋರಿಯಾಗಿದ್ದ. ಇವಳ ಮಾರ್ಕ್ಸ್‌ವಾದದ ಆಕರ್ಷಣೆಗೆ ತನ್ನ ಕಾಣಿಕೆ ಇದ್ದರೂ ಇರಬಹುದು, ಇಲ್ಲ ಅವಳ ಗಂಡ ಮಾರ್ಕ್ಸಿಸ್ಟನಿರಬಹುದು ಎನಿಸಿ,

”ಆಕೆಯ ಗಂಡ?” ಎಂದ.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

”ಗಂಡ?” ಆಶ್ಚರ್ಯ ಸೂಚಿಸುತ್ತ ”ನನಗೆ ತಿಳಿದ ಮಟ್ಟಿಗೆ ಇಲ್ಲ ಕಾಮ್ರೆಡ್” ಎಂದು ನಕ್ಕ. ಪಿಳಿಪಿಳಿ ಕಣ್ಣಲ್ಲೂ ನಗೆ ಮಿಂಚಿತು. ಹೊಗೆಸೊಪ್ಪಿನಿಂದಾಗಿ ಅವನ ಹಲ್ಲುಗಳ ಮೇಲೆ ಕಟ್ಟಿದ್ದ ಕಂದು ಬಣ್ಣವನ್ನು ಜಗನ್ನಾಥ ಗಮನಿಸಿದ. ಈತನಿಗೆ ಮಮತಾಳ ಹೆಚ್ಚಿನ ಪರಿಚಯವಿಲ್ಲವೆನಿಸಿ ಸುಮ್ಮನಾದ. ಆದರೂ ಮಾತಿಗೊಮ್ಮೆ ಆತ ಬಳಸುತ್ತಿದ್ದ ಕಾಮ್ರೆಡ್ ಪದ, ಜಗನ್ನಾಥನಿಗೆ ಅಸಹ್ಯವೆನಿಸಿತು. ಇನ್ನೊಮ್ಮೆ “ಕಾಮ್ರೆಡ್” ಎಂದರೆ, ಸಾಕು ನಿಲ್ಲಿಸಯ್ಯ ನಿನ್ನ ಕಾಮ್ರೆಡುತನವನ್ನು ಎನ್ನಬೇಕು.

ಆರು ತಿಂಗಳು ಅವಳಿಗೆ ಗುರುವಾಗಿ ಜಗನ್ನಾಥ ಹೇಳಿಕೊಟ್ಟ ಶಾಲೆಯ ಪಾಠದಲ್ಲಿ ಅವಳು ಕಲಿತದ್ದೆಷ್ಟೋ. ಆದರೆ ಅವನ ಬಡತನ, ಬಡತನದ ಬಗೆಗಿನ ನಾಚಿಕೆ, ಅವಮಾನ, ಕಳಚಿಕೊಳ್ಳುತ್ತಿದ್ದ ಆತ್ಮಗೌರವ, ಅವಳ ಶ್ರೀಮಂತಿಕೆಯ ಅದ್ದೂರಿಯ ಮೇಲಿನ ಹೊಟ್ಟೆಕಿಚ್ಚು, ಅವನ ಬುದ್ಧಿವಂತಿಕೆ, ಸೂಕ್ಷ್ಮಾತಿ ಸೂಕ್ಷ್ಮಪಟುಗಳಲ್ಲಿ ಅವಳ ಮೇಲೆ ದಾಳಿಮಾಡಿತ್ತು. ಸಮಯ ಒದಗಿಸಿಕೊಂಡು ಅವಳಲ್ಲಿ ಅಪರಾಧಿಭಾವ ಉಂಟುಮಾಡಲೆಂದೇ ಮಾರ್ಕ್ಸ್‌ನ ಮಾತುಗಳನ್ನು ತನ್ನ ಮಾತಾಗಿ ತೇಲಿಸುತ್ತಿದ್ದ. ಭಾರತ ಎಂಥ ದರಿದ್ರ ದೇಶ, ಬಡದೇಶ, ಮಂತ್ರ ತಂತ್ರ ಜಾತಿ ವ್ಯವಸ್ಥೆಯಲ್ಲಿ ಮಂಕಾಗಿರುವ ದೇಶ. ಪೈಸೆಗಳಲ್ಲಿ ಬದುಕುವ, ಎಂಜಲುಕೂಳಿಗಾಗಿ ಜಗಳಾಡುವ ದಾರಿದ್ರವನ್ನು ತಾನೆ ಕಣ್ಣಾರೆ ಕಂಡಂತೆ, ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದ. ಈ ದೇಶಕ್ಕೆ ಮುಕ್ತಿ ಮಾರ್ಕ್ಸ್‌ನ ತತ್ವಗಳಿಂದಲೇ ಎಂದಿದ್ದ. ಈ ದೇಶದ ಶ್ರೀಮಂತರು ತಮ್ಮ ಪಾಡಿಗೆ ತಾವಿರುವುದು ನಿಜವಾಗಿಯೂ ಘೋರ ಪಾಪ ಎಂದಿದ್ದ. ಅವನು ಹಾಗೆ ಮಾತನಾಡುವಾಗಲೆಲ್ಲ ಅವಳು ಕಣ್ಣರಳಿಸಿ ಕೇಳುತ್ತಿದ್ದಳು, ನಗುತ್ತಿದ್ದಳು. ಅವರ ಹಣೆಯ ಬರಹವಲ್ಲವೆ, ಎಂದಿದ್ದಳು. ನಾನು ಪೂರ್ವ ಜನ್ಮದಲ್ಲಿ ರಾಣಿಯಾಗಿ ದಾನಧರ್ಮ ಮಾಡಿ, ಈಗ ಹಣದಲ್ಲಿ ಉರುಳಾಡುತ್ತಿದ್ದೇನೆ ಎಂದು ಜಂಬ ಮಾಡಿದ್ದಳು. ನಮ್ಮಪ್ಪನಿಗೆ ಇದೆಲ್ಲ ಗೊತ್ತಾದರೆ ನಿನ್ನನ್ನು ಓಡಿಸುತ್ತಾರೆ, ಗೊತ್ತಾ ಎಂದು ಕಣ್ಣರಳಿಸಿದ್ದಳು. ಬೊಗಸೆಗಂಗಳ ಚೆಲುವೆ! ಒಂದು ದಿನವಂತೂ “ನಮ್ಮಪ್ಪನಿಗೆ ಯಾಕೆ ಹೇಳಲ್ಲ ಗೊತ್ತಾ? ನಿನ್ನ ಕಂಡರೆ ನನಗೆ ತುಂಬ ಇಷ್ಟ, ಅದಕ್ಕೆ-” ಎಂದಳು, ಹಾಗೆಂದಾಗ ಜಗನ್ನಾಥನ ಇಪ್ಪತ್ತೂರರ ಹರೆಯದ ಮೈಯಲ್ಲಿ ಚಳಕು ಹೊಡೆದು, ಮುಖಕ್ಕೆ ರಕ್ತನುಗ್ಗಿ, ಕಿವಿ ಬಿಸಿಯಾಗಿ ಆಸೆ, ಆಸೆ, ಆಸೆಯಲ್ಲಿ. ಇಂಥದೇ ತತ್ತರ ಜಗನ್ನಾಥನಿಗೆ ಉಂಟಾಗಿದ್ದು, ಲೆಕ್ಕವೊಂದನ್ನು ಮಾಡಿದ್ದೇನೆಂದು ಅವಳು ಕೊಟ್ಟ ಪುಸ್ತಕದ ಹಾಳೆಯಲ್ಲಿ ಐ ಲವ್ ಯು, ಐ ಲವ್ ಯು, ಎಂದು ಮತ್ತೆ ಮತ್ತೆ ಬರೆದಿದ್ದನ್ನು ನೋಡಿದಾಗ. ಮತ್ತೊಮ್ಮೆ ತೊಡೆಗೆ ತೊಡೆ ಘಟ್ಟಿಸಿದಾಗ, ಮಗದೊಮ್ಮೆ.

ಆರು ತಿಂಗಳಲ್ಲಿ ಅವನ ಐ.ಎ.ಎಸ್. ಪರೀಕ್ಷೆ ಫಲಿತಾಂಶ ಬಂತು. ಹೈಸ್ಕೂಲು ಹುಡುಗಿಗೆ ಪಾಠ ಹೇಳಿಕೊಡುವುದು ತನ್ನ ಘನತೆಗೆ ಕುಂದು ಎಂದು ತಕ್ಷಣ ನಿಲ್ಲಿಸಿದ. ಅದಾದ ಸ್ವಲ್ಪದಿನಕ್ಕೆ ಅವಳ ಮದುವೆಯ ಸುದ್ದಿ ಬಂತು.

ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು

ಇಂದಿಗೂ ಜಗನ್ನಾಥನಿಗೆ ಚೆನ್ನಾಗಿ ನೆನಪಿರುವುದು ಅವರ ಮನೆಗೆ ಅವನು ಹೋದ ಮೊದಲ ದಿನ. ನಾಚಿಕೆಯಲ್ಲಿ, ಅವಮಾನದಲ್ಲಿ, ಆಕರ್ಷಣೆಯಲ್ಲಿ ಬೆಂದ ದಿನ-

ಗುರುತಿನ ಪ್ರಾಧ್ಯಾಪಕರು ಕೊಟ್ಟ ಪರಿಚಯ ಪತ್ರ ಹಿಡಿದು ಅವರ ಮನೆಯ ವಿಶಾಲ ಕಾಂಪೌಂಡಿನೊಳಗೆ ಸೈಕಲ್ ತುಳಿದಾಗ ಜಗನ್ನಾಥನ ಎದೆ ಡವಗುಟ್ಟುತ್ತಿತ್ತು. ಸೈಕಲನ್ನು ಪೋರ್ಟಿಕೊ ಪಕ್ಕದಲ್ಲಿ ನಿಲ್ಲಿಸಿ ಮನೆಯ ಮೆಟ್ಟಿಲು ಹತ್ತಿದ. ತೆರೆದ ಬಾಗಿಲಲ್ಲಿ ನಿಂತ, ಬೆವರುತ್ತಿದ್ದ ಮುಖವನ್ನು ಒರೆಸಿಕೊಳ್ಳುತ್ತ. ಸುತ್ತ ನೋಡಿದ, ಯಾರೂ ಕಾಣಲಿಲ್ಲ. ಪಡಸಾಲೆಯಲ್ಲಿ ಕಣ್ಣಿಗೆ ಬಿದ್ದದ್ದು ಹಿತ್ತಾಳೆಯ, ತೆರದೆದೆಯ, ದೀಪ ಹಿಡಿದ ಎರಡು ಮುದ್ದಾದ ಸಾಲಭಂಜಿಕೆಯರು. ನೆಲದ ಮೇಲೆ ಉದ್ದಕ್ಕೂ ಹಾಸಿದ್ದ ಮೃದು ರತ್ನಗಂಬಳಿ, ಮೇಲೆ ಬಣ್ಣ ಬಣ್ಣದ ಚಿತ್ರವಿಚಿತ್ರ ತೂಗುದೀಪ.

