ಅಡುಗೆ ಮಾಡುವುದಕ್ಕೆ ಎಲ್‌ಪಿಜಿ ಸಿಲಿಂಡರ್ ಉತ್ತಮ ಆಯ್ಕೆ. ಆದರೆ ಯುದ್ಧ ಅಥವಾ ಇನ್ನಿತರ ಅವಘಡಗಳು ಸಂಭವಿಸಿದಾಗ ಎಲ್‌ಪಿಜಿ ಸಿಲಿಂಡರ್ ಸಿಗುವುದು ಕಷ್ಟ ಅನಿಸಿದಾಗ, ನಾವು ಕೈ ಚೆಲ್ಲಿ ಕೂರಬೇಕಾಗಿಲ್ಲ. ಮೇಲೆ ತಿಳಿಸಿದ ಪರ್ಯಾಯ ಮಾರ್ಗಗಳತ್ತ ನೋಡಬಹುದು. ಅಂತಹ ಕೆಲವು ಮಾರ್ಗಗಳು ಇಲ್ಲಿವೆ...
‘ಯುದ್ಧ ನಡೀತಿದೆಯಂತೆ ಅದಕ್ಕೆ ಸಿಲಿಂಡರ್ ಸಿಗ್ತಿಲ್ವಂತೆ’ ಎನ್ನುವುದು ಎಲ್ಲಾ ಕಡೆ ಕೇಳಿಬರುತ್ತಿರುವ ಮಾತು. ಸಿಲಿಂಡರ್‍ರನ್ನೇ ನೆಚ್ಚಿ ಕೂತರೆ, ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು. ಹಾಗಂತ ಸುಮ್ಮನಿರಲೂ ಸಾಧ್ಯವಿಲ್ಲ. ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ಪರ್ಯಾಯ ಮಾರ್ಗಗಳತ್ತ ಇಲ್ಲಿ ವಿವರಿಸಲಾಗಿದೆ.
ಸಿಲಿಂಡ್ರು ಸಂಭಾಷಣೆ
ಕಮಲಮ್ಮ: ನಿಂಗಕ್ಕ ನಮ್ಮಲ್ಲಂತೂ ಸಿಲಿಂಡ್ರು ಮುಗಿಯಕೆ ಬಂದೈತೆ. ಏನು ಮಾಡೋದು ಆಮೇಲೆ ಅಂತ ತಲೇನೇ ಓಡ್ತ ಇಲ್ಲವ ನಂಗೆ. ಹೋಟ್ಲಲೂ ಊಟ ತಿಂಡಿ ಸಿಗ್ತಿಲ್ಲ. ಒಂದು ಪ್ಲೇಟ್ ಇಡ್ಲಿಗೆ 80 ರೂಪಾಯಂತೆ. ಗ್ಯಾಸ್ ಚಾರ್ಜ್‌ನೂ ತಿಂಡಿ ಮೇಲೆ ಹಾಕ್ತಾವ್ರಂತೆ. ಇಂಗಾದ್ರೆ ಹೊರಗಿಂದ ತಂದು ತಿನ್ನಕಾಯ್ತದ. ಏನು ಮಾಡೋದು ಅನ್ನೋದೇ ಚಿಂತೆ ಆಯಿತವ್ವ.
ನಿಂಗಕ್ಕ: ಅದ್ಕ್ಯಾಕೆ ಯೋಚನೆ ಮಾಡ್ತಿಯ. ಊರಲ್ಲೆಲ್ಲ ಸೌದೆ ಒಲೇಲಿ ಅಡುಗೆ ಮಾಡ್ತಿರಲಿಲ್ವ, ಇಲ್ಲೂ ಅಂಗೆ ಒಂದು ಸೌದೆ ಒಲೆ ತರದು, ಅದ್ರಲೆ ಬೇಸ್ಕೆಂಡು ತಿನ್ನದು. ಇನ್ನೇನ್ಮಾಡಕಾಗುತ್ತೆ.
ಕಮಲಮ್ಮ: ಅಂಗಲ್ಲ ನಿಂಗಕ್ಕ, ಒಲೆ ತರದು ಹಾಳಾಗೋಗ್ಲಿ ತಂದ್ರಾಗುತ್ತೆ. ಅದಕ್ಕೆ ಸೌದೆ ಎಲ್ಲಿ ಹೊಂಚನಾ… ಏನು ಹಳ್ಳಿಯಾ ಇದು? ತ್ವಾಟದ ಕಡಿಕೆ ಹೋಗಿ ಒಂದೊರೆ ಸೌದೆ ತಂದು ಹಾಕ್ಯಂಡ್ರೆ ಆಗುತ್ತೆ ಬುಡು ಅನ್ನಕೆ. ಇದು ಬೆಂಗ್ಳೂರು ಕಣವ, ಮೊದಲೇ ಬಾಡಿಗೆ ಮನೆಲೆ ಬದುಕ್ತ ಇದೀವಿ. ಇಲ್ಲಿ ಒಂದು ಮಳೆ ಒಡ್ಯಾಕೆ ಬುಡಕುಲ, ಇನ್ನ ಸೌದೆ ತಂದು ಒಲೆ ಹಾಕ್ಯಂಡು ಅಡುಗೆ ಮಾಡಕೆ ಬುಡ್ತರಾ? ಅಂಗೇನಾರಾ ಬುಟ್ರೂ ಅಂದ್ಕ, ಆಗ ಎಲ್ಲಿಂದ ಸೌದೆ ತರನಾ ಹೇಳು?
