ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಕೈಬೀಸಿತು ಹೆಣ- ಯಾವುದೋ ಒಂದು ಸಂವತ್ಸರದಲ್ಲಿ, ಅದಾವುದೋ ಒಂದು ಮಾಸದಲ್ಲಿ, ಅದೆಂಥದೋ ಒಂದು ದಿನ-ಹಗಲು ಜಾರಿ, ಇರುಳು ಮುಸುಕಿದ ತಂಪು ಹೊತ್ತಿನಲ್ಲಿ- ಆದವಾನಿಗೆ ಹದಿಮೂರು ಮೈಲುಗಳ ದೂರದಲ್ಲಿರುವ ಬದನೇಹಾಳು ಗ್ರಾಮದಲ್ಲಿ ಒಂದು ಮನೆಯಲ್ಲಿ, ಒಂದು ಹೆಣ- ಕೈಬೀಸಿತು…!
ಮತಾಪು ಹಚ್ಚಿದಂತೆ, ಅಗ್ನಿವೃಷ್ಟಿಗೈಯುತ್ತಿದೆಯೋ ಎಂಬಂತೆ ಉರಿಯುತ್ತಿರುವ ಬಿಸಿಲಿನಲ್ಲಿ, ಮಟಮಟ ಮಧ್ಯಾಹ್ನದಲ್ಲಿ- ಆ ಹಳ್ಳಿಗೆಲ್ಲಾ ಅತ್ಯಂತ ವಯಸ್ಕಳೂ, ಅತಿ ಐಶ್ವರ್ಯವಂತಳೂ, ಮೇಲಾಗಿ ಅನೇಕ ವರ್ಷಗಳಿಂದ ಒಬ್ಬಂಟಿಗಳಾಗಿಯೇ ಬಾಳಿದ, ಜೀರ್ಣವಿದೀರ್ಣಗೊಂಡ, ಶಲ್ಯಪ್ರಾಯಳಾದ ಆ ಮುದುಕಿ- ಅಷ್ಟು ದೋ…ಡ್ಡ ಕೊಂಪೆಯಲ್ಲಿ ಸದ್ದುಸಪ್ಪುಳಗಳಿಲ್ಲದೆ, ಏದುಸಿರು ಬಿಡುತ್ತ, ಕಣ್ಣಪಾಪೆಗಳನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ತಿರುಗಿಸುತ್ತ, ಹನ್ನೆರಡಂಕಣದ ಆ ದೊಡ್ಡ ಮನೆಯನ್ನು- ಮಹಾ ಬಾಧೆ ತುಂಬಿದ, ಇಡೀ ವ್ಯಥೆಯೆಲ್ಲಾ ಒಮ್ಮೆಗೇ ನೀರಾಗಿ ನಿಂತ ದೃಕ್ಕುಗಳಿಂದ ನಿರುಕಿಸಿ, ಪುನಃಪುನಃ ನಿರುಕಿಸಿ ನೋಡಲಾರದೆ, ನೋಡದಂತಿರಲಾರದೆ, ಕಣ್ಣುಬಿಟ್ಟುಕೊಂಡೇ, ಪ್ರಾಣಬಿಟ್ಟಿತು…!
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಪ್ರಾಣ ಬಿಟ್ಟಿತು ಆ ಮುದುಕಿ- ಎಂಬ ವಿಷಯ ಸುತ್ತಮುತ್ತಲಿನವರಿಗೆ ಯಾರಿಗೂ ತುಂಬ ಹೊತ್ತಿನ ತನಕ ತಿಳಿದುಬರಲೇ ಇಲ್ಲ. ಬಿಸಿಲು ಮುಪ್ಪಾಗಿ, ಹಗಲು ಜಾರಿ, ರಾತ್ರಿಯ ಕತ್ತಲು ಪೇರಿಕೊಳ್ಳುತ್ತಿದೆ ಎನ್ನಬೇಕಾದರೆ- ಹಳ್ಳಿಯ ಪ್ರತಿಯೊಂದು ಮನೆಯಲ್ಲಿ ಹರಳೆಣ್ಣೆಯ ದೀಪ ಮಿಣುಕು ಮಿಣುಕ್ ಎಂದು ಮಿನುಗುತ್ತಿರಬೇಕಾದರೆ-
ಹನ್ನೆರಡಂಕಣದ ಆ ದೊsssಡ್ಡ ಕೊಂಪೆಯಲ್ಲಿ ದೀಪದ ಒಂದು ಬೆಳಕಿನ ಹನಿಯಾದರೂ ಚಿಮ್ಮಲೇ ಇಲ್ಲ.
ಹೊರಗೆ ಮುಸುಕಿದ ಕತ್ತಲು- ಆ ಕೊಂಪೆಯಲ್ಲಿ ಕಗ್ಗತ್ತಲಾಗಿ ಶತಪಥ ತಿರುಗುತ್ತಿದ್ದು, ಕೊನೆಗೊಮ್ಮೆ ಘನೀಕೃತಗೊಂಡು, ಭಯಾನಕವಾಗಿ ಕಂಡುಬರತೊಡಗಿತು.
ಪಕ್ಕದ ಮನೆಯ ಮುದುಕಿಯೊಂದು ಊರ ಹೊರಗಿನ ಬಸವಣ್ಣ ಗುಡಿಯಿಂದ ಹಿಂತಿರುಗಿ ಬರುತ್ತಾ, ಹನ್ನೆರಡಂಕಣದ ಆ ಮನೆಯ ಅಂಗಳದ ಮಾರ್ಗವಾಗಿ- ಟೊಂಕಕ್ಕೆ ಸಾಧಾರಪೂರ್ವಕವಾಗಿ ಅಂಗೈಯನ್ನು ಒತ್ತಿಕೊಂಡು ಮೆಲ್ಲಗೆ ಹಾದುಹೋಗುತ್ತಾ- ಈ ನಾಲ್ಕಾರು ದಿನಗಳಿಂದ ಏನೋ ಜಾಡ್ಯ-ಜಾಪತ್ತೆಂದು ರಗಡಿಸುತ್ತ (ಈಗ ಮೃತ್ಯುವಶವಾಗಿ, ಶವವಾಗಿ) ಮಲಗಿರುವ ಮುದುಕಿಯ ಮನೆಯತ್ತ ಯಥಾವಿಧಿಯಾಗಿ, ಅಭ್ಯಾಸಕ್ಕನುಗುಣವಾಗಿ, ಕತ್ತುತಿರುಗಿಸಿ ನೋಡಿತು.
ಅಂಗಳದಲ್ಲಿ ಮುಸುಕಿದ್ದ ಕತ್ತಲು, ಆ ದೊಡ್ಡ ಮನೆಯಲ್ಲಿ ಕಾಡಿಗೆ ಮೆತ್ತಿಕೊಂಡಂತೆ-ಕಂಕಾಳದೊಳಗಿನ ಕಪ್ಪುಕತ್ತಲೆಯಾಗಿ ಕರ್‍ರಗೆ ನಿಂತುಕೊಂಡಿದೆ!
‘ಐಯ್ ಇದೇನಿದೂ? ಈ ಶರಭಮ್ಮನಿಗೆ ಒಂದೀಟು ದೀಪಾನಾದ್ರೂ ಅಂಟಿಸಿಕೊಂಬೋಕೆ ಕೈಲಾಗದಂಥಾದ್ದು ಏನು ಬಡುಕೊಂಡೈತೆ ಅಂತೀನಿ…?’
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
-ಎಂದು ಗೊಣಗಿತು ಈ ಮುದುಕಿ- ಹೆಣವಾಗಿ ಮಲಗಿರುವ ಆ ಮುದುಕಿಯ ಮನೆಯಂಗಣದಲ್ಲಿ ನಿಂತುಕೊಂಡು!