ಆತ ತುಂಬ ಸರಳ ವ್ಯಕ್ತಿ. ಅವನೊಂದಿಗೆ ಮಾತಾಡುವಾಗ ಆಗೀಗ “ಸ್ವಾಮಿ” ಅಂತ ಹೇಳು. ಅವ ರಾಜಮನೆತನದವನಂತೆ, ಗೊತ್ತಲ್ಲ ನಿನಗೆ ಇಂಥ ಪದಗಳು ಅಂಥವರನ್ನು ಉಬ್ಬಿಸುತ್ತವೆ ಎಂದಿದ್ದ ಪ್ರಾಧ್ಯಾಪಕರ ಮಾತು ನೆನಪಿಗೆ ಬಂತು; ಎಂಜಲು ನುಂಗಿ ಅತ್ತಿತ್ತ ಇಣುಕಿ ಗಂಟಲು ಕೇಕರಿಸಿ, ಕಾದ. ಯಾರೂ ಇದ್ದಂತಿಲ್ಲ, ನಿಮಿಷ ಯುಗವಾಗುತ್ತ ಹೋಯಿತು. ತುಟಿ ತುಂಬ ಲಿಪ್‌ಸ್ಟಿಕ್ ಬಳಿದ ಹೆಣ್ಣು, ಮುಖವೆಲ್ಲ ಮುಗುಳು ನಗೆಯಾಗಿ ಕುಲುಕುತ್ತ ಅವತರಿಸಿದಳು. ಕಣ್ಣಿನಲ್ಲೆ ಪ್ರಶ್ನೆ ಮಿಂಚಿಸಿದಳು. ಪರಿಚಯದ ಕಾರ್ಡು ತೋರಿಸಿದ, ಓ ಎಂದಳು, ಡ್ರಾಯಿಂಗ್ ರೂಮಿನಲ್ಲಿ ಕೂರಲು ಹೇಳಿದಳು, ಪಕ್ಕದ ಬಾಗಿಲು ತೆಗೆದಳು. ಸೋಫಾದ ಮೇಲೆ ಮುದುಡಿ ಕುಳಿತ ಬೆವರುತ್ತಿದ್ದ ಜಗನ್ನಾಥನಿಗೆ ಹಿಂದೆ ಒರಗಲಾರದ ಸಂಕೋಚ. ಓಡಿಹೋಗಿಬಿಡಲೆ, ಮನೆಯಲ್ಲಿ ಕಾಲುಚಾಚಿ ಆರಾಮ ಉರುಳಾಡಲೆ ಎನಿಸುತ್ತಿತ್ತು. ಆದರೆ ಅಮ್ಮನ ಬತ್ತಿದ ಮುಖ, ತಂಗಿಯ ತೇಪೆ ಸೀರೆ, ತಮ್ಮನ, ತನ್ನ ಹರಿದ ಬನಿಯನ್, ಎಲಾಸ್ಟಿಕ್ ಹೋದ ಕಾಚ.

ಜಗನ್ನಾಥ ತಲೆ ಎತ್ತಿದ, ಬಣ್ಣ ಬಣ್ಣದ ವಿಚಿತ್ರ ಆಕಾರದ ತೂಗುದೀಪಗಳು. ತನ್ನ ಬಗ್ಗೆ ತನಗೇ ನಾಚಿಕೆ, ಅಸಹ್ಯ, ಕರುಣೆ, ತನ್ನ ಬಡತನ, ಈ ಶ್ರೀಮಂತಿಕೆಯ ಅದ್ದೂರಿ, ಕಾಲುಕೂಡ ರತ್ನಗಂಬಳಿಯ ಮೇಲೆ ಸರಿಯಾಗಿ ಊರಿರಲಿಲ್ಲ. ಗಲೀಜಾದೀತೆಂಬ ಭಯವೋ ಕೊಳೆ ಮಾಡಿದನೆಂದು ತರಾಟೆಗೆ ತೆಗೆದುಕೊಂಡಾರೆಂಬ ಪುಕ್ಕಲುತನವೋ ಆ ಕ್ಷಣ ಅವನಲ್ಲಿ ಆತ್ಮವಿಶ್ವಾಸಕ್ಕೆ ಮೂಲ ಹಣ, ಅಂತಸ್ತು ಎಂಬ ಭಾವನೆ ಮಿಂಚಿತು. ನಿಶ್ಯಬ್ದ ವಾತಾವರಣ, ಕೈಕಾಲು ಸಲೀಸಾಗಿ ಆಡಿಸದೆ ಮುದುಡಿ ಕುಳಿತಿದ್ದರಿಂದ ಮತ್ತಷ್ಟು ಅಸಹನೀಯವಾಗುತ್ತಿತ್ತು.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಬೆಳ್ಳನೆಯ ದಟ್ಟಪಂಚೆ, ವಿಭೂತಿ ಬಳಿದ ಹಣೆಯ ಹಸನ್ಮುಖಿ ಒಳಗೆ ಬಂದೊಡನೆ ತಟ್ಟನೆದ್ದು ಕೈಮುಗಿದ. ಯಾರೊ ಕಿಸಕ್ಕನೆ ನಕ್ಕಂತಾಯಿತು.

“ಕೂತ್ಕೊಳ್ಳಿ, ಸ್ವಾಮಿಯವರು ಪೂಜೆ ಮಾಡ್ತಿದಾರೆ, ಬರ್‍ತಾರೆ” ಎಂದ. ಹೊದ್ದಿದ್ದ ಟವೆಲಿನಿಂದ ಸೋಫಾದ ಮೇಲಿನ ಧೂಳು ತೊಡೆದ, ಫ್ಯಾನ್ ಹಾಕಿದ. ವಿಪರೀತ ನಾಚಿಕೆಯಲ್ಲಿ ಅವಮಾನದಲ್ಲಿ ಜಿಗುಪ್ಸೆಯಲ್ಲಿ ಜಗನ್ನಾಥ ಬೆವತು ಹೋದ.

ಹಿಡಿದು, ಹಿಡಿದು ಕಾಲ ಓಡುತ್ತಿತ್ತು…

ಚುರುಕು ಕಾಲಿನ, ಚುರುಕು ಕಣ್ಣಿನ ಸಣ್ಣ ಮೀಸೆಯ ನಗೆ ಮುಖದ ವ್ಯಕ್ತಿಯೊಬ್ಬ ಒಳಗೆ ಬರುತ್ತಿದ್ದಂತೆ ಜಗನ್ನಾಥ ಎದ್ದು ನಿಂತ.

“ದಯವಿಟ್ಟು ಕೂತ್ಕೊಳ್ಳಿ. ನಿಮ್ಮ ಪ್ರಾಧ್ಯಾಪಕರು ಫೋನ್ ಮಾಡಿದ್ದರು. ನನ್ನ ಮಗಳು ತುಂಬ ಬುದ್ಧಿವಂತೆ. ಟೆಸ್ಟಿನಲ್ಲಿ ಓದದೆ ಫೇಲಾಗಿದಾಳೆ. ನೀವು ನಿತ್ಯ ಪಾಠ ಹೇಳಬೇಕು- ಕೊನೆಯ ಪಕ್ಷ ದಿನಕ್ಕೊಂದು ಘಂಟೆ. ನಿಮ್ಮ ಫೀಸು ಎಷ್ಟು?”

ಆತ ಪಟಪನೆ ಆತ್ಮವಿಶ್ವಾಸದಿಂದ ಮಾತಾಡಿದ ಧಾಟಿಯನ್ನು ಮೆಚ್ಚಿಕೊಂಡ ಜಗನ್ನಾಥ ”ಫೀಸು ನನಗೆ ಅಷ್ಟು ಮುಖ್ಯವಲ್ಲ, ನಿಮ್ಮ ಮಗಳು ಒಟ್ಟಿನಲ್ಲಿ ಪಾಸಾಗಬೇಕು” ಎಂದ ಪೆದ್ದು ಪೆದ್ದಾಗಿ. “ಸ್ವಾಮಿ” ಪದ ಗಂಟಲಲ್ಲಿ ಸಿಕ್ಕಿಬಿಟ್ಟಿತು. ಎಂಜಲು ನುಂಗಿದ.

ಮೈಯಿಡೀ ಚಳಕು ಹೊಡೆದಂತಾಗಿ, ಕಣ್ಣು ಕೋರೈಸಿ ತಟ್ಟನೆ ಎದ್ದು ನಿಂತು ಬಿಡುವುದರಲ್ಲಿದ್ದ ಜಗನ್ನಾಥ ಸಾವರಿಸಿಕೊಂಡ. ತನ್ನ ಆ ಕ್ಷಣದ ಸಮಯಾವಧಾನದ ಬಗ್ಗೆ ನೆನೆಸಿಕೊಂಡಾಗಲೆಲ್ಲ ಜಗನ್ನಾಥನಿಗೆ ಮೆಚ್ಚಿಕೆ.

ಅವಳು ತೇಲಿ ಬಂದಳು.

“ಇವಳೆ ನನ್ನ ಮಗಳು.”

ಪುಟ್ಟ ಹುಡುಗಿಯನ್ನು ನೋಡುತ್ತೇನೆಂದುಕೊಂಡಿದ್ದ ಜಗನ್ನಾಥನಿಗೆ ವಯಸ್ಸಿಗೆ ಮೀರಿದ ಬೆಳವಣಿಗೆಯ ಈ ಷೋಡಷಿಯನ್ನು ಯಾವ ರೀತಿ, ಹೇಗೆ ಮಾತಾಡಿಸುವುದೆಂದೇ ತಿಳಿಯಲಿಲ್ಲ. ಎಂಜಲು ನುಂಗಿದನೆ? ಕಿವಿ ಬಿಸಿಬಿಸಿಯಾಯಿತೆ? ಮುಖ ರಕ್ತರಂಜಿತವಾಯಿತೆ? ಅರಕ್ತವಾಯಿತೆ? ಅವಳಪ್ಪ ಇವನ ಮುಖವನ್ನೇ ನೋಡುತ್ತಿದ್ದುದು ಜಗನ್ನಾಥ ಸ್ವಮನಸ್ಕನಾಗಿ ಮತ್ತಷ್ಟು ಕುಸಿಯುವಂತೆ ಮಾಡಿತು. ನಾನು, ನಾನು ಪುಟ್ಟ ಹುಡುಗಿಗೆ ಪಾಠ ಹೇಳುತ್ತೇನೆಂದುಕೊಂಡಿದ್ದೆ… ಗಟ್ಟಿಯಾಗಿ ಹಾಗೆಂದನೆ? ಇಲ್ಲ. ಅವಳಪ್ಪ ಹೇಳುತ್ತಿದ್ದ, ಇವಳು ತುಂಟಿ, ಕಟ್ಟುನಿಟ್ಟಿನ ಎಚ್ಚರಿಕೆ, ನನಗೆ ಹೇಳಿ, ಇತ್ಯಾದಿ ಕಿವಿಯ ಮೇಲೆ ಬಿತ್ತು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ಸಾವರಿಸಿಕೊಂಡ ಜಗನ್ನಾಥ,

”ನಿನ್ನ ಹೆಸರೇನು?” ಎಂದ.

