ತ್ರಿವೇಣಿ ಅವರ ಕತೆ | ನರಬಲಿ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ನಿರ್ಜೀವ ಶವದಂತೆ ಬಿದ್ದಿದ್ದ ದೇಹ ನಿಧಾನವಾಗಿ ಚಲಿಸಿತು. ನಿಟ್ಟುಸಿರಿನೊಂದಿಗೆ ಯಾತನಾಮಯವಾದ ನರಳುವಿಕೆ ಅವಳ ಬಾಯಿಂದ ಹೊರಬಂದು ಮೌನದ ತೆರೆಯನ್ನು ಅಲುಗಿಸಿತು. ರತ್ನ ನಿಧಾನವಾಗಿ ಕಣ್ಣು ಬಿಟ್ಟಳು. ಎಚ್ಚರವಾದ ಒಂದು ಗಳಿಗೆ ರತ್ನಳಿಗೆ ಎಲ್ಲೆಲ್ಲೂ ಕತ್ತಲು, ಶೂನ್ಯದ ಹೊರತು ಬೇರೇನೂ ಕಾಣಿಸಲಿಲ್ಲ. ಮನಸ್ಸು ಯಾವುದನ್ನೂ ಯೋಚಿಸಲಾರದಷ್ಟು ಬಳಲಿ ಮಂಕಾಗಿ ಹೋಗಿತ್ತು. ಅವಳ ಕಣ್ಣುಗಳು ತಾರಸಿಯನ್ನೇ ನೆಟ್ಟ ನೋಟದಿಂದ ನೋಡಿದವು. ಅವಳ ಮಂಕು ನಿಧಾನವಾಗಿ ಹರಿಯುತ್ತ ಬಂತು. ತನಗೇನಾಗಿದೆ? ಇದುವರೆವಿಗೂ ನಿದ್ದೆ ಮಾಡಿದೆನೇ? ಅಥವಾ ಖಾಯಿಲೆ ಮಲಗಿದ್ದೆನೇ? ಊಹುಂ. ಯಾವುದೂ ಸರಿಯಾಗಿ ತಿಳಿಯಲಿಲ್ಲ. ಇದೇಕೆ ಕೂದಲೆಲ್ಲಾ ಕೆದರಿಹೋಗಿದೆ? ರತ್ನ ಕೂದಲಿನ ಮೇಲೆ ಕೈಯಾಡಿಸಿದಳು. ಓರಣವಾಗಿ ಬಾಚಿ ಹಾಕಿಕೊಂಡಿದ್ದ ಹೆರಳು ಸಡಿಲವಾಗಿ ಬೆನ್ನಿನ ಮೇಲೆ ಜೋಲಾಡುತ್ತಿತ್ತು. ಸತ್ತ ಹಾವಿನಂತೆ.

ರತ್ನಳ ಮನಸ್ಸು ಯಾಕೋ ಚುಚ್ಚಿದಂತಾಯಿತು, ಫಕ್ಕನೆ ಎದ್ದು ಕುಳಿತು ಸುತ್ತಲೂ ನೋಡಿದಳು. ಹೌದು ರೂಮೇನೋ ತನ್ನದೇ. ಗೋಡೆಯ ಮೇಲಿದ್ದ ತನ್ನ, ವಾಸುವಿನ ಚಿತ್ರಗಳು, ತಾನು ಕಸೂತಿ ಕೆಲಸ ಮಾಡಿದ್ದ ಬಾಗಿಲಿನ ತೆರೆ, ಮೇಜಿನ ಮೇಲಿದ್ದ ಬಲ್ಬು ಎಲ್ಲವೂ ತಾನು ತನ್ನ ಮನೆಯಲ್ಲಿಯೇ ಇರುವಳೆಂದು ಕೂಗಿ ಹೇಳಿದವು. ಆದರೂ ಅವಳಿಗೆ ಏನೋ ಬದಲಾವಣೆಯಾಗಿರುವ ಹಾಗೆ ತೋರಿತು. ಬಹಳ ಅಮೂಲ್ಯವಾದುದು, ಅಪೂರ್ವವಾದುದು, ಯಾವುದನ್ನು ತಾನು ತನ್ನ ಜೀವ ಎಂದುಕೊಂಡಿದ್ದಳೋ ಆ ವಸ್ತು ಕಳೆದುಹೋಗಿರುವಂತೆ ಭಾಸವಾಯಿತು. ಆದರೆ ಏನು ಕಳೆದುಹೋಗಿದೆ ಎಂಬುದು ಕೂಡಲೇ ಅವಳ ಮನಸ್ಸಿಗೆ ಹೊಳೆಯಲಿಲ್ಲ. ಕಣ್ಣು ಸ್ವಾಭಾವಿಕವಾಗಿ ಗಡಿಯಾರದ ಕಡೆ ಹೊರಳಿತು. ಗಡಿಯಾರದ ಚಿಕ್ಕ ಮುಳ್ಳು ಒಂಭತ್ತನ್ನು ದಾಟಿತ್ತು.

ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರತ್ನ ಚೈತನ್ಯವನ್ನೆಲ್ಲಾ ಒಟ್ಟುಗೂಡಿಸಿ ಹಾಸಿಗೆಯ ಮೇಲೆ ಕೈಯೂರಿ ಎದ್ದುನಿಂತಳು. ಹಾಸಿಗೆಯ ಮೇಲೆ ಹೇಗೆ ಬಂದೆ ಎಂಬ ಪ್ರಶ್ನೆ ಅವಳ ತಲೆಯಲ್ಲಿ ಎದ್ದಿತು. ರತ್ನ ಏನನ್ನೋ ಜ್ಞಾಪಿಸಿಕೊಳ್ಳುವವಳಂತೆ ಹಾಸಿಗೆಯನ್ನೇ ದುರುದುರನೆ ನೋಡಿದಳು. ಹೆರಳಿಗೆ ಅರ್ಧಚಂದ್ರಾಕೃತಿಯಲ್ಲಿ ಸುತ್ತಿದ್ದ ಮಲ್ಲಿಗೆ ಮೊಗ್ಗಿನ ಮಾಲೆ ಹರಿದು ಎರಡು ತುಂಡಾಗಿ ಹಾಸಿಗೆಯ ಮೇಲೆ ಬಿದ್ದಿತ್ತು. ಆಗ ತಾನೆ ಬಿರಿದು ಕಂಪು ಸೂಸುತ್ತಿದ್ದ ಮೊಗ್ಗುಗಳು ಭಾರವಾದ ವಸ್ತುವಿನ ಕೆಳಗೆ ಸಿಕ್ಕಿ ನಲುಗಿ ಬಾಡಿದ ಹಾಗೆ ತೋರುತ್ತಿದ್ದವು. ಹಾಸಿಗೆಯನ್ನು ತಡಕಿ ಮೊಗ್ಗೊಂದನ್ನು ಕೈಗೆ ಎತ್ತಿಕೊಂಡಳು.

”ಛೇ, ಅನ್ಯಾಯ…. ನನ್ನ ಸರ್ಪಾಕಾರದ ಹೆರಳಿಗೆ ಮೊಗ್ಗಿನ ದಂಡೆ ಮುಡಿಸಿದರೆ ಅವರಿಗೆಷ್ಟು ಸಂತೋಷ! ದಂಡೆ ಈ ದಿನ ಅವರು ಬರುವುದಕ್ಕೆ ಮುಂಚೆಯೇ ಒಣಗುತ್ತಿದೆ…”

