ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಪುರುಷರು ಯುದ್ಧವನ್ನು ಸೃಷ್ಟಿಸುತ್ತಾರೆ. ಅದರ ಅತಿ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಿರುವುದು ಮಹಿಳೆ. ಆಕೆ ತನ್ನ ಗೌರವ, ಸ್ವಾತಂತ್ರ್ಯ ಮತ್ತು ಅಸ್ಮಿತೆಯನ್ನು ಯುದ್ಧದ ಬಲಿಪೀಠಕ್ಕೆ ಒಪ್ಪಿಸಬೇಕಾಗುತ್ತದೆ. ಈ ವರ್ಷದ ಮಹಿಳಾದಿನ ನಿಜಕ್ಕೂ ಯುದ್ಧ ಸಂತಸ್ತ ಅಮ್ಮಂದಿರ ಕಣ್ಣೀರಿನಲ್ಲಿ ತೊಯ್ದಿದೆ
ಮಾನವ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ವಿಜಯೋತ್ಸವದ ಕಥೆಗಳಿಗಿಂತ ಹೆಚ್ಚಾಗಿ ರಕ್ತದ ಕಲೆಗಳೇ ಎದ್ದು ಕಾಣುತ್ತವೆ. ಸಾಮ್ರಾಜ್ಯಗಳ ವಿಸ್ತರಣೆ, ಸಿದ್ಧಾಂತಗಳ ಉಳಿವು, ಗಡಿಗಳ ರಕ್ಷಣೆ, ಅಹಂಕಾರ ಮತ್ತು ಪ್ರತಿಷ್ಠೆಗಾಗಿ ನಡೆದ ಪ್ರತಿಯೊಂದು ಕದನವೂ ಜಗತ್ತಿಗೆ ನೀಡಿದ್ದು ಕೇವಲ ಸಾವು ಮತ್ತು ವಿನಾಶವನ್ನು ಮಾತ್ರ. ಈ ವಿನಾಶದ ಸುಳಿಯಲ್ಲಿ ಸಿಲುಕಿ, ಇತಿಹಾಸದ ದಾಖಲೆಗಳಿಗೂ ಸಿಗದೆ ಹೋದ ಮೂಕ ಹಕ್ಕಿ ಮಾತ್ರ ಹೆಣ್ಣು.
ಒಂದು ಗುಂಡು ಒಬ್ಬ ಸೈನಿಕನ ಎದೆ ಸೀಳಿದರೆ, ಆ ತುಪಾಕಿ ತುದಿಯ ಹೊಗೆ ಸತ್ತ ಸೈನಿಕನ ಮನೆಯಲ್ಲಿರುವ ಕನಿಷ್ಠ ಮೂವರು ಹೆಣ್ಣುಮಕ್ಕಳ ಬದುಕನ್ನು ಚೂರಾಗಿಸಿರುತ್ತದೆ. ಮಾನವ ಕುಲದ ವಿಕಾಸದ ಹಾದಿಯಲ್ಲಿ ನಡೆದ ಪ್ರತಿ ಸಂಘರ್ಷದಲ್ಲೂ, ಯುದ್ಧ ಘೋಷಣೆಯಾದಾಗ ಮೊದಲು ನಡುಗುವುದು ಮತ್ತು ಯುದ್ಧ ಮುಗಿದ ದಶಕಗಳ ನಂತರವೂ ಬಿಸಿ ಕಂಬನಿ ಮಿಡಿಯುವುದು ಹೆಣ್ಣು ಮಾತ್ರ. ರಣರಂಗದಲ್ಲಿ ಸೈನಿಕರು ವೀರಮರಣವನ್ನಪ್ಪಿದರೆ ಅವರನ್ನು ‘ಹುತಾತ್ಮರು’ ಎಂದು ಗೌರವಿಸಲಾಗುತ್ತದೆ. ಆ ಸಾವಿನ ನಂತರ ಮನೆಯ ಕತ್ತಲ ಕೋಣೆಯ ಮೂಲೆಯೊಂದರಲ್ಲಿ ಕೂತು, ಕಹಿ ನೆನಪುಗಳಲ್ಲಿ ಬೇಯುತ್ತಾ ದಿನದೂಡುವ ಮಹಿಳೆಯರ ತ್ಯಾಗ ಮತ್ತು ನೋವು ಯಾವ ಹೊತ್ತಿಗೆಗಳಲ್ಲೂ ದಾಖಲಾಗುವುದಿಲ್ಲ. “ಯುದ್ಧದಲ್ಲಿ ಹರಿಯುವ ರಕ್ತಕ್ಕಿಂತ ದುಪ್ಪಟ್ಟು ಅಮ್ಮಂದಿರ ಕಣ್ಣೀರು ಹರಿಯುತ್ತೆ” ಎನ್ನುವುದು ಅದಕ್ಕೇ.

