ವೀಣಾ ಶಾಂತೇಶ್ವರ ಅವರ ಕತೆ | ತಿರುಗಿ ಹೋದಳು

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಲಕ್ಷ್ಮಿಗೆ ತೀರ ಚಿಕ್ಕವಳಾಗಿದ್ದಾಗಿನ ದಿನಗಳಿಂದಲೇ ಇಮಾಮ್ ಬೀಯ ನೆನಪು ಹಸಿರಾಗಿದೆ. ಲಕ್ಷ್ಮಿ ಹುಟ್ಟುವ ಮೊದಲೇ ಅವಳ ಅಮ್ಮ ಮದುವೆಯಾಗಿ ಈ ಮನೆಗೆ ಬಂದಾಗಿನಿಂದಲೂ ಇಮಾಮ್‌ ಬೀ ಈ ಮನೆಯಲ್ಲಿ ಕಸ-ಮುಸುರೆ-ಬಟ್ಟೆ ಒಗೆಯುವುದು-ಕಾಳುಕಡ್ಡಿ ಹಸನು ಮಾಡುವುದು ಇತ್ಯಾದಿ ಎಲ್ಲ ಮೇಲ್ಗೆಲಸ ಮಾಡುತ್ತ, ಈ ಮನೆಯಲ್ಲಿ ಕೆಲಸದವಳಾಗಿರದೆ ಮನೆಯವಳೇ ಆಗಿ ಎಲ್ಲರಿಗೂ ಆಪ್ತಳಾಗಿದ್ದಾಳೆ. ಲಕ್ಷ್ಮಿ ನರ್ಸರಿ ಸ್ಕೂಲಿಗೆ ಹೋಗುತ್ತಿದ್ದಾಗ ದಿನಾ ಅವಳನ್ನು ಎತ್ತಿಕೊಂಡು ಸ್ಕೂಲಿಗೆ ಒಯ್ಯುವುದು-ತಿರುಗಿ ಕರೆತರುವುದು ಇಮಾಮ್ ಬೀಯ ಕೆಲಸವೇ ಆಗಿತ್ತು. ಎಷ್ಟೋ ಸಲ ಅಪ್ಪ-ಅಮ್ಮ ಜಗಳವಾಡಿದಾಗ ಅಪ್ಪ ಹೊರಗೆ ಹೋದನಂತರ ಅಮ್ಮ ದೂರು ಹೇಳಿಕೊಂಡು ಅತ್ತು ಸಮಾಧಾನ ಹೊಂದುತ್ತಿದ್ದುದು ಇಮಾಮ್ ಬೀಯ ಎದುರಿಗೇ. ಅಮ್ಮನಿಗೆ ಮೂರನೆಯ ಹೆರಿಗೆಯಾದಾಗ ಮಲೇರಿಯಾ ಜ್ವರ ಬಂದು ಅವಳ ಪರಿಸ್ಥಿತಿ ತೀರ ಗಂಭೀರವಿದ್ದಾಗ ಹಗಲು-ರಾತ್ರಿ ಅವಳ ಹಾಸಿಗೆಯ ಬದಿ ಕೂತು ಶುಶ್ರೂಷೆ ಮಾಡಿದಾಕೆ ಇಮಾಮ್ ಬೀಯೇ. ಹೊಲ ಮಾರಿದ ದುಡ್ಡಿನಲ್ಲಿ ಅಪ್ಪ ಅತ್ಯುತ್ಸಾಹದಿಂದ ನಗರದಲ್ಲಿ ಹೊಸಮನೆ ಕಟ್ಟಿಸುವಾಗ ತಿಂಗಳುಗಟ್ಟಲೆ ಕಬ್ಬಿಣ-ಸಿಮೆಂಟು-ಕಲ್ಲು ಕಾಯ್ದು, ಆಳುಗಳ ಉಸ್ತುವಾರಿ ಮಾಡಿ, ಛಾವಣಿಗೆ ನೀರು ಹೊಡೆದದ್ದು ಕೂಡ ಈ ಇಮಾಮ್ ಬೀ. ಹೀಗೆಲ್ಲ ಆಗಿ ಆ ಮನೆಯ ಹಿರಿಯರು-ಕಿರಿಯರು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದವು ಇಮಾಮ್‌ ಬೀಯ ಜೀವನ, ಆಕೆಯ ಸುಖ-ದುಃಖಗಳು.

ಹಾಗಾಗಿ ಆ ಮನೆಯವರಿಗೆಲ್ಲ ಇಮಾಮ್ ಬೀಯ ಬಗ್ಗೆ ತುಂಬ ಅನುಕಂಪ. ತೊಟ್ಟಿಲಿಗೇ ಬಾಸಿಂಗ ಕಟ್ಟಿಸಿಕೊಂಡಿದ್ದ ಇಮಾಮ್ ಬೀ ದೊಡ್ಡವಳಾಗಿ ಗಂಡನ ಮನೆಗೆ ಬಾಳುವೆ ಮಾಡಲು ಬಂದಾಗ ಅವಳಿಗೆ ಹದಿನಾಲ್ಕು ವರ್ಷವಂತೆ. 15ನೇ ವರ್ಷಕ್ಕೆ ಅವಳಿಗೊಬ್ಬ ಮಗಳು ಹುಟ್ಟಿದಳಂತೆ. ಅದೇ ವರ್ಷವೇ ನಾಡನ್ನೆಲ್ಲಾ ನಡುಗಿಸಿದ ಪ್ಲೇಗಿಗೆ ತುತ್ತಾಗಿ ಅವಳ ಗಂಡ-ಅತ್ತೆ-ಮಾವ ಎಲ್ಲ ಸತ್ತುಹೋದರಂತೆ. ಅವರಿವರ ಮನೆ ಕೂಲಿ-ನಾಲಿ ಮಾಡಿ ಮಗಳನ್ನು ಬೆಳೆಸಿ ಸೋದರಿಕೆಯಲ್ಲೇ ಮದುವೆ ಮಾಡಿಕೊಟ್ಟಳು ಇಮಾಮ್‌ಬೀ, ಆ ಮಗಳು ಹದಿನಾರು-ಹದಿನೇಳು ವರ್ಷಕ್ಕೆ ಒಂದು ಹೆಣ್ಣು ಹೆತ್ತು ಬಾಣಂತಿ ಜ್ವರ ಬಂದು ಕಣ್ಣುಮುಚ್ಚಿಬಿಟ್ಟಳು. ಈಕೆಯಲ್ಲದೆ ಇನ್ನೂ ಇಬ್ಬರು ಹೆಂಡಿರು-ನಾಲ್ಕಾರು ಮಕ್ಕಳಿದ್ದ ಆ ಅಳಿಯನ ಮನೆಯಲ್ಲಿ ಅದೇ ಹುಟ್ಟಿದ ಕೂಸನ್ನು ಬಿಡಲಾಗದೆ ಇಮಾಮ್‌ಬೀ ಆ ಮಗುವನ್ನು ಕರೆತಂದು ತಾನೇ ಜೋಪಾನ ಮಾಡಿದಳು. ಹೀಗೆ ಉಳಿದು ಬೆಳೆದ ಅವಳ ಮೊಮ್ಮಗಳು ಹಮೀದಾಬಾನು ತುಂಬ ಚೆಂದದ ಹುಡುಗಿ. ಹಬ್ಬ ಹರಿದಿನಗಳಲ್ಲಿ ಅಜ್ಜಿಯೊಡನೆ ಆಕೆ ಮನೆಗೆ ಬಂದಾಗ ಲಕ್ಷ್ಮಿ ಕೌತುಕದಿಂದ ಆಕೆಯನ್ನು ನೋಡುತ್ತಿದ್ದಳು. ಹಮೀದಾಬಾನುವಿನ ಬಿಲ್ಲಿನಂತಹ ಹುಬ್ಬುಗಳು, ಅಗಲವಾದ ಕಪ್ಪು ಕಣ್ಣುಗಳು, ನೇರವಾದ ಮೂಗು, ಸುಂದರ ಮೈಕಟ್ಟು, ಗೌರವರ್ಣ ಎಲ್ಲವೂ ಸೇರಿ ಲಕ್ಷ್ಮಿಗೆ ಆಕೆ ಇತಿಹಾಸ ಪುಸ್ತಕದಲ್ಲಿನ ಚಿತ್ತೂರು ಪದ್ಮಿನಿಯ ಹಾಗೆ ಕಾಣುತ್ತಿದ್ದಳು. ಈ ಮುದ್ದು ಮೊಮ್ಮಗಳ ಬಾಳನ್ನು ಹಸನಾಗಿಸುವದೊಂದೇ ಈಗ ಮುದುಕಿ ಇಮಾಮ್ ಬೀಗೆ ಉಳಿದಿರುವ ಗುರಿ, ಆಸೆ.

ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಲವಾರು ಸಲ ಆಕೆ ಅಮ್ಮನಲ್ಲಿ ಹೇಳಿದ್ದನ್ನು ಲಕ್ಷ್ಮಿ ಕೇಳಿದ್ದಳು. ‘ನೋಡಾಕ ಪಸಂದ ಖೂಬಸೂರತ ಆದಾಳು ಬೇಟೀ. ಸಾಲೀ ಕಲಿತ ಛಲೂ ಹುಡುಗನ್ನ ನೋಡಿ ಲಗ್ನಾ ಮಾಡ್ರಿ ಅಮ್ಮಾ, ಒಬ್ಬ ಹೆಣ್ತೀನ್ನ ನೆಚ್ಚಿಕೊಂಡು ಇರುವಂಥಾ ಹುಡುಗನ್ನ ನೋಡ್ರಿ ಅಮ್ಮಾ, ಸಾಹೇಬ್ರಿಗೆ ಹೇಳಿ, ನಿಮ್ಮ ಕಾಲು ಮುಗೀತನು.’ ಈ ವಿಷಯದಲ್ಲಿ ಸಹಾಯ ಮಾಡುವೆನೆಂದು ಲಕ್ಷ್ಮಿಯ ಅಮ್ಮನೂ ಮಾತು ಕೊಟ್ಟಿದ್ದರು.

ಆದರೆ ಹಮೀದಾಬಾನುವಿನ ದೈವ ಬೇರೆಯೇ ಇತ್ತು. ಒಂದು ಸಲ ಇಮಾಮ್ ಬೀಯ ತಮ್ಮನ ಮನೆಯಲ್ಲಿ ಆತನ ಮೊಮ್ಮಕ್ಕಳ ಮದುವೆಯಿತ್ತೆಂದು ಹಮೀದಾಬಾನು ಹದಿನೈದು ದಿನ ಮುಂಚೆಯೇ ಬೆಳಗಾವಿಗೆ ಹೋದಳು. ಮದುವೆಯ ಹೊತ್ತಿಗೆ ಹೋದರಾಯಿತೆಂದು ಇಮಾಮ್ ಬೀ ಹಿಂದೆ ಉಳಿದಳು. ಆದರೆ ಆ ಮದುವೆಗೆ ಮುನ್ನ ಎರಡು ದಿನ ಇರುವಾಗ ಇಮಾಮ್ ಬೀ ಒಗೆಯುವ ಕಲ್ಲಿನ ಹತ್ತಿರ ಬಿದ್ದು ಎಡಗಾಲಿನ ಮೂಳೆ ಮುರಿದುಹೋಯಿತು. ಆ ದಿನಗಳಲ್ಲಿ ಆಕೆಗೆ ವಯಸಾಗಿದ್ದರಿಂದ ಲಕ್ಷ್ಮಿಯ ಮನೆಗೆಲಸಕ್ಕೆ ಬೇರೊಬ್ಬಳು ಬರುತ್ತಿದ್ದಳು. ಆದರೂ ಇಮಾಮ್ ಬೀಗೆ ಕಾಲುಮುರಿದ ಸುದ್ದಿ ಕೇಳಿ ಲಕ್ಷ್ಮಿಯ ಅಪ್ಪ ಅವಳ ಮನೆಗೆ ಹೋಗಿ ಅವಳನ್ನು ದವಾಖಾನೆಗೆ ಕರೆದೊಯ್ದು ಪ್ಲಾಸ್ಟರು ಹಾಕಿಸಿ, ಅವಳ ಔಷಧೋಪಚಾರದ ಖರ್ಚೆಲ್ಲ ನೋಡಿಕೊಂಡರು. ಗಟ್ಟಿಜೀವವಾಗಿದ್ದ ಮುದುಕಿ ತಿಂಗಳೊಪ್ಪತ್ತಿನಲ್ಲಿ ಚೇತರಿಸಿಕೊಂಡು ಕುಂಟುತ್ತ ಓಡಿಯಾಡುವಂತಾದಳು. ಎಂದೂ ಮೊಮ್ಮಗಳನ್ನು ಅಷ್ಟು ದಿನ ಅಗಲಿರಲಾರದ ಇಮಾಮ್‌ಬೀ ತನಗೆ ತುಸು ನೆಟ್ಟಗಾದೊಡನೆ ಮೊದಲು ಮೊಮ್ಮಗಳನ್ನು ಕರೆತರಲು ಬೆಳಗಾವಿಗೆ ಓಡಿದಳು.

