ಇರಾನ್ ಮೇಲಿನ ದಾಳಿಗಾಗಿ ಸ್ಪೇನ್‌ನ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅಮೆರಿಕ ಹೊಂಚು ಹಾಕಿತ್ತು. ಆದರೆ, ತಮ್ಮ ಸೇನಾ ನೆಲೆಯ ಬಳಕೆಗೆ ಅನುಮತಿ ನೀಡಲು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ನಿರಾಕರಿಸಿದ್ದಾರೆ. ಈ ಬೆನ್ನಲೇ, ಸ್ಪೇನ್ ಜೊತೆಗಿನ ಎಲ್ಲ ವ್ಯಾಪಾರವನ್ನು ಕಡಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದು, ಪೆಡ್ರೋ ತಿರುಗೇಟು ನೀಡಿದ್ದಾರೆ.
ದೂರದರ್ಶನದ ಭಾಷಣದಲ್ಲಿ ಮಾತನಾಡಿರುವ ಪೆಡ್ರೋ, “ಸ್ಪೇನ್ ಸರ್ಕಾರದ ನಿಲುವನ್ನು ನಾಲ್ಕು ಪದಗಳಲ್ಲಿ ಸಂಕ್ಷೇಪಿಸಬಹುದು: ಯುದ್ಧ ಬೇಡ” ಎಂದು ಹೇಳಿದ್ದಾರೆ.
“ಪ್ರತೀಕಾರವು ಜಗತ್ತಿಗೆ ಹಾನಿಕಾರಕ. ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದರಲ್ಲೂ ನಾವು ಭಾಗಿಯಾಗುವುದಿಲ್ಲ. ನಾವು ಈ ವಿಪತ್ತನ್ನು ವಿರೋಧಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಇತ್ತ, ತಮಗೆ ಸೇನಾ ನೆಲೆ ಬಳಸಲು ಅನುಮತಿಸದ ಸ್ಪೇನ್‌ಅನ್ನು ‘ಭಯಾನಕ ಮಿತ್ರ’ ಎಂದು ಟ್ರಂಪ್ ಟೀಕಿಸಿದ್ದಾರೆ.
ಪೆಡ್ರೋ ಅವರ ಎಡಪಂಥೀಯ ಸರ್ಕಾರವು, ಈ ಹಿಂದೆ ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿತ್ತು. ಅಲ್ಲದೆ, ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಅಪಹರಿಸಿದ ಮಿಲಿಟರಿ ಕಾರ್ಯಾಚರಣೆಯನ್ನೂ ಟೀಕಿಸಿತ್ತು.
ಈ ಹಿಂದೆ, 2003ರ ಇರಾಕ್ ಆಕ್ರಮಣದ ಸಮಯದಲ್ಲಿ, ಆಗ ಸ್ಪೇನ್‌ನ ಸಂಪ್ರದಾಯವಾದಿ ಪ್ರಧಾನಿ ಜೋಸ್ ಮಾರಿಯಾ ಅಜ್ನರ್ ನೇತೃತ್ವದ ಸರ್ಕಾರವು ಅಮೆರಿಕವನ್ನು ದೃಢವಾಗಿ ಬೆಂಬಲಿಸಿತ್ತು. ಆದರೆ, ಈಗ ಸ್ಪೇನ್ ಯುದ್ಧ ವಿರೋಧಿ ನೀತಿಯನ್ನು ಬಲವಾಗಿ ಪ್ರತಿಪಾದಿಸುತ್ತಿದೆ.




