ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅಕ್ಕುವಿಗೆ ದೊಡ್ಡ ಕುಂಕುಮವಿದೆ. ಆದರೆ ಗಂಡನಿಲ್ಲ. ಕತ್ತಿನಲ್ಲಿ ಕರಿಮಣಿಯಿದೆ. ಕರಿಮಣಿಯನ್ನು ನಾಗಂದಿಗೆಯ ಮೂಲೆಯಲ್ಲಿಟ್ಟು ಸವಾರಿ ಹೊರಡುವ ರಿವಾಜೂ ಅಕ್ಕುವಿಗುಂಟು. “ಅಕ್ಕೂ, ನಿನ್ ಗಂಡ ಎಲ್ಲಿ?” ಎಂದು ಕೇಳಿದರೆ ಕೇಳಿದವರ ಗ್ರಹಚಾರವನ್ನೇ ಆಕೆ ಮುಗಿಸಿಕೊಡುವುದಿದೆ. ಎಲ್ಲ ಸಲವೂ ಅಲ್ಲ ಒಮ್ಮೊಮ್ಮೆ ಗುಮ್ಮಕ್ಕಿಯಂತೆ ಕುಳಿತರೂ ಕುಳಿತಳೇ. ಕೆಲವೊಮ್ಮೆ ಏನೇ ಹೇಗೇ ಕೆಣಕಿದರೂ ಕಣ್ಣು ಮೂಗು ಬಾಯಿ ಕೊಡಿಯಲ್ಲೆಲ್ಲ ಡೊಂಕು ಡೊಂಕಾಗಿ ನಗೆ ಬಿಕ್ಕುತ್ತ ತಲೆ ಕೊಡವಿಬಿಡುವ ಗುಣವೂ ಅಕ್ಕುವಿಗೆ ಇದೆ.
ಅವಳ ಕೈಯಲ್ಲಿ ಯಾವಾಗ ಕಂಡರೂ ಒಂದು “ಟುವಾಲು”. ಅವಳರ್ಥದಲ್ಲಿ ಟುವಾಲು ಎಂದರೆ ಕರವಸ್ತ್ರ. ಗಂಡಸರ ಕರವಸ್ತ್ರ, ಅದು ಯಾರದೆಂತ ಅವಳಲ್ಲಿ ಹೇಗೆ ಬಂದು ಸೇರಿತೆಂತ ಯಾರಿಗೂ ಗೊತ್ತಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇರಲಿಲ್ಲ. ಒಟ್ಟಿನಲ್ಲಿ ಅಕ್ಕುವೆಂದರೆ ಆ ಟುವಾಲು ಸಮೇತವೇ. ಅದನ್ನು ಎಲ್ಲಿಯೋ ಇಟ್ಟು, ಎಲ್ಲಿಯೋ ಕಳೆದು, ಮತ್ತೆ ಹುಡುಕುತ್ತಾ ಇರುವುದಕ್ಕಿಂತ ದೊಡ್ಡ ಕೆಲಸವನ್ನು ಆಕೆ ಮಾಡುವುದಿಲ್ಲ. ಒಳಗಿನ ಕೆಲಸವನ್ನು ನರಿನಾಯಿ ತಿನ್ನಲಿ ಬೇಕಾದರೆ! ಆಕೆ ಟುವಾಲು ಹುಡುಕುತ್ತಾ ಮೂಲೆ ಸಂದಿ ಹರಡುತ್ತಲೇ ಇರುತ್ತಾಳೆ.
ಅಜ್ಜಯ್ಯನ ಮನೆಯಲ್ಲಿ ಯಾರೂ ಸ್ವತಂತ್ರರಲ್ಲ. ಸ್ವಲ್ಪ ಸ್ವರ ಇರುವುದಾದರೆ ವಾಸು ಚಿಕ್ಕಪ್ಪಯ್ಯನಿಗೆ! ಮಾತಾಡಲು ಒಂಚೂರು ಧೈರ್ಯ ಮಾಡುವುದಾದರೆ ಅವನ ಹೆಂಡತಿ ಭಾನು ಚಿಕ್ಕಿ. ಯಾರಿಗೂ ಹೆದರದವರೆಂದರೆ ದೊಡ್ಡಜ್ಜನ ತಂಗಿ ‘ದೊಡ್ಡತ್ತೆ’. ಎಲ್ಲರಿಗೂ ದೊಡ್ಡತ್ತೆ. ಯಾವ ನಿರ್ಬಂಧವೂ ಇಲ್ಲದಿರುವವಳೆಂದರೆ ಅಕ್ಕು ಪೊಟ್ಟು. ಹೇಗೆ ಬೇಕಾದರೂ ತಿರುಗಿಕೊಂಡಿರಲಿ, ಹೊತ್ತು ಕಳೆಯಬೇಕಲ್ಲ ಎಂಬ ಮಾಫಿ ಪಡೆದವಳು. ಪೊಟ್ಟು ಎಂದರೆ ಮುಂಚಿನಿಂದಲೂ ಪೊಟ್ಟೆಂತ ಅಲ್ಲ. ಮನೆಯಲ್ಲಿ ಉಳಿದವರೆಲ್ಲ ಮಜ್ಜಿಗೆ ಕಡೆಯಲಿಕ್ಕೆ, ಅಡಿಗೆಗೆ ಉಪ್ಪು ಹುಳಿ ಹಾಕಲಿಕ್ಕೆ, ನೀರೆತ್ತಲಿಕ್ಕೆ, ಹೊಸ ಸೀರೆ ಚಿನ್ನ ತೊಟ್ಟು ಮದುವೆ ಉಪನಯನ ಇತ್ಯಾದಿಗಳಿಗೆ ಹೋಗಿ ಬರಲಿಕ್ಕೆ. ಗಂಡಸರು ವ್ಯವಹಾರ ನೋಡಿ ಅಜ್ಜಯ್ಯನಿಗೆ ವರದಿ ಒಪ್ಪಿಸಲಿಕ್ಕೆ, ಆ ಮನೆಯ ಕಂಬಗಳಂತೆ, ತಲೆಯ ಮೇಲೆ ಭಾರವಿದ್ದರೂ ತುಟಿ ಎರಡು ಮಾಡರು.
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಹೀಗೆ ನಿರ್ಬಂಧವಿರದ ಅಕ್ಕು ಯಾರ ಮನೆ ಊಟವನ್ನೂ ಬಿಟ್ಟವಳಲ್ಲ. ಬಲಬದಿ ನಗ್ಗಾದಂತೆ ಕಾಣುವ ಮುಖದ, ಒಟ್ಟಾರೆ ಅತ್ತ ಇತ್ತ ಚಲಿಸುತ್ತಲೇ ಇರುವ ಮಂದಕಾಂತಿಯ ಕಣ್ಣುಗಳ, ತುಟಿ ಮೀರಿ ಬಂದ ಮುಂಬಲ್ಲುಗಳನ್ನು ಸದಾ ಮುಚ್ಚಿಕೊಳ್ಳುವ ಪ್ರಯತ್ನದಲ್ಲಿರುವ ತುಟಿಗಳ, ಕೇವಲ ನಾಲ್ಕೂ ಮುಕ್ಕಾಲು ಅಡಿ ಉದ್ದದ ಅಕ್ಕು ಮೂಗಿಗೆ ಪುಡಿ ತುಂಬಿಸಿ, ಟುವಾಲನ್ನು ಹೊಳ್ಳೆಗಳ ಅಡ್ಡಕ್ಕೆ ಆಚೆ ಈಚೆ ಸರಬರವೆಂತ ಗರಗಸದಂತೆ ಹರಿದಾಡಿಸಿ ಮುಖದ ಸುತ್ತ ಒಮ್ಮೆ ಬಲವಾಗಿ ಕೈಯಾಡಿಸಿ, ಸೀರೆಗೊರೆಸಿ, ರಸ್ತೆ ಗುಡಿಸುವ ಸೆರಗು ಹಾಕಿ ಸೀರೆಯುಟ್ಟು ಟುವಾಲು ಬೀಸುತ್ತ ಹೊರಟಳೆಂದರೆ “ಹಾಸುವಾ ಹಾಸಣಿಗೆ, ಬೀಸುವಾ ಬೀಸಣಿಗೆ, ಊಟ ಎಲ್ಲಿವತ್ತು?”- ಎಂದು ಒಗಟು ಮಾತಾಡುವವರಿಗೆ ಕಡಿಮೆಯಿಲ್ಲ. “ಪತಾಕೆಗೆ ಎಲ್ಲಿಗೆ ಹೊರಟಿದೆ?” ಎಂದು ಅವಳ ಹತ್ತಿರವೇ ಕೇಳುವರೆ! ಮನಸ್ಸಾದರೆ ಉತ್ತರ ಕೊಟ್ಟಾಳು. ಇಲ್ಲವಾದರೆ “ನಿಮ್ಮಜ್ಜನ್ ಶ್ರಾದ್ಧಕ್ಕೆ” ಎಂದು ಮುಖಕ್ಕೆ ಹೊಡೆದಂತೆ ಹೇಳಿ ಜಕಣಿಯಂತೆ ತುದಿಗಾಲಿನಲ್ಲಿ ಹಾರಿ ನಡೆದಾಳು.
ಊಟಕ್ಕೆ ಕುಳಿತಳೆಂದರೆ ಈಚಿನ ಪರಿವೆ ಇಲ್ಲದೆ, ತಗ್ಗಿಸಿದ ತಲೆ ಎತ್ತದೆ, ಭರಾರೆಂದು ಸುರಿದು ಉಣ್ಣುವುದೇ. ಬಡಿಸಲು ಬಂದ ಭಕ್ಷ್ಯಗಳನ್ನು ಎಡಗೈಯಲ್ಲಿ ಹಿಡಿದು, ಅದೇ ಪುಡಿವಾಸನೆಯ ಟುವಾಲಿನಲ್ಲಿ ಸುತ್ತಿಕೊಂಡು ಮನೆಗೆ ಬಂದು ಚಾವಡಿ ಜಗಲಿಯ ಮೂಲೆಯಲ್ಲಿ ಒಬ್ಬಳೇ ಕುಳಿತು, ಕಾಗೆಗೆ ಸಹ ಒಂದು ತುತ್ತು ಬಿಸಾಡದೆ, ಗುಳ್ಕಾಯ ಸ್ವಾಹಾ ಮಾಡುವುದರಲ್ಲಿ ಭಾರೀ ಹುಶಾರು.
