ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ ಸುಮಾರು 11.8 ಬಿಲಿಯನ್ ಡಾಲರ್ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ಈ ವಲಯದಲ್ಲಿ ದೇಶದ ಒಟ್ಟು ರಫ್ತಿನ ಶೇಕಡಾ 21.8 ರಷ್ಟಿದ್ದು, ಇದೀಗ ಇವೆಲ್ಲವೂ ದೇಶದೊಳಗೇ ಉಳಿಯುವ ಆತಂಕ ಎದುರಾಗಿದೆ. ಇದರಿಂದ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ನಷ್ಟ ಉಂಟಾಗಬಹುದು.
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗುವ ಯಾವುದೇ ಯುದ್ಧ ಅಥವಾ ರಾಜಕೀಯ ಉದ್ವಿಗ್ನತೆ ಜಾಗತಿಕ ವ್ಯಾಪಾರಕ್ಕೆ ಬೃಹತ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇರಾನ್‌ನಲ್ಲಿ ಯುದ್ಧ ಪರಿಸ್ಥಿತಿ ಹೆಚ್ಚಾದರೆ ಅದರ ಪರಿಣಾಮ ಭಾರತದ ಕೃಷಿ ಉತ್ಪನ್ನಗಳ ರಫ್ತಿನ ಮೇಲೂ ಕಾಣಿಸುತ್ತದೆ. ಭಾರತವು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಪಶ್ಚಿಮ ಏಷ್ಯಾ ಪ್ರದೇಶವನ್ನು ಅವಲಂಬಿಸಿರುವಂತೆ, ಗಲ್ಫ್ ರಾಷ್ಟ್ರಗಳು ತಮ್ಮ ಆಹಾರ ಪದಾರ್ಥಗಳನ್ನು ಪೂರೈಸಿಕೊಳ್ಳಲು ಭಾರತದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದರೆ, ಯುದ್ಧ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಆ ಪ್ರದೇಶಗಳೊಂದಿಗಿನ ಭಾರತದ ಕೃಷಿ ವ್ಯಾಪಾರಕ್ಕೆ ಸವಾಲು ಎದುರಾಗಲಿದೆ.
ಭಾರತೀಯ ಆಹಾರ ರಫ್ತಿಗೆ ಗಲ್ಫ್ ಅತಿದೊಡ್ಡ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅಕ್ಕಿ ಮತ್ತು ಬಾಳೆಹಣ್ಣುಗಳಿಂದ ಹಿಡಿದು ಮಾಂಸ, ಮಸಾಲೆಗಳವರೆಗೆ ಬಹುತೇಕ ಕೃಷಿ ಉತ್ಪನ್ನಗಳು ಭಾರತದಿಂದ ರಫ್ತಾಗುತ್ತವೆ. ಈ ಯುದ್ಧವು ಪೂರೈಕೆ ಸರಪಳಿಗಳು ಮತ್ತು ಹಡಗು ಮಾರ್ಗಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ ಸುಮಾರು 11.8 ಬಿಲಿಯನ್ ಡಾಲರ್ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ಈ ವಲಯದಲ್ಲಿ ದೇಶದ ಒಟ್ಟು ರಫ್ತಿನ ಶೇಕಡಾ 21.8 ರಷ್ಟಿದ್ದು, ಇದೀಗ ಇವೆಲ್ಲವೂ ದೇಶದೊಳಗೇ ಉಳಿಯುವ ಆತಂಕ ಎದುರಾಗಿದೆ. ಪಶ್ಚಿಮ ಏಷ್ಯಾವು ಆರು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಾದ ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಓಮನ್ ಮತ್ತು ಕತಾರ್ ಜತೆಗೆ ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ ಮತ್ತು ಯೆಮೆನ್ ದೇಶಗಳನ್ನು ಒಳಗೊಂಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಗಲ್ಫ್ ದೇಶದ ಭೌಗೋಳಿಕ ಸಾಮೀಪ್ಯ ಮತ್ತು ಅತಿಯಾದ ಭಾರತೀಯ ಜನಸಂಖ್ಯೆಯನ್ನು ಹೊಂದಿರುವುದರಿಂದ ಐತಿಹಾಸಿಕವಾಗಿ ಇದನ್ನು ಭಾರತದ ಆಹಾರ ರಫ್ತಿಗೆ ನೈಸರ್ಗಿಕ ಮಾರುಕಟ್ಟೆಯನ್ನಾಗಿ ಮಾಡಿದೆ ಎಂಬುದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್(ಜಿಟಿಆರ್‌ಐ) ಸಿದ್ಧಪಡಿಸಿದ ವರದಿಯಿಂದ ಬಹಿರಂಗವಾಗಿದೆ.
