ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷವು ಗುಜರಾತ್‌ನ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಇಂಧನ ಮಾರುಕಟ್ಟೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಪ್ರೋಪೇನ್ ಅನಿಲದ ಕೊರತೆಯಿಂದಾಗಿ ಮೊರ್ಬಿಯಲ್ಲಿ 170 ಸೆರಾಮಿಕ್ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಸೂರತ್‌ನ ರಫ್ತು ಆಧಾರಿತ ವ್ಯಾಪಾರವು ಅಸ್ತವ್ಯಸ್ತಗೊಂಡಿದೆ.
ಗುಜರಾತ್‌ನ ಪ್ರಮುಖ ಉತ್ಪಾದನಾ ಕೇಂದ್ರಗಳಾದ ಮೊರ್ಬಿ ಮತ್ತು ಸೂರತ್ ನಗರಗಳು ಪೂರೈಕೆ ಸರಪಳಿಯ ವ್ಯತ್ಯಯ, ಹೆಚ್ಚುತ್ತಿರುವ ಲಾಜಿಸ್ಟಿಕ್ಸ್ ವೆಚ್ಚ ಹಾಗೂ ಕುಸಿಯುತ್ತಿರುವ ರಫ್ತಿನಿಂದಾಗಿ ಒತ್ತಡವನ್ನು ಅನುಭವಿಸುತ್ತಿವೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರಕುಗಳು ಬಂದರುಗಳಲ್ಲೇ ಉಳಿದುಕೊಂಡಿವೆ. ಪಾವತಿ ಮತ್ತು ಉದ್ಯೋಗಗಳಿಗೆ ಕುತ್ತು ತಂದಿದೆ.
ಭಾರತದ ಸೆರಾಮಿಕ್ ರಾಜಧಾನಿ ಎಂದೇ ಕರೆಯಲ್ಪಡುವ ಮೊರ್ಬಿಗೆ ಯುದ್ಧದ ಹೊಡೆತ ಗಂಭೀರವಾಗಿದೆ. ಮೊರ್ಬಿಯಲ್ಲಿ ಸೆರಾಮಿಕ್ ಉತ್ಪಾದನೆಯು ಪ್ರಮುಖವಾಗಿ ನೈಸರ್ಗಿಕ ಅನಿಲ ಮತ್ತು ಪ್ರೋಪೇನ್ ಮೇಲೆ ನಡೆಯುತ್ತದೆ. ನೈಸರ್ಗಿಕ ಅನಿಲವನ್ನು ‘ಗುಜರಾತ್ ಗ್ಯಾಸ್’ ಮೂಲಕ ಪೂರೈಸಿದರೆ, ಪ್ರೋಪೇನ್ ಅನಿಲವನ್ನು ಖಾಸಗಿ ಪೂರೈಕೆದಾರರು ಮತ್ತು ಟ್ಯಾಂಕರ್ ಏಜೆಂಟ್‌ಗಳ ಮೂಲಕ ಪಡೆಯಲಾಗುತ್ತದೆ. ಯುದ್ಧದ ಕಾರಣದಿಂದ ಅಂತರಾಷ್ಟ್ರೀಯ ಇಂಧನ ಸಾಗಣೆಯಲ್ಲಿ ಉಂಟಾದ ಅಡಚಣೆಯು ಈ ಪೂರೈಕೆ ಸರಪಳಿಯನ್ನು ಮುರಿದುಹಾಕಿದೆ. ಇದರಿಂದಾಗಿ ಕಾರ್ಖಾನೆಗಳು ಉತ್ಪಾದನೆಗೆ ಅಗತ್ಯವಾದ ಇಂಧನವಿಲ್ಲದೆ ಪರದಾಡುತ್ತಿವೆ.