ನಿಂಗಕ್ಕ: ನೋಡು ಕಮಲಮ್ಮ, ಬೆಂಗ್ಳೂರಲ್ಲಿ ಪಾರ್ಕ್‌ಗಳಿಗೆ ಹೋಗಿ ಪುಳ್ಳೆ ಗಿಳ್ಳೆ ಆಯ್ಕೊಂಡು ಬಂದು ಬೇಸ್ಕ್ಯಂಡು ತಿಂದ್ರಾಗತ್ತೆ ತಗ. ಇಲ್ದೆ ಹೋದ್ರೆ ಕರೆಂಟಿನವು ಎಂತೆಂಥವೋ ಇದಾವಲ್ಲ ಅವುನ್ನೇ ತಂದುಕಳದು ಇನ್ನೇನು ಮಾಡದು ಉಪಾಸ ಇರಕಾಯ್ತದಾ…?
ಕಮಲಮ್ಮ: ನಿಂಗಕ್ಕ ತಡಿ, ನಮ್ಮ ಪಕ್ಕದ ಮನೆಗೆ ಒಬ್ರು ಬಾಡಿಗೆ ಬಂದವ್ರೆ, ಅವರ ಮಲ್ಲಿ ಏನೇನೋ ಸಾಮಾನು ಇಟ್ಕ್ಯಂಡಿದ್ರವ… ಅವ್ರ ಕೇಳಿದ್ರೆ ಗೊತ್ತಾಯ್ತದೆ… ಅವರ ಮಲ್ಲಿ ಅಡುಗೆ ಮಾಡಕೆ ಸಿಲಿಂಡ್ರು ಇಲ್ದಹೋದ್ರೆ ಏನ್ಮಾಡ್ತರೆ ಅಂತ ಕೇಳನ… ನಾವೂ ಅಂಗೆ ಮಾಡಿದ್ರಾಗುತ್ತೆ ಅಲ್ವಾ…
ನಿಂಗಕ್ಕ: ಹ್ಞೂಂ… ಕಮಲಮ್ಮ ಅವರನ್ನೇ ಕೇಳು ಅಂಗಾರೆ. ನಾವೂ ಅಂಗೆ ಮಾಡಿದ್ರಾಗುತ್ತೆ.
ಕಮಲಮ್ಮ: ಸ್ನೇಹಾ, ಈಗ ಎಲ್ಲೂ ಸಿಲಿಂಡ್ರು ಸಿಕ್ಕಕುಲ ಅಂತೌರಲ, ನಿಮ್ಮನೆಲಿ ಏನ್ಮಾಡ್ತಿರವ ಅಡುಗೆ ಮಾಡಕೆ…
ಸ್ನೇಹಾ: ಅಯ್ಯೋ, ನೋಡಿ ಅಮ್ಮ, ಈಗ ನಮ್ಮನೇಲಿ ಇಂಡಕ್ಷನ್ ಸ್ಟವ್ ಇದೆ. ಒಬ್ಬರಿಗೆ ಕಾಫಿ, ಟೀ ಮಾಡಿಕೊಳ್ಳೋದಾದರೆ ಇರಲಿ ಅಂತ ತಂದಿದ್ದೆ. ಮನೆಲಿ ಜನ ಜಾಸ್ತಿ ಆದಮೇಲೆ ಅದನ್ನು ಒಂದುಕಡೆ ಎತ್ತಿ ಇಟ್ಟಿದ್ದೆ. ಈಗ ಯಂಗೂ ಸಿಲಿಂಡರ್ ಖಾಲಿಯಾಗಂಗಿದೆ. ಕರೆಂಟ್ ಸ್ಟವ್‌ನೇ ಬಳಸ್ತಿನಿ. ಇದರಲ್ಲಿ ಟೀ, ಕಾಫಿ, ಅನ್ನ, ಸಾರು ಎಲ್ಲನೂ ಮಾಡಬಹುದು. ಇದಲ್ಲದೆ, ಇನ್ನೂ ಬೇರೆ ರೀತೀಲೂ ಅಡುಗೆ ಮಾಡ್ಕೋಬಹುದು ಎಂದು ಪರ್ಯಾಯ ಮಾರ್ಗಗಳತ್ತ ವಿವರಿಸತೊಡಗಿದರು.