ಹಾಗೆ ಗೊಣಗಿಕೊಂಡಿದ್ದೇ ತಡ,
‘ನಾನಾದ್ರೂ ಒಂದೀಟು ಹಚ್ಚಿ ಬರ್ತಿನಮ್ಮಾ’
-ಎಂದು ಸ್ವಗತ ಹೇಳಿಕೊಂಡು, ಕಾಲೆಳೆದುಕೊಂಡು ಹೋಗಿ, ತಲಬಾಗಿಲು ದಾಟಿ, ಎಡಗಡೆಯಲ್ಲಿರುವ ನಡುವಿನ ಮಟ್ಟದಷ್ಟು ಎತ್ತರವಾಗಿರುವ ಕಟ್ಟೆಯ ಮೇಲೆ ಎಡಗೈಯನ್ನು ಆನಿಸಿ-
‘ಶರಭಮ್ಮಾ… ಏಯ್, ಶರಭಮ್ಮಾ…’
-ಎಂದು ತನ್ನೊಳಗಿನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು, ಗಟ್ಟಿಯಾಗಿ ಒರಲಿತು- ಈ ಮುದುಕಿ.
ಪ್ರತಿಧ್ವನಿಯಾಗಲೀ, ಪ್ರತಿಸ್ಪಂದನದ ಕುರುಹಾಗಲೀ ಬಾರದೇ ಇರುವುದನ್ನು ಕಂಡು, ಏನನ್ನೋ ಮನಗಂಡು, ಮತ್ತೇನನ್ನೋ ಗೊಣಗಿಕೊಂಡು, ಈ ಮುದುಕಿ ಮತ್ತಿನ್ನಷ್ಟು ಒಳಹೊಕ್ಕಿತು- ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯಿಕ್ಕುತ್ತ, ಇರುವೆಯ ಹಾಗೆ!
*
ಮಠದ ಪೊಂಪಯ್ಯ, ಉಂಡೇಕಾರ್ ತಿಪ್ಪಣ್ಣ, ‘ಊರುಮಾಡೋಗೌಡ’- ಮಲ್ಲಗೌಡ ಇನ್ನಿತರ ನಾಲ್ಕಾರು ಜನ ಮುದಿಜೀವಿಗಳೆಲ್ಲ ಕಲೆತು, ಆ ದೊಡ್ಡ ಮನೆಯ ದೊಡ್ಡ ಕಟ್ಟೆಯ ಮೇಲೆ ಚರ್ಚೆಗೆ ತೊಡಗಿದರು-
‘ಏನ್ ಮಾಡೋದೀಗ?’
‘ಏನ್ ಮಾಡೋದಂದ್ರೆ? ಇನ್ನೇನೈತೆ ಮಾಡೋದು? ಮಣ್ಣು ಮಾಡೋದು! ಅಷ್ಟೇ!’
‘ಅಯ್, ಸುಂಸುಂಕೆ ಮಣ್ಣು ಮಾಡಿಬಿಟ್ರೆ ಆಯ್ತಾ?’
‘ಇನ್ನೇನ್ ಮಾಡ್ಬೇಕಂತೆ? ಕೇಳ್ರಲೇ ಅವನ್ನ!’
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
‘ಈ ಮುದ್ಕಿಗೊಬ್ಬ ಮೊಮ್ಮಗಳು ಐದಾಳೆಂಬೋದೇ ಮರ್‍ತುಹೋದಂಗೈತಲ್ಲಪ್ಪೋ ಗೌಡನಿಗೆ!’
‘ಹ್ಯಾ… ಇದ್ರೆ? ಅದೆಲ್ಲೋ ದೂರದ ಕೊಂಪ್ಯಾಗ ಬಿದ್ದಾಳಲ್ಲ! ಇನ್ನು ಆಕೆ ಬರೋಷ್ಟೊತ್ತಿಗೆ ಈ ಹೆಣ ಕೊಳೆತು ನಾರಿಬಿಡುತೈತೆ!’
‘ಇಷ್ಟೆಲ್ಲಾ ರಂಪಾಟ ಯಾಕಪ್ಪಾ? ಮೊದ್ಲು ಮಾಡೋ ಕಾರ್‍ಯೇವುಗಳೇನೋ ನಾಕುಮಂದಿ ದೊಡ್ಡರು ತೇಲಿಸಿಬಿಡಿರಿ… ಸುಮ್‌ನೆ ಎಷ್ಟೊತ್ತಂತ ಹಿಂಗೆ ಮೊಣಕಾಲು ಕಡ್ಕೊಂಡು ಕುಂತ್ಕಳ್ಳೋದು!?’
ಸರಿ, ತೇಲಿಸಿದರು-
ಅಷ್ಟು ಕಾಲ ಬದುಕಿ ಬಾಳಿದ (ಊರ ಮುದುಕರ ಲೆಕ್ಕಾಚಾರದ ಪ್ರಕಾರ) ನೂರಾಮೂರು ವರುಷ ಉಸಿರಾಡಿದ, ಈ ದಿನ ಹಗಲು ಹೊತ್ತಿನಲ್ಲಿ ಅದಾವಾಗಲೋ ಏನೋ ಉಸಿರಾಡಿಸುವುದನ್ನು ನಿಲ್ಲಿಸಿ, ಕಣ್ಣು ಬಿಟ್ಟುಕೊಂಡೇ ಹೆಣವಾಗಿ ಬಿದ್ದಿರುವ ಮುದುಕಿಯ ವಾರಸುದಾರಳಾಗಿರುವ ಒಬ್ಬಳೇ ಒಬ್ಬಳಾದ ಮೊಮ್ಮಗಳಿರುವ ‘ಶಾನೆ’ ದೂರದ ಊರಿಗೆ ‘ತಂತಿ’ ಕೊಟ್ಟುಬರಲೆಂದು, ಬದನೇಹಾಳು ಹಳ್ಳಿಗೆ ನಾಲ್ಕುಮೈಲಿಗಳಷ್ಟು ದೂರದಲ್ಲಿರುವ ಕುಪ್ಪಗಲ್ಲು ರೈಲ್ವೆ ನಿಲ್ದಾಣಕ್ಕೆ ಚಿಟಿಕೆ ಹಾಕುವುದರೊಳಗಾಗಿಯೇ ಓಡಿಹೋಗಿ ‘ತಂತಿ’ ಕೊಟ್ಟು ಬಂದರು, ಕೆಲವರು.
ತಂತಿಕೊಟ್ಟು ಬರಲೆಂದು ಒಂದಿಬ್ಬರು ಅತ್ತ ಓಡುತ್ತಲೇ ಇತ್ತ-
‘ಇನ್ನೇನೈತೆ? ಹೆಣಕ್ಕೆ ಸಿಂಗಾರ ಮಾಡಿ, ಗುಟ್ಟೆಗೆ ಬಡೀರಿ ಮತ್ತೆ?’