ಕಳೆದ ಮೂರು ದಿನಗಳಲ್ಲಿ ಇನ್ನೂ 70 ಪ್ರೋಪೇನ್ ಗ್ಯಾಸ್ ಆಧಾರಿತ ಕಾರ್ಖಾನೆಗಳು ಮುಚ್ಚಲ್ಪಟ್ಟಿದ್ದು, ಯುದ್ಧ ಪ್ರಾರಂಭವಾದಾಗಿನಿಂದ ಈವರೆಗೆ ಒಟ್ಟು 170 ಘಟಕಗಳು ಬಂದ್‌ಆಗಿವೆ. ಮೂರು ದಿನಗಳ ಹಿಂದೆ ಮಾತನಾಡಿದ್ದ ಸಂಘದ ಅಧ್ಯಕ್ಷ ಮನೋಜ್‌ಭಾಯ್ ಏರ್ವಾಡಿಯಾ, “ಉದ್ಯಮಿಗಳು ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರೋಪೇನ್ ಅನಿಲ ಪೂರೈಕೆಯ ಹಠಾತ್ ಸ್ಥಗಿತದಿಂದ ಕೇವಲ ಎರಡು ದಿನಗಳಲ್ಲಿ ಸುಮಾರು 100 ಸೆರಾಮಿಕ್ ಕಾರ್ಖಾನೆಗಳನ್ನು ಮುಚ್ಚಬೇಕಾಯಿತು” ಎಂದು ತಿಳಿಸಿದ್ದರು.
ಒಂದು ವೇಳೆ ಪೂರೈಕೆ ಸರಪಳಿಯು ಶೀಘ್ರವಾಗಿ ಸ್ಥಿರಗೊಳ್ಳದಿದ್ದರೆ, ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳಬಹುದು. ಮುಂದಿನ ದಿನಗಳಲ್ಲಿ 450 ಸೆರಾಮಿಕ್ ಕಾರ್ಖಾನೆಗಳು ಮುಚ್ಚಬಹುದು ಎಂದು ಅಂದಾಜಿಸಲಾಗಿದೆ. ಇದು ಗುಜರಾತ್‌ನ ಅತಿದೊಡ್ಡ ಟೈಲ್ಸ್ ಉತ್ಪಾದನಾ ವಲಯದಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡು, ನಿರುದ್ಯೋಗಿಗಳಾಗುವ ಅಪಾಯವನ್ನೂ ಅಪಾಯ ತಂದೊಡ್ಡಲಿದೆ ಎಂದು ‘ಟಿಎನ್‌ಐಇ’ ವರದಿ ಮಾಡಿದೆ.
ಮೊರ್ಬಿಯ ಸೆರಾಮಿಕ್ ವಲಯವೊಂದರಲ್ಲೇ ನೇರವಾಗಿ ಮತ್ತು ಪರೋಕ್ಷವಾಗಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಕಾರ್ಖಾನೆಯು ಸಾಮಾನ್ಯವಾಗಿ 250-300 ಕಾರ್ಮಿಕರನ್ನು ಹೊಂದಿರುತ್ತದೆ. ಈಗ ಕಾರ್ಖಾನೆಗಳು ಸ್ಥಗಿತಗೊಳ್ಳುತ್ತಿರುವುದರಿಂದ, ಸಾವಿರಾರು ಕಾರ್ಮಿಕರು ವೇತನ ಮತ್ತು ಜೀವನೋಪಾಯದ ಬಗ್ಗೆ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ.
ಯುದ್ಧವು ಸೆರಾಮಿಕ್ ಉದ್ಯಮದ ಮೇಲೆ ಮಾತ್ರವಲ್ಲದೆ, ಪೇಪರ್ ಮಿಲ್ ವಲಯದ ಕತ್ತನ್ನೂ ಹಿಸುಕಲು ಪ್ರಾರಂಭಿಸಿದೆ. ಇದು ಸೆರಾಮಿಕ್ ಉದ್ಯಮಕ್ಕೆ ಬೇಕಾದ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಪೂರೈಸುತ್ತದೆ. ಈ ಭಾಗದ ಪೇಪರ್ ಮಿಲ್‌ಗಳು ಆಮದು ಮಾಡಿಕೊಂಡ ತ್ಯಾಜ್ಯ ಕಾಗದದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದರೆ, ಯುದ್ಧದ ಕಾರಣದಿಂದಾಗಿ ಅಂತರಾಷ್ಟ್ರೀಯ ಸಮುದ್ರ ಮಾರ್ಗಗಳ ಮೂಲಕ ಬರುವ ಹಡಗುಗಳ ಸಂಚಾರ ಕುಂಠಿತಗೊಂಡಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ; ಈ ಹಿಂದೆ 3,600 ರೂ. ಇದ್ದ ಕಂಟೇನರ್ ವೆಚ್ಚವು ಈಗ ಸುಮಾರು 5,600 ರೂ.ಗೆ ಏರಿಕೆಯಾಗಿದೆ.
