ಟ್ರಂಪ್ ಮಾತಿಗೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿತ್ತು ಮೋದಿ ಸರ್ಕಾರ. ಆದರೆ, ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ತೈಲ ಮಾರುಕಟ್ಟೆ ಅಸ್ಥಿರಗೊಂಡಿದ್ದು, ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿದೆ. ಅದೂ, ಅಮೆರಿಕದ 30 ದಿನಗಳ ಅಪ್ಪಣೆಯ ಮೇರೆಗೆ. ಆದರೆ, ಈ ಹಿಂದೆ, ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಮಾರಾಟ ಮಾಡಿದ್ದ ರಷ್ಯಾ, ಈಗ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ಹೇಳಿದೆ. ಪರಿಣಾಮ, ಭಾರತೀಯ ಭಾರತೀಯ ಸಂಸ್ಕರಣಾಗಾರಗಳು ಹೆಚ್ಚಿನ ಬೆಲೆ ಪಾವತಿಸಿಯೇ ತೈಲ ಖರೀದಿಸಬೇಕಾಗಿದೆ.
ವರದಿಗಳ ಪ್ರಕಾರ, ರಷ್ಯಾದ ಯುರಲ್ಸ್ ಕಚ್ಚಾ ತೈಲಕ್ಕೆ ಈ ಹಿಂದೆ ಬ್ಯಾರೆಲ್‌ಗೆ ಸುಮಾರು 13 ಡಾಲರ್ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಭಾರತಕ್ಕೆ ತಲುಪಲಿರುವ ಕಚ್ಚಾ ತೈಲಕ್ಕೆ ಬ್ರೆಂಟ್ ದರಕ್ಕಿಂತ ಬ್ಯಾರೆಲ್‌ಗೆ 4 ರಿಂದ 5 ಡಾಲರ್ ಪ್ರೀಮಿಯಂ (ಹೆಚ್ಚುವರಿ ಮೊತ್ತ) ವಿಧಿಸಲಾಗುತ್ತಿದೆ. ಇದು ಫೆಬ್ರವರಿ ತಿಂಗಳ ದರಕ್ಕೆ ಹೋಲಿಸಿದರೆ ಸಂಪೂರ್ಣ ವ್ಯತಿರಿಕ್ತವಾಗಿದೆ.
ಭಾರತದ ತೈಲ ಅಗತ್ಯದ 40% ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕ ಮಧ್ಯಪ್ರಾಚ್ಯದಿಂದ ಬರುತ್ತದೆ. ಅಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ. ಪರಿಣಾಮ, ತೈಲ ಬಿಕ್ಕಟ್ಟಿನಿಂದ ಪಾರಾಗಲು ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC, BPCL, HPCL ಮತ್ತು MRPL ರಷ್ಯಾದೊಂದಿಗೆ ಮಾತುಕತೆ ನಡೆಸಿವೆ. ಈವರೆಗೆ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲವನ್ನು ಖರೀದಿಸಲಾಗಿದೆ. ಬೆಲೆಗಿಂತಲೂ ‘ತೈಲ ಲಭ್ಯತೆ’ಯೇ ಈಗ ದೊಡ್ಡ ಸವಾಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ | ಭಾರತದ ಕೃಷಿ ಉತ್ಪನ್ನ ವ್ಯಾಪಾರಕ್ಕೆ ಸವಾಲು; ದೇಶೀಯ ರೈತರಿಗೆ ಮತ್ತಷ್ಟು ಸಂಕಷ್ಟ
2022ರಿಂದ ಉಕ್ರೇನ್ ಜೊತೆ ರಷ್ಯಾ ಯುದ್ಧ ಆರಂಭಿಸಿದ್ದರಿಂದ, ರಷ್ಯಾ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಆದಾಗ್ಯೂ, ಭಾರತವು ರಷ್ಯಾದಿಂದ ಭಾರೀ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿತ್ತು. ಆ ಕಾರಣಕ್ಕಾಗಿ ಟ್ರಂಪ್ ಆಡಳಿತವು ಭಾರತದ ಮೇಲೆ 25% ದಂಡ ಸೇರಿದಂತೆ 50% ಸುಂಕ ಹೇರಿತ್ತು. ಬಳಿಕ, ಟ್ರಂಪ್ ಮಾತಿಗೆ ಮಣಿದ ಮೋದಿ ಸರ್ಕಾರ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿತ್ತು. ಇದೀಗ, ಭಾರತಕ್ಕೆ 30 ದಿನಗಳ ಕಾಲ ರಷ್ಯಾದ ತೈಲ ಖರೀದಿಸಲು ಅಮೆರಿಕ ತಾತ್ಕಾಲಿಕ ವಿನಾಯಿತಿ ನೀಡಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು, “ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಸುಗಮವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದು ಈಗಾಗಲೇ ಸಮುದ್ರದಲ್ಲಿ ಸಾಗಾಣಿಕೆಯಲ್ಲಿರುವ ತೈಲಕ್ಕೆ ಮಾತ್ರ ಅನ್ವಯಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.