“ಮಮತಾದೇವಿ” ಎಂದಳು ನೀಲಿ ಸೀರೆಯ ಸೆರಗೆಳೆದುಕೊಳ್ಳುತ್ತ, ಕತ್ತುಕೊಂಕಿಸಿ. ಕೋಗಿಲೆಯ ಕುಹೂ, ಕಣ್ಣಿನ ಚಂಚಲತೆಯ ಮುಂದೆ, ಮೃದು, ಮೃದೂ ರೂಪದ ಹೊಳಪಿನ ಮುಂದೆ ಕರಗಿಹೋಗುತ್ತಿದ್ದೇನೆ, ಕರಗಿ ಎನಿಸುತ್ತಿದ್ದಂತೆ ಗಟ್ಟಿ, ಗಟ್ಟಿ ಮತ್ತೊಂದು ಪ್ರಶ್ನೆ.

“ಕ್ಲಾಸು ಟೆಸ್ಟಿನಲ್ಲಿ ಮಾರ್ಕ್ಸ್ ಹೇಗೆ ಬಂದಿದೆ?”

ತಲೆ ತಗ್ಗಿಸಿದಳು. ಅವಳು ಹೇಳಲು ತಡವರಿಸುತ್ತಿದ್ದಂತೆ ಜಗನ್ನಾಥನಲ್ಲಿನ ಮಾಸ್ತರಿಕೆ, ಗಡಸುತನ ಜಾಗೃತವಾಯಿತು. ಗಟ್ಟಿಯಾಯಿತು.

“ಇನ್ನು ಶಿಷ್ಯಳನ್ನು ನಿಮಗೆ ಬಿಟ್ಟಿದ್ದೇನೆ. ಒಟ್ಟಿನಲ್ಲಿ ಅವಳು ಚೆನ್ನಾಗಿ ಕಲಿತು ಪಾಸಾಗಬೇಕು” ಎಂದು ಅವಳಪ್ಪ ಎದ್ದರು.

”ಆಗಲಿ ಸ್ವಾಮಿ” ಎಂದವನು ಅವರು ಹೋದ ಮೇಲೆ ಕೂತ. ಕರ್ಚಿಫಿನಿಂದ ಮುಖ ಒರೆಸಿಕೊಂಡ.

“ನಿನಗೆ ಯಾವ ಸಬ್ಜೆಕ್ಟ್ ಕಷ್ಟ?” ಎಂದ.

ಕಿಲಕಿಲ ನಕ್ಕಳು.

“ನನ್ನನ್ನು ನೋಡಿದೊಡನೆ ಏಕಷ್ಟು ಕೆಂಚಗಾದಿರಿ?” ಎಂದಳು.

ರಕ್ತ ಮುಖದಲ್ಲಿ ನುಗ್ಗುತ್ತಿದ್ದುದರ ಅನುಭವವಾಗುತ್ತಿದ್ದಂತೆ ತಾನು ಸೋಲುತ್ತಿದ್ದೇನೆ ಎನಿಸಿತು. ತನ್ನೆಲ್ಲ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ಇದನ್ನು ತಡೆಯಬೇಕು. ಸಿಟ್ಟಿಗೆದ್ದವನಂತೆ ಹುಬ್ಬುಗಂಟಿಕ್ಕಿ, “ನಾನು ಕೇಳಿದ್ದಕ್ಕೆ ಉತ್ತರಕೊಡು” ಎಂದ ಒರಟಾಗಿ.

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

ಮೆತ್ತಗಾದಳು ಮಮತಾದೇವಿ. ಗುರುವಾದ ಜಗನ್ನಾಥ. ಪಾಠ ಹೇಳಿದ. ಸಾಮಾಜಿಕ ಕಳಕಳಿಯಿಂದ ಮಾತಾಡಿದ. ತನ್ನೆಲ್ಲ ಮಾತಿನ ಮೋಡಿಯನ್ನೂ ಉಪಯೋಗಿಸಿ ಅವಳಿಗೆ ಕಲಿಸಲು, ಅವಳಲ್ಲಿ ಪಾಪಪ್ರಜ್ಞೆ ಉಂಟುಮಾಡಲು ಪ್ರಯತ್ನಿಸಿದ. ಅವಳು ಕಲಿತದ್ದೆಷ್ಟೋ.

2

ಆತ್ಮವಿಶ್ವಾಸದಿಂದ, ಗತ್ತಿನಿಂದ ತಲೆಯೆತ್ತಿ ಬಾಗಿಲಲ್ಲಿ ಕಾಲಿಡುತ್ತಿದ್ದಂತೆ ಅವಳು ಎದ್ದು ನಿಂತಳು. ಮುಖದಲ್ಲಿ ನಗೆಯರಳಿಸಿದಳು. ಸಿಗರೇಟಿನ ದಟ್ಟ ಹೊಗೆಯಲ್ಲಿ ಬಾಬ್ ಮಾಡಿದ ಮಿರುಮಿರುಗುವ ಕಪ್ಪು ಕೂದಲು ರಾಶಿ. ಜೀನ್ಸ್ ಮೇಲೆ ತೊಟ್ಟ ಷರಟು. ತೆಳ್ಳನೆಯ ಬಿಳಿಯ ಷರಟಿನಲ್ಲಿ ಅವಳು ಮುಂದೆ ಬಂದಾಗ ಮೈಕಾಂತಿ ಬಿರಿಯಿತು. ಅದೇ ತೆಳುನೀಳ ದೇಹದ ಮಾಟಗಾರಿಕೆ, ಅದೇ ಮಿಂಚುವ ಕಣ್ಣು, ಅದೇ ನಡಿಗೆ; ಅನುಭವದಿಂದ, ವಯಸ್ಸಿನಿಂದ ಮತ್ತಷ್ಟು ಮತ್ತಷ್ಟು ಉಕ್ಕುತ್ತಿರುವ, ಬಿರಿಯುತ್ತಿರುವ ರೂಪ. ಜಗನ್ನಾಥ ಮುಂದೆ ನಡೆದ. ಕೈ ಚಾಚಿದಳು. ಕುಲುಕಿದ. ಮೃದು, ಮೃದುವಾದ.

“ಕುಳಿತುಕೊಳ್ಳಿ” ಎಂದಳು.

ಸುತ್ತಲಿನ ಬೆತ್ತದ ಕುರ್ಚಿಗಳಲ್ಲಿ ಕುಳಿತಿದ್ದವರಿಗೆ ಹೆಸರು ಮಾತ್ರ ಹೇಳಿ ಪರಿಚಯ ಮಾಡಿಕೊಟ್ಟಳು. ಪರಿಚಯ ಮಾಡಿಕೊಡುತ್ತಿದ್ದಂತೆ ಸ್ವಲ್ಪ ಬೆರಗಾಗಿದ್ದ ಜಗನ್ನಾಥ ಅವರತ್ತ ದೃಷ್ಟಿಬೀರಿ ಯಾಂತ್ರಿಕವಾಗಿ ಆದರೆ ಮುಖದಲ್ಲಿ ನಗೆ ತುಂಬಿ ಕೈಕುಲುಕಿದ. ಗಡ್ಡಬಿಟ್ಟ ಉದ್ದ ಕೂದಲಿನವ, ಬತ್ತಿದ ಕೆನ್ನೆಯ ಹೊಳೆಯುವ ಕಣ್ಣುಗಳ ಪೈಜಾಮ ಜುಬ್ಬದವ, ಉದ್ದಕೂದಲಿನ ನುಣ್ಣನೆಯ ಗುಳಿಕೆನ್ನೆಯ ಒಂಟೆ ಕತ್ತಿನವ, ಜಗನ್ನಾಥನನ್ನು ಕರೆದುಕೊಂಡು ಬಂದ ಮಾಸಲು ಜುಬ್ಬ ಪೈಜಾಮದ ಕುರುಚಲು ಗಡ್ಡದ ಪಿಳಿ ಪಿಳಿ ಕಣ್ಣಿನವ. ಅವರು ಕೂತಭಂಗಿ, ಮೇಲೇರುತ್ತಿದ್ದ ಸಿಗರೇಟಿನ ಹೊಗೆ: ಕೊಳಕರು, ಸೋಮಾರಿಗಳು ಎನಿಸಿತು ಜಗನ್ನಾಥನಿಗೆ, ಮುಖದ ಮಾಂಸಖಂಡಗಳು ಅಸಹ್ಯಕ್ಕೆ ಬಿರಿಯದಿದ್ದರೂ.

ಮಮತಾ ಹೇಳುತ್ತಿದ್ದಳು, “ಇವರೆಲ್ಲ ನನ್ನ ಕಾಮ್ರೆಡುಗಳು, ಸಂಜೆ ಸಭೆ ಸೇರಿ ಮಾತಾಡುತ್ತೇವೆ, ಚರ್ಚಿಸುತ್ತೇವೆ.”

ಜಗನ್ನಾಥ ಸುಮ್ಮನೆ ನಕ್ಕ. ಮಾತು ಸಾಧ್ಯವಾಗದೆ ಸುತ್ತ ನೋಡಿದ. ವಿಶಾಲವಾದ ಕೊಠಡಿ. ಮಾರ್ಕ್ಸ್, ಎಂಗೆಲ್ಸ್, ಲೆನಿನ್ನರ ಕಟ್ಟು ಹಾಕಿಸಿದ ಭಾವಚಿತ್ರಗಳು. ಅವುಗಳಿಗೆ ಹಾರ ಹಾಕಿದಂತೆ ಹೊಗೆಯಿಂದ ಕಪ್ಪಾದ ಜೇಡರ ಬಲೆಗಳು. ಅಲ್ಲಲ್ಲಿ ಪೇರಿಸಿಟ್ಟ ಪುಸ್ತಕಗಳು. ಕೊಳಕು ನೆಲ, ಸಾರಿಸಿಯೇ ಇಲ್ಲ. ಸಿಗರೇಟಿನ ತುಂಡುಗಳು, ಅಚಾನಕವಾಗಿ ಜಗನ್ನಾಥನಿಗೆ ಹದಿನೈದು ವರ್ಷಗಳ ಹಿಂದೆ ಅವಳನ್ನು ಮೊದಲ ಸಾರಿ ನೋಡಿದ್ದ ಕೊಠಡಿಯ ನೆನಪಾಯಿತು. ಎಲ್ಲ ಗಪ್ಪನೆ ಕುಳಿತಿದ್ದಾರೆ. ಮೌನ ಕಡಿಯಲು ತಾನೇ ಮಾತಾಡಬೇಕು.

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

“ನಾನೂ ನಿಮ್ಮ ಚರ್ಚೆಯನ್ನು ಕೇಳಬಹುದೆ?” ಎಂದ ಅಹಂ ತುಂಬಿದ ಅರ್ಧ ಲೇವಡಿಯ ಧ್ವನಿಯಲ್ಲಿ, ನಕ್ಕ.