ಅಕ್ಕು ಬಿಡದೆ ಹೋಗುವ ಊಟಗಳೆಂದರೆ ಬಸುರಿ-ಬಯಕೆಯ ಊಟ ಮತ್ತು ನಾಮಕರಣದ್ದು. ಹಾಗೆ ಹೋದವಳು ಮಲ್ಲಿಗೆ, ಅಬ್ಬಲಿಗೆ, ಸೇವಂತಿಗೆ, ಇರುವಂತಿಗೆ ಇತ್ಯಾದಿ ಏಳು ಹೂಗಳ ಜಲ್ಲಿ ಬಿಡಿಸಿಕೊಂಡು ಭಾರದ ಮೇಲೆ ಭಾರ ಹೇರಿದವರಂತೆ ಕುಳಿತ ಬಸುರಿಯ ಬಳಿಯಿಂದ ಆಚೀಚೆ ಹಂದಾಡಲಿಕ್ಕಿಲ್ಲ. ಗುರುತಿಲ್ಲದವರೋ, ಹುಡುಗಿಯ ಗಂಡನ ಮನೆಯವರೋ, ಮರುಳ್ತಿಯಂತೆ ಕುಳಿತ ಅಕ್ಕುವನ್ನು ಕಂಡು “ಇದ್ಯಾರ್ ಈ ಬಿಕ್ರೆ ಮಂಡೆ ದೇವಮ್ಮ! ಅಲ್ಲಿಂದ ಏಳ್ಸಿ ಕಾಂಬ” ಎಂದರೂ, ಮನೆಯವರು ಬಂದು ಹೆದಹೆದರುತ್ತಾ ”ಅಕ್ಕು ಬಾ, ಈಚಿ ಕೂಕೊ”- ಎಂದರೂ ಅಕ್ಕುವಿನ ಕಿವಿ ಅದಕ್ಕೆಲ್ಲಾ ಪೂರ್ತಿ ಕೆಪ್ಪೇ. ನಾಮಕರಣಕ್ಕೆ ಹೋದರೂ ಅಷ್ಟೇ. ಮಗುವಿನ ತೊಟ್ಟಿಲು ಹಗ್ಗ ಹಿಡಿದು ಬೀಸುವುದನ್ನು ಆಕೆ ಬಿಡುವುದು ವಾಪಸು ಮನೆಗೆ ಬರುವಾಗಲೇ. ಬಂದ ನೆಂಟರೆಲ್ಲ ಹೋದ ಮೇಲೆ ಎರಡು ಲಾಲಿ ಹಾಡಿದರೂ ಹಾಡಿದಳೇ. ಆದರೆ ಅವಳೆಷ್ಟೇ ಕತ್ತೆತ್ತಿ ಹಾಡಲಿ ಅವರಿವರು ನಗೆ ಸಿಮಿಸುತ್ತ, “ಅಕ್ಕೂ, ನಿನ್ ಕೋಗಿಲೆ ಸ್ವರ ಕೇಂಬುಕೆ ಕಾಕಿ ಹಿಂಡೇ ಬಂದ್ ಕಂಡಿಯಾಗ್ ಕೂತಿತ್ತ್ ಕಾಣ್!” ಎನ್ನದಿದ್ದರೆ ರಾತ್ರಿ ಅವರಿಗೆ ನಿದ್ದೆ ಬೀಳಲಿಕ್ಕಿಲ್ಲ. ಹೀಗಿರುವಾಗಲೇ ಸಿರಿಯತ್ತೆಯ ಮದುವೆಯಾದದ್ದು. ಮದುವೆಯ ದಿನ ನಡೆದ ಒಂದು ವಿಷಯ ಸಿರಿಯತ್ತೆಯ ಬಾಯಿಂದಲೇ ಕೇಳಬೇಕು.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
“ದಿಬ್ಣ ಬಂದಾಯಿತ್. ನನ್ನತ್ರ ಯಾರೂ ಇರ್‍ಲಿಲ್ಲೆ. ಎಲ್ರೂ ಚಪ್ರಕ್ಕೋಡಿದ್ರ್. ನಂಗೊನ್ನಮೂನೆ ಹೆದ್ರಿಕೆ ಆದ್ಹಂಗಿದ್ದಿತ್. ಅಷ್ಟೊತ್ತಿಗೆ ಅಕ್ಕು ಬಂದ್, ‘ಓ ಅಕ್ಕು!’ ಎಂದೆ. ಅಯ್ಯಬ್ಬ ಅನ್ನಿ. ‘ಹೂಂ ಹೂಂ, ಅಕ್ಕುವಾ ಅವ್ಳ್ ನೆರಳ!’ ಹರಪಿದ ಹಾಂಗೆ ಉತ್ರ ಕೊಟ್ಲ್ ಅಕ್ಕು. ಸ್ವಲ್ಪ ದೂರ ನಿಂತಿದ್ಲ್. ನನ್ನನ್ನ ದುರುದುರು ಕಂಡ್ಳ್. ‘ಅಷ್ಟ್ ಚಂದ ಯಾಕ್ ಮಾಡ್ಕಂಕ್?’ ಅಂತ್ಹೇಳಿ ಕೇಂಡ್ಲ್. ನಾ ಮಾತಾಡ್ಲಿಲ್ಲೆ. ಅವ್ಳ ಸ್ವರ ಸೀಳ್ ಬಿಟ್ಹಾಂಗಿದ್ದಿತ್. ಅವಳನ್ನೇ ಕಾಂತ ಕೂತೆ. ‘ಇಲ್ಬಾ’ ಅಂದ್ಲ್. ‘ಯಾಕೆ?’ ಎಂದೆ. ‘ಬಾ ಅಂದ್ರೆ ಬರ್‍ಕ್’ ಅಂದ್ಲ್. ನಂಗೆ ಯಾರನ್ನಾದ್ರೂ ಕರೀಕಂತ ಕಂಡ್ತ್. ಬೇಡ ಅಂತೇಳಿಯೂ ಕಂಡ್ತ್. ‘ಅಕ್ಕೂ, ಹುಶಾರಿಲ್ಯ?’ ಎಂದೆ. ಉತ್ರ ಕೊಡ್ಡೆ ಸೀದ ನುಗ್ಗಿ ಬಂದದ್ದೇ ನೆತ್ತಿವರೆಗೆ ಮುಡ್ದ ಹೂವನ್ನು ಕಣ್ಮುಚ್ಚಿ ತೆರ್‍ಯದ್ರೊಳ್ಗೆ ಹರ್‍ದ್ ತೆಗ್ದ್ ‘ಸಾಕಿಪ್ಟ್ ಚಂದ! ನಿನ್ ಚಂದ ಕಂಡ್ ಮದ್ವೆ ಆಪಂವ ಖಂಡಿತ ಬಾಳ್ಸುದಿಲ್ಲೆ. ಗೋಡೆ ಮೇಲೆ ಬರ್‍ದಿಟ್ಕೋ’ ಅಂದ್ಲ್. ಸತ್ಯಕ್ಕೂ ಹೇಳ್ತೆ. ನಂಗ್ ಉಸ್ರಿರ್‍ಲಿಲ್ಲೆ. ಗಿಡ್ಡ ಇದ್ರೂ ಒಂದ್ರೀತಿ ಚಂದ ಇದ್ದಿದ್ಲ್ ಅಕ್ಕು! ಈಗ ಮಾತ್ರ ಬ್ರಹ್ಮರಾಕ್ಷಸಿ ಹಾಂಗೇ ಕಂಡ್ಲ್. ಒಂದೇ ಕ್ಷಣ, ಮತ್ತ್ ಕಾಂಬ್ಸಮಿಗೆ ಅಕ್ಕುವೆ. ಮನ್ಸಿಗೆ ಭಾರೀ ಬೇಜಾರಾಯ್ತ್. ಹೂಗ್ ಹರ್‍ದದಕ್ಕಲ್ಲ, ಹೀಲಿಗಟ್ಟಿದ್ಹಾಂಗಿನ ಅವ್ಳ ಮುಖ ಕಂಡ್. ‘ಎಂಥ ಸೆಕೆಯ!’ ಎಂತ ಕೈಯಿಂದ್ಲೇ ಗಾಳಿ ಬೀಸ್ಕಂತ, ಇನ್ನೊಂದು ಕೈಯಿಂದ ಟುವಾಲು ಹಾಕಿ ತಿಕ್ಕಿ ಮುಖ ಒರ್‍ಸ್‌ಕಂತ ಹೊರ್‍ಗ್ ಹೋದ್ದ್ ಅಕ್ಕು. ಈ ಸುದ್ದಿ ವಾಸುಗೆ ಹೇಳಿರ? ಸುಮ್ನೆ ಬಿಡ್ತಿದ್ನ? ಜಪ್ಪಿ ಕೋಣೆಗ್ ಹಾಕಿ ಚಿಣಕ ಹಾಕ್ತಿದ್ದ. ನನ್ನ ಮದ್ವೆ ಚಪ್ರದೊಳ್ಗೆ ನಾ ಚಂದ ನಾ ಚಂದ ಅಂದ್ಕಂತ ಬೀಗ್ಕಂಡ್ ಕೂತವ್ರ್ ಮಧ್ಯ ಅಕ್ಕು ಬಿಸಾತಿಲ್ದೆ ಮೂಗಿಗ್ ಟುವಾಲು ಹಾಕಿ ತಿರ್‍ಸುದನ್ನ ಹೇಂಗೆ ಕಾಂಬುಕಾತಿತ್? ದೊಡ್ಡತ್ತೆ ಬಂದವ್ಳ್ ಮದುಮಗಳು ಅಂತ್ಲೂ ಕಾಣ್ದೆ, ಬಾಯಿಗ್ ಬಂದ್ಹಾಂಗ್ ಬೈಯ್ದ್, ಪುನಾ ತಲೆ ಬಾಚಿ ಹೂಗ್ ಮುಡ್ತಿದ್ಲ್.”