ಹೋಗುವಾಗ ಆಕೆ ಅಮ್ಮನಿಂದ ಬಸ್ಸು ಚಾರ್ಜಿಗಾಗಿ ಹಣ ಪಡೆದದ್ದೂ ಲಕ್ಷ್ಮಿಗೆ ನೆನಪಿದೆ. ಎರಡು ದಿನಗಳ ನಂತರ ಎದೆಎದೆ ಬಡಿದುಕೊಳ್ಳುತ್ತ ಇಮಾಮ್‌ ಬೀ ತಿರುಗಿ ಬಂದಾಗಿನ ಸನ್ನಿವೇಶವನ್ನಂತೂ ಲಕ್ಷ್ಮಿಗೆ ಎಂದೂ ಮರೆಯಲಾಗಲಿಲ್ಲ. ಆಕೆಯ ಆವಾಂತರ ಕೇಳಿ ಏನಾಯಿತೋ ಅಂತ ಗಾಬರಿಯಿಂದ ಹೊರಬಂದ ಮನೆಮಂದಿಗೆಲ್ಲ ಆಕೆ ಅಲ್ಲಾನ ಹೆಸರಿನಲ್ಲಿ ಯಾರಿಗೋ ಶಾಪ ಹಾಕುತ್ತ, ಗಟ್ಟಿಯಾಗಿ ಅಳುತ್ತ ಹೇಳಿದ ಕತೆಯಲ್ಲಿ ಅರ್ಥವಾದದ್ದು: ಆಕೆಯ ತಮ್ಮ ಹುಸೇನಸಾಬನ ಮೊಮ್ಮಕ್ಕಳ ಮದುವೆಗೆ ಎಲ್ಲೆಲ್ಲಿಂದಲೋ ಬಹಳಷ್ಟು ನೆಂಟರು ಬಂದಿದ್ದರು; ಅವರಲ್ಲೊಬ್ಬಾತ ಲಖನೌದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಮಹಮ್ಮದಗೌಸನೆಂಬ ನಡುವಯಸ್ಸು ಮೀರತೊಡಗಿದ್ದ ಶೋಕೀಲಾಲ; ಬೆಳಗಾವಿಯಲ್ಲಿ ಬಟ್ಟೆ ವ್ಯಾಪಾರಿಯೇ ಆಗಿದ್ದ ಇಮಾಮ್ ಬೀಯ ತಮ್ಮನಿಗೂ ಮಹಮ್ಮದಗೌಸನಿಗೂ ದೂರದ ನೆಂಟಸ್ತಿಕೆಯಲ್ಲದೆ ವ್ಯಾಪಾರಿ ಸ್ನೇಹ ಬೇರೆ; ಮದುವೆ ಮನೆಯಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಓಡಾಡುತ್ತಿದ್ದ ಹಮೀದಾಬಾನುವಿನ ಮೇಲೆ ಮಹಮ್ಮದ ಗೌಸನ ಕಣ್ಣು ಬಿತ್ತು; ಲೋಭಿಯಾಗಿದ್ದ ಮುದುಕ ಗೆಳೆಯ ಹುಸೇನ್‌ ಸಾಬನ ಕೂಡ ವ್ಯಾಪಾರ ಕುದುರಿಸುವುದು ಚಾಣಾಕ್ಷನಾಗಿದ್ದ ಗೌಸನಿಗೆ ತಡವಾಗಲಿಲ್ಲ; ಐದಾರು ನೂರು ರೂಪಾಯಿ ಕೈ ಬದಲಾಯಿಸಿದವು; ಸರಿ, ಅದೇ ಮುಹೂರ್ತದಲ್ಲೇ ಮಹಮ್ಮದಗೌಸನ ಕೂಡ ಹಮೀದಾ ಬಾನುವಿನ ನಿಕಾಹ ಆಗಿಹೋಯಿತು. ಇಮಾಮ್ ಬೀ, ಮುದುಕಿ ಪಾಪ, ಈ ಮೊಮ್ಮಗಳ ಲಗ್ನ ಮಾಡುವುದು ಅವಳಿಗೆ ಆಗುತ್ತಿರಲಿಲ್ಲ, ಹುಸೇನ್ ಸಾಬ ಪುಣ್ಯ ಕಟ್ಟಿಕೊಂಡ, ಅಲ್ಲಾ ಮೆಚ್ಚುವ ಕೆಲಸ ಮಾಡಿದ, ಅಂದರು ಎಲ್ಲರೂ. ಇನ್ನೂ ಹದಿನೆಂಟು ದಾಟಿರದ ಚೆಲುವೆ ಹಮೀದಾ ಐವತ್ತರ ಅಂಚಿನಲ್ಲಿದ್ದ ಗೌಸನ ಬೀಬಿಯಾದಳು. ಕೂಡಿದ ಜನರೆಲ್ಲರೆದುರು ಅತ್ತು ರಂಪ ಮಾಡಿದಳು ಇಮಾಮ್ ಬೀ. ಮೋಸ ಮಾಡಿದನೆಂದು ತಮ್ಮನಿಗೆ ಶಾಪ ಹಾಕಿದಳು. ಇನ್ನೇನು ನಿನ್ನ ಮೊಮ್ಮಗಳಿಗೆ ಆಫೀಸರ್ ಗಂಡ ಸಿಕ್ಕುತ್ತಿದ್ದನೇ? ಉಣ್ಣಲು ಉಡಲು ಸಾಕಷ್ಟು ಇದೆ ಗೌಸ ಸಾಹೇಬನಿಗೆ. ಲಖನೌದಲ್ಲಿ ಎರಡು ಅಂಗಡಿ ಇವೆ. ವ್ಯಾಪಾರಕ್ಕಾಗಿ ಇಡೀ ಹಿಂದೂಸ್ತಾನ ತಿರುಗುತ್ತಾನೆ. ಲಗ್ನಕ್ಕೆ ಎರಡು ರೇಶಿಮೆ ಸೀರೆ ತಂದಿದ್ದಾನೆ. ಅರ್ಧತೊಲೆ ಬಂಗಾರದ ತಾಳಿ ಹಾಕಿದ್ದಾನೆ, ಎಲ್ಲ ಖರ್ಚು ತಾನೇ ನೋಡಿಕೊಂಡಿದ್ದಾನೆ. ಇಮಾಮ್ ಬೀಗೆ ಹಾಗೂ ಹುಸೇನಸಾಬನ ಹೆಂಡತಿಗೆ ಕೂಡ ಒಂದೊಂದು ಇಳಕಲ್ ಸೀರೆ ಅಹೇರು ಮಾಡಿದ್ದಾನೆ. ಇನ್ನೇನು ಬೇಕು? ಹಾಗೆಂದು ನೆಂಟರೆಲ್ಲ ಇಮಾಮ್ ಬೀಯ ರಂಪಾಟಕ್ಕೆ ಮೂಗುಮುರಿದರು. ನಿಕಾಹ ಆದಮೇಲೆ ಇನ್ನೇನು ಮಾಡುವುದಿದೆ? ಇಮಾಮ್ ಬೀ ಸಂಕಟ ತಡೆಯಲಾರದೆ ಮೊಮ್ಮಗಳ ಮೇಲೆ ಕೆಂಡ ಕಾರಿದಳು. ರಂಡೆ, ನಿನಗೇನು ಧಾಡಿ ಆಗಿತ್ತು? ಅಜ್ಜಿ ಬರುವ ತನಕ ಲಗ್ನಕ್ಕೆ ಒಪ್ಪುವುದಿಲ್ಲ ಅನ್ನಲು ಬರುತ್ತಿರಲಿಲ್ಲವೆ? ಇದಕ್ಕೆ ನಿನ್ನ ಇಷ್ಟು ವರ್ಷ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಕಾಯ್ದೆನೆ? ಅಯ್ಯೋ, ಗಿಳಿ ಸಾಕಿ ಗಿಡುಗನಿಗೆ ಕೊಟ್ಟಂತಾಯಿತಲ್ಲ… ಪಾಪ, ಲಗ್ನವಾಗಿ ನಂತರದ ಹದಿನೈದಿಪ್ಪತ್ತು ದಿನಗಳಲ್ಲಿ ಹುಂಬ ಗಂಡನ ಕೈಯಲ್ಲಿ ಪೂರಾ ನಲುಗಿ ಹೋಗಿದ್ದ ಹಮೀದಾ ಅಳುತ್ತಳುತ್ತಾ ಹೇಳಿದಳು. ‘ನನಗೇನೂ ತಿಳೀಲಿಲ್ಲ ಅಮ್ಮಿಜಾನ್, ಆಪಾಜಾನ್ ಎಳಕೊಂಡು ಬಂದು ಕೂಡಿಸಿದ್ರು. ಹೂ ಅನ್ನು ಅಂದ್ರು. ಅಮ್ಮಿಜಾನ್ ಬರ್‍ಲಿ ಅಂದೆ. ಅಮ್ಮಿಜಾನ್‌ನೇ ಹೇಳಿ ಕಳಿಸಿದ್ದು, ಹೂ ಅನ್ನು ಅಂದ್ರು. ಅಂದೆ. ನನಗಿಷ್ಟು ಜಹರ ತಂದು ಕೊಟ್ಟುಬಿಡು ಅಮ್ಮಿಜಾನ್, ನಾ ಸತ್ಹೋಗ್ತಿನಿ…’ ಮದುಕಿಯ ಎದೆ ಕರಗಿತು. ಮೊಮ್ಮಗಳನ್ನು ತಬ್ಬಿಕೊಂಡು ‘ಅಲ್ಲಾ ನಮ್ಮಿಬ್ರಿಗೂ ಧಗಾ ಮಾಡಿದ್ನಲ್ಲೇ’ ಅಂತ ಗೊಳೋ ಎಂದು ಅತ್ತಳು. ಅತ್ತು ಸುಮ್ಮನಾದಳು. ಇನ್ನೇನು ಮಾಡುವುದು? ಆದರೆ ಅವಳ ಸಿಟ್ಟು ಆರಿರಲಿಲ್ಲ. ಮೊಮ್ಮಗಳನ್ನು ಗಂಡನ ಕೂಡ ಕಳಿಸುವುದಿಲ್ಲ ಅಂತ ತಿರುಗಿ ಹುಬ್ಬಳ್ಳಿಗೇ ಕರಕೊಂಡು ಬಂದುಬಿಟ್ಟಿದ್ದಳು.

ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು

ಲಕ್ಷ್ಮಿಯ ಅಮ್ಮ-ಅಪ್ಪ ಅಯ್ಯೋ ಪಾಪ ಅಂದರು, ಹೀಗಾಗಬಾರದಿತ್ತು ಅಂದರು. ಆದರೆ ಆಗಿಹೋದಮೇಲೆ ಏನು ಮಾಡುವುದು, ಗಂಡನ ಮನೆಗೆ ಅವಳನ್ನು ಕಳಿಸುವುದೇ ಯೋಗ್ಯ ಅಂದರು. ನೆರೆಹೊರೆಯ ಹಿತೈಷಿಗಳೂ ಅದನ್ನೇ ಅಂದರು. ಇಷ್ಟೊತ್ತಿಗೆ ಇಮಾಮ್ ಬೀಯ ಸಿಟ್ಟು ಇಳಿದು ವಿವೇಕೋದಯವಾಗಿದ್ದರಿಂದ ಆಕೆ ಗೌಸನನ್ನು ಕಳಿಸಿಕೊಡುವಂತೆ ಹುಸೇನಸಾಬನಿಗೆ ಕಾಗದ ಬರೆಸಿ ಹಾಕಿದಳು. ಮೊಮ್ಮಗಳನ್ನು ಲಖನೌಗೆ ಕಳಿಸಲು ತಯಾರಿ ನಡೆಸಿದಳು. ಇನ್ನೂ ಬೆಳಗಾವಿಯಲ್ಲೇ ಇದ್ದ ಗೌಸ ಕಾಗದ ಸಿಕ್ಕೊಡನೆ ಓಡಿ ಬಂದ. ಹೊಸ ಹೆಂಡತಿಯ ಕೂಡ ತಿಂಗಳೊಪ್ಪತ್ತು ಅತ್ತೆಯ ಮನೆಯಲ್ಲಿದ್ದು ಮಜಾ ಮಾಡಿದ. ಮುಂದೆ ವ್ಯಾಪಾರಕ್ಕಾಗಿ ಮುಂಬೈ-ಪುಣೆ ಕಡೆಗೆ ಹೋಗಬೇಕೆಂದೂ, ನಂತರ ಲಖನೌಗೆ ಹೋಗಿ ಎಲ್ಲ ವ್ಯವಸ್ಥೆ ಮಾಡಿ ತಿರುಗಿ ಬಂದು ಹೆಂಡತಿಯನ್ನು ಕರೆದೊಯ್ಯುವೆನೆಂದೂ ಹೇಳಿ ಒಂದು ದಿನ ಸೂಟ್ ಕೇಸ್ ಹೊತ್ತು ನಡೆದುಬಿಟ್ಟ.

ಮುಂದೆ ಆರು ತಿಂಗಳಾದರೂ ಅವನ ಸುದ್ದಿಯೇ ಇಲ್ಲ. ಇಮಾಮ್ ಬೀ, ಕಂಗಾಲಾಗಿ ಬೆಳಗಾವಿಗೆ ಹೋಗಿ ಹುಸೇನಸಾಬನನ್ನು ತರಾಟೆಗೆ ತೆಗೆದುಕೊಂಡಳು. ಗೌಸ ತನ್ನ ಬಹಳ ವರ್ಷಗಳ ಮಿತ್ರ, ಲಖನೌದಲ್ಲಿದ್ದುದು ನಿಜ, ಆದರೆ ಆತನ ವಿಳಾಸ ತನಗೂ ಗೊತ್ತಿಲ್ಲ, ಆದರೆ ಗಾಬರಿಯಾಗುವ ಕಾರಣವಿಲ್ಲ, ಆತ ಇವತ್ತಲ್ಲ, ನಾಳೆ ತಿರುಗಿ ಬಂದೇ ಬರುತ್ತಾನೆ, ಎಂದೆಲ್ಲ ಅಕ್ಕನನ್ನು ಸಂತೈಸಿದ ಹುಸೇನಸಾಬ. ಇಮಾಮ್ ಬೀ ಸಪ್ಪೆ ಮುಖ ಹಾಕಿಕೊಂಡು ಹುಬ್ಬಳ್ಳಿಗೆ ತಿರುಗಿ ಬಂದಳು. ಹೇಳಿದಂತೆ ಮಹಮ್ಮದಗೌಸ ತಿರುಗಿ ಬಂದೇ ಬಂದ. ಆದರೆ ಅದು ಮತ್ತೆ ಆರು ತಿಂಗಳು, ಅಂದರೆ ಆತ ಮದುವೆಯಾಗಿ ಹೋಗಿ ಒಂದು ವರ್ಷ, ಕಳೆದ ನಂತರ. ಆ ಹೊತ್ತಿಗೆ ಹಮೀದಾಬಾನು ಮೂರು ತಿಂಗಳ ಹೆಣ್ಣು ಮಗುವಿನ ತಾಯಾಗಿದ್ದಳು. ಗೌಸ ಹೆಂಡತಿ-ಮಗುವಿಗೆ ಸೀರೆ-ಬಟ್ಟೆ, ಸಿಹಿತಿಂಡಿ ತಂದ. ಇಮಾಮ್ ಬೀಗೆ ಒಂದು ಹೊದೆಯುವ ಕಂಬಳಿ ತಂದ. ಮತ್ತೆ ಒಂದು ತಿಂಗಳು ಮಜವಾಗಿದ್ದ. ನಂತರ ನಾಲ್ಕೆ ದಿನಗಳಲ್ಲಿ ಬೆಳಗಾವಿಗೆ ಹೋಗಿ ತಿರುಗಿ ಬರುವೆನೆಂದೂ ಆಗ ಹೆಂಡತಿ ಮಗುವನ್ನು ಕರೆದೊಯ್ಯುವೆನೆಂದೂ ಹೇಳಿ ಮುದುಕಿಯ ಕೈಯಲ್ಲಿ ಐವತ್ತು ರೂಪಾಯಿ ಹಾಕಿ ಮತ್ತೆ ಹೋಗಿಬಿಟ್ಟ.

ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ

ಮುದುಕಿ-ಮೊಮ್ಮಗಳು ಕಾಯ್ದುಕೂತರು. ಮಗು ಬೆಳೆಯುತ್ತಿತ್ತು. ವಯಸ್ಸಾಯಿತೆಂದು ಕೆಲಸ ನಿಲ್ಲಿಸಿದ್ದ ಇಮಾಮ್‌ಬೀ ಉದರ ನಿರ್ವಹಣೆಗಾಗಿ ಮತ್ತೆ ಕೆಲಸ ಹುಡುಕಿಕೊಂಡು ಹೋಗಬೇಕಾಯಿತು. ಪ್ಯಾಸೆಂಜರ ಟ್ರೇನುಗಳಲ್ಲಿ ಸಮೀಪದ ಕಾಡುಗಳಿದ್ದ ಊರುಗಳಿಗೆ ಹೋಗಿ ಕಳವಿನಿಂದ ಕಟ್ಟಿಗೆಯ ಹೊರೆ ತಂದು ಮಾರುವುದು ಅವಳ ನಿತ್ಯ ಕಸುಬಾಯಿತು. ಇಡೀ ದಿನ ದುಡಿದದ್ದಕ್ಕೆ ಸಿಗುವ ಪ್ರತಿಫಲ ಒಂದೂವರೆ ಎರಡು ರೂಪಾಯಿ, ಬಹಳವೆಂದರೆ ಮೂರು ರೂಪಾಯಿ. ಅಷ್ಟರಲ್ಲಿ ಹಿಟ್ಟು ಬೇಯಿಸಿ ಅಜ್ಜಿ-ಮೊಮ್ಮಗಳಿಬ್ಬರೂ ಅರೆಹೊಟ್ಟೆ ಉಂಡು ಲಖನೌದ ಕಡೆಗೆ ಕಣ್ಣುನೆಟ್ಟು ಹೇಗೋ ದಿನ ನೂಕುತ್ತಿದ್ದರು.

ಮರುವರ್ಷ ಸುಮಾರು ಅದೇ ಸೀಝನ್ನಿಗೆ ಗೌಸ ಮತ್ತೆ ಬಂದ. ಆಗಲೆ ಹುಟ್ಟಿ ಮೂರು ತಿಂಗಳಾಗಿದ್ದ ಎರಡನೆಯ ಮಗುವನ್ನು ಮುದ್ದಿಸಿ ತಾನು ತಂದಿದ್ದ ಜರಿಯ ಅಂಗಿ ತೊಡಿಸಿದ. ಮತ್ತೆ ತಿಂಗಳೊಪ್ಪತ್ತು ಮಜವಾಗಿದ್ದ. ಸಾಲಸೋಲ ಮಾಡಿ ಅಳಿಯನಿಗೆ ಚಪಾತಿ, ಸಿಹಿಸಜ್ಜಿಗೆ, ಬಿರಿಯಾನಿ, ಮೀನಿನ ಸಾರು ಎಲ್ಲ ಮಾಡಿದಳು ಇಮಾಮ್‌ಬೀ. ಆದರೆ ಆತ ಹೊರಟು ನಿಂತಾಗ ಮಾತ್ರ ಖಟ್ಟಿಗೆ ಹಚ್ಚಿ ಕೇಳಿದಳು. ಹೆಂಡತಿಯನ್ನೇಕೆ ಕರೆದೊಯ್ಯುತ್ತಿಲ್ಲ ಅಂತ. ಮೊದಲು ಹಾರಿಕೆಯ ಉತ್ತರಕೊಟ್ಟು ತಪ್ಪಿಸಿಕೊಳ್ಳಲು ನೋಡಿದ ಗೌಸ ಕೊನೆಗೆ ನಿರ್ವಾಹವಿಲ್ಲದೆ ಸತ್ಯ ಹೇಳಿದ. ಲಖನೌನಲ್ಲಿ ಆತನ ಮೊದಲ ಹೆಂಡತಿ, ಆಕೆಯ ಒಂಬತ್ತು ಮಕ್ಕಳು ಇದ್ದಾರೆ. ಎರಡನೆಯ ಹೆಂಡತಿಯನ್ನು ಆ ಮನೆಗೆ ಕರೆತಂದರೆ ಆತನನ್ನೂ ಆ ಹೆಂಡತಿಯನ್ನೂ ಕೂಡಿಯೇ ಕಡಿದು ಹಾಕುವೆವೆಂದು ಆಕೆಯ ಅಣ್ಣಂದಿರು ಹೇಳಿದ್ದಾರೆ. ಅಂತೆಯೇ ಅನಕಾ ಹಮೀದಾ ಇಲ್ಲೇ ಇರಲಿ. ತಾನೇ ಬಂದು ಹೋಗಿ ಮಾಡುತ್ತೇನೆ. ಮುಂದೆ ಎಲ್ಲ ಪರಿಸ್ಥಿತಿ ಶಾಂತವಾಗಿ ಅನುಕೂಲವಾದಾಗ ಕರೆದೊಯ್ಯುತ್ತೇನೆ. ಖರ್ಚಿಗೆ ಹಣ ಬೇಕಲ್ಲವೆ, ಆಗಲಿ ಕೊಟ್ಟುಕಳಿಸುತ್ತೇನೆ.

ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು

ಇಮಾಮ್ ಬೀ ಮತ್ತೆ ರಂಪ ಮಾಡಿದಳು. ಆತನ ಕುಲಕೋಟಿ ಉದ್ಧಾರ ಮಾಡಿದಳು. ಆದರೆ ಈ ಎರಡೇ ವರ್ಷದಲ್ಲಿ ತೀರ ಪ್ರಬುದ್ಧಳಾದಂತೆ ತೋರುತ್ತಿದ್ದ ಹಮೀದಾ ಅಜ್ಜಿಯನ್ನು ಸಂತೈಸಿದಳು. ಸುಮ್ಮನಿರು ಅಮ್ಮಿಜಾನ್, ನನ್ನ ನಸೀಬದಾಗೆ ಅಲ್ಲಾ ಇದನ್ನೇ ಬರೆದಾಗ ಇನ್ನೇನು ಮಾಡೋದು?- ಇನ್ನೇನು ಮಾಡುವುದೂ ಆ ಅಸಹಾಯ ಅಜ್ಜಿ ಮೊಮ್ಮಗಳಿಗೆ ಸಾಧ್ಯವಿರಲಿಲ್ಲ. ಅಲ್ಲಿಂದೀಚೆ ಆ ಮನೆಯ ಜೀವನ ಒಂದೇ ತೆರನಾಗಿ ಸಾಗಿಬಂದದ್ದು ಲಕ್ಷ್ಮಿ ಕಂಡಿದ್ದಾಳೆ. ಪ್ರತಿವರ್ಷ ಲಕ್ಷ್ಮಿಯ ಕಾಲೇಜಿಗೆ ಬೇಸಿಗೆಯ ರಜವಿದ್ದಾಗ ಹಮೀದಾಬಾನುವಿನ ಗಂಡ ಊರಿಗೆ ಬರುತ್ತಾನೆ. ಆಗ ಅವಳಿಗೆ ಮೂರು ತಿಂಗಳ ಮಗುವಿರುತ್ತದೆ. ಆತ ಇಲ್ಲಿರುವ 15-20 ದಿನಗಳಲ್ಲಿ ಮುದುಕಿ-ಮೊಮ್ಮಗಳು ಇಬ್ಬರೂ ಅವರಿವರಿಂದ ಕಡ ತಂದಾದರೂ ಆತನಿಗೆ ಅಡಿಗೆ ಮಾಡಿ ಹಾಕಿ ತಾವು ಉಪವಾಸವಿರುತ್ತಾರೆ. ಆತ ಆರಾಮಾಗಿ ಉಂಡು ಬೀಡಿ ಸೇದಿ, ತಂಬಾಕು ತಿಂದು ಚ‌ರ್ಚರ್ ಅಂತ ಕಾಲ್ಮರಿಯ ಸದ್ದುಮಾಡುತ್ತ ಊರೆಲ್ಲ ಸುತ್ತುತ್ತಾನೆ. ಹಿಂದಿ ಪಿಕ್ಚರು ನೋಡುತ್ತಾನೆ. ಕಂಟ್ರಿ ಸಾರಾಯಿ ಕುಡಿಯುತ್ತಾನೆ. ಲಕ್ಷಿಯ ಮನೆಗೂ ಬಂದು ಆಕೆಯ ಅಪ್ಪ-ಅಮ್ಮನಿಗೆ ಸಲಾಮ್ ಹೇಳಿ ತಿರುಗಿ ಊರಿಗೆ ಹೋಗುತ್ತಾನೆ. ಅಷ್ಟರಲ್ಲಿ ಹಮೀದಾಬಾನು ಮತ್ತೆ ಬಸಿರಾಗಿರುತ್ತಾಳೆ.

ಇತ್ತೀಚೆಗೆ ಮಕ್ಕಳು ಹೆಚ್ಚಾದಂತೆ ಹಮೀದಾಬಾನುವೂ ತಮ್ಮ ಜನದ ಸಾಹೇಬರುಗಳ ಮನೆಗೆ ಅಡಿಗೆ ಕೆಲಸಕ್ಕಾಗಿ ಹೋಗುತ್ತಾಳೆ. ಆರು ವರ್ಷದ ಹಿರಿಯಮಗಳನ್ನು ತಮ್ಮ ಜನವೇ ಆದ ಡಾಕ್ಟರೊಬ್ಬರ ಮನೆಯಲ್ಲಿ ಮೇಲ್ಗೆಲಸಕ್ಕಾಗಿ ಇಟ್ಟಿದ್ದಾಳೆ. ಆಕೆಯ ಗಂಡ ಈಗೀಗ ವರ್ಷಕ್ಕೊಮ್ಮೆ ಬರುವಾಗ ಬರಿಗೈಯಲ್ಲೇ ಬರುತ್ತಾನೆ. ಹೋಗುವಾಗ ಹಣವನ್ನೂ ಕೊಡುವುದಿಲ್ಲ. ಆದರೆ ಪ್ರತಿವರ್ಷ ಬಂದು ಕೆಲದಿನ ಇದ್ದು ಹೋಗುವಾಗಲೂ ಹೆಂಡತಿಯನ್ನು ಬಸಿರಾಗಿಸಿ ಹೋಗುವುದರಲ್ಲಿ ಆತ ಎಂದೂ ಹಿಂದೆ ಬಿದ್ದಿಲ್ಲ.

ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ

ಲಕ್ಷ್ಮಿಗೆ ಈಗ ಇದೆಲ್ಲಾ ಅರ್ಥವಾಗುವ ವಯಸ್ಸು. ಕಾಲೇಜಿನ ಚರ್ಚಾಕೂಟಗಳಲ್ಲಿ ಸ್ತ್ರೀ ಸಮಾನತೆ ಸ್ವಾತಂತ್ರ್ಯದ ಬಗ್ಗೆ ಭಾಷಣ ಮಾಡಿ ಬಹುಮಾನ ಪಡೆಯುವ ಆಕೆಗೆ ಈ ಇಮಾಮ್ ಬೀಯ ಮೊಮ್ಮಗಳ ಬಾಳು ನೋಡಿ ಪಿತ್ತ ಕೆರಳುತ್ತದೆ: ‘ನೀನ್ಯಾಕೆ ಆತನನ್ನು ಸೇರಿಸಿಕೊಳ್ಳುತ್ತೀ ಹಮೀದಾ? ಹೆಂಡತಿ ಮಕ್ಕಳ ಬಗ್ಗೆ ತನ್ನ ಕರ್ತವ್ಯ ತಿಳಿಯದ ಗಂಡನನ್ನು ಬೆಂಕಿಹಾಕಿ ಸುಡಬಾರದೆ? ಆತ ಬಂದಾಗ ಒದ್ದು ಕಳಿಸಬಾರದೇ? ಅವನಿಂದ ನಿನಗೇನೂ ಸಹಾಯವಿಲ್ಲ, ಲಾಭವಿಲ್ಲ, ಮತ್ತೇಕೆ ಅವನು ಬಂದಾಗ ಇಷ್ಟು ಸಡಗರ ಪಡುವುದು? ಮುಖಕ್ಕೆ ಉಗಿದು ಆಚೆ ನೂಕಬಾರದೆ ಅವನನ್ನ?’

ಲಕ್ಷ್ಮಿ ಪ್ರತಿಸಲ ಹಾಗನ್ನುತ್ತಾಳೆ. ಪ್ರತಿಸಲ ಅದನ್ನು ಕೇಳಿ ಹಮೀದಾಬಾನು ತಲೆತಗ್ಗಿಸಿ ನಿಲ್ಲುತ್ತಾಳೆ. ಆಕೆಯ ಮುಖದಲ್ಲಿ ನೋವಿನ ಗೆರೆಗಳು ಮೂಡುತ್ತವೆ. ಯಾರು ಏನೇ ಅಂದರೂ ಆ ಪಾಪದ ಹೆಂಗಸಿಗೆ ಆ ನೀಚ ಗಂಡನನ್ನು ದೂರ ಮಾಡುವುದು ಶಕ್ಯವಿಲ್ಲವೆಂದು ಇತ್ತೀಚೆಗೆ ಲಕ್ಷ್ಮಿಗೂ ಚೆನ್ನಾಗಿ ಗೊತ್ತಾಗಿದೆ. ಆದರೂ ಆಕೆ ಮತ್ತೆ ಹಮೀದಾಬಾನು ಜೋಲು ಮುಖ ಹಾಕಿಕೊಂಡು ಲಕ್ಷ್ಮಿಯ ಅಮ್ಮನ ಹಳೆಯ ಸೀರೆಯನ್ನೋ, ಮಕ್ಕಳ ಹಳೆಯ ಬಟ್ಟೆಯನ್ನೋ, ಲಕ್ಷ್ಮಿಯ ಅಜ್ಜಿ ಬಸಿರಿಯರಿಗೆ ಮಾಡಿಕೊಡುವ ಕಷಾಯವನ್ನೋ ಕೇಳಲೆಂದು ಬಂದಾಗ ಲಕ್ಷ್ಮಿ ಅಂದೇ ಅನ್ನುತ್ತಾಳೆ- ನೀನ್ಯಾಕೆ ಆತನನ್ನು ಒದ್ದು ಕಳಿಸುವುದಿಲ್ಲ ಹಮೀದಾ? ಹಮೀದಾ ಸುಮ್ಮನೆ ತಲೆ ತಗ್ಗಿಸುತ್ತಾಳೆ. ಆಕೆಯ ಮುಖದಲ್ಲಿನ ನೋವಿನ ಗೆರೆಗಳು ಆಳವಾಗುತ್ತವೆ.

*

ಲಕ್ಷ್ಮಿಗೆ ಎಮ್.ಕಾಮ್. ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಬಂದ ಕೆಲವೇ ದಿನಗಳಲ್ಲಿ ಮುಂಬಯಿಯ ಸ್ಟೇಟ್ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಪ್ರೊಬೇಶನರಿ ಆಫೀಸರ್ ಅಂತ ಕೆಲಸ ಸಿಕ್ಕಿತು. ಅಷ್ಟು ದೂರ ಮಗಳನ್ನು ಕಳುಹಿಸಲು ಆಕೆಯ ಅಮ್ಮನಿಗೆ ಇಷ್ಟವಿರಲಿಲ್ಲ. ಆದರೆ ಹೇಗೂ ಅಲ್ಲಿ ಚಿಕ್ಕಪ್ಪನ ಮನೆಯಿದೆ ಹೋಗುತ್ತೇನೆ, ಈಗಿನ ದಿನಗಳಲ್ಲಿ ಸಿಕ್ಕ ಒಳ್ಳೆಯ ಕೆಲಸ ಬಿಡಬಾರದು ಅಂದಳು ಲಕ್ಷ್ಮಿ. ಅಪ್ಪ ಅನುಮೋದಿಸಿದರು. ಬೆಳೆದ ಮಗಳನ್ನು ಮದುವೆ ಮಾಡದೆ ಬೇರೆ ಊರಿಗೆ ಕಳಿಸುವುದು ಚೆಂದವಲ್ಲ ಅಂತ ಅಮ್ಮ ಗೊಣಗಿದರು. ಅವಳ ನಶೀಬ ಚೆನ್ನಾಗಿದ್ದರೆ ಅಲ್ಲೇ ಒಳ್ಳೆಯ ಗಂಡು ಸಿಕ್ಕೀತು ಅಂತ ಅಪ್ಪ ಸಮಾಧಾನಪಡಿಸಿದರು.

ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ

ಅದು ಆದದ್ದೂ ಹಾಗೆಯೆ. ಬ್ಯಾಂಕಿನ ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ಲಕ್ಷ್ಮಿಗೆ ಆಕೆಯ ಸಹೋದ್ಯೋಗಿಯೇ ಆಗಿದ್ದ ಸುರೇಶ ಕುಲಕರ್ಣಿಯೊಂದಿಗೆ ಪರಿಚಯವಾಗಿ, ಗೆಳೆತನವಾಗಿ, ಪ್ರೀತಿಯಾಗಿ ಮದುವೆಯೂ ಆಗಿಬಿಟ್ಟಿತು. ಎತ್ತರ ನಿಲುವಿನ ಸ್ಮಾರ್ಟ್ ಆಗಿದ್ದ ಲಕ್ಷ್ಮಿಯ ಗಂಡನನ್ನು ನೋಡಿ ನಟಿಕೆ ಮುರಿದು ಇಮಾಮ್‌ ಬೀ ‘ಅಲ್ಲಾ ನಿನ್ನನ್ನ ಸುಖವಾಗಿಡ್ಲಿ ಬೇಟೀ’ ಅಂದಳು. ಆತ್ಮವಿಶ್ವಾಸ ತುಂಬಿದ ಧ್ವನಿಯಲ್ಲಿ ಲಕ್ಷ್ಮಿ ಅಂದಿದ್ದಳು: ‘ನಮ್ಮ ಸುಖಾ ನಮ್ಮ ಕೈಯಾಗಿರದ ಇಮಾಮಜ್ಜಿ, ನಮ್ಮ ತಪ್ಪಿನಿಂದ-ಮೂರ್ಖತನದಿಂದ ನಮ್ಮ ಕಾಲಮ್ಯಾಲ ನಾವೇ ಕಲ್ಲು ಹಾಕ್ಕೊಂಡು ಅಲ್ಲಾನ ಬೈಯ್ದರ ಅಲ್ಲಾ ಏನ್ಮಾಡಿಯಾನು?’ ಆ ಮಾತಿನ ಒಳಗಿನ ಅರ್ಥ ಸೂಕ್ಷ್ಮಮತಿಯಾದ ಮುದುಕಿಗೆ ತಿಳಿದಿತ್ತು. ಎಂದಿನಂತೆ ಆಕೆ ಮೊಮ್ಮಗಳನ್ನು ಅಸಹಾಯಕತೆ-ದುಃಖದಿಂದ ಟೀಕಿಸಿದಳು: ‘ಹಮೀದಾಗೆ ಎಷ್ಟು ಹೇಳಿದರೂ ಆ ಲೋಫರ್ ನನ್ಮಗನಿಗೆ ಬರಬ್ಯಾಡ ಅಂತನ್ನೋದು ಆಕೆಯ ಕೈಲಾಗೋದಿಲ್ಲ. ಬಾಳ ಮೆತ್ತಗಿನ ಹೆಂಗಸು. ಸುಮ್ಮನೆ ಕಣ್ಣೀರು ನುಂಗಿ ಒಳಗೊಳಗೆ ನವೀತಾಳು ಏನ್ಮಾಡೋದು? ಎಂದಿನ ರೋಷದಿಂದ ಲಕ್ಷ್ಮಿ ಅಂದಳು, ‘ಆತನನ್ಯಾಕೆ ಒದ್ದು ಕಳಿಸೋದಿಲ್ಲ ಹಮೀದಾ?’ ಹಮೀದಾ ಎಂದಿನಂತೆ ತಲೆತಗ್ಗಿಸಿ ನಿಂತಿದ್ದಳು.

ಮುಂಬಯಿಯ ಗಂಡನೊಂದಿಗೆ ಸಂಸಾರ ಹೂಡಿದ ಮೊದಲ ತಿಂಗಳು ಸಂಬಳದ ಹಣ ಬಂದೊಡನೆ ಆತ ಪೂರ್ತಾ ಪಗಾರ ತನ್ನ ಕೈಯಲ್ಲಿಡುತ್ತಾನೆ, ಅದರಲ್ಲಿ ಮನೆಯ ಖರ್ಚಿಗೆ ಎಷ್ಟು ಬೇಕಾಗಬಹುದು, ಉಳಿದದ್ದನ್ನು ಯಾವ ಯಾವ ಠೇವಣಿಗಳಲ್ಲಿ ತೊಡಗಿಸುವುದು ಅಂತ ಜಾಣೆಯಾದ ಲಕ್ಷ್ಮಿ ಲೆಕ್ಕ ಹಾಕುತ್ತಿದ್ದಳು. ಆದರೆ ಅವಳೆನಿಸಿದಂತೆ ಸುರೇಶ ತನ್ನ ಸಂಬಳದ ಹಣವನ್ನು ಅವಳಿಗೆ ಕೊಡಲೇ ಇಲ್ಲ. ‘ಏನು, ಎಲ್ಲಾ ಸ್ಯಾಲರಿ ಬ್ಯಾಂಕಿನಲ್ಲೇ ಇಟ್ಟಿರಾ’ ಅಂತ ಲಕ್ಷ್ಮಿ ಕೇಳಿದಾಗ ಅನುಮಾನಿಸಿ ಹೇಳಿದ್ದ: ಇಲ್ಲೆ ವರ್ಲಿಯಲ್ಲಿ ಆತನ ಅಕ್ಕನ ಮನೆಯಿದೆ. ಅಕ್ಕ ವಿಧವೆ. ಆಕೆಗೆ ಐದು ಮಕ್ಕಳು. ಆಕೆಗೆ ತುಂಬ ಬಡತನ. ಆಕೆಯ ಮನೆಯ ಬಾಡಿಗೆ, ಮಕ್ಕಳ ಸ್ಕೂಲು ಫೀಜು ಇತ್ಯಾದಿ ಕೊಡುವುದಿತ್ತು. ವಿಧವೆ ಅಕ್ಕನ ಸಂಸಾರಕ್ಕೆ ಆಗೀಗ ಒಂದಿಷ್ಟು ಸಹಾಯ ಮಾಡುವುದು ತಮ್ಮನ ಕರ್ತವ್ಯ. ಈ ಮನೆಯ ಖರ್ಚಿಗೆ ಹೇಗೂ ಲಕ್ಷ್ಮಿಯ ಸಂಬಳವಿದೆಯಲ್ಲ.

ಈ ವಿಧವೆ ಚಿಕ್ಕ ಹಾಗೂ ಆಕೆಯ ಸಂಸಾರದ ಬಗ್ಗೆ ಸುರೇಶ ಮದುವೆಗೆ ಮೊದಲೇ ಹೇಳಿದ್ದ. ಆಕೆ ಸುರೇಶನ ಮದುವೆಗೆ ಹುಬ್ಬಳ್ಳಿಗೆ ಬಂದಿರಲಿಲ್ಲ. ಇಲ್ಲಿ ಹೊಸ ಸಂಸಾರ ಪ್ರಾರಂಭವಾದ ನಂತರ ಒಂದು ಸಲ ಇಲ್ಲಿನ ಮನೆಗೆ ಮಕ್ಕಳೊಂದಿಗೆ ಬಂದಿದ್ದಳು. ಆಕೆಯ ಅಹಂಕಾರದ ನಡೆನುಡಿ, ಮಕ್ಕಳ ಹುಂಬ ವರ್ತನೆ, ಎಲ್ಲಕ್ಕಿಂತ ಮೇಲಾಗಿ ಕೊಬ್ಬಿದ ಎಮ್ಮೆಯಂತೆ ಕಾಣುತ್ತಿದ್ದ ಆಕೆಯ ಹಿರಿಮಗಳ ಹಾಲ್‌ ಚಾಲು- ಯಾಕೋ ಲಕ್ಷ್ಮಿಗೆ ಹಿಡಿಸಿರಲಿಲ್ಲ. ವಿಧವೆಯ ಸಂಸಾರಕ್ಕೆ ಗಂಡ ಸಹಾಯ ಮಾಡಿದರೆ ಅದರಲ್ಲೇನೂ ತಪ್ಪು ಕಂಡಿರಲಿಲ್ಲ ಲಕ್ಷ್ಮಿಗೆ. ಆದರೆ ಪ್ರತಿ ತಿಂಗಳು ಸಂಬಳದ ಬಹುಪಾಲನ್ನು ಆತ ಆ ಮನೆಗಾಗಿಯೇ ಖರ್ಚು ಮಾಡುವುದು, ಪ್ರತಿ ರವಿವಾರ ಅಕ್ಕನ ಸಂಸಾರದ ಯೋಗಕ್ಷೇಮ ವಿಚಾರಿಸಲು ಆ ಮನೆಗೇ ಹೋಗುವುದು, ಅನೇಕ ಸಲ ರಾತ್ರಿ ಕೂಡ ಅಲ್ಲೇ ಕಳೆಯುವುದು, ಎಲ್ಲದಕ್ಕೂ ಏನಾದರೊಂದು ನೆಪ ಹೇಳಿ ಆ ವಿಷಯದ ಬಗೆಗಿನ ಮಾತನ್ನು ಅಲ್ಲೇ ಬಿಟ್ಟು ಎದ್ದು ಹೊರಗೆ ಹೋಗಿ ಬಿಡುವುದು, ಇಂಥವೆಲ್ಲ ಲಕ್ಷ್ಮಿಗೆ ಬರಬರುತ್ತ ನುಂಗಲಾರದ ತುತ್ತಾಗತೊಡಗಿದವು.

ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ

ಈ ಮಧ್ಯೆ ಲಕ್ಷ್ಮಿಯ ತಮ್ಮನ ಮದುವೆ ನಿಶ್ಚಯವಾಗಿದ್ದರಿಂದ ಲಕ್ಷ್ಮಿ ಹದಿನೈದು ದಿನದ ರಜೆ ಹಾಕಿ ತವರಿಗೆ ಬಂದಳು. ಒಬ್ಬಳೇ ಏಕೆ ಬಂದೆ ಅಂತ ಕೇಳಿದವರಿಗೆ ಗಂಡ ಮದುವೆಗೆ ಬರುತ್ತಾನೆಂದು ಹೇಳಿದಳು. ಆತನೀಗ ಅಸಿಸ್ಟೆಂಟ್ ಮ್ಯಾನೇಜರ್, ತುಂಬ ಕೆಲಸ, ಹಾಗೆಲ್ಲ ರಜೆ ಸಿಗುವುದಿಲ್ಲ, ಅಂತ ಸತ್ಯವನ್ನೇ ಹೇಳಿದಳು. ಬರುವಾಗ ತಮ್ಮನಿಗಾಗಿ ಏನಾದರೂ ಒಳ್ಳೆಯ ಪ್ರಜೆಂಟೇಶನ್ ತಗೊಂಡು ಬರಿ ಅಂತ ಗಂಡನಿಗೆ ಹೇಳಿ ಬಂದಿದ್ದಳು.

ಕಣ್ಣು ಸರಿಯಾಗಿ ಕಾಣಿಸುತ್ತಿರದಿದ್ದರೂ ಮುಂಬಯಿಯಿಂದ ಬಂದ ಲಕ್ಷ್ಮಿಯನ್ನು ನೋಡಲೆಂದು ಇಮಾಮ್‌ಬೀ ಕೋಲೂರಿಕೊಂಡು ಬಂದಳು. ‘ಎಷ್ಟು ದುಬಲೀಪತಲೀ ಆಗೀದಿ ಬೇಟೀ’ ಅಂದಳು. ನೆಟಿಕೆ ಮುರಿದಳು. ಹತ್ತನೆಯ ಸಲ ಬಸಿರಿಯಾಗಿದ್ದ ಹಮೀದಾಬಾನು ರಕ್ತಹೀನತೆಯಿಂದ ಬಿಳಿಚಿಕೊಂಡು ಜೀವಂತ ಶವದ ಹಾಗೆ ಕಾಣುತ್ತಿದ್ದಳು. ಇನ್ನು ಮತ್ತೆ ಹೆರಿಗೆಯಾದರೆ ಆಕೆಯ ಜೀವಕ್ಕೆ ಅಪಾಯವೆಂದು ಕಳೆದ ಸಲವೇ ಡಾಕ್ಟರು ಹೇಳಿದ್ದರಂತೆ. ಹಾಗೆಂದು ಆಕೆಯ ಒಂಬತ್ತನೇ ಮಗು ಹುಟ್ಟಿದ ನಂತರ ಬಂದಿದ್ದ ಆಕೆಯ ಗಂಡನಿಗೆ ಇಮಾಮ್ ಬೀ ಹೇಳಿದಾಗ ಆತ ‘ಜೀವ ಕೊಡುವಾತ- ಉಳಿಸುವಾತ-ತೆಗೆದುಕೊಂಡು ಹೋಗುವಾತ ಅಲ್ಲಾ, ನಮ್ಮ ಕೈಯಲ್ಲೇನಿದೆ’ ಅಂತ ಕೈಯಾಡಿಸಿಬಿಟ್ಟಿದ್ದ, ಯಥಾ ಪ್ರಕಾರ ಆತ ತಿರುಗಿ ಹೋಗುವಾಗ ಅಲ್ಲಾನ ಕೃಪೆಯಿಂದ ಮತ್ತೆ ಬೀಜ ಬಿತ್ತಿಯೇ ಹೋಗಿದ್ದ. ಆ ಬಡವನನ್ನು ಮನೆಯ ಹೊಸ್ತಿಲು ತುಳಿಸಗೊಡಬಾರದೆಂದು ಈಗೀಗ ದೊಡ್ಡವರಾಗತೊಡಗಿರುವ ಮಕ್ಕಳೂ ಹೇಳುತ್ತಿವೆ. ಈ ಒಂಬತ್ತು ಮಕ್ಕಳಲ್ಲಿ ಹಿರಿಯ ಮೂವರೂ ಯಾರಾರ ಮನೆಯಲ್ಲೋ ಕೆಲಸಕ್ಕಿದ್ದಾರೆ. ಉಳಿದ ಆರು ಮಕ್ಕಳು ತಾಯಿ-ಅಜ್ಜಿಯೊಡನೆ ಅರೆಹೊಟ್ಟೆ ಉಂಡು ಕಟ್ಟಿಗೆಯಂಥ ಕೈಕಾಲು-ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಜೀವವಿಲ್ಲದ ಕಣ್ಣುಗಳಿಂದ ಜಗತ್ತನ್ನು ನೋಡುತ್ತ ಹೇಗೋ ಬದುಕಿಕೊಂಡಿವೆ.

