ಖಮೇನಿ ನಂತರದ ಇರಾನ್‌ನಲ್ಲಿ ಲಾರಿಜಾನಿ ಅನೌಪಚಾರಿಕ ನಾಯಕರಾಗಿ ಕಾಣುತ್ತಿದ್ದಾರೆ. ಅಲಿ ಲಾರಿಜಾನಿ ಇರಾನ್ ರಾಜಕೀಯದಲ್ಲಿ ಅಪರೂಪದ ವ್ಯಕ್ತಿ – ತತ್ವಶಾಸ್ತ್ರಜ್ಞನ. ಸೈನಿಕನ ಹೃದಯ ಮತ್ತು ಯುದ್ಧದ ನಾಯಕನ ಕಠಿಣ ನುಡಿಗಳು ಇರಾನ್ ಜನತೆಯಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುತ್ತಿವೆ.
ಅಮೆರಿಕ-ಇಸ್ರೇಲ್ ಸಂಯುಕ್ತ ದಾಳಿಗಳಿಂದ ಖಮೇನಿ ಅವರ ಹತ್ಯೆಯಾದ ಬಳಿಕ(ಫೆಬ್ರವರಿ 28) ಇರಾನ್‌ನ ಧ್ವನಿಯಾಗಿ ಹೊರಹೊಮ್ಮಿರುವ ಅಲಿ ಲಾರಿಜಾನಿ ಅವರ ಇತ್ತೀಚಿನ ಎಕ್ಸ್ ಪೋಸ್ಟ್‌ಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. “ಅಮೆರಿಕ ಮತ್ತು ಝಿಯೋನಿಸ್ಟ್ ಶಕ್ತಿ ಇರಾನ್ ಜನತೆಯ ಹೃದಯವನ್ನು ಸುಟ್ಟಿದೆ. ನಾವೂ ಕೂಡ ಅವರ ಹೃದಯವನ್ನು ಸುಡುತ್ತೇವೆ” ಎಂದು ಸವಾಲು ಹಾಕಿರುವ ಅವರು, “ಧೈರ್ಯಶಾಲಿ ಇರಾನ್ ಸೈನಿಕರು ಮತ್ತು ಮಹಾನ್ ಜನತೆ ಅಂತಾರಾಷ್ಟ್ರೀಯ ನರಕದ ದಮನಕಾರರಿಗೆ ಮರೆಯಲಾಗದ ಪಾಠ ಕಲಿಸುತ್ತಾರೆ” ಎಂದು ಬರೆದಿದ್ದಾರೆ.
“ತೆಹರಾನ್ ಅಮೆರಿಕದೊಂದಿಗೆ ಮಾತುಕತೆಯಾಡುವ ಪ್ರಶ್ನೆಯೇ ಇಲ್ಲ. ಟ್ರಂಪ್ ಅವರ ‘ಭ್ರಮೆಯ ಕನಸುಗಳು’ ಪ್ರದೇಶವನ್ನು ಅಸ್ಥಿರಗೊಳಿಸಿವೆ. ಅವರು ಅಮೆರಿಕನ್ ಸೈನಿಕರ ಪೈಕಿ ಹೆಚ್ಚಿನ ಮಂದಿ ಸಾವಿಗೀಡಾಗುತ್ತಾರೆಂದು ಭಯಪಡುತ್ತಿದ್ದಾರೆ” ಎಂದು ಮತ್ತೊಂದು ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಅದೇ ಅಲಿ ಲಾರಿಜಾನಿ – ಹಿಂದೆ ಪರಮಾಣು ಮಾತುಕತೆಗಳಲ್ಲಿ ‘ಪ್ರಾಗ್ಮಟಿಸ್ಟ್(ವಾಸ್ತವವಾದಿ)’ ಎಂದು ಪ್ರಸಿದ್ಧರಾಗಿದ್ದು, ಇಮ್ಯಾನ್ಯುಯಲ್ ಕಾಂಟ್‌ನ ತತ್ವಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಶಾಂತ ವಿದ್ವಾಂಸ. ಆದರೆ ಇಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಸೆಕ್ರೆಟರಿ ಆಗಿ, ಖಮೇನಿ ನಂತರದ ರಾಜಕೀಯ ಶೂನ್ಯದಲ್ಲಿ ‘ಡಿ ಫ್ಯಾಕ್ಟೋ’ ನಾಯಕರಾಗಿ ಬದಲಾಗಿದ್ದಾರೆ. ಇರಾನ್‌ನ ‘ಕೆನಡಿ ಕುಟುಂಬ’ ಎಂದು ಕರೆಯಲಾಗುವ ಪ್ರಭಾವಿ ಲಾರಿಜಾನಿ ಕುಟುಂಬದಿಂದ ಬಂದ ಈ ವ್ಯಕ್ತಿ ಇರಾನ್‌ನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುತ್ತಿದ್ದಾರೆ.