ಸಿರಿಯತ್ತೆ ಮದುವೆಯಾಗಿ ಹೋದ ದಿನ ಅಕ್ಕುವಿನದು ಗಲಾಟೆಯೋ ಗಲಾಟೆ. “ನನ್ ಗಂಡ ಎಲ್ಲಿ ಸತ್ತ? ಈ ಕ್ಷಣ ತಂದುಕೊಡಿ!” ಎಂಬ ಸೊಲ್ಲು ಬಿಟ್ಟರೆ ಬೇರೆ ಇಲ್ಲ. ಗಾಳಿಗೆ, ಆಕಾಶಕ್ಕೆ ಟುವಾಲು ಹಾರಿಸಿ ಹಾರಿಸಿ ಕೇಳಿದಳು. ವಾಸು ಚಿಕ್ಕಪ್ಪಯ್ಯ ಹಲ್ಲಿನ ಚಡಿಗೆ ಕಡ್ಡಿ ಹಾಕುತ್ತಾ ನಿಂತಿದ್ದವ ”ಅಗ ಕಾಣಲ್ಲಿ, ಓ ತಟ್ಟಿಯ ಚಡಿಯೊಳ್ಗೆ!” ಎಂದು ಇತ್ತಿನ ಧಾತಿಲ್ಲದೆ ಮಲಗಿ ಗೊರೆಯುತ್ತಿದ್ದ ಅಡುಗೆಯ ಬಾಬು ಭಟ್ಟನನ್ನು ತೋರಿಸಿದ. ಭಾನು ಚಿಕ್ಕಿ ಒಂದು ಗೊಂಬೆ ತಂದು ಅವಳ ಎದುರು ಬಿಸಾಡಿ “ನಿನ್ ಗಂಡ! ಯಾವಾಗ್ ಬಂದಿದ್ನೋ ಏನೋ. ಒಬ್ರೂ ಕಂಡವ್ರಿಲ್ಲೆ. ಅಕ್ಕೂ ಅಕ್ಕೂ ಅಂತೆಳಿ ಸೋರ್‍ಲೊಳ್ಳೆ ಅರ್ಚಕಂತಿದ್ದ. ಕರ್‍ಕಂಡ್ ಬಂದೆ” ಎಂದರೂ ಅವಳ ಆರ್ಭಟ ನಿಲ್ಲಲಿಲ್ಲ. ಆರ್ಭಟ ಹೆಚ್ಚಿದಷ್ಟೂ ನಗೆಯ ಅಬ್ಬರವೂ ಹೆಚ್ಚಿತು. ಸತ್ಯಮಾಣಿಯೆಂಬ ಮೂರು ಗೇಣುದ್ದದ ಹುಡುಗ ತಡೆಯದೆ ಓಡಿಹೋಗಿ ಬಾಬು ಭಟ್ಟನನ್ನು ಬಡಿಬಡಿದು ಎಬ್ಬಿಸಿ “ಬಾಬುಭಟ್ಟ, ಬಾಬು ಭಟ್ಟ, ನೀನ್ ಅಕ್ಕು ಗಂಡ ಅಂಬ್ರ್!” ಅಂತ ನಾಲಿಗೆ ತುದಿ ಕಚ್ಚಿಕೊಂಡು ಟಿಸಿಲ್ಲೆಂದು ನಕ್ಕಿತು. “ಅಯ್ಯಯ್ಯಬ್ಬ, ಅವಳನ್ ಕಟ್ಕಂಡ್ರ? ನನ್ ಕೈಕಾಲ್ ಸವರಿ ಒಲೆಗ್ ತುಂಬ್ಯಾಳ್, ಮೂರ್ ಮಂಡಕ್ಕಿ ಕಾಳಿಗೆ ಮಾರ್‍ಕಂಡ್ ತಿಂದ್ರೂ ಆಶ್ಚರ್ಯ ಇತ್ತಾ?” ಎಂದ ಬಾಬು ಭಟ್ಟ. ನಗೆಗೆ ಅಮಲೇರುತ್ತಿತ್ತು. ಅಷ್ಟೊತ್ತಿಗೆ ಗೋಡೆಗೆ ಬೆನ್ನು ಅನಿಸಿ ಅಡಿಕೆ ಹೋಳು ಕತ್ತರಿಸುತ್ತ ಇದ್ದ ತೊಳೆದ ಕೆಂಡದಂತಹ ತಮ್ಮಣ್ಣಯ್ಯ ಎಂಬವ, ಇಷ್ಟರವರೆಗೆ ಸುಮ್ಮನೆ ನಾಟಕ ನೋಡುತ್ತಿದ್ದವ, ಎದ್ದು ಬಂದ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರ ಮಾಡುವ ಆತ ನಡು ಬಳುಕಿಸುತ್ತಾ ಕೈ ಬೀಸಿ ಎದೆಗೆ ಹೊಡೆದುಕೊಳ್ಳುತ್ತಾ “ಪ್ರಿಯೇ, ನಿನ್ನ ಗಂಡನೆಂಬುವ ನಾನು ಬಂದಿದ್ದೇನೆ. ನನ್ನಿಂದೇನಾಗಬೇಕು” ಎಂದು ನಾಟಕೀಯವಾಗಿ ಕೇಳುತ್ತ ಎಲ್ಲರ ಮುಖ ನೋಡಿ ಮುಗುಳು ನಗುತ್ತಿರಲು ಇದ್ದಕ್ಕಿದ್ದಂತೆ ಹಾರಿಬಿದ್ದ. ಅಕ್ಕು ಸರಕ್ಕೆಂತ ಏರಿ ಬಂದು ಅವನನ್ನು ಕಚ್ಚಿ ಬಿಟ್ಟಿದ್ದಳು. ಪಾಪದವರಂತೆ ಒಳಗೆ ಹೋಗಿ ಮೂಲೆಯಲ್ಲಿಟ್ಟಿದ್ದ ಕೊಡಪಾನದಿಂದ ಒಂದು ಚೊಂಬು ನೀರು ಬಗ್ಗಿಸಿಕೊಂಡು ಗಟ ಗಟ ಕುಡಿದು,
“ಏ ತಮ್ಮಣ್ಣಯ್ಯ, ಬಾಲ ಮಡ್ಚ್‌ಕಂಡ್ ಆಚೆಗ್ ಹೋಗ್, ನಿನ್ ಕೆಲ್ಸ ಕಾಣ್. ನನ್ ಸುದ್ದಿಗ್ ಬತ್ಕಾ? ನಿನ್ ಹೆಂಡ್ತಿ ಮೊನ್ನೆ ಯಾರೊಟ್ಟಿಗ್ ಚಾಂಚ್ಕಂಡ್ ಮನ್ಕಂಡಿದ್ಲ್ ಅಂತೆಳಿ ಹೇಳುದಾ ಈಗ?” ಎಂದು ದೊಡ್ಡ ಸ್ವರದಲ್ಲಿ ಕತ್ತಿ ಬೀಸಿದಂತೆ ಹೇಳುತ್ತಾ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟಳು. ಎಲ್ಲರ ನಗೆ ಸುತ್ತುವರಿದು ತಮ್ಮಣ್ಣಯ್ಯನ ನಗೆಯನ್ನು ನಂದಿಸಿ ಬಿಟ್ಟಿತು.
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
ಕೂಡಲೆ ವಾಸು ಚಿಕಪ್ಪಯ್ಯ ”ಇರ್‍ಲಿ ಬಿಡಿ ತಮ್ಮಣ್ಣಯ್ಯ, ಅದ್ಕೆ ಬುದ್ದಿ ಇಲ್ಲೆ ಅಂತೆಳಿ ಎಲ್ಲರಿಗೂ ಗೊತ್ತಿಲ್ಯ? ಬೇಜಾರು ಮಾಡ್ಕಣ್ಬೇಡಿ” ಎಂದು ಸಮಾಧಾನ ಮಾಡಿದ. ಒಂದು ಕಾಲು ಮಡಚಿ, ಕಾಲು ಗಂಟಿಗೆ ತಲೆಯೂರಿ ಗಲಾಟೆ ನೋಡುತ್ತ ನಗುತ್ತಿದ್ದ ತಮ್ಮಣ್ಣಯ್ಯನ ಹೆಂಡತಿ ಅಳು ಒತ್ತಿಟ್ಟುಕೊಂಡವಳಂತೆ ಸೆರಗನ್ನು ಬಾಯಿಗೆ ಒತ್ತಿಟ್ಟುಕೊಂಡು ಒಳಗೋಡಿದಳು. ವಾಸು ಚಿಕ್ಕಪ್ಪಯ್ಯ “ಏ ಭಾನು, ಅಬ್ಳಿಗೆ ಸಮಾಧಾನ ಮಾಡು ಪಾಪ. ಇದರ ದೆಸೆಯಿಂದ ಮರ್ಯಾದೆ ಇದ್ದವ್ರ್ ನೇಣ್ ಹಾಕಂಕ್’!” ಎಂದ.
”ಅಲ್ಲಿ ಇಲ್ಲಿ ತಿರ್‍ಗಿ ತಿರ್‍ಗಿ ಇತ್ತಿತ್ಲಾಯಿ ಬರೀ ಹಡೆ ಮಾತ್ ಕಲ್ತಿತ್” ಎಂದು ಚಿಂತಿಸಿದ.
ಹಾಗೆ ಬಾಗಿಲು ಹಾಕಿಕೊಂಡು ಮಲಗಿದ ಅಕ್ಕು ಎದ್ದದ್ದು ಮಾರನೆಯ ದಿನ ಗಂಟಿ ಮೇಯಿಸುವವ ಬಂದು ಗಂಟೆ ಹೊಡೆದುಕೊಂಡು ಹೋದ ಮೇಲೆಯೇ. “ಅದನ್ ತಂಡ್ಬೇಡಿ, ಅದ್ರಷ್ಟಕ್ ಬಿಟ್ಟಿಡಿ” ಎಂದರೂ ತಡೆಯದೆ ಅಂತಣ್ಣನೆಂಬವ “ಕಡೆಗೆ ಎಂತದ ಅಕ್ಕು? ನಿನ್ ಗಂಡ ಸಿಕ್ಕಿದ್ನ ಎಂತ ಕತೆ?” ಎನ್ನಲು “ಅವನ್ನ ಹೂಳಿಬಂದೆ” ಎಂದಳು ಅಕ್ಕು. ಮುಖದಲ್ಲಿ ನಿದ್ದೆಗೇಡಿತನದ ವಿಕಾರವಿತ್ತು. ಈಗಷ್ಟೇ ಹೂಳಿ ಕೈಕಾಲು ತೊಳೆದುಕೊಂಡು ಬಂದವರಂತಿತ್ತು. ”ಹಂಗಾರೆ ನಿನ್ ಮಕ್ಳ ಗತಿ!” ಎಂದರು ಯಾರೋ, “ಮಿಂಡ ಇಪ್ದ್ ಯಾವ್ ಕರ್ಮಕ್ ಮತ್ತೆ? ಕಂಡ್ಕಂತ” ಎಂದು ಮಾತು ಉಗಿದಳು. “ಆ ಮಿಂಡನ್ ಗತಿ? ರಾಮ ರಾಮಾ!” ಎಂದು ಯಾರೋ ಪಿಸುಗುಟ್ಟಿ ನಗೆ ತಿರುಗಿಸಿದ್ದು ಅವಳಿಗೆ ಕೇಳಿಸಿದಂತೆ ಕಾಣಲಿಲ್ಲ.