-ಎಂದೊಬ್ಬರು ಸಲಹೆ ಇತ್ತರು. ಅದಕ್ಕನುಗುಣವಾಗಿ-
ಹೊರಸಿನ ಮೇಲೆ, ಹರಿದ ಕೌದಿಯ ಮೇಲೆ, ಒಂದು ಮೂಲೆಯಲ್ಲಿ- ಕರೆಂಟು ತಾಕಿ ಕೆಳಕ್ಕೆ ಬಿದ್ದಕಾಗೆಯಂತೆ, ಮುಷ್ಟಿಗಾತ್ರ ಮುದುಡಿಕೊಂಡು ನಿಶ್ಚಲವಾಗಿ ಬಿದ್ದಿರುವ ಆ ಮುದುಕಿಯ ಹೆಣವನ್ನು ಮನೆಯಂಗಣಕ್ಕೆ ಹೊತ್ತು ತಂದು ಹೊತ್ತು ತರುವಷ್ಟರಲ್ಲಿಯೇ ಯಾರೋ ಅಂಟಿಸಿಕೊಂಡು ತಂದ, ಬಸವಣ್ಣಗುಡಿಯ ಭಜನಮಂಡಳಿಯ ಪೆಟ್ರೋಮ್ಯಾಕ್ಸ್ ಹೊರಚೆಲ್ಲುತ್ತಿರುವ ಉಜ್ವಲ ಪ್ರಕಾಶದಲ್ಲಿ-
ನಾಲ್ಕಾರು ಜನ ಮುತ್ತೈದೆಯರು ಸೇರಿ ಹೆಣಕ್ಕೆ ನೀರು ಹುಯ್ದು, ಮಾಡಬೇಕಾದ ‘ಕಾರ್‍ಯೇವು’ಗಳನ್ನೆಲ್ಲ ಮಾಡಿ ಮುಗಿಸಿ, ಹೆಣವನ್ನು ಸಿಂಗರಿಸಿ-
ಹಾಗೆ ಸಿಂಗರಿಸಬೇಕಾದರೆ-
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
ಆ ದೊಡ್ಡ ಮನೆಯ ಮೂಲೆಯಲ್ಲಿನ, ಗುಹೆಯಂತೆ ಇಕ್ಕಟ್ಟಾಗಿರುವ, ಕತ್ತಲೆಯೇ ಕತ್ತಲು ತುಂಬಿರುವ ದೇವಮನೆಯಲ್ಲಿನ ಮೂಲೆಯೊಂದರಲ್ಲಿದ್ದ, ಗುನ್ನಾನೆಯಂತಿದ್ದ ಜಾಯಿಕಾಯಿ ಪೆಟ್ಟಿಗೆಗೆ ಹಾಕಿದ್ದ ತೆಂಗಿನಕಾಯಿ ಗಾತ್ರದ ಹಿತ್ತಾಳೆ ಬೀಗವನ್ನು (ಗ್ರಾಮದ ದೊಡ್ಡ ಮನುಷ್ಯರ ಸಮಕ್ಷಮದಲ್ಲಿ, ಸಾಕ್ಷಿಯಲ್ಲಿ) ಗಡಾರದ ಸಹಾಯದಿಂದ ಒಡೆದು, ಮುರಿದು, ಪೆಟ್ಟಿಗೆಯನ್ನು ತೆರೆದು, ತಳದಲ್ಲಿ ಅಡಗಿಸಿಟ್ಟ ಪಟ್ಟೆ ಪೀತಾಂಬರ ಸೀರೆಯನ್ನೂ, ಇದ್ದಷ್ಟು ಆಭರಣಗಳನ್ನೆಲ್ಲಾ (ಹೊರತೆಗೆದ ಆಭರಣಗಳನ್ನೆಲ್ಲಾ- ಹೆಸರು ಸಹಿತ ಗ್ರಾಮದ ದೊಡ್ಡ ಮನುಷ್ಯರು ಯಾದಿ ತಯಾರಿಸಿದರು) ಹೊರತೆಗೆದು-ಹೆಣಕ್ಕಿಟ್ಟು, ಸಿಂಗರಿಸಿ-
ಮನೆಯ ಹೊರಗಿನ ಜಗುಲಿಯ ಮೇಲೆ-
‘ಅದ್ಯಾಕ್ರಪ್ಪಾ? ಅಲ್ಲಿ ಬ್ಯಾಡ. ಹೊತ್ತುಟ್ಟೋವರೀಗಂದ್ರೆ ಚಳಿಯೇ ಚಳಿ ಆಗ್ತೈತೆ. ಮೊಮ್ಮಗಳು ಬರೋದು ನಾಳೆ ಮೂರಾ ಚಂಜೆಯಾಗ್ತೈತೋ ಏನೋ! ಹೊರಗೆ ಕಟ್ಟೆ ಮ್ಯಾಲೆ ಬ್ಯಾಡೇಬ್ಯಾಡ. ಒಳಗೇ ಪಡಸಾಲ್ಯಾಗ ಗುಟ್ಟೆಗೆ ಬಡ್ರೆಪೋ!’
-ಎಂದೊಬ್ಬ ದೊಡ್ಡ ಮನುಷ್ಯ ಮಾಡಿದ ಆಗ್ರಹಪೂರ್ಣ ಸಲಹೆಯ ಮೇರೆಗೆ-
ಆ ಮುದುಕಿಯ ಹೆಣವನ್ನು ಹನ್ನೆರಡಂಕಣದ ಮಧ್ಯೆ, ಎರಡು ಸ್ತಂಭಗಳ ನಡುಮಧ್ಯೆ, ಗೋಡೆಗೆ ಆನಿಸಿ ಕುಳ್ಳಿರಿಸಿ, ‘ಗುಟ್ಟೆ’ಗೆ ಬಡಿದರು!
ಹೆಣವನ್ನು,
ಗುಟ್ಟೆಗೆ ಬಡಿದ ಹೆಣವನ್ನು,
ಬಂಗಾರದ ಆಭರಣಗಳಿಂದ ಸಿಂಗರಿಸಲಾದ ಹೆಣವನ್ನು,
-ಒಂದೇ ಒಂದು ಗಂಟೆಯೊಳಗಾಗಿಯೇ ಇಡೀ ಬದನೇಹಾಳು ಹಳ್ಳಿಯೆಲ್ಲಾ ಬಂದು ನೋಡಿಕೊಂಡು ಹೋಯಿತಾಗಲೀ, ಆ ಹೆಣ ಅನಂತರ ಕೈಬೀಸಿದ ಅದ್ಭುತವನ್ನು ಯಾರೂ ನೋಡಲೇ ಇಲ್ಲ…!!
*
‘ಇನ್ನೇನ್ರಪ್ಪಾ? ಒಳಗೆ ಗುಟ್ಟೆಗೆ ಬಡೀತಲ್ಲಾ. ಇನ್ನು ರಾತ್ರೆಲ್ಲಾ ಹೆಣಾನ ಕಾಯೋರು ಯಾರಪ್ಪಾ?’
‘ಐ, ಅವ್‌ದಲ್ಲಪೋ!’
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
‘ಹ್ಯಾ… ಶನ್ಯೇಸ್‌ಸನ್‌ಹಾಟಗಾ!… ಕದಲ್ರೋ ಕದಲ್ರೀ… ನೀವೆಲ್ಲಾ ಬೆಚ್ಚಗೆ ಹೆಂಡ್ರಜತೇಲಿ ಮಕ್ಕಂಬೋದ್ರಾಗೆ ಶೂರ್‍ರು! ನಾನು ಕಾಯ್ತಿನಿ ನಡ್ರಿ’
-ಎಂದು ನುಡಿದಳು ಈ ಮುದುಕಿ- ಅವರೆಲ್ಲರ ಡೋಲಾಯಮಾನವಾದ ಮನಸ್ಸುಗಳ ಮಾತುಗಳನ್ನು ಕೇಳಿದ ಮೇಲೆ. ಎಲ್ಲರೂ ‘ಒಳ್ಳೇದಂಗೇ!’- ಎಂದು ಹೇಳಿ ಯಾರ ಮನೆಗೆ ಅವರು ಹೊರಟುಹೋದರು.
ಊರು ಮಾಡುವ ಗೌಡ-ಮಲ್ಲಗೌಡನನ್ನು ಮನೆಗೆ ಬಿಟ್ಟುಬರಲೆಂದು, ತಳವಾರ ಆ ಪೆಟ್ರೋಮ್ಯಾಕ್ಸ್ ತೆಗೆದುಕೊಂಡು ಹಿಂಬಾಲಿಸಿದ-ಪುನಃ ವಾಪಸು ತರುತ್ತೇನೆಂದು ಹೇಳಿ. ಆದರೆ ಅದು ದಾರಿಯ ಮಧ್ಯದಲ್ಲಿಯೇ ಬುಗ್ಗ್ ಎಂದು… ಕೊನೆಗೆ ಬುಸ್ಸ್…ಸ್ಸ್… ಎಂದು ನಂದಿಹೋಯಿತು.
*
ಶವದ ಮುಂದೆ ಎರಡು ದೊಡ್ಡ ನೀಲಾಂಜನಗಳನ್ನು ಹೊತ್ತಿಸಿಡಲಾಗಿದೆ.