ಅವಳ ದೃಷ್ಟಿ ಸೆರಗಿನ ಕಡೆ ಹೋಯಿತು. ಸೆರಗು ಭುಜದಿಂದ ಜಾರಿ ಹಾಸಿಗೆಯ ಮೇಲೆ ಬಿದ್ದಿತ್ತು. ಕಪ್ಪು ಒಡಲಿನ ಮೇಲೆ ಬಿಳೀ ಚುಕ್ಕಿಯಿದ್ದ ವಾಯಲ್ ಸೀರೆಯ ನಿರಿಯನ್ನು ಸರಿ ಮಾಡಿ, ಸರಿದು ಹೋಗಿದ್ದ ಸೆರಗನ್ನು ಎತ್ತಿ ಎದೆಯ ಮೇಲಿನಿಂದ ಬಳಸಿ ತಂದು ಎಡಭುಜದ ಮೇಲೆ ಹಾಕಿಕೊಂಡಳು. ಅವಳ ಕಣ್ಣುಗಳು ಅಚ್ಚರಿಯಿಂದ ಅಗಲವಾದವು. ಇದೇನು? ಸೆರಗು ಸಿಗರೇಟಿನ ವಾಸನೆಯಲ್ಲಿ ಅದ್ದಿ ಮುಳುಗಿದಂತಿದೆ! ಸಿಗರೇಟಿನ ವಾಸನೆಯೊಡನೆ ಸೆಂಟಿನ ಉನ್ಮಾದಕಾರಿಯಾದ ಪರಿಮಳವೊಂದು ಮೂಗಿಗೆ ಬಡಿಯುತ್ತಿತ್ತು. ಸೆಂಟು, ಸಿಗರೇಟಿನ ವಾಸನೆ ತನ್ನ ಮನೆಯಲ್ಲಿ ಬಂದುದಾದರೂ ಹೇಗೆ? ತಾನು ಒಂದು ದಿನವಾದರೂ ಸೆಂಟು ಉಪಯೋಗಿಸಿದವಳಲ್ಲ. ವಾಸು ಸಿಗರೇಟನ್ನು ಕೈಯಿಂದ ಸಹ ಮುಟ್ಟುತ್ತಿರಲಿಲ್ಲ. ಅವನಿಗೆ ಸಿಗರೇಟಿನ ವಾಸನೆಯೆಂದರೇ ಆಗದು. ಇಷ್ಟಾದರೂ ಸಿಗರೇಟು, ಸೆಂಟಿನ ಪರಿಮಳ ರೂಮನ್ನು ಆಕ್ರಮಿಸಿತ್ತು. ರತ್ನ ಪ್ರಶ್ನಾರ್ಥಕ ದೃಷ್ಟಿಯಿಂದ ಸುತ್ತಲೂ ನೋಡಿದಳು. ‘ಅಥವಾ… ಜಜ್ಜಿಹೋದ ಮಲ್ಲಿಗೆಯ ವಾಸನೆಯೇ ಇರಬಹುದೇ? ಮೊಗ್ಗಿನ ವಾಸನೆಯನ್ನು ತಾನು ತಪ್ಪು ತಿಳಿದುಕೊಂಡಿಲ್ಲವಷ್ಟೇ?’ ಸೆರಗನ್ನು ತೆಗೆದು ರತ್ನ ಮೂಗಿಗೆ ಹಿಡಿದುಕೊಂಡಳು. ‘ಅಲ್ಲ. ಖಂಡಿತ ಅಲ್ಲ. ಮೊಗ್ಗಿನ ವಾಸನೆ ತನಗೆ ತಿಳಿಯದೆ? ಹಾಗಾದರೆ ಈ ಮನೆಗೆ ಬೇರೆ ಯಾರೋ ಬಂದಿದ್ದಿರಬೇಕು…’ ಮರಗಟ್ಟಿದ್ದ ಮನಸ್ಸಿನ ಮೇಲೆ ಮರಳುವ ನೀರನ್ನು ಚೆಲ್ಲಿದಂತಾಯಿತು. ರತ್ನ ಸಣ್ಣಗೆ ಚೀರಿ ಎರಡು ಕೈಗಳಿಂದಲೂ ಮುಖ ಮುಚ್ಚಿಕೊಂಡಳು. ಅವಳ ಅಂಗಾಂಗಗಳೆಲ್ಲವೂ ನಡುಗುತ್ತಿದ್ದವು. ‘ಇದೇನಾಗಿಹೋಯಿತು’ ಎಂದು ಅವಳ ಹೃದಯ ಕೂಗಿತು. ರತ್ನ ದಳ್ಳುರಿಗೆ ಸಿಕ್ಕಿದ ಬಳ್ಳಿಯಂತೆ ಬೆಂದುಹೋದಳು. ಮನಃಪೂರ್ತಿಯಾಗಿ ಅತ್ತಳು. ಆದರೆ ಹೃದಯದ ಭಾರ ಕಡಿಮೆಯಾಗಿರಲಿಲ್ಲ. ಕಣ್ಣಿನಲ್ಲಿದ್ದ ಕಂಬನಿಯೆಲ್ಲಾ ಕೊಚ್ಚಿಹೋದ ಮೇಲೆ ಅವಳಿಗೆ ತನ್ನ ಮೇಲೆ, ವಾಸುವಿನ ಮೇಲೆ, ಪ್ರಪಂಚದ ಮೇಲೆ ರೋಷ ಉಕ್ಕಿತು. ರೋಷದ ಆವೇಗದಲ್ಲಿ ಕೈಲಿದ್ದ ಕರವಸ್ತ್ರವನ್ನು ಹರಿದು ಚಿಂದಿ ಚಿಂದಿ ಮಾಡಿ ಎಸೆದಳು.

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

ಗಡಿಯಾರದ ಒಂಭತ್ತೂವರೆ ಹೊಡೆಯಿತು. ಗಂಟೆಯ ಸದ್ದು ಕೇಳಿ ಬೆಚ್ಚಿದಳು. ಬರೀ ಗಂಟೆಯಷ್ಟೆ. ಅದಕ್ಕೆ ಹೆದರಬೇಕಾಗಿಲ್ಲ.

ಗಾಜಿನ ಬಳೆಗಳಿಲ್ಲದ ತನ್ನ ದುಂಡುಗೈಯನ್ನು ರತ್ನ ಒಮ್ಮೆ ನೋಡಿಕೊಂಡಳು. ರೂಮಿನಲ್ಲಿ ಕಾದಾಟದ ಚಿಹ್ನೆಗಳಿನ್ನೂ ಉಳಿದಿದ್ದವು. ಗಾಜಿನ ಬಳೆಗಳ ಚೂರುಗಳು ಅಲ್ಲಲ್ಲಿ ಬಿದ್ದಿದ್ದವು. ಕುರ್ಚಿಯೊಂದು ನೆಲದ ಮೇಲೆ ತಲೆಕೆಳಕಾಗಿ ಬಿದ್ದಿತ್ತು. ಬಳೆ ಚುಚ್ಚಿದ ಕಡೆ ಗಾಯವಾಗಿ ಕೈಯಿಂದ ರಕ್ತ ಹನಿಯುತ್ತಿತ್ತು.

ರತ್ನ ಅಳು ನುಂಗಿಕೊಂಡು ಎದ್ದಳು. ನೆಲದ ಮೇಲೆ ಬಿದ್ದಿದ್ದ ಬಳೆ ಚೂರುಗಳನ್ನು ಆರಿಸಿ ಕಿಟಕಿಯಿಂದಾಚೆ ಬಿಸಾಡಿದಳು. ಉದುರಿದ್ದ ಮಲ್ಲಿಗೆ ಮೊಗ್ಗುಗಳನ್ನು ಆರಿಸಿ ಕಸದ ಬುಟ್ಟಿಯೊಳಗೆ ಹಾಕಿದಳು.

ವಾಸುವಿಗೆ ತಾನು ಪತಿತೆಯೆಂಬುದು ತಿಳಿದರೆ? ಅವಳ ಮೈಮೇಲೆ ಹಿಮದ ನೀರನ್ನು ಚೆಲ್ಲಿದಂತಾಯಿತು. ಗಂಡನಿಗಾದರೂ ತಾನು ಪತಿತೆ ಎಂಬುದು ಹೇಗೆ ತಿಳಿಯಬೇಕು? ತಾನಾಗಿ ಬಾಯಿಬಿಟ್ಟು ಹೇಳಿದರೆ ತಾನೆ ಅವರಿಗೆ ಗೊತ್ತಾಗುವುದು? ತಾನು ಹೇಳದಿದ್ದರೇ ಸರಿ. ಆದರೂ ತನ್ನ ಅಂತರಾತ್ಮ ಇದನ್ನು ಒಪ್ಪುವುದೇ? ಗಂಡನೊಡನೆ ಸುಳ್ಳಿನ ಹೊರೆಹೊತ್ತು ಬಾಳುವುದೇ? ತಾನು ಪತಿತೆಯೆಂದು ವಾಸು ತಿರಸ್ಕರಿಸಿದರೆ? ಇಷ್ಟು ದೊಡ್ಡ ಪ್ರಪಂಚದಲ್ಲಿ ತನಗೆ ಇನ್ನಾರು ದಿಕ್ಕು? ಹೇಳದಿರುವುದೇ ಮೇಲು. ಈ ವ್ಯಥೆಯ ಕಿಚ್ಚು ನನ್ನೊಬ್ಬಳಲ್ಲೇ ಇರಲಿ. ಅದರ ಹಬೆ ಅವರಿಗೆ ತಗಲುವುದು ಬೇಡ. ಅವರ ಮೃದು ಮನಸ್ಸು ಈ ಬಿಸಿ ಹೊಡೆತವನ್ನು ಸಹಿಸಲಾರದು. ಆದರೂ ತನ್ನ ಮುಖ ತನ್ನನ್ನು ಬಿಟ್ಟುಕೊಡಲಾರದೆ? ರತ್ನ ಕನ್ನಡಿ ಮುಂದೆ ಬಂದು ನಿಂತು ತನ್ನ ಮುಖವನ್ನು ಪರೀಕ್ಷಿಸಿಕೊಂಡಳು. ರಸ ಹೀರಿ ಬಿಸುಟ ಕಬ್ಬಿನಂತಾಗಿತ್ತು ಅವಳ ಮುಖ. ಕೆಲವೇ ಗಂಟೆಗಳಲ್ಲಿ ಎಂತಹ ಬದಲಾವಣೆ? ಅರಳಿದ ಪುಷ್ಟಕ್ಕೆ ಅಗ್ನಿಚುಂಬನವಾದರೆ ಪುಷ್ಪ ಬಾಡುವುದು ಎಷ್ಟು ಹೊತ್ತಿನಲ್ಲಿದೆ? ಅವಳ ದೇಹದಿಂದ, ಸೀರೆಯಿಂದ ಸಿಗರೇಟು, ಸುಗಂಧದ ವಾಸನೆ ಹೊರಹೊಮ್ಮುತ್ತಿರುವಂತೆ ತೋರಿತು. ರತ್ನ ಜುಗುಪ್ಸೆಯಿಂದ ಮುಖ ಸಿಂಡರಿಸಿದಳು. ಅವಳ ತುಟಿ, ಕೆನ್ನೆ ಚೇಳು ಕಚ್ಚಿದಂತೆ ಉರಿಯತೊಡಗಿದ್ದವು. ರತ್ನ ಸೋಪು, ಟವಲು ತೆಗೆದುಕೊಂಡು ಹೋಗಿ ತಣ್ಣೀರಿನಲ್ಲಿ ಸ್ನಾನಮಾಡಿದಳು.

ಇದನ್ನು ಓದಿದ್ದೀರಾ?: ರಾಮಚಂದ್ರ ಶರ್ಮ ಅವರ ಕತೆ | ಮಾಗಿ

ವಾಸು ಮನೆಗೆ ಬರುವ ಹೊತ್ತು ಸಮೀಪಿಸಿದಂತೆಲ್ಲಾ ಅವಳ ಮನಸ್ಸಿನ ಕಳವಳ, ದುಗುಡ ಜಾಸ್ತಿಯಾಯಿತು. ‘ಒಂದು ಪಕ್ಷ ವಾಸುವಿಗೆ ತಿಳಿದರೆ ಕ್ಷಮಿಸುವರೇ ಅಥವಾ ಕೋಪಗೊಂಡು ಹೊರದೂಡುವರೇ? ವಾಸುವಿಗೆ ತನ್ನಲ್ಲಿ ಎಷ್ಟು ಪ್ರೀತಿ! ಆದರೆ ಆ ಪ್ರೀತಿಯೇ ದ್ವೇಷವಾಗಿ ಪರಿಣಮಿಸಿದರೆ? ತನ್ನ ಮತ್ತು ಅವನ ಹಿತದೃಷ್ಟಿಯಿಂದ ತಿಳಿಸದಿರುವುದೇ ಒಳ್ಳೆಯದು…’ ಧರ್ಮಸಂಕಟದ ಉರಿಯಲ್ಲಿ ಬಿದ್ದಳು. ಮಗುವಿನ ಮನಸ್ಸಿನಂತಹ ಗಂಡನಿಗೆ ಮೋಸ ಮಾಡುವುದೇ ಎಂದು ಅವಳ ಮನಸ್ಸು ಪದೇ ಪದೇ ಕೇಳತೊಡಗಿತು.