ಆದಾಗ್ಯೂ, ಈ ಪ್ರದೇಶದಲ್ಲಿನ ಸಂಘರ್ಷವು ಹಡಗು ಮಾರ್ಗಗಳಿಗೆ ಅಡ್ಡಿಯುಂಟಾಗಿದ್ದು, ವಿಮಾ ವೆಚ್ಚವನ್ನು ಹೆಚ್ಚಿಸುತ್ತಿದ್ದು, ಸರಕು ಸಾಗಣೆಯಲ್ಲಿ ಅಡಚಣೆಯನ್ನು ಸೃಷ್ಟಿಸುತ್ತಿದೆ. ಅನೇಕ ಭಾರತೀಯ ಕೃಷಿ ಉತ್ಪನ್ನಗಳು ಗಲ್ಫ್ ಮಾರುಕಟ್ಟೆಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದರೆ, ಹೀಗೆ ನಿರಂತರವಾಗಿ ಅಡ್ಡಿಯುಂಟಾಗುವುದರಿಂದ ಭಾರತದ ಹಲವಾರು ರಾಜ್ಯಗಳಲ್ಲಿ ರೈತರು, ಆಹಾರ ಸಂಸ್ಕಣಾಕಾರರು ಮತ್ತು ರಫ್ತುದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಕೃಷಿ ರಫ್ತಿಗೆ ಹಾರ್ಮುಜ್ ಅಪಾಯ
ಕಳೆದ ದಶಕದಲ್ಲಿ ಭಾರತದ ಕೃಷಿ ರಫ್ತುಗಳು ಪಶ್ಚಿಮ ಏಷ್ಯಾದ ಮಾರುಕಟ್ಟೆಗಳ ಮೇಲೆ, ವಿಶೇಷವಾಗಿ ಅಕ್ಕಿ, ಬಾಳೆಹಣ್ಣು, ಮಸಾಲೆಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳ ಮಾರಾಟಕ್ಕೆ ಅವಲಂಬಿತವಾಗಿದೆ. 2025ರಲ್ಲಿ ಮಾತ್ರ, ಭಾರತವು ಈ ಪ್ರದೇಶಕ್ಕೆ ಸುಮಾರು $11.8 ಶತಕೋಟಿ ಮೌಲ್ಯದ ಕೃಷಿ ಉತ್ಪನ್ನ ಮತ್ತು ಆಹಾರ ಉತ್ಪನ್ನಗಳನ್ನು ರಫ್ತು ಮಾಡಿದ್ದು, ಇದು ದೇಶದ ಒಟ್ಟು ಕೃಷಿ ಉತ್ಪನ್ನ ರಫ್ತಿನ ಐದನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿದೆ. ಇದೀಗ ಉತ್ಪನ್ನಗಳ ರಫ್ತಿಗೆ ತೀವ್ರ ಅಪಾಯ ಎದುರಾಗಿರುವುದನ್ನು ದತ್ತಾಂಶಗಳಿಂದ ತಿಳಿದುಬಂದಿದೆ.

