ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಕಟ್ಟಡದ ನಾಲ್ಕನೆಯ ಮಾಳಿಗೆಯಿಡೀ ಕಂಪೆನಿಯ ಪ್ರತಿಷ್ಠಿತ ಅಧಿಕಾರಿಗಳಿಗೆ ಮೀಸಲು. ವಿಶಾಲವಾದ, ಸುಸಜ್ಜಿತ ‘ಬೋರ್ಡ್ ರೂಮ್’ನ ಪಕ್ಕದಲ್ಲೇ ಕಂಪೆನಿಯ ಅತ್ಯುನ್ನತಾಧಿಕಾರಿಯ ಆಫೀಸು ಕೋಣೆ. ಇವೆರಡು ಕೋಣೆಗಳನ್ನೂ ಜೋಡಿಸಿದಂತಿರುವ ಕಿರು ಬಾಲ್ಕನಿಯಲ್ಲಿ ಅಂದವಾದ ಹೂಗಿಡಗಳು.
ಎರಡು ಕೋಣೆಗಳಿಗೂ ಹೊಂದಿಸಲಾಗಿದ್ದ ‘ಏಯರ್ ಕಂಡಿಶನರ್’ ಯಂತ್ರಗಳ ಮೇಲೆ ಪಾರಿವಾಳಗಳು ಗೂಡು ಕಟ್ಟಿದ್ದವು. ಬಾಲ್ಕನಿಯಲ್ಲಿ ನಿಂತಾಗ ಕಾಣುವುದು ಯುದ್ಧ ನೌಕೆಗಳೆಲ್ಲ ತಂಗಿರುವ ಸಮುದ್ರದ ಸೆರಗು… ಧಕ್ಕೆಗೆ ಹೊಂದಿಕೊಂಡ ಇದಿರಿನ ದಾರಿಯ ಬದಿಯಲ್ಲಿ ಸಾಲಾಗಿ ಬೆಳೆದಿದ್ದ ಶಿರೀಷ ವೃಕ್ಷಗಳು.
ಆಫೀಸು ಆರಂಭವಾಗುವುದಕ್ಕೆ ಮೊದಲೇ, ‘ಎಂ.ಡಿ.’ಯ ಕಾರು ಕಟ್ಟಡದ ಹೆಬ್ಬಾಗಿಲ ಬಳಿ ಬರುವುದಕ್ಕೆ ಮೊದಲೇ, ಶ್ರೀಖಂಡೆ ಇಲ್ಲಿ ಪ್ರದಕ್ಷಿಣೆ ಹಾಕಬೇಕು. ಅದು ಅವನ ಕರ್ತವ್ಯ, ಎಂ.ಡಿ.ಯ ಕೋಣೆಯ ಬಾಗಿಲ ಹಿತ್ತಾಳೆಯ ಹಿಡಿ ಥಳಥಳಿಸುತ್ತಿದೆಯೆ, ಒಳಗಡೆ ಮೇಜಿನ ಮೇಲೆ ಧೂಳು ಒರೆಸಲಾಗಿದೆಯೆ, ಕಸದ ಬುಟ್ಟಿ, ‘ಆಶ್‌ಟ್ರೇ’ ಬರಿದಾಗಿದೆಯೆ, ಪೀಕದಾನಿ ಹೊಳೆಯುತ್ತಿದೆಯೆ, ಬಾತ್ ರೂಮ್‌ನಲ್ಲಿ ‘ಟಿಶೂ’ ಕಾಗದ ಸಾಕಷ್ಟಿದೆಯೆ, ಸಾಬೂನಿನ ಬಿಲ್ಲೆ ಬದಲಾಗಿದೆಯೆ, ‘ಬೋರ್ಡ್ ರೂಮ್’ನಲ್ಲಿ ಬರೆಯುವ ಕಾಗದ, ಪೆನ್ಸಿಲುಗಳಿವೆಯೆ ಎಂದೆಲ್ಲ ಹದ್ದುಗಣ್ಣಿನಿಂದ ನೋಡಬೇಕು… ಎಲ್ಲ ವ್ಯವಸ್ಥಿತವೆಂಬ ಸಮಾಧಾನ ಮೂಡಿದ ಮೇಲೆ ಬಾಲ್ಕನಿಯಲ್ಲಿದ್ದ ಹೂ ಗಿಡಗಳಿಗೆ ನೀರೆರೆಯಲಾಗಿದೆಯೆ, ರಾತ್ರಿ ಹೊರಗಿರಿಸುತ್ತಿದ್ದ ‘ಫಿಲೆಡೆಂಡ್ರಾನ್’ ಪಾತಿಯನ್ನು ‘ಎಂ.ಡಿ.’ಯ ಕೋಣೆಯ ಬಾಗಿಲ ಬಳಿ ಸಾಗಿಸಲಾಗಿದೆಯೆ ಎಂದು ಗಮನಿಸಬೇಕು. ಹಾಗೆ ಬಾಲ್ಕನಿಯಲ್ಲಿ ಸುತ್ತಾಡುವಾಗ, ಅರಳಿದ ‘ಬೌಗೆನ್‌ವಿಲ್ಲಾಸ್’ಗಳನ್ನು ನೋಡುವಾಗ, ಹತ್ತಿರದಲ್ಲೇ ಕಾಣುವ ಶಿರೀಷ ವೃಕ್ಷಗಳ ಕಡೆ ದೃಷ್ಟಿ ಹಾಯಿಸುವಾಗ, ಪಾರಿವಾಳಗಳು ಹಾರಾಡುತ್ತಿರುತ್ತವೆ. ಬಾಲ್ಕನಿಯ ದಂಡೆಯಲ್ಲಿ ಕುಪ್ಪಳಿಸಿ ಕುಣಿದು ಸಾಗುತ್ತವೆ. ದಂಡೆಯ ಮೇಲೆ ಬಾಲ್ಕನಿಯ ಬುಡದಲ್ಲಿ ‘ಏಯರ್ ಕಂಡಿಶನರ್’ ಯಂತ್ರಗಳ ಕೆಳಗೆ ಹಿಕ್ಕೆ ಹಾಕುತ್ತವೆ… ಹೂವಿನ ಗಿಡಗಳಿಗೆಲ್ಲ ನೀರೆರೆಯುವ ಮಾಲಿ ಹಿಕ್ಕೆ ಒರೆಸಲು ಸಾಕಷ್ಟು ಪ್ರಯತ್ನಿಸಿದರೂ ಹಿಕ್ಕೆ ಉಳಿಯುವುದಿದೆ.
ಇದನ್ನು ಓದಿದ್ದೀರಾ?: ರಾಜಲಕ್ಷ್ಮಿ ಎನ್. ರಾವ್ ಅವರ ಕತೆ | ಫೀಡ್ರಾ
ಆ ಬಾಲ್ಕನಿಗೆ ಯಾವ ಹಿರಿಯ ಅಧಿಕಾರಿಯೂ ಪ್ರವೇಶಿಸುತ್ತಿದ್ದಿಲ್ಲ. ‘ಬೋರ್ಡ್ ರೂಮ್’ನ ದೊಡ್ಡ ಗಾಜಿನ ಬಾಗಿಲಿನಿಂದಲೂ, ‘ಎಂ.ಡಿ.’ಯ ಕೋಣೆಯ ಅಂಥದೇ ಬಾಗಿಲಿನಿಂದಲೂ, ಅರಳಿದ ಬೌಗೆನ್ ವಿಲ್ಲಾಸ್, ತುಸುದೂರದಲ್ಲೇ ಕಾಣುವ ಶಿರೀಷ ಪುಷ್ಪ, ಅದಕ್ಕೂ ಹಿಂದೆ, ವಿಶಾಲವಾದ ಸಮುದ್ರದಲ್ಲಿ ನಿಂತಿರುವ ಯುದ್ಧ ನೌಕೆಗಳೆಲ್ಲ ಕಾಣುವುದು ಸಾಧ್ಯವಾದ ಕಾರಣ ಆ ಅಗಲ ಕಿರಿದಾದ ಬಾಲ್ಕನಿಗೆ ಯಾರೂ ಪ್ರವೇಶಿಸುವುದಿಲ್ಲ. ಹೀಗಾಗಿ ಪಾರಿವಾಳಗಳ ಹಿಕ್ಕೆಗೆ ಅಂಥ ಮಹತ್ವ ಬಂದಿರಲಿಲ್ಲ.
ದಿನವೂ ಶ್ರೀಖಂಡೆ ಬರುವುದನ್ನೆ ಆ ಪಾರಿವಾಳಗಳು ನಿರೀಕ್ಷಿಸುತ್ತಿದ್ದವು. ಶ್ರೀಖಂಡೆ ಬಂದು ಪಾರಿವಾಳಗಳ ಗೂಡಿನ ಕೆಳಗೆ ನಿಂತು ವಿಚಿತ್ರ ಸದ್ದುಮಾಡಿ ಆ ಹಕ್ಕಿಗಳನ್ನು ಕರೆಯುತ್ತಿದ್ದಾಗ ಅವರ ಮೈಮೇಲೆ ಭುಜಗಳ ಮೇಲೆ ಕುಪ್ಪಳಿಸಿ ಹಾರುವಷ್ಟು ಸಲುಗೆ ಅವುಗಳು ಬೆಳೆಸಿಕೊಂಡಿದ್ದವು. ಹಾಗೆ ಕರೆಯುತ್ತಲೇ ಅವರು ಕೋಟಿನ ಕಿಸೆಯಿಂದ ಅಕ್ಕಿ, ಬೇಳೆ, ಕಾಳುಗಳನ್ನು ಒಂದೊಂದೇ ಬಾಲ್ಕನಿಯ ದಂಡೆಯ ಮೇಲೆ ಚೆಲ್ಲುತ್ತಾರೆ. ಒಂದರ ಹಿಂದೊಂದು ಪಾರಿವಾಳ ಉತ್ಸಾಹದಿಂದ ಈ ಬೇಳೆ ಕಾಳುಗಳಿಗಾಗಿ ಧಾವಿಸಿ ಬರುತ್ತವೆ. ಅವು ಮುಗಿದಾಗ, ಕೈತಟ್ಟಿ, ಕೈಯೊರೆಸಿ, ಪುನಃ ವಿಚಿತ್ರ ಸದ್ದಿನಿಂದ ಪಾರಿವಾಳಗಳಿಗೆ ವಿದಾಯ ಹೇಳಿ, ಕೆಳಗಡೆ ಬಾಗಿ, ಬೀದಿಯ ಕಡೆ ನೋಡಿ ‘ಎಂ.ಡಿ.’ಯ ಕಾರು ಇನ್ನೂ ಬಂದಿಲ್ಲವೆಂದು ಖಚಿತ ಮಾಡಿಕೊಂಡು ಶ್ರೀಖಂಡೆ ಒಳಗಡೆ ಓಡುವುದು ನಿಯಮ.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಇಪ್ಪತ್ತು, ಇಪ್ಪತ್ತೆರಡು ವರ್ಷಗಳಿಂದ ಈ ನಿಯಮ ರೂಢಿಯಾಗಿದೆ. ಕಟ್ಟಡದ ಕಲ್ಲು ಕಲ್ಲು ಆತ್ಮೀಯವಾಗಿವೆ. ಸಂದುಗೊಂದುಗಳೆಲ್ಲ ಶ್ರೀಖಂಡೆ, ಶ್ರೀಖಂಡೆ ಎಂದು ಕೂಗುವುದಿದೆ. ತಿರುಗುವ ಕುರ್ಚಿಗಳು, ಕೋಣೆ ನುಂಗುವಂಥ ಮೇಜುಗಳು, ವಿದ್ಯುತ್ ಪಂಖಗಳು, ಅಸಂಖ್ಯ ಟೈಪ್ ರೈಟರ್, ಕ್ಯಾಲ್ಕುಲೇಟರ್ ಮತ್ತಿತರ ಯಂತ್ರಗಳು, ಓಬಿರಾಯನ ಕಾಲದ ಲಿಫ್ಟ್, ಹಾಸುಗಂಬಳಿ, ಹಳೆಯ ಫೈಲುಗಳನ್ನು ಹೊರುವ ನೂರಾರು ಉಕ್ಕಿನ ಕಪಾಟುಗಳು, ಪೆಟ್ಟಿಗೆಗಳು, ಬಾತ್‌ರೂಮ್‌ನ ಸಲಕರಣೆಗಳು, ಟಾಯ್ಲೆಟ್ ಸಾಬೂನಿನ ಪೆಟ್ಟಿಗೆಗಳು, ಇವೆಲ್ಲವುಗಳ ಉಸ್ತುವಾರಿ ಶ್ರೀಖಂಡೆ ನೋಡಬೇಕು. ಕಟ್ಟಡದಲ್ಲಿ ದುಡಿಯುವ ನಾಲ್ಕು ನೂರು ಜನರ-ಪೊರಕೆ, ಫೆನಾಯ್ಲ್ ಹಿಡಿಯಬೇಕಾದ ಜಾಡಮಾಲಿಗಳಿಂದ ಯಾರನ್ನೂ ಹೆಚ್ಚಾಗಿ ಕಾಣದೆಯೇ ಕೆಲಸ ನಡೆಸುವ ಎಂ.ಡಿ.ಯ ತನಕ ದುಡಿಮೆಯ ಜೀವಂತತೆಗೆ ಅಗತ್ಯ ಇರುವ, ಯಾವ ಉಪಕರಣಗಳ, ಸೌಕರ್ಯಗಳ ಕೊರತೆಯನ್ನೂ ಕಾಣದಂತೆ ಅವೆಲ್ಲವುಗಳನ್ನು ಒದಗಿಸುವ ಹೊಣೆಗಾರಿಕೆ ಹೊರಬೇಕು.
ಕಂಪೆನಿ ಸೇರಿಕೊಂಡಂದಿನಿಂದಲೂ ಶ್ರೀಖಂಡೆಗೆ ದಾದರ್ ಪೋರ್ತುಗೀಸ್ ಚರ್ಚಿನ ಬಳಿಯ ಮನೆಗಿಂತಲೂ ಆಫೀಸಿನ ಕಟ್ಟಡವೇ ಹೆಚ್ಚು ಆತ್ಮೀಯವಾಗಿದೆ. ಆಫೀಸಿಗೆ ಯಾರೊಬ್ಬ ಕೆಲಸಗಾರ ಪ್ರವೇಶಿಸುವುದಕ್ಕೆ ಮೊದಲೇ ಶ್ರೀಖಂಡೆ ಆಫೀಸಿನಲ್ಲಿರುತ್ತಾರೆ. ಆಫೀಸಿನ ಸಮಯದ ನಿಯಮಗಳು ತಮಗಲ್ಲ ಎನ್ನುವ ಹಲವು ಹಿರಿಯ ಅಧಿಕಾರಿಗಳು ತುಂಬ ತಡವಾಗಿ ಆಫೀಸು ಬಿಟ್ಟ ಮೇಲೆ ಎಲ್ಲ ಸರಿಯಾಗಿದೆಯೇ ಎಂದು ನೋಡಿಕೊಂಡು ಸಮಾಧಾನದಿಂದ ಶ್ರೀಖಂಡೆ ಮನೆಗೆ ಮರಳುವುದು ರಾತ್ರಿಗೆ. “ದಾದರ್‌ನಲ್ಲಿ ಸೂರ್ಯ ಮುಳುಗುವುದನ್ನು ನಾನು ಕಂಡೇ ಇಲ್ಲ” ಎಂದು ಎಲ್ಲರಿದಿರು ಹೇಳುವಾಗ ಅವರಿಗೆ ಎಲ್ಲಿಲ್ಲದ ಅಭಿಮಾನ.
ಇದನ್ನು ಓದಿದ್ದೀರಾ?: ಟಿ.ಜಿ. ರಾಘವ ಅವರ ಕತೆ | ಸಂಕರ
ಇಪ್ಪತ್ತು ಇಪ್ಪತ್ತೆರಡು ವರ್ಷಗಳಿಂದ ಬೆಳೆದ ಈ ಆತ್ಮೀಯತೆಯಲ್ಲಿ ಆರಂಭದ ಉತ್ಸಾಹ ಆಸಕ್ತಿಯಾಗಿ, ಆಸಕ್ತಿ ಆತ್ಮೀಯತೆಯಾಗಿ ಪರಿವರ್ತನೆ ಹೊಂದಿದ ಕಾಲ ಖಂಡಗಳೆಲ್ಲ ಗಮನಕ್ಕೆ ಬರುವುದಿಲ್ಲ. ಈಗ ಆತ್ಮೀಯತೆಯೊಂದೆ ಸತ್ಯವಾಗಿದೆ. “ಎಸ್ಸೆಸ್! (ಶ್ರೀಧರ ಶ್ರೀಖಂಡೆ) ನೀವಿರದೆ ಈ ಆಫೀಸು ನಡೆಯುವುದಾದರೂ ಹೇಗೆ? ನೀವು ಕಂಪೆನಿಯ ಒಂದು ಅಮೂಲ್ಯ ಸೊತ್ತು” ಎಂದು ಯಾರಾದರೊಬ್ಬ ಅಧಿಕಾರಿ ಹೇಳಿದರಂತೂ ಶ್ರೀಖಂಡೆಗೆ ಎಲ್ಲಿಲ್ಲದ ಧನ್ಯತೆಯ ಹಿಗ್ಗು! ಹಾಗೆ ಹೇಳಿದಾಗ ಅಂಥ ಅಧಿಕಾರಿ ವ್ಯಕ್ತಪಡಿಸಬಹುದಾದ ಯಾವುದೊಂದು ಕೊರತೆಯನ್ನು ನೀಗಿಸಲು-ಕುರ್ಚಿಯ ಕ್ಯಾಸ್ಟರ್ ಬದಲಿಸಲು, ಏಯರ್ ಕಂಡಿಶನರ್ ಯಂತ್ರ ಪರೀಕ್ಷಿಸಲು, ಪಾಯಿಖಾನೆಯ ಫ್ರೆಶ್ ಸರಿಪಡಿಸಲು, ಹಳೆಯ ಕಾರ್ಪೆಟ್ ಬದಲಿಸಿಕೊಡಲು ಅಥವಾ ಇನ್ನಾವುದೇ ಖಾಸಗಿ ಕೆಲಸವನ್ನು ನಿರ್ವಹಿಸಿ ಕೊಡಲು ಶ್ರೀಖಂಡೆ ಇಮ್ಮಡಿ ಉತ್ಸಾಹದಿಂದ ಸಿದ್ದ.
ತನ್ನ ಕೆಲಸದ ಕುರಿತ ಇಂಥ ಆತ್ಮೀಯತೆ ಬೆಳೆಯಲು ಆಫೀಸಿನ ಪ್ರಿಯವಾದ ವಾತಾವರಣ ಕಾರಣವೆ ಅಥವಾ ಮನೆಯಲ್ಲಿರುವ ಮಣಿ ಕಾರಣವೇ ಎಂಬ ಚಿಂತೆ ಕೆಲವೊಮ್ಮೆ ಶ್ರೀಖಂಡೆಯನ್ನು ಕಾಡಿವುದಿದೆ- ಯೋಚನೆಗೆ ಬಿಡುವಿದ್ದಾಗ… ಶುಭಾ ಮನೆಬಿಟ್ಟು ಓಡಿಹೋಗಿ ಯಾರನ್ನೋ ಮದುವೆಯಾದಾಗ…
“ನೀವೇ ಕಾರಣ ಇದಕ್ಕೆ, ದಿನದ ಇಪ್ಪತ್ತನಾಲ್ಕು ಗಂಟೆಯೂ ನೀವು ಅಲ್ಲೇ ಸಾಯುತ್ತೀರಿ. ಮನೆಯಲ್ಲಿ ಏನಾಗುತ್ತಿದೆ, ಏನಾಗಬಹುದು ಎಂಬ ಯೋಚನೆಯಾದರೂ ಇದೆಯೆ! ಮಕ್ಕಳು ಅಪ್ಪ ಯಾರೆಂದು ಗುರುತಿಸಲಾದರೂ ನೀವು ಮನೆಯಲ್ಲಿರುವುದಿದೆಯೆ! ಕೆಲಸ…ಕೆಲಸ…ಕೆಲಸ. ಆ ಫೆನಾಯ್ಲ್ ಬಾಟ್ಲಿ ಹಿಡಿದು ಪಾಯಿಖಾನೆ ತೊಳೆಯುವವರ ಯೋಗಕ್ಷೇಮ ನೋಡುವುದು ನಿಮಗೆ ಮಕ್ಕಳ ಸಹವಾಸಕ್ಕಿಂತ ಹೆಚ್ಚಾಯಿತು. ಈಗ ನೋಡಿದಿರಲ್ಲ… ಕಲಿಸಿದ್ದೆಲ್ಲ ಯಾವ ಕರ್ಮಕ್ಕೆ! ಕಾಲೇಜು ಮುಗಿಯಿತು… ಮನೆಯಲ್ಲಿರುವುದೇಕೆ ಕೆಲಸ ಹಿಡಿಯಲಿ ಎಂದದ್ದೇ ಆ ಸತ್ತವಳಿಗೆ ಸ್ವರ್ಗ ಸಿಕ್ಕ ಹಾಗಾಯಿತು. ಯಾರನ್ನೋ ಮಲೆಯಾಳಿಯನ್ನು ಕಟ್ಟಿಕೊಂಡು ಬೋರಿವಲ್ಲಿಗೆ ಓಡಿಹೋದಳಲ್ಲಾ… ಇದೇ ನೀವು ಮನೆಗೆ ಮಾಡಿದ ಉಪಕಾರ…”
ಇದನ್ನು ಓದಿದ್ದೀರಾ?: ಕೆ. ಸದಾಶಿವ ಅವರ ಕತೆ | ರಾಮನ ಸವಾರಿ ಸಂತೆಗೆ ಹೋದದ್ದು
”ಓಡಿಹೋದದ್ದಲ್ಲ ಮಣಿ… ಮದುವೆಯಾಗಿ ಹೋದದ್ದು…”
“ಮದುವೆ! ಹೌದು ಮದುವೆ… ವರಪೂಜೆ, ಧಾರೆ… ಸಪ್ತಪದಿ ಎಲ್ಲ ಆದ ಮದುವೆ… ಶುಭಾ ಈಗ ಮಂಗಳಗೌರಿವ್ರತ ಹಿಡಿದು, ಆಯಿಯ ನೆನಪು ಮಾಡಿಕೊಂಡು ಸುಖವಾಗಿದ್ದಾಳೆ… ಮದುವೆ! ಆ ರಿಜಿಸ್ತ್ರಿ ಆಫೀಸು …ಕೋಕೋಕೋಲಾ ಬಾಟ್ಲಿ …ಅದೂ ಮದುವೆಯೆ! ನಿಮ್ಮ ಕರ್ಮ!”