ಯುದ್ಧದ ಭೀಕರತೆಗೆ ಇತ್ತೀಚಿನ ಅತ್ಯಂತ ಹೃದಯವಿದ್ರಾವಕ ಉದಾಹರಣೆಯೆಂದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ. ಪ್ರಕೃತಿ ಸೌಂದರ್ಯ ಸವಿಯಲು ಹೋದ ನವಜೋಡಿಗಳು ಮತ್ತು ಕುಟುಂಬಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆ ಕ್ರೂರ ನರಮೇಧ ನೂರಾರು ಸುಂದರ ಕನಸುಗಳನ್ನು ಹೊಸಕಿ ಹಾಕಿತು. ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಆ ಹತ್ಯಾಕಾಂಡದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕುಟುಂಬದ ಆಧಾರಸ್ತಂಭಗಳಾಗಿದ್ದ ಪುರುಷರು. ಆದರೆ ನಿಜವಾದ ನರಕಯಾತನೆ ಅನುಭವಿಸಿದ್ದು ಅವರ ಪತ್ನಿಯರು ಮತ್ತು ತಾಯಂದಿರು. ಆ ಮಹಿಳೆಯರು ತಮ್ಮ ಕಣ್ಣೆದುರೇ ತಮ್ಮ ಗಂಡಂದಿರು ಗುಂಡೇಟಿಗೆ ಬಲಿಯಾಗುವುದನ್ನು ನೋಡಿದರು. ಆ ಕ್ಷಣದಲ್ಲಿ ಅವರು ಅನುಭವಿಸಿದ ಭಯ ಮತ್ತು ಅಸಹಾಯಕತೆ ಜಗತ್ತಿನ ಯಾವುದೇ ಯುದ್ಧಕ್ಕಿಂತಲೂ ಭೀಕರ.
ಇತಿಹಾಸದುದ್ದಕ್ಕೂ ಸಂಘರ್ಷದ ಸಮಯಗಳಲ್ಲಿ ಮಹಿಳೆಯರ ದೇಹವನ್ನೇ ಒಂದು ಯುದ್ಧತಂತ್ರವಾಗಿ ಬಳಸಿಕೊಳ್ಳುವ ಅಸಹ್ಯಕರ ಸಂಪ್ರದಾಯ ಬೆಳೆದುಬಂದಿದೆ. ವಿರೋಧಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಆ ಬಣದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಅವರನ್ನು ಅಪಹರಿಸಿ ಗುಲಾಮರನ್ನಾಗಿ ಮಾಡಿಕೊಳ್ಳುವುದು ಮಾನವಕುಲಕ್ಕೆ ಅಂಟಿದ ಕಪ್ಪು ಚುಕ್ಕೆ. 2ನೇ ಮಹಾಯುದ್ಧದ ಕಾಲದಲ್ಲಿ ಸಾವಿರಾರು ಏಷ್ಯನ್ ಮಹಿಳೆಯರನ್ನು ‘ಕಂಫರ್ಟ್ ವುಮೆನ್’ ಎಂದು ಕರೆದು ಲೈಂಗಿಕ ದೌರ್ಜನ್ಯ ನೀಡಿದ್ದರಿಂದ ಹಿಡಿದು, ಇತ್ತೀಚಿನ ವರ್ಷಗಳಲ್ಲಿ ಐಸಿಸ್ (ISIS) ಉಗ್ರರಿಂದ ನರಕಯಾತನೆ ಅನುಭವಿಸಿದ ಮಹಿಳೆಯರವರೆಗೆ ಈ ಕಥೆ ಮುಂದುವರಿಯುತ್ತಲೇ ಇದೆ. ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಪುರುಷರು ಯುದ್ಧವನ್ನು ಸೃಷ್ಟಿಸುತ್ತಾರೆ, ಅದರ ಅತಿ ಕೆಟ್ಟ ಪರಿಣಾಮಗಳನ್ನು ಅನುಭವಿಸುವುದು ಮಹಿಳೆ. ಆಕೆ ತನ್ನ ಗೌರವ, ಸ್ವಾತಂತ್ರ್ಯ ಮತ್ತು ಅಸ್ಮಿತೆಯನ್ನು ಯುದ್ಧದ ಬಲಿಪೀಠಕ್ಕೆ ಒಪ್ಪಿಸಬೇಕಾಗುತ್ತದೆ.