ಮಮತಾ ಗಂಭೀರವಾಗಿ ”ಅದಕ್ಕೇನಂತೆ-” ಎಂದಳು. ಉಳಿದವರೆಡೆ ತಿರುಗಿ, “ಇವರೇ ನನಗೆ ಮಾರ್ಕ್ಸ್ ವಾದದ ಮೊದಲ ಪಾಠ ಹೇಳಿದವರು” ಎಂದಳು. ಅವಳ ಧ್ವನಿಯಲ್ಲಿ ಲೇವಡಿಯಿತ್ತೆ? ಇಲ್ಲ. ಜಗನ್ನಾಥ ಆದರೂ ಒಂದರೆನಿಮಿಷ ಕಸಿವಿಸಿ ಪಟ್ಟ.

ಗಡ್ಡ ಬಿಟ್ಟ ಉದ್ದ ಕೂದಲಿನವ, ಆಷ್ ಟ್ರೇಯಿಂದ ಉಕ್ಕಿ ಚೆಲ್ಲುತ್ತಿದ್ದ ತುಂಡುಗಳ ಮೇಲೆ ಸಿಗರೇಟಿನ ಬೂದಿ ಹಾರಿಸಿ ಹೇಳಿದ.

“ಕಾಮ್ರೆಡ್ಸ್, ನಾನು ಹೇಳುತ್ತಿದ್ದಂತೆ ಕ್ಯಪಿಟಲಿಸಮ್ಮಿನಿಂದ ಚರಿತ್ರೆಯ ಮುನ್ನಡೆ ಅನಿವಾರ್ಯ. ಯಾವೊಂದು ಶಕ್ತಿಯೂ ಅದನ್ನು ತಡೆಯಲಾರದು ಹಿಂದೆಳೆಯಲಾರದು, ಕಾಮ್ರೆಡ್ಸ್.”

“ಹಾಗಾದರೆ ಕಾಮ್ರೆಡ್, ನಮ್ಮ ಪ್ರಯತ್ನ ಅನಿವಾರ್ಯವಲ್ಲ ಅಂತ ಆಯಿತು. ಯಾಕೆಂದರೆ ನಮ್ಮ ಪ್ರಯತ್ನವಿಲ್ಲದಿದ್ದರೂ ಬದಲಾವಣೆಯಾಗಲೇ ಬೇಕಲ್ಲ” ಎಂದ ಹೊಳೆಯುವ ಕಣ್ಣುಗಳ ಪೈಜಾಮ ಜುಬ್ಬದವ.

”ಕಾಮ್ರೆಡ್, ನಮ್ಮ ಪ್ರಯತ್ನವಿಲ್ಲದಿದ್ದರೂ, ಬದಲಾವಣೆ ಆಗೇ ಆಗುತ್ತದೆಂದು ನಾವು ಸುಮ್ಮನೆ ಕೂರುವುದು ಮೂರ್ಖತನವಾಗುತ್ತದೆ. ಚರಿತ್ರೆ ನಮ್ಮನ್ನು ಹೀನಾಯಿಸುತ್ತದೆ. ನಮ್ಮ ಪಾತ್ರ ವೇಗವರ್ಧಕದಂತೆ.”

“ಇನ್ನೊಂದು ಪ್ರಶ್ನೆ ಕಾಮ್ರೆಡ್, ಕಮ್ಯೂನಿಸಂ ಅನಿವಾರ್ಯ ಎಂದಿರಿ. ಹಾಗಾದರೆ ಇದಕ್ಕೂ ವಿಧಿವಾದಕ್ಕೂ ಏನು ವ್ಯತ್ಯಾಸ? ನಮ್ಮ ವಿಧಿ ಅಂತೀವಿ, ಕರ್ಮ ಅಂತೀವಿ, ಬ್ರಹ್ಮ ಹಣೆಯಲ್ಲಿ ಬರೆದಂತೆ ಆಗುತ್ತೆ ಅಂತೀವಿ, ಇದನ್ನ ಯಾವ ಶಕ್ತಿನೂ ತಡೆಯೋಕೆ ಆಗೊಲ್ಲ ಅಂತೀವಿ.”

ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ

“ಕಾಮ್ರೆಡ್, ನಮ್ಮ ಗುರುಗಳು, ನಾಯಕರು ನಿಜವಾದ ಮಾರ್ಕ್ಸ್‌ವಾದಕ್ಕೆ ಭಾರತದಲ್ಲಿ ಬುನಾದಿ ಹಾಕಿದ ಕಾಮ್ರೆಡರೂ ಆದ ಕಾಮ್ರೆಡ್…”

ಕಾಮ್ರೆಡ್, ಕಾಮ್ರೆಡ್. ಢೋಂಗಿ ಮಾತಿನ ಟೊಳ್ಳು ಜನ. ಎಲ್ಲಿಂದ ಹಿಡಿದು ತಂದಳು ಇವರನ್ನ? ಇವಳಿಗೇನಾಗಿದೆ? ಮಾರ್ಕ್ಸ್‌ವಾದದ ಹುಚ್ಚು ಹಿಡಿದಿದೆಯೆ? ಆಸ್ತಿಯೆಲ್ಲ ಹಾಳು ಮಾಡುತ್ತಿದ್ದಾಳೆಯೆ? ಇವಳ ಗಂಡ ಎಲ್ಲಿ, ಬದುಕಿದ್ದಾನೆಯೆ? ಸತ್ತನೆ? ಬಿಟ್ಟಿದ್ದಾಳೆಯೆ? ಮಕ್ಕಳಿಲ್ಲವೆ? ಕಾಲ ಕಳೆಯಲು ಥ್ರಿಲ್‌ಗಾಗಿ ಇದೊಂದು ಸೋಗೆ? ಎಂದೆಲ್ಲ ಜಗನ್ನಾಥನ ತಲೆ ಓಡುತ್ತಿತ್ತು. ಜಗನ್ನಾಥ ಅನ್ಯಮನಸ್ಕನಾಗಿದ್ದುದನ್ನು ಮಮತಾ ಗಮನಿಸಿದಳೆಂದು ಕಾಣುತ್ತದೆ.

“ಕಾಮ್ರೆಡ್ಸ್, ನಾನು ಇವರೊಂದಿಗೆ ಸ್ವಲ್ಪ ಮಾತಾಡಬೇಕಲ್ಲ” ಎಂದಳು.

ಜಗನ್ನಾಥನಿಗೆ ಹಾಯೆನಿಸಿತು. ಮಾತಾಡುತ್ತಿದ್ದವರು ಮುದುಡಿಕೊಂಡರು, ಅನಿಸಿತು. ಅವರು ಒಬ್ಬೊಬ್ಬರಾಗಿ ಎದ್ದರು. ಹೊರಟರು. ಜಗನ್ನಾಥ ನಿರ್ವಿಕಾರನಾಗಿ ಕೂತಿದ್ದ. ಹೋಗುವವರತ್ತ ನೋಡಲೂ ಆಗದೆ ನೋಡದಿರಲೂ ಆಗದೆ ಸುಮ್ಮನಿದ್ದ. ಅವರು ತನಗೆ ಹೇಳಿ ಹೋಗುತ್ತಾರೆಂದಿದ್ದ. ಹೇಳದೇ ಹೋದುದು ಅವನ ಆತ್ಮ ಪ್ರತಿಷ್ಠೆಗೆ ಕುಂದಾಯಿತು. ಆದರೆ ಅವರು ಮಮತಾಗು ಹೇಳಲಿಲ್ಲ.

ಎಲ್ಲಿ ಹೋದಾರು, ಇವಳಿಗೆ ಅವರ ಮೇಲಿರುವ ಹಿಡಿತ ಇವಳ ಹಣದಿಂದಾಗಿ ಎಂದುಕೊಂಡ. ಅವಳತ್ತ ನೋಡಿದ. ಮುಗುಳ್ನಕ್ಕಳು. ಎಂಥ ನಗು! ಆಗುತ್ತಿದ್ದ ಕಿರಿಕಿರಿ ಮರೆತು ಜಗನ್ನಾಥ ಅರಳಿದ.

”ಈಗ ಹೇಳಿ” ಎನ್ನುತ್ತ ಒಂದರ ಮೇಲೊಂದು ಕಾಲು ಹಾಕಿ, ನಸು ಮುಂದೆ ಬಾಗಿ, ”ನಿಮ್ಮನ್ನು ಏನಂತ ಕರೆಯಲಿ- ಸರ್ ಎನ್ನಲೆ, ಕಾಮ್ರೆಡ್ ಎನ್ನಲೆ?” ಎಂದಳು.

ಹೀನಾಯಿಸುತ್ತಿದ್ದಾಳೆಯೆ? ಇಲ್ಲ.

ಜಗನ್ನಾಥ ನಕ್ಕು ಹೇಳಿದ ”ಎಂಥದೂ ಬೇಡ ಹೆಸರಿಡಿದು ಕರಿ.”

”ಜಗನ್ನಾಥ್, ನಿಮ್ಮನ್ನು ನೋಡಿ ಎಷ್ಟು ದಿನ ಆಗೋಯ್ತು. ನೀವು ಒಂದು ವರ್ಷದಿಂದ ಇಲ್ಲೆ ಇದೀರಿ ಅಂತ ಗೊತ್ತಾಯ್ತು. ನನ್ನನ್ನು ಗುರ್‍ತು ಹಿಡಿತಿರೊ ಇಲ್ಲವೊ ಅಂತ ಸುಮ್ಮನಾಗಿಬಿಟ್ಟೆ.”

ಇದು ಬುದ್ಧಿವಂತಿಕೆಯ, ಆತ್ಮವಿಶ್ವಾಸ ಕುಗ್ಗಿದವರ ಅಥವಾ ತೀರ ಹಿಗ್ಗಿದವರ ಮಾತು, ಎಂದು ಜಗನ್ನಾಥನಿಗೆ ಗೊತ್ತು. ಮಾತು ಬದಲಿಸಿ ಹೇಳಿದ.

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

“ನೀನು ಒಂದು ಚೂರೂ ಬದಲಾಯಿಸಿಲ್ಲ. ಆದರೆ ಮುಂಚಿಗಿಂತ ಹೆಚ್ಚು ತುಂಬಿಕೊಂಡಿದ್ದಿ.”

“ಹೌದಾ? ನೀವೂ ಅಷ್ಟೆ” ಎನ್ನುತ್ತ ಮುಖದ ಮೇಲಿನ ಕೂದಲು ಹಿಂದೆ ಸರಿಸಿದಳು.

