ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಯುಎಇ(ದುಬೈ)ಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ಜತೆಗೆ ವಿಸಿಟ್ ವೀಸಾ ಮೂಲಕ ಉದ್ಯೋಗವನ್ನು ಹರಸಿಬಂದ ಜನರಿಗೆ ವಸತಿ, ಊಟದ ವ್ಯವಸ್ಥೆ ಮಾಡುವ ಮೂಲಕ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ.
ಯುಎಇಯಲ್ಲಿ ಕೊರೊನಾ ಹಾಗೂ ಪ್ರವಾಹದ ವೇಳೆ ಸಂಕಷ್ಟದಕ್ಕಿದ್ದ ಕನ್ನಡಿಗರಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ‘ಕನ್ನಡಿಗಾಸ್ ಹೆಲ್ಪ್ ಲೈನ್’, ಈ ಬಾರಿಯ ಯುದ್ಧದಿಂದ ಸಂಕಷ್ಟಕ್ಕೀಡಾದ ಕನ್ನಡಿಗರನ್ನು ರಕ್ಷಿಸುವ ಜತೆಗೆ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ಮೂಲಕ ಮತ್ತೆ ತನ್ನ ಕಾರ್ಯಚಟುವಟಿಕೆಯನ್ನು ಪುನರಾರಂಭಿಸಿದೆ.
ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ ಅವರ ನೇತೃತ್ವದಲ್ಲಿ ಹಿದಾಯತ್ ಅಡ್ಡೂರು ಅವರ ಸಂಯೋಜನೆಯಲ್ಲಿ ಯುಎಇಯಲ್ಲಿರುವ ಕನ್ನಡಿಗರ 30ಕ್ಕೂ ಹೆಚ್ಚಿನ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡವು ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿ ಕನ್ನಡಿಗರನ್ನು, ಅನಾರೋಗ್ಯಕ್ಕೀಡಾದವರನ್ನು, ಊಟ, ವಸತಿ ಇಲ್ಲದವರನ್ನು ಭೇಟಿ ಮಾಡಿ, ನೆರವಿನ ಹಸ್ತವನ್ನು ನೀಡುವ ಮೂಲಕ ಇಲ್ಲಿನ ಅನಿವಾಸಿ ಭಾರತೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಹಗಲಿರುಳು ‘ಕನ್ನಡಿಗಾಸ್ ಹೆಲ್ಪ್ ಲೈನ್’ ಸೇವೆ ಸಲ್ಲಿಸಿದೆ: ಹಿದಾಯತ್ ಅಡ್ಡೂರು
ಈ ಬಗ್ಗೆ ಮಾಧ್ಯಮದ ಜತೆ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಸಂಯೋಜಕ ಹಿದಾಯತ್ ಅಡ್ಡೂರು ಮಾತನಾಡಿ, “ಯುಎಇಯಲ್ಲಿ ತಾಯ್ನಾಡಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ 630ಕ್ಕೂ ಅಧಿಕ ಮಂದಿಗೆ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿ, ಸುರಕ್ಷಿತವಾಗಿ ತಾಯ್ನಾಡು ಸೇರುವಂತೆ ಮಾಡಲಾಗಿದೆ” ಎಂದಿದ್ದಾರೆ.
ಸಂಕಷ್ಟದ ವೇಳೆ ತುರ್ತಿನ ಅವಶ್ಯಕತೆ ಇರುವ ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದಿರುವವಂತಹವರನ್ನು ತಾಯ್ನಾಡಿಗೆ ಕಳುಹಿಸಲು 180 ಆಸನಗಳಿರುವ ಚಾರ್ಟರ್ ಫ್ಲೈಟ್ ವ್ಯವಸ್ಥೆಯನ್ನು ಮಾಡಲು ಸಂಪೂರ್ಣ ಮೊತ್ತದ ಹಣವನ್ನು ನೀಡುವುದಾಗಿಯೂ ಡಾ.