”ರತ್ನಾ… ರತ್ನಾ… ಬಾಗಿಲು…”

ಏನು ಗತಿ? ಬಂದೇಬಿಟ್ಟರು. ಈ ಮುಖವನ್ನು ಅವರಿಗೆ ತೋರಿಸುವುದಾದರೂ ಹೇಗೆ? ನನ್ನ ಮುಖ ನನ್ನನ್ನು ಬಿಟ್ಟುಕೊಟ್ಟರೆ? ಕನ್ನಡಿಯನ್ನು ಮುಖದ ಎದುರಿಗೆ ಹಿಡಿದಳು. ಹೆದರಿಕೆಯಿಂದ ಕೂಡಿದ ಕಣ್ಣು, ಬಿಳುಪೇರಿದ ಮುಖ, ಕಂಪಿಸುತ್ತಿದ್ದ ಕೈಕಾಲು… ಏನೋ ಆಗಿದೆಯೆಂದು ಅವರಿಗೆ ಖಂಡಿತ ತಿಳಿಯುತ್ತದೆ. ಏನು ಮಾಡಲಿ? ಎಂದು ಕೈ ಕೈ ಹಿಸುಕಿದಳು.

“ರತ್ನಾ…” ವಾಸು ಬಾಗಿಲನ್ನು ತಟ್ಟತೊಡಗಿದ.

ರತ್ನಾ ಹಿಂದಿನ ಬಾಗಿಲಿನ ಕಡೆ ನೋಡಿದಳು. ಇವರು ಮುಂದುಗಡೆ ನಿಂತಿರುವಂತೆಯೇ ಸದ್ದಿಲ್ಲದೆ ಹಿಂಬಾಗಿಲು ತೆಗೆದು ಹೊರಟು ಹೋಗಲೇ ಎಂಬ ಆಲೋಚನೆ ಬಂದಿತು. ಆದರೆ ಹೋಗುವುದಾದರೂ ಎಲ್ಲಿಗೆ? ರೂಪ, ಯೌವನ ಹೊತ್ತು ಹೋಗುವುದಾದರೂ ಎಲ್ಲಿಗೆ!

“ಲೇ ರತ್ನಾ… ಮಲಗಿಬಿಟ್ಟಿದ್ದೀಯಾ?”

ರತ್ನಾ ಯಾವುದೋ ಶಕ್ತಿಯಿಂದ ತಳ್ಳಲ್ಪಟ್ಟವಳಂತೆ ಮುಂದುವರಿದಳು. ಅವಳ ನಡಗುತ್ತಿದ್ದ ಕೈಗಳು ಅಗುಳಿಯನ್ನು ತೆಗೆದವು. ವಾಸು ಒಳಗೆ ಬಂದವನೇ ಹುಸಿಮುನಿಸಿನಿಂದ ಕೇಳಿದ.

“ರಾಣಿಯವರಿಗೆ ನಿದ್ದೆ ಬಂದಿತ್ತೇನೋ?” ವಾಸು ಕುರ್ಚಿಯ ಮೇಲೆ ಕುಳಿತು ಬೂಡ್ಸಿನ ದಾರ ಬಿಚ್ಚತೊಡಗಿದ.

”ಯಾಕೆ? ಮಾತೇ ಆಡೋಲ್ಲ? ಹೊತ್ತಾಗಿ ಬಂದೇಂತ ಕೋಪವೇ?”

”…”

ವಾಸು ತಲೆ ಎತ್ತಿ ಅವಳ ಮುಖ ನೋಡಿದ. ಅವನ ಮುಖದ ಮೇಲೆ ಅರಳುತ್ತಿದ್ದ ಹೂ ನಗೆ ಮುದುರಿಕೊಂಡಿತು.

“ಯಾಕೆ ರತ್ನ? ಊರಿನಿಂದ ಏನಾದರೂ ಕಾಗದ ಬಂದಿತ್ತೆ? ಎಲ್ಲಾರೂ ಹುಷಾರಾಗಿದಾರೆ ತಾನೆ?”

ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ

”ನನಗೇಕೋ ಈ ಮನೆ ಇಷ್ಟವಿಲ್ಲ. ಬಿಟ್ಟುಬಿಡೋಣ.” ರತ್ನ ಅವನ ಪ್ರಶ್ನೆಗೆ ಉತ್ತರ ಕೊಡದೇ ತನ್ನ ಮನಸ್ಸಿಗೆ ಹೊಳೆದ ಮಾತನ್ನಾಡಿದಳು. ವಾಸು ಬೆರಗಾಗಿ ನುಡಿದ

“ನನ್ನ ಪ್ರಶ್ನೆಗೆ ಉತ್ತರವೇ ಬರಲಿಲ್ಲ.”

“ಈ ಮನೆ ಬೇಡ. ಬಿಟ್ಟುಬಿಡೋಣ.”

“ಯಾಕೆ? ಈ ಮನೆ ಏನಾಗಿದೆ?” ವಾಸು ಅವಳನ್ನೇ ಅನುಸರಿಸಿ ಕೇಳಿದ.

“ಈ ಬೆಟ್ಟದ ಕಿಬ್ಬೇಲಿ ಒಂಟಿಯಾಗಿ ವಾಸಮಾಡೋದು ನನಗಿಷ್ಟವಿಲ್ಲ.”

“ಈ ಮನೆ ಚೆನ್ನಾಗಿಲ್ಲವೇ?”

”ಮನೆಯೇನೋ ಸೊಗಸಾಗಿದೆ. ಸುತ್ತ ಮುತ್ತ ಮನೆಗಳಿದ್ದರೇ ಚೆನ್ನಲ್ಲವೇ? ಹಗಲಿನಲ್ಲಿ ಬಂದು ತಲೆ ಒಡೆದರೂ ಯಾರೂ ಕೇಳುವ ಹಾಗಿಲ್ಲ.”

“ಆಗಲಿ. ಪ್ರಯತ್ನಿಸಿ ನೋಡುತ್ತೇನೆ.”

”ಪ್ರಯತ್ನಿಸುತ್ತೇನೆ ಎಂದರಾಗದು. ನಾನು ಇನ್ನೂ ಒಂದೆರಡು ದಿನ ಬದುಕಬೇಕೆಂದು ನಿಮಗಾಸೆಯಿದ್ದರೆ ಮನೆ ಮಾಡಿ.”

“ರತ್ನ!”

ರತ್ನ ಮುಖ ಬೇರೆ ಕಡೆ ತಿರುಗಿಸಿದಳು.

”ಯಾಕೆ ಹೀಗೆ ಮಾತನಾಡ್ತೀಯಾ? ಹುಷಾರಾಗಿದೀಯಾ?” ವಾಸು ಎದ್ದು ಮುಂದೆ ಬಂದು ತನ್ನ ಕೈಯನ್ನು ಅವಳ ಹಣೆಯ ಮೇಲಿಟ್ಟ.

ರತ್ನ ಬಿರುಸಾಗಿ ಅವನ ಕೈ ಕಿತ್ತುಹಾಕಿ “ಬಿಡಿ ನನಗೇನೂ ಸಾಯುವ ರೋಗ ಬಂದಿಲ್ಲ” ಎಂದಳು. ಅವಳ ದನಿ ಕಠೋರವಾಗಿತ್ತು. ವಾಸು ಹೆಂಡತಿಯಿಂದ ದೂರ ಸರಿದು ಅವಳನ್ನೇ ದಿಟ್ಟಿಸಿ ನೋಡಿದ. ರತ್ನ ಎಂದಿನಂತೆ ಇರುವ ಹಾಗೆ ತೋರಲಿಲ್ಲ. ಅವಳ ನಡೆ, ನುಡಿ ಪ್ರತಿಯೊಂದೂ ಬದಲಾಯಿಸಿತ್ತು. ಸ್ವಲ್ಪ ಹೊತ್ತು ಮಂಕನಂತೆ ಹೆಂಡತಿಯ ಮುಖವನ್ನೇ ನೋಡುತ್ತಿದ್ದು ಕೊನೆಗೆ ಮಾತು ಬದಲಾಯಿಸಲೆಂದು ಕೇಳಿದ.

“ಮಲ್ಲಿಗೆ ಹೂವೆಂದರೆ ನಿನಗೆ ಇಷ್ಟ. ತಂಡೆ ತಂದಿದ್ದರೂ ಯಾಕೆ ಮುಡಿಯಲಿಲ್ಲ?”

ರತ್ನಳ ಎದೆಗೆ ಹಾರೆ ನಾಟಿದಂತಾಯಿತು, “ಹೂಂ… ಹೀಗೆ… ಸಂಜೀವರಾಯರ ಹೆಂಡತಿ ಬಂದಿದ್ದರು. ಅವರಿಗೆ ಮುಡಿಯಲು ಕೊಟ್ಟುಬಿಟ್ಟೆ.”

”ಒಳ್ಳೆಯದಾಯಿತು. ಹೊಸ ಹೂವು ತಂದಿದೇನೆ ಮುಡಿದುಕೋ” ಎನ್ನುತ್ತಾ ವಾಸು ಚೀಲಕ್ಕೆ ಕೈ ಹಾಕಿ ಹೂವಿನ ಪೊಟ್ಟಣವನ್ನು ಈಚೆಗೆ ತೆಗೆದ. ರತ್ನ ಬೇಸರಗೊಂಡವಳಂತೆ ನುಡಿದಳು.