ಒಬ್ಬೊಬ್ಬರಾಗಿ ಎಲ್ಲರೂ ಹೊರಟುಹೋದರು.
ಶವದ ಬಳಿ-
ಈ ಮುದಿ ಜೀವಿಯೊಬ್ಬಳೇ, ಕಣ್ಣುಬಿಟ್ಟುಕೊಂಡು ನೋಡುತ್ತಾ ಕುಳಿತುಕೊಂಡಳು.
ಆ ಪಕ್ಕ, ಈ ಪಕ್ಕ ಇರಿಸಿದ ನೀಲಾಂಜನಗಳ ನಾಲ್ಕೂ ಕಡೆಗಳಲ್ಲಿ, ಚೇಳಿನಕೊಂಡಿಯ ಹಾಗೆ ದೀಪದ ಶಿಖೆಗಳು ನಾಟ್ಯಮಾಡುತ್ತಿವೆ.
ಆ ನೀಲಾಂಜನಗಳ ಮಧ್ಯದಲ್ಲಿರುವ ಶವಕ್ಕೆದುರಾಗಿ-ಮೆದುಳಿನಲ್ಲಿ ಎಲ್ಲೋ ಮನಸ್ಸಿನ ಆಳದಲ್ಲಿ ಕೇಳಿಸಿಯೂ ಕೇಳಿಸದ ಯಮನ ಪದಾಘಾತದ ಶಬ್ದವನ್ನೇ ಕೇಳುತ್ತಾ ಕುಳಿತುಕೊಂಡಿದ್ದಾಳೆ-
-ಈ ಮುದುಕಿ, ತನ್ನೆದುರಿನಲ್ಲಿರುವ ಮುದಿ ಹೆಣವನ್ನು ಮಿಕಿಮಿಕಿ ದಿಟ್ಟಿಸುತ್ತ.
ಶವದ ವದನಮಂಡಲವನ್ನೇ ರೆಪ್ಪೆ ಬಡಿಯದಂತೆ ನೋಡುತ್ತಿದ್ದರೆ-
ಈಗ ಹೆಣವಾಗಿ ಕುಳಿತಿರುವ ಆ ಮುದುಕಿ ಜೀವಿಸಿದ್ದ ಕಾಲದುದ್ದದಲ್ಲಿ ಅಲ್ಲಲ್ಲಿ ಮೈಲುಗಲ್ಲುಗಳಂತಿರುವ ಕೆಲವು ಘಟನೆಗಳು -ಮುಂದೊಂದು ದಿನ ಯಾವತ್ತಾದರೂ ಶವವಾಗಿಯೇ ತೀರುವ ಈ ಮುದುಕಿಯ ಮನಸ್ಸಿನಲ್ಲಿ ತಲೆ ಎತ್ತಲಾರಂಭಿಸಿದುವು…
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
‘ಶರಭಮ್ಮಾ… ಹೋಗ್ಬಿಟ್ಟೆಯಲ್ಲೇ… ಔದೇಳಮ್ಮ…. ಚಟ್ ಅಂತ ಕಣ್ಣು ಮುಚ್ಚೋರೇ ಪುಣ್ಯಾತ್ಗಿತ್ತೇರು… ನನ್ನಂಥಾ ಮುದಿಮೂಳಗಳಿಗೇ ಬರಂಗಿಲ್ಲ ಬಿರೀನ ಸಾವು!’ ಎಂದು ಅಂದುಕೊಂಡಳು ಈ ವೃದ್ಧೆ.
* ಶರಭಮ್ಮ-
-ಇದು ಆ ಹೆಣದ (ಉಸಿರಾಡುತ್ತಿದ್ದಾಗಿನ) ಹೆಸರು!
ಶರಭಮ್ಮ ಬದನೇಹಾಳು ಗ್ರಾಮಕ್ಕೆ ತನ್ನ ಹತ್ತನೇ ವಯಸ್ಸಿನಲ್ಲಿ ಪ್ರವೇಶಿಸಿ
-ಈ ಹನ್ನೆರಡಂಕಣದ ಮನೆಯನ್ನು ಸೊಸೆಯಾಗಿ ಸೇರಿಕೊಂಡಿದ್ದಳು. ಮನೆಯಲ್ಲಿ ಆಗ ಇದ್ದಿದ್ದು ಅವಳ ಗಂಡನೊಬ್ಬನಷ್ಟೆ! ಏಕೆಂದರೆ ಅವಳ ಗಂಡನ ತಾಯಿ-ತಂದೆಯರು ಆ ಹೊತ್ತಿಗಾಗಲೇ ಮೊದಲ ಪ್ಲೇಗ್ ಮಾರಿಗೆ ಬಲಿಯಾಗಿಬಿಟ್ಟಿದ್ದರಲ್ಲ!
ಶರಭಮ್ಮನ ಕಾಲು ಗುಣವಂತೆ! ವರ್ಷ ವರ್ಷಕ್ಕೆ ಮನೆ ವೃದ್ಧಿಹೊಂದಿತೆಂದು ಅವಳ ಗಂಡ ಮೀಸೆ ಬಾಚುತ್ತ-ತೀಡುತ್ತ ಹೇಳಿಕೊಳ್ಳುತ್ತಿದ್ದ.
‘ಆ ಭಡವಾ ಸಾಮಾನ್ಯದೋನಾ! ಕಾಲಾಂತಕನಮ್ಮೋ ಕಾಲಾಂತಕ! ಉಗುಳಿಗೆ ಉಗುಳು ಗಂಟ್ಹಾಕಿ, ಕೈಗೆ ಸಿಕ್ಕೋರ್‍ನೆಲ್ಲಾ ಪಾತಾಳಕ್ಕದ್ದಿ… ಮಾಡ್ಬಾರ್‍ದ ಹೊಲೇಗೆಲ್ಸಾನೆಲ್ಲಾ ಮಾಡಿ, ಕೊನೀಗೆ ಮುಂಡಾಮೋಚಿಕೊಂಡೋದ.
-ಶನ್ಶೇಸ್‌ನನ್ ಹಾಟಗಳ್ಲ!’ ಎಂದು ಮುಖ ಸಿಂಡರಿಸಿಕೊಂಡು ಗೊಣಗಿಕೊಂಡಳು ಈ ಮುದುಕಿ.
ಹಾಗೆ ಗೊಣಗಿಕೊಳ್ಳುವುದಕ್ಕೆ ಕಾರಣವಿಲ್ಲದೇ ಇಲ್ಲ!
ಈ ಮುದುಕಿಯ ಗಂಡ ಜೀವಿಸಿದ್ದ ಕಾಲವೆಲ್ಲಾ ಶರಭಮ್ಮನ ಗಂಡ ತನ್ನ ಸಾಲಿಗನನ್ನಾಗಿ ಮಾಡಿಕೊಂಡು, ಇನ್ನೇನು ನಾಳೆ ಸಾಯುತ್ತಾನೆ ಎನ್ನುವಾಗ- ಮನೆ, ಮಠ, ಭೂಮಿ, ಕಾಣಿಗಳನ್ನೆಲ್ಲಾ ತನ್ನ ಹೆಸರಿಗೆ ಬರೆಯಿಸಿಕೊಂಡನಲ್ಲ!
ಶರಭಮ್ಮನವರ ಮನೆಯ ಮೇಲೆ ಮಹಡಿ ನಿಂತಿತು; ಹಾಗೆ ನಿಂತಿದ್ದು ಅವರ, ಅಂದರೆ ಗಂಡ-ಹೆಂಡತಿಯರಿಬ್ಬರ ಮನಸ್ಸಿನ ತಿಪ್ಪೆಗಳಿಗಿಟ್ಟ ಕಳಸಪ್ರಾಯವಾಗಿತ್ತು! ಗಂಡ-ಹೆಂಡತಿ; ಹೆಂಡತಿ-ಗಂಡ ಒಬ್ಬರಿಗೊಬ್ಬರು ಸೇರಿಗೆ ಸವಾಸೇರು!