ಇನ್ನು, ಮೊರ್ಬಿಯ ವ್ಯಾಪಕ ಕೈಗಾರಿಕಾ ಪರಿಸರ ವ್ಯವಸ್ಥೆಯಾದ ಪಾಲಿಪ್ಯಾಕ್ ಉತ್ಪಾದನಾ ವಲಯವೂ ಕುಸಿತ ಎದುರಿಸುತ್ತಿದೆ. ಮೊರ್ಬಿಯಲ್ಲಿ ಸುಮಾರು 200 ಪಾಲಿಪ್ಯಾಕ್ ಕಾರ್ಖಾನೆಗಳಿದ್ದು, 20,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಘಟಕಗಳು ಭಾರತದಾದ್ಯಂತ ಉದ್ಯಮಗಳಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ತಯಾರಿಸುತ್ತವೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್‌ಗೆ ತೈಲ, ಇರಾನ್‌ಗೆ ನೀರಿನ ಅಭಾವ, ಅಮೆರಿಕ್ಕೆ ಅನಗತ್ಯ ವೆಚ್ಚ: ಯುದ್ಧದ ಭೀಕರ ಪರಿಣಾಮಗಳು
ಆದರೆ, ಈ ವಲಯವು ಈಗ ಕಚ್ಚಾ ವಸ್ತುಗಳ ಕೊರತೆ ಮತ್ತು ತೀವ್ರ ಬೆಲೆ ಏರಿಕೆಯ ಪೆಟ್ಟು ಎದುರಿಸುತ್ತಿದೆ. ಪ್ಲಾಸ್ಟಿಕ್ ಗ್ರ್ಯಾನ್ಯೂಲ್ಸ್ (Plastic granules) ಈ ಉದ್ಯಮದ ಪ್ರಾಥಮಿಕ ಕಚ್ಚಾ ವಸ್ತುವಾಗಿದ್ದು, ಇದರ ಬೆಲೆ ಯುದ್ಧಕ್ಕೆ ಮೊದಲು ಪ್ರತಿ ಕೆಜಿಗೆ 90-92 ರೂ. ಇತ್ತು. ಈಗ ಕಂಪನಿಯ ಅಧಿಕೃತ ಬೆಲೆ ಪಟ್ಟಿಯಲ್ಲಿ 135-140 ರೂ.ಗೆ ಏರಿಕೆಯಾಗಿದೆ. ಆದರೂ, ಮಾರುಕಟ್ಟೆಯಲ್ಲಿ ಈ ಕಚ್ಚಾ ವಸ್ತುವಿನ ಪೂರೈಕೆಯೇ ಇಲ್ಲ ಎಂದು ತಯಾರಕರು ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿ ಅನೇಕ ಕಾರ್ಖಾನೆಗಳು ಕಾಳಸಂತೆಯನ್ನುಅವಲಂಬಿಸುವಂತಾಗಿದ್ದು, ಅಲ್ಲಿ ಕೆಜಿಗೆ 150-160 ರೂ. ಪಾವತಿ ಮಾಡಬೇಕಿದೆ.
ಪಾಲಿಪ್ಯಾಕ್ ಕಾರ್ಖಾನೆಗಳು ಬಳಸುವ 40% ರಷ್ಟು ಕಚ್ಚಾ ವಸ್ತುಗಳು ಆಮದು ಮಾಡಿಕೊಂಡವುಗಳಾಗಿವೆ. ಅಂತರಾಷ್ಟ್ರೀಯ ಸಾಗಣೆ ವ್ಯತ್ಯಯದಿಂದಾಗಿ ಆಮದು ತೀವ್ರವಾಗಿ ಕುಸಿದಿದೆ. ಲಾಜಿಸ್ಟಿಕ್ಸ್ ವೆಚ್ಚವೂ ಪರಿಸ್ಥಿತಿಯನ್ನು ಹದಗೆಡಿಸಿದೆ; ಕಂಟೇನರ್ ಸರಕು ಸಾಗಣೆ ದರಗಳು ಮೂರು ಪಟ್ಟು ಹೆಚ್ಚಾಗಿದ್ದು, ಪ್ರತಿ ಕಂಟೇನರ್‌ಗೆ 1,000 ರೂ. ನಿಂದ ಸುಮಾರು 3,000 ರೂ. ವರೆಗೆ ಏರಿಕೆಯಾಗಿದೆ.