ಕುರಿ ಮತ್ತು ಮೇಕೆ ಮಾಂಸ, ತಾಜಾ ಗೋಮಾಂಸ, ಬಾಳೆಹಣ್ಣು, ಕೊಬ್ಬರಿ ಮತ್ತು ಕೆಲವು ಮಸಾಲೆಗಳಂತಹ ಪದಾರ್ಥಗಳು ಪಶ್ಚಿಮ ಏಷ್ಯಾಕ್ಕೆ ಶೇ.70ಕ್ಕಿಂತ ಹೆಚ್ಚು ಪಾಲು ರಫ್ತಾಗುತ್ತಿವೆ. ವ್ಯಾಪಾರ ಹರಿವು ಅಡ್ಡಿಪಡಿಸಿದರೆ ಅವುಗಳನ್ನು ಅತ್ಯಂತ ದುರ್ಬಲಗೊಳಿಸುತ್ತವೆ. ಡೈರಿ ಉತ್ಪನ್ನಗಳು, ಪಾನೀಯಗಳು, ಚಹಾ ಮತ್ತು ಹಲವಾರು ಖಾದ್ಯ ತೈಲಗಳು ಸೇರಿದಂತೆ ಇತರೆ ವಸ್ತುಗಳನ್ನು ಗಲ್ಫ್ ದೇಶಗಳಲ್ಲಿ ಹೆಚ್ಚು ಮಾರಾಟ ಮಾಡಲಾಗುತ್ತಿತ್ತು.
ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಸ್ಥಿರತೆ ಮುಂದುವರೆದರೆ, ಭಾರತದ ಕೃಷಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ರಫ್ತುದಾರರು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಬೇಕು. ಒಂದೇ ಪ್ರದೇಶದ ಮೇಲೆ ಅತಿಯಾಗಿ ಅವಲಂಬನೆಯಾಗಬಾರದು ಎಂಬುದನ್ನು ತಿಳಿಯಬಹುದು.
ಗಲ್ಫ್ ಜೊತೆ ಭಾರತದ ಕೃಷಿ ವ್ಯಾಪಾರ
ವರದಿಗಳ ಪ್ರಕಾರ, ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ 7.48 ಶತಕೋಟಿ ಡಾಲರ್ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳನ್ನು ರಫ್ತು ಮಾಡಿದೆ. ಈ ವಿಭಾಗದಲ್ಲಿ ಭಾರತದ ಜಾಗತಿಕ ರಫ್ತಿನ ಶೇ. 29.2ರಷ್ಟನ್ನು ಈ ಪ್ರದೇಶವು ಹೊಂದಿದೆ. ಪ್ರಮುಖ ಸಾಗಣೆಗಳಲ್ಲಿ ಅಕ್ಕಿ, ಬಾಳೆಹಣ್ಣು, ಈರುಳ್ಳಿ ಮತ್ತು ತರಕಾರಿಗಳು, ದ್ವಿದಳ ಧಾನ್ಯಗಳು, ಬೀಜಗಳು, ಕಾಫಿ, ಚಹಾ ಮತ್ತು ವ್ಯಾಪಕ ಶ್ರೇಣಿಯ ಮಸಾಲೆಗಳು ಸೇರಿವೆ. ಬಾಳೆಹಣ್ಣಿನ ರಫ್ತು 396.5 ಮಿಲಿಯನ್ ಡಾಲರ್ ತಲುಪಿದೆ, ಭಾರತದ ಒಟ್ಟು ಬಾಳೆಹಣ್ಣಿನ ರಫ್ತಿನ ಶೇ.79.6 ಪಶ್ಚಿಮ ಏಷ್ಯಾಕ್ಕೆ ಹೋಗುತ್ತಿದ್ದು, ಇದರಿಂದ ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್‌ನ ಬೆಳೆಗಾರರು ಅಪಾಯಕ್ಕೆ ಸಿಲುಕಬಹುದು.
ದತ್ತಾಂಶವು ಈರುಳ್ಳಿ ಮತ್ತು ಬೆಳ್ಳುಳ್ಳಿಯ ರಫ್ತು ಒಟ್ಟು 111 ಮಿಲಿಯನ್ ಡಾಲರ್ ಆಗಿದ್ದು, ಇತರ ತರಕಾರಿಗಳು 91.5 ಮಿಲಿಯನ್ ಡಾಲರ್ ತಲುಪಿವೆ. ಈ ಪ್ರದೇಶವು ಕ್ರಮವಾಗಿ ಭಾರತದ ಈ ಉತ್ಪನ್ನಗಳ ರಫ್ತಿನಲ್ಲಿ ಶೇ. 26.9 ಮತ್ತು ಶೇ. 50.8 ರಷ್ಟಿದೆ ಎಂಬುದನ್ನು ಸೂಚಿಸುತ್ತದೆ. ಅಕ್ಕಿ ಅತಿದೊಡ್ಡ ಸಂಭಾವ್ಯ ಪರಿಣಾಮವನ್ನು ಎದುರಿಸುತ್ತಿದೆ. ಭಾರತವು ಪಶ್ಚಿಮ ಏಷ್ಯಾಕ್ಕೆ 4.43 ಶತಕೋಟಿ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡುತ್ತಿದ್ದು, ಇದು ತನ್ನ ಜಾಗತಿಕ ಅಕ್ಕಿ ರಫ್ತಿನ ಶೇಕಡಾ 36.7ರಷ್ಟಿದೆ. ಹಾಗಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಬೆಳೆಗಾರರಿಗೆ ಗಲ್ಫ್ ಮಾರುಕಟ್ಟೆಗಳು ನಿರ್ಣಾಯಕವಾಗಿದ್ದವು. ಇದೀಗ ಈ ರಾಜ್ಯಗಳ ರೈತರೂ ಕೂಡ ನಷ್ಟ ಅನುಭವಿಸಬಹುದು.