”ಅವಳು ಸುಖವಾಗಿದ್ದಾಳಲ್ಲಾ ಮಣಿ… ಕಾಯಿದೆಯಂತೆ ಅದು ಮದುವೆ, ಇಬ್ಬರಿಗೂ ಕೆಲಸ. ಸ್ವಂತ ಮನೆ… ಸುಖವಾದ ಸಂಸಾರ… ಈಗ ಮಗು ಬೇರೆ…”
“ಮಗು! ನನ್ನ ಮಗುವಿನ ಮಗುವೇ ಅಲ್ಲ ಅದು… ಅವಳನ್ನು ಇಟ್ಟುಕೊಂಡವನ ಮಗು… ನನ್ನ ಮೊಮ್ಮಗ ಹೇಗಾಗುತ್ತದೆ? ಮನೆ ಬಿಟ್ಟು ಹೋದ ಬಜಾರಿ… ಇನ್ನು ನನ್ನ ಹೆಣ ನೋಡಲಿಕ್ಕೂ…”
“ಮಣಿ! ಮಣಿ! ಏನೆಲ್ಲ ಮಾತಿದು! ಅಸಹ್ಯ, ಅಮಂಗಲ. ಅವಳು ಬರುವುದು ಬೇಡವಾದರೆ ಬೇಡ. ಆದರೆ ಇಂಥ ಮಾತೆಲ್ಲ ಆಡಬೇಡ, ಯಾರಾದರೂ ಕೇಳಿದರೆ ಏನು ಹೇಳಿಯಾರು?”
“ಕೇಳಲಿ… ಇಡಿಯ ಕಟ್ಟಡಕ್ಕೆ ಕೇಳುವಂತೆ ಬೊಬ್ಬೆ ಹಾಕುತ್ತೇನೆ. ಅವಳು ನನ್ನ ಮಗಳಲ್ಲ… ನಾನು ನಿಮ್ಮ ಹೆಂಡತಿಯೂ ಅಲ್ಲ… ನೀವು ಮದುವೆಯಾದದ್ದು ನನ್ನನ್ನಲ್ಲ… ನಿಮ್ಮ ಆಫೀಸಿನ ಆ ಕಟ್ಟಡವನ್ನು. ನಿಮಗೆ ಎಲ್ಲಿದೆ ಪುರುಸೊತ್ತು ಹೆಂಡತಿ ಮಕ್ಕಳ ಯೋಗಕ್ಷೇಮ ನೋಡೋದಿಕ್ಕೆ ಎಂತಲೇ ಆ ರಂಡೆ…”
“ಮಣೀ…” ಎಂದು ಹೆಂಡತಿಯ ಕಪಾಳಕ್ಕೆ ಒಮ್ಮೆ ಒಂದೇಟು ಬಿಗಿದಿದ್ದರು ಶ್ರೀಖಂಡೆ…
ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ
“ಹೊಡೆಯಿರಿ… ಕೊಂದು ಹಾಕಿ… ಅಷ್ಟಕ್ಕೆಯೇ ನೀವು ಮದುವೆ ಮಾಡಿಕೊಂಡಿದ್ದು… ಒಮ್ಮೆ ನಾನು ಸತ್ತರೆ ಆಮೇಲೆ ನಿಮ್ಮ ಆಫೀಸಿನಲ್ಲೇ ನೀವು ಇಪ್ಪತ್ತನಾಲ್ಕು ಘಂಟೆ ಸಾಯಬಹುದು…”
ಗೋಳೋ ಎಂದು ಅಳು… ನೆರೆಕೆರೆಯವರು ಕೇಳುವಂತೆ ಅಳು. ಆಗ ಹತ್ತಿರ ಹೋಗಿ ಮಣಿಗೆ ಬಾಯಿಗೆ ಕೈ ಹಿಡಿಯಬೇಕಾಗುತ್ತಿತ್ತು. ಬಾಯಿಯನ್ನು ಬಿಗಿಯಾಗಿ ಮುಚ್ಚುವಾಗಿ ಆಕೆ ಕೊಸರಿಕೊಂಡು ಮತ್ತೆ ಅಳಲು ಪ್ರಯತ್ನಿಸುತ್ತಿದ್ದಳು. ಮತ್ತೆ ಬಾಯಿಗೆ ಕೈ. ಈ ಜಗಳ ನಡೆಯುತ್ತಿದ್ದಾಗ, ಕಾಲೇಜು ಮುಗಿಸಿ ಮನೆಗೆ ಮರಳಿದ ಸತೀಶ ಬಾಗಿಲು ತೆರೆದು ಒಳಗೆ ಬಂದಿದ್ದ… “ಏನಾಯಿತು?” ಎಂದು.
“ನೀನೊಬ್ಬ ಯಾಕೆ ಉಳಿದಿದ್ದಿ ಇಲ್ಲಿ ನಿನ್ನ ಆಯಿಯ ಹೆಣ ನೋಡಲು. ನೀನೂ ಓಡಿಹೋಗು… ಯಾರಾದರೂ ಮಲೆಯಾಳಿಯೋ ಸಿಂಧೀಯೋ ಸಿಕ್ಕಿಯಾರು ಮದುವೆಯಾಗಲು. ಅಕ್ಕ ತೋರಿಸಿಕೊಟ್ಟಿದ್ದಾಳಲ್ಲಾ ದಾರಿ…”
”ಇದು ನಿತ್ಯದ್ದೇ ಗೋಳು ಸತೀಶ್. ನಿಮ್ಮನ್ನು ಸರಿಯಾಗಿ ಬೆಳೆಸಿಯೇ ಇಲ್ಲವೆಂತ ನಿನ್ನ ಆಯಿಯ ದೂರು” ಹೀಗೆ ಮಗನಿಗೆ ಸಮಾಧಾನ ಹೇಳಿದ್ದರು ಶ್ರೀಖಂಡೆ…
ಮಣಿ ಅಳುತ್ತಲೇ ಇದ್ದಳು. ಮೊದಲು ಗೊಳೋ ಎಂದು… ಆಮೇಲೆ ಮುಸು ಮುಸು… ಮತ್ತೆ ದೀರ್ಘವಾದ ಕಡಿದು ಕಡಿದು ಬರುತ್ತಿದ್ದ ನಿಟ್ಟುಸಿರಲ್ಲಿ ಮುಕ್ತಾಯ.
ಇದನ್ನು ಓದಿದ್ದೀರಾ?: ರಾಘವೇಂದ್ರ ಖಾಸನೀಸ ಅವರ ಕತೆ | ತಬ್ಬಲಿಗಳು
ಆಗ ಒಂದನ್ನೊಂದು ಬಂಧಿಸಿಕೊಂಡಿದ್ದ ಮೂರು ಜೀವಗಳಿಗೂ ಮಾತು ಬೇಡವಾಗುತ್ತಿತ್ತು. ಅಂಥ ಮೌನ ಪಸರಿಸಿದಾಗ ಶ್ರೀಖಂಡೆ ಮದುವೆಯಾಗಿ ಹೊಸಮನೆಗೆ ಬಂದ ತರುಣದಲ್ಲಿ ಬಾಗಿಲ ಮೇಲ್ಗಡೆಯೆ ಕಟ್ಟಿದ್ದ ಗುಬ್ಬಿ ಗೂಡಿನಲ್ಲಿ ಗುಬ್ಬಿಗಳು ಹೊರಡಿಸುತ್ತಿದ್ದ ಚಿಲಿಪಿಲಿ ಸ್ವರಕ್ಕೆ ಎಂಥ ಮಾಧುರ್ಯ! ಶ್ರೀಖಂಡೆ ಆ ಗುಬ್ಬಿಗಳನ್ನ ಆಸಕ್ತಿಯಿಂದ ನೋಡುತ್ತಿದ್ದರು. ಹಿಂದೆ ಹೊಸ ಸಂಸಾರ ಆರಂಭಿಸಿದಾಗ ಮಣಿಯನ್ನು ಎದೆಯ ಮೇಲೆ ಒರಗಿಸಿಕೊಂಡು ಆ ಗುಬ್ಬಿ ಗೂಡಿನಲ್ಲಿ ಗುಬ್ಬಿಗಳು ಚಿನ್ನಾಟ ಆಡುವ ದೃಶ್ಯ ಇಬ್ಬರೂ ನೋಡಿ ಮುದ್ದಿಟ್ಟು ಕೊಂಡುದಿದೆ. ಪುಟ್ಟ ಪುಟ್ಟ, ಹಾರಲು ರೆಕ್ಕೆ ಕೂಡದ ಮರಿಗಳನ್ನು ತಾಯಿಗುಬ್ಬಿ, ತಂದೆಗುಬ್ಬಿ ಸಾಕಲು ಪಡುತ್ತಿದ್ದ ಪರಿಶ್ರಮ… ಒದಗಿಸುತ್ತಿದ್ದ ಆಹಾರ… ಕೊಡುತ್ತಿದ್ದ ಪೋಷಣೆ.
ಅರ್ಥವಾಗದ ಮೌನ ಮನೆಯನ್ನು ಆವರಿಸಿದಾಗ, ಮೂರು ಜೀವಗಳಿಗೂ ಒಬ್ಬರಿನ್ನೊಬ್ಬರೊಡನೆ ಹೇಗೆ ಸಂಪರ್ಕ ಸಾಧಿಸುವುದೆಂದು ತಿಳಿಯದೆ ಹೋಗುವಾಗ, ಭರ್‍ರನೆ ಗುಬ್ಬಿಯೊಂದು ಮೂವರ ನಡುವಿನಿಂದ ಹಾರಿ ಹೋದುದಿದೆ.
“ಇದೊಂದು ಅನಿಷ್ಟ ಈ ಮನೆಯಲ್ಲಿ. ಕಿತ್ತು ಹೊರಗೆ ಹಾಕಿ ಎಂದರೆ ಅದಕ್ಕೂ ಸಮಯವಿಲ್ಲ. ಆಫೀಸಿನ ನಾತ ತೆಗೆಯುವ ಫೆನಾಯ್ಲ್ ಬಾಟ್ಲಿ ಕೊಳ್ಳಲು ಸಮಯ ಬೇಕಲ್ಲ… ಇರುವ ಸಂಸಾರದ ಸುಖ ನೋಡಿಯಾಯಿತಲ್ಲ… ಇನ್ನು ಗುಬ್ಬಿ ಸಂಸಾರ ಬೇರೆ… ಒಂದು ದಿನ ನಾನೇ ಎತ್ತಿ ಹೊರಗೊಗೆಯುತ್ತೇನೆ…”
“ಏ! ಮಣಿ! ಹುಚ್ಚಿಯೇನು ನೀನು? ಆ ಗುಬ್ಬಿ ಗೂಡಿಗೆ ಕೈ ಹಾಕಿದರೆ ಜೋಕೆ.”
“ಏನು ಮಾಡುತ್ತೀರಿ? ಇನ್ನೇನು ಮಾಡಲು ಉಳಿದಿದೆ! ಕೊಂದು ಹಾಕುತ್ತೀರೇನು. ಹಾಕಿ. ಆಮೇಲೆ ರಗಳೆ ತೀರುತ್ತಲ್ಲ…”
ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ
ಇಂಥ ಬೊಬ್ಬೆಗೆ ಶ್ರೀಖಂಡೆಯ ಉತ್ತರವಿರಲಿಲ್ಲ. ಬೆಳಿಗ್ಗೆ ಆಫೀಸಿಗೆಂದು ಹೊರಡುವಾಗ ಎಂಥ ಅವಸರವಿದ್ದರೂ ಶ್ರೀಖಂಡೆ ಒಂದು ಸಣ್ಣ ತಟ್ಟೆಯಲ್ಲಿ ಹಾಲನ್ನೂ ಕೆಲವು ಅಕ್ಕಿ ಕಾಳುಗಳನ್ನೂ ಆ ಗುಬ್ಬಿ ಗೂಡಿನೊಳಗೆ ತುರುಕಲು ಮರೆಯುತ್ತಿರಲಿಲ್ಲ. ಆರಂಭದ ಉತ್ಸಾಹದ ಕ್ರಿಯೆ ರೂಢಿಯಾಗಿತ್ತು. ಸತೀಶ ಇನ್ನೂ ಮಗುವಿದ್ದಾಗ ಒಂದು ಬೆಳಿಗ್ಗೆ ಮನೆಯಲ್ಲಿ ಹಾಲೇ ಇರಲಿಲ್ಲ. ಆಗ ಆಫೀಸಿಗೆ ಹೊರಡುವಾಗ ಚಡಪಡಿಕೆ, ಅವಸರಗಳಲ್ಲಿ ಏನು ಮಾಡುವುದೆಂದು ತೋಚದೆ “ಮಣೀss” ಎಂದಿದ್ದರು ತುಂಬ ಮೃದುವಾಗಿ… ಆಕೆ ಕಣ್ಣರಳಿಸಿ “ಏನು?” ಎಂದು ನಕ್ಕಾಗ… “ಇವೊತ್ತು ಯಾರಿಗೂ ಹಾಲಿಲ್ಲ… ಆದರೆ ಗುಬ್ಬಿಗೂ ಉಪವಾಸ ಬೇಡ… ನಿನ್ನ ಮೊಲೆಯ ಹಾಲೆ ಸ್ವಲ್ಪ ಕೊಡುತ್ತೀಯಾ?” ಎಂದಿದ್ದರು ಅಂಗಲಾಚಿ ಬೇಡುವವರಂತೆ.
ಅಂದು ಗುಬ್ಬಿಗಳಿಗೆ ದೊರಕಿದ್ದು ಮೊಲೆ ಹಾಲು.
ಸಿಟ್ಟಿನಿಂದ ಕೆಂಡವಾಗಿದ್ದ ತಾಯಿ, ಮಾತನಾಡದ ತಂದೆ, ಇವರೊಡನೆ ಮಾತಿನ ಸಂಪರ್ಕ ಅಸಾಧ್ಯವೆನಿಸಿ ಸತೀಶ ಬಂದವನೇ ಪುನಃ ಹೊರಡುತ್ತಿದ್ದ…
“ಎಲ್ಲಿಗೋ?”
“ಫ್ರೆಂಡಿನ ಮನೆಗೆ…”
“ಯಾರೋ ಆ ಫ್ರೆಂಡು? ಹುಡುಗನೋ, ಹುಡುಗಿಯೋ!” ಇನ್ನೂ ಅಳುತ್ತಿದ್ದಂತೆಯೇ ಮಣಿಯ ಮಾತು… ಆದರೆ ಸತೀಶ ಉತ್ತರ ಹೇಳಿರಲಿಲ್ಲ. ಹೊರಟೇ ಹೋಗಿದ್ದ. ಆಗ ಶ್ರೀಖಂಡೆಗೆ ತನಗೂ ಕೋಟು ಹುಡುಕುವ ಆಸೆಯಾಗಿತ್ತು.
”ನೀವೂ ಹೊರಟಿರೇನು?”
ಆಗಲೂ ಮಾತಿಲ್ಲ… “ಹೋಗಿ… ಹೋಗಿ… ಎಲ್ಲಾ ಹೋಗಿ… ನಾನೊಬ್ಬಳೆ ಇದ್ದೇನಲ್ಲಾ ಇಲ್ಲೇ… ಇರಬೇಕಾಗಿದೆಯಲ್ಲಾ ಈ ಗುಬ್ಬಿಗಳ ಹೇಲು ಬಾಚಲು.”
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಶ್ರೀಖಂಡೆ ಯಾವ ಮಾತೂ ಆಡದೆ ಕೋಟು ಸಿಕ್ಕಿಸಿಕೊಂಡು ಹೊರಟೇಬಿಟ್ಟಿದ್ದರು… ಮಾಳಿಗೆಯ ಮೆಟ್ಟಿಲಿಳಿಯುವಾಗ, ಕೈ ಕೋಟಿನ ಕಿಸೆಯೊಳಗೆ ಹೋದಾಗ, ಅಲ್ಲಿದ್ದ ಕಾಗದದ ಪೊಟ್ಟಣ ಗಮನಕ್ಕೆ ಬಂದಿತ್ತು… ದಿನಕ್ಕೊಂದು ಪೊಟ್ಟಣ ಬೇಕಾಗುತ್ತಿತ್ತು. ಅಕ್ಕಿ, ಕಾಳು, ಬೇಳೆ. ಎಲ್ಲಾದರೂ ಮರೆತರೆ ತೊಂದರೆಯಾಗಬಹುದೆಂದು ಎರಡು ಪೊಟ್ಟಣಗಳನ್ನು ಯಾವಾಗಲೂ ಕೋಟಿನ ಕಿಸೆಯೊಳಗೆ ಇರಿಸುವುದು ರೂಢಿ… ಆಫೀಸಿನ ಪಾರಿವಾಳಗಳಿಗಾಗಿ…
ಅವುಗಳಿಗೆ ಕಾಳಿಕ್ಕಲು ದೊರಕುತ್ತಿದ್ದುದು ಬರೇ ಎರಡು ಮೂರು ಮಿನಿಟುಗಳ ಅವಕಾಶ. ಅದರದು ಅತ್ಯಂತ ಪ್ರಿಯವಾದ ಕೆಲಸ.
ಬೆಳಗಿನ ಉಸ್ತುವಾರಿಯ ಕೆಲಸವೆಲ್ಲ ಮುಗಿದು ಆಫೀಸಿನಲ್ಲಿ ದುಡಿಮೆಯ ದಿನ ಆರಂಭವಾದ ಮೇಲೆ ಎರಡು ಕ್ಷಣ ತನಗೆ ವಿರಾಮವೆಂದು ಶ್ರೀಖಂಡೆ ಟೆಲಿಫೋನ್ ಆಪರೇಟರ್ ಮೇರಿ ಇದ್ದಲ್ಲಿಗೆ ಧಾವಿಸುತ್ತಾರೆ ತನ್ನ ಬೆಳಗಿನ ಚಹಾದ ಕಪ್ ಹಿಡಿದುಕೊಂಡೆ. ಮೇರಿ ಆಗಲೇ ಬಂದು ‘ಬೋರ್ಡ್’ನ ಗುಂಡಿಗಳ ಮೇಲೆ ಕೈ ಆಡಿಸುತ್ತಿರುತ್ತಾಳೆ. ದಿನದ ಆರಂಭದ ಒಂದು ಗಂಟೆ ಆಕೆಗೆ ಅತ್ಯಂತ ಅವಸರದ ಕಾಲ. ಆದರೂ ಎಸ್ಸೆಸ್ (ಶ್ರೀಧರ ಶ್ರೀಖಂಡೆ) ಬಂದಾಗ ಅವಳ ಮುಖದಲ್ಲಿ ನಗು ಅರಳದೆ ಇಲ್ಲ. ಹಾಗೆ ನೋಡಿದರೆ ಅವಳ ಮುಖದಲ್ಲಿ ನಗು ಮಾಸುವುದೆಂದೇ ಇಲ್ಲ. ಅವಳ ನಯವಾದ ದನಿಯಲ್ಲಿ ಸೀಳಿನ ಛಾಯೆ ಕೂಡ ಯಾವಾಗಲೂ ಕಾಣಿಸುವುದಿಲ್ಲ.
ಆಕೆ ‘ಹಲ್ಲೋ!’ ಎನ್ನುವಾಗ, ತಾನು ಅವಳಿಗಾಗಿಯೂ ತಂದ ಚಹಾದ ಕಪ್ ಆಕೆ ಎತ್ತಿಕೊಂಡು ”ಓ ಥ್ಯಾಂಕ್ಯೂ…” ಎನ್ನುವಾಗ ಅವಳ ನಗುಮುಖವನ್ನೇ ನೋಡುತ್ತಿರಬೇಕು ಎಂದು ಕಾಣುವುದಿದೆ. ‘ಬೋರ್ಡ್’ನಿಂದ ಬಿಡುಗಡೆ ದೊರಕಿದ ಎರಡು ಕ್ಷಣವಾದರೂ ತನ್ನ ಸ್ಕರ್ಟ್‌ನ ಮಡಿಕೆಗಳನ್ನು ನೇವರಿಸಿ ಆಕೆ ಮೈಚಾಚಿ ಕುರ್ಚಿಯ ಬೆನ್ನಿಗೊರಗಿ ಶ್ರೀಖಂಡೆಯನ್ನು ನೋಡುವಾಗ, ಆಕೆಯ ತುಂಬಿದ ಎದೆಯ ನಡುವಣ ಸೀಳಿನಲ್ಲಿ ಮಲಗಿರುವ ಪುಟ್ಟ ಚಿನ್ನದ ಶಿಲುಬೆ ಕೂಡ ನಗುವಂತೆ ಭಾಸವಾಗುತ್ತಿತ್ತು. ಅದು ಶ್ರೀಖಂಡೆಗೆ ಧನ್ಯತೆಯ ಕ್ಷಣ.