ಕುಟುಂಬ ಮತ್ತು ಬಾಲ್ಯ: ಧಾರ್ಮಿಕ-ರಾಜಕೀಯ ರಾಜವಂಶದ ವಾರಸುದಾರ
1958ರಲ್ಲಿ ಇರಾಕ್‌ನ ನಜಫ್‌ನಲ್ಲಿ ಜನಿಸಿದ ಅಲಿ ಅರ್ದಶೀರ್ ಲಾರಿಜಾನಿ ಅವರದು ಮೂಲ ಮಜಂದರಾನ್‌ನ ಅಮೋಲ್‌ನ ಶ್ರೀಮಂತ ಶಿಯಾ ಪಂಡಿತ ಕುಟುಂಬ. ತಂದೆ ಆಯತೊಲ್ಲಾ ಮಿರ್ಜಾ ಹಾಶೆಮ್ ಅಮೋಲಿ ಪ್ರಖ್ಯಾತ ಧಾರ್ಮಿಕ ವಿದ್ವಾಂಸ. ಸಹೋದರರಾದ ಮೊಹಮ್ಮದ್ ಜವಾದ್, ಫಾಜೆಲ್, ಸಾದಿಕ್ ಮತ್ತು ಬಾಗೆರ್ ಲಾರಿಜಾನಿ ಎಲ್ಲರೂ ಇರಾನ್ ರಾಜಕೀಯ-ನ್ಯಾಯಾಂಗದಲ್ಲಿ ಪ್ರಭಾವಿ ವ್ಯಕ್ತಿಗಳು. ಸಹೋದರಿ-ಸಂಬಂಧಿ ಅಲಿ ಮೊತಹರಿ, ಮಾವ ಮೊರ್ತೆಜಾ ಮೊತಹರಿ(ಖಮೇನಿ ಅವರ ಗುರು) – ಇದನ್ನು ಇರಾನ್‌ನಲ್ಲಿ ‘ಕೆನಡಿ ಕುಟುಂಬ’ ಎಂದೇ ಕರೆಯಲಾಗುತ್ತದೆ. ಇರಾನ್-ಇರಾಕ್ ಯುದ್ಧದಲ್ಲಿ IRGC ಬ್ರಿಗೇಡಿಯರ್ ಜನರಲ್ ಆಗಿ ಸೇವೆ ಸಲ್ಲಿಸಿದ ಅವರು, ಕುಟುಂಬೀಯ ಸಂಪರ್ಕಗಳು ಮತ್ತು ಖಮೇನಿ ನಿಷ್ಠೆಯಿಂದಾಗಿ ಎಲ್ಲ ಫ್ಯಾಕ್ಷನ್‌ಗಳೊಂದಿಗೆ ಸಂಬಂಧ ಬೆಳೆಸಿದ್ದಾರೆ.
ಶಿಕ್ಷಣ: ಗಣಿತ-ಕಂಪ್ಯೂಟರ್ ಸೈನ್ಸ್‌ನಿಂದ ಕಾಂಟ್ ತತ್ವಶಾಸ್ತ್ರಕ್ಕೆ
ಧಾರ್ಮಿಕ ಸೆಮಿನರಿಗಳಿಂದ ಮಾತ್ರ ಬಂದಿರುವ ಅವರ ಅನೇಕ ಗೆಳೆಯರಿಗಿಂತ ಭಿನ್ನವಾಗಿ, ಲಾರಿಜಾನಿ ಜಾತ್ಯತೀತ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ.