”ನಿಮ್ಮನ್ನು ಈ ದಿನ ನೋಡಿದಾಗ- ಅದೂ ಅಕಸ್ಮಾತ್ ಹೊರಗೆ ಬಂದಿದ್ದೆ. ನಿಮ್ಮ ಡ್ರೆಸ್ಸು, ಗತ್ತು ನೋಡಿ ಭಯ ಆಯ್ತು. ಎಷ್ಟಾದರೂ ಸರ್ಕಾರಿ ಆಫೀಸರಲ್ಲವೆ? ಆದರೂ ತಟ್ಟನೆ ಕರೆದುಬಿಟ್ಟೆ. ನಿಮಗೆ ಕೇಳಿಸಲಿಲ್ಲ. ಕಾಮ್ರೆಡ್ ಮೂರ್ತಿಯನ್ನು ಕಳುಹಿಸಿದೆ. ಮೂರ್ತಿ ತುಂಬ ಬುದ್ದಿವಂತ. ಎಂ.ಇ. ರ್‍ಯಾಂಕ್ ತೆಗೆದುಕೊಂಡ. ಕೆಲಸಕ್ಕೆ ಆರ್ಡರ್ ಬಂದರೂ ಸರ್ಕಾರಿ ಕೆಲಸ ಬೇಡ ಅಂತ ಬಿಟ್ಟ. ಅವರಪ್ಪ ರೇಗಿ ಮನೆಬಿಟ್ಟು ಓಡಿಸಿದ. ಮೂರ್ತಿ ಈಗ ಇಲ್ಲೆ ಇದಾನೆ…”

ತನ್ನನ್ನು ಹೀನಾಯಿಸುತ್ತಿದ್ದಾಳೆ ಎನಿಸಿತು ಜಗನ್ನಾಥನಿಗೆ, ಅವಳನ್ನೆಳೆದು ಇಲ್ಲಿ ಈ ಲೋಕದಲ್ಲಿ ಕುಕ್ಕಿ, ಅವಳ ಸ್ವಾಭಿಮಾನವನ್ನು ಮೊಟಕುಗೊಳಿಸಿ ತಾನೂ ಹೀನಾಯಿಸಬೇಕು.

”ನಿನ್ನ ಗಂಡ ಹೇಗಿದ್ದಾರೆ? ಇದೆಲ್ಲ ತಡ್ಕೊತಾರ” ಎಂದ.

“ಅದೊಂದು ಕತೆ. ನಮ್ಮಪ್ಪ ಇರೋವರ್‍ಗು ಅವನ್ನ ತಡ್ಕೊಂಡಿದ್ದೆ. ಅಪ್ಪ ಸತ್ತ ಮೇಲೆ ಅವನ್ನ ಬಿಟ್ಬಿಟ್ಟೆ. ನನಗೂ ಅವಂಗೂ ಸರಿ ಬರಲಿಲ್ಲ. ಅವನ ಧಾರ್ಷ್ಟ್ಯ, ಅಹಂಕಾರ- ಥೂ, ಈಗ ಒಂಟಿಯಾಗಿದೀನಿ. ಅವನಿಗೆ ಎದುರು ಬಿದ್ದ ದಿನ ಶೋಷಣೆ ಸತ್ತು ನಾನು ಸ್ವತಂತ್ರಳಾದೆ- ಈಗ ನನಗಿಷ್ಟ ಬಂದಂತೆ, ಇಷ್ಟ ಬಂದದ್ದನ್ನು ಮಾಡ್ಕೋತ.”

ಜಗನ್ನಾಥ ಅವಳತ್ತ ದಿಟ್ಟಿಸಿದ. ಎಂತಹ ಹಟಮಾರಿ ಹೆಣ್ಣೆ ನೀನು? ಒಂಟಿಯಾಗಿ ಹೇಗೆ ಬದುಕ ಬಲ್ಲೆಯೆ? ಏನಿದೆಲ್ಲದರ ಅರ್ಥವೆ? ಎನ್ನುವ ಇರಿತ ಅವನ ದೃಷ್ಟಿಯಲ್ಲಿತ್ತು. ವಿಚಲಿತಳಾಗದೆ ಮಮತಾ ಹೇಳಿದಳು.

“ನಾನು ಒಂಟಿ ಅಂತ ಅನ್ನಿಸೆ ಇಲ್ಲ, ತುಂಬ ಸ್ನೇಹಿತರಿದ್ದಾರೆ. ಬೇಕು ಅನ್ನಿಸಿದಾಗ ನನ್ನ ಕಾಮ್ರೆಡ್ಸ್ ಜತೆ ಮಲಗ್ತೇನೆ. ನಾನು ಕಳೆದುಕೊಂಡದ್ದೇನಿಲ್ಲ ನೈತಿಕ ಬಂಧನ ಬಿಟ್ಟು.”

ಅರ್ಧ ಹಾಸ್ಯ, ಅರ್ಧ ಸೀರಿಯಸ್ಸಾಗಿ ಹೇಳಿ ನಕ್ಕಳು.

ಜಗನ್ನಾಥನಿಗೆ ಶಾಕ್ ಆಯಿತು. ಅಸಹ್ಯ ಭಾವನೆಯೊಂದು ಮನಸ್ಸಿನಲ್ಲಿ ತೇಲಿತು. ಶಾಕ್ ಮಾಡಲೆಂದೇ ಹೇಳಿರಬೇಕು. ಇಲ್ಲ ತುಂಬ ಅಗ್ಗದ ಹೆಣ್ಣಾಗಿದ್ದಾಳೆ. ಜಗನ್ನಾಥ ತನ್ನ ಯಾವ ಮಾನಸಿಕ ಪ್ರತಿಕ್ರಿಯೆಯನ್ನೂ ತೋರಿಸಿಕೊಳ್ಳದೆ, ಆದಷ್ಟು ಗಂಭೀರವಾಗಿ “ಅದು ಸರಿ” ಎಂದ. ಅವನ ಮಾತು ಅವನಿಗೇ ಸುಳ್ಳೆನಿಸಿತು.

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

“ನಿಮ್ಮ ಹೆಂಡತಿ, ಮಕ್ಕಳು ಚೆನ್ನಾಗಿದ್ದಾರ?” ಎಂದಳು.

“ಚೆನ್ನಾಗಿದ್ದಾರೆ” ಎಂದವನು ಬೇಕೆಂದೇ ಅವಳಿಗೆ ಘಾಸಿ ಮಾಡಲು “ನಾನು ಖುಷಿಯಾಗಿದೀನಿ” ಎಂದ.

“ಮಕ್ಕಳು ಮುದ್ದಾಗೆ ಇರಬೇಕು- ನಿಮ್ಮಂತೆ.”

ಜಗನ್ನಾಥ ನಕ್ಕ. ಅವಳ ಮಾತಿನಿಂದ ಅವನಿಗೆ ಖುಷಿಯಾಯಿತು. ಅವಳ ಬಗ್ಗೆ ಮತ್ತಷ್ಟು ವಿಚಾರಿಸಬೇಕು. ಅವಳ ಆಸ್ತಿಯನ್ನೆಲ್ಲ ಯಾರು ನೋಡಿಕೊಳ್ಳುತ್ತಿದ್ದಾರೆ, ಅವಳಿಗೆ ಮಕ್ಕಳಾಗಲಿಲ್ಲವೆ, ಅವಳ ಗಂಡ ಈಗೆಲ್ಲಿದಾನೆ, ಏನೆಲ್ಲ ಕೇಳಬೇಕೆನಿಸಿತು. ಆದರೆ ಜಗನ್ನಾಥ ಕೇಳಲಿಲ್ಲ. ಮಾತಿನಲ್ಲಿ ಬೇಕೆಂದೇ ಅವಳು ಗಾಂಭೀರ್ಯದ ಎಲ್ಲೆ ಮೀರಬಹುದೆನಿಸಿದ್ದರಿಂದ, ಹಾಗೆ ಮೀರಿ ತನಗೆ ಶಾಕ್ ಕೊಟ್ಟು, ವ್ಯಂಗ್ಯದಲ್ಲಿ ತಾನು ಕಟ್ಟಿಕೊಂಡಿರುವ ವ್ಯಕ್ತಿತ್ವದ ಕೋಟೆಯನ್ನು ಸೀಳಬಹುದೆನಿಸಿದ್ದರಿಂದ.

”ಮನೆಗೆ ಬೇಗ ಹೋಗಬೇಕಾ? ಹೆಂಡತಿ ಮಕ್ಕಳು ಕಾಯ್ತಾ ಇರ್‍ತಾರ?” ಎಂದಳು.

ಹೌದೆನಿಸುತ್ತಿದ್ದರೂ ಅವಳು ಕೇಳಿದ ರೀತಿಯಿಂದಾಗಿ ”ಇಲ್ಲ” ಎಂದ. ಇವಳೊಂದಿಗೆ ಹೆಚ್ಚು ಕಾಲವಿದ್ದಷ್ಟೂ ನಾನು ದುರ್ಬಲನಾಗುತ್ತ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಾ, ಆದರೂ ಅವಳೊಂದಿಗೆ ಇನ್ನಷ್ಟು ಮತ್ತಷ್ಟು ಕಾಲ ಇರಬೇಕೆನಿಸುವ ವಿಚಿತ್ರ ಆಕರ್ಷಣೆ.

“ಹಾಗಾದರೆ ಸ್ವಲ್ಪ ಹೊತ್ತು ಹೊರಗೆ ಸುತ್ತಿಬರೋಣ” ಎಂದಳು.

“ಸರಿ.”

“ನಡೀರಿ” ಎಂದವಳೆ ಎದ್ದಳು. ಚಪ್ಪಲಿ ಮೆಟ್ಟಿದಳು. ಜಗನ್ನಾಥನಿಗೆ ಆಶ್ಚರ್ಯವಾಯಿತು. ಕಾಯಿಸಿ, ಕಿರಿಕಿರಿ ಮಾಡುವ ಹೆಂಡತಿ ನೆನಪು ಅಪ್ರಯತ್ನವಾಗಿ ಬಂತು. ಪ್ರಶ್ನಾರ್ಥಕವಾಗಿ ಅವಳತ್ತ ನೋಡಿದ.

”ಹೊರಗೆ ಹೋಗೋ ಮುಂಚೆ ಸಿಂಗರಿಸಿಕೊಳ್ಳೋದು ಬಿಟ್ಟಿದೀನಿ, ಕಾರಣ ಗೊತ್ತಲ್ಲ” ಎಂದಳು.

3

ಜಗನ್ನಾಥ ಪಾರ್ಕಿನಲ್ಲಿ ಕಾರು ನಿಲ್ಲಿಸಿದ.

“ಹುಲ್ಲಿನ ಮೇಲೆ ಕೂರೋಣ” ಎಂದಳು. ಜಗನ್ನಾಥನಿಗೆ ತಳಮಳವಾಯಿತು. ತನ್ನ ಬೆಳೆಸಿಕೊಂಡ, ಘನೀಭವಿಸಿದೆ ಎಂದು ತಿಳಿದ ವ್ಯಕ್ತಿತ್ವ ಬಿರುಕು ಬಿಡುತ್ತಿದೆ ಎನಿಸಿತು. ಆಫೀಸರನಾದ ಮೇಲೆ ಹೊರಗೆಲ್ಲೂ ಕುಳಿತದ್ದೇ ಇಲ್ಲ; ಸಣ್ಣ ಪುಟ್ಟ ಹೋಟೆಲಿಗಂತೂ ಹೋದವನೆ ಅಲ್ಲ. ಅವಳ ಮನಸ್ಸಿಗೆ ನೋವುಂಟು ಮಾಡಬಾರದೆನ್ನುವ, ತಾನೂ ಒಬ್ಬ ಉದಾರ ಮನಸ್ಕ ಎಂದು ತೋರಿಸಿಕೊಳ್ಳುವ ಹಂಬಲದಿಂದ ಇಲ್ಲವೆನ್ನಲಾರದೆ ಕಾರಿನ ಬಾಗಿಲು ತೆರೆದ.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಕಾರಿನಿಂದ ಸ್ವಲ್ಪ ದೂರದಲ್ಲಿ ಹುಲ್ಲಿನ ಮೇಲೆ ಜಗನ್ನಾಥ ತಿಣಕಾಡುತ್ತ ಕೂತ. ಹುಲ್ಲಿನ ಕಡ್ಡಿಯೊಂದನ್ನು ಹೀರಿ, ಬಾಯಲ್ಲಿ ಚೀಪುತ್ತ ಮಮತಾ ಹೇಳಿದಳು.