ಆದರೆ ಒಮ್ಮೊಮ್ಮೆ ದಿನವಿಡೀ ಆಫೀಸಿನಲ್ಲಿ ಸುತ್ತಾಡಿ ದಣಿದು, ಜೀವ ಸೋಲುತ್ತಿದ್ದಾಗ, ಭಾರವಾದ ಕಾಲುಗಳನ್ನೆಳೆದುಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಗ “ಈ ನರಕಕ್ಕೆಂದು ಕೊನೆ?” ಎಂದು ತೋರುತ್ತಿದ್ದುದೂ ಇದೆ. ‘ಎಸ್ಸೆಸ್ ಹೀಗೆ ಮಾಡು, ಎಸ್ಸೆಸ್ ಹಾಗೆ ಮಾಡು’ ಎಂದು ಸಾವಿರ ಕೆಲಸಗಳ ಸುಳಿಯಲ್ಲಿ ತನ್ನನ್ನು ಹಿಂಡುತ್ತಿದ್ದ ದುಡಿಮೆಯ ತಾಣಕ್ಕೆ ಯಾರಾದರೂ ಬೆಂಕಿ ಕೊಟ್ಟಿದ್ದರೆ ನಾಲ್ಕು ದಿನ ಕ್ಷೇಮ ಎನಿಸಿದ್ದೂ ಇದೆ. ಆದರದು ಯೋಚನೆ ಮಾತ್ರ. ಅಂಥ ಯೋಚನೆ ಬಂದ ಗಳಿಗೆಯಲ್ಲಿ ಗೂಡುಕಟ್ಟಿದ್ದ ಪಾರಿವಾಳಗಳು ನೆನಪಾಗುತ್ತವೆ. ಟೆಲಿಫೋನ್ ಬೋರ್ಡ್ ಮುಂದೆ ನಗುತ್ತಾ ಕುಳಿತಿರುವ ಮೇರಿ ನೆನಪಾಗುತ್ತಾಳೆ… ಆಗ… ಶುಭಾ ಕೂಡ ನೆನಪಾಗುತ್ತಾಳೆ.
ಇದನ್ನು ಓದಿದ್ದೀರಾ?: ಕ.ವೆಂ. ರಾಜಗೋಪಾಲ ಅವರ ಕತೆ | ಅನಾಥ ಮೇಷ್ಟರ ಸ್ವಗತ ಸಂಪ್ರದಾಯ
ಶುಭಾ ಮನೆ ಬಿಟ್ಟು ಹೊರಟುಹೋದ ಮೇಲಂತೂ, ಆಫೀಸಿಗೆ ಬೆಂಕಿ ಬೀಳುವ ಪ್ರಶ್ನೆಯೇ ಇರಲಿಲ್ಲ. ಮನೆಯನ್ನೂ, ಮಣಿಯನ್ನೂ ಮರೆಯಲು ಆಫೀಸಿಗಿಂತ ಪ್ರಶಸ್ತವಾದ ಜಾಗ ಬೇರೊಂದಿಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಗಟ್ಟಿಯಾಗುತ್ತಲೇ ಬಂದಿದೆ. ಆ ಕಾರಣವೇ ಪಾರಿವಾಳಗಳಿಗೆ ಕಾಳು ತಿನಿಸುವಾಗಲೆಲ್ಲ, ಯುದ್ಧನೌಕೆಗಳನ್ನು ನೋಡುವಾಗಲೆಲ್ಲ ಮೊಮ್ಮಗ ಪಪ್ಪು ಕಾಣಿಸಿಕೊಳ್ಳುತ್ತಾನೆ. ‘ಎಂ.ಡಿ.’ಯ ಕೋಣೆಯ ಕಿರುಬಾಲ್ಕನಿಯ ದಂಡೆಯ ಮೇಲೆ ತನ್ನ ಜತೆಗೇ ನಿಂತು ಆತ ತೆರೆದ ಕಣ್ಣುಗಳಿಂದ ಸಮುದ್ರವನ್ನು ನೋಡುತ್ತಿರುತ್ತಾನೆ. “ವಿಕ್ರಾಂತ್ ನೋಡಿದೆಯೇನು ಪಪ್ಪು! ವಿಮಾನಗಳನ್ನು ತನ್ನ ಹೊಟ್ಟೆಯೊಳಗೆ ಇರಿಸಿಕೊಂಡಿರುವ ಹಡಗು ಅದು… ಹೋಗೋಣವೇ ಅಲ್ಲಿಗೇ?” ಎಂದಾಗ ಪಪ್ಪು ‘ಆಜೋಬಾ, ಅಜೋಬಾ’ ಎಂದು ಕೂಗಿಕೊಂಡು ತನ್ನ ಹೆಗಲನ್ನೇರುತ್ತಾನೆ. ಬಕ್ಕತಲೆಯ ಮೇಲೆ ಕೈಯಾಡಿಸುತ್ತಾನೆ… ಆಗ ಪಾರಿವಾಳಗಳು ತನ್ನ ಹೆಗಲ ಮೇಲೆ ಕುಪ್ಪಳಿಸುವಂತೆಯೇ ಆತನ ಹೆಗಲ ಮೇಲೂ ಕುಪ್ಪಳಿಸಿ ಹಾರುತ್ತವೆ. ಆತ ಕೇಕೆ ಹಾಕಿ ನಗುತ್ತಾನೆ.
ಆದರೆ ಪಪ್ಪುವನ್ನು ಆಫೀಸಿಗೆ ಕರೆದು ತರುವುದು ಸಾಧ್ಯವೇ ಆಗಿರಲಿಲ್ಲ. ಮನೆಗೆ ಕರೆದುತರುವುದೇ ಸಾಧ್ಯವಾಗಿರಲಿಲ್ಲ. ತಾನು ಮಾತ್ರ ಆಗೊಮ್ಮೆ ಈಗೊಮ್ಮೆ ಯಾವುದಾದರೊಂದು ರಜಾದಿನ, ಆಫೀಸಿನಲ್ಲಿ ಕೆಲಸವಿದೆ ಎಂದು ಸುಳ್ಳು ಹೇಳಿ ಬೋರಿವಲಿಯ ತನಕ ಪ್ರವಾಸ ಬೆಳೆಸಿ ಮಗುವನ್ನು ನೋಡಿ ಬಂದರೂ ಆ ವಿಚಾರ ಮಣಿಗೆ ಹೇಳುವಂತಿರಲಿಲ್ಲ. ಎಷ್ಟೆಲ್ಲ ರಮಿಸಿ, ರಮಿಸಿ “ಮರೆತುಬಿಡು ಮಣಿ… ಶುಭಾ ನಮ್ಮ ಮಗುವೇ… ಏನು ಮಾಡಿದರೂ ನಮ್ಮ ಮಗುವೇ. ಎಷ್ಟು ವರ್ಷ ಈ ದ್ವೇಷ ಸಾಧಿಸಲು ಸಾಧ್ಯ… ನೀನು ಕರೆದರೆ ಓಡಿಬರುತ್ತಾಳೆ… ಬರಲಿ… ಮಗುವನ್ನೂ ನೋಡುವುದು ಬೇಡವೆ! ನಮಗಿರುವ ಒಬ್ಬನೇ ಮೊಮ್ಮಗ… ಅವನನ್ನು ನೋಡುವುದು ಬೇಡವೇ” ಎಂದಾಗ,
“ನಕೋ (ಬೇಡ)” ಎಂದೇ ಬರುತ್ತಿತ್ತು ಉತ್ತರ… “ಆ ರಂಡೆ ಈ ಮನೆಗೆ ಕಾಲಿಡುವುದೇ ಬೇಡ ನಾನು ಸಾಯುವ ತನಕ. ಅವಳು ಬೇಡವೆಂದಾದ ಮೇಲೆ ಅವಳ ಮಗನೂ ಬೇಡ. ನಾನು ಸತ್ತ ಮೇಲೆ ನೀವೇ ಅವಳನ್ನು ಕರೆದು ತಂದು ಪೂಜೆ ಮಾಡಿ…”
ಪಪ್ಪು ಬೆಳೆಯುತ್ತಲೇ ಇದ್ದ.
ಇದನ್ನು ಓದಿದ್ದೀರಾ?: ಕೆ.ವಿ. ತಿರುಮಲೇಶ್ ಅವರ ಕತೆ | ನೆಳಲೆಮಠದ ಶ್ರೀಗಳು
ಒಮ್ಮೊಮ್ಮೆ, ಮನೆಯಲ್ಲಿ ಮಣಿ ನವೆಯುತ್ತಿದ್ದುದನ್ನು ನೋಡುತ್ತಿದ್ದಾಗ ತನಗೂ ಸಂಕಟವಾಗುತ್ತಿತ್ತು. ಶುಭಾ ಹೊರಟೇ ಹೋದಳೆಂದು ಮಣಿ ಮಂಗಳಗೌರಿ ನಿಲ್ಲಿಸಿರಲಿಲ್ಲ. ‘ಗುಡಿಪಾಡವಾ’ಕ್ಕೆ ತೊಳೆದ ಚೊಂಬು, ಜರಿಯ ಪಟ್ಟೆ ಕೋಲಿಗೆ ಸಿಕ್ಕಿಸಿ ಝಂಡಾ ಹಾರಿಸಲು ಮರೆಯುತ್ತಿರಲಿಲ್ಲ. ದೀಪಾವಳಿಗೆ ಗೂಡುದೀಪ ಉರಿಸುವುದನ್ನು ನಿಲ್ಲಿಸಿರಲಿಲ್ಲ. ಗಣೇಶನ ಹಬ್ಬಕ್ಕೆ ಗಣಪತಿಯ ಆರತಿಯಾಗುತ್ತಿದ್ದಾಗ ಒಬ್ಬಳೇ ಕೈಕಟ್ಟಿ ಆರತಿಯ ಹಾಡು ಹಾಡಲು ಅನುಮಾನಿಸುತ್ತಿರಲಿಲ್ಲ. ಆಗ ಸಂಕಟವಾಗುತ್ತಿತ್ತು. ಆಕೆಯ ಕರ್ಕಶದನಿ, ಪೂಜೆಯ ಗಂಟೆ, ಬೆಳಗುವ ಆರತಿ, ಪ್ರಸಾದದ ತಟ್ಟೆ ಯಾವುದೂ ಹೊಂದಿಕೊಳ್ಳುತ್ತಿರಲಿಲ್ಲವೆಂದೆ ಭಾಸವಾಗುತ್ತಿತ್ತು… ಅಂಥ ಹೊತ್ತಿನಲ್ಲಿ ಸತೀಶನೂ ಏನಾದರೂ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ… ಮನೆಯಲ್ಲಿರುತ್ತಿದ್ದುದೆಂದೇ ಇಲ್ಲ.
ಪಪ್ಪು, ಶುಭಾ, ಇಂಥ ಸಂದರ್ಭಗಳಲ್ಲಿ ಮನೆಯಲ್ಲಿ ಇರುವಂತಿದ್ದರೆ!
“ಮಗು ಇಲ್ಲಿರುವಂತಿದ್ದರೆ ಸಂತೋಷಪಡುತ್ತಿತ್ತು” ಎಂದು ಅಪ್ಪಿ ತಪ್ಪಿ ಹೇಳಿದಾಗ ಮಣಿ ಕೆಂಡವಾಗುತಿದ್ದಳು ಸಿಟ್ಟಿನಿಂದ… ”ಪುನಃ ಆ ರಂಡೆಯ ನೆನಪಾಯಿತೆ. ನನ್ನ ಮಗಳು ಎಂದೋ ಸತ್ತಿದ್ದಾಳೆ… ಅವಳ ಮಗುವಿನ ಸುದ್ದಿ ಯಾಕೆ ಈಗ?”
”ಚುಕ್‌ಲೋ ಮೀ (ತಪ್ಪಿದೆ)” ಎನ್ನುತ್ತಿದ್ದರು ಶ್ರೀಖಂಡೆ. ಯಾವ ಕಾಲಕ್ಕೂ ಅವರು ಶುಭಾ ಏನು ಯೋಚಿಸುತ್ತಿರಬಹುದು ಎಂದು ಚಿಂತಿಸಿಯೇ ಇಲ್ಲ. ಆಕೆ ಅಂಥ ಯೋಚನೆ ತನಗೆ ಬರುತ್ತಿದೆಯೆಂದು ತೋರಿಸಿಯೂ ಇರಲಿಲ್ಲ… ಅಪರೂಪಕ್ಕೊಮ್ಮೆ ಬೋರಿವಲಿ ಸಂದರ್ಶಿಸಿದಾಗ ಮಗಳಿಂದ ”ಆಯಿ ಹೇಗಿದ್ದಾಳೆ?” ಎಂಬ ಪ್ರಶ್ನೆ ಬರುತ್ತಿದ್ದಿಲ್ಲವೆಂದಲ್ಲ. ಅದಕ್ಕೆ ತಾನು ಕೊಡುತ್ತಿದ್ದ ಉತ್ತರವೂ ಮನಸ್ಸಿನ ಆಳಕ್ಕಿಳಿಯುತ್ತಿದ್ದಿಲ್ಲ… ”ಇದ್ದಾಳೆ ಹಾಗೆ… ಅವಳಲ್ಲೇನು ಬದಲಾವಣೆ ಸಾಧ್ಯ?”
ಪಪ್ಪು ಹುಟ್ಟಿದ ಮೇಲೆ ಕಡಿದ ಕೊಂಡಿ ಮತ್ತೆ ಬೆಸೆದುಕೊಳ್ಳಬಹುದು ಎಂಬ ಆಸೆಯಿತ್ತು ನಿಜ…, ಆದರೆ ಆ ಆಸೆ ಮಸಿಯಾಯಿತು. ಪಪ್ಪು ಅಜ್ಜಿಯನ್ನು, ಅಜ್ಜಿ ಪಪ್ಪುವನ್ನು ನೋಡಲೇ ಇಲ್ಲ. ಶುಭಾ ತಪ್ಪಿ ಕೂಡ ಪೋರ್ತುಗೀಸ್ ಚರ್ಚ್‌ನ ಬಳಿ ಸುಳಿದಾಡಲೇ ಇಲ್ಲ. ಯಾವುದೂ ಹೊಂದಿಕೊಳ್ಳುವುದಿಲ್ಲವೆಂದಾದ ಮೇಲೆ ಯೋಚನೆ ಮಾಡಿ ಫಲವೇನು ಎಂಬ ನಿರಾಶೆಯ ಬೆನ್ನಲ್ಲೇ ಆಫೀಸಿನ ಬಂಧ ಇನ್ನಷ್ಟು ಬಿಗಿಯಾಗುತ್ತಿತ್ತು… ಅದರಲ್ಲೇ ಸುಖ.
ಪಾರಿವಾಳಗಳ ಹಿಕ್ಕೆ ‘ಎಂ.ಡಿ.’ಯ ಕೋಣೆಯ ಬಾಲ್ಕನಿಯ ದಂಡೆಯನ್ನು ಅಂದಗೆಡಿಸುತ್ತಿದ್ದುದನ್ನು ದಿನವೂ ನೋಡುತ್ತಿದ್ದ ಶ್ರೀಖಂಡೆ ಈ ಪಾರಿವಾಳಗಳಿಗೆಲ್ಲ ಬೇರೊಂದೇ ಗೂಡು ಕಟ್ಟಿ ಅವುಗಳು ಅಲ್ಲೇ ಹಿಕ್ಕೆ ಹಾಕುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಯೋಚಿಸಿದುದಿದೆ. “ನೋಡು ಮೇರೀ” ಎಂದಿದ್ದರು ಮೇರಿಯೊಡನೆ ಆತ್ಮೀಯವಾಗಿ ಮಾತನಾಡುತ್ತಿದ್ದ ಒಂದು ಬೆಳಿಗ್ಗೆ… “ನಾನು ಮನೆಯಲ್ಲಿ ಗುಬ್ಬಿಗಳಿಗಾಗಿ ಗೂಡು ಕಟ್ಟಿದ್ದೇನೆ- ಮದುವೆಯಾಗಿ ಮನೆ ಮಾಡಿದ ಸಂದರ್ಭದಲ್ಲೆ. ಇಲ್ಲಿ ಪಾರಿವಾಳಗಳು ತಾವಾಗಿಯೇ ಬಂದಿವೆ. ನನಗಿನ್ನೂ ಎಂಟು ವರ್ಷ ನಿವೃತ್ತಿಗೆ… ಆದರೆ ಹೋಗುವ ಮೊದಲು ಅವುಗಳಿಗೆ ದೊಡ್ಡದೊಂದು ಗೂಡುಕಟ್ಟಿ ಹೋಗಬೇಕು. ‘ಎಂ.ಡಿ.’ಯ ಕೋಣೆಯ ಬದಿ ಬೇಡ… ಬೇರೆಯೇ ಪ್ರಶಸ್ತವಾದ ಜಾಗ ಹುಡುಕಿ… ಯಾರಿಗೂ ತೊಂದರೆ ಆಗದಲ್ಲಿ…”
ಇದನ್ನು ಓದಿದ್ದೀರಾ?: ಗಿರಡ್ಡಿ ಗೋವಿಂದರಾಜ ಅವರ ಕತೆ | ನಮ್ಮೂರಿನಲ್ಲೊಬ್ಬ ತಲಾಠಿ
“ಎಂಥ ಮುಗ್ಧ ಆಸಾಮಿ ನೀವು ಶ್ರೀಖಂಡೆ! ನೀವು ಕರೆದಲ್ಲಿಗೆ ಬರುವ ಪಾರಿವಾಳಗಳೇನು ಅವು?… ಅಷ್ಟೇ ಅಲ್ಲದೆ ಈ ಆಫೀಸಿನ ಜಂಜಾಟ ಮುಗಿಸಿ ಮನೆಗೆ ಮರಳಿ ಆರಾಮದ ನಿವೃತ್ತಿ ಜೀವನವನ್ನು ಮಕ್ಕಳು ಮೊಮ್ಮಕ್ಕಳ ಜತೆಗೆ ನಡೆಸುವ ಸಂದರ್ಭದಲ್ಲಿ ಪಾರಿವಾಳಗಳ ಚಿಂತೆ ಯಾಕೆ?”
ಮಕ್ಕಳು, ಮೊಮ್ಮಕ್ಕಳೊಂದಿಗೆ! ಶುಭಾ, ಪಪ್ಪು ಒಂದಲ್ಲ ಒಂದು ದಿನ ಮನೆಗೆ ಮರಳಬಹುದೆ! ‘ಎಂ.ಡಿ.’ಯ ಕೋಣೆಯ ಬಳಿ ಕಾಣುವ ಸಮುದ್ರದಲ್ಲಿ ದಿಗಂತವನ್ನು ಗುರುತಿಸುವಂತೆ, ಭವಿಷ್ಯತ್ತಿನ ಗರ್ಭದಲ್ಲಿ ಆಸೆಯ ಕುಡಿಯನ್ನು ಹುಡುಕುವುದು ಸಾಧ್ಯವಿಲ್ಲವೆ? ಸತೀಶನೂ ಕಾಲೇಜು ಮುಗಿಸಿ, ಕೆಲಸ ಸಿಕ್ಕಿತೆಂದು ದುಬಾಯ್‌ಗೆ ಓಡಿದ್ದಾನೆ. ಮುಂದೊಂದು ದಿನ ಮದುವೆ ಮಾಡಿಕೊಂಡು ಸಂಸಾರಿಯಾಗುತ್ತಾನೆ. ಆಗ ಇನ್ನೊಂದು ಮಗು ಮನೆಗೆ ಬರುವಾಗ ಮಣಿ ಬದಲಾಗಲೂಬಹುದು. ಪಪ್ಪುವನ್ನು ಕರೆಯಲೂಬಹುದು. ಶುಭಾ ಜೊತೆಗಿರದೆ ಸತೀಶನ ಮದುವೆ ಸಾಧ್ಯವಾಗದೆಂದು ಮನಸ್ಸು ಬದಲಿಸಲೂಬಹುದು.