ಗಡಿಯ ಕಾವಲಿನಲ್ಲಿ ನಿಂತಿರುವ ಯೋಧನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸೈನಿಕನಿಗೆ ದೇಶದ ಭದ್ರತೆಯ ಜವಾಬ್ದಾರಿ ಇದ್ದರೆ, ಆ ಸೈನಿಕನನ್ನು ಗಡಿಗೆ ಕಳುಹಿಸಿ ಆತ ವಾಪಸ್ ಬರುವವರೆಗೆ ಪ್ರತಿಕ್ಷಣವೂ ದೇವಸ್ಥಾನಗಳಲ್ಲಿ ಹರಕೆ ಹೊರುತ್ತಾ, ಪ್ರತಿ ಬಾರಿ ಫೋನ್ ರಿಂಗಣಿಸಿದಾಗಲೂ ಎದೆ ಬಡಿತ ಹೆಚ್ಚಿಸಿಕೊಂಡು ಪದರಗುಟ್ಟುವ ತಾಯಿಯ ನೋವು ಯಾರಿಗೂ ಅರ್ಥವಾಗುವುದಿಲ್ಲ. ಒಂದು ವೇಳೆ ಸೈನಿಕ ಹುತಾತ್ಮನಾದಾಗ ಇಡೀ ದೇಶ ಕಂಬನಿ ಮಿಡಿಯುತ್ತದೆ, ಸರ್ಕಾರ ಪರಿಹಾರ ನೀಡುತ್ತದೆ. ಆದರೆ ಆ ಪರಿಹಾರದ ಹಣ ಮಗನನ್ನು ಕಳೆದುಕೊಂಡ ತಾಯಿಯ ಒಂಟಿತನವನ್ನು ಅಥವಾ ಪತಿಯನ್ನು ಕಳೆದುಕೊಂಡ ಹೆಂಡತಿಯ ಆತಂಕವನ್ನು ಹೋಗಲಾಡಿಸಲು ಸಾಧ್ಯವೇ? ಯುದ್ಧ ಮುಗಿದ ನಂತರವೂ ಸಂಸಾರವನ್ನು ಮುನ್ನಡೆಸುವ, ಅನಾಥರಾದ ಮಕ್ಕಳನ್ನು ಬೆಳೆಸುವ ಮತ್ತು ಸಮಾಜದ ಕಟು ಪ್ರಶ್ನೆಗಳನ್ನು ಎದುರಿಸುತ್ತಾ ತನ್ನ ನೋವನ್ನು ನುಂಗಿ ಬದುಕುವ ‘ನಿತ್ಯ ಸಂತ್ರಸ್ತೆ’ ಆಗಿಬಿಡುತ್ತಾಳೆ.