“ಇರಲಿ ಬಿಡಿ. ನೀವು ಊಟ ಮಾಡಿ ಬನ್ನಿ. ನಾಳೆ ಬೆಳಿಗ್ಗೆ ಮುಡಿದರಾಯಿತು.” ರತ್ನ ಮಾತಿಗೆ ಅಲ್ಲಿ ನಿಲ್ಲದೆ ಒಳಗೆ ಹೋದಳು.

ಇದನ್ನು ಓದಿದ್ದೀರಾ?: ತರಾಸು ಅವರ ಕತೆ | ಇನ್ನೊಂದು ಮುಖ

ವಾಸು ಹೆಂಡತಿಯನ್ನು ಹಿಂಬಾಲಿಸಿದ. ಮೌನದಲ್ಲೇ ಊಟ ಸಾಗಿತು. ವಾಸು ಕೇಳಿದ ಪ್ರಶ್ನೆಗಳಿಗೆಲ್ಲ ರತ್ನ ಮೊಟಕಾಗಿ ಉತ್ತರ ಕೊಡುತ್ತಿದ್ದಳು. ಮಜ್ಜಿಗೆ ಬಡಿಸಲು ರತ್ನ ಬಾಗಿದಾಗ ವಾಸು ಅವಳ ಕೈ ಗಮನಿಸಿ ಕೇಳಿದ.

“ಬಳೆಗಳು ಏನಾದವು ರತ್ನಾ? ಕೈ ಬೇರೆ ಎರಡು ಕಡೆ ಗಾಯವಾಗಿದೆ?” ಗಂಟಲಿನವರೆಗೆ ಉಕ್ಕಿ ಬಂದ ಸತ್ಯವನ್ನು ರತ್ನ ಪ್ರಯಾಸದಿಂದ ನುಂಗಿ ಹೇಳಿದಳು.

“ಹಂಡೆಗೆ ನೀರು ತೋಡುವಾಗ ಕಾಲು ಜಾರಿ ಬಿದ್ದೆ. ಬಳೆಗಳೆಲ್ಲಾ ಒಡೆದುಹೋದವು.”

“ಏನೇ ಹುಡುಗಿ, ಸರಿಯಾಗಿ ಓಡಾಡಲು ಸಹ ಬರುವುದಿಲ್ಲ, ಎಂತಹ ಹೆಂಗಸಪ್ಪ” ಎನ್ನುತ್ತಾ ವಾಸು ಎಂಜಲ ಕೈಯಿಂದಲೇ ಅವಳ ಕೆನ್ನೆ ಚಿವುಟಿದ. ರತ್ನ ಹನಿಗೂಡಿದ ಕಣ್ಣುಗಳನ್ನು ಅಡಗಿಸಲು ಅವನಿಂದ ದೂರ ಸರಿದು ಹೋದಳು. ವಾಸು ತನ್ನೂಟ ಮುಗಿಸಿ,

“ನೀನು ಕುಳಿತುಕೋ, ನಾನು ಬಡಿಸುತ್ತೇನೆ” ಎಂದ.

“ನನಗೆ ಊಟ ಸೇರುವುದಿಲ್ಲ.”

“ಸ್ವಲ್ಪ, ನಾನೇ ಮಾಡಿಸುತ್ತೇನೆ… ಆಂ?”

“ಬೇಡ” ಎನ್ನುತ್ತಾ ವಾಸುವಿಗಿಂತಲೂ ಮುಂದಾಗಿ ಹೊರಗೆ ಬಂದಳು. ವಾಸು ರೂಮಿನೊಳಗೆ ಬಂದ. ರತ್ನ ಅವನ ಮುಂದೆ ಎಲೆ ಅಡಿಕೆ ತಟ್ಟೆಯನ್ನು ತಳ್ಳಿ, ಹಾಸಿಗೆಯ ಮೇಲೆ ಉರುಳಿ ಗೋಡೆಯ ಕಡೆ ಮುಖ ಮಾಡಿಕೊಂಡು ಕಣ್ಣು ಮುಚ್ಚಿದಳು.

ವಾಸುವಿಗೆ ಈಗ ಮಾತ್ರ ತುಂಬಾ ಬೇಸರವಾಯಿತು. ಹಗಲೆಲ್ಲಾ ದುಡಿದು ಮನೆಗೆ ಬಳಲಿ ಬಂದ ಅವನಿಗೆ ಹೆಂಡತಿಯ ನಗುಮುಖ, ಮಾತು, ಕತೆ, ಸರಸ ಬೇಕಾಗಿತ್ತು. ಬಳಲಿದ ಮನಸ್ಸಿಗೆ ಹೆಂಡತಿಯ ಸ್ನೇಹ, ಪ್ರೇಮ, ಬೇಕಿತ್ತು. ಎಂದಿನ ಸರಸ, ಜಗಳ, ಮಾತುಕತೆಯಿಲ್ಲದೆ ಅವನಿಗೆ ದಿನ ನೀರಸವಾಗಿ ತೋರಿತು. ರತ್ನ ಎಂದೂ ಹೀಗೆ ಮಾಡಿದವಳಲ್ಲ. ಅವಳ ವಿಚಿತ್ರ ವರ್ತನೆಗೆ ಏನೋ ಕಾರಣವಿರಲೇಬೇಕು.

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ವಾಸು ರತ್ನಳನ್ನು ಬಲವಂತದಿಂದ ತನ್ನ ಕಡೆಗೆ ತಿರುಗಿಸಿಕೊಂಡ. ರತ್ನ ಕಣ್ಣಿನ ಮೇಲೆ ಕೈ ಇಟ್ಟುಕೊಂಡಳು. ವಾಸು ಅವಳ ಕೈ ಕೀಳಲು ಪ್ರಯತ್ನಿಸಿದ.

“ದೀಪದ ಬೆಳಕು ಚುಚ್ಚುತ್ತದೆ.”

“ನನ್ನ ಕಡೆ ನೋಡು” ಎಂದು ಬಲವಂತದಿಂದ ವಾಸು ಅವಳ ಕೈ ತೆಗೆದ. ರತ್ನ ಗಂಡನ ಕಡೆ ನೋಡಲು ಅಂಜಿದಳು. ಅಳುಕಿದಳು.

“ನನ್ನ ಕಡೆ ನೋಡಲು ಯಾಕಿಷ್ಟು ಹೆದರುತ್ತೀಯಾ? ನಾನೇನು ಹುಲಿಯೇ?” ವಾಸು ಮಾತನಾಡುತ್ತಾ ಅವಳ ಮುಖವನ್ನು ಕೈಯಿಂದ ಸವರಿದ. ಹಣೆಯ ಮೇಲೆ ಬಂದಿದ್ದ ಮುಂಗುರುಳುಗಳನ್ನು ಹಿಂದೆ ತಳ್ಳಿದ.

“ರತ್ನಾ, ಇದೇನು? ಮುಖದ ಮೇಲೆ ಗಾಯವಾಗಿದೆ? ಏನಾಯಿತು ಹೇಳಬಾರದೇ? ನನ್ನೊಡನೆಯೂ ಸಂಕೋಚವೇ? ಕೆನ್ನೆಯ ಮೇಲೆ ಹಲ್ಲಿನ ಗುರುತಿದೆ. ಹಲ್ಲು ವಿಷ ರತ್ನಾ, ಔಷಧಿ ಸಹ ಹಾಕಿಲ್ಲ. ನಂಜಾದರೆ? ಯಾಕೆ ಹೀಗಾಯಿತು?”

“ಸಂಜೀವರಾಯರ ಮಗು ಬೇಬಿ ಬಂದಿತ್ತು. ಎತ್ತಿಕೊಂಡೆ. ಅವನು ಕೆನ್ನೆಯನ್ನೆಲ್ಲಾ ಸಿಟ್ಟಿಗೆ ಕಚ್ಚಿಬಿಟ್ಟ…!”

”ಔಷಧಿ ಹಾಕಬಾರದೇ? ಇನ್ನು ಮೇಲೆ ಬೇಬಿಯನ್ನು ಎತ್ತಿಕೊಳ್ಳಬೇಡ. ಅವನು ತುಂಟ. ವ್ಯಾಸಲೀನ್ ಎಲ್ಲಿ… ಜಾಂಬಕ್…” ವಾಸು ಗಡಿಬಿಡಿಯಿಂದ ಮನೆಯನ್ನೆಲ್ಲಾ ಹುಡುಕತೊಡಗಿದ.

”ಇರಲಿ ಬಿಡಿ. ಅದೇನಾಗುವುದಿಲ್ಲ.”

ವಾಸು ಹೆಂಡತಿಯ ಮಾತಿಗೆ ಕಿವಿಗೊಡದೇ ಜಾಂಬಕ್ ಹುಡುಕಿ ತಂದು ಅವಳ ಕೆನ್ನೆಗೆ ಸವರಿದ.

“ಈಗ ಉರಿ ಕಡಿಮೆಯಾಯಿತೇ?”

“ಹೂಂ”

”ಇನ್ನು ನನ್ನ ತೋಳಿಗೆ ಬರಲು ಅಡ್ಡಿಯಿಲ್ಲವಷ್ಟೇ?” ವಾಸು ತೋಳು ನೀಡಿದ.

”ನನಗೆ ನಿದ್ದೆ ಬರುತ್ತಿದೆ” ಎಂದು ವಾಸುವಿನ ಕಡೆ ನೋಡದೆ ಮಲಗಿ ಮುಸುಕು ಹಾಕಿಕೊಂಡಳು.