“ಮೇರೀsss ಒಂದು ಮಗುವಿನ ಕತೆ ಏನೆಂದು ನಿನಗೆ ಹೇಳಿದ್ದೇನೆ. ಪಪ್ಪು ನಮ್ಮ ಮನೆಗೆ ಬಂದೇ ಇಲ್ಲ. ಇನ್ನೊಂದು ಮಗುವಿನ ಬಗ್ಗೆ ಆಸೆಯಿರಿಸಿಕೊಂಡಿರುವುದು ಸರಿಯೇ?” ಮಾತು ಹೊರಟಿದ್ದು ಹೀಗೆ…
“ಜೀವನ ಒಂದೇ ರೀತಿ ಇರುವುದಿಲ್ಲ ಎಸ್ಸೆಸ್… ನಿಮ್ಮ ಹೆಂಡತಿಯ ಮನಸ್ಸು ಯಾವ ಕಾಲಕ್ಕೂ ಬದಲಾಗಬಹುದು… ಹೆತ್ತಕರುಳಲ್ಲವೆ ಅದು! ಒಂದಲ್ಲ ಒಂದು ದಿನ ಅವರು ಸರಿಹೋಗುತ್ತಾರೆ… ಮಗಳನ್ನು ಮನೆಗೆ ಕರೆಸಿಕೊಳ್ಳುತ್ತಾರೆ… ಮೊಮ್ಮಗನನ್ನು ನೋಡಿ ಎಲ್ಲ ಮರೆಯುತ್ತಾರೆ… ಕಡಿದ ಸಂಬಂಧ ಮತ್ತೆ ಬೆಸೆದುಕೊಳ್ಳುತ್ತದೆ. ಜೀವನ ಮುಂದುವರಿಸುತ್ತದೆ… ಶ್ರೀಖಂಡೆ ಆಫೀಸನ್ನೆ ಮರೆತು ಮೊಮ್ಮಕ್ಕಳೊಂದಿಗೆ…!”
ಮೇರಿ ಹಾಗೆ ಹೇಳಿದಾಗ ಶ್ರೀಖಂಡೆ ಅವಳನ್ನೆ ಎವೆ ಇಕ್ಕದೆ ನೋಡಿದ್ದರು… ತನ್ನ ಕೈಯನ್ನು ಮೇರಿಯ ಭುಜದ ಮೇಲಿರಿಸಿ “ಮೇರೀ…” ಎಂದಿದ್ದರು ಮೃದುವಾಗಿ… “ನೀನು ಬಹಳ ಒಳ್ಳೆಯ ಹುಡುಗಿ…”
ಆಗ ಮೇರಿ ನಕ್ಕಿದ್ದಳು. “ಇರಲಿ ಎಸ್ಸೆಸ್… ಹೊಸ ಎಂ.ಡಿ. ಬರುತ್ತಾರಂತೆ ಇನ್ನೊಂದು ವಾರದಲ್ಲಿ, ಆಫೀಸಿನ ತುಂಬಾ ಅದೇ ಸುದ್ದಿ. ಏನೆಲ್ಲ ಬದಲಾವಣೆ ಇದೆಯೋ!”
ಇದನ್ನು ಓದಿದ್ದೀರಾ?: ಜಿ.ಎಸ್. ಸದಾಶಿವ ಅವರ ಕತೆ | ಮೀಸೆಯವರು
“ಮೂರು ‘ಎಂ.ಡಿ.’ಗಳನ್ನು ಈ ತನಕ ನಾನು ಕಂಡಿದ್ದೇನೆ ಮೇರೀ… ನಾಲ್ಕನೆಯವರೇನು ಹೆಚ್ಚೆ! ಯಾರೇ ಬರಲಿ, ಯಾರೇ ಹೋಗಲಿ, ಆಫೀಸಿನ ವ್ಯವಸ್ಥೆ ಅದೇ ರೀತಿ ಮುಂದುವರಿಯುತ್ತದೆ- ಶ್ರೀಖಂಡೆಯ ಕೆಲಸವೂ ಅದೇ ರೀತಿ ಮುಂದುವರಿಯುತ್ತದೆ. ಶ್ರೀಖಂಡೆ ರಿಟೈರ್ ಆಗುವ ತನಕ… ಅಥವಾ ಗೋತಾ ಹೊಡೆಯುವ ತನಕ, ವಿಚೆವರ್ ಈಸ್ ಅರ್ಲಿಯರ್” ಎಂದಿದ್ದರು ಶ್ರೀಖಂಡೆ ತನ್ನ ಜಾಣ ಮಾತಿನ ಬಗ್ಗೆ ತಾನೇ ನಗುತ್ತಾ.
”ಅದು ನಿಜ ಎಸ್ಸೆಸ್! ಯಾರೇ ಬರಲಿ, ಈ ಆಫೀಸಿನ ದಿನನಿತ್ಯದ ವ್ಯವಹಾರ ಮುಂದುವರಿಯಲು ನೀವಿರದೆ ಹೇಗೆ ಸಾಧ್ಯ! ಇಲ್ಲಿ ಏನು ಬೇಕಾದರೂ ನೀವು ಬೇಕು… ಏನು ಆಗುವುದಿದ್ದರೂ ನೀವಿರಬೇಕು…”
ತನ್ನ ಇಪ್ಪತ್ತೆರಡು ವರ್ಷಗಳ ದುಡಿಮೆಯ ಅವಧಿಯಲ್ಲಿ ಮೂರು ವರಿಷ್ಠಾಧಿಕಾರಿಗಳು ಬದಲಾದುದನ್ನು ಶ್ರೀಖಂಡೆ ಕಂಡಿದ್ದರು. ಕಂಪೆನಿಯ ಅತ್ಯನ್ನತಾಧಿಕಾರಿ ಆಫೀಸಿನ ಇಡಿಯ ವ್ಯವಸ್ಥೆಗೊಳಪಟ್ಟಿರುವ ದೈತ್ಯ ಶಕ್ತಿಯನ್ನು ನಿಯಂತ್ರಿಸುವ ಕೀಲಿಕೈ ಇದ್ದಂತೆ… ಹೊಸ ‘ಎಂ.ಡಿ.’ ಬರುವಾಗ ಹೊಸ ಭಯಗಳು ಹುಟ್ಟಿಕೊಳ್ಳುತ್ತವೆ. ಎಂಥ ಪ್ರಭಾವಿ ವ್ಯಕ್ತಿತ್ವಕ್ಕೆ ತಲೆಬಾಗುವ ಪ್ರಸಂಗ ಬರಬಹುದು ಎಂಬ ಆತಂಕ ಮನಸ್ಸಿನೊಳಗೆ ಸುಳಿಯುತ್ತದೆ. ರೂಢಿಸಿಕೊಂಡ ವ್ಯವಸ್ಥೆಯನ್ನು ಬದಲಿಸಿ ಹೊಸ ಸನ್ನಿವೇಶ, ಹೊಸ ಪ್ರಭಾವಗಳಿಗೆ ಬಾಗಬೇಕಾಗಬಹುದೇ ಎಂಬ ಸಂದೇಹ ಗಲಿಬಿಲಿಯನ್ನುಂಟುಮಾಡುತ್ತದೆ.
ಆದರೆ ಶ್ರೀಖಂಡೆ ಕಂಡ ಮೂರು ‘ಎಂ.ಡಿ.’ಗಳೂ ಬಹಳ ಸುಲಭವಾಗಿಯೇ ಆಫೀಸಿನ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಹೊಸತಿನಲ್ಲಿ, ಹೊಸ ಆವರಣದಲ್ಲಿ ಕೆಲಸ ಆರಂಭಿಸುವಾಗ ತಮ್ಮ ‘ಬೇಕು-ಬೇಡ’ಗಳಿಗಾಗಿ ಶ್ರೀಖಂಡೆಯನ್ನೇ ಮೊರೆ ಹೋಗಿದ್ದರು. ಶ್ರೀಖಂಡೆ ನಿರುಪದ್ರವಿ, ಆದರೆ ಉಪಯುಕ್ತ ಪ್ರಾಣಿಯೆಂದು ಮನವರಿಕೆಯಾದ ಮೇಲೆ, ಅಧಿಕಾರದ ಮುಖವಾಡ ಧರಿಸಿದಾಗಲೂ ಪರಿಚಯದ ಸಲುಗೆ ತೋರುವ ನಗುವನ್ನು ಮಿಂಚಿಸುವಷ್ಟು ಆತ್ಮೀಯತೆಯನ್ನು ಪ್ರದರ್ಶಿಸಿದ್ದರು. ಆ ಕಾರಣ ಮೇರಿ “ಶ್ರೀಖಂಡೆ! ಇಲ್ಲಿ ಏನು ಬೇಕಾದರೂ ನೀವು ಬೇಕು” ಎಂದಾಗ ಶ್ರೀಖಂಡೆಗೆ ಆಶ್ಚರ್ಯವಾಗಿರಲಿಲ್ಲ.
ಒಂದು ವಾರದಿಂದಲೂ ಹೊಸ ‘ಎಂ.ಡಿ.’ಯ ಸ್ವಾಗತದ ಸಿದ್ಧತೆ ನಡೆದಿತ್ತು. ಕೋಣೆಗೆ ಬಣ್ಣ, ಮೇಜಿಗೆ ಪಾಲಿಶ್, ಕುರ್ಚಿ, ಸೋಫಾಗಳಿಗೆ ಹೊಸ ಹೊದಿಕೆ, ವ್ಯವಸ್ಥೆಯನ್ನು ಬದಲಿಸದೇನೇ ಹೊಸ ಒಪ್ಪಕೊಟ್ಟು ಹೊಸ ವರಿಷ್ಠಾಧಿಕಾರಿಯನ್ನು ಸ್ವಾಗತಿಸುವ ಸಡಗರದಲ್ಲಿ ಶ್ರೀಖಂಡೆಗೆ ಬಿಡುವೇ ಇರುತ್ತಿರಲಿಲ್ಲ. ಮೇರಿಯೊಡನೆ ಚಹಾ ಕುಡಿಯುತ್ತ ಮಾತನಾಡುವ ಬೆಳಗಿನ ಕೆಲವು ನಿಮಿಷಗಳ ಅವಕಾಶ ಬಿಟ್ಟರೆ ಅವರು ದಿನವಿಡೀ ಓಡಾಟದಲ್ಲೇ ಇರುತ್ತಾರೆ. ಕೆಲಸದಲ್ಲಿ ದೊರಕುವ ತನ್ಮಯತೆಯಲ್ಲಿ ಮಣಿಯನ್ನು ಮರೆಯುವುದು ಸಾಧ್ಯವಾಗುತ್ತದೆ; ಮನೆಯನ್ನು ಮರೆಯುವುದು ಸಾಧ್ಯವಾಗುತ್ತದೆ. ಭವಿಷ್ಯತ್ತಿನ ದಿಕ್ಕುತೋರಿಸುವ ಭರವಸೆಯ ಚಿಕ್ಕೆಯಂತೆ ದೂರದ ದುಬಾಯ್‌ನಲ್ಲಿರುವ ಮಗ ಸತೀಶನಿಂದ ಕಾಗದ ಬಾರದೆ ತುಂಬ ಸಮಯವಾಯಿತು ಎಂಬುದೂ ಮರೆತು ಹೋಗುತ್ತದೆ… ಹಾಗೆ ನೋಡಿದರೆ ಅವನಲ್ಲಿ ಕಾಗದ ಬರೆಯುತ್ತಾನೆ. ಆಗೊಮ್ಮೆ ಈಗೊಮ್ಮೆ ಮನೆಯ ನೆನಪಿದೆಯೆಂದು ಸಣ್ಣ ಮೊತ್ತದ ಚೆಕ್ ಕಳಿಸುವಾಗ “ಕ್ಷೇಮವಾಗಿದ್ದೀರಲ್ಲಾ” ಎಂದು ಬರೆಯುತ್ತಾನೆ. ಅಷ್ಟೆ… ಆದರೆ ಪಾರಿವಾಳಗಳಿಗೆ ಕಾಳು ಹಾಕುವಾಗ, ಸಮುದ್ರದ ದಿಗಂತವನ್ನು ನೋಡುವಾಗ ಪಪ್ಪು ಮಾತ್ರ ಯಾವಾಗಲೂ ನೆನಪಾಗುತ್ತಾನೆ. ಪಪ್ಪುವನ್ನು ಮರೆಯುವುದು ಸಾಧ್ಯವೇ ಇಲ್ಲ.
ಇದನ್ನು ಓದಿದ್ದೀರಾ?: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕತೆ | ಅವನತಿ
ಎಂದಿನಂತೆ ಪಾರಿವಾಳಗಳಿಗೆ ಕಾಳು ಒಗೆಯುತ್ತಾ ಅವಸರದ ಈ ವಿಧಿ ಮುಗಿದು ಒಳಗೋಡಬೇಕು ಎಂದು ಯೋಚಿಸುತ್ತಿದ್ದಾಗಲೇ ಪಾರಿವಾಳವೊಂದು ಎಡ ಭುಜದ ಮೇಲೆ ಒಂದು ಕ್ಷಣ ಕುಳಿತು ಮತ್ತೆ ಗೂಡಿನೆಡೆ ಹಾರಿತು. ಹಾರುವಾಗ ಬಕ್ಕತಲೆಯ ಮೇಲೆ ಬಿತ್ತು ಹಿಕ್ಕೆ… ‘ಥತ್‌ರೀ’ ಎಂದು ತಲೆಯ ಮೇಲೆ ಕೈ ಸವರಿ, ಅದನ್ನು ಹಿಕ್ಕೆಯೆಂದು ಖಚಿತಪಡಿಸಿಕೊಳ್ಳಲು ಕೈ ಮೂಗಿನೆಡೆ ಮೂಸಿದಾಗ…
ಬಾಲ್ಕನಿಗೆ ಹೊಂದಿಕೊಂಡಿದ್ದ ‘ಎಂ.ಡಿ.’ಯ ಕೋಣೆಗೆ ಬಾಗಿಲು ತೆರೆಯಿತು. ಶ್ರೀಖಂಡೆ ಒಮ್ಮೆಗೇ ಹೆದರಿ ತಿರುಗಿ ನೋಡಿದಾಗ ಹೊಸ ‘ಎಂ.ಡಿ.’
“ಯಾರು ನೀನು?”
“ಸಾರ್… ಗುಡ್ ಮಾರ್ನಿಂಗ್ ಸಾರ್… ನಾನು ಎಸ್ಸೆಸ್… ಶ್ರೀಧರ ಶ್ರೀಖಂಡೆ… ಕ್ಯಾರ್‍ಟೇಕರ್ ಶ್ರೀಖಂಡೆ ಸಾರ್…”
“ಏನು ಮಾಡುತ್ತಿದ್ದೀಯ?”
ಶ್ರೀಖಂಡೆಗೆ ಏನು ಹೇಳುವುದೆಂದು ತಿಳಿಯಲಿಲ್ಲ. ಸುತ್ತಮುತ್ತ ಪಾರಿವಾಳಗಳು. ಒರೆಸಿದರೂ ಉಳಿದಿದ್ದ ಹಿಕ್ಕೆ ತಲೆಯ ಮೇಲೆ… ಬಾಲ್ಕನಿ ತುಂಬ ನಾತ…
”ಉತ್ತರ ಹೇಳಲು ಸಾಧ್ಯವಾಗುವುದಿಲ್ಲವೆ?”
“ಸಾರ್… ಬಾಲ್ಕನಿಯ ಗಿಡಗಳಿಗೆ ನೀರೆರೆದಾಗಿದೆಯೆ ಎಂದು ನೋಡಲು ಬಂದೆ… ಇಲ್ಲಿ ಪಾರಿವಾಳಗಳು…”
“ಪಾರಿವಾಳಗಳನ್ನು ಸಾಕುವುದೂ ನಿನ್ನ ಕೆಲಸದ ಪಟ್ಟಿಯಲ್ಲಿದೆಯೇ?”
”ಅವು ಎಷ್ಟೋ ವರ್ಷಗಳಿಂದ ಇವೆ ಸಾರ್… ಏನು ಮಾಡಿದರೂ ಹೋಗುವುದಿಲ್ಲ… ‘ಏಯರ್ ಕಂಡಿಶನರ್’ನ ಮೇಲೆ ಗೂಡುಕಟ್ಟಿ…”
“ಕಂಪೆನಿ ಹಣ ಕೊಡುತ್ತಿದೆಯೇನು ಅವುಗಳಿಗೆ ಧಾನ್ಯ ಹಾಕಲು… ಅಥವಾ ಇದು ಕಬೂತರ್ ಖಾನಾವೆ?”
“ಸಾರ್… ನಾನು ಮನೆಯಿಂದಲೇ ತಂದ ಕಾಳುಗಳು ಸಾರ್… ಕಂಪೆನಿಯ ಹಣವಲ್ಲ… ಇನ್ನು ಕಾಳು ಹಾಕುವುದಿಲ್ಲ. ಸಾರ್…”
“ಕಾಳು ಹಾಕುವುದನ್ನು ನಿಲ್ಲಿಸುವುದು ಮಾತ್ರವಲ್ಲ. ನಾಳೆ ಬೆಳಿಗ್ಗೆ ಇಲ್ಲಿ ಒಂದು ಪಾರಿವಾಳ ಇರಕೂಡದು.”
“ಸಾರ್… ಅವು ಹಾಗೆಲ್ಲ ಹೋಗುವುದಿಲ್ಲ ಸಾರ್… ಅವು…”
“ಹೋಗದಿದ್ದರೆ ಒಂದು ಕೋವಿ ತೆಗೆದುಕೊಂಡು ಎಲ್ಲವನ್ನೂ ಗುಂಡಿಟ್ಟು ಕೊಲ್ಲು… ಈಗ ಇಲ್ಲಿಂದ ತೊಲಗು…”
ತನ್ನ ಜೀವಮಾನದಲ್ಲೇ ಹಿಂದೆಂದೂ ಅನುಭವಿಸದ ಭಯ ಒಮ್ಮಿಂದೊಮ್ಮೆಗೇ ಶ್ರೀಖಂಡೆಯನ್ನು ಮುತ್ತಿತು. ಹೊಸ ‘ಎಂ.ಡಿ.’ ಆಫೀಸಿಗೆ ಬರುವ ಮೊದಲ ದಿನವೆಂದು ತಿಳಿದಿತ್ತು. ಹಾಗೆಂದೇ ಎಂದಿಗಿಂತ ಬೇಗ ಪಾರಿವಾಳಗಳಿಗೆ ಕಾಳು ತಿನ್ನಿಸಬೇಕು ಎಂದು ಬಂದಿದ್ದುದರಿಂದ ಕೆಳಗಡೆ ಕಾರು ಬರುತ್ತಿದೆಯೇ ಎಂದು ನೋಡುವ ವಿಚಾರ ನೆನಪಿಗೆ ಬಂದಿರಲಿಲ್ಲ. ಅದೇ ಪ್ರಮಾದ…
ದೊಗಲೆ ಪ್ಯಾಂಟ್, ನೇತಾಡುವ ಹಳೆಯ ಕಾಲದ ‘ಟೈ’, ತಲೆಯ ಮೇಲೆ ಪಾರಿವಾಳದ ಹಿಕ್ಕೆ ಹೊತ್ತುಕೊಂಡೆ ಶ್ರೀಖಂಡೆ ‘ಎಂ.ಡಿ.’ಯ ಕೋಣೆಯೊಳಗಿನಿಂದಲೇ ಅವಸರದಿಂದ ಹಾದು ಒಳಗೋಡಿದರು… ಯಾರಾದರೂ ನೋಡಿ ನಗಬಹುದು, ಆಶ್ಚರ್ಯಪಡಬಹುದು ಎಂಬ ಯೋಚನೆಯೇ ಇರದವರಂತೆ ಓಡಿದರು.
ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ
ಓಡಿದ್ದು ಮೇರಿಯ ಬಳಿಗೆ…
ಮೇರಿ ಅತ್ಯಂತ ಅವಸರದಿಂದ ಕೆಲಸ ಮಾಡಲೇಬೇಕಾಗಿದ್ದ ದುಡಿಮೆಯ ದಿನದ ಮೊದಲ ಗಂಟೆ ಅದು. ‘ಬೋರ್ಡ್’ನ ಮೇಲೆ ಕೈಯಾಡಿಸುತ್ತಲೇ ಮುಖ ತಿರುಗಿಸಿ ಶ್ರೀಖಂಡೆಯೆಡೆಗೆ ಅವರ ಮುಖದಲ್ಲಿ ವ್ಯಕ್ತವಾಗುತ್ತಿದ್ದ ಭಯ ಸಾಂಕ್ರಾಮಿಕವೋ ಎನ್ನುವಂತೆ ತನ್ನನ್ನು ಮುತ್ತಲು ಧಾವಿಸುತ್ತಿದೆಯೆಂದು ಭಾಸವಾದಾಗ “ಏನಾಯಿತು ಎಸ್ಸೆಸ್! ಯಾಕಿಷ್ಟು ಹೆದರಿಕೊಂಡಿದ್ದೀರಿ… ಬನ್ನಿ… ಕುಳಿತಿರಿ… ಒಂದೇ ನಿಮಿಷ” ಎಂದಳು.
ಶ್ರೀಖಂಡೆ ನಿಂತೇ ಇದ್ದರು. ಕಂಪೆನಿಯ ಇಡಿಯ ವ್ಯವಸ್ಥೆಯ ಅವಿಭಾಜ್ಯ ಅಂಗ ತಾನೆಂದು ರೂಢಿಸಿಕೊಂಡಿದ್ದ ಜೀವನ ಕ್ರಮಕ್ಕೆ ಅರ್ಥವೇ ಇಲ್ಲವೆನ್ನುವಂತೆ ಭಾಸವಾಗುತ್ತಿರುವ ಭಯ ಹುಟ್ಟಿಕೊಂಡದ್ದು ಒಂದೇ ಕ್ಷಣದಲ್ಲಿ- ಎಂ.ಡಿ.ಯ ಮುಖಾಮುಖಿಯಾದಾಗ.