ದುರ್ದುಂಡಿಯಂತೆ ಕೆದರಿದ ತಲೆ, ಕುಂಕುಮದೊಂದಿಗೆ ಕಂಬಕ್ಕೊರಗಿ ಕುಳಿತಿದ್ದ ಅಕ್ಕುವನ್ನು ಕಂಡು ದೊಡ್ಡತ್ತೆ ಮೆಟ್ಟುಗತ್ತಿಲ ಮೇಲೆ ಕುಳಿತಿದ್ದಂತೆಯೇ ಓಲಾಡಿದರು. ಕೂತಲ್ಲಿ ನಿಂತಲ್ಲಿ ಓಲಾಡುತ್ತಾ ಹಾಡು ಕಟ್ಟುವ ದೊಡ್ಡತ್ತೆ ಹಂಬೆ ಕತ್ತರಿಸುತ್ತಾ ಇದ್ದರು. ಗಾಲಿ ಗಾಲಿ ಮಾಡಿ ಕತ್ತರಿಸುತ್ತಾ ನಾರನ್ನು ಬೆರಳಿಗೆ ಸುತ್ತಿಕೊಳ್ಳುತ್ತಾ,
“ಅಕ್ಕು ಕುಂಕುಮ ಚಂದ/ ಅಕ್ಕು ಗುಂಗುರು ಚಂದ/ ಅಕ್ಕುವೇ ಚಂದ ಲೋಕಕ್ಕೆ” ಎಂದು ರಾಗವೆಳೆದರು. ದಾರಿ ಮೇಲೆ ಮೇಯುತ್ತಿದ್ದ ಗಂಡನನ್ನು ಜುಟ್ಟು ಹಿಡಿದು ಮನೆಗೆ ತಂದು ಆಳಿ ಕಡೆಗೂ ಅವನನ್ನು ಕಳೆದುಕೊಂಡು “ಇದ್ದರೆ ಮಾ ಕಷ್ಟ ಇದ್ದಿತ್. ಹೊಂದದ್ದೇ ಪರಮ ಸುಖ ಆಯ್ತ್” ಎಂದ ದೊಡ್ಡತ್ತೆ ಅಕ್ಕುವನ್ನು ಕೆಣಕುತ್ತ, ಹಸಿರುವಾಣಿ ಕತ್ತರಿಸುತ್ತ, ಅಶನಾರ್ಥ ಪಡೆಯುತ್ತ ಅರ್‍ವತ್ತು ಸಮೀಪಿಸುತ್ತಿದ್ದರು. ಅಟ್ಟೆಕಾಲಿನ ದೊಡ್ಡತ್ತೆ ಕುಳಿತರೆ ಸರಿ. ನಿಂತರೆ ಬಗ್ಗು ಬೆನ್ನು.
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಅವರ ಹಾಡು ಕೇಳಿದ ಅಕ್ಕು ಮೂಗಿನ ಕೋಲಿಗೆ ಕೈಯಿಟ್ಟು ಸೊರಕ್ಕೆಂತ ಸಿಂಬಳ ತೆಗೆದಳು. ಸೆರಗಿಗೆ ಕೈ ಒರೆಸಿಕೊಂಡು “ನನ್ ಟುವಾಲೆಲ್ಲಿ?” ಎಂದಳು. “ನಾ ಬೆಳಗಾತೆದ್ ಕಾಂಬ್ಸಮಿಗೆ ಗೇಟ್ ದಾಟಿ ಹೋತಿತ್. ಎಲ್ಲಿಗ್ಹೋತೆ ಅಂತೆಳಿ ಕೇಂಡ್ರೆ ಮಂಜ್ರ್ ಹೋಟ್ಲಗೆ ಕಾಫಿ ಕುಡಿಯೂಕೆ ಅನತ್” ಎಂದಿತು ಸತ್ಯ ಮಾಣಿ. ಹೇಳಿದ್ದೇ ಕುಂಡೆಗೆ ಕಾಲು ಕೊಟ್ಟು ಓಡಿತು. ಅಕ್ಕು ಬೆರೆಸಿಕೊಂಡು ಹೋಗದೆ ಕುಳಿತಲ್ಲೇ ನಕ್ಕಳು. ನಕ್ಕು ಪೂರೈಸಿದ ಮೇಲೆ ಒಮ್ಮೆ ಮೂಗೆಳೆದುಕೊಂಡು ದೊಡ್ಡತ್ತೆಯತ್ತ ತಿರುಗಿ “ಅಟ್ಟೆಕಾಲಿನ ಸುಬ್ಬಿ, ನಿನ್ ಬೆನ್ನನ್ ಬಿಲ್ ಮಾಡಿ ಕಂಕುಳಿಗೇರ್‍ಸ್‌ಕಂತೆ ಕಾಣೀಗ” ಎಂದಳು.
“ಯೇ ಪುಣ್ಯಾತ್ಗಿತ್ತಿ, ನನ್ ಗಂಡ ಸತ್ ನರ್‍ಕಕ್ಕೆ ಹೋಯಾಯ್ತ್. ನಾ ಇಪ್ಪಲ್ಲಿವರೆಗಾರೂ ಗಟ್ಟಿ ಇರ್‍ತೆ. ನಂಗೊಂದ್ ಯೆಂತ ಮಾಡ್ಬೇಡ” ಎಂದು ಸುಳ್ಳು ಶರಣಾಗತಿಯ ದನಿಯಲ್ಲಿ ಹೇಳುತ್ತ “ಪಾಪ” ಎಂದು ತನ್ನೊಳಗೇ ಹೇಳಿದರು.
“ಯಾಕ್ ಪಾಪ? ನಾಯೆಂತ ಮಾಡ್ದೆ? ನಿನ್ಹಾಂಗೆ ನಾನೇನ್ ಗಂಡ ಸತ್ ಮುಂಡೆ ಅಲ್ಲ, ನನ್ ಗಂಡ ಬಾಸಾಯಿ ತಿಂಬುಕೆ ದೇಶಾಂತರ ಹೋದ ಅಂತೇಳಿ ನಾ ಪಾಪ್ವ? ಮೈ ಮೇಲ್ ಬಂದ್ ಅಡ್ಡದ್ಮನೆ ತಿಮ್ಮಪ್ಪಯ್ಯನ್ ಹೊಂಡಕ್ಕ್ ದೂಡಿ ಹಾಕ್ದವ್ಳ್ ನಾನ್, ಕೇಣ್ ಕೇಣೆಲೇ ಗಾಡ್ಮಿಣೀ!” -ಆಕೆ ಮತ್ತೆ ಏನೇನೆಲ್ಲ ಹೇಳುತ್ತಿದ್ದಳೋ. ದೊಡ್ಡಜ್ಜಯ್ಯ ಬಂದರು. ಅವರ ಉಸಿರಿನ, ಕೋಲಿನ ಪರಾಕು ಕೇಳಿಯೇ ಮುಕ್ಕಾಲು ಜನ ದಿಕ್ಕಾಪಾಲಾದರು. “ಯೇ ವಾಸು!” -ವಾಸು ಚಿಕ್ಕಪ್ಪಯ್ಯ ಹನುಮಂತನಂತೆ ಹಾರಿ ಬಂದ. “ತಕೋ, ನಾಲ್ಕ್ ಹಾಕದ್ದೆ. ಪಿತ್ಥ ಇಳ್ಸಿಕೊಡ್” ದೊಡ್ಡಜ್ಜಯ್ಯ ಅಷ್ಟು ಹೇಳಿದ್ದೇ ಮೈಮೇಲೆ ಬಾಸುಂಡೆ ಬಿದ್ದೇಬಿಟ್ಟಿತು ಎಂಬಂತೆ ”ಅಯ್ಯಯ್ಯೋ, ನನ್ನನ್ ತೆಗೀತ್ರೋ” ಎನ್ನುತ್ತ ಅಕ್ಕು ದಿಡುಗುಟ್ಟಿಕೊಂಡು ಓಡಿ ಮೂಲೆ ಕೋಣೆಯಲ್ಲಿ ಬಾಗಿಲು ಹಾಕಿಕೊಂಡಳು.
*
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಸಿರಿಯತ್ತೆಯ ಖಾಸಾ ಅಕ್ಕ ಅಕ್ಕು. ಅವಳು ಸಿರಿಯತ್ತೆಗೂ ಅಕ್ಕುವೇ. ಈಗ ಹುಟ್ಟಿದ ಮಗುವೂ ಅವಳನ್ನು ಅಕ್ಕು ಎಂದು ಕರೆದೀತೇ ಹೊರತು ಸಂಬಂಧದ ಮರೆ ಹಿಡಿಯಲಾರದು. ಅಕ್ಕುವಿಗೂ ಸಿರಿಯತ್ತೆಗೂ ಮಧ್ಯೆ ತುಂಬ ವರ್ಷಗಳ ಅಂತರವಿತ್ತೇನೋ. ಆದರೆ ಸಿರಿಯತ್ತೆಗಿಂತ ಅಕ್ಕುವೇ ಎಳೆಯವಳಂತೆ ಕಾಣುತ್ತಿದ್ದಳು. ಸಿರಿಯತ್ತೆ ಹೇಳುವಂತೆ ತನಗೆ ಬುದ್ದಿ ತಿಳಿಯುವಾಗ ಅಕ್ಕುವಿಗೆ ಹೀಗೆ ಆಗಿಯಾಗಿತ್ತು. ಸಿರಿಯತ್ತೆ ಯಾವಾಗಲೂ ಹೇಳುತ್ತಿದ್ದರು. ”ಎಂಥ ಹೋದ್ರೂ ಅಡ್ಡಿಲ್ಲೆ. ಮಂಡೆ ಒಂದ್ ಸಮಾ ಇರ್‍ಕ್. ಇಲ್ದಿದ್ರೆ ಹುಟ್ಸಿದ್ ಅಪ್ಪಂಗೂ ಸಸಾರ, ಅಬ್ಬೆಗೂ ಸಸಾರ, ಊರಿಗೇ ಸಸಾರ.”