ಕಾಶ್ಮೀರದ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ‘ಅರ್ಧ ವಿಧವೆಯರು’ (Half Widows) ಎಂಬ ಶಬ್ದ ಜನ್ಮತಾಳಿರುವುದು ತಿಳಿದಿದೆಯೇ? ತಮ್ಮ ಗಂಡಂದಿರು ಯುದ್ಧದ ನಡುವೆ ನಾಪತ್ತೆಯಾಗಿದ್ದಾರೆ, ಅವರು ಬದುಕಿದ್ದಾರೋ ಅಥವಾ ಸತ್ತಿದ್ದಾರೋ ಎಂದು ತಿಳಿಯದ ಸಾವಿರಾರು ಮಹಿಳೆಯರು ಇಂದಿಗೂ ಕಾಯುತ್ತಿದ್ದಾರೆ. ಇವರು ವಿಧವೆಯರಂತೆ ಬದುಕುವಂತಿಲ್ಲ, ಮುತ್ತೈದೆಯರಂತೆ ಸಂಭ್ರಮಿಸುವಂತಿಲ್ಲ. ದಶಕಗಳ ಕಾಲ ಕಾಯುವ ಈ ಮಹಿಳೆಯರ ಬದುಕು ಯುದ್ಧವು ಹೇಗೆ ಒಬ್ಬ ವ್ಯಕ್ತಿಯನ್ನು ಕೊಲ್ಲುವುದಕ್ಕಿಂತ ಹೆಚ್ಚಾಗಿ ಒಂದು ಜೀವಂತ ಜೀವವನ್ನು ಚಿತ್ರಹಿಂಸೆಗೆ ಒಳಪಡಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾನೂನಿನ ತೊಡಕುಗಳು, ಆರ್ಥಿಕ ಮುಗ್ಗಟ್ಟು ಮತ್ತು ಸಮಾಜದ ಕಡೆಗಣನೆಯ ನಡುವೆ ಇವರ ಹೋರಾಟ ನಿರಂತರವಾಗಿದೆ.

ಇಂದು ಜಗತ್ತಿನ ಕಣ್ಣೆದುರೇ ನಡೆಯುತ್ತಿರುವ ಉಕ್ರೇನ್-ರಷ್ಯಾ ಅಥವಾ ಎರಡು ವರ್ಷಗಳಿಂದ ನಡೆದ ಇಸ್ರೇಲ್-ಗಾಜಾ ಸಂಘರ್ಷಗಳು ಮಹಿಳೆಯರ ಮೇಲಿನ ಕ್ರೌರ್ಯದ ಪರಾಕಾಷ್ಠೆಯನ್ನು ತೋರಿಸುತ್ತಿವೆ. ಬೇಕಿದ್ದರೆ, ಬಾಂಬ್ ದಾಳಿಯ ನಡುವೆ ತನ್ನ ಹಸುಗೂಸನ್ನು ಎದೆಗಪ್ಪಿಕೊಂಡು, ಕೊರೆಯುವ ಚಳಿಯಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದು ಗಡಿ ದಾಟುತ್ತಿರುವ ಉಕ್ರೇನ್ ಮಹಿಳೆಯರನ್ನು ನೋಡಿ. ಅವರು ತಮ್ಮ ಗಂಡಂದಿರನ್ನು ಯುದ್ಧಕ್ಕೆ ಬಿಟ್ಟು, ಅನಾಥವಾಗಿ ಅಪರಿಚಿತ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಗಾಜಾದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಪ್ರತಿದಿನವೂ ಹಸಿವು ಮತ್ತು ಬಾಂಬ್ ದಾಳಿಗೆ ಸಿಲುಕಿ ಹತ್ತಾರು ಮಹಿಳೆಯರು ಸಾಯುತ್ತಿದ್ದಾರೆ. ಅವಶೇಷಗಳ ಅಡಿಯಲ್ಲಿ ತನ್ನ ಮಗುವಿನ ದೇಹವನ್ನು ಹುಡುಕುವ ತಾಯಿಯ ಆರ್ತನಾದಕ್ಕಿಂತ ಭಿನ್ನವಾದ ಮತ್ತು ಭೀಕರವಾದ ಯುದ್ಧ ಬೇರೊಂದಿಲ್ಲ.