”ಒಂದ್ಸಾರಿ ನೀವು ಹೇಳಿದ್ರಿ- ನನಗೆ ಎಲ್ಲೆಂದರಲ್ಲಿ ಕೂರೊ ಸ್ವಾತಂತ್ರ ಇದೆ. ಕಾಲುದಾರಿ ಕಲ್ಲಿನ ಮೇಲೆ ಕೂತು ಮುಜುಗರ ಇಲ್ಲದೆ ಹರಟಬಲ್ಲೆ. ನಿಂಗೆ ಆ ಸ್ವಾತಂತ್ರ್ಯ ಇಲ್ಲ- ನಿನ್ನ ಹಣದಿಂದಾಗಿ, ನಿನ್ನ ಬದುಕಿನ ವಿಧಾನದ ಕಟ್ಟುಪಾಡಿಂದಾಗಿ, ಅಂತ. ಈಗ ನೋಡಿ- ನಾನೂ ನಿಮ್ಮೊಂದಿಗೆ ಹೇಗೆ ಕೂತಿದ್ದೇನೆ, ಕಾಲು ಚಾಚಿ, ಮುಕ್ತಳಾಗಿ.”

ಜಗನ್ನಾಥ ಮುಕ್ತನಾಗಿ ಕೂತಿರಲಿಲ್ಲ. ಮಮತಳಿಗೆ ತಿಳಿಯದ ಚಡಪಡಿಕೆಯಲ್ಲಿದ್ದ. ಅವಳ ಮಾತುಗಳು ಅವಳ ಅರಿವಿಗೇ ಬಾರದಂತೆ ತನ್ನನ್ನು ಚುಚ್ಚುತ್ತಿದೆ ಎನಿಸಿತು. ತಾನು ಬೆಳೆಸಿಕೊಂಡಿದ್ದ ಕೋಟೆಯಲ್ಲಿ, ಅವಳ ಆಕರ್ಷಣೆಯ ಬಲಹೀನತೆಯಿಂದಾಗಿ ಬಿರುಕು ಬಿಡುತ್ತಿರುವುದನ್ನು ಹೇಳಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದ ಸಂಕಟದಲ್ಲಿ ತಳಮಳದಲ್ಲಿ ಒದ್ದಾಡುತ್ತಿದ್ದ. ಏಕೆ ಹೀಗಿವಳು ಹಿಂದಿನ ನೆನಪುಗಳನ್ನು ಕೆದಕುತ್ತಾಳೆ; ಕೆದಕಿ, ಕೆದಕಿ ನನ್ನನ್ನು ದುರ್ಬಲನನ್ನಾಗಿ ತೋರಿಸುತ್ತಾ ನನ್ನ ವ್ಯಕ್ತಿತ್ವದ ಮೇಲೆ ಆಕ್ರಮಣ ಮಾಡಲು ಹವಣಿಸುತ್ತಿದ್ದಾಳೆ? ನಾನು ಆಗ ಹಾಗೆ ಹೇಳಲು ಕಾರಣವಿತ್ತೆಂದು, ನನ್ನ ಸೂಕ್ಷ್ಮವನ್ನು ಯಾವ ಪೆಟ್ಟಿಗೂ ಒಡ್ಡದೆ ಕಾಪಾಡಿಕೊಳ್ಳಲು ಆ ರೀತಿಯ ಮಾತಿನ ಅವಶ್ಯಕತೆಯಿತ್ತೆಂದು ಇವಳಿಗೇಕೆ ತಿಳಿಯುತ್ತಿಲ್ಲ? ಅಥವಾ ತಿಳಿದೂ ಬೇಕೆಂದೇ ನನ್ನನ್ನು ಹೀನಾಯಿಸಲು, ಚುಚ್ಚಲು ಪ್ರಯತ್ನಿಸುತ್ತಿದ್ದಾಳೆಯೆ? ಇಲ್ಲ, ನನ್ನ ಮೇಲಿನ ವಿಶ್ವಾಸದಿಂದ ನನಗೆ ಆಭಾರಿಯಾಗಿರುವುದರಿಂದ ಹೀಗೆ ಪೆದ್ದು ಪೆದ್ದಾಗಿ ಆಡುತ್ತಿದ್ದಾಳೆಯೆ? ಹಣವಿದೆ, ರೂಪವಿದೆ, ರಾಣಿಯಂತಿರುವುದನ್ನು ಬಿಟ್ಟು ಇದೆಂತಹ ಹುಚ್ಚು ತಲೆಗೆ ಹಚ್ಚಿಕೊಂಡಿದ್ದೀಯಾ ಎಂದು ಕೇಳಬೇಕೆನಿಸಿತು. ಕೇಳಿದರೆ ತನ್ನ ದೌರ್ಬಲ್ಯವನ್ನು ಹಿಂದಿನ ಸೋಗಲಾಡಿತನವನ್ನು ತಾನೆ ಬಯಲು ಮಾಡಿಕೊಂಡಂತಾಗುತ್ತದೆ ಎಂದು ಸುಮ್ಮನಾದ.

ಕಡಲೆಕಾಯಿ ಮಾರುತ್ತ ಎದುರಿಗೆ ನಿಂತವನನ್ನು ನೋಡಿದೊಡನೆ “ತಿನ್ನೋಣ” ಎಂದವಳು ಇವನ ಉತ್ತರಕ್ಕೂ ಕಾಯದೆ ಕೊಂಡಳು. ಹುಲ್ಲಿನ ಮೇಲೆ ಇಬ್ಬರ ನಡುವೆ ಹಾಕಿಸಿದಳು.

ಜಗನ್ನಾಥ “ನಾನು ಕೊಡುತ್ತೇನೆ” ಎಂದು ಪರ್ಸ್‌ ತೆಗೆದ.

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

“ಕೊಡಿ” ಎಂದಳು. ಜಗನ್ನಾಥ ಪೆಚ್ಚಾದ. ಉಪಚಾರಕ್ಕಾದರೂ ಅವಳು ತಾನು ಕೊಡುತ್ತೇನೆಂದು ಹೇಳಲಿಲ್ಲ. ತನ್ನಲ್ಲಿದ್ದ ನಯ ನಾಜೂಕನ್ನು ಏಕಿವಳು ಹೀಗೆ ಬುದ್ಧಿಪೂರ್ವಕವಾಗಿ ಕೊಂದು ಒರಟಾಗುತ್ತಿದ್ದಾಳೆ. ಇದೆಂತಹ “ಡಿಕ್ಲಾಸ್” ಆಗುವುದು, ಎನಿಸಿತು ಜಗನ್ನಾಥನಿಗೆ. ಮುಂದಿದ್ದ ಕಡಲೆಕಾಯಿ ಗುಡ್ಡೆಯಿಂದ ತಿನ್ನುವುದು ಮಹಾ ಮುಜುಗರವೆನಿಸಿತು. ಯಾರಾದರೂ ತನ್ನ ಸರೀಕರು, ಕೆಳದರ್ಜೆಯವರು, ಆಫೀಸಿಗೆ ಬಂದು ಹೋಗುವ ಜನ ನೋಡಿದರೆ ಏನು ತಿಳಿದುಕೊಂಡಾರು, ಇದೆಂಥ ವಿಚಿತ್ರ ಪರಿಸ್ಥಿತಿಯಲ್ಲಿ, ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದೆನೆಂಬ ಭಾವನೆಯಲ್ಲಿ ಜಗನ್ನಾಥ ಪರಿತಪಿಸಿದ. ನಿರ್ಲಿಪ್ತಳಾಗಿ ಕಾಯಿ ತಿನ್ನುವುದರಲ್ಲಿ ಮಗ್ನಳಾಗಿದ್ದಳು ಮಮತಾ. ಇಲ್ಲಿಂದ ಕಳಚಿಕೊಂಡರೆ ಸಾಕು, ದಾಕ್ಷಿಣ್ಯಕ್ಕೆ ಬಸುರಾದೆನಲ್ಲ ಎನಿಸುತ್ತಿದ್ದರೂ ಅವಳ ಕೋಮಲ ಭಾವಗಳಿಗೆ ಘಾಸಿ ಮಾಡಲಾಗದೆ ಕುಳಿತೇ ಇದ್ದ. ತಾನು ಹಿಂದೊಮ್ಮೆ ಅವಳ ಮುಂದೆ ಕಟ್ಟಿಕೊಂಡಿದ್ದ ವ್ಯಕ್ತಿತ್ವ ಉಳಿಸಿಕೊಳ್ಳುವುದಕ್ಕೆ ಒಂದೆರಡು ಕಾಯಿ ತಿಂದ, ಅವಳು ಚಾಚಿದ ಕಾಲುಗಳನ್ನು ಒಂದರ ಮೇಲೊಂದು ಹಾಕಿಕೊಂಡಿರುವುದನ್ನು ಬಿರುಗಣ್ಣಿನಿಂದ ನೋಡಿದ. ಮನಸ್ಸಿನಲ್ಲಿಯೇ ಶಪಿಸಿದ.

ಮಮತಾ ಮಾತನಾಡಲು ಮೊದಲು ಮಾಡಿದಳು.