** ಒಬ್ಬಳೇ ಒಬ್ಬಳು ಮಗಳು ಹುಟ್ಟಿದಳು-(ಆಮೇಲೆ ಮಕ್ಕಳೇ ಆಗಲಿಲ್ಲ) ಬೆಳೆದಳು- ಮೈನರೆಯುವುದರೊಳಗಾಗಿಯೇ ಮದುವೆಯೂ ಆಯಿತು. ಅವಳಿಗೊಬ್ಬ ಹುಡುಗಿಯೂ ಹುಟ್ಟಿತು- ಹುಡುಗಿಯನ್ನು ಹೆತ್ತು, ಸೂತಿಕಾಗೃಹದಲ್ಲಿಯೇ ಕಣ್ಣುಮುಚ್ಚಿಕೊಂಡಳು ಆ ಬಾಣಂತಿ. ಮೊರದೊಳಗಿನ ಹೆಣ್ಣುಮಗು, ಶರಭಮ್ಮನ ಮೊಮ್ಮಗು, ಶರಭಮ್ಮನ ಕೈಗಳಿಗೆ ಬಂತು ತಬ್ಬಲಿಯಾಗಿ. ಬಂದ ದಿನದಿಂದಲೇ ಗೊಲ್ಲರವಳ ಮೊಲೆಹಾಲು ಕುಡಿಯುತ್ತಾ ಬೆಳೆಯಲಾರಂಭಿಸಿ, ಮೂರು ವರುಷದ ಕೂಸಾಯಿತು. ಆ ಸಮಯದಲ್ಲಿ, ಒಂದು ದಿನ-ಆ ಹುಡುಗಿಯ ತಾತ ಶರಭಮ್ಮನ ಗಂಡ, ಹೊಲದಿಂದ ಬಂದವನೇ, ‘ನೀರು… ನೀರು…’ ಎಂದು ಹೇಳು ಹೇಳುತ್ತಿರುವಂತೆಯೇ ಪ್ರಾಣಬಿಟ್ಟನಂತೆ. ಅಂದಿನಿಂದ ಈ ಶರಭಮ್ಮನ ಕೋಪ-ತಾಪ-ಪಾಪ-
‘ಪಾಪ… ಏನೂ ಅರಿಯದ ಆ ಮೂರು ವರ್ಷದ ಬತ್ತೀನ- ಈ ಶನಿ ಬಂದಿದ್ದು ಬಂದಿದ್ದೇ ನಾನು ರಣಮುಂಡೆಯಾಗ್ಬಿಟ್ಟೆ- ಅಂತ ‘ಸರಬಸು’ ಮಾಡ್ತಿದ್ಲು ಶರಭಕ್ಕ. ಅಯ್… ಎಲ್ಲಾದ್ರೂ ಐತಾ ಹಂಗ…! ಏನ್ ಪಾಪ ಮಾಡಿದ್ನೋ ಏನೋ, ಆ ಶನ್ಶೇಸೋನು ಗೊಟಕ್ ಅಂದ್ರೆ- ಅದು ಆ ಅರೀದ ಕಂದಮ್ಮಂದಾ!? ಪಾಪ! ಆ ಹುಡುಗೀನ ಹಂಗ್ ಹರಿದು ತಿನ್ನೋದಾ…?’
-ಎಂದು ಮೆಲುಕು ಹಾಕಿಕೊಂಡಳು- ಆ ಘಟನೆಗಳನ್ನೆಲ್ಲ, ಈ ಮುದುಕಿ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
*** ಶರಭಮ್ಮ ಮೊಮ್ಮಗಳಿಗೆ ಹತ್ತರಲ್ಲಿ ಬೀಳುತ್ತಿದೆ ಎನ್ನುವಾಗಲೇ (ಬೇಕ್ಬೇಕಂತ, ಪಾಪ, ಲೋಕಾ ಕಾಣದ ಆ ಹಸುಗಂದಮ್ಮನ್ನ ಲಗ್ನ ಮಾಡಿಬಿಟ್ಲು, ಎಲ್ಡು ಕೈಯಿಂದ ಸುರುಕೊಳ್ಳೋನಂತ!) ದೂರದ ಪ್ರಾಂತ್ಯಕ್ಕೆ ಮದುವೆ ಮಾಡಿಕೊಟ್ಟುಬಿಟ್ಟಳಲ್ಲ. ಅಂದಿನಿಂದ ಇಂದಿನವರೆಗೆ ತನಗೆ ತಾನೇ ರಾಣಿಯಂತೆ ದರ್ಪವಾಗಿ ಜೀವನ ನಡೆಸಿಕೊಂಡು ಬಂದಳು… ‘ಎಂಜಲು ಕೈಲಿ ಕಾಕೀನ ಹೊಡಿಲಿಲ್ಲ. ನಾಕು ಮಂದಿಗಿಟ್ಟು ಸಂಭ್ರಮ ಪಡ್ಲಿಲ್ಲ. ತಾನನ್ನಾ ತಿಂದಂಗಲ್ಲ… ತನ್ನೋರು ನನ್ನೋರು ಅಂಬೋರಿಗನ್ನಾ ಇಟ್ಟಂಗಲ್ಲ… ಸುಮ್ನೆ… ರೊಕ್ಕ, ರೊಕ್ಕಾಂತ ಗಂಟು ಕಟ್ಟಿಕೊಂಡಿತು, ಮೂಳ!… ಈಗೇನನ್ನಾ ನಿನ್ನಿಂದೆ ಬರ್‍ತೆತೇನು, ಮೂಳಾ! ನಾಡ್ ಮೂಳಾ!’- ಈ ಮುದುಕಿ ತಡವರಿಸುತ್ತಾ ಎದ್ದು, ಕಾಲೆಳೆದುಕೊಳ್ಳುತ್ತಾ ಹೋಗಿ, ಬಾಗಿಲುಗಳನ್ನು ಶಕ್ತಿಹಾಕಿ ಕದಲಾಡಿಸಿ, ಚಿಲಕ ತೆಗೆದು ಹೊರಗೊಂದು ಒಳಗೊಂದು ಕಾಲಿಟ್ಟು, ಬಲಗೈಯ ತೋರುಬೆರಳು-ಮಧ್ಯದ ಬೆರಳುಗಳೆರಡನ್ನೆ ತುಟಿಗಳ ಮೇಲಿರಿಸಿಕೊಂಡು, ಆ ಎರಡು ಬೆರಳುಗಳ ಮಧ್ಯದಿಂದ, ತಾಂಬೂಲದ ಕೆಂಪು ರಸವನ್ನು ಪಿಚಿಕಾರಿಯಂತೆ, ಪಿಚಕ್ ಎಂದು ಉಗುಳಿ, ಬಾಗಿಲು ಹಾಕಿ, ಮತ್ತೆ ತಡವರಿಸುತ್ತ ಹೋಗಿ ಯಥಾಸ್ಥಾನದಲ್ಲಿ ಕುಳಿತುಕೊಂಡಳು-ಮತ್ತೆ ಶವವನ್ನೇ ನೋಡುತ್ತಾ ಇದ್ದುಬಿಟ್ಟಳು.
*
ಅಲ್ಲಿರುವ ನೀಲಾಂಜನಗಳಲ್ಲಿನ ಬತ್ತಿಗಳ ನೆತ್ತಿಯ ಮೇಲಿರುವ ದೀಪಶಿಖೆಗಳು- ಬೀಸುತ್ತಿರುವ ಗಾಳಿಗೆ ನಾಟ್ಯ ಮಾಡುವುದಕ್ಕೆ ತೊಡಗಿದುವು.