ರತ್ನಳಿಗೆ ಒಂದು ಗಳಿಗೆ ಸಹ ನಿದ್ದೆ ಬರಲಿಲ್ಲ. ಅಶಾಂತಿಯಿಂದ ಹಾಸಿಗೆಯ ಮೇಲೆ ಹೊರಳಾಡಿದಳು. ”ವಿಷ… ಹಲ್ಲು ವಿಷ…”

ರತ್ನಳ ಹೃದಯ ಹಿಂಡಿಹೋಯಿತು. ಬಾಯಿ ಬಿಚ್ಚಿ ಗಂಡನೊಡನೆ ನಡೆದ ಪ್ರಸಂಗ ಹೇಳಲಾರಳು, ಹೇಳದಿರಲಾರಳು. ಇಕ್ಕಳದ ನಡುವೆ ಸಿಕ್ಕಿಬಿದ್ದ ಅವಳ ಕೋಮಲ ಹೃದಯ ತತ್ತರಿಸಿತು. ರತ್ನ ಸಿಡಿಯುತ್ತಿದ್ದ ತಲೆಯನ್ನು ಎರಡು ಕೈಗಳಿಂದಲೂ ಒತ್ತಿ ಹಿಡಿದು ವಿಹ್ವಲಳಾಗಿ ಮಲಗಿ ನಿದ್ರಿಸುತ್ತಿದ್ದ ವಾಸುವನ್ನು ದೈನ್ಯದಿಂದ ನೋಡಿದಳು.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ವಾಸು ಶಾಂತನಾಗಿ ನಿದ್ರಿಸುತ್ತಿದ್ದ. ಬೆಳದಿಂಗಳ ಕಾಂತಿಯಲ್ಲಿ ಅವನ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಿದ್ರೆಯ ಮೋಡಿಗೆ ಸೆರೆಸಿಕ್ಕಿದ್ದ ಮುಖದಲ್ಲಿ ಹಾಲುಕಂದನ ಮುಗ್ಧತೆಯಿತ್ತು. ವಾಸು ನಿದ್ದೆಯಲ್ಲಿಯೇ ಕನವರಿಸಿದ.

“ರತ್ನಾ… ಗಾಯ… ಹೀಗೇಕಿದೀ…”

ರತ್ನಳ ಹೃದಯ ತುಂಬಿ ಬಂತು. ಕನಸಿನಲ್ಲೂ ವಾಸುವಿಗೆ ತನ್ನದೇ ಧ್ಯಾನ! ವಾಸುವಾದರೂ ತನ್ನನ್ನೇಕೆ ಇಷ್ಟು ಪ್ರೀತಿಸಬೇಕು. ಸ್ವಲ್ಪ ಕಡಿಮೆ ಪ್ರೀತಿಸಬಾರದೇ? ರತ್ನಳಿಗೆ ಪ್ರೀತಿ ಉಕ್ಕಿಬಂತು. ವಾಸುವಿನ ಹಣೆಯ ಮೇಲೆ ಮುತ್ತನ್ನೊತ್ತಲು ರತ್ನ ಬಾಗಿದಳು. ಸಿಗರೇಟಿನ ಹೊಗೆ, ಸುಗಂಧ, ಬಯಕೆ ತುಂಬಿದ ಕಣ್ಣು, ಉನ್ಮತವಾದ ಮುಖ ವಾಸುವಿಗೂ, ಅವಳಿಗೂ ನಡುವೆ ತೇಲಿಬಂತು. ರತ್ನ ಬೆಚ್ಚಿ ಹಿಂದೆ ಸರಿದಳು.

ರತ್ನಳ ಹಠವನ್ನು ಮೂಲೆಗೊತ್ತಲಾರದೇ ವಾಸು ಅವಳ ಅಪೇಕ್ಷೆಯಂತೆ ಜನನಿಬಿಡವಾಗಿದ್ದ ಜಾಗದಲ್ಲಿ ಮನೆ ಬಾಡಿಗೆಗೆ ತೆಗೆದುಕೊಂಡ. ಬೇರೆ ಮನೆಗೆ ಹೋದರೆ ರತ್ನಳ ವಿಚಿತ್ರ ವರ್ತನೆ ದೂರವಾಗಬಹುದು ಎಂಬ ಆಸೆಯೂ ಇತ್ತು. ಬೇರೆ ಮನೆಗೆ ಬಂದು ಸುಮಾರು ಎರಡು ತಿಂಗಳಾಗಿದ್ದರೂ ತನ್ನ ಕೆಲವು ಬಾರಿ ಅಪರಿಚಿತಳಂತೆ ವರ್ತಿಸುತ್ತಿದ್ದಳು. ತಾನು ಗರ್ಭಿಣಿಯಿರಬಹುದೆಂಬ ಸಂದೇಹ ಬಂದೊಡನೆ ರತ್ನಳಿಗೆ ಹುಚ್ಚು ಹಿಡಿದಂತಾಯಿತು. ಬೆಂಕಿಗೆ ಬಿದ್ದ ಹುಳುವಿನಂತೆ ಅವಳ ಮನಸ್ಸು ಒದ್ದಾಡಿತು.

‘ಆ ದುರಂತ ರಾತ್ರಿಯ ಪರಿಣಾಮವೇ ಇದಾಗಿದ್ದರೆ? ಆ ರಾತ್ರಿಯ ಪರಿಣಾಮವೇ ಇರಬೇಕು. ಅಥವಾ ಮಗು ತಮ್ಮದೇ ಇದ್ದರೂ ಇರಬಹುದು. ತನ್ನ ಮತ್ತು ವಾಸುವಿನ ಪ್ರೇಮಫಲವೇ ಇರಬಹುದು. ಊಹೂಂ… ಎಂದಿಗೂ ಸಾಧ್ಯವಿಲ್ಲ. ತಮಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ತಮಗೇ ಮಕ್ಕಳಾಗುವ ಹಾಗಿದ್ದ ಪಕ್ಷದಲ್ಲಿ ಬಹಳ ಮುಂಚೆಯೇ ಆಗುತ್ತಿತ್ತು. ಇಷ್ಟು ತಡವಾಗಲು ಕಾರಣವೇ ಇರಲಿಲ್ಲ. ಮಗು ಜನಿಸಿದ ಮೇಲೆ ತನ್ನ ಪಾಡು ನಾಯಿಪಾಡಾಗುವುದರಲ್ಲಿ ಸಂಶಯವೇ ಇಲ್ಲ. ಆ ಮಗುವಿನ ಕೆಟ್ಟ ಮುಖ ಪ್ರತಿ ಗಳಿಗೆ, ಪ್ರತಿ ಕ್ಷಣವೂ ಆ ಪಾಪಿಯ ಮುಖವನ್ನು ನೆನಪಿಗೆ ತರುತ್ತದೆ. ತಾನು ಯಾವುದನ್ನು ಮರೆಯಲು ಪ್ರಯತ್ನಿಸುತ್ತಿದ್ದಳೋ ಅದು ನಿರಂತರವೂ ತನ್ನ ಮುಂದೆ ರೂಪತಾಳಿ, ಬೃಹದಾಕಾರ ತಾಳಿ ಓಡಾಡುತ್ತದೆ…’

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ಸಾಗರದ ನಡುವೆ ಅಲೆಗಳ ಹೊಡೆತಕ್ಕೆ ಸಿಕ್ಕಿದ ಕಿರುದೋಣಿಯಂತೆ ಅವಳ ಮನಸ್ಸು ಹೊಯ್ದಾಡಿತು.

ಅಂದಿನಿಂದ ರತ್ನ ವಾಸುವಿನಿಂದ ಮತ್ತಷ್ಟು ದೂರ ಸರಿಯಲು ಪ್ರಯತ್ನಿಸಿದಳು. ಪಾಪದ ಹೊರೆಯನ್ನು ಹೊತ್ತೇ ಗಂಡನಿಗೆ ಮೋಸ ಮಾಡುವುದೇ? ಹಾಳು ಋಣ, ಯಾವ ಜನ್ಮದಲ್ಲಿ ಮಾಡಿದ ಪಾಪವೋ, ಆ ರಾತ್ರಿಗೆ ಹರಿಯಲಿಲ್ಲ. ತನ್ನೊಡನೆಯೇ ತನ್ನೊಂದಿಗೇ ಒಂದಾಗಿ ಹೀಗೆ ಬೆಳೆದು ಬಂದ ಸರ್ವನಾಶ ಮಾಡಬಹುದೆಂದು ರತ್ನ ಎಣಿಸಿರಲಿಲ್ಲ. ಕೆಲವು ಬಾರಿ ಮಿತಿಮೀರಿ ಬಂದ ಪ್ರೀತಿಯಲ್ಲಿ ಗಂಡನೊಡನೆ ಚಿನ್ನಾಟವಾಡುತ್ತಿರುವಾಗಲೇ, ತನ್ನ ಸ್ಥಿತಿ ನೆನಪಿಗೆ ಬಂದು ಫಕ್ಕನೆ ಮೌನ ತಾಳಿ ದೂರ ಸರಿಯುತ್ತಿದ್ದಳು. ಚಂಡಿ ಹಿಡಿದ ಮಗುವಿನಂತೆ ಮೊಂಡತನದಿಂದ ಗಂಡನ ಪ್ರೇಮದ ಕರೆಗೆ ‘ಓ’ಗೊಡುತ್ತಿರಲಿಲ್ಲ.

ರತ್ನ ತಾಯಿಯಾಗುವಳೆಂದು ತಿಳಿದು ವಾಸುವಿಗೆ ಸಂತೋಷವಾಯಿತು. ಒಂದು ದಿನ ರತ್ನಳನ್ನು ಕೀಟಲೆ ಮಾಡುತ್ತಾ ‘ರತ್ನ, ಮಗನೋ ಮಗಳೋ?’ ಎಂದು ತನ್ನ ಸಂತೋಷದ ಪ್ರತಿಬಿಂಬವನ್ನೇ ಅವನು ರತ್ನಳಲ್ಲೂ ನಿರೀಕ್ಷಿಸಿದ್ದ. ಬದಲು ಅವಳ ಮುಖದ ಮೇಲೆ ದುಗುಡ, ಕಳವಳ ಮೂಡಿದವು. ವಾಸುವಿನ ಉತ್ಸಾಹ ಹಿಗ್ಗು ನೋಡಿ ರತ್ನಳಿಗೆ ಹುಚ್ಚಿಯಂತೆ ‘ಯಾಕೆ ಹಿಗ್ಗುತ್ತೀರಿ? ಇದು ನಿಮ್ಮ ಮಗುವಲ್ಲ’ ಎಂದು ಚೀರಬೇಕೆನಿಸುತ್ತಿತ್ತು. ದಾವಾಗ್ನಿಯಂತೆ ದಹಿಸುತ್ತಿದ್ದ ಪಾಪದ ಹೊರೆಯನ್ನು ಬಗೆದು ಹೊರಗೆ ಬಿಸಾಡಬೇಕೆನಿಸುತ್ತಿತ್ತು.