ಗಂಡ ಸನ್ಯಾಸಿ ಹಿಂದೆಹೋದ ಲಾಗಾಯ್ತಿಂದ ಬಸುರಿ ಪಾರ್ಟು ಮಾಡುವ ಅಕ್ಕುವಿಗೆ ಒಂದು ಸಲವಾದರೂ ಅದು ಸುಳ್ಳು ಎಂತ ಅನಿಸಿದ್ದಿಲ್ಲ. ಒಮ್ಮೆ ಹೊಟ್ಟೆನೋವೋ ಎಂತ ಬೊಬ್ಬೆಯಿಡುತ್ತ ಆಚೆ ಈಚೆ ಓಡಾಡುತ್ತ, ಮನೆ ಬಾಗಿಲಿಗೆ ಕೈ ಕಾಲು ತಂದವರ ಹತ್ತಿರವೆಲ್ಲ ಹೇಳಿಕೊಂಡು ಗಲಾಟೆ ಮಾಡುತ್ತಿದ್ದಳು ಅಕ್ಕು. ”ನಿನ್ ಹೊಟ್ಟೆನೋವು ಬಿಡಿಸ್ತೆ” ಎಂತ ದೊಡ್ಡಜ್ಜಯ್ಯ ರಪರಪಂತ ಹಿಡಿಕಟ್ಟು ಹುಡಿ ಮಾಡಿದಾಗ “ಅಪ್ಪಯ್ಯ, ನನ್ ಮಗು ಸಾಯತ್, ನಿಮ್ಗೆ ಪಾಪ ತಟ್ಟತ್ ಕಾಣಿ” ಎನ್ನುತ್ತ ಬಗ್ಗಿಕೊಂಡೇ ಹೊಟ್ಟೆ ತಪ್ಪಿಸಿಕೊಳ್ಳುತ್ತಿದ್ದಳು. ಹಾಗೆ ಹೊಡೆಸಿಕೊಂಡು ಹದಿನೈದು ದಿನ ತುಟಿ ಒಡೆಯದೆ ತಾನಾಯಿತು, ಕೋಣೆಯಾಯಿತು ಎಂದು ಕೋಣೆಯೊಳಗೇ ಗುರುಟಿಕೊಂಡಿರುತ್ತಿದ್ದಳು. ಅವಳಿರುವ ಮೂಲೆ ಕೋಣೆಯೆಂದರೆ ಬೇಡದ ಸಾಮಾನುಗಳನ್ನೆಲ್ಲ ಬಿಸಾಡಿ ಇಡುವ ಕೋಣೆ. ಹಿಡಿಕಟ್ಟೂ ಓಡದ ಆ ಕೋಣೆಯೊಳಗೆ ಸಾಲೆಬಲೆ ಬೇಕಾದಷ್ಟು ಕಟ್ಟಿ, ಅದು ಒಕ್ಕುಂಟಿಯಂತೆ ಒಂದು ಮೂಲೆಯಲ್ಲಿತ್ತು. ಅದರೊಳಗೆ ಭೂತ ಪಿಶಾಚಿಗಳೂ ಉಂಟೆಂತ ಹೇಳುತ್ತಿದ್ದರು.
ಒಮ್ಮೆ ನಾವೆಲ್ಲ ಮನೆಯಾಟವಾಡುತ್ತಿದ್ದಾಗ ಝಣಝಣ ಶಬ್ದ ಕೇಳಿಸಿತು. ನಮ್ಮ ಗಂಟಲು ನೀರು ಆರಿತು. ಏಳಲೊಲ್ಲದ ಕಾಲನ್ನೆಳೆದುಕೊಂಡು ಹೋಗಿ ಸುದ್ದಿ ಮುಟ್ಟಿಸಿದಾಗ ವಾಸು ಚಿಕ್ಕಪ್ಪಯ್ಯ ಮತ್ತು ಅಂತಣ್ಣ ಓಡಿಬಂದರು. ಅವರ ಹಿಂದೆ ನಾವೂ ಬಂದಾಗ ”ಹೆಣ್ ಮಕ್ಕಿಗೆ ಎಂಥದದು ಧೈರ್ಯ! ಹೋತ್ರಿಯಾ ಇಲ್ಯ ಆಚೆಗೆ!” ಎಂದು ದನ ಎಬ್ಬಿದಂತೆ ಎಬ್ಬಿದರು. ನಾವು ಹೋದಂತೆ ಮಾಡಿ ಮತ್ತೆ ವಾಪಸಾದೆವು. ಕೋಣೆಯ ಬಾಗಿಲನ್ನು ಕಿರಿಬೆರಳ ತುದಿಯಿಂದ ಮೆಲ್ಲ ದೂಡಿದ ವಾಸು ಚಿಕ್ಕಪ್ಪಯ್ಯ “ಓ ಅಂತಣ್ಣ, ಇದೇ ಪ್ರೇತ!” ಎಂದು ನಕ್ಕ. ಅವನ ಸ್ವರ ಕೇಳುತ್ತಲೇ ನಾವು ಒಂದೊಂದೇ ಕಣ್ಣಲ್ಲಿ ಇಣುಕಿದೆವು. ಅಕ್ಕು ಹಿತ್ತಾಳಿ ತೊಟ್ಟಿಲೊಳಗೆ ಕುಳಿತಿದ್ದಳು. ಅದರೊಳಗೆ ಕಳಚಿ ಇಟ್ಟಿದ ಸರಪಳಿ ಹಿಡಿದು ತೊಟ್ಟಿಲು ತೂಗುವಂತೆ ಅಲ್ಲಾಡಿಸುತ್ತಿದ್ದಳು. “ಶ್, ಮಾತಾಡ್ಬೇಡಿ, ಮಗು ಈಗಷ್ಟೇ ಮೊಲೆಯುಂಡ್ ಮನ್ಕಂಡಿತ್” ಎಂದಳು. ವಾಸು ಚಿಕ್ಕಪ್ಪಯ್ಯ ಬಳಪದ ಕೀಚಲು ಗೀರಿನಂತೆ ನಗೆಯಾಡಿದ. ಓಲಾಡುತ್ತ ಬಂದು ನಿಂತಿದ್ದ ದೊಡ್ಡತ್ತೆ ನಗೆಯ ಚಕ್ಕೆ ಎಬ್ಬಿಸಿದಂತೆ “ಹಾಲು ಮಸ್ತಿತ್ತ ಕೇಣ ವಾಸು” ಎಂದರೆ ವಾಸು ಚಿಕ್ಕಪ್ಪಯ್ಯ ನಾಚಿಗೆ ಇಲ್ಲದೆ ಕೇಳಿದ. ಅಕ್ಕು ಸೆರಗು ಸರಿ ಮಾಡಿಕೊಂಡು ”ಇತ್ತ್, ಸದ್ಯಕ್ ಸಾಕ್” ಎಂದಳು.
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
”ಪಿರ್ಕಿ, ಅಡ್ಡಿಲ್ಲೆ. ಹೆರಿಗೆ ಯಾವಾಗಾದ್?”
“ನಿನ್ನೆ ರಾತ್ರಿ.”
ಅವತ್ತಿಡೀ ಮೂಲೆ ಕೋಣೆಯಲ್ಲಿ ಹೆತ್ತು ಮಲಗಿದ ಬಾಣಂತಿ ಪ್ರೇತದ ಮಾತೇ. ಹೀಗೇ ಬಿಟ್ಟರೆ ಕೋಣೆಯಲ್ಲಿ ನಿಜವಾದ ಪ್ರೇತವೇ ಇದನ್ನು ಒತ್ತಿ ಹಿಡಿದೀತು ಎಂದ ವಾಸು ಚಿಕ್ಕಪ್ಪಯ್ಯನಿಗೆ ”ಸತ್ಯಕ್ಕೂ ಹಿಡಿಯುಕೆ ಬಂದ್ ಪ್ರೇತನ್ನ ದೂಡಿಹಾಕಿ ಬಂದದ್ದಲ್ಲ ಇದ್, ಹಾಂಗೆಲ್ಲ ಹೆದ್ರಿಕೆ ಬೇಡ” ಎಂದರು ದೊಡ್ಡತ್ತೆ.
ಮರುದಿನವೇ ಅಕ್ಕು ಮತ್ತೆ ಬಸುರಿಯಾಗಿದ್ದಳು. ಈ ಬಸುರು ಕಳೆಯುವುದೂ ಇಲ್ಲ, ಗಂಡ ಬರುತ್ತಲೂ ಇಲ್ಲ.
*
ಹೀಗಿರಲೊಂದು ದಿನ ಅಕ್ಕುವಿನ ಗಂಡ ಬಂದ ಸುದ್ದಿ ಉಪ್ಪರಿಗೆ ಕಪಾಟಿನ ಚಡಿಯಲ್ಲಿ ಕುಳಿತು ಕತೆ ಪುಸ್ತಕ ಓದುತ್ತಿರುವವರನ್ನಾದಿಯಾಗಿ ಮುಟ್ಟಿತು. ಅವ ಊರಿಗೆ ಬಂದು ಮುಟ್ಟಿದ ಕೂಡಲೇ ”ಅಕ್ಕು ಬಸುರಿ” ಎಂದರಂತೆ ಯಾರೋ. ಎದೆ ಅತ್ತ ಹಾರಿಹೋದಂತಾಗಿ ವಾಪಸು ಹೊರಟನಂತೆ. ಕಡೆಗೆ ಕತೆ ಹೀಗೆ ಹೀಗೆ, ನಾಲ್ಕು ಸುತ್ತು ಬಿದ್ದು ಹೋಗಿದೆ ಎಂದರಂತೆ. ಹಿಂದೆ ಬಂದನಂತೆ.
