ಇರಾನ್‌ನ ಸರ್ವೋಚ್ಚ ನಾಯಕರಾಗಿ ಮೊಜ್ತಬಾ ಖಮೇನಿ ಅವರ ನೇಮಕವು ಕೇವಲ ಉತ್ತರಾಧಿಕಾರದ ಬದಲಾವಣೆಯಲ್ಲ. ಅದು, ಅಮೆರಿಕ ಮತ್ತು ಇಸ್ರೇಲ್‌ನ ಭೌಗೋಳಿಕ ರಾಜಕೀಯ ಕನಸುಗಳಿಗೆ ಬಿದ್ದ ಭಾರಿ ಹೊಡೆತವೂ ಆಗಿದೆ. ಪ್ರಸ್ತುತ ನಡೆಯುತ್ತಿರುವ ಯುದ್ಧದ ಬಳಿಕ, ಇರಾನ್‌ನ ರಾಜಕೀಯ ಭವಿಷ್ಯವನ್ನು ಅಮೆರಿಕ ಅಥವಾ ಇಸ್ರೇಲ್ ನಿರ್ಧರಿಸುತ್ತದೆ ಎಂಬ ಭ್ರಮೆ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಲ್ಲಿತ್ತು. ಆದರೆ, ಎಂದಿಗೂ ಅಮೆರಿಕ-ಇಸ್ರೇಲ್ ಎದುರು ತಲೆಬಾಗುವುದಿಲ್ಲವೆಂದು ಇರಾನ್ ಸ್ಪಷ್ಟ ಸಂದೇಶನ ನೀಡಿದೆ. ‘ಇರಾನ್‌ನ ನಾಯಕತ್ವವನ್ನು ಇರಾನ್ ಜನರೇ ನಿರ್ಧರಿಸುತ್ತಾರೆ’ ಎಂಬುದನ್ನು ಬಲವಾಗಿ ಪ್ರತಿಪಾದಿಸಿದೆ.
ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ, ಇರಾನ್ ದುರ್ಬಲಗೊಳ್ಳುತ್ತದೆ. ತಾನು ಇರಾನ್ ಅನ್ನು ಹಿಡಿತಕ್ಕೆ ತೆಗೆದುಕೊಳ್ಳಬಹುದು. ಅಲ್ಲಿನ ತೈಲ ಸಂಪತ್ತಿನ ಮೇಲೆ ನಿಯಂತ್ರಣ ಸಾಧಿಸಬಹುದು ಎಂಬುದು ಅಮೆರಿಕ-ಇಸ್ರೇಲ್‌ನ ಅಂದಾಜಾಗಿತ್ತು. ಆದರೆ, ಪರಿಸ್ಥಿತಿ ವ್ಯತಿರಿಕ್ತವಾದ ಬೆಳವಣಿಗೆಯನ್ನು ಕಂಡಿದೆ. ಯುದ್ಧದ ಬಿಕ್ಕಟ್ಟಿನ ಸಮಯದಲ್ಲೇ ಇರಾನ್‌ನ ಮತಾಧಿಕಾರಿಗಳ ಗುಂಪು ಒಂದಾಗಿ, ಮೊಜ್ತಬಾ ಖಮೇನಿ ಅವರನ್ನು ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ನೇಮಿಸಿದೆ. ಆ ಮೂಲಕ ತಮ್ಮ ಆಂತರಿಕ ಶಕ್ತಿಯನ್ನು ಪ್ರದರ್ಶಿಸಿದೆ.
ಜೊತೆಗೆ, ಅಮೆರಿಕ-ಇಸ್ರೇಲ್ ತಡೆದುಕೊಳ್ಳಲಾಗದ ರೀತಿಯಲ್ಲಿ ಪ್ರತಿದಾಳಿ ನಡೆಸುತ್ತಿದೆ. ಅಮೆರಿಕ ಸೇನಾ ನೆಲೆಗಳಿರುವ ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಬಹ್ರೇನ್ ಹಾಗೂ ಕತಾರ್ ಮೇಲೆ ಇರಾನ್ ನಿರಂತರ ದಾಳಿ ನಡೆಸಿದ್ದು, ಇಡೀ ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳು ತತ್ತರಿಸುವಂತೆ ಮಾಡಿದೆ. ಮಾತ್ರವಲ್ಲ, ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಅರ್ಧ ಜಗತ್ತೇ ಬಿಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ. ಇದು, ಟ್ರಂಪ್ ಮತ್ತು ನೆತನ್ಯಾಹುಗೆ ಆಘಾತ ಉಂಟುಮಾಡಿದೆ.