1979ರಲ್ಲಿ, ಅವರು ಖುಮ್ ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಲಾರಿಜಾನಿ ಅರ್ಯಾಮೆಹ್ರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಗಣಿತ-ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದರು. ನಂತರ ತೆಹರಾನ್ ಯೂನಿವರ್ಸಿಟಿಯಿಂದ “ಇಮ್ಯಾನ್ಯುಯಲ್ ಕಾಂಟ್‌ನ ಗಣಿತ ತತ್ವಶಾಸ್ತ್ರ” ವಿಷಯದ ಮೇಲೆ ಪಿಎಚ್‌ಡಿ ಪಡೆದರು. 1979ರ ಕ್ರಾಂತಿಯ ನಂತರ, ಅವರು 1980ರ ದಶಕದ ಆರಂಭದಲ್ಲಿ IRGC(Islamic Revolutionary Guard Corps)ಗೆ ಸೇರಿದರು. ಕಾಂಟ್, ಸಾಲ್ ಕ್ರಿಪ್ಕೆ, ಡೇವಿಡ್ ಲೂಯಿಸ್‌ನ ಮೇಲೆ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವರ ರಾಜಕೀಯ ನಿಲುವುಗಳು ಅವರ ವೃತ್ತಿಜೀವನದ ಕೇಂದ್ರಬಿಂದುವಾಗಿವೆ. ತರ್ಕಬದ್ಧ, ದೀರ್ಘ ಮತ್ತು ಭಾವನಾತ್ಮಕ ತತ್ವಶಾಸ್ತ್ರದ ಪ್ರಭಾವ ಅವರ ನುಡಿಯಲ್ಲಿ ಕಾಣುತ್ತದೆ. ಇದೇ ಬುದ್ಧಿವಂತಿಕೆಯು ಅವರನ್ನು ಹಿಂದೆ ಪರಮಾಣು ಮಾತುಕತೆಗಳಲ್ಲಿ ‘ಹೊಸ ಆಲೋಚನೆಗಳು ಬೇಕು’ ಎಂದು ಯುರೋಪ್‌ನೊಂದಿಗೆ ಮಾತನಾಡಿಸಿತ್ತು.
ರಾಜಕೀಯ ಪಯಣ: ಸಂಸ್ಕೃತಿ ಸಚಿವರಿಂದ ಪಾರ್ಲಿಮೆಂಟ್ ಸ್ಪೀಕರ್‌ವರೆಗೆ
ಸರ್ಕಾರಕ್ಕೆ ಪರಿವರ್ತನೆಗೊಳ್ಳುವ ಮೊದಲು, 1994 ಮತ್ತು 1997ರ ನಡುವೆ ಅಧ್ಯಕ್ಷ ಅಕ್ಬರ್ ಹಶೆಮಿ ರಫ್ಸಂಜಾನಿ ಅವರ ಅಡಿಯಲ್ಲಿ ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು. ಬಳಿಕ 1994ರಿಂದ 2004ರವರೆಗೆ ರಾಜ್ಯ ಪ್ರಸಾರಕ(IRIB) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 2005-07ರಲ್ಲಿ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸೆಕ್ರೆಟರಿ(ಪರಮಾಣು ಮಾತುಕತೆಗಾರ). 2008 ಮತ್ತು 2020ರ ನಡುವೆ, ಅವರು ಸತತ ಮೂರು ಅವಧಿಗೆ ಸಂಸತ್ತಿನ(ಮಜ್ಲಿಸ್) ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದು, ದೇಶೀಯ ಮತ್ತು ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, ಇರಾನ್‌ನ ಅತ್ಯಂತ ದೀರ್ಘಕಾಲೀನ ಪಾರ್ಲಿಮೆಂಟ್ ಸ್ಪೀಕರ್ ಆಗಿದ್ದರು.
IRIBನಲ್ಲಿದ್ದ ಸಮಯದಲ್ಲಿ, ಅವರು ತಮ್ಮ ನಿರ್ಬಂಧಿತ ನೀತಿಗಳು ಇರಾನಿನ ಯುವಕರನ್ನು ವಿದೇಶಿ ಮಾಧ್ಯಮಗಳ ಕಡೆಗೆ ಸೆಳೆಯುತ್ತಿವೆ ಎಂದು ಆರೋಪಿಸಿದ ಸುಧಾರಣಾವಾದಿಗಳಿಂದ ಟೀಕೆಗಳನ್ನು ಎದುರಿಸಿದರು.