ನೆರಳು ಕದಲಾಡಿತು…
ಹೆಣದ ನೆರಳು ಗೋಡೆಯ ಮೇಲೆ ಕುಣಿದಾಡಿತು…
ಹೆಣ ಬಿಟ್ಟಕಣ್ಣುಗಳನ್ನು ಬಿಟ್ಟುಕೊಂಡೇ ದಿಟ್ಟಿಸುತ್ತಿದೆ…
(ಹೊರಕೇರಿಯಲ್ಲಿ ಎರಡು ಮೂರು ನಾಯಿಗಳು ಅದೇತಕ್ಕೋ ಏನೋ ಇದ್ದಕ್ಕಿದ್ದಂತೆ ಬೊಗಳಿದವು) ಹೊರಗೆ, ಗಾಳಿ, ತನ್ನ ಶೀತಲಹಸ್ತದಿಂದ ಹಳ್ಳಿಯನ್ನೆಲ್ಲಾ ಸವರಾಡುತ್ತ, ಗವಾಕ್ಷಿಯಿಂದ ತೂರಿಬಂದಿತು.
ಈ ಮುದುಕಿಯ ಶರೀರ ಜುಮ್ಮೆಂದಿತು. ಸೆರಗು ಎಳೆದುಕೊಂಡು ಬೆಚ್ಚಗಾಗುವಂತೆ ಮೈತುಂಬ ಹೊದ್ದುಕೊಂಡಳು.
(ಅದೇ ಕೇರಿಯಲ್ಲಿ-ಶರಭಮ್ಮನ ಕೇರಿಯಲ್ಲಿ-ಕೊನೆಯ ಮನೆಯಂಗಣದ ಕರಿನಾಯಿ ಏಕೋ ಕಿವಿತೂತು ಬೀಳುವ ಹಾಗೆ ಒಂದು ಸಲ ಬೊಗಳಿ ದೀರ್ಘವಾಗಿಯೇ ಬೊಗಳಿ ಮೌನವಾಗಿಬಿಟ್ಟಿತು. ಹಿಂದೆಯೇ ಪುನಃ ನಿಶ್ಯಬ್ದ ತಾನೇತಾನಾಗಿ ಆವರಿಸಿಕೊಂಡಿತು)
ಗಾಳಿಯ ಅಲೆಗಳು ಜೋಗುಳ ಹಾಡಿದುವು. ಆ ಗಾಳಿಯ ಜೋಗುಳ ಗವಾಕ್ಷಿಯ ಮಾರ್ಗದ ಮೂಲಕ ಒಳಕ್ಕೆ ಬಂದು, ಜಂತೆಜಂತೆಗಳಿಗೆ ತಾಕಿ, ತೊಲೆ ತೊಲೆಗಳಿಗೆ ತಿಕ್ಕಾಡಿ, ತನ್ನಲ್ಲಿನ ಮಧುರತೆಯನ್ನು ದ್ವಿಗುಣೀಕೃತಗೊಳಿಸಿಕೊಂಡಿತು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಕಣ್ಣರೆಪ್ಪೆಗಳು ಭಾರವೇರಿ… ಸೋತು ಬಳಲಿದ ನರನರಗಳಲ್ಲಿ ಸೆಳೆತ, ಹರಿತ-ನಿದ್ರೆ ಅಣೆಕಟ್ಟು ಮುರಿದು ಪ್ರವಾಹದಂತೆ ದಾಂಗುಡಿಯಿಟ್ಟಿತು. ಚರ್ಮದೊಳಗೆ ಬಿಸಿಯ ಉಂಡೆಯೊಂದು ಉರುಳಾಡಿದಂತೆ ಆಭಾಸ.
ಎಲ್ಲಿಂದಲೋ, ತುಂಬ ದೂರದಿಂದ ಗಾಳಿಯಲ್ಲಿ, ದಾರಿಯರಿಯದೆ ನುಗ್ಗಿ ಬಂದಂತೆ-ಧಪ್… ಧಪ್… ಎಂಬ ಸದ್ದು ತೇಲಿಬಂದು ಈ ಮುದುಕಿಯ ಕಿವಿಗಳಲ್ಲಿ ತೂರಿ, ನಿದ್ರೆಯ ಮಂಪರನ್ನು ಕತ್ತರಿಸಿದಂತಾಗಿ-
‘ಅಯ್, ಯಾಪಾಟಿ ಹೊತ್ತಾಯ್ತೋ, ಏನೋ!… ಯಾರೋ ಏನೋ ಕುಟುತ್ತಿದ್ದಂಗೈದಾರಲ್ಲಾ…’
-ಹಲ್ಲಿಲ್ಲದ ಬಾಯನ್ನು ಚಪ್ಪರಿಸಿಕೊಂಡು, ನಿದ್ರೆಯ ಜನ್ಮಸ್ಥಾನವೇನೋ ಎಂಬಂತಿರುವ ಎರಡೂ ಕಣ್ಣುಗಳ ಗುಳಿಗಳನ್ನೊಮ್ಮೆ ಅಂಗೈಗಳಿಂದ ಒತ್ತಿ, ತಿಕ್ಕಿ, ಹೊಸಕಿಕೊಂಡು, ಆಕಳಿಸಿ, ಆಕಳಿಕೆ ಮುಗಿಯುತ್ತಲೇ ಕಣ್ಣಕೊನೆಗಳಲ್ಲಿ ನಿಂತುಕೊಂಡ ನೀರನ್ನು ತೊಡೆದುಕೊಂಡು, ಎರಡೂ ತುಟಿಗಳ ಅಂಚುಗಳಿಂದ ಹೊರಗಿಣುಕಿ ನೋಡಿ, ಮೆಲ್ಲಗೆ ಜಿನುಗಿ ಜಾರಿರುವ ತಾಂಬೂಲದ ಕೆಂಪುರಸವನ್ನು ‘…ಸ್ಟ್…’ ಎಂದು ಒಳಸೇದಿಕೊಂಡು, ಮತ್ತೆ ನಿಧಾನವಾಗಿ, ಈ ಮುದುಕಿ, ಶವವನ್ನೊಮ್ಮೆ ಅದೇಕೋ ಒಮ್ಮೆ ನೋಡಿದಳು-
ಆ ಹೆಣ ಬಿಟ್ಟಕಣ್ಣನ್ನು ಬಿಟ್ಟುಕೊಂಡೇ ದಿಟ್ಟಿಸಿತು…!
‘ಹ್ಯಾ, ಮೂಳ! ಹೆಂಗ್ ನೋಡ್ತಾಳ್ನೋಡು-ಸತ್ರೂ ಕೂಡ! ಅವ್ವ! ಇದೆಲ್ಲಾದ್ರೂ ದೆವ್ವಗಿವ್ವ ಆಗ್ತೈತೇನೋ! ಊಂ… ಆಗೋಳೆ, ಆಗದೇನು? ಇನ್ನೂ ಎಷ್ಟೆಷ್ಟು ಸಾಲ ಬರಬೇಕೋ ಏನೋ…? ಹ್ಹಾ… ಆ ಈರಿಗ್ಯಾನಿಗೆ ಎಷ್ಟೋ ಸಾಲಕೊಟ್ಟಿದ್ದಲ್ಲಾ! ಅದೇನು ಬಡ್ಡಿ ಜೊತ್ಗೆ ವಾಪಸು ಬಂತೋ ಇಲ್ಲೋ?