ಅಮೆರಿಕ-ಇಸ್ರೇಲ್‌ನ ದಾಳಿಯಲ್ಲಿ ಮೊಜ್ತಬಾ ಗಾಯಗೊಂಡಿದ್ದರೂ, ಅವರು ನೀಡಿರುವ ಮೊದಲ ಸಂದೇಶ ಅತ್ಯಂತ ತೀಕ್ಷ್ಣವಾಗಿದೆ. ‘ಹುತಾತ್ಮರ (ಅಲಿ ಖಮೇನಿ ಮತ್ತು ಇತರರು) ರಕ್ತಕ್ಕೆ ಪ್ರತೀಕಾರ ತೀರಿಸಲಾಗುವುದು’ ಎಂಬ ಅವರ ಘೋಷಣೆ, ಯುದ್ಧದಿಂದ ಇರಾನ್ ಹಿಂದೆ ಸರಿಯುವ ಮಾತೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಮೊಜ್ತಬಾ ಖಮೇನಿ ಅವರು ತಮ್ಮ ಮೊದಲ ಸಂದೇಶದಲ್ಲಿಯೇ ‘ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ’ ಎಚ್ಚರಿಕೆ ನೀಡಿದರು. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಂಪನ ಮೂಡಿಸಿತು. ಈಗ, ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲ ರವಾನೆಯಾಗುತ್ತಿದ್ದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ತನ್ನ ಮೇಲೆ ದಾಳಿಗಳು ನಡೆದಿದ್ದರೂ, ಎದುರಾಳಿಗಳ ಆರ್ಥಿಕತೆಯ ಮೇಲೆ ಪ್ರಹಾರ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬ ಸಂದೇಶವನ್ನು ಇರಾನ್ ರವಾನಿಸಿದೆ. ಈ ಆರ್ಥಿಕ ಬಿಕ್ಕಟ್ಟೇ ಯುದ್ಧವನ್ನು ಅಂತ್ಯಗೊಳಿಸಲಿದೆ. ಟ್ರಂಪ್ ಹಿಂದೆ ಸರಿಯುವಂತೆ ಮಾಡುತ್ತದೆ ಎಂದು ಇರಾನ್ ನಂಬಿದೆ.

1979ರ ಕ್ರಾಂತಿ ಮತ್ತು ಇರಾನ್-ಇರಾಕ್ ಯುದ್ಧದ ಕಹಿ ಅನುಭವಗಳನ್ನು ಕಂಡು ಬೆಳೆದಿರುವ ಮೊಜ್ತಬಾ, ಸಂಘರ್ಷದ ತೀವ್ರತೆಯನ್ನು ಅರಿತಿದ್ದಾರೆ. ‘ಅಸ್ತಿತ್ವದ ಬಿಕ್ಕಟ್ಟು ಬಂದಾಗ ಹೊರಗಿನ ಶಕ್ತಿಗಳನ್ನು ನಂಬುವುದಕ್ಕಿಂತ, ಸ್ವಂತ ಬಲವನ್ನೇ ನಂಬಬೇಕು’ ಎಂಬುದನ್ನು ಅವರು ತಿಳಿದಿದ್ದಾರೆ.