“ಯಾಕೆ ಹುಡುಗೀ, ಮಾತಾಡೋಲ್ಲ.”

”…”

ಅವಳ ನಿಸ್ತೇಜವಾದ ಮುಖ, ಕಾಂತಿಶೂನ್ಯ ನಯನಗಳು ಗಂಟಿಕ್ಕಿದ ಹುಬ್ಬು ನೋಡಿ ವಾಸು ಚಕಿತನಾದ. ಹತ್ತಿರ ಬಂದು ಅವಳ ಕೈಹಿಡಿದು ಮೃದುವಾಗಿ ಕೇಳಿದ.

“ಯಾಕೆ, ನಿನಗೆ ಮಗು ಬೇಕಿರಲಿಲ್ಲವೇ?” ರತ್ನ ಅವನ ಕೈಕೊಸರಿ ಓಡಿಹೋಗಿ ರೂಮಿನ ಬಾಗಿಲನ್ನು ಧಡಾರನೆ ಹಾಕಿಕೊಂಡು ಹಾಸಿಗೆಯ ಮೇಲೆ ಬೋರಲಾಗಿ ಮಲಗಿ ಅಳತೊಡಗಿದಳು. ವಾಸುವಿಗೆ ರತ್ನ ಬಿಕ್ಕಳಿಸಿ ಅಳುತ್ತಿರುವ ಸದ್ದು ಕೇಳಿಸಿತು. ಬಾಗಿಲಿನ ಮುಂದೆ ನಿಂತು ಹೆಂಡತಿಯ ಹೆಸರು ಹಿಡಿದು ಕೂಗಿದ. ಆದರೆ ರತ್ನ ಮಾತನಾಡಲಿಲ್ಲ.

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

ಹಾಗಾದರೆ ರತ್ನಳಿಗೆ ಮಗು ಬೇಕಿರಲಿಲ್ಲವೇ? ಅವಳಿಗೆ ತಾಯಿಯಾಗುವುದು ಇಷ್ಟವಿರಲಿಲ್ಲವೇ? ದಾಂಪತ್ಯ ಜೀವನ ಪ್ರಾರಂಭವಾಗಿ ನಾಲ್ಕು ವರ್ಷಗಳು ಕಳೆದಿದ್ದರೂ ತನಗಿನ್ನೂ ಮಕ್ಕಳಾಗಲಿಲ್ಲವೆಂದು ರತ್ನ ಅನೇಕ ಬಾರಿ ವೃಥೆಯ ಮಾತುಗಳನ್ನು ಆಡಿದ್ದಳು. ಮಕ್ಕಳಾಗಲಿಲ್ಲವೆಂಬ ಕೊರಗು ಅವಳಲ್ಲಿದೆಯೆಂದು ವಾಸು ರತ್ನಳ ಮಾತುಕತೆ, ರೀತಿಯಿಂದ ತಿಳಿದುಕೊಂಡಿದ್ದ. ‘ನಾವೇನೂ ಮುದುಕರಾಗಿಲ್ಲವಲ್ಲ’ ಎಂದು ಅವನೇ ಅವಳ ವ್ಯಥೆಯನ್ನು ಎಷ್ಟೋ ಬಾರಿ ದೂರಮಾಡಿದ್ದ. ಈ ಸುದಿನಕ್ಕಾಗಿ, ಶುಭ ಸುದ್ದಿಗಾಗಿ ತಾವಿಬ್ಬರೂ ಏಕಮನಸ್ಕರಾಗಿ ಕಾಯುತ್ತಿರುವಾಗ, ರತ್ನ ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ಬೆರಗಾದ.

ಬಸುರಿನೊಡನೆ ಅವಳ ಮನೋವ್ಯಥೆ, ಆತಂಕವೂ ಬೆಳೆಯತೊಡಗಿತು. ಪ್ರತಿ ಕ್ಷಣವೂ ಮಗು ಯಾರದು ಎಂಬ ಜಿಜ್ಞಾಸೆಯಲ್ಲಿ ಅವಳ ಮನಸ್ಸು ತೊಡಗುತ್ತಿತ್ತು. ಯಾವ ರೋಗವಿಲ್ಲದಿದ್ದರೂ ಅವಳ ದೇಹ ಒಣಗತೊಡಗಿತು. ವಾಸು ಹೆಂಡತಿಗೆ ಯಾವುದನ್ನೂ ಕಡಿಮೆ ಮಾಡಿರಲಿಲ್ಲ. ಹಾಲು, ಹಣ್ಣಿಗೆ ಕೊರತೆ ಮಾಡದಿದ್ದರೂ ಹೆಂಡತಿ ದಿನದಿನಕ್ಕೆ ಸವೆಯುತ್ತಿರುವುದನ್ನು ಅವನೂ ಗಮನಿಸಿದ್ದ. ರತ್ನಳನ್ನು ಅಕ್ಕರೆಯಿಂದ, ಕೋಪದಿಂದ, ದೈನ್ಯದಿಂದ ಬಗೆಬಗೆಯಾಗಿ ಪ್ರಶ್ನಿಸಿ ವಿಫಲನಾಗಿದ್ದ. ಹೆಂಡತಿಯ ಹೃದಯವನ್ನು ಕೊರಗಿನ ಕೀಟ ತಿನ್ನುತ್ತಿದೆಯೆಂದು ವಾಸು ಅರಿತಿದ್ದ. ಅವಳ ಮನೋವೇದನೆಯನ್ನರಿತು ಸಮಾಧಾನಮಾಡುವುದು ಅವನಿಂದ ಸಾಧ್ಯವಾಗಲಿಲ್ಲ. ಆದರೂ ರತ್ನಳನ್ನು ಒಬ್ಬಳೇ ಚಿಂತಿಸುತ್ತಾ ಕಾಲಕಳೆಯಲು ವಾಸು ಬಿಡುತ್ತಿರಲಿಲ್ಲ. ಗಲ್ಲಕ್ಕೆ ಕೈಕೊಟ್ಟು ತನ್ನ ಯೋಚನೆಯಲ್ಲಿ ಮುಳುಗಿದ್ದ ಹೆಂಡತಿಯ ಭುಜ ತಟ್ಟಿ,

“ಏಳು ರತ್ನ ಒಳ್ಳೇ ಸಿನಿಮಾ ಬಂದಿದೆ ಹೋಗೋಣ. ನನಗೂ ಈ ದಿನ ಮನಸ್ಸಿಗೆ ಬೇಜಾರಾಗಿದೆ” ಎಂದ.

“ನಾನು ಬರೋದಿಲ್ಲ. ನೀವು ಹೋಗಿ.” ರತ್ನ ಮೊಟಕಾಗಿ ಉತ್ತರ ಹೇಳಿದಳು. ಈ ರೀತಿಯ ಮಾತುಗಳು ವಾಸುವಿಗೆ ಹೊಸದಾಗಿರಲಿಲ್ಲ.

”ಬಿಡು ನಾನೂ ಹೋಗುವುದಿಲ್ಲ” ಎಂದು ವಾಸು ಪೆಚ್ಚಾಗಿ ಹೇಳಿದ. ಅವನ ಪೆಚ್ಚುಮುಖ ನೋಡಿ ರತ್ನಳ ಮನಸ್ಸು ಕರಗಿತು. ವಾಸುವಿನ ಪ್ರೇಮದಾಳವನ್ನೂ, ಅವನು ತನ್ನನ್ನು ಪ್ರಸನ್ನಗೊಳಿಸಲು ಮಾಡುತ್ತಿರುವ ಪ್ರಯತ್ನಗಳನ್ನೂ ರತ್ನ ತಿಳಿದಿದ್ದಳು. ಹೆಚ್ಚು ಬಾರಿ ತನ್ನ ಮನಸ್ಸಿನ ಅಳಲಿನಿಂದಾಗಿ ವಾಸುವಿಗೆ ವಿರುದ್ಧವಾಗಿ ವರ್ತಿಸಿ ಅವನ ಮನಸ್ಸನ್ನು ನೋಯಿಸಿದ್ದಳು, ವಾಸುವನ್ನು ಪ್ರತಿಬಾರಿ ಗಾಸಿಗೊಳಿಸಿದಾಗಲೂ ಅವಳ ಮನಸ್ಸು ನೋಯುತ್ತಿತ್ತು. ಈ ದಿನ ಅವನ ಸಪ್ಪೆ ಮುಖ ನೋಡಿ ಸುಮ್ಮನಿರಲು ರತ್ನಳಿಗೆ ಸಾಧ್ಯವಾಗಲಿಲ್ಲ.

ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

”ಬನ್ನಿ ಹೋಗೋಣ” ಎಂದಳು.

ಹೆಂಡತಿಯಿಂದ ಇಷ್ಟು ಉತ್ತರ ಬಂದಿದ್ದು ಕೇಳಿ ವಾಸು ಆನಂದದಿಂದ ”ಒಳ್ಳೆಯದು, ಇವತ್ತು ನಾನು ಹೇಳಿದ ಹಾಗೆ ಅಲಂಕಾರ ಮಾಡಿಕೋ. ಕಪ್ಪು ಒಡಲಿನ ಮೇಲೆ ಬಿಳಿ ಚುಕ್ಕೆ ಇರುವ ಸೀರೆ ಉಟ್ಟುಕೋ. ಆ ಸೀರೆ ನಿನಗೆ ತುಂಬ ಚೆನ್ನಾಗಿ ಒಪ್ಪುತ್ತದೆ, ನೀನು ಆ ಸೀರೆಯನ್ನು ಈಚೆಗೆ ಉಟ್ಟಿರುವ ಹಾಗೆ ತೋರಲಿಲ್ಲ” ಎಂದ.