”ಮೇರೀss.”
”ಒಂದು ನಿಮಿಷ” ಎಂದು ಬೋರ್ಡ್‌ನ ಮೇಲೆ ಕೈ ಆಡಿಸುತ್ತಲೇ ಮೇರಿ ತನ್ನ ಕರವಸ್ತ್ರವನ್ನು ಅವರೆಡೆ ಒಗೆದು ಹೇಳಿದಳು. “ಮೊದಲು ನಿಮ್ಮ ತಲೆಯೊರೆಸಿಕೊಳ್ಳಿ… ಏನಾಯಿತು? ಸೌಖ್ಯವಿಲ್ಲವೆ? ಯಾಕೆ ನಿಂತೇ ಇದ್ದೀರಿ?”
ಶ್ರೀಖಂಡೆ ಮೇರಿಯ ಕರವಸ್ತ್ರ ಎತ್ತಲಿಲ್ಲ. ಬಕ್ಕ ತಲೆಯ ಮೇಲೆ ಪುನಃ ಕೈಯಾಡಿಸಿದಾಗ ಕೈಗೆ ಸಿಕ್ಕಿದ್ದು ಪಾರಿವಾಳದ ಹಿಕ್ಕೆ…
“ಮೇರಿss ನನ್ನ ಪಾರಿವಾಳಗಳನ್ನು ಗುಂಡಿಟ್ಟು ಕೊಲ್ಲಬೇಕಂತೆ ಮೇರೀ… ‘ಎಂ.ಡಿ.’ಯ ಕಣ್ಣಿಗೆ ಬಿದ್ದೆ. …ನನಗೆ ಸಿಕ್ಕಿದ ಮೊದಲ ಆಜ್ಞೆ ಅದೇ… ಗುಂಡಿಟ್ಟು…”
”ಓ…ಕಮ್…ಆನ್…ಅವರು ಹೊಸಬರು ಶ್ರೀಖಂಡೆ…ಅಷ್ಟೇನು ಗಂಭೀರವಾಗಿ ಅವರು ಆ ಮಾತು ಹೇಳಿರಲಾರರು. ಸ್ವಲ್ಪ ಶಾಂತರಾಗಿ… ಇಷ್ಟೇಕೆ ಹೆದರಿಕೆ? ಅವು ತಾವಾಗಿಯೇ ಬಂದಿರುವ ಪಾರಿವಾಳಗಳು… ಓಡಿಸುವುದು ಕಷ್ಟ ಎಂದರೆ ಸರಿ…”
”ಹೇಳಿದೆ ಮೇರೀ… ಅವು ಹೋಗು ಎಂದಾಕ್ಷಣ ಹೋಗುವುದಿಲ್ಲ ಎಂದೆ… ಗುಂಡಿಟ್ಟು ಕೊಲ್ಲು ಎಂದರು ಮೇರೀss.”
ಈಗ ಶ್ರೀಖಂಡೆಯ ಕಣ್ಣಂಚಿನಲ್ಲಿ ಹನಿಯಿತ್ತು.
ಅಸಹ್ಯ ಕುದುರಿಸುವಂಥ ದೃಶ್ಯ. ವೃದ್ದಾಪ್ಯದ ಹೊಸ್ತಿಲಲ್ಲಿರುವ ಕೃಶವಾದ ದೇಹ. ಆ ದೇಹಕ್ಕೆ ಹೊಂದಿಕೊಳ್ಳದಂಥ ಆಫೀಸಿನ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕಾದ ವೇಷಭೂಷಣ. ಇಪ್ಪತ್ತೆರಡು ವರ್ಷ ಕಾಲ ಆಫೀಸಿನ ಇಡಿಯ ಕಟ್ಟಡದ ಬೇಕು ಬೇಡಗಳಿಗೆ ಹೊಂದಿಕೊಂಡು ಎಲ್ಲರ ಪರಿಚಯ ಸಲುಗೆಗಳನ್ನು ರೂಪಿಸಿಕೊಂಡಂಥ ಶ್ರೀಖಂಡೆಯ ವ್ಯಕ್ತಿತ್ವ ಒಂದೇ ಕ್ಷಣದಲ್ಲಿ ಅರ್ಥಹೀನ ಎಂದು ಕಾಣಿಸುವಂತೆ… ಮೇರಿ ಒಂದು ದಿನ ಕೂಡ ಶ್ರೀಖಂಡೆಯನ್ನು ಅನಾದರದಿಂದ ಕಂಡವಳಲ್ಲ, ಆತ್ಮೀಯತೆಯಿಂದಲೇ ಮಾತನಾಡಿಸುತ್ತಿದ್ದಂಥವಳು. ಆದರೆ ಇಂದು… ಪಾರಿವಾಳದ ಹಿಕ್ಕೆ… ಕಣ್ಣೀರು… ಒಮ್ಮೆಗೇ ಅಸಹ್ಯ ಎಂದು ತೋರಿದ ಅವರ ವೇಷಭೂಷಣ. ಇವೆಲ್ಲಕ್ಕೂ ಕಾರಣವೆನಿಸುವ ‘ಎಂ.ಡಿ.’ಯ ಅಸಂತೋಷ… ಇದರಿಂದಾಗಿಯೇ ಭಯ.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಯಾರಾದರೂ ಶ್ರೀಖಂಡೆಯ ಈ ಸ್ಥಿತಿಯನ್ನು ಕಂಡರೆ!
ಆಗ ಬಂತು ಶ್ರೀಖಂಡೆಯ ಮಾತು.
“ಮೇರಿ… ನನಗೆ ತಗಣಿಯನ್ನು ಕೂಡ ಕೊಲ್ಲಲಾಗುವುದಿಲ್ಲ. ಈಗ ಪಾರಿವಾಳಗಳನ್ನು… ಮೇರೀ… ಪಾರಿವಾಳಗಳನ್ನು…”
“ಓ! ಎಸ್ಸೆಸ್… ಎಂ.ಡಿ. ತಮಾಷೆಗೆ ಹೇಳಿರಬಹುದಾದ ಮಾತಿಗೆ ಅಷ್ಟೇಕೆ ಮಹತ್ವ! ಪಾರಿವಾಳಗಳನ್ನು ಓಡಿಸಲು ಗುಂಡಿಟ್ಟು ಕೊಲ್ಲುತ್ತಾರೆಯೆ!”
“ಇಲ್ಲ ಮೇರೀ… ನಿನಗೆ ತಿಳಿದಿಲ್ಲ. ಅದು ಹೊಸ ‘ಎಂ.ಡಿ.’ಯ ಆಜ್ಞೆ ಮೇರೀ… ನನಗೆ ಕೋವಿ ಹಿಡಿದೇ ಅಭ್ಯಾಸವಿಲ್ಲ…”
ಪುನಃ ಅವರ ಕಣ್ಣಂಚಿನಲ್ಲಿ ಹನಿ… ಮೇರಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಕೆಲಸ ಮಾಡುತ್ತಿರುವಂತೆಯೇ… ಕೈ ‘ಬೋರ್ಡ್’ನ ಗುಂಡಿಗಳೊಡನೆ ಆಡುತ್ತಿರುವಂತೆಯೇ ಇದಿರು ನಿಂತಿದ್ದ ಶ್ರೀಖಂಡೆಗೆ ಸಾಂತ್ವನದ ಮಾತು ಹೇಳಬೇಕು. ಏನೆಂದು ಹೇಳುವುದು? ಇಪ್ಪತ್ತೆರಡು ವರ್ಷಗಳ ನಿಮ್ಮ ದುಡಿಮೆಯ ಸಂಸ್ಕಾರ ಅರ್ಥಹೀನವಾದುದೆಂದೆ! ಕೆಲವೇ ದಿನಗಳ ಹಿಂದೆ ‘ಇಲ್ಲಿ ಎಲ್ಲದಕ್ಕೂ ನೀವು ಬೇಕೇಬೇಕು’ ಎಂದ ಮಾತು ಬರೇ ಮುಖಸ್ತುತಿಯಾಗಿತ್ತೆಂದೆ! ಕಂಪೆನಿಯ ದೈತ್ಯಶಕ್ತಿಯೊಂದಿಗೆ ಸೆಣಸುವುದು ಸಾಧ್ಯವಿಲ್ಲ ಶ್ರೀಖಂಡೆ! ಏಕೋ ಹೊಸ ಎಂ.ಡಿ. ಸಿಟ್ಟಾಗಿದ್ದಾರೆ… ಅವರ ಕಾಲು ಹಿಡಿದು ಕ್ಷಮೆ ಕೇಳಿ, ಹೇಗಾದರೂ ಪಾರಿವಾಳಗಳನ್ನು ಸಾಗಹಾಕುತ್ತೇನೆಂದು ಆಶ್ವಾಸನೆ ಕೊಡಿ ಎಂದೆ!
ಮೇರಿ ಏನೂ ಹೇಳಲಿಲ್ಲ. ಅವಳು ‘ಕೀ ಬೋರ್ಡ್’ನಲ್ಲಿ ಆಡುತ್ತಲೇ ‘ಒಂದು ನಿಮಿಷ… ಒಂದು ನಿಮಿಷ ಪ್ಲೀಸ್’ ಎನ್ನುತ್ತಿದ್ದಳು. ಹೊಸ ‘ಎಂ.ಡಿ.’ ಒಮ್ಮಿಂದ ಒಮ್ಮೆಗೆ ಶ್ರೀಖಂಡೆಯ ವಿಚಾರ ಸಿಟ್ಟಾಗಲು ಬರೇ ಪಾರಿವಾಳಗಳೆ ಕಾರಣವೆ ಎಂಬ ಯೋಚನೆಯೂ ಆಕೆಯನ್ನು ಗಲಿಬಿಲಿಯಲ್ಲಿ ಕೆಡವಿತ್ತು.
“ಮೇರೀ… ಒಮ್ಮೆ ಪಪ್ಪುವಿಗೆ ಒಂದು ಆಟದ ಕೋವಿ ಕೊಂಡು ಕೊಟ್ಟಿದ್ದೆ… ಅದನ್ನು ಸಹ ನನಗೆ ಸರಿಯಾಗಿ ಉಪಯೋಗಿಸಲು ಸಾಧ್ಯವಾಗಲಿಲ್ಲ. ಈಗ ಕೋವಿ ಹಿಡಿದು ಪಾರಿವಾಳಗಳನ್ನು…”
“ಶ್ರೀಖಂಡೆ! ಯಾಕೆ ಈ ವಿಚಾರ ಇಷ್ಟು ಗಂಭೀರವಾಗಿ ಯೋಚನೆ ಮಾಡುತ್ತೀರಿ? ಕಂಡ ಕಂಡವರೆಲ್ಲ ಕೋವಿ ಹಿಡಿಯಲು ಕಾನೂನು ಅನುಮತಿ ಕೊಡುವುದಿಲ್ಲ. ನಿಮಗೇನು ಹುಚ್ಚೆ! ಹೊಸ ‘ಎಂ.ಡಿ.’ ಏನೋ ಹೇಳಿದ್ದಾರೆಂದು…”
“ಇಲ್ಲ ಮೇರೀss ನಿನಗೆ ತಿಳಿದಿಲ್ಲ…” ಆಮೇಲೆ ತುಸು ನಿಧಾನವಾಗಿ “ನನ್ನ ಕೆಲಸ ಹೋಗುತ್ತೆ ಮೇರಿss ಕೆಲಸ ಹೋಗುತ್ತೆ…”
ಈಗ ಮೇರಿಯ ಹೃದಯದಲ್ಲೂ ಭಯದ ಮೊಳಕೆ.
“ಸುಧಾರಿಸಿಕೊಳ್ಳಿ, ಶ್ರೀಖಂಡೆ! ಹಾಗೇನೂ ಆಗುವುದಿಲ್ಲ. ಯಾರನ್ನೂ ಕೆಲಸದಿಂದ ತೆಗೆಯುವುದು ಅಷ್ಟೇನೂ ಸುಲಭದ ಮಾತಲ್ಲ… ಅಲ್ಲದೆ ನೀವು ಇಷ್ಟು ವರ್ಷ ಕಂಪನಿಗಾಗಿ ಜೀವ ತೇದವರು… ಹೋಗಿ… ನಿಮ್ಮ ಜಾಗಕ್ಕೆ ಹೋಗಿ ಒಂದರ್ಧ ಗಂಟೆ ಹಾಯಾಗಿ ಕುಳಿತಿರಿ. ಆಮೇಲೆ ನಿಮ್ಮ ಮೇಲಧಿಕಾರಿ ಬದರೀಪ್ರಸಾದ್ ಇದ್ದಾರಲ್ಲಾ… ಅವರನ್ನೇ ನೋಡಿ ಮಾತನಾಡಿ.”
ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ
ಅಷ್ಟರಲ್ಲೇ ಬಾಗಿಲಿನಲ್ಲಿ ಮುಖ ಒಳಗೆ ಹಾಕಿ ಒಬ್ಬ ಸಿಪಾಯಿ “ಶ್ರೀಖಂಡೆ ಇದ್ದಾರೇನು? ಬದರೀಪ್ರಸಾದ್ ಕರೆಯುತ್ತಾರೆ” ಎಂದ. ಶ್ರೀಖಂಡೆ ನಿಂತಲ್ಲೇ ಬೆವರಿದರು. ಯಾವ ಉತ್ತರವನ್ನೂ ಹೇಳದೆ ಮುಖ ತಿರುಗಿಸಿ ಕುರಿಯಂತೆ ಅವನನ್ನನುಸರಿಸಿದರು.
ವಾಚು ರಿಪೇರಿ, ಮನೆಗೆಲಸಕ್ಕೆ ಜನ, ಮಾವಿನ ಹಣ್ಣು, ವಿಸ್ಕಿ-ಜಿನ್ ಇತ್ಯಾದಿ ಕೊಳ್ಳುವಿಕೆ, ಬ್ಯಾಂಕು, ಅಂಚೆಯ ಮನೆಗಳಿಗೆ ಓಡಾಟ, ಮುಂತಾದ ಹಲವಾರು ಖಾಸಗೀ ಕೆಲಸಗಳಿಗೆ ಅಗತ್ಯವಿದ್ದ ಶ್ರೀಖಂಡೆಯನ್ನು ಬದರೀಪ್ರಸಾದ್ ಇಂದು ಸ್ವಾಗತಿಸಿದ್ದು ಕಂಪೆನಿಯ ಉದ್ಯೋಗಾಧಿಕಾರಿಯಾಗಿ… ಎಷ್ಟೋ ವರ್ಷಕಾಲ “ಶ್ರೀಖಂಡೆ! ನೀವಿರದೆ ಈ ಆಫೀಸು ನಡೆಯುವುದಾದರೂ ಹೇಗೆ?” ಎನ್ನುತ್ತಿದ್ದ ಬದರೀಪ್ರಸಾದ್ ಇಂದು ಮಾತ್ರ…
“ಓ! ಶ್ರೀಖಂಡೆ! ಇವೊತ್ತು ಹೊಸ ‘ಎಂ.ಡಿ.’ ಆಫೀಸಿಗೆ ಬರುವ ಮೊದಲ ದಿನವೆಂದು ತಿಳಿದಿದ್ದೂ ನಿಮಗೆ ಆ ಅಸಹ್ಯ ಪಾರಿವಾಳಗಳಿಗೆ ಧಾನ್ಯ ಹಾಕುತ್ತ ನಿಂತಿರಬೇಕೆಂದು ಯಾಕೆ ತೋರಿತು? ನಿಮ್ಮ ಮುಖ್ಯ ಕೆಲಸವೆ ಅದು? ಎಷ್ಟು ಸಲ ಈ ಪಾರಿವಾಳಗಳ ಉಪದ್ರ ತಪ್ಪಿಸಬೇಕು ಎಂದು ನಿಮ್ಮೊಡನೆ ನಾನು ಹೇಳಿಲ್ಲ. ನೀವು ಅದನ್ನೆಲ್ಲ ಮರೆತು ಅವುಗಳಿಗೆ ಉಪಚಾರ ಮಾಡುವುದೂ ಕಂಪೆನಿಯ ಕೆಲಸವೆಂದು ತಿಳಿದಿದ್ದೀರಲ್ಲಾ… ‘ಎಂಡಿ.’, ತನ್ನ ಕೋಣೆಯೊಳಗೆ ಬಂದೊಡನೆ ಮೊದಲು ಕಂಡ ದೃಶ್ಯವೇ ಅದು…”
”ಅವು ತಾವಾಗಿಯೇ ಬಂದ ಪಾರಿವಾಳಗಳು ಸಾರ್. ನಾವು ಸಾಕಿಲ್ಲ…”
“ಮತ್ತೆ ಕಾಳು ಒಗೆಯುವುದು ಅವುಗಳನ್ನು ಕೊಲ್ಲಲಿಕ್ಕೇನು?”
ಈಗ ಶ್ರೀಖಂಡೆಗೆ ಏನು ಹೇಳುವುದೆಂದು ತಿಳಿಯಲಿಲ್ಲ.
“ಸಾರ್… ಅಲ್ಲಿ ದಂಡೆಯಲ್ಲಿ ಬೌಗೆನ್‌ವಿಲ್ಲಾಸ್, ಆಸ್ಟರ್‍ಸ್, ಗ್ಲಾಡಿಯೋಲಾಸ್ ಎಲ್ಲ ಹೂಗಿಡಗಳಿವೆ ಸಾರ್… ಅವುಗಳಿಗೆ ನೀರು ಹಾಕಿದ್ದಾರೆಯೆ ಎಂದು ನೋಡಲು ಹೋಗಿದ್ದೆ… ಹಾಗೆಯೇ ಪಾರಿವಾಳಗಳು…”
”ಬೌಗೆನ್‌ವಿಲ್ಲಾಸ್ ಹಿಕ್ಕೆ ಹಾಕುವುದಿಲ್ಲ. ‘ಎಂ.ಡಿ.’ ಕೋಣೆಯ ಬಾಗಿಲು ತೆರೆದಾಗ ಹಿಕ್ಕೆಯದೇ ನಾತ. ಇದರಿಂದ ನನ್ನ ಯೋಗ್ಯತೆಯ ಮೇಲೂ ಅವರಿಗೆ ಸಂದೇಹ ಬರಬಹುದು ಎಂಬ ಯೋಚನೆಯಾದರೂ ನಿಮಗೆ ಬಂತೆ?”
“ಸಾರ್… ಅವುಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ ಸಾರ್… ಮಾಲಿ ಹಿಕ್ಕೆ ಒರೆಸಿ ತೆಗೆಯುತ್ತಾನೆ… ಆದರೂ…”
”ಸಾಕು, ಶ್ರೀಖಂಡೆ… ನನಗೆ ಉಪದೇಶ ಬೇಡ, ನೀವು ಕಂಪೆನಿಗಾಗಿ ಇಷ್ಟು ವರ್ಷ ದುಡಿದವರು, ವಯಸ್ಸಾದವರು ಎಂದು ಇಷ್ಟರತನಕ ನಾನೂ ಮಾತನಾಡಿಲ್ಲ. ನಿಮ್ಮ ಅಧಿಕಪ್ರಸಂಗತನವನ್ನೆಲ್ಲ ಸಹಿಸಿಕೊಂಡಿದ್ದೆ. ನೀವು ಇವೊತ್ತು ಮಾತ್ರ ಕಂಪೆನಿಯ ಎಲ್ಲ ಕೆಲಸಗಾರರ ಯೋಗ್ಯತೆಯನ್ನು ಹೊಸ ‘ಎಂ.ಡಿ.’ ಶಂಕಿಸುವಂಥ ಕೆಲಸ ಮಾಡಿದಿರಿ… ಈಗ…?”
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
“ಈಗ…” ಎಂದು ಬದರೀಪ್ರಸಾದ್ ಮಾತು ನಿಲ್ಲಿಸಿದಾಗ ಶ್ರೀಖಂಡೆಯ ಎದೆಯಲ್ಲಿ ನಡುಕ… ಮತ್ತೆ ಭಯ… ಮಾತು ನಿಂತ ಕ್ಷಣದ ಮೌನದ ಸಂದಿಗ್ಧತೆಯಲ್ಲಿ ಶ್ರೀಖಂಡೆ ಕೂಗಲಾರಂಭಿಸಿದರು: “ಸಾರ್… ಏನೋ ಹಕ್ಕಿಗಳೆಂದು ಎರಡು ಕಾಳು ಹಾಕುವಾಗ ನನ್ನ ಮನೆಯಿಂದ ತಂದ ಕಾಳುಗಳು ಸಾರ್- ಪಪ್ಪುವಿನ ನೆನಪಾಯಿತು… ಒಂದೇ ಕ್ಷಣ ಸಾರ್… ನಾನು ಅಲ್ಲಿಂದ ಹಿಂದಿರುವಷ್ಟರಲ್ಲೇ…”
“ಯಾರದು ಪಪ್ಪು?”