ಇಂಡಕ್ಷನ್ ಕುಕ್‌ಟಾಪ್‌ಗಳು: ಇಂಡಕ್ಷನ್ ಸ್ಟವ್ LPG ಸ್ಟವ್‌ಗಿಂತ ಚನಾಗ್ಯವೆ. ಕರೆಂಟ್ ಬಳಸಿ ಅಡುಗೆ ಮಾಡಿಕೊಳ್ಳಬಹುದು. ಕೆಟಲ್ ಇದ್ದರೆ, ಹಾಲು, ನೀರು ಕುದಿಸಿಕೊಳ್ಳಬಹುದು. ಬೇಗ ಕೆಲಸನೂ ಆಗುತ್ತೆ ಗ್ಯಾಸ್ ಅವಶ್ಯಕತೆಯೂ ಇಲ್ಲ.

ಇದರಲ್ಲಿ ಯಾವ್ಯಾವ ಅಡುಗೆಗೆ ಎಷ್ಟೆಷ್ಟು ನಿಮಿಷ ಅಂತ ನಮಗೆ ಹೇಗೆ ಬೇಕು ಹಾಗೆ ಟೈಮ್ ಸೆಟ್ ಮಾಡಿಕೊಬಹುದು. ಇದು ದಿನಾ ಅಡುಗೆ ಮಾಡೋಕೆ ಅನುಕೂಲ ಆಗುತ್ತೆ.
ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್‌ಗಳು: ಕರೆಂಟ್ ಕುಕ್ಕರ್‌ಗಳು ಇವೆ. ಅದರಲ್ಲಿ ಒಂದು ಪಾತ್ರೆ ಇರುತ್ತೆ. ಅದಕ್ಕೆ ಅನ್ನ, ಬೇಳೆ, ತರಕಾರಿಗಳು ಎಲ್ಲನೂ ಹಾಕಿ ಇಟ್ಟು ಸ್ವಿಚ್ ಹಾಕಿದ್ರೆ ಅನ್ನ ಆದಮೇಲೆ ಅದರ ಪಾಡಿಗೆ ಅದು ಆಫ್ ಆಗುತ್ತೆ. ಅಷ್ಟೇ ಅಲ್ಲ ಇದರಲ್ಲಿ ಬಿರಿಯಾನಿನೂ ಬೇಯಿಸಬಹುದು. ಇದೊಂದ್ರಲ್ಲೇ ಹಲವಾರು ರೀತಿಯ ಅಡುಗೆಗಳನ್ನು ಮಾಡಿಕೊಳ್ಳಬಹುದು. ಸಮಯವೂ ಉಳಿಯುತ್ತೆ ಗ್ಯಾಸ್ ಕೂಡ ಬೇಕಾಗಿಲ್ಲ.

ಮೊದಲಿಗೆ ಅಕ್ಕಿ, ಕಡಲೆಕಾಳನ್ನು ಒಂದು 30 ನಿಮಿಷ ನೆನೆಸಿಟ್ಟಿದ್ರೆ ಬೇಗ ಬೆಂದುಬಿಡ್ತವೆ. ಆಗ ಸಮಯಕ್ಕೆ ಸರಿಯಾಗಿ ಅಡುಗೆನೂ ಮಾಡಿಕೊಳ್ಳಬಹುದು.
ಮೈಕ್ರೋ ಓವನ್: ಮೈಕ್ರೋವೇವ್ ಓವನ್‌ಗಳಲ್ಲಿ ಬಿಸಿ ಮಾಡಬಹುದು, ಬೇಯಿಸಬಹುದು, ಗ್ರಿಲ್ ಮಾಡಬಹುದು. ಅಲ್ಲದೆ ತಿಂಡಿ(ಬ್ರೆಡ್, ಬನ್ನು, ಬಿಸ್ಕಟ್ಸ್)ಗಳನ್ನೂ ಮಾಡಬಹುದು. ಇದರಿಂದ ವೇಗವಾಗಿಯೂ ಅಡುಗೆ ಆಗುತ್ತೆ, ಚೆನ್ನಾಗಿದೆ.