ಪ್ರೀತಿಯಿಂದ ಗಂಡನ ಬಳಿ ಬಂದು ನಿಂತಿದ್ದ ರತ್ನ ಅವನ ಮಾತು ಕೇಳಿ ಹಾವು ಮೆಟ್ಟಿದವಳಂತೆ ಹಿಂದಕ್ಕೆ ಸರಿದಳು.

”ಸೀರೆ! ಆ ಸೀರೆ ಹರಿದು ಹೋಗಿತ್ತು. ಒಕ್ಕಲಗಿತ್ತಿಗೆ ಕೊಟ್ಟುಬಿಟ್ಟೆ.”

ವಾಸು ಆಶ್ಚರ್ಯದಿಂದ ಕೇಳಿದ, “ಹಾಗಂದರೇನು ರತ್ನಾ? ಸೀರೆಯನ್ನು ತಂದು ಇನ್ನೂ ನಾಲ್ಕು ತಿಂಗಳು ಸಹ ಆಗಿಲ್ಲ. ಇಷ್ಟು ಬೇಗ ಹರಿದು ಹೋಯಿತೇ?”

ವಾಸು ತನ್ನ ಮಾತನ್ನು ನಂಬಲೇಬೇಕೆನ್ನುವಂತೆ ಒತ್ತಿ ನುಡಿದಳು: “ಇಲ್ಲ. ಆ ಸೀರೆ ಹರಿದುಹೋಯಿತು.”

ಈ ಮಾತು ಅವಳಿಂದ ಸಹಜವಾಗಿ ಬಂದಿಲ್ಲವೆಂದು ವಾಸುವಿಗೆ ಕೂಡಲೇ ಹೊಳೆಯಿತು. ಹೆಂಡತಿಯ ಅಂತರಂಗವನ್ನು ಬಗೆದುನೋಡುವವನಂತೆ ಅವಳನ್ನೇ ದಿಟ್ಟಿಸಿ ನೋಡಿದ. ಜೇನಿನ ಬಣ್ಣದ ಕಣ್ಣಿನ ತೀಕ್ಷ್ಣತೆಯನ್ನು ತಡೆಯಲಾರದೆ ರತ್ನ ಎದ್ದು ಒಳಗೆ ಹೋದಳು.

ಹೆರಿಗೆಯ ದಿನ ಸಮೀಪಿಸಿದಂತೆ ರತ್ನಳ ದುಗುಡ ಹೆಚ್ಚಾಯಿತು. ಕೇಳಿದ ಪ್ರಶ್ನೆಗೆ ಮಾತ್ರ ಅವಳಿಂದ ಉತ್ತರ ಬರುತ್ತಿತ್ತು. ‘ಮಗು ಗಂಡನ ಹಾಗಿದ್ದರೆ?’ ಹೃದಯದ ಮೇಲಿನ ಬೆಟ್ಟ ಉರುಳಿಬಿದ್ದಷ್ಟು ಹಗುರವಾಗುತ್ತದೆ. ವಾಸುವಿನದೇ ಜೇನಿನ ಬಣ್ಣದ ಕಣ್ಣು, ಕೆಂಚು ಕೂದಲು, ತಿಳಿಯಾದ ಮೈ ಬಣ್ಣ…. ಮಗು ಗಂಡನ ಹಾಗಿರಲು ಸಾಧ್ಯವೇ ಇಲ್ಲ. ಮಗು ಅವರದಾಗಿದ್ದರೆ ತಾನೇ? ಕಪ್ಪು ಕಣ್ಣು, ಕಪ್ಪು ಕೂದಲು, ಕಪ್ಪು ಬಣ್ಣದ ಮಗು ಅವಳಿಗೆ ಅಸ್ಪಷ್ಟವಾಗಿ ಗೋಚರವಾಯಿತು. ರತ್ನ ಭೀತಿಯಿಂದ ನಡುಗಿ ಕಣ್ಣು ಮುಚ್ಚಿಕೊಂಡಳು.

ಪ್ರಸವ ವೇದನೆಗಿಂತಲೂ ರತ್ನಳಿಗೆ ಮನೋವೇದನೆಯೇ ಹೆಚ್ಚು ಯಾತನಾಮಯವಾಗಿತ್ತು. ಅಂತಹ ವಿಷಮ ಪರಿಸ್ಥಿತಿಯಲ್ಲೂ ರತ್ನ ಪರೀಕ್ಷಕಳಂತೆ ಡಾಕ್ಟರು, ನರ್ಸುಗಳ ಮುಖವನ್ನು ಪರೀಕ್ಷಿಸುತ್ತಿದ್ದಳು. ಪ್ರತಿಯೊಬ್ಬರೂ ಕುಹಕದಿಂದ ಅವಳ ಕಡೆ ನೋಡುತ್ತಿರುವಂತೆ ಭಾಸವಾಯಿತು. ನರ್ಸೊಬ್ಬಳು ಸಹೋದ್ಯೋಗಿಯೊಡನೆ ಏನನ್ನೋ ಪಿಸುಗುಟ್ಟಿದಳು. ಇಬ್ಬರೂ ನಕ್ಕರು. ರತ್ನ ಅವರನ್ನೇ ದುರುಗಟ್ಟಿ ನೋಡಿದಳು. ಏನು ಹೇಳಿರಬಹುದು? ಇಬ್ಬರೂ ತನ್ನನ್ನೇ ನೋಡಿ ನಕ್ಕಿರಬೇಕು. ಏನು ಪಿಸುಗುಟ್ಟಿರಬಹುದು? ಈಕೆ ಪತಿತೆ. ಈಗ ಇವಳಿಗೆ ಹುಟ್ಟಲಿರುವ ಮಗು ಇವಳದಲ್ಲ. ಈಕೆಗೆ ಯಾರೊಬ್ಬನಿಂದಲೋ ಜನಿಸಿದುದು… ‘ಏನ್ರಿ ರತ್ನಮ್ಮ? ಮಗು ನಿಮ್ಮ ಹಾಗೂ ಇಲ್ಲ, ನಿಮ್ಮ ಯಜಮಾನರ ಹಾಗೂ ಇಲ್ಲ. ಯಾರ ಹಾಗಿದೆ’ ಎಂದು ನೆರೆಮನೆಯ ಪಾರ್ವತಮ್ಮ ಕೇಳಿದರೆ? ಹೆರಿಗೆ ಕೊಠಡಿಯ ಪ್ರತಿಯೊಂದು ವಸ್ತುವೂ ಅವಳನ್ನು ನೋಡಿ ಅಣಕಿಸಿ ನಕ್ಕಂತೆ ಭಾಸವಾಯಿತು. ರತ್ನ ಚಿಟ್ಟನೆ ಚೀರಿದಳು.

ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು

ಅವಳಿಗೆ ಎಚ್ಚರವಾದಾಗ ನೋವಿರಲಿಲ್ಲ. ಸುತ್ತಲೂ ಭೀಕರ ಮೌನ ಕವಿದಿತ್ತು. ರತ್ನ ಕಿಟಕಿಯ ಕಡೆ ನೋಡಿದಳು. ಆಕಾಶದಲ್ಲಿ ಅಸಂಖ್ಯ ತಾರೆಗಳು ಮಿನುಗುತ್ತಿದ್ದವು. ಹಾಗಾದರೆ ಮಗು ಹುಟ್ಟಿ ಅನೇಕ ಗಂಟೆಗಳಾಗಿವೆ! ನಾಳೆ ತನ್ನನ್ನೂ ಮಗುವನ್ನೂ ನೋಡಲು ಬರುವ ಗಂಡನಿಗೆ ಮುಖ ತೋರಿಸುವುದು ಹೇಗೆ? ಕಣ್ಣೀರಿನಿಂದ ದಿಂಬು ತೊಯಿದು ಒದ್ದೆಯಾಯಿತೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ.

ಬೆಳಿಗ್ಗೆ ಆರು ಗಂಟೆಯ ಹೊತ್ತಿಗೇ ವಾಸು ಥರ್ಮಾಸ್ ಪ್ಲಾಸ್ಕಿನಲ್ಲಿ ಕಾಫಿ ತೆಗೆದುಕೊಂಡು ಬಂದ. ವಾಸು ಬರುವುದನ್ನು ದೂರದಿಂದಲೇ ಗಮನಿಸಿ ರತ್ನ ಗೋಡೆ ಕಡೆ ತಿರುಗಿ ಕಣ್ಣು ಮುಚ್ಚಿಕೊಂಡಳು. ಅವಳ ಹೃದಯದ ಬಡಿತ ಜೋರಾಯಿತು. ‘ವಾಸುವಿನ ಪ್ರಶ್ನೆಗಳನ್ನು ಹೇಗೆ ಎದುರಿಸಬೇಕು? ಮಗು ಯಾರದು?’ ಎಂದರೆ ಏನು ಹೇಳಬೇಕು? ವಾಸು ಮಂಚದ ಹತ್ತಿರ ಕುರ್ಚಿ ಜರುಗಿಸಿ ಕುಳಿತ ಸದ್ದು ಕೇಳಿಸಿತು. ರತ್ನ ಮಿಸುಕಾಡಲಿಲ್ಲ. ವಾಸು ಬಗ್ಗಿ ತನ್ನನ್ನೇ ನೋಡುತ್ತಿರಬಹುದು, ಇನ್ನೇನು ಪ್ರಶ್ನೆ ಸಿಡಿಲಿನಂತೆ ಬರಬಹುದು… ಇದೇಕೆ ಸುಮ್ಮನೆ ಕುಳಿತಿದ್ದಾರೆ? ಹೇಗೆ ಪ್ರಾರಂಭಿಸಲಿ ಎಂದು ಯೋಚಿಸುತ್ತಿದ್ದಾರೋ?