ಕಳೆದ ಒಂದು ವಾರದಿಂದ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇನ್ನಷ್ಟು ಅಮ್ಮಂದಿರು ಸಂತ್ರಸ್ತೆಯರಾಗಿದ್ದಾರೆ. ಏನೂ ಗೊತ್ತಿಲ್ಲದ ಪುಟ್ಟ ಹೆಣ್ಣುಮಕ್ಕಳು ಕಲಿಯುತ್ತಿದ್ದ ಶಾಲೆಯ ಮೇಲೆ ಇಸ್ರೇಲ್ ದಾಳಿ ಮಾಡಿ ಮನುಷ್ಯತ್ವದ ಮೇಲೆ ಎಂದೂ ಮರೆಯದ ಗಾಯ ಮಾಡಿದೆ. ನಿತ್ಯ ಈ ಘನ ಘೋರವನ್ನು ನೋಡುತ್ತಲೇ ಬದುಕುವ ಅವರಿಗೆ ಪ್ರಾಣಭಯ ಇದ್ದೀತೇ?
ಯುದ್ಧ ಮುಗಿದ ನಂತರವಂತೂ ಮಹಿಳೆಯರ ಸಂಕಟ ಮತ್ತೊಂದು ಆಯಾಮಕ್ಕೆ ಹೊರಳುತ್ತದೆ. ಯುದ್ಧದಿಂದ ನಾಶವಾದ ಆರ್ಥಿಕತೆಯನ್ನು ಸರಿಪಡಿಸಲು ಪುರುಷರು ರಂಗಕ್ಕಿಳಿದರೆ, ಮನೆಯ ಒಳಗೆ ಹಸಿದಿರುವ ಹೊಟ್ಟೆಗಳನ್ನು ತುಂಬಿಸುವ ಜವಾಬ್ದಾರಿ ಹೆಣ್ಣಿನದ್ದಾಗಿರುತ್ತದೆ. ಯುದ್ಧದ ಸಮಯದಲ್ಲಿ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಗಾಯಗಳು (Post-Traumatic Stress Disorder) ಆಕೆಯನ್ನು ಜೀವನಪರ್ಯಂತ ಕಾಡುತ್ತವೆ. ಶಸ್ತ್ರಾಸ್ತ್ರಗಳು ಮಾತನಾಡುವುದನ್ನು ನಿಲ್ಲಿಸಬಹುದು, ಆದರೆ ಮಹಿಳೆಯ ಕಿವಿಯಲ್ಲಿ ಆ ಬಾಂಬ್ ಸದ್ದುಗಳು ಸದಾ ಮೊಳಗುತ್ತಲೇ ಇರುತ್ತವೆ. ಯುದ್ಧದ ಕಾರಣದಿಂದಾಗಿ ದೇಶವನ್ನೇ ಬಿಟ್ಟು ಓಡಿಹೋಗುವ ನಿರಾಶ್ರಿತ ಮಹಿಳೆಯರು ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಾರೆ.
ನಾವು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವಾಗ ಕೇವಲ ಕಾರ್ಪೊರೇಟ್ ಸಾಧನೆಗಳನ್ನು ಅಥವಾ ವೈಜ್ಞಾನಿಕ ಪ್ರಗತಿಯನ್ನು ಮಾತ್ರ ನೆನಪಿಸಿಕೊಳ್ಳಬಾರದು. ಯುದ್ಧದ ಕಿಚ್ಚಿನಲ್ಲಿ ಬೆಂದುಹೋದ ಆ ಲಕ್ಷಾಂತರ ಅನಾಮಧೇಯ ಮಹಿಳೆಯರ ಮೌನಕ್ಕೆ ನಾವು ದನಿಯಾಗಬೇಕಿದೆ. ಯಾವುದೇ ಯುದ್ಧದ ಸಂತ್ರಸ್ತೆಯರ ಕಣ್ಣೀರು ನಮ್ಮನ್ನು ಎಚ್ಚರಿಸಬೇಕಿದೆ. ಗಡಿಯಲ್ಲಿ ಕಾಯುವ ಮಗನಿಗಾಗಿ ಪ್ರಾರ್ಥಿಸುವ ಅಮ್ಮನ ನಿಸ್ವಾರ್ಥ ಪ್ರೀತಿಯೇ ಜಗತ್ತನ್ನು ಸಲಹುತ್ತಿದೆ. ಈ ಜಗತ್ತಿಗೆ ಇಂದು ಬೇಕಿರುವುದು ಹೊಸ ತಂತ್ರಜ್ಞಾನದ ಆಯುಧಗಳಲ್ಲ ಅಥವಾ ವಿನಾಶಕಾರಿ ಕ್ಷಿಪಣಿಗಳಲ್ಲ. ಬೇಕಿರುವುದು ಒಬ್ಬ ತಾಯಿ ತನ್ನ ಮಗನನ್ನು, ಮಡದಿ ಪತಿಯನ್ನು, ಸಹೋದರಿ ಸಹೋದರನನ್ನು ಸುರಕ್ಷಿತ ಭಾವನೆಯಿಂದ ಅಪ್ಪಿಕೊಳ್ಳುವಂತಹ ಶಾಂತಿಯುತ ವಾತಾವರಣ ಮತ್ತು ಸಮಾಜ.