“ಜಗನ್ನಾಥ, ನನ್ನ ಬಗ್ಗೆ ನಿಮಗೆ ತುಂಬಾ ಆಶ್ಚರ್ಯವಾಗಿದೆ, ಅಲ್ವ?… ಒಂದು ದಿನ ನಾನು ನನ್ನ ಗಂಡ ಇದೇ ಪಾರ್ಕಿನಲ್ಲಿ, ಆ ಕಾರಂಜಿ ಇದೆಯಲ್ಲ ಅಲ್ಲಿ ಕಾರಿನಲ್ಲಿ ಕೂತಿದ್ದೆವು. ತಟ್ಟನೆ ಎರಡು ಮಕ್ಕಳು ಬಂದುವು. ಒಂದರ ಮುಖದಲ್ಲಿ ಗಾಯಗಳು, ಕಜ್ಜಿ. ಗಾಯದ ಮೇಲೆಲ್ಲ ನೊಣ. ನಿಧಾನ ಮುಖದ ಮೇಲೆ ಓಡುತ್ತಿದ್ದ ನೊಣ. ಕಣ್ಣಂಚಿಗೆ ಒಂದು ನೊಣ ಸರಿಯಿತು. ಮೀಸೆ ಆಡಿಸುತ್ತ. ಮೂಗಿನ ಸಿಂಬಳ ಬಾಯಿಗಿಳಿಯುತ್ತಿತ್ತು. ಅದರ ಸುತ್ತ ನೊಣ. ಓಡಿಸಿಕೊಳ್ಳಲಾಗದ ಬಲಹೀನತೆ ಅಥವಾ ಅದರೊಂದಿಗೇ ಆ ನೊಣಗಳೂ ಹುಟ್ಟಿ ಬೆಳೆದು ಅದರ ದೇಹದ ಒಂದು ಭಾಗವಾಗಿ ಬಿಟ್ಟಿತ್ತೆ. ನನ್ನತ್ತ ನೋಡಿತು. ದೊಡ್ಡದು ‘ಅಮ್ಮಾ’ ಅಂತ ಕೈಯೊಡ್ಡಿತು. ತಕ್ಷಣ ತಲೆ ಗಿಮ್ಮಂತು. ವಾಂತಿ ಮಾಡಿಬಿಡ್ತೀನಿ ಅನ್ನುಸ್ತು. ನೋಡಲಾರೆ, ನೋಡದಿರಲಾರೆ. ರೂಪಾಯಿ ನೋಟೊಂದನ್ನು ತೆಗೆದು ಕೊಡ ಹೋದೆ. ನನ್ನ ಗಂಡ ಫಕ್ಕನೆ ಕೈ ಪಕ್ಕಕ್ಕೆ ತಳ್ಳಿದ. ಆ ಮಕ್ಕಳನ್ನು ಗದರಿದ. ‘ಥೂ’ ಎಂದು ಉಗಿದ. ಎಂಜಲ ಹನಿ ಆ ಮಗುವಿನ ಮುಖದ ಮೇಲೆ. ತಟ್ಟನೆ ಮುಖದ ಮೇಲಿನ ಒಂದು ನೊಣ ಅದರತ್ತ ಓಡಿತು. ನಾನು ತಡೀಲಾಗದೆ ಅತ್ತುಬಿಟ್ಟೆ. ನೀನು ಹೇಳಿದ್ದೆ- ಹುಟ್ಟು ಆಕಸ್ಮಿಕ… ನಾನೇ ಆ ಮಗುವಾಗಿ ಹುಟ್ಟ ಬಹುದಿತ್ತು ತಾಯಾಗಬಹುದಿತ್ತು… ನನ್ನ ಮುಖದ ಮೇಲೇ ನನ್ನ ಗಂಡ ಉಗಿದ. ದುಃಖದಿಂದ, ಸಂಕಟದಿಂದ ನಾನವನಿಗೆ ಬೈದೆ. ಗಟ್ಟಿಯಾಗಿ ನಕ್ಕ. ಅವು ಬದುಕಿದ್ದು ಏನು ಪ್ರಯೋಜನ ಸರ್ಕಾರ ಇಂಥವಕ್ಕೆ ವಿಷ ಹಾಕಿ ಕೊಲ್ಲಬೇಕು ಅಂದ. ಅವನ ಬಗ್ಗೆ ಜಿಗುಪ್ಪೆ ಬಂತು. ಅವನ ಮೈ ಮುಟ್ಟಿದರೆ ಅಸಹ್ಯ.”

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಮಮತಾ ಒಂದರಗಳಿಗೆ ಸುಮ್ಮನಿದ್ದು ಕನಸಿನ ಲೋಕದಿಂದ ಮಾತಾಡಿದಳು “ನಾನೆಲ್ಲೆ ಇರಲಿ, ಏನೇ ಮಾಡುತ್ತಿರಲಿ ಆ ನೊಣ ನೊಣ ಮುಖ, ಅದರ ಕಣ್ಣುಗಳು ಕಾಡಿತು. ಈ ದೇಶದಿಂದ ದಾರಿದ್ರ ಅಟ್ಟಬೇಕು. ಅಟ್ಟಲು ಪ್ರಯತ್ನಮಾಡೋ ಜನಕ್ಕೆ ನನ್ನ ಆಸ್ತೀನ ಉಪಯೋಗಿಸಬೇಕು ಅಂತ ಮನಸ್ಸು ಮಾಡ್ದೆ. ಬೇಕೆಂತಲೇ ಕೊಳಕಾದೆ. ಒರಟಾದೆ, ತಲೆಗೂದಲು ಕತ್ತರಿಸಿದೆ. ಎಲ್ಲೆಂದರಲ್ಲಿ ಓಡಾಡಿದೆ; ಕೂತೆ, ರಗಳೆ ಮಾಡ್ಡೆ. ಒಂದು ರೀತಿಯ ರೊಚ್ಚು ಅದು. ಅವಂಗೆ ಇರೋಕ್ಕಾಗಲಿಲ್ಲ. ಒಂದು ದಿನ ಸಿಟ್ಟಿನಿಂದ ಒದ್ದ. ಪೋಲೀಸರಿಗೆ ದೂರು ಕೊಟ್ಟ. ಬಿಟ್ಟುಹೋದ. ಈಗ ಈ ಹುಡುಗರ ಗುಂಪು ಕಟ್ಟಿಕೊಂಡಿದೀನಿ. ಅವರಿಗೆ ಹಣ ಕೊಡ್ತೀನಿ, ಪ್ರಚಾರ ಮಾಡ್ತಾರೆ, ಕೊಳಗೇರಿಗೆ ಹೋಗ್ತಾರೆ, ನೀವೂ ಮನುಷ್ಯರು ಅಂತ ಹೇಳ್ತಾರೆ, ತಿಳಿಸ್ತಾರೆ. ನಾನೂ ಹೋಗ್ತಿನಿ, ಆದರೂ ನಂಗೊತ್ತು ಇದು ಏನೇನೂ ಸಾಲ್ದು ಅಂತ.”

ಭಾವಾತಿರೇಕದ ಪೆದ್ದೆ! ಅವರು ಏನೂ ಮಾಡುತ್ತಿಲ್ಲ. ನಿನ್ನ ಉಪಜೀವಿಗಳಾಗಿದ್ದಾರೆ, ನಿನ್ನ ಹಣ ಉಡಾಯಿಸೊಕ್ಕೆ ಎಂದುಕೊಂಡ ಜಗನ್ನಾಥನಿಗೆ ಗಟ್ಟಿಯಾಗಿ ಅವಳ ಮುಖದ ಮೇಲೆ ರಾಚಿದಂತೆ ನಗಬೇಕೆನಿಸಿತು. ನಗಲಿಲ್ಲ. ನಿನ್ನ ಗಂಡನ ಮೇಲಿನ ಸಿಟ್ಟಿಗೆ, ಅಸಹ್ಯಕ್ಕೆ ನೀನು ಹೇಳಿದ್ದಲ್ಲ ಕಾರಣ, ನಾನು, ನಾನು ಎನ್ನಬೇಕೆನಿಸಿತು. ಆದರೆ ಅವನ ಅಹಂಗೆ ಖುಷಿಯ ಸೆಲೆಯೊಂದು ನಾಟಿ ಅವನು ಮೃದುವಾಗಿದ್ದ. ತನ್ನ ಪ್ರಭಾವ ಅವಳ ಮೇಲೆ ಅಪಾರ, ಅರಿವಿಲ್ಲದೆ ತನ್ನ ಪ್ರೀತಿಸುತ್ತಾಳೆ ಎಂದುಕೊಂಡ. ಅವನ ಯೋಚನೆಯನ್ನೆ ಮುಂದುವರಿಸುವಂತೆ ಮಮತಾ ಹೇಳಿದಳು.

“ನಿಮ್ಮನ್ನು ಆಗಾಗ ನೆನೆಸಿಕೋತ ಇದ್ದೆ. ನಾವಿಬ್ಬರು ಒಟ್ಟಿಗಿದ್ದಿದ್ದರೆ ಏನೆಲ್ಲ ಮಾಡಬಹುದಾಗಿತ್ತು: ಬದುಕನ್ನ ಸುಂದರ ಸ್ವಪ್ನ ಮಾಡೋದಿಕ್ಕೆ. ಆದರೆ…”

ಜಗನ್ನಾಥನಿಗೆ ತನ್ನ ಬಗ್ಗೆ ನಾಚಿಕೆಯಾಯಿತೆ? ಚಡಪಡಿಸಿದ. ಅವಳು ಭಾವಾತಿರೇಕದಲ್ಲಿ ಅತ್ತುಬಿಟ್ಟಾಳೆಂದು ಹೆದರಿದ. “ಹೋಗೋಣ ಬಾ” ಎಂದ.

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ದಾರಿಯುದ್ದಕ್ಕೂ ಅವಳು ಆದರೆ, ಅಂತ ಮಾತು ನಿಲ್ಲಿಸಿದಳಲ್ಲ, ಅದಕ್ಕೇನು ಅರ್ಥ ಎಂದು ಯೋಚಿಸಿದ.

4

ಮಮತಾ ಮನೆಗೆ ಬಂದೊಡನೆ ಸೋಫಾದ ಮೇಲೆ ಕಾಲುಚಾಚಿ ತಲೆಗೆ ಮೊಳಕೈ ಒತ್ತುಕೊಟ್ಟು ಅರ್ಧ ಮಲಗಿದಳು. ಜಗನ್ನಾಥ ತನ್ನ ಮನಸ್ಸು ತಿನ್ನುತ್ತಿದ್ದ ಪ್ರಶ್ನೆ ಕೇಳಿದ.

“ನಾವಿಬ್ಬರು ಒಟ್ಟಿಗಿದ್ದಿದ್ದರೆ ಚೆನ್ನಾಗಿತ್ತು ಅಂತ ಹೇಳ್ದೆ, ಆದರೆ ಅಂತ ಮಾತು ನಿಲ್ಲಿಸಿಬಿಟ್ಟೆಯಲ್ಲ, ಯಾಕೆ ಮಮತಾ?”

“ಹೇಳಲಾ?”

“ಹೇಳು.”

“ಸಿಟ್ಟು ಮಾಡ್ಕೊಬೇಡಿ.”

ಜಗನ್ನಾಥ ನಕ್ಕ.

“ನೀವು ತುಂಬ ಬದಲಾಗಿಬಿಟ್ಟಿದೀರಾ- ನನ್ನ ಕನಸಿನ ಜಗನ್ನಾಥನಿಗೂ ನಿಮಗೂ ಸಂಬಂಧಾನೆ ಇಲ್ಲ. ದೊಡ್ಡ ಸ್ನಾಬ್ ಆಗಿಬಿಟ್ಟಿದ್ದೀರಾ.”

ಅವಳ ಮಾನಸಿಕ ಗುರು ತಾನು ಎಂದು ಖುಷಿಯಾಗಿದ್ದ, ಮತ್ತಷ್ಟು ಹೊಗಳಿಕೆ ಬಯಸಿದ್ದ ಜಗನ್ನಾಥನಿಗೆ ಮುಖದ ಮೇಲೆ ಹೊಡೆದಂತಾಯಿತು.