ರೊನಾಲ್ಡ್ ಕೊಲಾಸೋರವರು ‘ಕನ್ನಡಿಗಾಸ್ ಹೆಲ್ಪ್ ಲೈನ್’ಗೆ ಭರವಸೆ ನೀಡಿದ್ದರು. ಜತೆಗೆ ಇಲ್ಲಿ ಸಿಲುಕಿದ್ದ ಪ್ರವಾಸಿ ಕನ್ನಡಿಗರೊಬ್ಬರಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಹಾಗೂ ಅಗತ್ಯವಿರುವವರಿಗೆ ಊಟ ಉಪಚಾರಕ್ಕೆ ಬೇಕಾದ ಹಣದ ಸಹಾಯವನ್ನು ನೀಡುವುದಾಗಿಯೂ ನಮಗೆ ಭರವಸೆ ನೀಡಿದ್ದರು. ಭಾರತೀಯ ರಾಯಭಾರಿ ಕಚೇರಿಯಿಂದ ನಮ್ಮ ಬಳಿ ಬಂದಂತಹ 22 ಮಂದಿ ಅನಾರೋಗ್ಯಪೀಡಿತರಿಗೆ ಔಷಧಿಯನ್ನು ಕೊಲಾಸೋ ಅವರು ನೀಡಿದ ಹಣದಿಂದಲೇ ನೀಡಲಾಗಿದೆ. ಕೊಲಾಸೋ ಅವರು ನಮಗೆ ಬೇಕಾದ ಎಲ್ಲ ರೀತಿಯ ಹಣಕಾಸಿನ ನೆರವು ನೀಡಿ ನಮಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಇದೇ ವೇಳೆ ದುಬೈನಲ್ಲಿ ಪ್ರವೀಣ್ ಶೆಟ್ಟಿ ಹಾಗೂ ಇಸಾಕ್ ಹಾಜಿ ಅವರ ಹೋಟೆಲ್‌ಗಳಲ್ಲಿ, ಅಜ್ಮಾನ್‌ನಲ್ಲಿ ಧೀರಜ್ ಜೈನ್ ಅವರ ಫಾರ್ಮ್ ಹೌಸ್‌ನಲ್ಲಿ 235ಕ್ಕಿಂತಲೂ ಹೆಚ್ಚು ಜನರಿಗೆ ಉಚಿತವಾಗಿ ವಸತಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ 71 ಜನರಿಗೆ ದುಬೈನ ರಾಶಿದ್ ಆಸ್ಪತ್ರೆಯ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ, 32 ಮಂದಿಗೆ ಔಷಧಿ ಒದಗಿಸುವ ಮೂಲಕ ವೈದ್ಯಕೀಯ ಸಹಾಯ ಮಾಡಲಾಗಿದೆ.
ಯುದ್ಧದ ಆರಂಭದ ವೇಳೆ ಒಟ್ಟು 1,180 ಊಟಗಳನ್ನು ಸಂಕಷ್ಟದಲ್ಲಿದ್ದ ಜನರಿಗೆ ವಿತರಿಸಲಾಗಿದೆ. ಜತೆಗೆ 70 ಆಹಾರೋತ್ಪನ್ನಗಳ ಕಿಟ್‌ಗಳನ್ನು ನೀಡಲಾಗಿದೆ. ತೊಂದರೆಗೀಡಾದ ಜನರನ್ನು ದುಬೈ, ಶಾರ್ಜಾ, ರಾಸ್ ಅಲ್ ಖೈಮಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಿಗೆ ತೆರಳಲು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
‘ಕನ್ನಡಿಗಾಸ್ ಹೆಲ್ಪ್ ಲೈನ್’ ಜತೆ ಕೆಎನ್ಆರೈ ಫೋರಂ ಯುಎಇ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(BCCI) ಯುಎಇ, ಕರ್ನಾಟಕ ಸಂಘ ದುಬೈ, ಕನ್ನಡಿಗರ ಕೂಟ ದುಬೈ, ಅಬುಧಾಬಿ ಕರ್ನಾಟಕ ಸಂಘ, ದುಬೈ ಅನಿವಾಸಿ ಕನ್ನಡಿಗರು, ಹೆಮ್ಮೆಯ ದುಬೈ ಕನ್ನಡ ಸಂಘ, ಒಕ್ಕಲಿಗರ ಸಂಘ ದುಬೈ, ಕನ್ನಡ ಪಾಠ ಶಾಲೆ ದುಬೈ, ಶಾರ್ಜಾ ಕರ್ನಾಟಕ ಸಂಘ, ದುಬೈ ಕೊಂಕಣ್ಸ್, ಬಿಸಿಎಫ್, ಕೆಸಿಎಫ್, ಮಂಕಿ ಕಮ್ಯೂನಿಟಿ, SKSSF ವಿಖಾಯ ಯುಎಇ, ನೂರುಲ್ ಹುದಾ ಯುಎಇ ಕಮಿಟಿ, ದುಬೈ ಬ್ಯಾರೀಸ್, ಬದ್ರಿಯಾ ಫ್ರೆಂಡ್ಸ್, ಹಿದಾಯ ಫೌಂಡೇಶನ್, ಸಂಶುಲ್ ಉಲಮಾ ತೋಡಾರ್, ರಾಸ್ ಅಲ್ ಖೈಮಃ & ಫುಜೈರಾಹ್ ಕರ್ನಾಟಕ ಸಂಘ, ಏಮ್ ಇಂಡಿಯಾ ಫೌಂಡೇಶನ್, ದಾರುಲ್ ನೂರ್, ಗಲ್ಫ್ ಕರ್ನಾಟಕ ಕುಟುಂಬ & ಗಲ್ಫ್ ಗೆಳತಿಯರು, ಮ್ಯಾಂಗಲೋರ್ ಕೊಂಕಣ್ಸ್ ದುಬೈ, ಅಲ್ ಖಮರ್ ಟ್ರಸ್ಟ್ ಮೂಳೂರು, ಒಕ್ಕಲಿಗರ ಸಂಘ ಯುಎಇ, ರಾಕ್ ಕರ್ನಾಟಕ ಸಂಘ ಯುಎಇ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳು ಕೈಜೋಡಿಸಿವೆ ಎಂದು ಹೇಳಿದ್ದಾರೆ.