‘ಪಾಪ, ಆ ಈರಿಗ ಈ ರಾಕ್ಷಸಿಯ ಕೈಯಲ್ಲಿ ಹೆಂಗ ವಿಲಿವಿಲಿ ಅಂತ ಒದ್ದಾಡಿದನಮ್ಮಾ ಪಾಪ! ಅದ್ಹೆಂಗೆ ಅಷ್ಟೊಂದು ಬಡ್ಡಿ ಏರ್‍ತೋ…! ಮನೇನ ತನ್ನ ಒಡ್ಲಿಗೆ ಹಾಕ್ಕೊಂಡ್ಲು… ಅಂಗೈಯಗಲದ ಭೂಮೀನ ಕೂಡ ನುಂಗಿನೀರ್ ಕುಡ್ದುಬಿಟ್ಲು, ಈ ಮಹಮ್ಮಾರಿ! ಈಗ ಆ ಈರಿಗ ಕಂಡ್ ಕಂಡೋರ ಮನಿಯಾಗ ಕೂಲಿ ನಾಲಿ ಮಾಡ್ಕೊಂಡು ಬಿದ್ದಾನಲ್ಲಾ…
‘ಈ ಚಿನಾಲಿ ಚೀಪ್ಡಿ ಅವನ್ನ ಎಷ್ಟೆಷ್ಟು ಕಷ್ಟಗಳ ಪಾಲು ಮಾಡಿದ್ಲಮ್ಮಾ…! ಅವ್ನು ಕೂಡಾ ನೋಡೋತಂಕ ನೋಡ್ದ… ಕೊನೀಗೆ ಅವ್ನೂ ಸಹ ಕಜ್ಜಿ ಹತ್ತಿದ ನಾಯಿಯಂತೆ ಕವಕ್ ಅಂದ!- ಏನೋ ರಣಮುಂಡೆ ಅಂತ ಸುಂಕಿದ್ದಂಗೆಲ್ಲಾ ನಿಂದೇನು ಭಾಳಾ ಜಬರ್‌ದಸ್ತಾಯ್ತಲ್ಲಾ! ನಿನ್ನ ಬಣಿವೆಗಳಿಗೆ ಯಾರೋ ಬೆಂಕಿ ಇಟ್ರೆ, ಆ ಬೆಂಕಿ ಇಟ್ಟೋನು ಈರಿಗಾನೇ ಅಂತ ಊರೆಲ್ಲಾ ಸಾರ್‍ತಿಯ ಮುಂಡೆ? ನೋಡು, ನಿನ್ನೇನು ಮಾಡ್ತೀನೋ ನೋಡ್ಕೋ… ನನ್ನೆಸ್ರು ಈರಿಗ್ಯಾ ಅಲ್ಲ…!’
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
‘ಹೋಗೋ ಹೋಗೋ ನನ ಬಟ್ಟೆ! ತಿಂಬಾಕ ಗತಿಯಿಲ್ದಿದ್ರೂ ಇವ್ನ ಧಿಮಾಕು ನೋಡು ಹೆಂಗೈತೆ!’
‘ಥುತ್, ಪಿಸಿನಾಸಿ ಮುಂಡೆ! ನಿನ್ನ ಸೀಳಿ ಬಿಟ್ಟೇನು, ಏನಂದ್ಕಂಡಿ!’
…
*
ದೀಪ ಕುಣಿಕುಣಿಯತು.
ಗೋಡೆಯ ಮೇಲಿನ ನೆರಳು-ಹೆಣದ ನೆರಳು ನಿಗುರಿ ನಿಗುರಿ ಎಗರಾಡಿತು.
ಧೊಪ್-ಧಡ್ ಧಡ್…
‘ಯಾರೋ ಜೋಳವೋ, ಇನ್ನೇನೋ ಕುಟ್ಟುತ್ತಿದ್ದಂಗೈದಾರೇ!’
‘ಐಯ್, ಇದೇನಮ್ಮಾ ಕುಟ್ಟೋ ಶಬ್ದ ಇಲ್ಲೇ ಎಲ್ಲಿಂದಲೋ ಬರ್‍ತಿದ್ದಂಗೈತೆ?’
ಸರಿಯಾಗಿ, ಹೆಣದ ತಲೆಯ ಮೇಲಿನ ತೊಲೆಯ ಬೋದುಗೆಯ ಸಂದಿಯೊಳಗಡೆಯಿಂದ ಎರಡು ಗುಬ್ಬಚ್ಚಿಗಳು ಹಟಾತ್ತನೆ ಕಿಚ್ ಎಂದುವು.
ಈ ಮುದುಕಿ ತಲೆ ಎತ್ತಿ, ‘ಹುಸ್’ ಎಂದು ಕೈಯಾಡಿಸಿದಳು- ಸಂದಿನೊಳಗಡೆಯಿಂದ ಕೆಳಗೆ ಉದುರಿ ಬೀಳುತ್ತಿರುವ ಮಣ್ಣನ್ನು ನೋಡಿ.
ಗುಬ್ಬಚ್ಚಿಗಳು ಸುಮ್ಮನಾದುವು.
(ಆದರೆ ಮಣ್ಣು ಉದುರುವುದು ಮಾತ್ರ ನಿಲ್ಲದಾಯಿತು. ಬೀಳುತ್ತಲೇ ಇದೆ… ಧೊಪ್, ಧಡ್, ಧಣ್… ಕೇಳಿಸುತ್ತಲೇ ಇದೆ!)
ಗಾಳಿ ತಣ್ಣಗೆ…
ಮುದುಕಿಯ ದೇಹ ಮರವಟ್ಟುಹೋಗುತ್ತಿರುವಂತೆ…
ಚಳಿಚಳಿಯಾದಂತಾಗಿ, ಹಾಗೆಯೇ ಕೈಗಳನ್ನು ಮುದುಡಿಕೊಂಡು, ತಲೆಯಾನಿಸಿ, ಪ್ರಶ್ನೆಯ ಆಕಾರದಲ್ಲಿ ಮಲಗಿಕೊಂಡು, ನಿದ್ರಿಸುವುದಕ್ಕೆ ಪ್ರಯತ್ನಿಸಿದಳು, ಈ ಮುದುಕಿ.
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಆದರೂ ನಿದ್ರೆ ಬಾರದೆ-
‘ನಾಡುಪೀಡೆ! ಯಾವಾಗ ಬೆಳಕರೀತೈತೋ! ಬಿರೀನ ಇದಕ್ಕೊಂದಿಷ್ಟು ಮಣ್ಣು ಕಾಣಿಸೋವರ್‍ಗೂ ಕೇರೀಲಿ ಶಾಂತಿ ಇರಂಗಿಲ್ಲ…!’
‘ಇವಳಿದ್ದಷ್ಟು ಕಾಲವೂ, ನಾವೆಲ್ಲ ಅಂದ್ಕೊಂತಿದ್ದೆವು- ಈ ಗೂಬೆ ಗೊಟಕ್ ಅನ್ನೋತನ್ಕಾ ಕೇರೀಲಿ ಶಾಂತಿ ಇರಂಗಿಲ್ಲಮ್ಮಾ… ಇದೇನೇ ತಾಯಿ! ಬೆಳಿಗ್ಗೆ ಎದ್ದಾಗಿನಿಂದ್ಲೂ ಸಾಲ ತಗೊಂಡೋರ್ ಜತೇಲಿ ಒಂದೇ ಗಲಾಟೆ! ಆಡಬಾರದ ಮಾತುಗಳು, ಕೇಳಬಾರದ ನುಡಿಗಳಮ್ಮಾ… ಥುಥು!’
‘ಅದರಾಗದರಾಗ-ಆ ಈರಿಗ್ಯಾನೊಂದಿಗೆ ಆ ದಿನ ಹೆಂಗೆ ತೆಕ್ಕೆ ಮುರಿಗೆ ಬಿದ್ದಳಂತ! ಒಳ್ಳೆ ಕುಸ್ತಿ ಆಡೋರಂಗೆ!- ಸೀರೆ ನಿರಿಗೆಗಳ್ನ ಮ್ಯಾಕೆತ್ತಿ ಗೋಸಿ ಹಾಕ್ಕೊಂಡು, ಕುಸ್ತಿಗೇ ಇಳಿದುಬಿಟ್ಳಲ್ಲಾ! ನಾಚ್ಕೆ ಹೇಚ್ಕೆ ತೋರ್‍ದು…!’
‘ಆ ಈರಿಗ್ಯಾನು ಆ ದಿನದಿಂದ ಮೊದ್ಲು ಮಾಡ್ಕೊಂಡು, ನಾನು ಆಗಾಗ ಅರ್ಧರಾತ್ರಾಗ ಕಾಲುಮಡಿಯಾಕಂತ ಹೊರಗ್ಬಂದಾಗ-ಒಂದರ್‍ಡು ಸಾರಿ ಕಣ್ಣಿಗೆ ಬಿದ್ದ! ಅದೇನು ಮಾಡ್ಬೇಕಂತೈದಾನೋ, ಏನೋ, ಎಲ್ಲ ಆ ಮ್ಯಾಗ್‌ಳೋನಿಗೇ ಗೊತ್ತು…!’