ಚಾವಡಿಯಲ್ಲಿ ಕುಳಿತು ದೊಡ್ಡಜ್ಜಯ್ಯನೊಡನೆ ಕಫ ಗುರುಗುಡುವ ಸ್ವರದಲ್ಲಿ ಹೇಳುತ್ತಿದ್ದ. ಅವನಿಗೆ ನಾವೆಣಿಸಿದಂತೆ ದೊಡ್ಡ ಹೊಟ್ಟೆ, ದೊಡ್ಡ ಮೀಸೆ, ಗಿಡ್ಡ ದೇಹ, ಉರುಟು ಮುಖವಿರಲಿಲ್ಲ. ಬರೀ ಚೀಂಕಟೆಯಾಗಿದ್ದ. ಕೈಕಾಲು ಸೌದೆ ಚಪ್ಪಿನಂತಿದ್ದವು. ಕಣ್ಣುಗಳು ಕಪ್ಪೆಗಣ್ಣಿನಂತಿದ್ದವು. ಹರಿವೆ ಬೀಜ ಬಿತ್ತಿದರೆ ಗಿಡವಾಗುವಷ್ಟು ಮಣ್ಣು ಮಣ್ಣಾದ ಮುಂಡು ಸುತ್ತಿಕೊಂಡು ಮುಡುಗು ಬೆನ್ನಲ್ಲಿ ಕುಳಿತಿದ್ದ. ಅಜ್ಜಯ್ಯ ತನ್ನ ದೊಡ್ಡ ಕುರ್ಚಿಯಲ್ಲಿ ಮುಖದಲ್ಲಿ ಹನಿನಗೆಯೂ ಇಲ್ಲದೆ ಬಿರುಸಾಗಿ ಕುಳಿತಿದ್ದರು. ಅವರ ಮೀಸೆ ತುದಿ ಕೂಡ ಈ ಮನುಷ್ಯನನ್ನು ಮೂರು ಕಾಸಿನ ನಾಯಿಯೆಂಬಂತೆ ನೋಡುತ್ತಿರುವಂತಿತ್ತು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಅಕ್ಕುವಿನ ಗಂಡ ಕುಳಿತಂತೆ ಕೂರಲಿಲ್ಲ. ನೀರು ಹಾವಿನಂತೆ ಮುಲಗುತ್ತ ಕುಳಿತ ರೀತಿ ಬದಲಾಯಿಸುತ್ತಿದ್ದ, ತಾನವಳನ್ನು ಬಿಟ್ಟು ಹೋದದ್ದಲ್ಲ. ಆ ಸುಟ್ಟ ಸ್ವಾಮಿಗಳ ಹಿಂದೆ ಹೋದದ್ದಲ್ಲವೆ? ನೆನಪು ಹೋಯಿತೆ? ಹೋದವ ಹೋಗಿಯೇ ಬಿಟ್ಟೆ, ಕಾಶಿ ಹಿಮಾಲಯದ ವರೆಗೂ ಸ್ವಾಮಿಗಳು ಬಂದರು. ತಾನೂ ಬಂದೆ. ಪಡಪೋಶಿಯೆಂತ ಎಣಿಸುವುದು ಬೇಡ. ಸ್ವಾಮಿಗಳೊಟ್ಟಿಗೆ ಇದ್ದರೆ ಒಳ್ಳೆಯ ಸಂಪಾದನೆ ಆಗುತ್ತದೆ, ಆಗಿದೆ ಇತ್ಯಾದಿ ಹೇಳಿದೆ. ಅಜ್ಜಯ್ಯ ಹೂಂಗುಡುತ್ತಲೂ ಇರಲಿಲ್ಲ. ಅವನತ್ತ ನೋಡಲೂ ಇಲ್ಲ.
ಇಷ್ಟಕ್ಕೂ ಅಕ್ಕುವನ್ನು ಬರ ಹೇಳಿದರೆ ಅವಳೆಲ್ಲಿ? ಒಳಗೆಲ್ಲಿಯೂ ಇಲ್ಲ ಎಂಬ ಸುದ್ದಿ ಬಂತು. “ಹುಡುಕಿ, ಇಲ್ಲೆ ಅಂದ್ರೆ” ಎಂದು ಅಪ್ಪಣೆಯಾಯಿತು. ಹುಡುಕಿಕೊಂಡು ಹೊರಟ ವಾಸು ಚಿಕ್ಕಪ್ಪಯ್ಯನಿಗೆ ಆಕೆ ಸಿಕ್ಕಿದ್ದು ಹಾಡಿಯ ಕೆರೆ ದಂಡೆಯ ಮೇಲೆ. “ಗುಂವಿಗೆ ಹಾರ್‍ಕಂಬೇಡ. ಗಂಡ ಬಂದಿದ್ದ ಕಾಣ್” ಎಂದ್ರೆ “ಬಸ್ ಛಾರ್ಜ್ ಕೊಟ್ ವಾಪಸ್ ಕಳ್. ಅವ ಬಂದದ್ ಕಂಡೇ ಇಲ್ಲಿಗ್ ಬಂದದ್ ನಾನ್” ಎಂದು ರಾಪು ಮಾಡಿದಳಂತೆ. “ಎಂತದೆಲ್ಲ ಹಿಕ್ಕತ್ ಮಾಡಿ ಕರ್‍ಕಂಡ್ ಬಂದೆ. ನೀವೇನಾದ್ರೂ ಬೈಯ್ಡ್ ಗಿಯ್ದ್ರೇ ಗುಂವಿಗೆ ಹಾರ್‍ಕಂತ್ಲ್ ನಂಗೊತ್ತಿಲ್ಲೆ ಕಡೆಗೆ!” ಎಂದ ಬೆವರೊರೆಸಿಕೊಳ್ಳುತ್ತ.
ಹಿಂಬದಿಯ ಬಾಗಿಲಿಂದ ಒಳಹೊಗ್ಗಿದ ಅಕ್ಕು ಏನು ಮಾಡಿದರೂ ಮುಂದೆ ಹೆಜ್ಜೆ ಇಡಲೊಲ್ಲಳು. ಬಾಯಿ ತೆರೆದು ನಿಂತ ಭತ್ತ ಕುಟ್ಟುವ ಒರಳಿನ ಹತ್ತಿರ ಗೋಡೆಗೆ ಬಲ ಹಿಂಗಾಲು ಕೊಟ್ಟು ಡೊಂಕಾಗಿ ನಿಂತು ಉರುಟುರುಟಾಗಿ ಕಣ್ಣು ಬಿಟ್ಟಳು. ದೊಡ್ಡಜ್ಜಯ್ಯ ಕಾದು ”ನಡಿ, ನೀನೇ” ಎಂದು ಸಂಕಪ್ಪನ್ನ-ಅಕ್ಕುವಿನ ಗಂಡನ್ನ-ಕರೆದುಕೊಂಡು ಒಳಗೆ ಬಂದರು.
”ಅಕ್ಕು…” ಎಂದರು ಅಜ್ಜಯ್ಯ.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
“ಅಕ್ಕು ಸತ್ ಮೂರ್ ಹಗಲು ಮೂರ್ ರಾತ್ರಿ ಆಯಾಯ್ತ್. ಈ ನಾರಟೆ ಕ್ರಿಯೆ ಹಿಡಿಯುಕೆ ಬಂದದ್ದಾ ಕೇಣು!” ಭಗಭಗ ಬೆಂಕಿ ಉರಿಯುವಂತಹ ಸ್ವರದಲ್ಲಿ ನುಡಿದಳು ಅಕ್ಕು. “ಕೇಂಡ್ಯಲೆ! ನಿನ್ನಂಥ ಫಟಿಂಗ್ನಿಗೆ ಮಾಣಿಕ್ಯ ಕೊಟ್ಟಿದ್ದಕೆ!”
ಸಂಕಪ್ಪ ಅಕ್ಕಳೆ ಕೊಚ್ಚಿದಂತಿದ್ದ ಕ್ರಾಪಿನ ತಲೆಯನ್ನು ಬಾಗಿಸಿ ಮಾತಾಡದೆ ನಿಂತಿದ್ದ. ದೊಡ್ಡತ್ತೆ ಹೇಳಿದರು- ”ಅಂತೂ ಬಂದ್ಯ! ಊರ್ ಮೇಲಿನ್ ಹೆಣ್ಮಕ್ಳೆಲ್ಲ ಖರ್ಖಾದ್ವ?”
ದೊಡ್ಡತ್ತೆ ಕೇಳಿದ್ದು ಸಮನೆಂಬಂತೆ ಅಜ್ಜಯ್ಯ ಅವನನ್ನೊಮ್ಮೆ ಸದರದಿಂದ ನೋಡಿದರು. ಅವ ಬಾಯಿ ತೆರೆಯುವುದರೊಳಗೆ ಅಕ್ಕು ಹೇಳಿದಳು.
“ನಾನೇನ್ ಬಿಟ್ಟಿದ್ನ? ಈ ಉರೊಳ್ಗೆ ಯಾವ ಗಂಡ್ಸನ್ನ ನಾನ್ ಬಿಟ್ಟಿದ್ದೆ ಅಂಬ್ರ್! ಹೇಳೂ ಗಂಡ್ಸ್ ಯೆದುರ್ ಬರ್‍ಲಿ ಕಾಂಬ! ಇಂಥಾ ಕಳ್ಳನ್ನ ಕಟ್ಕಂಡ್ರೆ ಹೌದ ಮತ್ತೆ?”
ನಪುಂಸಕನಂತೆ ನಿಂತಿದ್ದ ಸಂಕಪ್ಪ. ಅಜ್ಜಯ್ಯ ಅಕ್ಕುವಿನತ್ತ ಹೂಂಕರಿಸಿದರು. “ಹೆಣೆ, ಬಾಯ್ಮುಚ್ಕಂತ್ಯ? ಹೀಂಗಿದ್ ಉಡಾಪ್ ಮಾಡ್ಕಂಡೇ ತಲೆ ಕೆಳ್ಗೆ ಕಾಲ್ ಮೇಲೆ ಅದ್ದ್” ಎಂದರು ದೊಡ್ಡತ್ತೆ.
“ಸಂಕಪ್ಪ, ಆದದ್ ಆಯ್ತ್. ನಿನ್ನಿಂದ್ಲೇ ಆದ್ ಈ ಕರ್ಮನ್ನ ನೀನೇ ಅನುಭವಿಸ್ಕ. ಪೊಟ್ಟೋ ಪೋಂಕೋ. ಅವ್ಳ ಇರ್‍ಕಾದ್ ನಿನ್ಹತ್ರ. ಎರಡು ದಿವಸ ಇದ್, ಕರ್‍ಕಂಡ್ ನಡೆ” ಎಂದು ಅಲ್ಲಿಂದ ಹೋಗಿ ಬಿಟ್ಟರು ಅಜ್ಜಯ್ಯ.
“ಯೆಂತದ್? ಇನ್ ಇವ್ನೊಟ್ಟಿಗೆ ಹೋಪ್ದ! ನನ್ ಹೆಣ ಸಮೇತ ಹೋಗ!” ಎಂದಳು ಅಕ್ಕು.
“ಹೆಣೆ, ಗಂಡನ್ನ ಈ ನಮೂನೆ ನಿಕೃಷ್ಟ ಮಾಡಿ ಮಾತಾಡುಕಾಗ, ಅವ ಎಂಥವ್ನೇ ಇರ್‍ಲಿ” ಎಂದರು ದೊಡ್ಡತ್ತೆ. ಸಂಕಪ್ಪ ಒಂದು ಹೆಜ್ಜೆ ಮುಂದಿಡಲಿಲ್ಲ. ಅಕ್ಕು ಸರಕ್ಕೆಂತ ತಿರುಗಿ ಹೊರ ನಡೆದು ಬಿಟ್ಟಳು. ಯಾರೂ ಈಗ ಒಂದಕ್ಷರ ಪಿಟಕ್ಕೆನ್ನಲಿಲ್ಲ.
*
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಎರಡು ರಾತ್ರಿಯಿದ್ದ ಸಂಕಪ್ಪ. ಅಕ್ಕು ಮೂಲೆಕೋಣೆಯಲ್ಲಿಯೇ ಮಲಗಿದಳು. ಒಳಗೆ ಕಾಲಿಡಲಿಲ್ಲ. ಚಾವಡಿ ಕೊಡಿಯಲ್ಲಿ ಕಾಲು ಮಡಚಿ ಮುರುಟಿಕೊಂಡು ಮಲಗುತ್ತಿದ್ದ ಸಂಕಪ್ಪ. ಏನೂ ತಿಳಿಯದ ಬೋದಾಳ ಶಂಕರನಂತೆ.