ಅಷ್ಟೇ ಅಲ್ಲ, ಏರ್ ಫ್ರೈಯರ್ ಬಳಸೋದ್ರಿಂದ ಅಡುಗೆ ಎಣ್ಣೆ ಹಾಕದೇ ತರಕಾರಿಗಳನ್ನು ಫ್ರೈ ಮಾಡಬಹುದು. ಬೇಗ ಅಡುಗೆ ಆಗುತ್ತೆ. ಹೆಚ್ಚಿನ ಮನೆಗಳಲ್ಲಿ ಈಗಾಗಲೇ ಮೈಕ್ರೋವೇವ್‌ನಲ್ಲಿ ಸ್ಟೀಮಿಂಗ್ ಅಥವಾ ರೆಡಿ-ಟು-ಈಟ್‌ನಂತಹ ಅಡುಗೆಗಳನ್ನು ಕ್ವಿಕ್ ಆಗಿ ಮಾಡೋಕೆ ಶುರು ಮಾಡಿದರೆ… ತುಂಬಾ ಅನುಕೂಲ ಆಗುತ್ತೆ. ಇವೆಲ್ಲವೂ ಹೋಮ್ ಅಪ್ಲೈಯನ್ಸಸ್ ಅಥವಾ ದೊಡ್ಡ ದೊಡ್ಡ ಪಾತ್ರೆ ಅಂಗಡಿಗಳಲ್ಲಿ ಸಿಗ್ತವೆ. ಇವುಗಳಿಗೆ ಒಂದ್ಸಲ ಬಂಡವಾಳ ಹಾಕೊಂಡು ತಂದ್ರೆ ಇವು ದೀರ್ಘ ಕಾಲದವರೆಗೆ ಬಳಕೆಗೆ ಬರುತ್ತವೆ ಎಂದು ಹೇಳಿದ ಸ್ನೇಹಾ ಪರ್ಯಾಯ ಉಪಕರಣಗಳ ಬಗ್ಗೆ ತಿಳಿಸಿಕೊಟ್ಟರು.
PNG ಸ್ವಿಚ್
PNG ಸ್ವಿಚ್ ಅಂದ್ರೆ ಪೈಪ್ಡ್ ನ್ಯಾಚುರಲ್ ಗ್ಯಾಸ್(ನೈಸರ್ಗಿಕ ಹಸಿರು ಅನಿಲ) ಬಳಕೆ ಮಾಡ್ತರೆ. ಅಂದ್ರೆ ಅದು ಸಿಲಿಂಡ್ರಲ್ಲ. ನೈಸರ್ಗಿಕ ಹಸಿರು ಅನಿಲ ಅಂತ ಹೇಳ್ತರೆ. ಅದನ್ನು ನೇರವಾಗಿ ಪೈಪ್‌ಲೈನ್ ಮೂಲಕ ನಮ್ಮ ಮನೆಗಳಿಗೆ ಕನೆಕ್ಷನ್ ಕೊಡ್ತರೆ. ಅದಕ್ಕೆ ಕೆಲವು ಪ್ರೋಸೆಸ್ ಇವೆ. ಅವುಗಳನ್ನು ಮಾಡಿಸಿದ್ರೆ ಸಿಲಿಂಡರ್ ಇಲ್ಲ. ತರೋಕೆ ಏಜೆನ್ಸಿಗೆ ಕಾಲ್ ಮಾಡಬೇಕು ಅನ್ನೋ ಯಾವುದೇ ತಲೆನೋವು ಇರೋದಿಲ್ಲ. ಅಲ್ಲದೆ ಅದು ಹೂಡಿಕೆಗೆ ಯೋಗ್ಯವಾಗಿದೆ. ಇದು ಅಕ್ಷರಶಃ “Set it and forget it” ವ್ಯವಸ್ಥೆಯಾಗಿದೆ. ಅಲ್ಲದೆ ಹೆಚ್ಚು ಸುರಕ್ಷಿತ ಮತ್ತು ಅಗ್ಗವಾಗಿದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ GAIL ಅಥವಾ ಇತರ ಕಂಪನಿಗಳು ಅಪ್ಲೈ ಮಾಡುತ್ತವೆ.

ಪಿಎನ್‌ಜಿ ಸ್ವಿಚ್ ಮಾಡುವುದು ಹೇಗೆ?
ಆನ್‌ಲೈನ್ ರಿಜಿಸ್ಟ್ರೇಷನ್(ಉಚಿತ!):
https://customer.gailgaspng.com/ಗೆ ಹೋಗಿ→ “Customer Registration” ಅಥವಾ “Sign Up” ಕ್ಲಿಕ್ ಮಾಡಿ. ಫಾರ್ಮ್ ಭರ್ತಿ ಮಾಡಬೇಕು. ಆಮೇಲೆ
ಆಧಾರ್ ಕಾರ್ಡ್, ವಿಳಾಸ ಪುರಾವೆ(ಎಲೆಕ್ಟ್ರಿಸಿಟಿ ಬಿಲ್/ರೇಷನ್ ಕಾರ್ಡ್), ಮನೆ ಒಡೆತನದ ಪುರಾವೆ(ಖಾತಾ ಪುಸ್ತಕ/ಪ್ರಾಪರ್ಟಿ ಟ್ಯಾಕ್ಸ್), ಪಾಸ್‌ಪೋರ್ಟ್ ಸೈಜ್ ಫೋಟೋ ಇಂಥ ಎಲ್ಲ ಡಾಕ್ಯುಮೆಂಟ್‌ಗಳನ್ನ ಅಪ್‌ಲೋಡ್ ಮಾಡಬೇಕು.