“ನನ್ನ ಮೊಮ್ಮಗ, ನಾಲ್ಕು ವರ್ಷದ ಮಗು…”
“ಶ್ರೀಖಂಡೆ!” ಎಂದರು ಬದರೀಪ್ರಸಾದ್, ‘ಎಂ.ಡಿ.’ ಹೇಳಿದ್ದ ಮಾತುಗಳನ್ನೆ ನೆನೆಸಿಕೊಳ್ಳುತ್ತಾ ”ನೀವು ಆಫೀಸಿನಲ್ಲಿ ಕಳೆಯುವ ಸಮಯಕ್ಕೆ ಕಂಪೆನಿಯಿಂದ ಸಂಬಳ ಪಡೆಯುತ್ತೀರಿ. ಆ ಸಮಯ ಮಕ್ಕಳ ವಿಚಾರ ಚಿಂತಿಸುವುದಕ್ಕಲ್ಲ… ಅಷ್ಟೇ ಅಲ್ಲದೆ, ಪಾರಿವಾಳಗಳನ್ನು ಸಾಕುತ್ತಿದ್ದುದು ಕಂಪೆನಿಯ ಕೆಲಸವೂ ಅಲ್ಲ.”
‘ಎಂ.ಡಿ.’ ಬದರೀಪ್ರಸಾದ್‌ರೊಡನೆ ಹೇಳಿದ್ದೂ ಅದೇ ಮಾತನ್ನೇ… ಶ್ರೀಖಂಡೆ ಕೋಣೆಯಿಂದ ಓಡಿ ಹೋದೊಡನೆ ಅವರು ಮೊದಲು ಕರೆಸಿದ್ದು ಬದರೀಪ್ರಸಾದರನ್ನು “ನಾನು ಅಧಿಕಾರ ವಹಿಸಿಕೊಳ್ಳುತ್ತಿರುವ ಮೊದಲನೆಯ ದಿನವೇ ಕೆಲಸಗಾರರ ದಕ್ಷತೆಯ ಉತ್ಕೃಷ್ಟ ಉದಾಹರಣೆ ಕಾಣುತ್ತಿದ್ದೇನೆ, ಬದರೀಪ್ರಸಾದ್… ಯಾರಿದು ಕ್ಯಾರ್‌ಟೇಕರ್ ಶ್ರೀಖಂಡೆ?”
“ವೆಲ್…” ಎಂದಿದ್ದರು ಬದರೀಪ್ರಸಾದ್… “ತನ್ನ ಕೆಲಸವನ್ನು ಯೋಗ್ಯ ರೀತಿಯಿಂದ ನಿರ್ವಹಿಸುತ್ತಾರೆ, ಪ್ರಾಮಾಣಿಕ ಕೆಲಸಗಾರ. ಯಾವ ಕೆಲಸಕ್ಕೂ ಒಲ್ಲೆ ಎನ್ನುವುದಿಲ್ಲ… ಎಲ್ಲ ಉಸ್ತುವಾರಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕಂಪೆನಿಯ ಕೆಲಸವೆಂದರೆ ಸಮಯದ ಪರಿವೆ ಇಲ್ಲ. ಒಂದು ದಿನ ರಜೆ ಪಡೆಯುವುದೆಂದಿಲ್ಲ…”
“ಹಾಗಿದ್ದರೆ ಎರಡು ವಾರ ರಜೆ ಪಡೆಯುವಂತೆ ನೀವೇ ಹೇಳಿ…”
“ಯಾಕೆ?” ಎಂದಿದ್ದರು ಬದರೀಪ್ರಸಾದ್ ಆಶ್ಚರ್ಯದಿಂದ.
“ಅವರ ದಕ್ಷತೆಗೆ ಪ್ರಮಾಣ ಪತ್ರ ಕೊಟ್ಟ ನಿಮ್ಮ ಯೋಗ್ಯತೆಯನ್ನೇ ನಾನು ಶಂಕಿಸಿದರೆ ನಿಮಗೆ ಬೇಸರವಿಲ್ಲವಷ್ಟೆ… ನಾನು ಕಂಡದ್ದು ಏನು ಗೊತ್ತೇ! ಪಾರಿವಾಳಗಳ ಹಿಕ್ಕೆಯನ್ನು ತಲೆಯಲ್ಲಿ ಹೊತ್ತು ಅವುಗಳಿಗೆ ಕಾಳು ತಿನ್ನಿಸುತ್ತ ಸಾಗರ ನೋಡುತ್ತಿದ್ದ ಕ್ಯಾರ್‌ಟೇಕರ್… ಪಾರಿವಾಳಗಳನ್ನು ಸಾಕುವುದು ಕಂಪೆನಿಯ ಕೆಲಸವೇನು?”
“ಸಾರ್…” ಎಂದಿದ್ದರು ಬದರೀಪ್ರಸಾದ್ ತುಸು ಅಧೈರ್ಯದಿಂದ.
“ಈ ಪಾರಿವಾಳಗಳು ತಾವಾಗಿಯೇ ಇಲ್ಲಿ ಬೀಡುಬಿಟ್ಟಿದ್ದಾವೆ, ಎಷ್ಟೋ ವರ್ಷಗಳಿಂದ ಅವುಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಆ ಹಿಕ್ಕೆಯನ್ನೆಲ್ಲ ಅವರು ತೊಳೆಸಬೇಕಾಗಿತ್ತು… ಏನೋ ತಪ್ಪಿ…”
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
“ನಾನು ಈ ವಿಚಾರ ಹೆಚ್ಚು ಯೋಚನೆ ಮಾಡುವುದಿಲ್ಲ. ಹಿಂದಿನವರು ಯಾಕೆ ಇದನ್ನೆಲ್ಲ ಸಹಿಸಿಕೊಂಡಿದ್ದರೆಂದು ನನಗೆ ತಿಳಿದಿಲ್ಲ. ನಾನು ಸಹಿಸುವುದಿಲ್ಲ. ಪಾರಿವಾಳಗಳನ್ನು ಓಡಿಸಲು ಇಡಿಯ ಬಾಲ್ಕನಿಯನ್ನೇ ಮುಚ್ಚಬೇಕಿದ್ದರೆ ಹಾಗೇ ಮಾಡಿ… ಹೇಗಾದರೂ ಓಡಿಸಿ… ಜತೆಗೆ ಶ್ರೀಖಂಡೆಯನ್ನೂ ಇಲ್ಲಿಂದ ಓಡಿಸಿ… ಬೇರೆ ಯಾರನ್ನಾದರೂ ಈ ಕೆಲಸಕ್ಕೆ ನೇಮಿಸಿ… ಅವರನ್ನು ಮನೆಗೆ ಕಳುಹಿಸುವುದು ಸಾಧ್ಯವಿಲ್ಲವಾದರೆ ಬೇರೆ ಯಾವುದಾದರೂ ಕೆಲಸಕ್ಕೆ ವರ್ಗಾಯಿಸಿ. ಅವರು ಈ ಕೆಲಸದಲ್ಲಿ ಮುಂದುವರಿಯುವುದು ಬೇಡ. ಅವರು ಸಂಬಳ ಪಡೆಯುವುದು ಕಂಪೆನಿಯ ಕೆಲಸಕ್ಕೆ… ಪಾರಿವಾಳಗಳನ್ನು ಸಾಕುವುದಕ್ಕಲ್ಲ… ಅದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಇಲ್ಲಿಂದ ಅವರನ್ನು ತೆಗೆಯಲೇಬೇಕು.”
ಬದರೀಪ್ರಸಾದ್ ಎರಡು ಕ್ಷಣ ಮೌನವಾಗಿದ್ದರು. ಹೊಸ ‘ಎಂ.ಡಿ.’ ಕೆಲಸ ಆರಂಭಿಸುವ ರೀತಿಯೇ ಇದು ಎಂದು ಯೋಚನೆಯಾಯಿತು. ಎಷ್ಟೋ ವರ್ಷಗಳಿಂದ ಅವರು ಶ್ರೀಖಂಡೆಯನ್ನು ಬಲ್ಲರು. ಅವರ ಕಾರ್ಯಕ್ಷಮತೆ ಪ್ರಾಮಾಣಿಕತೆಯನ್ನು ಬಲ್ಲರು. ಕಟ್ಟಡದ ಎಲ್ಲ ಬೇಕು-ಬೇಡಗಳು ತನ್ನ ಬೇಕು-ಬೇಡಗಳೆಂದೇ ತಿಳಿದು ಅವುಗಳಿಗಾಗಿ ಹಗಲಿರುಳು ಒದ್ದಾಡುವ, ಕಂಪೆನಿಯ ಕೆಲಸಗಳಿಗಾಗಿ ಜೀವ ತೇಯುವ ಶ್ರೀಖಂಡೆಯ ಜಾಗಕ್ಕೆ ಇನ್ನೊಬ್ಬರನ್ನು ತರುವುದು ತುಂಬ ಕಷ್ಟವೆಂದೂ ಅವರಿಗೆ ತಿಳಿದಿತ್ತು. ಶ್ರೀಖಂಡೆಗೆ ‘ಕ್ಯಾರ್‌ಟೇಕರ್’ ಕೆಲಸ ಕಂಪೆನಿಯ ಕೆಲಸ ಮಾತ್ರವಾಗಿರಲಿಲ್ಲ ಅವರ ಜೀವನಾಸಕ್ತಿಯ ಕೇಂದ್ರ ಬಿಂದುವಾಗಿತ್ತು ಎಂಬುದೂ ಬದರೀಪ್ರಸಾದ್‌ಗೆ ಚೆನ್ನಾಗಿ ತಿಳಿದಿತ್ತು. ಶ್ರೀಖಂಡೆಗೆ ಕಂಪೆನಿ ಮನೆಯೇ ಆಗಿತ್ತು. ಈಗ ‘ಎಂ.ಡಿ.’ ಹೇಳುತ್ತಿರುವ ಮಾತುಗಳಿಗೂ ಶ್ರೀಖಂಡೆಯ ಕೆಲಸದ ಯೋಗ್ಯತೆಗೂ ಯಾವ ಸಂಬಂಧವೂ ಇರಲಿಲ್ಲವೆಂದೂ ಅವರಿಗೆ ಸ್ಪಷ್ಟವಾಗಿತ್ತು. ಇಲ್ಲಿ ‘ಎಂ.ಡಿ.’ ಶ್ರೀಖಂಡೆ, ಪಾರಿವಾಳಗಳು, ತಾನು ಸಂಧಿಸುತ್ತಿರುವುದು ಬೇರೆಯೇ ಪಾತಳಿಯಲ್ಲಿ. ‘ಎಂ.ಡಿ.’ಗೆ ಪಾರಿವಾಳಗಳು ಮುಖ್ಯವಲ್ಲ; ಶ್ರೀಖಂಡೆ ಮುಖ್ಯವಲ್ಲ… ಪ್ರಾಯಶಃ ತಾನೂ ಕೂಡ… ಅವರಿಗೆ ಮುಖ್ಯವಾದದ್ದು ಅವರ ವರ್ಚಸ್ಸಿನ ಮಾಧ್ಯಮ… ಆ ಮಾಧ್ಯಮ ಯಾವ ಅಡೆ-ತಡೆ ಸಹಿಸುವುದಿಲ್ಲ.
“ಕಂಪೆನಿ ಧರ್ಮಶಾಲೆಯಲ್ಲ ಬದರೀಪ್ರಸಾದ್… ಈ ಮಾತನ್ನು ನೀವು ಶ್ರೀಖಂಡೆಗೆ ಮನವರಿಕೆ ಮಾಡಿಕೊಟ್ಟು ಬೇರೆ ಕಡೆ ವರ್ಗಾಯಿಸಿ… ಇನ್ನು ನೀವು ಹೋಗಬಹುದು…”
ಈಗ ಬದರೀಪ್ರಸಾದ್ ಅದೇ ಮಾತುಗಳನ್ನು ಶ್ರೀಖಂಡೆಗೆ ದಾಟಿಸಬೇಕಾಗಿತ್ತು.
ಇದನ್ನು ಓದಿದ್ದೀರಾ?: ರಾಜಶೇಖರ ನೀರಮಾನ್ವಿ ಅವರ ಕತೆ | ಹಂಗಿನರಮನೆಯ ಹೊರಗೆ
“ಪಾರಿವಾಳಗಳನ್ನು ಸಾಕುವುದು ಕಂಪೆನಿಯ ಕೆಲಸವಲ್ಲ, ಶ್ರೀಖಂಡೆ! ಕಂಪೆನಿ ಧರ್ಮಶಾಲೆಯೂ ಅಲ್ಲ… ನೀವು ನನ್ನನ್ನು ಧರ್ಮಸಂಕಟದಲ್ಲಿ ತೊಡಗಿಸಿದ್ದೀರಿ… ನೀವು ಇಷ್ಟು ವರ್ಷಕಾಲ ಕಂಪೆನಿಗಾಗಿ ದುಡಿದಿದ್ದೂ ಈ ವಿಚಾರ ನಿಮಗೇಕೆ ತಿಳಿಯಲಿಲ್ಲವೆಂದು ನನಗೆ ಆಶ್ಚರ್ಯವಾಗಿದೆ… ಏನಿದ್ದರೂ ಈಗ ‘ಎಂ.ಡಿ.’ಗೆ ನಿಮ್ಮ ಬಗ್ಗೆ ಆಗಿರುವ ಅಸಮಾಧಾನವನ್ನು ನಾನು ಕಡೆಗಣಿಸುವಂತೆ ಇಲ್ಲ. ನೀವು ಈಗ ನಾಲ್ಕು ವಾರ ರಜೆ ಪಡೆದು ಹೋಗಿ… ನಾಳೆಯಿಂದ ನೀವು ಆಫೀಸಿಗೆ ಬರುವುದು ಬೇಡ. ಮರಳಿ ಬರುವಾಗ ನಿಮಗೆ ಬೇರೇನಾದರೂ ಕೆಲಸದ ವ್ಯವಸ್ಥೆ ಮಾಡುತ್ತೇನೆ… ನೀವು ಈಗ ನೇರ ಮನೆಗೆ ಹೋಗಬಹುದು…”
“ಸಾರ್…!” ರಕ್ತವೆಲ್ಲ ಒಮ್ಮಿಂದೊಮ್ಮೆಗೆ ಬತ್ತಿ ಹೋದಂತೆ ಶ್ರೀಖಂಡೆಯ ಮುಖ ಬಿಳಿಚಿಕೊಂಡಿತು. “ಏನಿದು ಸಾರ್… ನಾನು ಕ್ಯಾರ್‌ಟೇಕರ್ ಶ್ರೀಖಂಡೆ ಸಾರ್… ನನಗೆ ಬೇರೇನೂ ಕೆಲಸ ಮಾಡಲಾಗುವುದಿಲ್ಲ… ಸಾರ್… ಬೇರೇನೂ ಆಗುವುದಿಲ್ಲ. ಬೇಕಿದ್ದರೆ ನಾನು ‘ಎಂ.ಡಿ.’ಯ ಕಾಲಿಗೆ ಬಿದ್ದು ಬೇಡುತ್ತೇನೆ ಸಾರ್. ಸಾರ್… ಕಂಪೆನಿ ನನ್ನ ಜೀವ ಸಾರ್… ಈ ಕಟ್ಟಡ ನನ್ನ ಮನೆಯೇ ಸಾರ್… ನನಗೆ ರಜೆ ಬೇಡವೆ ಬೇಡ ಸಾರ್… ಇನ್ನು ಪಪ್ಪುವಿನ ನೆನಪು ಮಾಡುವುದಿಲ್ಲ ಸಾರ್…”
ಶ್ರೀಖಂಡೆಯ ಮೈ ಚಳಿಹಿಡಿದವರಂತೆ ನಡುಗುತ್ತಿತ್ತು. ಮುಖವೆಲ್ಲ ಬೆವತಿತ್ತು. ತನ್ನ ಕೈಯಿಂದಲೇ ಬಕ್ಕತಲೆಯನ್ನೂ, ಮುಖವನ್ನೂ, ಒರೆಸಿಕೊಳ್ಳುತ್ತಲೇ ಅತೀವ ಉದ್ವೇಗದ ಆ ಕ್ಷಣದಲ್ಲಿ ಏನು ಮಾಡುವುದೆಂದು ತಿಳಿಯದೆ ಶ್ರೀಖಂಡೆ ಎದ್ದು ನಿಂತು ತನ್ನ ಮೇಲಧಿಕಾರಿಯ ಇದಿರು ಕೈಜೋಡಿಸಿ, “ಸಾರ್… ಆ ಪಾರಿವಾಳಗಳನ್ನು ಹೇಗಾದರೂ ಉಪಾಯದಿಂದ ಬೇರೆ ಕಡೆ ಸಾಗಹಾಕುತ್ತೇನೆ ಸಾರ್… ಇನ್ನು ‘ಎಂ.ಡಿ.’ಗೆ ಯಾವ ತೊಂದರೆಯೂ ಆಗದಂತೆ ಆ ಹಿಕ್ಕೆಯನ್ನೆಲ್ಲ ನಾನೇ ಒರೆಸಿ ಬಾಲ್ಕನಿ ಸ್ವಚ್ಛಗೊಳಿಸುತ್ತೇನೆ ಸಾರ್… ದಮ್ಮಯ್ಯ ನನ್ನನ್ನು ಈ ಕೆಲಸದಿಂದ ತೆಗೆಯಬೇಡಿ… ನನಗೆ ರಜೆ ಪಡೆದೇ ಅಭ್ಯಾಸವಿಲ್ಲ ಸಾರ್…”
ಶ್ರೀಖಂಡೆಯ ಕಣ್ಣು ತುಂಬಿಕೊಳ್ಳುತ್ತಿದ್ದವು. ಅವರು ನಡುಗುವುದು ಇನ್ನೂ ನಿಂತಿರಲಿಲ್ಲ. ಬದರೀಪ್ರಸಾದ್ ತನ್ನ ಮುಖವನ್ನು ಮೇಲಕ್ಕೆತ್ತದೇನೇ ಹೇಳಿದರು. “ನನಗೀಗ ಹೆಚ್ಚು ಅವಕಾಶವಿಲ್ಲ ಶ್ರೀಖಂಡೆ… ನಿಮ್ಮ ಹಿತದೃಷ್ಟಿಯಿಂದಲೇ ನಾನು ಈ ವ್ಯವಸ್ಥೆ ಮಾಡಿದ್ದು… ಈಗ ನೀವು ಮನೆಗೆ ಹೋಗಿ… ಬರಬೇಕಾದಾಗ ಹೇಳಿ ಕಳುಹಿಸುತ್ತೇನೆ… ಇದಕ್ಕೆ ನೀವೇನಾದರೂ ಆಕ್ಷೇಪ ಸೂಚಿಸಿದರೆ ಅದರಿಂದ ನಿಮಗೇ ಕೇಡು… ಇನ್ನು ನೀವು ಹೋಗಬಹುದು…”
ಇದನ್ನು ಓದಿದ್ದೀರಾ?: ಬಿ.ಸಿ. ದೇಸಾಯಿ ಅವರ ಕತೆ | ಸಾವು
“ಸಾರ್…” ಎಂಬ ಶಬ್ದ ಶ್ರೀಖಂಡೆಯ ನಾಲಿಗೆಯ ತುದಿಯಲ್ಲೇ ನಿಂತಿತು. ಅವರು ಕರವಸ್ತ್ರ ತೆಗೆದು ಮುಖ ಒರೆಸಿಕೊಂಡರು. ಇನ್ನು ಮಾತನಾಡಲು ಅವಕಾಶವಿಲ್ಲ ಎಂದು ಖಚಿತವಾಗಿತ್ತು. ಇನ್ನು ‘ಎಂ.ಡಿ.’ಯ ಕೋಣೆಯನ್ನು ಪ್ರವೇಶಿಸುವಂತೆಯೇ ಇಲ್ಲ.
ಕೋಣೆಯ ಬದಿಯ ಬಾಲ್ಕನಿಯಲ್ಲಿ ನಿಲ್ಲುವಂತಿಲ್ಲ. ಪಾರಿವಾಳಗಳ ಹಾರಾಟವನ್ನು ಗಮನಿಸುವಂತಿಲ್ಲ. ಶಿರೀಷ ವೃಕ್ಷಗಳ ಹಿಂದಿರುವ ಸಮುದ್ರವನ್ನು ನೋಡುವಂತಿಲ್ಲ… ಆತ್ಮೀಯವಾಗಿ ನೆಚ್ಚಿಕೊಂಡಿದ್ದ ಎಲ್ಲ ಸಂಬಂಧಗಳೂ ಒಮ್ಮಿಂದೊಮ್ಮೆಗೇ ಕಡಿದುಕೊಂಡವು… ಒಮ್ಮಿಂದೊಮ್ಮೆಗೇ…
ಪಪ್ಪು ಬೋರಿವಲ್ಲಿಯಲ್ಲೆ.
ಬದರೀಪ್ರಸಾದರ ‘ಕ್ಯಾಬಿನ್’ನಿಂದ ಹೊರಬಿದ್ದ ತನ್ನನ್ನು ಹಲವಾರು ಜತೆ ಕಣ್ಣುಗಳು ಕುತೂಹಲದಿಂದ ನೋಡುತ್ತಿದ್ದುವೆಂಬುದನ್ನು ಗಮನಿಸದೇನೇ ಶ್ರೀಖಂಡೆ ಓಡಿದರು… ವರ್ಷ ವರ್ಷ ಕಾಲ ಕಟ್ಟಡದ ಸಂದುಗೊಂದುಗಳೆಲ್ಲ ಶ್ರೀಖಂಡೆ, ಶ್ರೀಖಂಡೆ ಎಂದು ಪರಿಚಯದ ಸಲುಗೆಯಿಂದ ಕರೆಯುತ್ತಿರುವುವೆಂದೇ ಭಾವಿಸಿದ್ದ ಶ್ರೀಖಂಡೆ, ಅಪರಿಚಿತನಂತೆ, ಪಲಾಯನ ಮಾಡುತ್ತಿರುವವರಂತೆ ಧಾವಿಸಿದರು… ಪುನಃ ಮೇರಿಯ ಬಳಿಗೆ.