ಇದನ್ನೂ ಓದಿ: ಡಿಜಿಟಲ್ ಚಕ್ರವ್ಯೂಹ: ಅಲ್ಗಾರಿದಂಗಳು ಮಿದುಳನ್ನೇ ‘ಹೈಜಾಕ್’ ಮಾಡುತ್ತವೆ ಎಚ್ಚರ!
ಯಾವ ದೇಶದ ಹೆಣ್ಣುಮಕ್ಕಳು ಅತೀ ಹೆಚ್ಚು ಕಣ್ಣೀರು ಸುರಿಸುತ್ತಾರೋ ಆ ದೇಶ ಎಂದಿಗೂ ಸುಭೀಕ್ಷವಾಗಿರಲು ಸಾಧ್ಯವಿಲ್ಲ. ಯುದ್ಧ ಎನ್ನುವುದು ರಾಜಕೀಯ ನಾಯಕರಿಗೆ ಒಂದು ಆಯ್ಕೆಯಾಗಿರಬಹುದು. ಆದರೆ, ಆ ದೇಶದ ಮಹಿಳೆಯರಿಗೆ ಅದು ಬದುಕಿನ ಅಂತ್ಯವಾಗಿರುತ್ತದೆ. ಶಸ್ತ್ರಾಸ್ತ್ರಗಳು ಮೌನವಾದಾಗ ಮಾತ್ರ ಸಂವೇದನೆಗಳು ಜಾಗೃತವಾಗುತ್ತವೆ. ರಣರಂಗದಲ್ಲಿ ಹರಿಯುವ ಪ್ರತಿ ಹನಿ ರಕ್ತಕ್ಕೂ ಒಬ್ಬ ತಾಯಿಯ ಶಾಪವಿರುತ್ತದೆ ಎಂಬುದು ನೆನಪಿರಲಿ. ಈ ಮಹಿಳಾ ದಿನದಂದು, ಯುದ್ಧದ ಮೊದಲ ಮತ್ತು ಕೊನೆಯ ಸಂತ್ರಸ್ತೆಯಾದ ಹೆಣ್ಣಿನ ಕಣ್ಣೀರು ಒರೆಸುವ ಸಂಕಲ್ಪ ಮಾಡೋಣ. “ಯುದ್ಧಮುಕ್ತ ಜಗತ್ತೇ ನಾವು ಮಹಿಳೆಯರಿಗೆ ನೀಡುವ ಅತಿದೊಡ್ಡ ಕೊಡುಗೆ” ಎನ್ನುವ ಆಶಯದೊಂದಿಗೆ ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸೋಣ.
ಕೊನೆಯದಾಗಿ, ಯುದ್ಧದ ಬೆಂಕಿಯಲ್ಲಿ ಗೆದ್ದವರು ಯಾರೇ ಇರಲಿ, ಸೋಲುವವಳು ಮಾತ್ರ ಯಾವಾಗಲೂ ಹೆಣ್ಣು. ಆಕೆಯ ಮೌನ ಸಂಕಟಕ್ಕೆ ಇತಿಹಾಸ ನ್ಯಾಯ ಒದಗಿಸದೇ ಇರಬಹುದು, ಆದರೆ ಮಾನವೀಯತೆಯ ದೃಷ್ಟಿಯಿಂದ ನಾವು ಆ ನೋವನ್ನು ಗುರುತಿಸುವುದು ಇಂದಿನ ತುರ್ತು ಅಗತ್ಯವಾಗಿದೆ.