ಸೆಕ್ಯೂರಿಟಿ ಡಿಪಾಸಿಟ್ ಪಾವತಿ: ₹4,000(ರಿಫಂಡಬಲ್ + ಬಡ್ಡಿರಹಿತ) + ₹500(ಗ್ಯಾಸ್ ಬಳಕೆಗೆ) ದುಡ್ಡು ಕಟ್ಟಬೇಕು. ಹೆಚ್ಚುವರಿ ಪೈಪ್ ಇದ್ದರೆ ಮಾತ್ರ ಅದರ ಚಾರ್ಜ್ ಕಟ್ಟಬೇಕಾಗುತ್ತೆ. ಆದರೆ 10 ಮೀಟರ್‌ವರೆಗೆ ಉಚಿತವಾಗಿ ಹಾಕಿಕೊಡ್ತರೆ.
ಸರ್ವೇ & ಇನ್‌ಸ್ಟಾಲೇಷನ್: GAIL ತಂಡ ಬರುತ್ತದೆ→ ಪೈಪ್ ಲೇಯಿಂಗ್→ ಮೀಟರ್ ಫಿಟ್ → LPG ಸ್ಟವ್ ಅನ್ನು PNGಗೆ ಕನ್ವರ್ಟ್ ಮಾಡಿ ಕೊಡ್ತರೆ. ಬರ್ನರ್‌ಗೆ 50 ರೂಪಾಯಿ ತಗೊಳ್ತರೆ. ಆಮೇಲೆ 1-2 ತಿಂಗಳಲ್ಲಿ ಮನೆಗೆ ಗ್ಯಾಸ್ ಬರುತ್ತೆ. ಪ್ರತಿ 2 ತಿಂಗಳಿಗೊಮ್ಮೆ ನಾವು ಎಷ್ಟು ಬಳಕೆ ಮಾಡಿರ್ತಿವಿ ಅದರಂತೆ ಆನ್‌ಲೈನ್ PNG Mitra ಆಪ್ ಬಳಸಿ ಬಿಲ್ ಕಟ್ಟಬಹುದು.
ಟೋಲ್ ಫ್ರೀ ನಂಬರ್: 1800-102-9282 (ಮಾಹಿತಿ/ಸಹಾಯಕ್ಕೆ ಕರೆ ಮಾಡಿ). ಅಪಾರ್ಟ್‌ಮೆಂಟ್ ಆಗಿದ್ದರೆ ಸೊಸೈಟಿ ಕಮಿಟಿ ಜತೆ ಮಾತನಾಡಿ, ಬ್ಯಾಚ್ ವೈಸ್ ಅಪ್ಲೈ ಮಾಡಿದರೆ ಬೇಗ ಆಗುತ್ತೆ ಅನ್ನೋದರ ಬಗ್ಗೆ ಸ್ನೇಹಾ ಮಾಹಿತಿ ನೀಡಿದರು.
ಸೌರ ಒಲೆ
ಸೌರ ಒಲೆ ಅಥವಾ ಕುಕ್ಕರ್‌ಗಳಲ್ಲಿ ಸೂರ್ಯನ ಬೆಳಕನ್ನು ಬಳಸಿಕೊಂಡು ಸಂಪೂರ್ಣವಾಗಿ ಗ್ಯಾಸ್ ಇಲ್ಲದೇ ಅಡುಗೆ ಮಾಡಬಹುದು. ಒಮ್ಮೆ ಅದನ್ನು ಹಾಕಿಸಿಕೊಂಡರೆ, ಅದಕ್ಕೆ ಕರೆಂಟ್(ವಿದ್ಯುತ್) ಅಥವಾ ಗ್ಯಾಸ್ ಯಾವುದೂ ಬೇಕಾಗಿಲ್ಲ. ಜತೆಗೆ ಇದು ಪರಿಸರ ಸ್ನೇಹಿಯಾಗಿಯೂ ಇರುತ್ತದೆ. ಹಣಕ್ಕೆ ತಕ್ಕಂತೆ ಸೌಲಭ್ಯಗಳಿದ್ದು ಬಳಕೆಗೂ ಬರುತ್ತದೆ.

ಅನ್ನ, ತರಕಾರಿಗಳಂತಹ ಹಲವು ಪದಾರ್ಥಗಳನ್ನು ಸೂರ್ಯನ ಶಾಖದಿಂದಲೇ ಬೇಯಿಸಬಹುದು. ಆದರೆ ಮಳೆಗಾಲದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಬಹುದು. ಆದರೆ ಸೌರ ಕುಕ್ಕರ್‌ಗಳು ನಿಜವಾಗಿಯೂ ದೀರ್ಘಕಾಲದವರೆಗೂ ಪರ್ಯಾಯವಾಗಿ ಬಳಸಬಹುದು.