ಇದಲ್ಲದೆ, ಮಸಾಲೆಗಳು ಮತ್ತು ತೋಟಗಾರಿಕೆ ಬೆಳೆಗಳೂ ಕೂಡ ಪ್ರಾದೇಶಿಕ ಬೇಡಿಕೆಗೆ ನಿಕಟ ಸಂಬಂಧ ಹೊಂದಿವೆ. ಜಾಯಿಕಾಯಿ ಮತ್ತು ಏಲಕ್ಕಿ ರಫ್ತುಗಳು ಒಟ್ಟು 295.5 ಮಿಲಿಯನ್ ಡಾಲರ್ ಆಗಿದ್ದು, ಶೇಕಡಾ 70.5 ರಷ್ಟು ಪಶ್ಚಿಮ ಏಷ್ಯಾಕ್ಕೆ ರವಾನೆಯಾಗುತ್ತವೆ. ಜೀರಿಗೆ ಮತ್ತು ಕೊತ್ತಂಬರಿ ಮುಂತಾದ ಮಸಾಲೆ ಬೀಜಗಳ ರಫ್ತು 163 ಮಿಲಿಯನ್ ಡಾಲರ್ ತಲುಪಿದ್ದರೆ, ಶುಂಠಿ ಮತ್ತು ಅರಿಶಿನ ಒಟ್ಟು 173 ಮಿಲಿಯನ್ ಡಾಲರ್ ಆಗಿದ್ದು, ಭಾರತದ ಈ ಉತ್ಪನ್ನಗಳ ರಫ್ತಿನಲ್ಲಿ ಸುಮಾರು ಶೇ.23ರಷ್ಟು ಈ ಪ್ರದೇಶಕ್ಕೆ ರಫ್ತಾಗುತ್ತಿದ್ದು, ಇದು ಕೇರಳ, ಕರ್ನಾಟಕ, ರಾಜಸ್ಥಾನ ಮತ್ತು ಗುಜರಾತ್‌ನ ರೈತರನ್ನು ಬೆಂಬಲಿಸುತ್ತಿತ್ತು. ತೋಟಗಾರಿಕೆ ಬೆಳೆಗಳು ಇದೇ ರೀತಿ ಇದ್ದು, ಭಾರತವು ಪಶ್ಚಿಮ ಏಷ್ಯಾಕ್ಕೆ 240.7 ಮಿಲಿಯನ್ ಡಾಲರ್ ಕಾಫಿ ಮತ್ತು 410.1 ಮಿಲಿಯನ್ ಡಾಲರ್ ಚಹಾವನ್ನು ರಫ್ತು ಮಾಡುತ್ತದೆ. ಇದು ಭಾರತದ ರಫ್ತಿನಲ್ಲಿ ಕ್ರಮವಾಗಿ ಶೇ 17.7 ಮತ್ತು ಶೇ 44.1ರಷ್ಟಿದ್ದು, ಕರ್ನಾಟಕ, ಕೇರಳ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ರೈತರ ಮೇಲೆ ದುಷ್ಪರಿಣಾಮ ಬೀರಬಹುದು.