ಸೌಹಾರ್ದತೆಯ ಸಂದೇಶ ಸಾರಿದ ಉದ್ಯಮಿ ರೊನಾಲ್ಡ್ ಕೊಲಾಸೋ
ತಂಡದ ಶ್ಲಾಘನೀಯ ಸೇವಾ ಕಾರ್ಯದಿಂದ ಸಂತಸಪಟ್ಟು ರೊನಾಲ್ಡ್ ಕೊಲಸೋ ಅವರು ತಮ್ಮ ನಿವಾಸದಲ್ಲಿ ‘ಇಫ್ತಾರ್ ಸೌಹಾರ್ದ ಕೂಟ’ವನ್ನು ಏರ್ಪಡಿಸಿ, ಕೆಲವು ಕುಟುಂಬ ಸಹಿತರಾಗಿ ಬಂದ ಎಲ್ಲ ಹೆಲ್ಪ್ ಲೈನ್ ತಂಡದ ಸದಸ್ಯರಿಗೆ ಅವರ ನಿಸ್ವಾರ್ಥ ಸೇವೆಗೆ ಶುಭ ಹಾರೈಸಿ, ನಿಮ್ಮ, ನಮ್ಮ ಈ ಒಗ್ಗಟ್ಟು ಹಾಗೂ ಐಕ್ಯತೆಯ ಮನೋಭಾವನೆ ಕೇವಲ ಸಂಕಷ್ಟದ ಸಮಯಕ್ಕೆ ಮಾತ್ರ ಸೀಮಿತವಾಗಿರದೆ, ಹೀಗೆಯೇ ನಿರಂತರವಾಗಿ ಹಾಗೂ ಉತ್ತಮ ಮಾದರಿಯಾಗಿ ಮುಂದುವರೆಯಬೇಕೆಂದು ಹೇಳಿದರು. ಅಲ್ಲದೇ ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಸಂಭ್ರಮವನ್ನೂ ಈ ನಾಡಿನಲ್ಲಿ ಒಂದಾಗಿಯೇ ಆಚರಿಸೋಣ ಎಂದು ಕೊಲಾಸೋ ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? 6 LPG ಸೇರಿ 22 ಭಾರತೀಯ ಹಡಗುಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿವೆ
ಪ್ರಾಂತ್ಯ, ಜಿಲ್ಲೆ, ಭಾಷೆ, ವರ್ಗ, ಹುದ್ದೆ, ಜಾತಿ, ಧರ್ಮವನ್ನೆಲ್ಲಾ ಮೀರಿ ನಮ್ಮ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಒಗ್ಗೂಡಿ ಸಲ್ಲಿಸಿದ ಸೇವೆಯಿಂದ ಉತ್ತಮ ಕೋಮು ಸೌಹಾರ್ದತೆಯ ಸಂದೇಶ ತಾಯ್ನಾಡಿಗೂ ತಲುಪಲಿ. ಅಲ್ಲಿಯೂ ಸಾಮರಸ್ಯ, ಸಮಾನತೆಯ ಪರಿಸರದಿಂದಾಗಿ, ಶೀಘ್ರತೆಯ ಆರ್ಥಿಕತೆ ಹಾಗೂ ಸರ್ವತೋಮುಖ ಅಭಿವೃದ್ಧಿಗೂ ಇದು ಪೂರಕವಾಗಲಿ ಎಂದು ರೊನಾಲ್ಡ್ ಕೊಲಸೋ ಆಶಿಸಿದರು.

ಈ ಸಂದರ್ಭದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್‌ನ ಸೇವಾ ಕಾರ್ಯಕ್ರಮಗಳಲ್ಲಿ ಆಧಾರ ಸ್ತಂಭಗಳಾಗಿ ಜತೆನಿಂತ ರೊನಾಲ್ಡ್ ಕೊಲಾಸೊ, ಪ್ರವೀಣ್ ಶೆಟ್ಟಿ, ಇಸಾಕ್ ಹಾಜಿ, ಧೀರಜ್ ಜೈನ್, ಮಾಧವ್ ಕಿರಣ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.