ಸೌರಶಕ್ತಿ ಒಲೆಗಳು(Solar Cookers/Stoves) ಆನ್‌ಲೈನ್ ಮಾರುಕಟ್ಟೆಗಳಾದ Amazon.in ಮತ್ತು IndiaMARTನಲ್ಲಿ ಸಿಗುತ್ತವೆ. ಅಲ್ಲದೆ, ಸ್ಥಳೀಯ ಸೋಲಾರ್ ಉತ್ಪನ್ನ ಮಾರಾಟಗಾರರು(Solar Dealers) ಮತ್ತು IndianOil(ಸೂರ್ಯ ನೂತನ) ಅಧಿಕೃತ ಮಾರಾಟಗಾರರಿಂದ ಇಂಡೋರ್ ಸೋಲಾರ್ ಕುಕ್ಕರ್ ಖರೀದಿಸಬಹುದು. ಉದಾಹರಣೆಗೆ: Pegasus Power, E-Sharp Solarಗಳು ಸಿಗುತ್ತವೆ.
ಜೈವಿಕ ಅನಿಲ ವ್ಯವಸ್ಥೆಗಳು
ಹಿತ್ತಲಲ್ಲಿ ಗುಂಡಿ ಮಾಡಿ, ಅದರಲ್ಲಿ ಸಗಣಿ, ಕೊಳೆತ ತರಕಾರಿ ಎಲ್ಲನೂ ಹಾಕಿ ತಯಾರಿಸುವುದೇ ಗೋಬರ್ ಗ್ಯಾಸ್. ನೈಸರ್ಗಿಕ ಹಸಿರು ಅನಿಲ ಎಂದೂ ಕರೆಯಲಾಗುತ್ತದೆ. ಇದನ್ನು ಮನೆಯ ತ್ಯಾಜ್ಯಗಳು, ಸಗಣಿ ಹಾಕಿ ಸಣ್ಣದಾಗಿ ಮನೆಯಲ್ಲೇ ಗ್ಯಾಸ್ ತಯಾರು ಮಾಡಿಕೋಬಹುದು. ಇದನ್ನು ಜೈವಿಕ ಇಂಧನ ಅಂತ ಹೇಳಲಾಗುತ್ತದೆ. ಇದನ್ನು ನಗರಗಳಲ್ಲಿ ಎಲ್ಲರ ಮನೆಯಲ್ಲಿ ಮಾಡೋಕೆ ಆಗಲ್ಲ. ಯಾಕಂದ್ರೆ ಅಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸಿಗ್ದೇ ಇರೋದ್ರಿಂದ ಇದು ಕಷ್ಟ ಆಗಬಹುದು. ಆದ್ರೆ ಹಳ್ಳಿಗಳಲ್ಲಿ ತುಂಬಾ ಅನುಕೂಲ ಆಗುತ್ತೆ.

ಸಾಂಪ್ರದಾಯಿಕ ಒಲೆಗಳು
ಸಾಂಪ್ರದಾಯಿಕ ಒಲೆಗಳು ಅಂದರೆ, ಸೌದೆ ಬಳಸಿ ಅಡುಗೆ ಮಾಡಬಹುದಾದ ಒಲೆಗಳು. ಮೊದಲೆಲ್ಲ ಮನೆಗಳಲ್ಲಿ ಮಣ್ಣಿಂದ ಕಟ್ಟೆ ಥರ ಮಾಡಿ ಅದರಲ್ಲಿ ಕುಪ್ಪುಗಳನ್ನು ಇಟ್ಟಿ ಅದರ ಮೇಲೆ ಪಾತ್ರೆ ಇಟ್ಟಿದ್ರೆ ಸುತ್ತಲೂ ಉರಿ ಹೋಗ್ತಿತ್ತು. ಬೇಗ ಕಾವು ಆಗ್ತಿತ್ತು. ಈಗಲೂ ಹಲವು ಮನೆಗಳಲ್ಲಿ ತಾತ್ಕಾಲಿಕವಾಗಿ ಸೌದೆ ಒಲೆ ಬಳಕೆ ಮಾಡ್ತಿದ್ದಾರೆ. ಈ ಕಾಲಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ ಸೌದೆ ಒಲೆಗಳು ಮಾರುಕಟ್ಟೆಗಳಲ್ಲಿ ಸಿಗ್ತವೆ. ಕಬ್ಬಿಣದ ಒಲೆ, ತಗಡಿನ ಒಲೆ, ಬಕೆಟ್ ಆಕಾರದ ಒಲೆ, ಕೊಳವೆ ಒಲೆ ಹೀಗೆ ಹಲವು ರೀತಿಲ್ಲಿರುವ ಒಲೆಗಳಿವೆ. ಅದಕ್ಕೆ ಸೌದೆ ಹಾಕಬಹುದು, ಬೂದಿ ಬೀಳೋದಕ್ಕೂ ಜಾಗ ಮಾಡಿದಾರೆ. ಅದರಲ್ಲಿ ಆರಾಮಾಗೆ ಸೌದೆ ಬಳಸಿ ಅಡುಗೆ ಮಾಡಿಕೊಳ್ಳಬಹುದು.