2025ರಲ್ಲಿ ಮತ್ತೆ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸೆಕ್ರೆಟರಿ ಆಗಿ ನೇಮಕಗೊಂಡರು. JCPOA ಒಪ್ಪಂದಕ್ಕೆ ಬೆಂಬಲ ನೀಡಿದ್ದ ಅವರು, ಆಹ್ಮದಿನೆಜಾದ್‌ನೊಂದಿಗಿನ ಸಂಘರ್ಷದಿಂದ ರಾಜೀನಾಮೆ ನೀಡಿದ್ದರು. ಆದರೆ ಖಮೇನಿ ಹತ್ಯೆಯ ಬಳಿಕ ಅವರ ನಡೆ ಕಠಿಣವಾಗಿದೆ.
ವ್ಯಕ್ತಿತ್ವದ ಬದಲಾವಣೆ: ಪ್ರಾಗ್ಮಟಿಸ್ಟ್‌ನಿಂದ ‘ಹಕ್ಕುಬಾಧ್ಯತೆಯ ಹುಲಿ’ಗೆ
ಹಿಂದೆ ʼಮಾತುಕತೆ ತರ್ಕಬದ್ಧ ಮಾರ್ಗʼ ಎಂದು ಹೇಳುತ್ತಿದ್ದ ಲಾರಿಜಾನಿ ಇಂದು ʼಅಮೆರಿಕದೊಂದಿಗೆ ಮಾತುಕತೆಯೇ ಇಲ್ಲʼವೆಂದು ಘೋಷಿಸುತ್ತಿದ್ದಾರೆ. ಒಂದು ಕಡೆ ಕಾಂಟ್‌ನ ತರ್ಕಬದ್ಧತೆ ಇದ್ದರೂ, ಮತ್ತೊಂದು ಕಡೆ ರಕ್ಷಣಾತ್ಮಕ ರಾಷ್ಟ್ರೀಯವಾದಕ್ಕೆ ದನಿಯಾಗಿದ್ದಾರೆ. ಇರಾನ್-ಇರಾಕ್ ಯುದ್ಧದ ಅನುಭವ, IRGC ಹಿನ್ನೆಲೆ ಮತ್ತು ಕುಟುಂಬ ಸಂಪರ್ಕಗಳು ಅವರನ್ನು ಇಂದು ಯುದ್ಧದ ನಾಯಕರನ್ನಾಗಿ ಮಾಡಿವೆ. ಹಾಗಾಗಿ ಅವರು ಇಂದು ಬೆಂಕಿಯಂತಹ ನುಡಿಗಳನ್ನು ನುಡಿಯುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಅಮೆರಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಭಾರಿ ಹೊಡೆತ; ಜೋರ್ಡಾನ್‌ನಲ್ಲಿ $30 ಕೋಟಿ ಮೌಲ್ಯದ THAAD ವ್ಯವಸ್ಥೆ ಧ್ವಂಸಗೈದ ಇರಾನ್
ಖಮೇನಿ ನಂತರದ ಇರಾನ್‌ನಲ್ಲಿ ಲಾರಿಜಾನಿ ಅನೌಪಚಾರಿಕ ನಾಯಕರಾಗಿ ಕಾಣುತ್ತಿದ್ದಾರೆ. ಅಲಿ ಲಾರಿಜಾನಿ ಇರಾನ್ ರಾಜಕೀಯದಲ್ಲಿ ಅಪರೂಪದ ವ್ಯಕ್ತಿ – ತತ್ವಶಾಸ್ತ್ರಜ್ಞನ, ಸೈನಿಕನ ಹೃದಯ ಮತ್ತು ಯುದ್ಧದ ನಾಯಕನ ಕಠಿಣ ನುಡಿಗಳು ಇರಾನ್ ಜನತೆಯಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುತ್ತಿವೆ. ಇರಾನ್‌ನ ಸ್ವಾಭಿಮಾನವನ್ನು ರಕ್ಷಿಸುವ ಅವರ ಪ್ರತಿಜ್ಞೆ ಜಗತ್ತಿನ ಗಮನ ಸೆಳೆಯುತ್ತಿದೆ.