ಮಾಂಸ, ಸಮುದ್ರಾಹಾರ ಮತ್ತು ಡೈರಿ ಉತ್ಪನ್ನ
ಜಿಟಿಆರ್‌ಐ(GLOBAL TRADE RESEARCH INITIATIVE) ಸಂಗ್ರಹಿಸಿದ ದತ್ತಾಂಶವು ಭಾರತವು 2025ರಲ್ಲಿ ಪಶ್ಚಿಮ ಏಷ್ಯಾಕ್ಕೆ 1.81 ಶತಕೋಟಿ ಡಾಲರ್ ಮೀನು, ಮಾಂಸ, ಹೆಪ್ಪುಗಟ್ಟಿದ ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ರಫ್ತು ಮಾಡಿರುವುದಾಗಿ ಸೂಚಿಸುತ್ತದೆ. ರಫ್ತು ಮಾಡಲಾದ ಪ್ರಮುಖ ಉತ್ಪನ್ನಗಳಲ್ಲಿ ತಾಜಾ ಅಥವಾ ಶೀತಲವಾಗಿರುವ ಗೋಮಾಂಸ, ಹೆಪ್ಪುಗಟ್ಟಿದ ಗೋಮಾಂಸ, ಕುರಿ ಮತ್ತು ಮೇಕೆ ಮಾಂಸ ಮತ್ತು ಸಿಗಡಿ ಮತ್ತು ಸಿಗಡಿಗಳಂತಹ ಸಮುದ್ರಾಹಾರಗಳೂ ಸೇರಿವೆ. ಪಶ್ಚಿಮ ಏಷ್ಯಾಕ್ಕೆ 2025ರಲ್ಲಿ ತಾಜಾ ಅಥವಾ ಶೀತಲವಾಗಿರುವ ಗೋಮಾಂಸವನ್ನು 139 ಮಿಲಿಯನ್ ಡಾಲರ್‌ನಷ್ಟು ರಫ್ತು ಮಾಡಲಾಗಿದೆ. ಇದು ಭಾರತದ ಈ ಉತ್ಪನ್ನದ ಒಟ್ಟು ರಫ್ತಿನ ಶೇ.97.4 ರಷ್ಟಿದೆ.
ಈ ಪ್ರದೇಶಕ್ಕೆ ಹೆಪ್ಪುಗಟ್ಟಿದ ಗೋಮಾಂಸ ರಫ್ತು ಒಟ್ಟು 1.27 ಶತಕೋಟಿ ಡಾಲರ್ ಆಗಿದ್ದು, ಇದು ಭಾರತದ ಜಾಗತಿಕ ರಫ್ತಿನ ಶೇಕಡಾ 28.9 ರಷ್ಟಿದೆ. ಕುರಿ ಮತ್ತು ಮೇಕೆ ಮಾಂಸ ರಫ್ತು 95.2 ಮಿಲಿಯನ್ ಡಾಲರ್ ತಲುಪಿದೆ, ಭಾರತದ ರಫ್ತಿನ ಶೇಕಡಾ 98.9 ಪಶ್ಚಿಮ ಏಷ್ಯಾಕ್ಕೆ ಹೋಗುತ್ತಿದೆ. ಆದ್ದರಿಂದ ಗಲ್ಫ್ ಮಾರುಕಟ್ಟೆಗಳಲ್ಲಿ ಅಡಚಣೆ ಉಂಟಾದರೆ ಭಾರತದ ಗೋಮಾಂಸ ಮತ್ತು ಜಾನುವಾರು ರಫ್ತುದಾರರಿಗೆ ಹೊಡೆತ ಬೀಳಬಹುದು. ವಿಶೇಷವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ, ಹೆಚ್ಚಿನ ಸಂಸ್ಕರಣಾ ಘಟಕಗಳು ನೆಲೆಗೊಂಡಿವೆ. ಸಮುದ್ರಾಹಾರ ಸಾಗಣೆಗಳೂ ಕೂಡ ಬಹಿರಂಗಗೊಳ್ಳುತ್ತವೆ. ಭಾರತವು 2025ರಲ್ಲಿ ಸೀಗಡಿ ಮತ್ತು ಸೀಗಡಿಗಳಂತಹ ಸಮುದ್ರಾಹಾರಗಳನ್ನು ಪಶ್ಚಿಮ ಏಷ್ಯಾಕ್ಕೆ ರಫ್ತು ಮಾಡಿದೆ. ಇದೀಗ ಆಂಧ್ರಪ್ರದೇಶ, ಗುಜರಾತ್ ಮತ್ತು ಕೇರಳದ ರಫ್ತುದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಇದನ್ನೂ ಓದಿದ್ದೀರಾ? ಅಮೆರಿಕಕ್ಕೆ ‘ಪಾಠ’ ಕಲಿಸದೆ ಬಿಡೆವು: ಪ್ರತೀಕಾರಕ್ಕೆ ತಹತಹಿಸಿರುವ ಅಲಿ ಲಾರಿಜಾನಿ ಯಾರು?