ಇದ್ದಕ್ಕಿದ್ದಂತೆ ಒಮ್ಮೆಗೆ ಗುಬ್ಬಚ್ಚಿಗಳು ಚೀತ್ಕರಿಸಿದವು!
ಧೋಪ್, ದುಸ್, ಧಸ್ ಅಂತ ಸಣ್ಣ ಸಣ್ಣ ಮಣ್ಣಿನ ಹೆಂಟೆಗಳು ಬೀಳಲಾರಂಭಿಸಿದುವು. ಧಡ್-ಧಡ್-ಧಣ್-
ನಿದ್ರೆಯ ಮತ್ತು ಬಿಟ್ಟುಹೋಯಿತು. ಕಣ್ಣುಗಳು ಪೂರ್ತಿ ನಿಚ್ಚಳಗೊಂಡವು.
ಧಿಡಗ್ಗನೆ ಎದ್ದು ಕುಳಿತುಕೊಂಡು, ಒಂದೇ ಒಂದು ಕ್ಷಣದ ಮಟ್ಟಿಗೆ ಹೆಣವನ್ನು ದಿಟ್ಟಿಸಿದಳು. ಮೈತುಂಬ ಒಂದು ಧಡಿಯ ಬಂಗಾರದ ಆಭರಣಗಳು ಜಗಜಗಿಸುತ್ತಿವೆ.
ಯಾರದೋ ಹೊಲದಿಂದ ಗೂಬೆ ಗುಗ್ಗೂ… ಗೂ… ಎಂದಿತು!
ಧಸ್… ಅಂತ ನಿಂಬೆಹಣ್ಣಿನ ಗಾತ್ರದ ಮಣ್ಣಿನ ಹೆಂಟೆಯೊಂದು ಸರಿಯಾಗಿ ಹೆಣದ ತಲೆಯ ಮೇಲಕ್ಕೇ ಬಿದ್ದು ಪುಡಿ ಪುಡಿಯಾಯಿತು!
‘ಈಟೊಂದು ಐಶ್ವರ್ಯವೆಲ್ಲಾ ಇನ್ಮೇಲೆ ಪರರ ಪಾಲಾಗುತ್ತಲ್ಲೇ ಶರಭಮ್ಮಾ… ನಿನ್ ಮೊಮ್ಮಗಳ…’ ಎಂದು ಗೊಣಗಿಕೊಳ್ಳುತ್ತ, ಹೆಣದ ತಲೆಯ ಮೇಲೆ ಬಿದ್ದ ಮಣ್ಣನ್ನು ಜಾಡಿಸಬೇಕೆಂದು ಈ ಮುದುಕಿ ಮೊಣಕಾಲುಗಳನ್ನೂರಿ, ಮುಂದುಗಡೆಗೆ ಬಾಗು ಬಾಗುತ್ತಿರುವಂತೆಯೇ-ಹಟಾತ್ತನೆ-ಕೈಬೀಸಿತು ಹೆಣ! ಎರಡೂ ಪಕ್ಕಗಳಲ್ಲಿರುವ ಆ ನೀಲಾಂಜನಗಳಿಗೆ- ಆ ಮಂಜಿನ ಹಸ್ತ ತಾಕಿಯೂ ತಾಕದ ತಕ್ಷಣವೇ ಧಡಾರನೆ ಕೆಳಕ್ಕುರುಳಿಬಿದ್ದು-ಕರಾಳ ಕಂಕಾಳದ ಕಪ್ಪುಕತ್ತಲೆ ಇದ್ದಕ್ಕಿದ್ದಂತೆ, ಬೆಚ್ಚಿಬಿದ್ದು, ಎಚ್ಚರಗೊಂಡು, ಆಕಳಿಸಿ, ಪಿಳಿಪಿಳಿ ಕಣ್ಣುಬಿಟ್ಟಿತು!
ಇದನ್ನು ಓದಿದ್ದೀರಾ?: ಬೆಸಗರಹಳ್ಳಿ ರಾಮಣ್ಣ ಅವರ ಕತೆ | ಗಾಂಧಿ
ಈ ಮುದುಕಿ ಗಟ್ಟಿಯಾಗಿ ಒಂದು ಕೇಕೆ ಹಾಕಿದಳಾಗಲೀ-ಅದು ಗಂಟಲಿನಿಂದ ಹೊರಬರಲೇ ಇಲ್ಲ!
*
ಹೆಣದ ಹಿಂದೆ, ಅದರ ಬಲಗೈಯ ಹಿಂದೆ, ಸರಿಯಾಗಿ ರಟ್ಟೆಯ ಸ್ಥಳಕ್ಕೆ-ಒಂದು ಕೈತೂರುವಷ್ಟು ಮಾತ್ರವೇ ಯಾರೋ ಕನ್ನ ಹಾಕಿರುವರೆಂದೂ, ಗವಾಕ್ಷಿಯಿಂದಿಳಿದು ಬಂದು ಬಂಗಾರದ ಆಭರಣಗಳನ್ನೆಲ್ಲಾ ಮೂಟೆ ಕಟ್ಟಿಕೊಂಡು ಪರಾರಿಯಾಗಿರುವರೆಂದೂ-ಅನಂತರ, ಮೂರ್ಛೆ ತಿಳಿದ ಮೇಲೆಯೇ ಈ ಮುದುಕಿಗೆ ಗೊತ್ತಾಯಿತು!
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ವೀರಭದ್ರ (1937-): ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ವೀರಭದ್ರರ ಹುಟ್ಟೂರು. ಎಂ.ಎ.(ಕನ್ನಡ) ಪದವಿಯ ನಂತರ ಹುಬ್ಬಳ್ಳಿ, ಚಿತ್ರದುರ್ಗ, ವಾಲ್ವೇರ್, ಆದವಾನಿಯಲ್ಲಿ ಉದ್ಯೋಗ ಮಾಡಿ 1966ರಿಂದ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದು 1994ರಲ್ಲಿ ನಿವೃತ್ತರಾದರು. ಪ್ರಕಟಿತ ಕೃತಿಗಳು: ‘ನೀಲಿ ನೀರಿನ ಮೇಲೆ’, ‘ಈ ಭೂಮಿ ಆ ಆಕಾಶ’, ‘ಮರೆಯವರು’, ‘ಬಾವಿಯಿಂದ ಬೇಲಿಗೆ’, ‘ಕನ್ನಡಿ ನೋಡಿದ ನಾಯಿ'(ಕಥಾಸಂಕಲನಗಳು); ‘ಅನಾಥ ಪಕ್ಷಿಯ ಕಲರವ'(ಸಮಗ್ರ ಕಥೆಗಳು). ಅರವತ್ತರ ದಶಕದಲ್ಲಿ ನಿರಂಜನ, ತರಾಸು, ಅನಕೃ ಮಾದರಿಯಲ್ಲಿ ಬರೆಯಲು ಆರಂಭಿಸಿದರು. ನವ್ಯಕತೆಗಳ ಹೆಜ್ಜೆಜಾಡಿನಲ್ಲಿ ನಡೆದು ಇಮೇಜಿಸ್ಟ್, ಸರ್ರಿಯಲಿಸ್ಟ್ ಮುಂತಾದ ವಾಸ್ತವ ಗ್ರಹಿಕೆಯ ಹೊಸ ಮಾದರಿಯ ಕಥಾರಚನೆಗೆ ತೊಡಗಿದರು. ವೀರಭದ್ರ ಅವರು ತೆಲುಗಿನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ ‘ಅನಾಥ ಪಕ್ಷಿ’ ಹಾಗೂ ತೆಲುಗಿಗೆ ಅನುವಾದವಾಗಿದ್ದ ಶರಶ್ಚಂದ್ರರ ಬಂಗಾಳಿ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.