ಈ ಪೀಳಿಗೆಗೆ ಶೀಘ್ರವೇ ಮತ್ತೊಂದು ದುರ್ದೈವಿ ಹೊಸಜೀವ ಸೇರಲಿದೆ. ಈಗಲಾದರೂ ಹಮೀದಾಬಾನು ಬುದ್ದಿ ಕಲಿಯಬಾರದೆ? ಆಕೆಯ ಹಾಗೂ ಈ ಮಕ್ಕಳ ಅನುವು-ಆಪತ್ತು, ಜಡ್ಡು-ಜಾಪತ್ತು, ಹೊಟ್ಟೆ-ಬಟ್ಟೆ ಯಾವುದರ ಖಬರೂ ಇಲ್ಲದೆ ವರ್ಷಕ್ಕೊಂದು ಸಲ ಬಂದು ಕೆಲದಿನ ಇದ್ದು ಮತ್ತೆ ತನ್ನ ಪುರುಷತ್ವವನ್ನು ಸಾಬೀತು ಮಾಡಿಹೋಗುವ ಸುವ್ವರ್‌ನನ್ನು ಹಮೀದಾಬಾನು ಯಾಕೆ ಹತ್ತಿರ ಸೇರಿಸಬೇಕು? ಯಾವ ಸುಖಕ್ಕಾಗಿ- ಇದು ಮುದುಕಿ ಇಮಾಮ್‌ ಬೀಯ ವ್ಯಥೆ.

ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು

ಹಮೀದಾಬಾನು ನಿರೀಕ್ಷಿಸಿಯೇ ಇದ್ದಂತೆ ಲಕ್ಷ್ಮಿ ಕೋಪದಿಂದ ಕೇಳಿದಳು, “ನೀನ್ಯಾಕೆ ಆತನನ್ನು ಒದ್ದು ಓಡಿಸುವುದಿಲ್ಲ ಹಮೀದಾ? ಇಂಥ ಗಂಡನನ್ನು ಕಟ್ಟಿಕೊಂಡೇನು ಉಣ್ಣುವುದಿದೆ? ಈತನೂ ಒಬ್ಬ ಗಂಡಸೇ?”

ಹಮೀದಾಬಾನು ಎಂದಿನಂತೆ ಸಣ್ಣಮುಖ ಮಾಡಿ ಏನೂ ಮಾತಾಡದೆ ತಲೆತಗ್ಗಿಸಿದಳು.

*

ಮುಂಬಾಯಿಗೆ ತಿರುಗಿ ಬಂದಾಗ ಗಂಡನ ಬಗೆಗಿನ ಅಸಮಾಧಾನ ಲಕ್ಷ್ಮಿಯಲ್ಲಿ ಭುಗಿಲ್ಲೆಂದಿತ್ತು. ಆತ ಹುಬ್ಬಳ್ಳಿಗೆ ಆಕೆಯ ತಮ್ಮನ ಮದುವೆಗೆ ಬರೀಕೈಯಲ್ಲಿ ಬಂದಿದ್ದ. ಇದೇಕೆ ಹೀಗೆಂದು ಏಕಾಂತದಲ್ಲಿ ಲಕ್ಷ್ಮಿ ಕೇಳಿದಾಗ ಏನು ಮಾಡುವುದು, ಹಣದ ಅಡಚಣೆ ಇತ್ತು, ಅಂದ. ಇಷ್ಟಕ್ಕೂ ನೀನು ಹೇಗೂ ಏನಾದರೊಂದು ಕೊಂಡು ಕೊಡುತ್ತೀಯಲ್ಲ, ನಾನು-ನೀನು ಬೇರೆಯೇ? ಅಂದ. ತುಟಿ ಮುಚ್ಚಿಕೊಂಡು ಲಕ್ಷ್ಮಿ ತಾನೇ ಮಾರ್ಕೆಟಿಗೆ ಹೋಗಿ ಅಮ್ಮನಿಗೊಂದು ರೇಶಿಮೆ ಸೀರೆ, ಅಪ್ಪನಿಗೆ ಶಲ್ಯೆ, ತಮ್ಮನಿಗೆರಡು ತೊಲದ ಚೈನು ತಂದಳು. ‘ಎಲ್ಲಾ ನನ್ನ ಯಜಮಾನರು ಮುಂಬಯಿಯಿಂದ ತಂದದ್ದು’ ಅಂತ ಹೇಳಿ ನೆಂಟರಿಷ್ಟರಿಂದ ‘ಎಷ್ಟು ಉದಾರಿ ಲಕ್ಷ್ಮಿಯ ಗಂಡ!’ ಅನ್ನಿಸಿಕೊಂಡು ಗರ್ವಪಟ್ಟಳು. ಮುಂಬಯಿಗೆ ಬಂದ ಒಂದು ವಾರದಲ್ಲಿ ಗಂಡನ ಉದಾರತೆಯ ಪೂರ್ಣ ಪರಿಚಯವಾಯಿತು ಅವಳಿಗೆ. ಒಂದು ದಿನ ಸಂಜೆ ಆಕೆ ಬ್ಯಾಂಕಿನಿಂದ ಮನೆಗೆ ಬಂದಳು. ಸುರೇಶ ಟೂರ್‍‌ಗೆ ಅಂತ ದಿಲ್ಲಿಗೆ ಹೋಗಿದ್ದ. ಆಗ ‘ಸುರೇಶಮಾಮಾ ದಿಲ್ಲಿಯಿಂದ ತಿರುಗಿ ಬಂದ್ರೇನು ಕೇಳ್ಕೊಂಡು ಬಾ ಅಂದಳು ರೇಖಕ್ಕ’ ಅಂತ ಕೇಳಿಕೊಂಡು ಬಂದಿದ್ದ ಸುರೇಶನ ಅಕ್ಕನ ಮಗ ರವಿ. ರೇಖಾ ಆ ಅಕ್ಕನ ಹಿರಿಯ ಮಗಳು. ಸುರೇಶನ ಶಿಫಾರಸ್ಸಿನಿಂದಲೇ ಆಕೆಗೆ ಇತ್ತೀಚೆಗೆ ಟೈಪಿಸ್ಟ್ ಕೆಲಸ ಸಿಕ್ಕಿತ್ತು ಯಾವುದೋ ಆಫೀಸಿನಲ್ಲಿ. ಮೂವತ್ತರ ಆ ಹುಡುಗಿಗೆ ಇನ್ನೂ ಮದುವೆ ಏಕಾಗಲಿಲ್ಲವೆಂದು ಲಕ್ಷ್ಮಿ ಕೇಳಿದಾಗ ಸುರೇಶ ‘ಅವಳಿನ್ನೂ ಚಿಕ್ಕ ಹುಡುಗಿ, ಅವಳಿಗೇನು ಅಂಥ ವಯಸ್ಸಾಗಿದೆ?’ ಅನ್ನುತ್ತಿದ್ದ. ಆಕೆಗೇನು ಅಂಥ ಅರ್ಜೆಂಟು ಕೆಲಸವೋ ಸುರೇಶ ಮಾಮಾನ ಕಡೆಗೆ? ಆತನಿನ್ನೂ ಬಂದಿಲ್ಲವೆಂದು ಲಕ್ಷ್ಮಿ ಹುಬ್ಬುಗಂಟಿಕ್ಕಿಯೇ ಉತ್ತರಿಸಿದಳು. ರವಿ ಉತ್ಸಾಹದಿಂದ ಹೇಳಿದ್ದ, ‘ಮಾಮೀ, ನನ್ನ ಹೊಸ ಸುವೇಗ ನೋಡಿದ್ರೇನು? ಮೊನ್ನೆ ಸುರೇಶ ಮಾಮ ಕೊಡಿಸಿದ್ರು. ಮೂರುವರೆ ಸಾವಿರ ಕೊಟ್ರಂತ. ಬರ್‍ರೀ, ಹೊರಗಿಟ್ಟೀನಿ, ನೋಡಬರ್‍ರಿ. ವಂಡರ್‌ಫುಲ್ ಅದ.’ ಲಕ್ಷ್ಮಿಗೆ ತನಗಾದ ಆಘಾತವನ್ನು ತೋರಿಸಿಕೊಳ್ಳದಿರಲು ನಿಜವಾಗಿಯೂ ಕಠಿಣವೆನಿಸಿತು.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ದಿಲ್ಲಿಯಿಂದ ಮರಳಿ ಬಂದ ಸುರೇಶ ಒಳ್ಳೆಯ ಮೂಡ್‌ನಲ್ಲಿದ್ದ. ಹೆಂಡತಿಯನ್ನು ಅಪ್ಪಿ ರಮಿಸಿ ನಿನ್ನ ಬಿಟ್ಟಿರೋದು ಭಾಳ ತ್ರಾಸು ಲಕ್ಷ್ಮೀ ಅಂದ. ಲಕ್ಷ್ಮಿಕರಗಿದಳು. ಆತ ಬೇಕಾದವರಿಗೆ ಬೇಕಾದಷ್ಟು ಖರ್ಚು ಮಾಡಲಿ, ತನ್ನನ್ನು ಮಾತ್ರ ಪ್ರೀತಿಸಿದರೆ ಸಾಕು, ತನಗೇನು ತನ್ನದೇ ಹಣವಿಲ್ಲವೇ ಖರ್ಚು ಮಾಡಲು, ಅನ್ನಿಸಿತು. ತಾನೇನು ಉಳಿದ ಹೆಂಗಸರಂತೆ ಆರ್ಥಿಕವಾಗಿ ಗಂಡನನ್ನು ಅವಲಂಬಿಸಬೇಕಾಗಿಲ್ಲ. ತನಗೆ ಏನು ಬೇಕಾದರೂ ತನ್ನ ಹಣದಿಂದ ಕೊಳ್ಳಬಹುದು. ಗಂಡನ ಹಣ ತನಗೆ ಬೇಡ. ಆತನ ಪ್ರೀತಿಯೊಂದು ತನ್ನ ಪಾಲಿಗಿದ್ದರೆ ಸಾಕು, ಅನ್ನಿಸಿತು. ತುಂಬುಮನಸ್ಸಿನಿಂದ ಆಕೆ ಗಂಡನ ಪ್ರೀತಿಗೆ ಮೈಮರೆತು ಮನತೆರೆದು ಸ್ಪಂದಿಸಿದಳು. ಆದರೆ ಎಷ್ಟೋ ಸಲ ಆಕೆಗೆ ಮತ್ತೆ ಆಸೆಯಾಗುತ್ತಿತ್ತು. ಗಂಡ ತನಗಾಗಿ ಏನಾದರೂ ತರಬೇಕು, ತಾನದನ್ನು ಪಡೆದು ಕಣ್ಣರಳಿಸಿದ್ದು ನೋಡಿ ಆತನ ಕಣ್ಣು ಅರಳಬೇಕು. ಹೀಗೆ ಎಲ್ಲ ಸಾಧಾರಣ ಹೆಂಗಸಿಗಿರುವ ಆಸೆ. ಆದರೆ ಬಾಯಿಬಿಟ್ಟು ಕೇಳುವ ಮಟ್ಟಕ್ಕೆ ಇಳಿಯಲಾರಳು. ಆಸೆಯನ್ನೂ ಹತ್ತಿಕ್ಕಲಾರಳು. ಹಾಗೊಮ್ಮೆ ಅವರ ಲಗ್ನದ ಮೊದಲನೆಯ ವಾರ್ಷಿಕೋತ್ಸವ ಬಂದಾಗ ತುಂಬ ಸಡಗರ ಪಟ್ಟು ಮಧ್ಯಾಹ್ನ ಅರ್ಧರಜೆ ಹಾಕಿ ಆತನಿಗಿಂತ ಮೊದಲೇ ಮನೆಗೆ ಬಂದು ಸಿಹಿ ತಯಾರಿಸಿ, ಮನೆ ಸಿಂಗರಿಸಿ ಆಭರಣ ತೊಟ್ಟು ಹೊಸ ಸೀರೆಯುಟ್ಟು ಸಿಂಗಾರವಾಗಿ ಕಾತರದಿಂದ ಆತನಿಗಾಗಿ ಕಾಯ್ದಳು. ಆತ ತನಗಾಗಿ ಏನಾದರೂ ತರಬಹುದು ಅಂದುಕೊಂಡಳು.