“ನೀನೆಂತ ಪೆದ್ದು ಮಮತಾ. ಮನುಷ್ಯ ಬದಲಾಯಿಸ್ತಾನೆ. ಬದಲಾಯಿಸುತ್ತ ಅವನಿಗೆ ಪರಿಸ್ಥಿತಿಯ ಕಠೋರತೆ ಅರ್ಥ ಆಗುತ್ತೆ. ಬುದ್ಧಿವಂತ ಆಗ್ತಾನೆ. ಈ ದೇಶ, ಜನ ಬದಲಾಯಿಸೋಕೆ ಸಾಧ್ಯ ಇಲ್ಲ. ಪುನರ್ಜನ್ಮ, ಹತ್ತು ಜನ್ಮದಲ್ಲಿ ನಂಬಿಕೆ ಇದ್ದಿದ್ದರೆ ಜೀವನವೆಲ್ಲ ಬಡತನದಲ್ಲಿ ನರಳಿ ಈ ಜನರ ಉದ್ಧಾರ ಅಂತ ನಿಲ್ಲಬಹುದಾಗಿತ್ತು. ಈಗ ನಾನು ಯಾಕೆ ಬಡವ ಆಗಿರಬೇಕು? ಬೆಂದ ಮನೇಲಿ ಹಿರಿದದ್ದೆ ಲಾಭ. ಇಲ್ಲಿರೋದು ಕೊಂದು ಬದುಕೊ ಸ್ಪರ್ಧೆ. ನಿನ್ನ ನೊಣದ ಕತೆ ಭಾವಾತಿರೇಕ. ಹಣಮಾಡಿ, ಮಜಾಮಾಡೋನು ಬುದ್ಧಿವಂತ, ಸುಮ್ಮನಿರೋನು ಪೆದ್ದ. ನಾನು ಆದಷ್ಟು ಆದಷ್ಟು ಹಣಮಾಡ್ತಿದೀನಿ, ಆಸ್ತಿ ಮಾಡ್ತಿದೀನಿ.”

ಮಮತಾ ಎದ್ದು ಕೂತಳು. ಸ್ವಲ್ಪ ಹೊತ್ತು ಮಾತಾಡಲಿಲ್ಲ. ನಂತರ ನಿಧಾನವಾಗಿ ಹೇಳಿದಳು.

“ನೀನು, ನನ್ನ ಗಂಡ ಎಲ್ಲ ಒಂದೇ. ಗೋಮುಖ ವ್ಯಾಘ್ರಗಳು; ಹಣ ಪಿಶಾಚಿಗಳು.”

ಜಗನ್ನಾಥನಿಗೆ ಸಿಟ್ಟು ಬಂತು. ಅವನ ಮರ್ಮಕ್ಕೆ ಒದ್ದಂತಾಯಿತು. ಕ್ರೂರವಾದ.

“ನೀನೊಂದು ಭಾವಾತಿರೇಕದ ಪೆದ್ದು. ಬುದ್ದಿ ಬೆಳೆದೇ ಇಲ್ಲ. ಹೇಗೆ ಬದುಕಬೇಕು ತಿಳೀದೆ ಇದೊಂದು ರೀತಿ ಆಟ ಕಟ್ಟಿದೀಯ-ಗಂಡನ್ನ ಬಿಟ್ಟು ಚೀಪ್ ಥ್ರಿಲ್ಸ್‌ಗಾಗಿ.”

“ಥೂ ಹಲ್ಕ” ಎಂದಳು. ಹಲ್ಲು ಕಚ್ಚಿ ನಿಟ್ಟುಸಿರಿಟ್ಟಳು. ಕಣ್ಣಲ್ಲಿ ನೀರು ತುಂಬಿತು.

ನಸುಕಿ ಹಾಕುವ ರೊಚ್ಚು ಜಗನ್ನಾಥನಲ್ಲಿ ಬೆಳೆಯಿತು.

“ನಾಕು ಹುಡುಗರನ್ನು ಕಟ್ಟಿಕೊಂಡು ಮಾರ್ಕ್ಸ್‌ನ ತತ್ವ ಚರ್ಚಿಸಿ ದೇಶೋದ್ಧಾರ ಮಾಡ್ತೀನಿ ಅಂತ ತಿಳ್ಕೊಂಡಿದೀಯಾ? ಮಾರ್ಕ್ಸ್‌ವಾದದ ಹೆಸರಲ್ಲಿ ನೀನು ಮಾಡ್ತಾ ಇರೋದು ಆ ಹುಡುಗರೊಂದಿಗೆ ಹಾದರ, ಅಷ್ಟೆ.”

“ನೀನೊಬ್ಬ ರ್‍ಯಾಸ್ಕಲ್. ನಿನ್ನಂಥವರು ಹಣಕ್ಕೆ ಹೆಂಡತಿ, ಮಕ್ಕಳನ್ನೂ ಮಾರಿ ಬಿಡ್ತೀರಿ, ಅವರೂ ಮನುಷ್ಯರು ಅಂತ ಕೂಡ ಅನ್ಸೊದಿಲ್ಲ ನಿಮಗೆ.”

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಮಮತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏನಾಯಿತೆಂದು ತಿಳಿಯುವ ಮೊದಲೆ ಜಗನ್ನಾಥನ ಕೈ ಅವಳ ಹೆಗಲಮೇಲೆ. ಸಮಾಧಾನ ಮಾಡಲು ತಿಣುಕಿದ. “ಥೂ ಬಿಡು ನನ್ನ, ಚಂಡಾಲ” ಎಂದು ದೂರ ತಳ್ಳಲು ಪ್ರಯತ್ನಿಸಿದಳು. ಅವಳ ಏಕವಚನ, ಚಂಡಾಲ ಪ್ರಯೋಗ ಜಗನ್ನಾಥನಿಗೆ ಇನ್ನಷ್ಟು ಚುಚ್ಚಿದರೂ, ಮತ್ತಷ್ಟು ಬಿಗಿಯಾಗಿ ಅವಳನ್ನು ತನ್ನೆಡೆ ಎಳೆದು “ಅಳಬೇಡ ಮಮತಾ” ಎಂದ. ಬಿಡಿಸಿಕೊಳ್ಳಲು ಹೆಣಗಿದ ಮಮತಾ ಅವನ ಮುಖ ಪರಚಿದಳು. ಜಗನ್ನಾಥ ಹಿಡಿತ ಬಿಡಲಿಲ್ಲ. ಉರಿ, ನೋವು, ನಾಚಿಕೆ, ಸಂಕಟ, ಅವಮಾನ, ಹೀನಾಯವೆಲ್ಲ ಸೇಡಿನ ರೂಪದಲ್ಲಿ ರಾಕ್ಷಸವಾಯಿತು. ಅವಳ ಮೃದು ಮೃದೂ ದೇಹದ ಆಕ್ರಮಣದಿಂದ ತನ್ನ ಔನ್ನತ್ಯ ಸಾಧಿಸಲು ಪ್ರಯತ್ನಿಸಿದ. ಅವಳು ಸುಸ್ತಾದಳು. ಅಯ್ಯೋ ಬೇಡ, ಎಂದಳು. ಪ್ಲೀಸ್ ಎಂದಳು. ಬಚ್ಚಲು ಮನೆ, ಎಂದಳು. ಜಗನ್ನಾಥ ಪಶುವಾಗಿದ್ದ. ಆದರೆ ಅವನ ದೇಹ, ತಟ್ಟನೆ, ರೋಷಕ್ಕೆ ಸಾಟಿಯಾಗಿ ನಿಲ್ಲದೆ ಸೋತಿತು. ಮಮತಾ ಮಗ್ಗಲು ಹೊರಳಿ ಬಿಕ್ಕಿದಳು. ಆದಷ್ಟು ಬೇಗ ಅವಳಿಗೆ ಮುಖ ತೋರಿಸದೆ ಅಲ್ಲಿಂದ ಕಳಚಿಕೊಳ್ಳಲು ಜಗನ್ನಾಥ ತನ್ನ ಬಟ್ಟೆಯೊಂದಿಗೆ ಚಡಪಡಿಸಿದ.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

T G Raghava1

ಟಿ.ಜಿ. ರಾಘವ(1935- ): ಬೆಂಗಳೂರಿನಲ್ಲಿ ಜನಿಸಿದ ರಾಘವ ಅವರು ಎಂ.ಎ. ಪದವೀಧರರು. ತಂದೆ ಗೋವಿಂದಾಚಾರ್ (ಆಂಧ್ರದವರು), ತಾಯಿ ತಂಗಮ್ಮ (ತಮಿಳಿನವರು). ಹೀಗಾಗಿ ರಾಘವರ ಮಾತೃಭಾಷೆ ತಮಿಳು. ಆದರೆ, ಕನ್ನಡದಲ್ಲಿ ಕಲಿತು ಕನ್ನಡದ ಪ್ರಮುಖ ಕಥೆಗಾರರಾದರು. ಗುಬ್ಬಿ, ಶ್ರೀನಿವಾಸಪುರ, ಕೋಲಾರದಲ್ಲಿ ಮೆಟ್ರಿಕ್‌ವರೆಗೆ ಶಿಕ್ಷಣ ಪೂರೈಸಿದರು. ಇವರ ಮೊದಲ ಕಥೆ ಟಿಕ್, ಟಿಕ್- ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿತು. ಕವಿ ಗೋಪಾಲಕೃಷ್ಣ ಅಡಿಗರ ನೆಚ್ಚಿನ ಶಿಷ್ಯರು. ಕೆಲಕಾಲ ‘ವಿಶ್ವಕರ್ನಾಟಕ’ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದು, ನಂತರ ವಿವಿಧ ಕಾಲೇಜುಗಳಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1993ರಲ್ಲಿ ನಿವೃತ್ತರಾದರು. ಪ್ರಕಟಿತ ಕೃತಿಗಳು: ಜ್ವಾಲೆ ಆರಿತು(1960), ಸಂಬಂಧಗಳು(1981), ಸಮಗ್ರ ಕತೆಗಳು(1993) ಕಥಾ ಸಂಕಲನಗಳು; ಪ್ರೇತಗಳು(ನಾಟಕ 1974), ಮನೆ(1979), ವಿಕೃತಿ(1989) ಕಾದಂಬರಿಗಳು; ಇವರ ಮನೆ ಕಾದಂಬರಿ ಚಲನಚಿತ್ರವಾಗಿ ರಾಷ್ಟ್ರಪತಿ ಪುರಸ್ಕಾರ ಪಡೆಯಿತು. ಮನೆ- ಕಾದಂಬರಿ ಹಾಗೂ ಶ್ರಾದ್ಧ- ಕಥೆ ಮರಾಠಿಗೂ; ಪ್ರೇತಗಳು- ಮಲೆಯಾಳಂಗೂ ಅನುವಾದಗೊಂಡಿದೆ. ಮತ್ತೊಂದು ಕಥೆ ಉರ್ದುವಿಗೆ ಭಾಷಾಂತರವಾಗಿ ಪಾಕಿಸ್ತಾನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಮಹತ್ವದ ವಿಮರ್ಶಕರೂ ಆದ ಟಿ.ಜಿ. ರಾಘವರ ವಿಮರ್ಶಾ ಬರಹಗಳು ‘ಪರಿಗ್ರಹ’ ಎಂಬ ಸಂಕಲನವಾಗಿ ಮೂಡಿಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೀಣಾ ಶಾಂತೇಶ್ವರ ಅವರ ಕತೆ | ತಿರುಗಿ ಹೋದಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...