ಇರಾನ್ ಮೇಲೆ ಅಮೆರಿಕ ಜೊತೆಗೂಡಿ ದಾಳಿ ನಡೆಸಿದ ಇಸ್ರೇಲ್ ಈಗ ಬಿಕ್ಕಟ್ಟಿಗೆ ಸಿಲುಕಿದೆ. ಇರಾನ್‌ನ ಪ್ರತಿದಾಳಿಗೆ ಇಸ್ರೇಲ್ ತತ್ತಿರಿಸಿದೆ. ಇದೀಗ, ಇಸ್ರೇಲ್ ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಬಳಸುವ ‘ಇಂಟರ್‌ಸೆಪ್ಟರ್’ಗಳ (ಕ್ಷಿಪಣಿ ನಿರೋಧಕ) ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಕುರಿತು ಅಮೆರಿಕಗೆ ಮಾಹಿತಿ ನೀಡಿದ್ದು, ತನ್ನ ರಕ್ಷಣೆಗೆ ನೆರವು ನೀಡುವಂತೆ ಕೋರಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಸುದ್ದಿ ಸಂಸ್ಥೆ ‘ಸೆಮಾಫೋರ್’ ವರದಿಯ ಪ್ರಕಾರ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯನ್ನು ತಡೆಯಲು ಬಳಸುವ ಇಂಟರ್‌ಸೆಪ್ಟರ್‌ಗಳ ದಾಸ್ತಾನು ಇಸ್ರೇಲ್‌ನಲ್ಲಿ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಈ ವಿಷಯದ ಬಗ್ಗೆ ಮಾಹಿತಿ ಪಡೆದಿರುವ ಅಮೆರಿಕದ ಅಧಿಕಾರಿಗಳು, “ಇಸ್ರೇಲ್ ತನ್ನ ಶಸ್ತ್ರಾಸ್ತ್ರ ಸಂಗ್ರಹದ ಕೊರತೆಯ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡುತ್ತಾ ಬಂದಿದೆ” ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಅಸ್ಥಿರತೆ ಸೃಷ್ಟಿಸಿದೆ. ತನ್ನ ನೆರೆಯ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಲೇ ಇದೆ. ಪರಿಣಾಮ, ಗಾಜಾ ಮತ್ತು ಲೆಬನಾನ್‌ನಿಂದ ನಿರಂತರ ಪ್ರತಿದಾಳಿಗಳೂ ನಡೆದಿವೆ. ಹೀಗಾಗಿ, ಪ್ರತಿದಾಳಿಯನ್ನು ತಡೆಯಲು ಇಸ್ರೇಲ್ ತನ್ನ ‘ಐರನ್ ಡೋಮ್’ ಮತ್ತು ‘ಆರೋ’ ರಕ್ಷಣಾ ವ್ಯವಸ್ಥೆಗಳನ್ನು ವ್ಯಾಪಕವಾಗಿ ಬಳಸಿದೆ. ಈ ನಡುವೆ, ಇರಾನ್ ಜೊತೆಗೂ ಸಂಘರ್ಷಕ್ಕಿಳಿದ ಇಸ್ರೇಲ್, ಇರಾನ್‌ನ ಪ್ರತಿದಾಳಿಗೆ ನಲುಗಿಹೋಗಿದೆ. ಇಸ್ರೇಲ್ ಬಳಿಯಿದ್ದ ಇಂಟರ್‌ಸೆಪ್ಟರ್‌ಗಳ ದಾಸ್ತಾನು ಖಾಲಿಯಾಗಿದ್ದು, ಆತಂಕಕ್ಕೆ ಒಳಗಾಗಿದೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?
ಇಸ್ರೇಲ್‌ಗೆ ಅಮೆರಿಕ ನೆರವು ನೀಡುತ್ತಿದ್ದು, ತನ್ನ ‘THAAD’ ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್‌ನಲ್ಲಿ ನಿಯೋಜಿಸಲು ಅಮೆರಿಕ ಮುಂದಾಗಿದೆ. ಜೊತೆಗೆ, ಈ ವ್ಯವಸ್ಥೆಯನ್ನು ನಿರ್ವಹಿಸಲು ಸುಮಾರು 100 ಅಮೆರಿಕದ ಸೈನಿಕರನ್ನು ಇಸ್ರೇಲ್‌ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ ನಂತರ, ಇರಾನ್ ಪ್ರಬಲವಾಗಿ ಪ್ರತಿದಾಳಿ ನಡೆಸುತ್ತಿದೆ. ಕಳೆದ 15 ದಿನಗಳಲ್ಲಿ ಇರಾನ್ ಸುಮಾರು 180ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ದಾಳಿ ಮಾಡಿದೆ.