ಆತ ಏನೂ ತರದಿದ್ದಾಗ, ತನ್ನ ಅಲಂಕಾರವನ್ನೂ ಗಮನಿಸದಿದ್ದಾಗ, ಸಹಜವಾಗಿಯೇ ನೊಂದುಕೊಂಡಳು. ಕೊನೆಗೆ ಸೋತು ‘ಇವತ್ತು ನಮ್ಮ ಲಗ್ನದ ಆನಿವರ್ಸರಿ ಅಲ್ಲವೇನ್ರಿ?’ ಅಂತ ಜ್ಞಾಪಿಸಿದಳು. ‘ಹೌದಲ್ಲ, ಮರೆತೇ ಬಿಟ್ಟಿದ್ದೆ. ನಿನಗೆ ನನ್ನ ಸ್ವಭಾವ ಗೊತ್ತಲ್ಲ ಲಕ್ಷ್ಮಿ, ನಾನು ತಾರೀಖುಗಳಿಗೆ ಮಹತ್ವ ಕೊಡುವುದಿಲ್ಲ’ ಅಂದ ಸುರೇಶ. ಹೌದು ಅವಳಿಗೆ ಗೊತ್ತಿತ್ತು. ಆದರೆ ಅವಳಲ್ಲಿನ್ನೂ ಆಸೆ ಉಸಿರಾಡುತ್ತಿತ್ತು. ‘ಮಾರ್ಕೆಟ್ ಕಡೆ ಹೋಗಿ ಬರೋಣವೇ?’ ಅಂದಳು. ಆತ ಸ್ಕೂಟರ್ ಸುರು ಮಾಡಿದ. ಆಕೆ ಇಚ್ಛಿಸಿದಂತೆ ದೇವಾಲಯಕ್ಕೆ ಕರೆದುಕೊಂಡು ಹೋದ, ಕಾಯಿ-ಪಲ್ಲೆ, ಹಣ್ಣು-ಹಂಪಲು ಇತ್ಯಾದಿ ಕೊಂಡರು. ಇನ್ನೂ ಸ್ಪಷ್ಟವಾಗಲೆತ್ನಿಸುತ್ತ ಕೊನೆಯ ಪ್ರಯತ್ನವೆಂದು ಲಕ್ಷ್ಮಿ ಅಂದಳು. ‘ಆ ಶೋಕೇಸ್‌ನೊಳಗಿರೂ ಸೀರೆ ಬ್ಯೂಟಿಫುಲ್ ಅದ ಅಲ್ರಿ?’ ಆದರೆ ಆತನ ಬರುಡು ‘ಹೂ’ ಕೇಳಿ ಆಕೆಯ ಉತ್ಸಾಹ ಜರ್‍ರನೆ ಇಳಿದುಹೋಯಿತು. ಮುಂದೆ ಆಕೆ ಮಾತಾಡಲಿಲ್ಲ. ಹೌದು, ಸುರೇಶ್‌ನ ಸ್ವಭಾವವೇ ಹಾಗೆ. ಇಂಥ ತಾರೀಖು ನೆನಪಿಡುವುದು, ಉಡುಗೊರೆ ತರುವುದು, ಶುಭಾಶಯ ಹೇಳುವುದು ಇತ್ಯಾದಿಯೆಲ್ಲ ಆತನ ಮಟ್ಟಿಗೆ ತೀರಾ ಔಪಚಾರಿಕ, ಚೈಲ್ಡಿಶ್. ತಾನು ಅರ್ಥಮಾಡಿಕೊಳ್ಳಬೇಕು. ಜಗಳವಾಡಲು, ಕಾಡ ಬೇಡಲು ತಾನೇನು ಅಶಿಕ್ಷಿತ ಅನಾಗರಿಕ ಹೆಂಗಸೆ? ಆ ರಾತ್ರಿ ‘ನಮ್ಮ ಪಾಲಿಗೆ ಪ್ರತಿ ರಾತ್ರಿಯೂ ಮೊದಲ ರಾತ್ರಿನೇ ಅಲ್ಲವೇ ಲಕ್ಷ್ಮಿ’ ಅಂತ ಆತ ಬಳಿಗೆಳೆದುಕೊಂಡಾಗ ಆಕೆಯೂ ತಾರೀಖು ಉಡುಗೊರೆ ಇತ್ಯಾದಿಗಳನ್ನು ಮರೆತುಬಿಟ್ಟಳು.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಮರುವಾರ ಒಂದು ದಿನ ಆತ ಆಫೀಸಿನಿಂದ ಬಂದೊಡನೆ ಅವಳಿಗೆ ರೆಡಿಯಾಗಲು ಹೇಳಿ ಚಹಾ ಕೂಡ ಕುಡಿಯದೆ ಅವಳನ್ನು ಕರಕೊಂಡು ಹೊರಟ. ಟ್ಯಾಕ್ಸಿ ವರ್ಲಿಯ ದಾರಿ ಹಿಡಿದಾಗಲೇ ಲಕ್ಷ್ಮಿಗೆ ತಿಳಿದದ್ದು ಹೊರಟದ್ದು ಆತನ ಅಕ್ಕನ ಮನೆಗೆ ಅಂತ. ಮನಸ್ಸಿನಲ್ಲಿನ ಅಸಮಾಧಾನ ಹೊರಗೆಡವದೆ ಶಿಷ್ಟಾಚಾರಕ್ಕಾಗಿ ಆಕೆ ನಗುಮುಖದಿಂದಲೇ ಎಲ್ಲರೊಂದಿಗೆ ಮಾತಾಡಿದಳು. ಚಹಾ-ತಿಂಡಿ ನಡೆದಾಗ ‘ಇದೇನಿವತ್ತು ವಿಶೇಷ?’ ಅಂತ ಕೇಳಿದಳು. ಮಿರಿ ಮಿರಿ ಮಿಂಚುವ ಹೊಸ ಸೀರೆಯುಟ್ಟು ಅತ್ತಿಂದಿತ್ತ ಬಳುಕುತ್ತ ಓಡಾಡುತ್ತಿದ್ದ ರೇಖಾ ವೈಯಾರವಾಗಿ ನಕ್ಕು ಅಂದಳು, ‘ಅದೇನು ಮಾಮೀ ಹೀಂಗ ಕೇಳ್ತಿರಿ ಸುರೇಶಮಾಮ ನಿಮಗೆ ಹೇಳಿಲ್ಲೇನು? ಇವತ್ತ ನನ್ನ ಬರ್ತ್‌ ಡೇ. ನಿನ್ನೇನೇ ನನ್ನ ಕರಕೊಂಡೋಗಿ ಈ ಸೀರಿ ಕೊಡಿಸಿದ್ರು ಸುರೇಶಮಾಮ. ಹ್ಯಾಂಗದ, ನಿಮಗೆ ಲೈಕ್ ಆತೋ ಇಲ್ಲೋ ಈ ಸೀರಿ?’ ಜೊತೆಗೆ ಆಕೆಯ ತಾಯಿಯ ಶಿಫಾರಸ್ಸು. ‘ನಮ್ಮ ಸುರೇಶ ಇಂಥವೆಲ್ಲಾ ಎಂದೂ ಮರಿಯೋದಿಲ್ಲ. ಭಾಳ ಅಂತಃಕರಣಿ ಹುಡುಗ.’ ಮುಂದೆಲ್ಲ ಏನೇನು ಮಾತುಕತೆಯಾಯಿತೋ ಯಾವಾಗ ಅಲ್ಲಿಂದ ಎದ್ದು ಬಂದದ್ದೋ ಲಕ್ಷ್ಮಿಗೆ ನೆನಪಿಲ್ಲ.

ಲಕ್ಷ್ಮಿಯ ಮನಸ್ಸು ಕಹಿಯಾದದ್ದು ನಿಜ. ಆ ದಿನಗಳಲ್ಲಿ ಅವಳು ಬಸಿರಿ ಬೇರೆ. ಅವಳಿಗೆ ಸದಾ ಸುರೇಶ ತನ್ನ ಕೂಡ ಇರಬೇಕು ಅನಿಸುತ್ತಿತ್ತು. ಅದು ಸಾಧ್ಯವಾಗದಾಗ ಅವಳಿಗೆ ದುಃಖವಾಗುತ್ತಿತ್ತು. ಎಷ್ಟೋ ಸಲ ಆಕೆ ಆತನಿಗಾಗಿ ರಾತ್ರಿ ಕಾಯ್ದು-ಕಾಯ್ದು ಊಟ ಮಾಡದೆ ಹಾಗೇ ಮಲಗಿದಾಗ ಆತ ತಡವಾಗಿ ತೂರಾಡುತ್ತ ಬರುತ್ತಿದ್ದ. ಅವಳಿಗಾಗಿ ಅನುತಾಪ-ಅನುಕಂಪ ಇತ್ಯಾದಿ ತೋರದೆ ನೇರವಾಗಿ ಹಾಸಿಗೆ ಸೇರುತ್ತಿದ್ದ. ಎಷ್ಟೋ ಸಲ ಅವಳ ಇಚ್ಛೆಗೆ ವಿರುದ್ಧವಾಗಿ ಸಂಭೋಗಿಸುತ್ತಿದ್ದ. ಅವಳು ಪ್ರತಿಭಟಿಸಿದಾಗ ಬಲಾತ್ಕರಿಸುತ್ತಿದ್ದ. ಅಥವಾ ಸಿಟ್ಟಾಗಿ ಎರಡೆರಡು ದಿನ ಮನೆಗೇ ಬರುತ್ತಿರಲಿಲ್ಲ. ಟೂರ್ ಹೋಗಿದ್ದೆ ಅಂತ ಹೇಳುತ್ತಿದ್ದ. ಇತ್ತೀಚೆಗೆ ಆತನಿಗೆ ಬೇರೆ ಶಾಖೆಗೆ ವರ್ಗವಾಗಿದ್ದರಿಂದ ಆತನ ಟೂರ್ ಪ್ರೋಗ್ರಾಮುಗಳು ಆಕೆಗೆ ತಿಳಿದಿರುತ್ತಿರಲಿಲ್ಲ. ಆಕೆ ಬೇಕೆಂದರೆ ಆತನ ಶಾಖೆಗೆ ಫೋನ್ ಮಾಡಿ ಆತ ನಿಜವಾಗಿಯೂ ಟೂರ್‌ಗೆ ಹೋಗಿದ್ದನೇ ಕೇಳಿ ತಿಳಿಯಬಹುದಿತ್ತು. ಆಕೆ ಹಾಗೆಂದೂ ಮಾಡಲಿಲ್ಲ. ಅಕಸ್ಮಾತ್ ಆತ ಟೂರ್‌ಗೆ ಹೋಗಿರಲಿಲ್ಲವೆಂದು ತಿಳಿದುಬಂದರೆ ಆತ ರಾತ್ರಿ ಎಲ್ಲಿ ಕಳೆದಿರಬಹುದು ಅಂತ ಯೋಚಿಸಬೇಕಾಗುತ್ತಿತ್ತು. ಆ ಪ್ರಶ್ನೆ ಎದುರಿಸುವ ಧೈರ್ಯ ಅವಳಲ್ಲಿರಲಿಲ್ಲ. ಅನೇಕ ಸಲ, ರಾತ್ರಿಗಳನ್ನು ಅಕ್ಕನ ಮನೆಯಲ್ಲಿ ಕಳೆದಿರಾ ಅಂತ ಆತನಿಗೆ ಕೇಳುವ ಮನಸ್ಸಾಗುತ್ತಿತ್ತು ಲಕ್ಷ್ಮಿಗೆ. ಆಕೆ ಹಾಗೆಂದೂ ಕೇಳಲಿಲ್ಲ. ಆತ ‘ಹೌದು’ ಅಂದಿದ್ದರೆ? ಆ ಉತ್ತರ ಎದುರಿಸುವ ಧೈರ್ಯ ಅವಳಲ್ಲಿರಲಿಲ್ಲ. ಆದರೂ ಹಲವಾರು ಸಲ ಆಕೆ ಗಂಡನೊಂದಿಗೆ ಜಗಳವಾಡಿದಳು. ತನ್ನ ಹಕ್ಕು, ಆತನ ಕರ್ತವ್ಯ ಇತ್ಯಾದಿ ಬಗ್ಗೆ ಸೂತ್ರಗಳನ್ನು ಪಠಿಸಿದಳು. ಆತ ಆಕೆಯನ್ನು ಸೊಕ್ಕಿನ ಹೆಣ್ಣೆಂದು ಜರೆದ. ಇಬ್ಬರೂ ಬೇಜಾರುಪಟ್ಟರು.

ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು

ಅದೆಲ್ಲ ಏನೇ ಆದರೂ ಲಕ್ಷ್ಮಿ ಹೆರಿಗೆಗಾಗಿ ತವರಿಗೆ ಹೋಗುವ ಹದಿನೈದು ದಿನ ಮೊದಲಿನಿಂದ ಹಗಲುರಾತ್ರಿ ಆತನಿಗೆ ದುಂಬಾಲುಬಿದ್ದಳು. ನನಗ್ಯಾಕೋ ಹೆದರಿಕೆ. ಹೆರಿಗೆಯ ಡೇಟ್ ಕೊಟ್ಟಿದ್ದಾರಲ್ಲ ಡಾಕ್ಟರು, ಆ ಸುಮಾರಿಗೆ 10-12 ದಿನ ರಜೆ ತಗೊಂಡು ನೀವು ಬರ್‍ರಿ, ನೀವು ಹತ್ತಿರ ಇದ್ದರೇನೇ ನನಗೆ ಧೈರ್ಯ. ನಾನೆಂದೂ ನಿಮಗೆ ಏನೂ ಕೇಳಿಲ್ಲ. ಇದೊಂದಕ್ಕೆ ಇಲ್ಲ ಅನ್ನಬಾರದು. ಪ್ಲೀಸ್ ಬರಲಿಕ್ಕೇ ಬೇಕು ಪ್ಲೀಸ್. ಆತ ಹೂ ಅಂದ…

*

ಲಕ್ಷ್ಮಿ ಹುಬ್ಬಳ್ಳಿಗೆ ಹೆರಿಗೆಗೆಂದು ಬಂದಾಗ ಅವಳ ತಾಯಿಯಷ್ಟೇ ಸಂಭ್ರಮ ಪಟ್ಟವರು ಇಮಾಮ್ ಬೀ, ಹಮೀದಾಬಾನು. ತಾನೇ ಮುಂದಾಗಿ ಹಮೀದಾಬಾನು ಲಕ್ಷ್ಮಿಯ ಹುಟ್ಟಲಿರುವ ಮಗುವಿಗೆ ಎಣ್ಣೆನೀರು ಹಾಕುವ ಕೆಲಸ ಮುಂಗಡವಾಗಿ ವಹಿಸಿಕೊಂಡಳು. ‘ಏನಂತಾನ ಗೌಸಸಾಹೇಬ?’ ಅಂತ ಲಕ್ಷ್ಮೀ ನಗುತ್ತ ಕೇಳಿದಾಗ ಮಾತ್ರ ಅಜ್ಜಿ-ಮೊಮ್ಮಗಳಿಬ್ಬರ ಮುಖಗಳೂ ಬಾಡಿದವು. ಎರಡು ತಿಂಗಳ ಹಿಂದೆ ಹಮೀದಾಬಾನುವಿನ ಕೊನೆಯ ಇಬ್ಬರು ಮಕ್ಕಳಿಗೆ ಸೀರಿಯಸ್ ಟೈಫಾಯಿಡ್ ಜ್ವರ ಬಂದಿತ್ತು. ಅದೇ ಸಮಯದಲ್ಲಿ ವಾರ್ಷಿಕ ಭೇಟಿಗೆ ಬಂದಿದ್ದ ಗೌಸಸಾಹೇಬ ಮಕ್ಕಳ ಗಂಭೀರ ಸ್ಥಿತಿಯನ್ನು ಕಡೆಗಣಿಸಿ, ಎಂಟೇ ದಿನಗಳ ವಾಸ್ತವದಲ್ಲಿ ತನ್ನ ಬೀಜಬಿತ್ತುವ ಕೆಲಸ ಪೂರೈಸಿ, ಊರಿಗೆ ಹೋಗಿಬಿಟ್ಟಿದ್ದ. ಮುಂದೆ ಎಂಟು ದಿನಗಳಲ್ಲಿ ಎರಡೂ ಮಕ್ಕಳು ತೀರಿಹೋಗಿದ್ದವು. ವೊ ಆದಮೀ ನಹೀ, ಸೈತಾನ್ ಹೈ ಅಂತ ಇಮಾಮ್‌ ಬೀ ಶಪಿಸುತ್ತಿದ್ದಾಗ, ‘ಇನ್ನಾದರೂ ಬುದ್ದೀ ಕಲಿ ಹಮೀದಾ, ಇನ್ನೊಮ್ಮೆ ಬಂದರ ಕುತ್ತಿಗೆ ಹಿಡಿದು ಅತ್ತಾಗ ನೂಕಿ ಒದ್ದು ಕಳಿಸಿಬಿಡು ಆ ಮಗನ್ನ’ ಅಂತ ಲಕ್ಷ್ಮಿ ಸಿಟ್ಟುಮಾಡುತ್ತಿದ್ದಾಗ, ಹಮೀದಾಬಾನುವಿನ ಕಣ್ಣುಗಳು ಮೌನವಾಗಿ ತುಂಬಿಕೊಂಡವು.