ಆ ಬೆಳಿಗ್ಗೆ ವಾಸು ಚಿಕ್ಕಪ್ಪಯ್ಯನ ಹತ್ತಿರ ಪಿಸುಗುಡುತ್ತಿದ್ದರು ದೊಡ್ಡತ್ತೆ. “ನಾ ನಿನ್ನೆ ರಾತ್ರಿ ಏಣು ಮೆಟ್ಲಿನ ಬುಡದಲ್ಲಿ ಕೂತ್ಕಂಡ್ ಕಾಂತಿದ್ದೆ. ಹಂಗಾರೆ ಈ ಪ್ರಾಣಿ ಸನ್ಕಾಸಿಯೇ ಆಯ್ತಾ ಎಂತದು ಅಂದ್ಕಂಡು ಮಾರಾಯ. ಫುಟ ಅರ್ಧರಾತ್ರಿ ಮೇಲೆ ಮೆಲ್ಲ ಎದ್ದು ಮೂಲೆ ಕೋಣೆಗೆ ನಡ್ಡದ್ದೆ ಅಲ್ದ! ಅಸ್ಟ್ ಕಂಡೇ ನಾ ಒಳ್ಗ್ ಬಂದ್ ಕಣ್ಮುಚ್ಚಿದ್!”
“ಇದು ಅಲ್ಲೇ ದೇವರಿಗೆ ಹೂಮಾಲೆ ಕಟ್ಟುತ್ತ ಕುಳಿತ ನಮಗೆಲ್ಲ ಕೇಳಿಸಿದಾಗ “ಈಗಿನ ಹೆಣ್ಮಕ್ಳಿಗೆ ಪ್ರಾಯ ಬತ್ ಬತ್ ಅಂಬುದ್ರೊಳ್ಗೆ ಸೂ ಅಂಬುಕಿಲ್ಲೆ. ಕಿವಿ ಬೀಳೆಲ್ಲ ಅರ್‍ಳಿಯಾಯ್ತ್” ಎಂದರು. ಕಿವಿ ಮಡಚಿಕೊಳ್ಳುವಂತಾಯ್ತು.
ಇದೇ ದೊಡ್ಡತ್ತೆಯಲ್ಲವೆ? “ಹಾಲು ಮಸ್ತಿತ್ತಾ ಕೇಣ್” ಎಂದು ವಾಸು ಚಿಕ್ಕಪ್ಪಯ್ಯನಿಗೆ ಹೇಳಿದ್ದು? ಮನಸ್ಸು ಬಂದಾಗ ಯಾರಿದ್ದಾರೆ ಸುತ್ತಮುತ್ತ ಎಂಬ ಗೋಚರ ಇಲ್ದೆ ಬೇಕು ಬೇಕಾದ್ದು ಮಾತಾಡುವುದು. ನಮ್ಮ ಹತ್ತಿರ ಮಡಿ ಮಡಿಯಾಗುವುದು. ಇವರು ಹೆಣ್ಣಲ್ಲವೆ ಹಾಗಾದರೆ? ಅಂಬೆಲ್ಲ ತರ್ಕಗಳೂ ಹೂ ಹಗ್ಗದ ಗಂಟೆಯೊಳಗೆ ಸೇರುತ್ತ ಮಾಲೆ ಉದ್ದವಾಗುತ್ತಿರುವಾಗ-
ಅಕ್ಕುವಿನ ಸವಾರಿ ಬಂತು. ಭೂತ ಬಂದಂತೆಯೇ. ಅರಳು ಹೊಟ್ಟಿದಂತೆ ಮಾತಾಡಿಕೊಂಡೇ ಬಂದಳು. “ಓಯ್, ಓ ಹೋಯ್, ದೊಡ್ಡತ್ತೆ ಎಂಬವ್ರೆ-ಎಲ್ಲಿ ಹೋದ್ರಿ? ಬನ್ನಿ, ಬನ್ನಿ, ಬನಿ ಬನಿ ಬನಿ ಬೇಗ, ಮಾತಾಡಲಿಕ್ಕೆ ಕೋರ್ಜಿಯುಂಟು. ಆ ಎಲೆ ಅಡಿಕೆ ಹರಿವಾಣ ತನ್ನಿ….”
ದೊಡ್ಡತ್ತೆ ಅವಳ ಸ್ವರದ ಗೆಲ ಕಂಡು “ಈ ರಂಡೆಗ್ ಜೀವ ಹೋಯ್ತಂತೆಳಿ ಕಾಣತ್” ಎನ್ನುತ್ತಲೇ ಆರೇ ನಗುವಿನಲ್ಲಿ ಎದುರು ಬಂದರು. ಅವರ ಹಿಂದೆ ಮನೆಯ ಉಳಿದವರು, ಕೆಲಸದವರು, ನಾವು, ಎಲ್ಲರೂ ಕಾಲು ಮೇಲೆ ಕಾಲು ಏರಿಸಿ ಕೂತಲ್ಲೇ ಆನೆಯಾಡುತ್ತಾ, ”ಓ ಹೋಯ್, ಕೇಳಿದಿರೇನು ಸಮಾಚಾರ? ಬಂದವ ಹಿಡ್ಕಂಡದ್ದೇ ರಸ್ತೆ ಬದಿ ಹೆಣ್ಣುನ್ ಹಾಂಗಲ್ಲ ನೀನ್ ಎಂದ. ‘ಥ ನಾಲು ಜಾತಿಯವ್ನೆ, ತೆವಡ್ಕೊ ಆಚೆ. ಮುಟ್ಬೇಡ. ನಾ ಬಸಿ’ ಎಂದೆ. ‘ಯಾರ್ ಮಾಡಿದ್ದ್?’ ಎಂದ. ‘ಅಡ್ಡದ್ ಮನೆ ತಿಮ್ಮಪ್ಪಯ್ಯ’ ಎಂದೆ. ಆದ್ರೂ ಬಿಡ್ಲಿಲ್ಲೆ. ಮಾಡಿಸ್ತೆ ನಿಂಗೆ ಅಂದೇ, ತೊಟ್ಲಿನ್ ಸರಪಣಿ ಎಳ್ದೇ, ಬೀಸಿ ಬೀಸಿ ಹೊಡ್ದೆ. ಬೀಸಿ ಬೀಸಿ ಹೊಡ್ದೆ. ಎಲ್ಲಿತ್ ನಸ್ರಾಣಿ? ಪ್ರಾಣಿ ಪಂಜಿ ಸುತ್ಕಂಡ್ ಪುಡ್ಜೋ…
“ನೀವಂತದೇ ಹೇಳಿ ದೊಡ್ಡತ್ತೆ, ಇದ್ರ್ಕಿಂತ ಆ ಅಡ್ಡದ್ಮನೆ ತಿಮ್ಮಪ್ಪಯ್ಯ ಅಡ್ಡಿಲ್ಲೆ. ಅವನ್ ಎದೆಯೇನ್! ತುಟಿಯೇನ್!”
ದೊಡ್ಡಜ್ಜಯ್ಯ ಜಲ್ಲು ಊರಿ ಬರುವ ಶಬ್ದ ಕೇಳಿಸಿತು. ವಾಸು ಚಿಕ್ಕಪ್ಪಯ್ಯ ಅಕ್ಕುವಿನ ಬಾಯಿ ಹಿಡಿದು ಒತ್ತಿ ಹಿಡಿದು ವಿಶೇಷದಡಿಗೆ ಕೋಣೆಗೆ ದರದರ ಎಳೆದುಕೊಂಡು ಹೋದ. ಅಲ್ಲಿದ್ದ ಕೋಲು ಸೌದೆ ಎಳೆದು ಒಗೆಯುವ ಕಲ್ಲಿಗೆ ವಸ್ತ್ರ ಜಪ್ಪಿದಂತೆ ಜಪ್ಸಿದ. “ಈ ಮರುಳು ಹೊಳೆ, ಗುಂವಿ, ಬೇಣ, ಮತ್ತೊಂದ್ ಮೊದ್ಲೊಂದ್ ಅಂತೆಳಿ ತಿರುಗಿರೆ ಅಡ್ಡದ್ಮನೆ ತಿಮ್ಮಪ್ಪಯ್ಯ ಬಿಟ್ಟು ಅವನಪ್ನೂ ಹಿಡ್ಕಂತ. ಇನ್ಮೇಲೆ ಎಲ್ಲ ತಿರ್‍ಗಾಟ ಬಂದ್” ಪೆಟ್ಟು ಬೀಳುತ್ತಲೇ ಇತ್ತು.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
“ಇಷ್ಟಕ್ಕೂ ಅವ ಮುಟ್ಟಿದ್ನೋ ಇಲ್ಯೇ. ಆ ಪಿರ್ಕಿ ಮಾತ್ ಕೇಂಡ್ಕಂಡ್ ಅವನ್ನ ಕೊಚ್ಚುಕೆ ಹೋದ್ರೆ ನಾವೇ ಕೆಪ್ಪೆಗ್ ತಿಂದ್ ಬರ್‍ಲಕ್” ಅಂತಣ್ಣ ಎಲೆ ಅಡಿಕೆ ಹೋಳನ್ನು ಬಾಯೊಳಗೆ ಆಚೀಚೆ ಉರುಳಿಸುತ್ತ ಕುಶಾಲಿನಲ್ಲಿ ಎಂದ. “ಹಲ್ಲ, ಎಲ್ಲ ಬಿಟ್ಟು ಆ ತಿಮ್ಮಪ್ಪಯ್ಯ, ಅವ ಬಿತ್ತಿದ್ ಬೀಜ ಗಿಡವಾದ್ ಇತ್ತಂಬ್ರ?” ಗೆರಟೆ ಹೆರೆದಂತೆ ನಗಾಡಿದ.