”ರತ್ನಾ…”

ವಾಸುವಿನ ಧ್ವನಿ ಕಠೋರವಾಗಿರಲಿಲ್ಲ. ಮೃದುವಾಗಿತ್ತು.

ತನ್ನನ್ನು ಕಂಡು ವಾಸುವಿಗೆ ಕನಿಕರವಾಗಿರಬೇಕು. ತನ್ನ ಸ್ಥಿತಿಗೆ ಮರುಗಿ ಕರುಣೆ ತೋರಿಸುತ್ತಿರಬೇಕು.

”ರತ್ನ”

ರತ್ನ ಕಣ್ಣು ಬಿಟ್ಟಳು. ಗಂಡನ ಕಡೆ ನೋಡುವ ಧೈರ್ಯವಿಲ್ಲದೆ ತಾರಸಿಯನ್ನು ನೋಡತೊಡಗಿದಳು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

”ರತ್ನ, ಮಗು ವಿಚಾರ ಯೋಚಿಸಬೇಡ. ಅದು ಅತ್ತು ಗಲಾಟೆ ಮಾಡಿ ನಿನಗೆ ತೊಂದರೆ ಮಾಡಬಹುದೆಂದು ಬೇರೆ ಕಡೆ ತಗೊಂಡು ಹೋಗಿದಾರೆ. ನಿನ್ನ ಸಂಜೇನೇ ನಾನು ಮಗೂನ ನೋಡಿದೆ. ಮಗು ಚೆನ್ನಾಗಿ ಆರೋಗ್ಯವಾಗಿದೆ. ಪೈಲ್ವಾನ್ ಹುಟ್ಟಿದಾಗ ಎಂಟೂವರೆ ಪೌಂಡಿದ್ದ. ಡಾಕ್ಟರು ನಿನ್ನ ನೋಡಲು ಬಿಡಲಿಲ್ಲ. ಹುಷಾರಾಗಿದೀಯಾ? ರಾತ್ರಿ ಚೆನ್ನಾಗಿ ನಿದ್ದೆ ಬಂತೇ?”

”ನಿಮ್ಮ ಮಗು ಹೇಗಾದೀತು? ನಿಮ್ಮದಾಗಿದ್ದರೆ ಮುಂಚೆಯೇ ಆಗುತ್ತಿತ್ತು” ಎಂದು ರತ್ನಳಿಗೆ ಹೇಳಬೇಕೆನ್ನಿಸಿತು. ಅಷ್ಟರಲ್ಲಿ ನರ್ಸ್ ಮಗುವನ್ನು ಶಾಲಿನಿಂದ ಸುತ್ತಿ ಎತ್ತಿಕೊಂಡು ಬಂದಳು. ಮೃದುವಾಗಿ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು. ಮಗುವಿನ ಕಡೆ ನೋಡಲಂಜಿ ಬೇರೆ ಕಡೆ ತಿರುಗಿದಳು.

“ನಿನ್ನ ಮಗನ್ನ ನೋಡು ರತ್ನಾ.”

ರತ್ನ ಬಲವಂತದಿಂದ ಕತ್ತು ತಿರುಗಿಸಿ ಮಗುವಿನ ಕಡೆ ನೋಡಿದ ಹಾಗೆ ಮಾಡಿ ತಿರುಗಿದಳು. ಅವಳಿಗೆ ಅಸ್ಪಷ್ಟವಾಗಿ ಕಂಡ ಮಗುವಿನ ಚಿತ್ರದಿಂದ ಸಂಶಯ ಉಂಟಾಯಿತು. ಚೈತನ್ಯವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಮ್ಮೆ ತಿರುಗಿ ನೋಡಿದಳು.

ಜೇನಿನ ಬಣ್ಣದ ಕಣ್ಣು…. ಕೆಂಚು ಕೂದಲು, ತಿಳೀ ಬಣ್ಣ. ವಾಸುವಿಗಿದ್ದಂತೆಯೇ ಬಲಗೆನ್ನೆಯ ಮೇಲೆ ಕಪ್ಪು ಮಚ್ಚೆ…

ದೇಹದಲ್ಲಿದ್ದ ರಕ್ತವೆಲ್ಲಾ ಹೃದಯಕ್ಕೆ ಒಟ್ಟಿಗೆ ನುಗ್ಗಿಬಂತು. ರತ್ನ ಹುಚ್ಚಿಯಂತೆ ಮುಂದೆ ಬಾಗಿ ಎರಡು ಕೈಗಳಿಂದಲೂ ಮಗುವನ್ನು ಎತ್ತಿ ತನ್ನದೆಗೆ ಒತ್ತಿಕೊಂಡಳು. ಅವಳ ಬಿಗಿಮುಷ್ಟಿಯಿಂದಾಗಿ ಅದು ಕೈಕಾಲು ಬಡಿಯುತ್ತಾ ಕಿರುಚಾಡತೊಡಗಿತು. ಇದಾವುದರ ಪರಿವೆಯೂ ಇಲ್ಲದೆ ರತ್ನ ಮಗುವಿನ ಎರಡು ದಿನದ ಎಳೆಯ ದೇಹವನ್ನು ಪುಡಿ ಪುಡಿ ಮಾಡುವಂತೆ ಹಿಡಿದು ಮುತ್ತಿಡುತ್ತಾ,

“ಮಗು ನಮ್ಮದೇ… ನಮ್ಮ ಮಗು ನಮ್ಮ… ಮಗು…” ಎಂದಳು.

ಅವಳ ಧ್ವನಿ ಕ್ಷೀಣವಾಗುತ್ತಾ ಬಂದು ಕೊನೆಯ ಮಾತು ಗಂಟಲಿನಲ್ಲಿಯೇ ಉಳಿಯಿತು. ಅವಳ ಬಿಗಿಮುಷ್ಟಿ ಸಡಿಲವಾಗಿ, ಮಗು ಅವಳ ತೊಡೆಯ ಮೇಲಿಂದ ಉರುಳಿ ಹಾಸಿಗೆ ಮೇಲೆ ಬಿತ್ತು. ರತ್ನ ನಿಧಾನವಾಗಿ ಹಿಂದಕ್ಕೊರಗಿದಳು. ನರ್ಸ್ ಓಡಿಬಂದು ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡತೊಡಗಿದಳು. ವಾಸು ಗಾಬರಿಯಿಂದ ‘ರತ್ನಾ’ ಎಂದು ಕೂಗತೊಡಗಿದ.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ರತ್ನ ಮಾತನಾಡಲು ಪ್ರಯತ್ನಿಸಿದಳು. ಆದರೆ ಯಾವ ಶಬ್ದವೂ ಹೊರಗೆ ಬರಲಿಲ್ಲ. ತುಟಿಗಳು ಚಲಿಸಿದವು. ರತ್ನ ಪ್ರೀತಿಯಿಂದ ವಾಸುವಿನ ಕಡೆ ನೋಡಿದಳು. ಅವಳ ಕಣ್ಣುಗಳಲ್ಲಿ ಮರಣಸಂಕಟದ ಛಾಯೆಯಿದ್ದರೂ ತುಟಿ ನಗುತ್ತಿತ್ತು. ಮುಖದಲ್ಲಿ ತೃಪ್ತಿ, ಸಮಾಧಾನ, ಶಾಂತಿ ನೆಲೆಸಿತ್ತು. ರತ್ನ ತನ್ನ ಕೈ ವಾಸುವಿನ ಕೈಲಿಟ್ಟು ಪ್ರಯಾಸದಿಂದ ಪಿಸುಗುಟ್ಟಿದಳು: ‘ನಮ್ಮ ಮಗು…’ ಅವಳ ಕಣ್ಣಿನಿಂದ ಒಂದು ಹನಿ ಕೆನ್ನೆಯ ಮೇಲೆ ಉರುಳಿತು. ವಾಸುವನ್ನು ನೋಡುತ್ತಿದ್ದಂತೆಯೇ ಅವಳ ಕಣ್ಣುಗಳು ನಿಧಾನವಾಗಿ ಮುಚ್ಚಿಕೊಂಡವು.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ತ್ರಿವೇಣಿ 1 1

ತ್ರಿವೇಣಿ (1928-1963): ‘ತ್ರಿವೇಣಿ’ ಕಾವ್ಯನಾಮದ ಭಾಗೀರಥಿ ಹುಟ್ಟಿದ್ದು ಮೈಸೂರಿನಲ್ಲಿ. ಬಿ.ಎ. ಪದವೀಧರರು. ಪ್ರಕಟಿತ ಕೃತಿಗಳು: ‘ಹೆಂಡತಿಯ ಹೆಸರು’ (1958), ‘ಎರಡು ಮನಸ್ಸು’ (1960), ‘ಸಮಸ್ಯೆಯ ಮಗು’ (1961) (ಕಥಾಸಂಕಲನಗಳು); ‘ಹೂವು ಹಣ್ಣು’ (1953), ‘ಅಪಸ್ವರ’ (1953), ‘ಸೋತು ಗೆದ್ದವಳು’ (1954), ‘ಕೀಲುಗೊಂಬೆ’, ‘ಮೊದಲ ಹೆಜ್ಜೆ’ (1956), ‘ಹೃದಯಗೀತೆ’ (1956), ‘ಕಂಕಣ’, ‘ಮುಕ್ತಿ’, ‘ಬೆಳ್ಳಿಮೋಡ’ (1959), ‘ಅವಳ ಮನೆ’ (1960), ‘ತಾವರೆಯ ಕೊಳ’ (1963), ‘ಕಾಶೀಯಾತ್ರೆ’ (1962), ‘ಹಣ್ಣೆಲೆ ಚಿಗುರಿದಾಗ’ (1963), ‘ಬೆಕ್ಕಿನ ಕಣ್ಣು’ (1954), ‘ಶರಪಂಜರ’ (1965), ಹಾಗು ಇನ್ನೂ ಹಲವಾರು ಕಾದಂಬರಿಗಳು. ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ಸುಗಳಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೀಣಾ ಶಾಂತೇಶ್ವರ ಅವರ ಕತೆ | ತಿರುಗಿ ಹೋದಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...