ಇದೆಲ್ಲವೂ, ಅಲಿ ಖಮೇನಿ ಅವರ ಹತ್ಯೆಯು ಇರಾನ್‌ನ ಆಡಳಿತವನ್ನು ದುರ್ಬಲಗೊಳಿಸುವ ಬದಲು, ದೇಶದಲ್ಲಿ ‘ಪ್ರತಿರೋಧ’ ಮತ್ತು ‘ಹುತಾತ್ಮ’ ಮನೋಭಾವವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇರಾನ್ ಪ್ರಬಲವಾಗಿ ನಿಲ್ಲುವಂತೆ ಮಾಡಿದೆ.
ಈ ಲೇಖನ ಓದಿದ್ದೀರಾ?: ಇರಾನ್-ಅಮೆರಿಕ-ಇಸ್ರೇಲ್ ಯುದ್ಧ ಗೆದ್ದವರಾರು? ಲಾಭ ಪಡೆದವರಾರು?
ಮೊಜ್ತಬಾ ಖಮೇನಿ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ಗಳ (IRGC) ನಿಕಟವರ್ತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ, ಇರಾನ್ ಹೆಚ್ಚು ಆಕ್ರಮಣಕಾರಿ ಯುದ್ಧತಂತ್ರವನ್ನು ಅನುಸರಿಸುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಹೌತಿ, ಹಿಜ್ಬುಲ್ಲಾ ಹಾಗೂ ಹಮಾಸ್‌ನಂತಹ ‘ಪ್ರತಿರೋಧದ ಅಕ್ಷ’ಗಳಿಗೆ ಇರಾನ್‌ನ ಬೆಂಬಲ ಇಮ್ಮಡಿಗೊಳ್ಳುವ ಸಾಧ್ಯತೆ ಇದೆ. ಪರಿಣಾಮ, ಸುಲಭದ ‘ನಿರ್ಗಮನ’ ದಾರಿ ಟ್ರಂಪ್‌ಗೆ ದೊರೆಯುವುದಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಇರಾನ್ ನೇರ ಸಾಂಪ್ರದಾಯಿಕ ಯುದ್ಧಕ್ಕಿಂತ, ಎದುರಾಳಿಗಳಿಗೆ ನೋವು ಮಾಡುವಂತಹ ನಿರಂತರ ಒತ್ತಡದ ತಂತ್ರಗಳನ್ನು ಬಳಸಲಿದೆ.
ಇರಾನ್‌ನ ಈ ಕಠಿಣ ನಿಲುವು ನೆರೆಯ ರಾಷ್ಟ್ರಗಳಿಗೆ ಆತಂಕ ತಂದಿದೆ. ಅಮೆರಿಕದ ಸೇನಾ ನೆಲೆಗಳನ್ನು ಹೊಂದಿರುವ ದೇಶಗಳಿಗೆ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ. ಇದು ಗಲ್ಫ್ ರಾಷ್ಟ್ರಗಳನ್ನು ಅನಿಶ್ಚಿತತೆಯ ಸುಳಿಗೆ ತಳ್ಳಿದೆ. ಇಸ್ರೇಲ್‌ನ ಪ್ರಮುಖ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೃಶ್ಯಗಳು, ಸಂಘರ್ಷವು ಇನ್ನಷ್ಟು ಭೀಕರ ಸ್ವರೂಪ ಪಡೆಯಲಿದೆ ಎಂಬುದನ್ನು ಸೂಚಿಸುತ್ತವೆ.
ಮಧ್ಯಪ್ರಾಚ್ಯದ ಯುದ್ಧವು ಒಂದು ಸರ್ಕಾರವನ್ನು ನಾಶಪಡಿಸುವುದು ಸುಲಭವಿರಬಹುದು, ಆದರೆ ಒಂದು ಇಡೀ ನಾಗರಿಕತೆಯನ್ನು ಮರುರೂಪಿಸುವುದು ಅಥವಾ ಬಲವಂತವಾಗಿ ಶರಣಾಗತವಾಗಿಸುವುದು ಅಸಾಧ್ಯ ಎಂಬುದನ್ನು ಜಗತ್ತಿಗೆ ಸಾರಿ ಹೇಳುತ್ತಿದೆ. ಇದನ್ನು ಜಗತ್ತು ಅರಿತುಕೊಳ್ಳಬೇಕು.