“ಸಂಕಪ್ಪನ್ ಎಳ್ಕಂಡ್ ಬಾ, ಗಂಡ ಹೆಂಡತಿ ಇಲ್ಲಿಂದೊಂದ್ಸಲ ನಿವಾಳ್ಸಲಿ, ಬೇಕಾರೆ ಕಾಲಿಗೂ ಕುತ್ತಿಗೆಗೂ ಬಳ್ಳಿ ತಕಣ್ಣಿ”-
ಮನೆಯ ಕಂಬ ಕಂಬಗಳಿಗೆಲ್ಲ ಈಗ ಮಾತು ಬಂದಿತ್ತು. ಅಜ್ಜಯ್ಯ ಬಂದೇ ಬಿಟ್ಟರು. ಸಿಟ್ಟಿಂದ ಥರಗುಟ್ಟುತ್ತಿದ್ದರು. “ನನ್ ಯಾವ್ ಜನ್ಮದ್ ಪ್ರಾರಬ್ಧ ಇದ್!” ಎಂದು ಸಂಕಟಪಟ್ಟರು. “ಹಾಕ್ ನಾಕ್, ಇನ್ನೂ ನಾಕ್, ಸತ್ರೆ ಸತ್ತ್‌ತ್, ಮರ್‍ಕುವಮ್ಮ ಯಾರಿಲ್ಲೆ’ ಎಂದರು. ವಾಸು ಚಿಕ್ಕಪ್ಪಯ್ಯ ಹೊಡೆತ ಮುಂದುವರಿಸಿದ.
”ಅಯ್ಯಯ್ಯೋ, ನನ್ ಜೀವ ತೆಗೀತಾ ವಾಸೂ. ಅಪ್ಪಯ್ಯಾ, ನಂಗೆ ಹೊಡೀತಾ. ನನ್ ಮಗೂನ ಕೊಲ್ತಾ ಕಾಣಿ ಅಪ್ಪಯ್ಯ. ಇವ ಮೊನ್ನೆ ತಮ್ಮಣ್ಣಯ್ಯನ್ ಜಗಲಿ ಮೇಲೆ ಯಾಕಿದ್ದ ಅಂತೆಳಿ ಕೇಣಿ ಅಪ್ಪಯ್ಯ…” ಎಂದು ಬೊಬ್ಬೆ ಹೊಡೆಯುತ್ತಿದ್ದ ಅಕ್ಕುವಿನ ಬಾಯಿ ಮೇಲೆ ಹೊಡೆದ. ಯಾರೂ ತಡೆಯಲಿಲ್ಲ. ಬಿಡು ಎನ್ನಲಿಲ್ಲ. ಅಕ್ಕುವನ್ನು ಈಚೆಗೆಳೆದುಕೊಳ್ಳಲಿಲ್ಲ. ಕ್ಷಣಕ್ಷಣಕ್ಕೂ ನೋಡುವ ಜನರ ಸಂಖ್ಯೆ ಬೆಳೆಯುತ್ತಾ ಇತ್ತು. ಈ ದೃಶ್ಯ ನಿರಂತರವಾಗಿರಬೇಕು ಎಂಬ ಬಯಕೆಯಿಂದ ನಿಂತಂತಿತ್ತು. ಆ ಕೂಗಿಗೂ, ಆ ಪೆಟ್ಟಿಗೂ ಅಷ್ಟು ಲಗತ್ತಿತ್ತು. ಭಾನು ಚಿಕ್ಕಿ ಸೊಂಟಕ್ಕೆ ಕೈಯಿಟ್ಟುಕೊಂಡು “ಅದು ಪಿರ್ಕಿಯ ಮತ್ತೆಂತದ! ಯಾರಿಗಾದ್ರೂ ಪಿರ್ಕಿ ಮಾಡತ್ತ್” ಎಂದದ್ದು ಆಕೆ ಅಳುವಿನಿಂದ ಗುಸುಗುಟ್ಟಿದಂತಿತ್ತು.
“ಈ ನಮೂನೆ ಹೊಡೆದಿದ್ರೆ ನಾನಾರೆ ಸತ್ತೇ ಹೋತಿದ್ದೆ, ಪಿರ್ಕಿಗಳಿಗೆ ಶಕ್ತಿ ಜಾಸ್ತಿ ಅಂಬ್ರಲೆ” ಎಂದಿತು ಒಂದು ಹೆಣ್ಣುದನಿ.
ವಾಸು ಚಿಕ್ಕಪ್ಪಯ್ಯ ಬಾಯಿ ಮೇಲೆ ಎಷ್ಟೇ ಹೊಡೆದರೂ, ಅಕ್ಕುವಿನ ಬೊಬ್ಬೆ ನಿಲ್ಲಲಿಲ್ಲ. ದೂರೂ ನಿಲ್ಲಲಿಲ್ಲ. ಆಕೆ ಸಾಯಲಿಲ್ಲ.
ಇದನ್ನು ಓದಿದ್ದೀರಾ?: ಬೆಸಗರಹಳ್ಳಿ ರಾಮಣ್ಣ ಅವರ ಕತೆ | ಗಾಂಧಿ
ಸೋತು ಅಕ್ಕುವನ್ನು ಅಲ್ಲಿಯೇ ಬಿಟ್ಟು “ಎಲ್ಲರೂ ಹೊರಗೆ ಹೋಗಿ” ಎಂದ ವಾಸು ಚಿಕ್ಕಪ್ಪಯ್ಯ. ಹೊರಗೆ ಬಂದದ್ದೇ ಬಾಗಿಲೆಳೆದು ಚಿಲಕ ಹಾಕಿದ. ಅವನ ಹಿಂದೆಯೇ ಓಡಿಬಂದು ಬಾಗಿಲು ತೆಗೀ ಎಂದು ಬೊಬ್ಬೆ ಹಾಕುತ್ತಾಳೆಂತ ಮಾಡಿದ್ದೆಲ್ಲ ಸುಳ್ಳಾಯಿತು. ಯಾರಿಲ್ಲದ ಹೊತ್ತಿನಲ್ಲಿ ಮೆಲ್ಲ ಚಿಲಕ ತೆಗೆದು ಬಿಡಬೇಕೆಂಬ ನಮ್ಮ ಆಸೆ ಉತ್ಸಾಹ ಕಳೆದುಕೊಂಡಿತು. ಅಕ್ಕು ಒಳಗೇ ಉಳಿದು ಪುಟ್ಟ ಕಿಟಕಿಯಿಂದ ಅವಳ ಟುವಾಲು ತೂರಿಸಿ ಹಾರಿಸುತ್ತಾ ಬೊಬ್ಬಿಡುತ್ತಿದ್ದಳು.
”ಆ ತಮ್ಮಣ್ಣಯ್ಯನ್ ಹೆಂಡ್ತಿ ಕಾಯ್ತ್ಲ್ ಕಾಣ್. ಓಡು, ಓಡ್ ಬೇಗ. ಮರ್ಯಾದೆ ಸತ್ತವ್ನೇ, ಈಗ ಹೊಡೀ ಬಾ… ಕಾಂಬ.”
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ವೈದೇಹಿ(1945-): ವೈದೇಹಿ ಎಂದು ಪರಿಚಿತರಾದ ಜಾನಕೀ ಶ್ರೀನಿವಾಸಮೂರ್ತಿ ಕರಾವಳಿಯ ಕುಂದಾಪುರದವರು. ಬಿಕಾಂ ಪದವೀಧರರು. ಇವರು ಕಾವ್ಯ, ಕಥೆ, ಕಾದಂಬರಿ, ಪ್ರಬಂಧ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದಾರೆ. ‘ನೀರೆಯರ ಮನ’ ಎಂಬ ಕತೆಯನ್ನು ಸುಧಾ ವಾರಪತ್ರಿಕೆಗೆ ‘ಜಾನಕಿ’ ಎಂಬ ಕಾವ್ಯನಾಮದಲ್ಲಿ ಪ್ರಕಟಣೆಗೆ ಕಳುಹಿಸಿದರು. ಆನಂತರ ಅದು ನಿಜ ಘಟನೆಯಾದ್ದರಿಂದ ಪ್ರಕಟಿಸಬೇಡಿ ಎಂದು ಪತ್ರವನ್ನೂ ಬರೆದರು. ಆದರೆ ಸುಧಾದ ಆಗಿನ ಸಂಪಾದಕರು ವೈದೇಹಿ ಎಂಬ ಕಾವ್ಯನಾಮ ನೀಡಿ ಈ ಕಥೆಯನ್ನು ಪ್ರಕಟಿಸಿದರು. ಅಂದಿನಿಂದ ಇವರಿಗೆ ವೈದೇಹಿ ಎಂಬುದೇ ಕಾವ್ಯನಾಮವಾಯಿತು. ಇವರ ಕಥೆಗಳ ಅತ್ಯಂತ ಪ್ರಮುಖ ಲಕ್ಷಣಗಳೆಂದರೆ ತಮ್ಮ ಮನೆಮಾತಾದ ಕುಂದಾಪುರ ಕನ್ನಡದ ಬಳಕೆ ಹಾಗೂ ಸ್ತ್ರೀ ಲೋಕದ ಸೂಕ್ಷ್ಮ ಅಂಶಗಳ ಅನಾವರಣ. ಕಥಾಸಂಕಲನಗಳು: ಮರಗಿಡಬಳ್ಳಿ, ಅಂತರಂಗದ ಪುಟಗಳು, ಗೋಲ, ಕ್ರೌಂಚ ಪಕ್ಷಿಗಳು, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು, ಕತೆ ಕತೆಕಾರಣ. ಕವನ ಸಂಕಲನಗಳು: ಬಿಂದು ಬಿಂದಿಗೆ, ಪಾರಿಜಾತ, ಹೂವಕಟ್ಟುವ ಕಾಯಕ, ದೀಪದೊಳಗಿನ ದೀಪ. ಕಾದಂಬರಿ: ಅಸ್ಪೃಶ್ಯರು. ಮೈತ್ರೇಯಿಯವರ ಮೂಲಕೃತಿಯ ಅನುವಾದ ಬೆಳ್ಳಿಯ ಸಂಕೋಲೆಗಳು. ಪ್ರಬಂಧಗಳು: ಜಾತ್ರೆ, ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ. ಆತ್ಮಕಥೆ ನಿರೂಪಣೆ: ಕೋಟ ಲಕ್ಷ್ಮೀನಾರಾಯಣ ಕಾರಂತ(ಕೋ ಲ ಕಾರಂತ)ರ ಆತ್ಮಕಥೆ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’, ಸೇಡಿಯಾಪು ಕೃಷ್ಣಭಟ್ಟರ ‘ಸೇಡಿಯಾಪು ನೆನಪುಗಳು’, ಬಿ.ವಿ.ಕಾರಂತರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’. ಪ್ರಶಸ್ತಿಗಳು: ವರ್ಧಮಾನ ಉದಯೋನ್ಮುಖ ಪುರಸ್ಕಾರ, ಕಥಾಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಇವರ ಕತೆಗಳು ಮರಾಠಿ, ಮಲಯಾಳಂ, ಹಿಂದಿ, ಗುಜರಾತಿ ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಸ್ತುತ ಮಣಿಪಾಲದಲ್ಲಿ ನೆಲೆಸಿದ್ದಾರೆ.