ಲಕ್ಷ್ಮಿಗೆ ಮಾತು ಕೊಟ್ಟಿದ್ದಂತೆ ಆಕೆಯ ಗಂಡ ಹೆರಿಗೆಯ ಸಮಯದಲ್ಲಿ ಬರಲಿಲ್ಲ. ‘ಅವರಿಗೆ ಎಷ್ಟು ಕೆಲಸವೋ ಏನೋ, ನಾವೆಲ್ಲ ಇದ್ದೇವಲ್ಲ’ ಅಂದರು ಲಕ್ಷ್ಮಿಯ ತಾಯಿ, ತಂದೆ, ತಮ್ಮ. ಆದರೂ ಲಕ್ಷ್ಮಿಗೆ ಗಂಡನ ಅಲಕ್ಷ್ಯದಿಂದ ಹೇಳತೀರದ ಬೇಸರವಾಯಿತು. ಗಂಡುಮಗು ಹುಟ್ಟಿದ ಸಂತೋಷದಲ್ಲಿ ಬೇಸರ ಸಾಕಷ್ಟು ಮರೆತೂ ಹೋಯಿತು. ಮುಂದೆ ತಿಂಗಳ ನಂತರ ಆತ ಬಂದಾಗ ಹೆರಿಗೆಯ ಹೊತ್ತಿನಲ್ಲಿ ಬರಲಾಗದಿದ್ದುದಕ್ಕೆ ಆತ ಕಾರಣವನ್ನೂ ಕೊಟ್ಟ. ರೇಖಾಗೆ ರಸ್ತೆ ಅಪಘಾತದಲ್ಲಿ ಕಾಲು ಉಳುಕಿತ್ತು. ಪ್ಲಾಸ್ಟರ್ ಹಾಕಿಸುವುದು, ಔಷಧಿ ಕೊಡಿಸುವುದು, ಮೂಳೆತಜ್ಞರ ಕಡೆ ಹೋಗುವುದು, ಹೀಗಾಗಿ ಕೆಲಸ ಇತ್ತು. ಪುಣ್ಯಕ್ಕೆ ಕಾಲು ಮತ್ತೆ ಮೊದಲಿನಂತಾಯಿತು. ಈಗೇನೂ ಕಾಳಜಿ ಮಾಡಬೇಕಾಗಿಲ್ಲ.

ನಗುತ್ತಿರುವ ಎಳೆಮಗುವಿನ ಕಡೆ ನೋಡುತ್ತಿದ್ದಂತೆ ಲಕ್ಷ್ಮಿಯ ಬಿಗಿದಿದ್ದ ಹುಬ್ಬುಗಳು ಸಡಿಲವಾಗಿದ್ದವು.

*

ಯಾಕೋ ಎಂಥದೋ ಅನುಮಾನ-ಅಸಹನೆ-ಅಸಮಾಧಾನ ಅನಿಸತೊಡಗಿದ್ದರಿಂದ ಅದನ್ನೆಲ್ಲ ತಾಳುವುದೇ ಆಗದ್ದರಿಂದ ಲಕ್ಷ್ಮಿ ಮೂರು ತಿಂಗಳಾಗುವುದಕ್ಕೆ ಮೊದಲೇ ಮುಂಬಯಿಗೆ ಹೊರಟುಬಂದಳು. ಧೂಳು ಹಿಡಿದ್ದ ಮನೆಯನ್ನು ಸ್ವತಃ ಝಾಡಿಸಿ ಸ್ವಚ್ಛ ಮಾಡಿದಳು. ಮಗುವನ್ನು ನೋಡಲೆಂದು ಜೊತೆಯಲ್ಲಿ ಕರೆತಂದಿದ್ದ ಹಮೀದಾಬಾನುವಿನ ಎರಡನೆಯ ಮಗಳಿಗೆ ನಗುನಗುತ್ತ ತನ್ನ ಮನೆಯ, ಸುತ್ತಲಿನ ಅಂಗಡಿ-ಹಾಲಿನ ಡೇರಿ-ಕಾಯಿಪಲ್ಲೆ ಮಾರ್ಕೆಟು ಇತ್ಯಾದಿಗಳ ಪರಿಚಯ ಮಾಡಿಕೊಟ್ಟಳು. ಹಲವಾರು ತರಹ ಅಡುಗೆ ಮಾಡಿ ‘ನಿಮಗೆ ಹೋಟೆಲ್ ಊಟ ಅಭ್ಯಾಸವಾಗಿರಬೇಕಲ್ಲ’ ಅಂತ ಗಂಡನಿಗೆ ಉಪಚರಿಸುತ್ತ ಬಡಿಸಿದಳು, ಆತ ‘ನಾಯೆಲ್ಲೆ ದಿನಾ ಹೋಟಲಿನ್ಯಾಗ ಉಣ್ತಿದ್ದೆ? ಅಕ್ಕನ ಮನೀ ಇತ್ತಲ್ಲ ಬ್ಯಾಸರಾದಾಗ’ ಅಂದಾಗ ಪೆಚ್ಚಾದಳು. ಆದರೂ ಸುಧಾರಿಸಿಕೊಂಡು ರಾತ್ರಿ ಮಲ್ಲಿಗೆ ಮುಡಿದು ಇಂಪೋರ್ಟೆಡ್ ಪ‌ರ್ ಫ್ಯೂಮು ಬಳಸಿ ಮಾದಕವಾಗಿ ನಕ್ಕು ಆತನ ಹತ್ತಿರ ಹೋಗಿ ಕುಳಿತಳು. ಆತ ‘ಹೊತ್ತಾಯ್ತು ಮಲಗಿಕೋ ಹೋಗು ಲಕ್ಷ್ಮಿ, ಮತ್ತು ಕೂಸು ಎದ್ದರೆ ನಿನಗೆ ನಿದ್ದೆ ಆಗೊದಿಲ್ಲ’ ಅಂತಂದು ಮುಸುಕೆಳೆದುಕೊಂಡು ಆಚೆ ಮಗ್ಗುಲಾದಾಗ ಮತ್ತೆ ಪೆಚ್ಚಾಗಿ ಮಗುವಿನ ಪಕ್ಕ ಹೋಗಿ ಮಲಗಿದಳು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಒಂದು ತಿಂಗಳು, ಎರಡು ತಿಂಗಳು, ತಾನು ಮುಂಬಯಿಗೆ ಬಂದು ನಾಲ್ಕು ತಿಂಗಳಾದರೂ ಪ್ರತಿರಾತ್ರಿ ಇದೇ ಕಥೆಯಾದಾಗ ಲಕ್ಷ್ಮಿ ನಿಜವಾಗಿ ಅಸ್ವಸ್ಥಳಾದಳು. ಸಾಲದ್ದಕ್ಕೆ ಪಕ್ಕದ ಮನೆಯಾಕೆ ಬೇರೆ ‘ನೀವು ತವರಿಗೆ ಹೋಗಿದ್ದಾಗ ನಿಮ್ಮವರ ಅಕ್ಕನ ಮಕ್ಕಳು ಆಗಾಗ ಬರುತ್ತಿದ್ದರಪ್ಪ’ ಅಂತ ವ್ಯಂಗ್ಯವಾಡಿದ್ದಳು. ಏನು ಮಾಡಲೂ ತೋಚದೆ, ಗಂಡ ವಿಪರೀತವಾಗಿ ಕುಡಿದು ತಡವಾಗಿ ಮನೆಗೆ ಬಂದ ಒಂದು ರಾತ್ರಿ ಲಕ್ಷ್ಮಿ ತಾನಾಗಿ ಆತನ ಪಕ್ಕದಲ್ಲಿ ಮಲಗಿ ಅಪ್ಪಿಕೊಂಡಳು. ಆ ರಾತ್ರಿಯ ಆತನ ವರ್ತನೆಯಲ್ಲಿ ಒಂದಿನಿತೂ ಮಾರ್ದವವಾಗಲೀ, ಪ್ರೀತಿಯಾಗಲೀ ಇರಲಿಲ್ಲ. ಆತ ಕೊನೆಯಲ್ಲಿ ದೀರ್ಘವಾಗಿ ಉಸಿರುಬಿಡುತ್ತ ಆಚೆ ಹೊರಳಿ ನಿದ್ರೆಹೋದಾಗ ಲಕ್ಷ್ಮಿಗೆ ಮೈಯೆಲ್ಲಾ ಮೈಲಿಗೆಯಾದಂತೆನಿಸಿ ತೀರ ಅವಮಾನವೆನಿಸಿ ವಿಪರೀತ ಹೇಸಿಗೆಯೆನಿಸಿತು.

ಹಾಗೆ ಮತ್ತೆ ಹಲವು ತಿಂಗಳುಗಳು ಕಳೆದಿದ್ದುವು. ಮದುವೆಗೆ ಮೊದಲು ಅದೆಷ್ಟೋ ಪ್ರೇಮದ ಮಾತನಾಡಿದ್ದ, ನೂರಾರು ಆಶ್ವಾಸನೆಗಳನ್ನಿತ್ತ, ಬದುಕೊಂದು ಸುಂದರ ಕನಸೆಂಬ ನಂಬಿಕೆ ಮೂಡಿಸಿದ್ದ, ತೀರ ರೊಮ್ಯಾಂಟಿಕ್-ತೀರ ಜಂಟಲ್ ಆಗಿದ್ದ ಮನುಷ್ಯ ಈತನೆಯೇ ಅಂತ ಸಂಶಯ ಬರುತ್ತಿತ್ತು ಲಕ್ಷ್ಮಿಗೆ. ಇಷ್ಟು ಚಿಕ್ಕವಯಸ್ಸಿನಲ್ಲೇ ತನಗೆ ಜೀವನದ ಬಗ್ಗೆ ವೈರಾಗ್ಯ ಹುಟ್ಟುವ ಹಾಗೆ, ಯಾತರಲ್ಲೂ ಆಸಕ್ತಿ ಉಳಿಯದ ಹಾಗೆ, ಯಾತರ ಬಗೆಗೂ ಉತ್ಸಾಹವಿರದ ಹಾಗೆ ಮಾಡಿದನಲ್ಲ ಈ ಮನುಷ್ಯ ಅಂತ ಅವಳಿಗೆ ಈಗೀಗ ಸಿಟ್ಟು ಬರತೊಡಗಿತ್ತು. ತಾನೇಕೆ ಇಷ್ಟೆಲ್ಲ ಅಲಕ್ಷ್ಯ-ನೋವು-ಅಪಮಾನ ತಾಳಿಕೊಳ್ಳುತ್ತಿದ್ದೇನೆ, ಅಂತ ತನ್ನ ಬಗೆಗೇ ಜಿಗುಪ್ಸೆಯಾಗತೊಡಗಿತ್ತು.

ಹಾಗಿದ್ದಾಗೊಂದು ಸಲ ಸತತ ಒಂದು ವಾರ ಸುರೇಶ ಮನೆಗೇ ಬರಲಿಲ್ಲ. ಲಕ್ಷ್ಮಿ ಕಾಯ್ದು-ಕಾಯ್ದು ಸುಸ್ತಾಗಿ ಕೊನೆಗೆ ಗಾಬರಿಯಾಗಿ, ಆತನ ಬ್ಯಾಂಕಿಗೆ ಫೋನ್ ಮಾಡಿದಳು. ‘ಯಾರು ಮಾತನಾಡೋದು?’ ಅಂತ ಆಚೆ ಕಡೆಯಿಂದ ಧ್ವನಿ ಬಂದಾಗ ನಾಲಿಗೆ ತಡವರಿಸಿತು. ಹೆಂಡತಿಗೆ ಹೇಳದೆ ಗಂಡ ನಾಪತ್ತೆಯಾಗಬೇಕೆಂದರೆ! ‘ನಾನು ಅವರ ಫ್ರೆಂಡ್’ ಅಂದಳು. ಹಾಗೆ ತಾನು ಹೇಳಬೇಕಾದ ಪ್ರಸಂಗ ತಂದುದಕ್ಕಾಗಿ ಎದುರಿಗಿಲ್ಲದ ಗಂಡನನ್ನು ಶಪಿಸಿದಳು. ಆತ ಹತ್ತು ದಿನ ರಜೆ ಹಾಕಿದ್ದಾನೆಂದು ತಿಳಿದಾಗ ನಿಜವಾಗಿ ಕಂಗಾಲಾದಳು. ಆತನ ಅಕ್ಕನ ಮನೆಗೆ ಹೋಗಿ ವಿಚಾರಿಸಲು ಮನಸ್ಸು ಬರಲಿಲ್ಲ. ಹಾಗೇ ಹಗಲು ಊಟ ಬಿಟ್ಟು ರಾತ್ರಿ ನಿದ್ದೆಗೆಟ್ಟು ಚಿಂತಿಸಿ ಚಿಂತಿಸಿ ಕೊರಗಿದಳು.

ಒಂದು ವಾರದ ನಂತರ ಆತ ಬಂದ ಗಡ್ಡ ಬೆಳೆದಿತ್ತು. ಕೂದಲು ಕೆದರಿತ್ತು. ಕಣ್ಣು ಕೆಂಪಾಗಿತ್ತು. ಬಟ್ಟೆಯೆಲ್ಲ ಸುಕ್ಕು-ಸುಕ್ಕು. ಲಕ್ಷ್ಮಿ ತನ್ನೆಲ್ಲ ಕೋಪ-ಅಸಮಾಧಾನ, ಚಿಂತೆ ಮರೆತು ನಿಜವಾದ ಕಳಕಳಿಯಿಂದ ಆತನ ಕೊರಳ ಸುತ್ತ ಕೈಹಾಕಿ ಕೇಳಿದಳು. ಏನಿದು, ಯಾಕೆ ಹೀಗೆ? ಎಲ್ಲಿದ್ದಿರಿ? ಏನು ಮಾಡುತ್ತಿದ್ದೀರಿ? ಆತ ಸಹಜವಾಗಿಯೇ ಉತ್ತರಿಸಿದ. ರೇಖಾಗೆ ಬಹಳ ಕೆಟ್ಟದಾದ ಮಲೇರಿಯಾ ಬಂದಿತ್ತು. ದವಾಖಾನೆಗೆ ಹಾಕಬೇಕಾಯಿತು. ರಾತ್ರಿ ಅವಳೊಂದಿಗಿರಲು ಯಾರಾದರೂ ಬೇಕಲ್ಲ. ಬಹಳ ಸೀರಿಯಸ್ ಆಗಿತ್ತು. ಇವತ್ತೇ ಜ್ವರ ಬಿಟ್ಟಿದ್ದು. ಹೇಳಿ ಹೋಗಲು ಬಂದೆ. ಸ್ವಲ್ಪ ಹಣವೂ ಬೇಕಾಗಿತ್ತು.

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ತಾಳ್ಮೆಗೆಟ್ಟು ಚೀರುವ ಧ್ವನಿಯಲ್ಲಿ ಕೇಳಿದಳು ಲಕ್ಷ್ಮಿ, ‘ನೀನು ನನ್ನ ಲಗ್ನಾಗೋ ಬದ್ಲು, ಹೀಂಗ ನನ್ನನ್ನ ದಿನಾ ಕೊಲ್ಲೋ ಬದ್ಲು, ಆ ರೇಖಾನ್ನೇ ಯಾಕೆ ಲಗ್ನಾಗ್ಲಿಲ್ಲ?’