ಸೌದೆ ಡಿಪೊಗಳಲ್ಲಿ ಸೌದೆ ತರಬಹುದು. ಒಂದು ಮಣ ಸೌದೆ(10–12 ಕೆ.ಜಿ) ₹110–₹120ರಂತೆ ಮಾರಾಟ ಆಗುತ್ತೆ. ಹೋಟೆಲ್ ವರ್ತಕರು, ಶುಭ ಸಮಾರಂಭಗಳ ಆಯೋಜಕರು ಟನ್ ಲೆಕ್ಕದಲ್ಲಿ ತಗೊಂಡು ಬರ್ತಾರೆ. ನ್ಯಾಚುರಲ್ ಅಡುಗೆ ಬೇಕು ಎನ್ನುವ ಗ್ರಾಹಕರಿಗೆ ಸೌದೆ ಒಲೆಯಲ್ಲೇ ಅಡುಗೆ ಮಾಡಿ ಕೊಡ್ತರೆ. ಹಾಗೇನೆ ನಾವೂ ಕೂಡ ಸೌದೆ ಡಿಪೋದಿಂದ ಸೌದೆ ತಂದುಕೊಂಡ್ರೆ ಸೌದೆ ಒಲೆನೆ ಬಳಸಬಹುದು….. ಅಲ್ವ ಎಂದ ಸ್ನೇಹ ನಗರ ಪ್ರದೇಶಗಳಲ್ಲಿ ಹೇಗೆ ಸೌದೆ ಒಲೆಗಳನ್ನು ಬಳಸಬಹುದು ಎಂಬುದರ ಬಗ್ಗೆ ತಿಳಿಸಿದ್ದಾರೆ.
ಪೆಲೆಟ್ ಒಲೆ ಬಳಕೆ
ಅರುಣ್ ಜಾವಗಲ್ ಅವರು ಸೋಷಿಯಲ್ ಮೀಡಿಯಾದಲ್ಲಿ, ‘ಸುಮಾರು 12 ವರ್ಷದ ಹಿಂದೆ ಹೋಟೆಲ್ ಉದ್ಯಮ ನಡೆಸುತ್ತಿದ್ದೆ. ಪ್ರತಿದಿನ 2-3 LPG ಸಿಲಿಂಡರ್‌ಗಳು ಬೇಕಾಗುತ್ತಿದ್ದವು. LPG ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಬೇರೆ ದಾರಿ ಹುಡುಕುತ್ತಿದ್ದಾಗ ಕಂಡಿದ್ದು ಪೆಲೆಟ್ ಒಲೆಗಳು. ಪೆಲೆಟ್‌ಗಳನ್ನು ಕಡಲೇ ಸಿಪ್ಪೆಯಿಂದ ತಯಾರು ಮಾಡುತ್ತಾರೆ. ಬೆಂಗಳೂರು ಸುತ್ತಮುತ್ತ ಅನೇಕ ಕಾರ್ಖಾನೆಗಳಿಂದ ಪೆಲೆಟ್‌ಗಳು ಸುಲಭವಾಗಿ ಸಿಗುತ್ತಿದ್ದವು. ಪೆಲೆಟ್ ಒಲೆಯ ಬಳಕೆಯಿಂದಾಗಿ LPG ಬಳಕೆ ತುಂಬಾ ಕಡಿಮೆಯಾಯಿತು’ ಎಂದಿದ್ದಾರೆ.
ಪೆಲೆಟ್ ಒಲೆ ಹಚ್ಚುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಒಲೆ ಹಚ್ಚಿದ ಮೇಲೆ ಉರಿ ಕಡಿಮೆ ಜಾಸ್ತಿ ಮಾಡೋದಕ್ಕೆ ಸಾಧ್ಯವಿರುತ್ತದೆ. ನಿಲ್ಲಿಸೋಕ್ಕೆ ಸಾಧ್ಯವಿರಲ್ಲ. ಹಾಗಾಗಿ ಒಲೆ ಉರಿಯುವವರೆಗೆ ಪದಾರ್ಥಗಳ ತಯಾರಿಕೆಗೆ ಪ್ಲ್ಯಾನ್ ಮಾಡವುದೊಳಿತು ಎಂದು ಬರೆದುಕೊಂಡಿದ್ದಾರೆ.