ಭಾರತವು 2025 ರಲ್ಲಿ ಪಶ್ಚಿಮ ಏಷ್ಯಾಕ್ಕೆ 281.1 ಮಿಲಿಯನ್ ಡಾಲರ್ ಡೈರಿ ಉತ್ಪನ್ನಗಳನ್ನು ರಫ್ತು ಮಾಡಿತು, ಇದು ಭಾರತದ ಒಟ್ಟು ಡೈರಿ ರಫ್ತಿನ ಶೇಕಡಾ 28.9 ರಷ್ಟಿದೆ. ಗುಜರಾತ್, ಪಂಜಾಬ್ ಮತ್ತು ರಾಜಸ್ಥಾನದಲ್ಲಿನ ಡೈರಿ ಸಂಸ್ಕರಣಾ ಘಟಕಗಳಿಂದ ರಫ್ತು ಮಾಡಲಾದ ಪ್ರಮುಖ ಉತ್ಪನ್ನಗಳಲ್ಲಿ ಬೆಣ್ಣೆ ಮತ್ತು ಡೈರಿ ಕೊಬ್ಬುಗಳು ಮತ್ತು ಚೀಸ್, ಮೊಸರು ಸೇರಿವೆ. ಪಶ್ಚಿಮ ಏಷ್ಯಾಕ್ಕೆ ಬೆಣ್ಣೆ ಮತ್ತು ಡೈರಿ ಕೊಬ್ಬಿನ ರಫ್ತು ಒಟ್ಟು 203 ಮಿಲಿಯನ್ ಡಾಲರ್ ಆಗಿದ್ದು, ಈ ಉತ್ಪನ್ನಗಳ ಭಾರತದ ಒಟ್ಟು ರಫ್ತಿನ ಶೇಕಡಾ 58.1 ರಷ್ಟಿದೆ. ಆದರೆ ಚೀಸ್ ಮತ್ತು ಮೊಸರು ರಫ್ತು 31.4 ಮಿಲಿಯನ್ ಡಾಲರ್ ತಲುಪಿದೆ. ಭಾರತದ ರಫ್ತಿನ ಶೇ.47.8 ಈ ಪ್ರದೇಶಕ್ಕೆ ಹೋಗುತ್ತದೆ. ಇದೀಗ ದೀರ್ಘಕಾಲದ ಸಾಗಣೆ ಅಡಚಣೆಗಳು ರಫ್ತು ಬೇಡಿಕೆಯನ್ನು ದುರ್ಬಲಗೊಳಿಸಬಹುದು.
ದೇಶಿಯ ಕೃಷಿ ಉತ್ಪನ್ನಗಳ ರಫ್ತು ಕಡಿಮೆಯಾದರೆ, ದೇಶದೊಳಗೆ ಹೆಚ್ಚು ಉಳಿಯುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ಸರಕು ಹೆಚ್ಚಾಗುತ್ತದೆ, ಬೆಲೆ ಕುಸಿಯುತ್ತದೆ. ಇದರಿಂದಾಗಿ ರೈತರು ಮತ್ತಷ್ಟು ನಷ್ಟ ಎದುರಿಸಬೇಕಾದ ಸಾಧ್ಯತೆ ಹೆಚ್ಚಾಗಿದೆ. ಈ ಎಲ್ಲ ಕಾರಣಗಳಿಂದ ಕೃಷಿ ಲಾಭದಾಯಕತೆ ಕಡಿಮೆಯಾಗಿ ರೈತರ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಅಲ್ಲದೆ ಸಾಲದ ಒತ್ತಡ ಹೆಚ್ಚಾಗಬಹುದು.