‘ಶಟ್‌ ಅಪ್’ ಅಂತ ಕೂಗಿ ಆತ ಬಲವಾಗಿ ಕೈಬೀಸಿ ಆಕೆಯ ಕೆನ್ನೆಯ ಮೇಲೆ ರಪ್ಪೆಂದು ಬಾರಿಸಿದ. ಕಣ್ಣು ಕತ್ತಲೆ ಬಂದು ಆಕೆ ಅಲ್ಲೇ ಕುಸಿದು ಕೂತಳು.

ಮುಂದಿನದು ದುಃಖದ ಕತೆಯೇ. ಆಕೆ ಆತನನ್ನು ಹಳಿದಳು. ಬದಲಾಗಿ ಆತ ರೇಖಾ ತನ್ನ ತಂಗಿಯ ಸಮಾನ ಅಂದ. ಹೀಗೆಲ್ಲ ಹೊಲಸು ವಿಚಾರ ನಿನ್ನ ತಲೆಯಲ್ಲಿ ಯಾಕೆ ಬಂತು ಅಂದ. ಅಷ್ಟಕ್ಕೆ ಸುಮ್ಮನಾಗದೆ, ನಿನ್ನಷ್ಟು ಕಾಲೇಜು ಕಲಿತ ಯಾವ ಹುಡುಗೀರೂ ಕ್ಯಾರೆಕ್ಟರ್ ಉಳಿಸಿಕೊಂಡಿರುವುದಿಲ್ಲ, ನೀನೂ ಉಳಿಸಿಕೊಂಡಿರಲಾರಿ, ಅದಕ್ಕೆ ಬೇರೆಯವರ ಸಲುವಾಗಿ ಹೀಗೆಲ್ಲ ಹೊಲಸು ವಿಚಾರ ಮಾಡುತ್ತೀ, ಅಂದುಬಿಟ್ಟ.

ಮರುದಿನ ಮುಂಜಾನೆ ಲಕ್ಷ್ಮಿ ಬ್ಯಾಂಕಿಗೆ ಹೋಗಿ ಸಿಕ್‌ ಲೀವ್ಹ್ ಹಾಕಿ ಮಗುವನ್ನು ಕರೆದುಕೊಂಡು ಗಂಡನ ಮನೆಬಿಟ್ಟು ಹೊರಟುಹೋಗಿಬಿಟ್ಟಳು.

*

‘ಬಂದಿಯಾ ಲಕ್ಷ್ಮಿ? ಬಾ. ಕೂಸಿನ ಮೊದಲ್ನೇ ಹುಟ್ಟಿದ ಹಬ್ಬ ಬಂತು. ಇಲ್ಲೇ ಮಾಡೋಣ ಬಾ ಅಂತ ನಾನೇ ಪತ್ರಾ ಬರಿಯಾಕೆ ಇದ್ದೆ. ನೀನೇ ಬಂದಿ. ಛಲೋ ಆತು’ ಅಂದರು ಲಕ್ಷ್ಮಿಯ ತಾಯಿ. ಲಕ್ಷ್ಮಿಯ ಪಾಲಿಗೆ ತುಂಬ ನೋವಿನ ದಿನಗಳು ಅವು. ಎರಡು ತಿಂಗಳ ರಜೆ ಹಾಕಿ ಬಂದಿದ್ದಳು. ಆದರೆ ಮುಂದೆ? ಆ ಗಂಡನ ಕೂಡ ಆ ಮನೆಯಲ್ಲಿರುವುದು ಹೇಗೆ? ಗಂಡ ಅಲ್ಲಿರುವಾಗ ಅದೇ ಊರಲ್ಲೇ ಬೇರೆ ಮನೆಯಲ್ಲಿರುವುದಾದರೂ ಹೇಗೆ? ಬೇರೆ ಕಡೆ ಟ್ರಾನ್ಸ್‌ಫರ್ ಕೇಳುವುದಾದರೂ ಹೇಗೆ? ನೌಕರಿಯನ್ನೇ ಬಿಟ್ಟರೆ? ಮುಂದೆ ಬದುಕುವ ದಾರಿಯೇನು? ತಮ್ಮ ವೈಮನಸ್ಯ ತಾಯಿ ತಂದೆಗೆ ಮುಪ್ಪಿನ ಕಾಲದಲ್ಲಿ ಅವರಿಗೆಂಥ ಶಾಕ್ ಆದೀತು? ಎಲ್ಲಿಗೆ ಹೋಗಲಿ ಏನು ಮಾಡಲಿ?

ನೂರು ಪ್ರಶ್ನೆಗಳು, ಯಾವೊಂದಕ್ಕೂ ಉತ್ತರವಿಲ್ಲ. ತಾಯಿಯ ಮನೆಯಲ್ಲಿ ಆರಾಮಿದೆ. ಸಂಜೆ ಯಾರಿಗಾಗಿಯೂ ಕಾಯಬೇಕಿಲ್ಲ. ರಾತ್ರಿ ತನ್ನ ಮೇಲೆ ಆಕ್ರಮಣವಿಲ್ಲ. ಯಾಕೆ ತಡವಾಗಿ ಬಂದಿ ಅಂತ ಕೇಳಿ ಜಗಳವಾಡುವ ಹಾಗಿಲ್ಲ. ಯಾಕೆ ಬರಲಿಲ್ಲ, ಎಲ್ಲಿ ಹೋಗಿರಬಹುದು, ಎಂದೆಲ್ಲ ಚಿಂತಿಸಬೇಕಾಗಿಲ್ಲ. ಆದರೆ ಆದರೆ ತನಗೆ ಗಂಡ ಬೇಡವೆ? ಈಗಷ್ಟೇ ‘ಅಪ್ಪಾ’ ಅನ್ನಲು ಕಲಿತಿರುವ ತನ್ನ ಮಗನಿಗೆ ಅಪ್ಪ ಬೇಡವೆ?

ಲಕ್ಷ್ಮಿ ಯೋಚಿಸಿ ಹೈರಾಣಾದಳು.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

‘ಏನು ವಿಚಾರ ಮಾಡ್ತಿ ಲಕ್ಷ್ಮೀ? ಯಾಕೋ ಒಂಥರಾ ಕಾಣಿಸ್ತೀಯಲ್ಲ?’ ಅಂತ ಕೇಳಿದ ತಾಯಿಯನ್ನೆ ಒಂದು ಕ್ಷಣ ದಿಟ್ಟಿಸಿದಳು ಲಕ್ಷ್ಮಿ. ತನ್ನ ಗಂಡ -ಮಕ್ಕಳು-ಸಂಸಾರಕ್ಕಾಗಿ ಜೀವ ತೇಯ್ದು ಹಣ್ಣಾಗಿದ್ದಳು ಆ ತಾಯಿ. ಆಕೆಯ ಕಣ್ಣಲ್ಲಿ, ಮುಖದಲ್ಲಿ, ಇಡೀ ವ್ಯಕ್ತಿತ್ವದಲ್ಲಿ ಒಂದು ಬಗೆಯ ಸಾರ್ಥಕ ಭಾವ. ನೋಡುತ್ತಿದ್ದಂತೆ ಓಲಾಡುತ್ತಿದ್ದ ಲಕ್ಷ್ಮಿಯ ಮನಸ್ಸು ಗಟ್ಟಿಯಾಯಿತು. ಸೋತುಹೋದ ಆದರೂ ನಿರ್ಧಾರ ತುಂಬಿದ ಧ್ವನಿಯಲ್ಲಿ ಆಕೆ ಅಂದಳು: ‘ಏನಿಲ್ಲ ಅಮ್ಮ, ನಾ ಬಂದು ಭಾಳ ದಿವಸಾತು. ನಾಳಿನ ಶನಿವಾರ ಮುಂಬೈಗೆ ಹೋಗ್ಬಿಡ್ತೀನಿ. ರಿಝರ್‍ವೇಶನ್ ಮಾಡ್ಸು ಅಂತ ತಮ್ಮಗೆ ಹೇಳ್ಬಿಡು.’ ತಾಯಿ ನಕ್ಕು ಆಗ್ಲಿ ಅಂದರು.

ಲಕ್ಷ್ಮಿ ಊರಿಗೆ ಹೋಗುವಳೆಂದು ಕೇಳಿ ಮುದುಕಿ ಹಾಗೂ ಮೊಮ್ಮಗಳು ಅವಳನ್ನು ನೋಡಲು ಬಂದರು. ಲಕ್ಷ್ಮಿ ಅವರಿಗೆ ಧಾರಾಳವಾಗಿ ತನ್ನ ಒಳ್ಳೆಯದೇ ಆದ ಹಳೆಯ ಸೀರೆಗಳು, ಮಗುವಿನ ಬಟ್ಟೆಗಳು ಇತ್ಯಾದಿ ಕೊಟ್ಟಳು. ಗೌಸಸಾಹೇಬನ ಹೊಸವರ್ಷದ ಸಾಹಸದ ಕತೆ ಕೇಳಿದಳು. ಎಂದಿನಂತೆ ಇಮಾಮ್ ಬೀ ಆತನನ್ನೂ ಆತನ ವಂಶವನ್ನೂ ಶಪಿಸಿದಾಗ ಸುಮ್ಮನೆ ಕೂತು ಕಿವಿಗೊಟ್ಟಳು. ಈಗೀಗ ಆತ ಸಂಸಾರಕ್ಕಾಗಿ ಏನೂ ಹಣ ಕೊಡುವುದಿಲ್ಲ, ಮಕ್ಕಳು ಸತ್ತರೂ ಕೆಟ್ಟರೂ ಕೇಳುವುದಿಲ್ಲ ಅಂತ ಇಮಾಮ್‌ ಬೀ ದೂಷಿಸಿದಾಗ, ಆಕೆ ಬೇಡವೆಂದರೂ ಕೇಳದೆ ಒತ್ತಾಯದಿಂದ ನೂರು ರೂಪಾಯಿ ಕೊಟ್ಟಳು. ಕೊನೆಗೆ ‘ನಾ ಎರಡ ದಿನದಾಗ ಊರಿಗೆ ಹೋಗ್ತಿನಿ ಹಮೀದಾ, ನಿಮ್ಮಜ್ಜಿಗೆ ಪಾಪ ವಯಸ್ಸಾತು, ಕಾಳಜೀ ತಗೋ’ ಅಂತ ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟಳು. ತಿರುಗಿ ಹೊರಟಾಗ, ಇದೇನು ಈ ಸಲ ಅಮ್ಮಾ ಅವರು ‘ನೀನ್ಯಾಕೆ ಆತನನ್ನು ಒದ್ದು ಓಡಿಸುವುದಿಲ್ಲ ಹಮೀದಾ?’ ಅಂತ ಅನ್ನಲೇ ಇಲ್ಲವಲ್ಲ, ಅಂತ ಹಮೀದಾಬಾನುವಿಗೆ ಆಶ್ಚರ್ಯವೋ ಆಶ್ಚರ್ಯ.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ವೀಣಾ ಶಾಂತೇಶ್ವರ

ಡಾ. ವೀಣಾ ಶಾಂತೇಶ್ವರ(1945-): ಧಾರವಾಡದಲ್ಲಿ ಜನಿಸಿದರು. ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸ ಮಾಡಿಸಿದ ತಂದೆ ಬಲರಾಮಾಚಾರ್ಯ ಪ್ರಾಧ್ಯಾಪಕರಾಗಿದ್ದರೆ, ತಾಯಿ ಇಂದಿರಾ ಮಹಾರಾಷ್ಟ್ರದವರಾಗಿದ್ದು ಪ್ರಗತಿಪರ ಮನೋಭಾವದವರು. ವೀಣಾ ಅವರು ಶಾಲೆಯಲ್ಲಿದ್ದಾಗಲೇ ಕಥೆಗಳನ್ನು ಬರೆಯುತ್ತಿದ್ದು ‘ಕತೆಗಾರ’ ಪತ್ರಿಕೆಯಲ್ಲಿ ಪ್ರಕಟಗೊಳ್ಳತೊಡಗಿದವು. ಮರಾಠಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ತಾಯಿ ಇಂದಿರಾ ಅವರು ತಿಲಕ್‌, ಕರ್ವೆ, ರಾನಡೆ, ಗೋಖಲೆ ಮುಂತಾದವರ ಬರಹಗಳಿಂದ ಪ್ರಭಾವಿತರಾದವರು. ಮಹಿಳಾ ಶಿಕ್ಷಣ, ಮಹಿಳಾ ಸ್ವಾತಂತ್ರ್ಯ, ಮರಾಠಿ ಪ್ರಗತಿಪರ ಸಾಹಿತ್ಯ ಇವರ ಆಸಕ್ತ ವಿಷಯಗಳಾಗಿದ್ದು, ಮಗಳ ಮೇಲೂ ಪರಿಣಾಮ ಬೀರಿದವು. ಎಂ.ಎ.(ಇಂಗ್ಲಿಷ್ ಹಾಗೂ ಕನ್ನಡ) ಪಿಎಚ್.ಡಿ ಪದವೀಧರರಾದ ವೀಣಾ ಅವರ ಪ್ರಕಟಿತ ಕೃತಿಗಳು: ‘ಮುಳ್ಳುಗಳು’, ‘ಕೊನೆಯ ದಾರಿ’, ‘ಕವಲು’, ‘ಹಸಿವು’, ‘ಬಿಡುಗಡೆ’ (ಕಥಾಸಂಕಲನಗಳು); ‘ಗಂಡಸರು, ಶೋಷಣೆ, ಬಂಡಾಯ ಇತ್ಯಾದಿ’ (ಕಾದಂಬರಿ). ಇಂಗ್ಲಿಷಿನಲ್ಲಿಯೂ ಸಾಹಿತ್ಯ ರಚಿಸಿದ್ದು, ರೆಪ್ಯೂಟೇಶನ್, ಕ್ರಾಸ್ ರೋಡ್ಸ್, ಹರ್ ಫ್ರೀಡಮ್, ದಿ ಶಾಡೊ ಎಂಬ ಸಣ್ಣ ಕತೆಗಳನ್ನು ಮತ್ತು ಮೆನ್ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳ ಅನೇಕ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಆಧುನಿಕ ಕನ್ನಡ ಸಣ್ಣಕತೆಗಳು’ (ಮಹಿಳೆಯರ ಪ್ರಾತಿನಿಧಿಕ ಸಂಕಲನ) ಕೃತಿಯನ್ನು ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಸಂಪಾದಿಸಿ ಕೊಟ್ಟಿದ್ದಾರೆ. ಇಂಗ್ಲಿಷ್‌ನಲ್ಲಿಯೂ ಹಲವಾರು ಲೇಖನ, ಪದ್ಯಗಳನ್ನು ಬರೆದಿರುವ ವೀಣಾ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ನಿವೃತ್ತರಾಗಿ, ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿ. ಲಂಕೇಶ್ ಅವರ ಕತೆ | ಮುಟ್ಟಿಸಿಕೊಂಡವನು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಬಿ.ಸಿ. ದೇಸಾಯಿ ಅವರ ಕತೆ | ಸಾವು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...