ಶ್ರೀಖಂಡೆ ಮರಳಿ ತನ್ನ ಬಳಿಗೇ ಬರಬಹುದೆಂದು ಮೇರಿಗೆ ತಿಳಿದಿತ್ತು. ಆದರಾಕೆಯ ಮುಖ ನಿಸ್ತೇಜವಾಗಿತ್ತು… ಯಾವಾಗಲೂ ನಗುವನ್ನೇ ಹೊರಸೂಸುವಂತಿದ್ದ ಆಕೆಯ ಕಣ್ಣುಗಳಲ್ಲೂ ಅರ್ಥವಾಗದ ಭಯ. ಶ್ರೀಖಂಡೆ ಪ್ರಕರಣ ಹೇಗೋ ಸುದ್ದಿಯಾಗಿ ಅರ್ಧತಾಸಿನಲ್ಲೇ ಆಫೀಸಿನ ತುಂಬ ಹರಡಿ, ಹೊಸ ‘ಎಂ.ಡಿ.’ಯ ವ್ಯಕ್ತಿತ್ವಕ್ಕೆ ವಿಚಿತ್ರ ರೀತಿಯ ಗಾಂಭೀರ್ಯವನ್ನು ಕಲ್ಪಿಸಿ ಕೊಟ್ಟುದರಿಂದ ಈ ಭಯವೆ!
“ಏನು, ಏನಾಯಿತು ಎಸ್ಸೆಸ್! ಬದರೀಪ್ರಸಾದ್ ಏನು ಹೇಳಿದರು? ಯಾಕೆ ಇಷ್ಟು ಹೆದರಿಕೊಂಡವರಂತೆ ಕಾಣುತ್ತೀರಿ!”
“ನನ್ನ ಕೆಲಸ ಹೋಯಿತು ಮೇರೀ… ನನ್ನ ಕೆಲಸ ಹೋಯಿತು…”
“ಡೋಂಟ್ ಬಿ ಸಿಲ್ಲಿ… ಏನೇ ತಪ್ಪಾದರೂ ಹಾಗೆಲ್ಲ ಕೆಲಸದಿಂದ ತೆಗೆಯಲು ಸಾಧ್ಯವಾಗುವುದಿಲ್ಲ. ಏನು! ಏನಾಯಿತು?”
“ಇಲ್ಲ ಮೇರೀsss. ನಾನಿನ್ನು ಕ್ಯಾರ್‌ಟೇಕರ್ ಶ್ರೀಖಂಡೆ ಅಲ್ಲ. ಎಲ್ಲ ಮುಗಿಯಿತು ಮೇರೀ. ಈಗಿಂದೀಗಲೇ ತಿಂಗಳ ರಜೆ ಪಡೆದು ಮನೆಗೆ ಹೋಗುವಂತೆ ಹೇಳಿದ್ದಾರೆ. ನನಗೆಲ್ಲಿದೆ ಮನೆ ಮೇರೀ… ಮಣಿ ಕೇಳಿದರೆ ಏನೆನ್ನುತ್ತಾಳೆ! ಇಷ್ಟು ವರ್ಷ ಆದ ಮೇಲೆ ನಾನು ಬೇರೇನು ಕೆಲಸ ಮಾಡಿಯೇನು ಮೇರೀs.”
ಈಗ ಶ್ರೀಖಂಡೆಯ ಕಣ್ಣಿಂದ ನೀರಿಳಿಯುತ್ತಿರಲಿಲ್ಲ. ಬೆವರಿದ್ದ ಮುಖವನ್ನೂ ಬಕ್ಕತಲೆಯನ್ನೂ ಕೈಯಿಂದ ಸವರಿಕೊಳ್ಳುತ್ತ ಏನು ಮಾಡುವುದೆಂದು ತಿಳಿಯದೆ ನಿಂತೇ ಇದ್ದರು ಮೇರಿಯ ಮುಂದೆ. ದೈನ್ಯದ ಪ್ರತಿಮೂರ್ತಿಯಂತೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
”ಒಮ್ಮಿಂದೊಮ್ಮೆಗೇ ರಜೆ ಪಡೆದು ಎಲ್ಲಿಗೆ ಹೋಗಲಿ ನಾನು! ಮಣಿಯ ಮುಖವನ್ನು ಹೇಗೆ ನೋಡಲಿ… ನಾನು ಹೋಗುವುದಾದರೂ ಹೇಗೆ ಮೇರೀ… ನಾಳೆ ಧೋಬಿಯ ಲೆಕ್ಕಾಚಾರ ಆಗಬೇಕು. ಮೇಲೆ ನೀರಿನ ‘ಟ್ಯಾಂಕಿ’ಯ ರಿಪೇರಿಗೆ ನಾಳೆಯೇ ಬರುತ್ತಾರೆ. ಶುಕ್ರವಾರದಿಂದ ಸೆಂಟ್ರಲ್ ಏಯರ್ ಕಂಡಿಶನಿಂಗ್ ವ್ಯವಸ್ಥೆ ತಪಾಸಣೆಗೆಂದು ಒಂದು ವಾರ ಮುಚ್ಚಬೇಕು. ಎಂಟು ವೆನೀಶಿಯನ್ ಬ್ಲೈಂಡ್ಸ್‌ನ ಆರ್ಡರ್ ಪೂರೈಕೆ ಬರುವ ವಾರ.. ಮೇರೀ ಹೊಸ ‘ಎಂ.ಡಿ.’ ಪಾರಿವಾಳಗಳನ್ನು ಗುಂಡಿಟ್ಟೇ ಕೊಲ್ಲಿಸುತ್ತಾರೋ ಏನೋ…”
“ಸ್ವಲ್ಪ ಶಾಂತರಾಗಿ ಶ್ರೀಖಂಡೆ” ಎಂದಳು ಮೇರಿ. “ಪಾರಿವಾಳಗಳಿಗೆ ಏನೂ ಆಗುವುದಿಲ್ಲ. ಹೊಸ ‘ಎಂ.ಡಿ.’ ಅವುಗಳನ್ನು ಓಡಿಸಲು ಪ್ರಯತ್ನಿಸಬಹುದು. ಆದರೆ ಕೊಲ್ಲುವುದಿಲ್ಲ. ಆಫೀಸಿನ ಚಿಂತೆಯಿಂದ ನೀವು ತಲೆ ಕೆಡಿಸಿಕೊಳ್ಳಬೇಡಿ. ಅದು ಹೇಗಾದರೂ ಸಾಗುತ್ತದೆ. ಬದರೀಪ್ರಸಾದ್ ಒಂದು ತಿಂಗಳ ಅವಕಾಶ ಕೊಟ್ಟಿದ್ದಾರಲ್ಲಾ… ಏನಾದರೂ ಮಾಡಿಯಾರು…” ಮೇರಿ ‘ಬೋರ್ಡ್’ ಬಿಟ್ಟೆದ್ದು ಶ್ರೀಖಂಡೆಯ ಭುಜ ಹಿಡಿದು ಪಕ್ಕದಲ್ಲಿದ್ದ ಸೋಫಾದಲ್ಲಿ ಕೂರುವಂತೆ ಒತ್ತಾಯಿಸಿ, ತನ್ನ ಎದೆಯೊಳಗೂ ಮೊಳೆತಿದ್ದ ಭಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಶ್ರೀಖಂಡೆಗೆ ಸಮಾಧಾನ ಹೇಳಿದಳು.
”ಇಲ್ಲ ಮೇರೀsss ನನ್ನ ಕೆಲಸ ಹೋದಂತೆಯೇ… ನನಗೆ ಬೇರೇನು ಕೆಲಸವೂ ತಿಳಿದಿಲ್ಲ. ಅದೂ ಅಲ್ಲದೆ ಈ ಅವಮಾನ ಸಹಿಸಿಕೊಂಡು…”
“ಈಗ ಅದೆಲ್ಲ ಚಿಂತಿಸಬೇಡಿ ಶ್ರೀಖಂಡೆ. ಇಷ್ಟು ವರ್ಷ ಈ ಕಂಪೆನಿಗಾಗಿ ದುಡಿದು ಈ ಕಟ್ಟಡಕ್ಕೆ ಜೀವ ತುಂಬಿದವರು ನೀವು. ನಿಮ್ಮಿಂದ ಬೇರೆ ಯಾವ ಕೆಲಸವೂ ಸಾಧ್ಯವಿಲ್ಲವೆಂದರೆ ಯಾರಾದರೂ ನಕ್ಕಾರು. ಈಗ ನೀವು ಅನಾರೋಗ್ಯವೆಂದು ಹೇಳಿ ಮನೆಗೆ ಹೋಗಿ… ನಾಲ್ಕು ದಿನ ಕಳೆದಾಗ ‘ಎಂ.ಡಿ.’ ಬದರೀಪ್ರಸಾದ್ ಎಲ್ಲ ಮನಸ್ಸು ಬದಲಿಸಲೂಬಹುದು. ಕಾಲ ಎಲ್ಲವನ್ನೂ ಬದಲಿಸಬಹುದು ಎಸ್ಸೆಸ್… ನೀವೀಗ ಹೋಗಿ…”
“ಎಲ್ಲಿಗೆ ಮೇರೀss ನನಗೆ ಇದೇ ಮನೆ… ಮನೆಯಲ್ಲಿ ಮಣಿ…”
“ಸದ್ಯ ಮನೆಗಲ್ಲವಾದರೆ ಮಗಳ ಮನೆಗಾದರೂ ಹೋಗಿ… ನಿಮ್ಮ ಮಗಳು ಏನಾದರೂ ಉಪಾಯ ಸೂಚಿಸಿಯಾಳು… ಅಲ್ಲದೆ ನಿಮ್ಮ ಪಪ್ಪುವನ್ನು ನೋಡಿದಾಗ ನಿಮ್ಮ ಮನಸ್ಸು ತಿಳಿಯಾಗಲೂಬಹುದು… ಇದು ಅನಿರೀಕ್ಷಿತ ಆಘಾತ… ಆದರೆ…”
ಪಪ್ಪುವಿನ ಹೆಸರು ಕೇಳಿದಾಗ ಶ್ರೀಖಂಡೆಯ ಕಣ್ಣಂಚಿನಲ್ಲಿ ಮತ್ತೆ ಹನಿ. ಮೇರಿ ಮಾತನಾಡುತ್ತಿದ್ದಂತೆಯೇ ಅವರು ಅಲ್ಲಿಂದೆದ್ದರು. ”ಹೌದು ಮೇರೀ… ಹೋಗಲೇಬೇಕಲ್ಲ… ಹೋಗುತ್ತೇನೆ. ಅಲ್ಲದೆ ಈಗ ಆಫೀಸಿನಲ್ಲಿ ನಾನು ಬೇರೆ ಯಾರ ಮುಖ ನೋಡಿಯೇನು?”
ಮೇರಿ ಮಾತನಾಡಲಿಲ್ಲ. ಶ್ರೀಖಂಡೆ ಅಲ್ಲಿಂದೆದ್ದು ಹೋದರು. ಯಾರೊಡನೆಯೂ ಮಾತನಾಡದೆ ತನ್ನ ಜಾಗಕ್ಕೆ ತೆರಳಿ ಕೋಟು ಸಿಕ್ಕಿಸಿಕೊಂಡು ಅವರು ಆಫೀಸಿನಿಂದ ಹೊರಬಿದ್ದಾಗ ಗುರಿ ನಿಶ್ಚಿತವಿರಲಿಲ್ಲ. ಕಾಲು ಎಳೆದದ್ದು ಮಾತ್ರ ಬೋರಿವಲಿಯ ಟ್ರೈನು ಹಿಡಿಯಲು…
ಬೋರಿವಲಿಯಲ್ಲಿ ಮಗಳ ಮನೆಯ ಕರೆಗಂಟೆ ಬಾರಿಸಿದಾಗ ಶ್ರೀಖಂಡೆಯ ಎದೆಯಲ್ಲಿ ಪುನಃ ನಡುಕ. ಶುಭಾಳೊಡನೆ ಏನೆಂದು ಹೇಳುವುದು! ಕೇಳಿದಾಗ ಅವಳೇನು ಸಮಾಧಾನ ಹೇಳಿಯಾಳು! ಶುಭಾ ಬಾಗಿಲು ತೆರೆದಾಗ ಆಕೆಯ ಮುಖಭಾವದಲ್ಲಿ ಆಶ್ಚರ್ಯಕ್ಕಿಂತಲೂ ನಿರೀಕ್ಷೆಯೇ ಹೆಚ್ಚು ವ್ಯಕ್ತವಾಗುವಂತಿತ್ತು. ಕೈಯಲ್ಲಿ ಮಡಚಿ ಹಿಡಿದಿದ್ದ ವೃತ್ತಪತ್ರವನ್ನು ಪಕ್ಕದಲ್ಲಿದ್ದ ‘ಟಿ.ವಿ.’ಯ ಮೇಲಿರಿಸಿ “ನೀವು ಬರಬಹುದೆಂದು ನಿರೀಕ್ಷಿಸಿಕೊಂಡಿದ್ದೆ ಅಪ್ಪಾ” ಎಂದಳು.
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
”ಯಾಕೆ! ಅಷ್ಟು ಬೇಗ ಆಫೀಸಿನಿಂದ ನಿನಗೆ ಹೇಗೆ ಸುದ್ದಿ ಬಂತು ಶುಭಾ! ನನ್ನ ಕೆಲಸ ಹೋಯಿತೆಂದು ಇಷ್ಟು ಬೇಗ ನಿನಗೆ ಹೇಳಿದ್ದು ಯಾರು?” ಶ್ರೀಖಂಡೆ ಆಶ್ಚರ್ಯದಿಂದ ಕೇಳಿದರು.
ಈಗ ಮಾತ್ರ ಶುಭಾಗೆ ತಾನು ಆಡಬಾರದ ಮಾತು ಆಡಿದೆ ಎನಿಸಿರಬೇಕು. ಆಫೀಸಿನಲ್ಲೇ ಏನೋ ತೊಂದರೆ ಆಗಿದೆ. ಹಾಗಿದ್ದರೆ ಅಪ್ಪ ಬೆಳಗಿನ ವೃತ್ತಪತ್ರವನ್ನು ನೋಡಿಯೇ ಇಲ್ಲ. ಸತೀಶನ ಬಗ್ಗೆ ಅವರಿಗೇನೂ ತಿಳಿದಿಲ್ಲ… “
”ಏನಾಯಿತು ಅಪ್ಪಾ! ಕೆಲಸ ಹೋಗುವಂಥ ಪ್ರಮಾದ ಏನಾಯಿತು?”
“ಹೊಸ ‘ಎಂ.ಡಿ.’ ಬಂದರು. ಟೆರೇಸಿನಲ್ಲಿ ಪಾರಿವಾಳಗಳಿದ್ದವು. ಅದೇ ನನ್ನ ತಪ್ಪಾಯಿತು. ಅವುಗಳನ್ನು ಓಡಿಸು, ಕೊಲ್ಲು, ಏನು ಬೇಕಾದರೂ ಮಾಡು ಎಂದರು. ಪಾರಿವಾಳಗಳನ್ನು ಇರಗೊಟ್ಟ ತಪ್ಪಿಗೆ, ಪ್ರಾಯಶಃ ಕೆಲಸವೇ ಹೋಗತ್ತೆ… ರಜೆ ಪಡೆದು ಕೂಡಲೇ ಮನೆಗೆ ಹೋಗು ಎಂದರು. ಮಣಿಗೂ ತಿಳಿಸಿಲ್ಲ. ನೇರ ಇಲ್ಲಿಗೇ ಬಂದೆ. ನನಗೆ ಮುಂದೇನು ಮಾಡಬೇಕೆಂದು ತೋಚುವುದೇ ಇಲ್ಲ… ತೋಚುವುದೇ ಇಲ್ಲ…”
”ಸತೀಶನಿಗೆ ತಿಳಿಸಿದಿರೇನು?”
”ಇಷ್ಟು ಬೇಗ! ತಿಳಿಸಿದರೂ ದುಬಾಯಿಯಲ್ಲಿರುವ ಅವನೇನು ಮಾಡಿಯಾನು.”
ತಂದೆಯ ಕಣ್ಣು ತುಂಬಿಕೊಳ್ಳುತ್ತಿರುವುದನ್ನು ಗಮನಿಸಿದ ಶುಭಾ ಮುಖ ತಿರುಗಿಸಿದಳು. ಸೋಫಾದಲ್ಲಿ ಕುಳಿತ ಶ್ರೀಖಂಡೆ ತನ್ನ ಬಕ್ಕ ತಲೆಯ ಮೇಲೆ ಕೈಯಾಡಿಸುತ್ತಲೇ “ನಾನೇನು ಮಾಡಲಿ ಶುಭಾ… ನನಗೇನೂ ದಾರಿ ತೋಚುವುದೇ ಇಲ್ಲ…”
ಶುಭಾ ಮಾತನಾಡಲಿಲ್ಲ… ಮದುವೆಯಾಗಿ ಮನೆ ಬಿಟ್ಟು ಬಂದಾಗ ಪೋರ್ತುಗೀಸು ಚರ್ಚ್‌ನ ಸಮೀಪದ ಮನೆಯ ಸಂಪರ್ಕ ಮತ್ತೆ ಕುದುರೀತು ಎಂಬ ಭರವಸೆ ಇರಲಿಲ್ಲ. ತಾಯಿ ಅದನ್ನು ಆಗಗೊಡುವಂತಿರಲಿಲ್ಲ. ‘ಹಾಳಾಗಿ ಹೋಗು ರಂಡೆ’ ಎಂದು ಆಶೀರ್ವದಿಸಿ ಕಳಿಸಿದ ತಾಯಿಯನ್ನು ಪುನಃ ಇದಿರಿಸಬೇಕು ಎಂಬ ಆಸೆಯನ್ನು ಆಕೆ ಕಟ್ಟಿಕೊಂಡಿರಲಿಲ್ಲ. ಪಪ್ಪು ಹುಟ್ಟಿದ ಸಂದರ್ಭದಲ್ಲಿ ಆಕೆ ಬದಲಾಗಬಹುದೇನೋ ಎಂಬ ನಿರೀಕ್ಷೆಯಿತ್ತು. ಅದು ನಿರೀಕ್ಷೆಯಾಗಿಯೇ ಉಳಿಯಿತು. ಅಪ್ಪ ಆಗೊಮ್ಮೆ ಈಗೊಮ್ಮೆ ಬರುತ್ತಾರೆ. ಪಪ್ಪು ‘ಅಜೋಬಾ’ ಎಂದು ಅವರ ಬಕ್ಕತಲೆಯ ಮೇಲಾಡುತ್ತಾನೆ… ಬೋರಿವಲಿಯಲ್ಲಿ ಹೂಡಿದ ಸಂಸಾರದ ಎಳೆಗಳು ಒಂದೊಂದೇ ಕೂಡಿಕೊಂಡು ಅಲ್ಲೇ ಒಂದು ಆತ್ಮೀಯವೃತ್ತವನ್ನು ಸೃಜಿಸುತ್ತಿವೆ… ತಾಯಿ ದೂರವೇ ಉಳಿಯುತ್ತಾಳೆ… ಈಗ ಸತೀಶ ಏನು ಮಾಡಿಬಿಟ್ಟ!
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಅಂದು ಬೆಳಗಿನ ವೃತ್ತಪತ್ರದಲ್ಲಿ ಆಕೆಯ ಕಣ್ಣಿಗೆ ಮೊದಲು ತೋರಿದ್ದು ಒಂದು ಅಪೂರ್ವ ಜಾಹಿರಾತು. ದುಬೈ ಸರಕಾರದ ಅಧಿಕಾರಿಗಳದ್ದು… ಆ ಜಾಹಿರಾತಿನಲ್ಲೇ ಎರಡು ಚಿತ್ರಗಳು… ಒಂದು ಸತೀಶನದ್ದು… ಇನ್ನೊಬ್ಬಾಕೆ ಯಾರೋ! ದುಬೈನಲ್ಲಿ ಇರುವ ಹುಡುಗಿ… ಇಬ್ಬರ ಹೆಸರು, ವಿಳಾಸ… ಇಬ್ಬರೂ ಮದುವೆಯಾಗಲಿಚ್ಛಿಸಿದ್ದಾರೆಂದೂ ಈ ಮದುವೆಗೆ ಮಾನ್ಯತೆ ಕೊಡುವ ಮೊದಲು ಯಾರಾದರೂ ವಿರೋಧವಿದ್ದರೆ ತಿಳಿಸಬೇಕೆಂದೂ ಸರಕಾರದ ನೋಟೀಸು. “ವಿರೋಧ ಸೂಚಿಸುವುದಾದರೆ ನಿನ್ನಮ್ಮ ಸೂಚಿಸಬೇಕು” ಎಂದಿದ್ದರು, ಶುಭಾಳ ಗಂಡ ನಗುತ್ತಾ…
ಆಗಲೂ ಶುಭಾ ಮಾತನಾಡಿರಲಿಲ್ಲ. ಅಪ್ಪ ಆ ವೃತ್ತ ಪತ್ರಿಕೆಯನ್ನು ನೋಡಿಯೇ ಇಲ್ಲ. ಈಗ ಅಪ್ಪನೇ ಆಯಿಯನ್ನು ಇದಿರಿಸಲಾಗದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ… ಇನ್ನು ಆಯಿಗೆ ಸತೀಶನ ವಿಚಾರವೂ ತಿಳಿದಾಗ ಏನೆಲ್ಲ ರಂಪ ಕಾದಿದೆಯೋ!