ಸಂಘರ್ಷದ ಪರಿಣಾಮವು ಗುಜರಾತ್‌ನ ಪ್ರಮುಖ ರಫ್ತು ಕೇಂದ್ರವಾದ ಸೂರತ್‌ನಲ್ಲೂ ಕಂಡುಬರುತ್ತಿದೆ. ಅಲ್ಲಿನ ಜವಳಿ, ವಜ್ರ ಹಾಗೂ ಆಭರಣ ಉದ್ಯಮಗಳು ಜಾಗತಿಕ ವ್ಯಾಪಾರ ಮಾರ್ಗಗಳಲ್ಲಿ ಅಡಚಣೆಗಳನ್ನು ಎದುರಿಸುತ್ತಿವೆ. ಬಿಕ್ಕಟ್ಟಿನ ಪ್ರದೇಶದಲ್ಲಿನ ಭದ್ರತಾ ಕಾಳಜಿಯಿಂದಾಗಿ ಹಲವಾರು ಅಂತರಾಷ್ಟ್ರೀಯ ಸರಕು ಸಾಗಣೆ ವಿಮಾನಗಳು ರದ್ದಾಗಿವೆ. ಇದು ಪಶ್ಚಿಮ ಏಷ್ಯಾದ ಮಾರುಕಟ್ಟೆಗಳಿಗೆ ರಫ್ತಾಗುವ ಸರಕುಗಳ ಮೇಲೆ ನೇರ ಪರಿಣಾಮ ಬೀರಿದೆ.
ಪರಿಣಾಮವಾಗಿ, ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಮತ್ತು ಆಭರಣಗಳು ಸೂರತ್ ಮತ್ತು ಮುಂಬೈ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಸಿಲುಕಿಕೊಂಡಿವೆ. ಈ ಅಡಚಣೆ ಮುಂದುವರಿದರೆ ಗಂಭೀರ ಪಾವತಿ ವಿಳಂಬ ಮತ್ತು ಸುಸ್ತಿದಾರರ ಸಮಸ್ಯೆ ಉಂಟಾಗಬಹುದು ಎಂದು ಉದ್ಯಮದ ಮುಖಂಡರು ಎಚ್ಚರಿಸಿದ್ದಾರೆ. ಭಾರತದ ಆಭರಣ ರಫ್ತಿನ ಸುಮಾರು 35%ರಷ್ಟು ಅಮೆರಿಕಕ್ಕೆ ಹೋಗುತ್ತದೆ. ಈಗ ಅಲ್ಲಿನ ಆರ್ಡರ್‌ಗಳು ಕೂಡ ಕುಸಿಯಬಹುದು ಎಂಬ ಆತಂಕ ವರ್ತಕರನ್ನು ಕಾಡುತ್ತಿದೆ.
ಮೊರ್ಬಿಯ ಕಾರ್ಖಾನೆಗಳ ಸ್ಥಗಿತದಿಂದ ಸೂರತ್‌ನ ರಫ್ತು ತಡೆಯುವವರೆಗೆ, ಇರಾನ್-ಇಸ್ರೇಲ್ ಯುದ್ಧದ ಪರಿಣಾಮಗಳು ಗುಜರಾತ್‌ನ ರಫ್ತು ಆಧಾರಿತ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಮುಂದಿನ ವಾರಗಳ ಬೆಳವಣಿಗೆಗಳು ಈ ಅಡಚಣೆಯು ತಾತ್ಕಾಲಿಕವೇ ಅಥವಾ ಪೂರ್ಣ ಪ್ರಮಾಣದ ಉತ್ಪಾದನಾ ಬಿಕ್ಕಟ್ಟಾಗಿ ಬದಲಾಗುತ್ತದೆಯೇ ಎಂಬುದನ್ನು ನಿರ್ಧರಿಸಲಿವೆ.