ಸುಮಾರು 12 ವರ್ಷದ ಹಿಂದೆ ಹೊಟೆಲ್ ಉದ್ಯಮವೊಂದನ್ನು ನಡೆಸುತ್ತಿದ್ದೆ. ಪ್ರತಿದಿನ 2-3 LPG ಸಿಲೆಂಡರ್ ಗಳು ಬೇಕಾಗುತ್ತಿದ್ದವು. LPG ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಬೇರೆ ದಾರಿ ಹುಡುಕುತ್ತಿದ್ದಾಗ ಕಂಡಿದ್ದು ಪೆಲೆಟ್ ಒಲೆ ಗಳು. ಪೆಲೆಟ್ ಗಳನ್ನು ಕಡಲೇ ಸಿಪ್ಪೆಯಿಂದ ತಯಾರು ಮಾಡುತ್ತಾರೆ.. ಬೆಂಗಳೂರು ಸುತ್ತಮುತ್ತ ಅನೇಕ ಕಾರ್ಖಾನೆಗಳಿಂದ… pic.twitter.com/pshX4A0ASp
— ಅರುಣ್ ಜಾವಗಲ್ | Arun Javgal (@ajavgal) March 13, 2026
ಇದನ್ನೂ ಓದಿದ್ದೀರಾ? ಮೋದಿ ಗಟಾರಾ ಗ್ಯಾಸ್ ಥಿಯರಿ: ‘ಗೋ ಕೊರೋನ ಗೋ’ ಎಂದವರು ಈಗ ‘ಕಮ್ ಗ್ಯಾಸ್ ಕಮ್’ ಎಂದು ಕರೆವರೇ?
ಮೊಳಕೆ ಸಲಾಡ್‌ಗಳು: ಹೆಸರುಕಾಳು ಅಥವಾ ಕಡಲೆ ಕಾಳುಗಳನ್ನು ನೆನೆಸಿ ರೆಫ್ರಿಜರೇಟರ್‌ನಲ್ಲಿ ಇಟ್ಟುಕೊಂಡಿದ್ದರೆ, ಅವುಗಳನ್ನು ಟೊಮೆಟೊ, ಸೌತೆಕಾಯಿ, ನಿಂಬೆ ಮತ್ತು ಚಾಟ್ ಮಸಾಲಾದೊಂದಿಗೆ ಬೆರೆಸಿ ತಿಂದರೆ ಊಟ ಬೇಕು ಅನ್ಸೋದೇ ಇಲ್ಲ. ಅಷ್ಟಕ್ಕೇ ಹೊಟ್ಟೆ ಭರ್ತಿಯಾಗುತ್ತದೆ ಆರೋಗ್ಯಕರವಾಗಿಯೂ ಇರುತ್ತೆ.
ಕಡಲೆಕಾಯಿ ಚಾಟ್: ಒಂದು ಹಿಡಿ ಹುರಿದ ಕಡಲೆ ಬೀಜವನ್ನು ಸಣ್ಣಗೆ ಹೆಚ್ಚಿದ ತರಕಾರಿಗಳೊಂದಿಗೆ ಬೆರೆಸಿ ತಿನ್ನಿ. ಒಳ್ಳೆ ಪ್ರೋಟೀನ್ ಭರಿತ ಊಟವೂ ಸಿಕ್ಕಂತಾಗುತ್ತದೆ. ಇದಕ್ಕೆ ಯಾವುದೇ ರೀತಿಯ ಗ್ಯಾಸ್ ಆಗಲೀ ಬೇಯಿಸೋದಾಗಲಿ ಏನೂ ಬೇಡ. ಈಗೆಲ್ಲ ಡಯಟ್ ಅದೂ ಇದೂ ಅಂತ ಮಾಡೋದ್ರಿಂದ ಇದಿನ್ನೂ ಅನುಕೂಲ ಆಗುತ್ತೆ.
ನಗರ ಪ್ರದೇಶಗಳಲ್ಲಿ ಅಡುಗೆ ಮಾಡುವುದಕ್ಕೆ ಎಲ್‌ಪಿಜಿ ಸಿಲಿಂಡರ್ ಉತ್ತಮ ಆಯ್ಕೆ. ಆದರೆ ಯುದ್ಧ ಅಥವಾ ಇನ್ನಿತರ ಅವಘಡಗಳು ಸಂಭವಿಸಿದಾಗ ಎಲ್‌ಪಿಜಿ ಸಿಲಿಂಡರ್ ಸಿಗುವುದು ಕಷ್ಟ ಅನಿಸಿದಾಗ, ನಾವು ಕೈ ಚೆಲ್ಲಿ ಕೂರಬೇಕಾಗಿಲ್ಲ. ಮೇಲೆ ತಿಳಿಸಿದ ಪರ್ಯಾಯ ಮಾರ್ಗಗಳತ್ತ ನೋಡಬಹುದು. ನಮ್ಮ ಅನುಕೂಲಕ್ಕೆ ಸಿಗುವುದನ್ನು ಬಳಸಬಹುದು. ಸದ್ಯದ ಸಮಸ್ಯೆಯಿಂದ ಪಾರಾಗಬಹುದು.