”ಪಪ್ಪು ಎಲ್ಲಿದ್ದಾನೆ?” ಎಂದರು ಶ್ರೀಖಂಡೆ… “ಎಲ್ಲೋ ಆಡುತ್ತಿದ್ದಾನೆ, ಕರೆಯುತ್ತೇನೆ. ಈಗ ನೀವೊಂದಿಷ್ಟು ಊಟ ಮಾಡಿ… ಬಟ್ಟಲಿಡುತ್ತೇನೆ” ಎಂದಳು ಶುಭಾ.
”ಬೇಡ ಶುಭಾ… ನನಗೆ ಊಟ ಸೇರುವುದಿಲ್ಲ… ಒಂದಿಷ್ಟು ನೀರು ಕೊಡು” ಎಂದರು ಶ್ರೀಖಂಡೆ. ಆದರೆ ಮಗಳು ಬಿಡಲಿಲ್ಲ. ಬಲವಂತಕ್ಕಾಗಿ ಬಟ್ಟಲ ಮುಂದೆ ಕುಳಿತಾಗ ಪಪ್ಪು ಬಂದ… ”ಓ, ಅಜೋಬಾ…” ಎಂದು ಅವರ ಕುತ್ತಿಗೆಗೆ ಜೋತು ಬಿದ್ದು ‘ಚಾಕಲೇಟ್ ಎಲ್ಲಿ?’ ಎಂದ. ಶ್ರೀಖಂಡೆ ಚಾಕಲೇಟ್ ಮರೆತಿದ್ದರು. “ಊಟ ಮುಗಿಸಿ ತರುತ್ತೇನೆ ಪಪ್ಪು” ಎಂದರು.
ಊಟ ಮಾಡುತ್ತಿದ್ದ ತಂದೆಯನ್ನೂ, ಆಡುತ್ತಿದ್ದ ಮಗುವನ್ನೂ, ಟಿ.ವಿ.ಯ ಮೇಲಿದ್ದ ವೃತ್ತಪತ್ರಿಕೆಯನ್ನೂ ತನ್ನ ವಿಚಾರದ ಗತಿಗೆ ಹೊಂದಿಸಲು ಯತ್ನಿಸುತ್ತಿದ್ದ ಶುಭಾ ಗಂಡ ಆಡಿದ್ದ ಮಾತನ್ನೆ ಮೆಲುಕು ಹಾಕುತ್ತಿದ್ದಳು. “ಈಗ ನಾನೇನು ಮಾಡಬೇಕು?” ಎಂದು ಗಂಡನೊಡನೆ ಕೇಳಿದಾಗ ಆತ ಹೇಳಿದ್ದು ವೇದಾಂತ… “ಅದನ್ನು ನೀನೇ ನಿರ್ಧರಿಸಬೇಕು ಶುಭಾ. ಏನು ಮಾಡುವುದು ಅಗತ್ಯ, ಏನು ಮಾಡಿದರೆ ಚೆಂದ ಎಂಬುದನ್ನು ನೀನೇ ತೂಗಿ ನೋಡಿ ನಿರ್ಧರಿಸು… ನಿನ್ನ ಆಯ್ಕೆಯ ಸ್ವಾತಂತ್ರ್ಯಕ್ಕೆ ನಾನು ಅಡ್ಡಿ ಬರುವುದಿಲ್ಲ…”
“ಸಾರ್ಥಕವಾಯಿತು ನೀವು ಫಿಲಾಸಫಿ ಕಲಿಸುತ್ತಿರುವುದಕ್ಕೆ” ಎಂದು ಹುಸಿ ಮುನಿಸಿನಿಂದ ಉತ್ತರಿಸಿದ್ದಳು ಶುಭಾ.
ಈಗ! ಆಯಿಯ ವಿಚಾರಗತಿಯ ಪರಿಚಯವಿದ್ದೂ ಸತೀಶ ಹೀಗೇಕೆ ಮಾಡಿದ! ಅಪ್ಪನಿಗೆ ಹೀಗೇಕಾತು, ಇಂಥ ಸಂದರ್ಭದಲ್ಲೆ!
ಶ್ರೀಖಂಡೆ ಊಟ ತೀರಿಸಿದ ಮೇಲೆ “ಸ್ವಲ್ಪ ಮಲಗುತ್ತೀರಾ ಅಪ್ಪ?” ಎಂದಳು ಶುಭಾ… ತಂದೆಯ ಮುಖದಲ್ಲಿ ವಿಷಾದದ ನಗೆ… “ಇನ್ನು ಮಲಗುವುದಕ್ಕೂ, ಸಾಯುವುದಕ್ಕೂ ವ್ಯತ್ಯಾಸವಿಲ್ಲ ಶುಭಾ… ನಾನಿನ್ನು ಬರುತ್ತೇನೆ” ಎಂದು ತನ್ನ ಕೋಟನ್ನೆತ್ತಿಕೊಂಡರು…
“ಅರ್ಧ ತಾಸು ತಡೆಯಿರಿ ಅಪ್ಪಾ… ಪಪ್ಪುವನ್ನು ಕರೆದುಕೊಂಡು ನಾನೂ ಬರುತ್ತೇನೆ ನಿಮ್ಮ ಜತೆಗೆ…” ಎಂದಳು ಶುಭಾ.
“ನೀನು! ಎಲ್ಲಿಗೆ?”
“ಮನೆಗೆ.”
“ಮನೆಗೆ! ನಮ್ಮ ಮನೆಗೆ!” ಆನಂದ, ಆಶ್ಚರ್ಯ, ಭಯ, ಉದ್ವೇಗ ಎಲ್ಲ ಒಮ್ಮೆಗೇ ಮುತ್ತಿಕೊಂಡಾಗ ಶ್ರೀಖಂಡೆ “ಮನೆಗೆ! ಶುಭಾ ನಮ್ಮ ಮನೆಗೆ!” ಎಂದಷ್ಟೆ ಹೇಳಿದರು. ಇಪ್ಪತ್ತೆರಡು ವರ್ಷ ಕಾಲದ ದುಡಿಮೆಯಲ್ಲಿ ತಾನು ಮೊದಲ ಬಾರಿಗೆ ಸಿಲುಕಿಕೊಂಡಿದ್ದ ಅತ್ಯಂತ ಸಂದಿಗ್ಧ ಪರಿಸ್ಥಿತಿಯ ಪ್ರಜ್ಞೆಯೇ ಇರದವರಂತೆ ‘ಮನೆಗೆ!’ ಎಂದು ಕೂಗಿಕೊಂಡರು. “ಇದು ನಿಜವೆ ಶುಭಾ… ಪಪ್ಪು ಮನೆಗೆ ಬರುತ್ತಾನೆಯೆ! ಗುಬ್ಬಿಗೂಡು ತೋರಿಸುತ್ತೇನೆ ಪಪ್ಪು…” ಎಂದು ಮಗುವನ್ನೆತ್ತಿಕೊಂಡರು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಶುಭಾ ಆ ಗಳಿಗೆಯಲ್ಲಿ ನೆನೆಸಿಕೊಂಡದ್ದು ಟಿ.ವಿ.ಯ ಮೇಲಿದ್ದ ವೃತ್ತಪತ್ರವನ್ನು.
ಐದು ವರ್ಷಗಳ ಹಿಂದೆ ಯಾವ ಸಂಕೋಚವೂ ಕಾಡದೆ ಬಿಟ್ಟು ಬಂದಿದ್ದ ಮನೆಗೆ ಮತ್ತೆ ಹೋಗಬೇಕು. ನೆನಪಿನ ದೃಷ್ಟಿ ಹಾಯಿಸಿದ್ದೇನೆ. ಬಾಲ್ಯದ ಆಸಕ್ತಿಗಳಿಗೆಲ್ಲ ನೀರೆರೆದಿದ್ದ ಮನೆಯ ಆವರಣಕ್ಕೆ, ಸಾವಿರ ಸ್ಮೃತಿಗಳು ಕಾಡಬಹುದಾದ ಮನೆಯ ಕಟ್ಟಡದ ಮೆಟ್ಟಿಲುಗಳನ್ನು ಏರಲು. ಈಗ ಮರಳಬೇಕು… “ಹಾಳಾಗಿ ಹೋಗು ರಂಡೆ” ಎಂದಿದ್ದ ತಾಯಿಯನ್ನು ಕಾಣಲು ಈಗ ಹೋಗಬೇಕು. ಪಪ್ಪು ಹೊರಟಿದ್ದುದು ಅಪರಿಚಿತ ತಾಣಕ್ಕೆ. ಶ್ರೀಖಂಡೆ ಮನೆಗೆ-ಮಣಿಯನ್ನು ಸಂಧಿಸಲು. ಮನೆಯನ್ನು ಮನೆಯೆಂದು ಇದಿರಿಸುವ ಧೈರ್ಯದ ಕೊರತೆಯನ್ನು ತುಂಬಲು ಜತೆಗಿದ್ದಳು ಶುಭಾ… ಶುಭಾ ಯೋಚಿಸುತ್ತಿದ್ದುದು ಬೇರೆಯೆ. ತನ್ನನ್ನು ನೋಡಿದೊಡನೆ ಆಯಿ ಒಮ್ಮಿಂದೊಮ್ಮೆಗೆ ರೇಗಿ ಕೂಗುತ್ತಾಳೆ… “ಸತ್ತವಳೆ, ಇಲ್ಲಿಗೇಕೆ ಬಂದೆ ರಂಡೆ?” ಎನ್ನುತ್ತಾಳೆ. ಆಗ ಏನು ಮಾಡಬೇಕು. ಆಕೆಗೆ ಯಾವ ಉತ್ತರ ಹೇಳಬೇಕು!
ಶ್ರೀಖಂಡೆ ಮನೆಯ ಬಾಗಿಲು ತಟ್ಟಿದಾಗ ಒಳಗಿನಿಂದ ‘ಕೋಣ್?’ ಎಂದು ಸ್ವರ ಹೊರಟಿತು. “ನಾನು… ಬಾಗಿಲು ತೆಗೆ” ಎಂದು ಶ್ರೀಖಂಡೆ ಉತ್ತರಿಸಿದಾಗ ಮಣಿ ಬಾಗಿಲು ತೆರೆದು ನೋಡಿದರು. ದಿಗ್ಭ್ರಾಂತರಂತೆ ನಿಂತುಬಿಟ್ಟರು. ಶ್ರೀಖಂಡೆ ಬಾಗಿಲಿಗೆ ಅಡ್ಡವಾಗಿ ನಿಂತಿದ್ದ ಹೆಂಡತಿಯನ್ನು ದೂಡಿಕೊಂಡೆ ಒಳಗೆ ಪ್ರವೇಶಿಸಿದರು. ಪಪ್ಪುವನ್ನು ಎತ್ತಿಕೊಂಡಿದ್ದ ಶುಭಾಳ ಮೈಯಲ್ಲಿ ನಡುಕ… “ಆಯೀss…” ಎಂದಳಷ್ಟೆ ನಿಧಾನವಾಗಿ, ಹೆಂಡತಿಯ ಮೌನ ಶ್ರೀಖಂಡೆಗೆ ಆಸರೆ. ಯಾವ ಗಳಿಗೆಯಲ್ಲಿ ಸಿಟ್ಟಿನ ಸ್ಫೋಟ ಕಾದಿದೆಯೋ ಎಂಬ ಭಯದಿಂದಲೇ ”ಮಣೀ… ನೋಡು ಶುಭಾ ಬಂದಿದ್ದಾಳೆ… ಎಷ್ಟು ಸಮಯದ ಮೇಲೆ… ಪಪ್ಪು ನಿನ್ನ ಮೊಮ್ಮಗ… ಇವೊತ್ತು ಆಫೀಸಿನಲ್ಲಿ ಗಲಾಟೆಯಾಯಿತು. ನಾನು ಅಲ್ಲಿ ಪಾರಿವಾಳ ಸಾಕಿದ್ದು ಅಪರಾಧವಾಯಿತು. ಹೊಸ ‘ಎಂ.ಡಿ.’ಗೆ ಅದು ಸಹಿಸಲಿಲ್ಲ… ಈಗಿಂದೀಗಲೇ ‘ನೀನು ರಜೆ ಪಡೆದು ಹೋಗು… ಇನ್ನು ನೀನು ‘ಕ್ಯಾರ್‌ಟೇಕರ್’ ಆಗಿ ಮುಂದುವರಿಯುವುದು ಬೇಡ’ ಎಂದರು. ಮಣೀ ಈಗ ನನಗೆ ಏನು ಮಾಡಬೇಕೆಂದು ತೋಚುವುದೇ ಇಲ್ಲ… ಯಾರೊಡನೆ ಹೇಳಬೇಕು ನಾನು ನನ್ನ ಕಷ್ಟವನ್ನು… ನೀನು ಶುಭಾ… ಸತೀಶ ಎಲ್ಲಿಯೋ… ನೋಡು ಮಣೀ… ಪಪ್ಪು ಬಂದಿದ್ದಾನೆ… ನಮ್ಮ ಮೊಮ್ಮಗ…” ಆಗ ‘ಆಯೀss…’ ಎಂದಳು ಮತ್ತೊಮ್ಮೆ ಶುಭಾ, ಮೃದುವಾಗಿಯೆ.
ಇದನ್ನು ಓದಿದ್ದೀರಾ?: ವೀರಭದ್ರ ಅವರ ಕತೆ | ಕೈಬೀಸಿತು ಹೆಣ!
ಮಣಿ ನೋಡುತ್ತಲೇ ಇದ್ದರು. ಈಗ ಯಾರಿಗೂ ಏನು ಮಾತನಾಡುವುದೆಂದು ಹೊಳೆಯಲಿಲ್ಲ. ಅಸಹನೀಯ ಮೌನ ಕೋಣೆಯನ್ನೆಲ್ಲ ವ್ಯಾಪಿಸುತ್ತಿದೆಯೇ ಎಂದು ಭಾಸವಾಗುವಂತಿದ್ದಾಗ, ಆ ಮೌನದಲ್ಲಿ ಮೂರು ಜೀವಗಳು ಪರಸ್ಪರ ಸಂಪರ್ಕ ಹೇಗೆ ಸಾಧಿಸುವುದೆಂದು ಯೋಚಿಸುತ್ತಿದ್ದಾಗ, ಒಮ್ಮಿಂದೊಮ್ಮೆಗೇ ಗುಬ್ಬಿಗೂಡಲ್ಲಿ ಚಿಲಿಪಿಲಿ ಶಬ್ದ ಹೆಚ್ಚಾಯಿತು. ಶ್ರೀಖಂಡೆ ಸಂತೋಷದಿಂದ, “ಪಪ್ಪು… ಗುಬ್ಬಿ ಗೂಡು ನೋಡು… ಗುಬ್ಬಿ ನೋಡು” ಎನ್ನುತ್ತಿರುವಾಗಲೇ ಮರಿಗುಬ್ಬಿಯೊಂದು ದೊಪ್ಪನೆ ನೆಲದ ಮೇಲೆ ಬಿದ್ದದ್ದು ಗಮನಕ್ಕೆ ಬಂತು… “ಅರೆ… ಇನ್ನೂ ರೆಕ್ಕೆ ಬಿಡಿಸದ ಮರಿಗುಬ್ಬಿ; ಕೆಳಗೆ ಬಿತ್ತಲ್ಲಾ…” ಎಂದು ಶ್ರೀಖಂಡೆ ಹೇಳುತ್ತಿದ್ದಂತೆಯೇ, ಪಪ್ಪು ಒಮ್ಮೆಗೇ ಆಸಕ್ತಿಯ ಪ್ರತೀಕವಾಗಿ ಮುಖವರಳಿಸಿಕೊಂಡು ಆ ಮರಿ ಗುಬ್ಬಿ ಬಿದ್ದಲ್ಲಿಗೆ ಓಡಿ ಅದನ್ನೆತ್ತಿದ. “ಪಪ್ಪೂ…ಮೆಲ್ಲ…ಮೆಲ್ಲ…ಅದು ಮರಿ ಗುಬ್ಬಿ…ಬಿದ್ದು ಪೆಟ್ಟಾಗಿದೆ…ಜಾಗ್ರತೆ…!” ಎಂದು ಶುಭಾ ಹೇಳುತ್ತಿದ್ದಂತೆಯೇ. ಶ್ರೀಖಂಡೆ ಪಪ್ಪುವಿನ ಕೈಯಿಂದ ಆ ಮರಿಯನ್ನು ತೆಗೆದು ಮೇಲೆ ಗೂಡಿಗೆ ದಾಟಿಸಬೇಕು ಎಂದು ಮುಂದುವರಿಯುತ್ತಿದ್ದಂತೆಯೇ, ಪಪ್ಪು ಕೈಯಲ್ಲಿದ್ದ ಮರಿಗುಬ್ಬಿಯನ್ನು ಒಂದು ಕ್ಷಣ ನೋಡಿ ಹಾಗೆಯೇ ಕಿವುಚಿದ. ಕೈ ಬಿಡಿಸಿದಾಗ ಕೈಯೆಲ್ಲ ಹೇಸಿಗೆಯೆನಿಸಿ “ಹೋ, ಮರಿ ಸತ್ತೇ ಹೋಯಿತು” ಎಂದ… “ಏನು ಮಾಡಿಬಿಟ್ಟೆ ಪಪ್ಪು!” ಎಂದು ಶುಭಾ ಓಡಿ ಮಗುವಿನ ಕೈಯಿಂದ ಸತ್ತ ಗುಬ್ಬಿಯನ್ನು ತೆಗೆದಾಗಲೂ ಮಣಿ ನೋಡುತ್ತಲೇ ಇದ್ದರು.
ಶ್ರೀಖಂಡೆಯ ಕಣ್ಣು ತುಂಬಿಕೊಂಡವು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ವ್ಯಾಸರಾಯ ಬಲ್ಲಾಳ (1923-2008): ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದ ಬಲ್ಲಾಳರು ಪ್ರಮುಖವಾಗಿ ತಮ್ಮ ಕಥೆ, ಕಾದಂಬರಿ, ಲೇಖನಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದವರು. ತಮ್ಮ ಕೌಟುಂಬಿಕ ಜೀವನದ ಹಿನ್ನೆಲೆಯನ್ನು ಒಳಗೊಂಡಂತೆ ಅಥವಾ ಸ್ವಾತಂತ್ರ್ಯ ಸಂಗ್ರಾಮದ ಧ್ಯೇಯಾದರ್ಶಗಳ ತಾಕಲಾಟವನ್ನು ಅಥವಾ ಸಾಮಾಜಿಕ ವಿಚಾರಧಾರೆಯನ್ನು ಅಥವಾ ಕಾರ್ಮಿಕರ ಬದುಕು-ಬವಣೆಗಳನ್ನು ಕೇಂದ್ರವಾಗಿಸಿಕೊಂಡು ಅವರು ಕೃತಿಗಳನ್ನು ರಚಿಸಿದ್ದಾರೆ. ಬಹುತೇಕ ಕೃತಿಗಳಲ್ಲಿ ವಸ್ತು, ಚಿಂತನೆಗಳು ಸಮರಸವಾಗಿ ಬೆರೆತು ಸಾಗಿವೆ. ವ್ಯಾಸರಾಯರು ತಮ್ಮ ‘ಬಂಡಾಯ’ ಕಾದಂಬರಿಗಾಗಿ 1986ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ್ದಾರೆ. ಪ್ರಕಟಿತ ಕೃತಿಗಳು: ‘ಬದುಕಿನ ಆದರ್ಶ'(1950), ‘ಕಾಡುಮಲ್ಲಿಗೆ’ (1957), ‘ಸಂಪಿಗೆಯ ಹೂ’ (1958), ‘ಮಂಜರಿ’ (1975), ‘ತ್ರಿಕಾಲ’ (1992) (ಕಥಾಸಂಕಲನಗಳು); ‘ಅನುರಕ್ಕೆ’ (1953), ‘ಹೇಮಂತಗಾನ’ (1954), ‘ವಾತ್ಸಲ್ಯಪಥ’ (1957), ‘ಉತ್ತರಾಯಣ’ (1999), ‘ಬಂಡಾಯ’ (1985), ‘ಆಕಾಶಕ್ಕೊಂದು ಕಂದೀಲು’ (1995) (ಕಾದಂಬರಿಗಳು); ‘ನಾನೊಬ್ಬ ಭಾರತೀಯ ಪ್ರವಾಸಿ’ (ಪ್ರವಾಸ ಕಥನ). ವ್ಯಾಸರಾಯ ಬಲ್ಲಾಳರ ಕೃತಿಗಳ ಮೇಲೆ ಸಂಶೋಧನೆ ನಡೆಸಿರುವ ಡಿ. ವಿಜಯಲಕ್ಷ್ಮಿ ಅವರು ನವಕರ್ನಾಟಕ ಪ್ರಕಾಶನಕ್ಕಾಗಿ ಬಲ್ಲಾಳರನ್ನು ಪರಿಚಯಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾದ ಬಲ್ಲಾಳರು, ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದರು, ಜನವರಿ 2008ರಂದು ನಿಧನರಾದರು.





