ಬೆಂಗಳೂರಿನ ಆಟೋ ಚಾಲಕಿಯೊಂದಿಗೆ ಪ್ರಯಾಣದ ಬಳಿಕ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರು ಪೋಸ್ಟ್ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುವ ಮಹಿಳೆಯು ಮಾಸಿಕವಾಗಿ 45 ಸಾವಿರ ರೂಪಾಯಿ ಸಂಪಾದನೆ ಮಾಡುವುದಾಗಿ, ಅದರಿಂದಲೇ ಸಾಲ ತೀರಿಸುತ್ತಿರುವುದಾಗಿ ಹೇಳಿದ್ದಾರೆ.
ಸ್ನೇಹಾ ಎಂಬ ನೆಟ್ಟಿಗರೊಬ್ಬರು ತಾವು ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ಟ್ವಿಟ್ಟರ್‌ನಲ್ಲಿ (ಎಕ್ಸ್‌ನಲ್ಲಿ) ಪೋಸ್ಟ್ ಮಾಡಿದ್ದಾರೆ. “ಎಂದಿನಂತೆ ಆಟೋ ಬುಕ್ ಮಾಡಿದೆ. ಆದರೆ ಮಹಿಳೆಯೊಬ್ಬರು ಆಟೋ ಚಲಾಯಿಸುತ್ತಾ ಬಂದಿದ್ದು ಗಮನ ಸೆಳೆಯಿತು. ನನ್ನ ಸ್ನೇಹಿತರು ನನಗಿಂತ ಹೆಚ್ಚು ಉತ್ಸುಕರಾದರು. ‘ಓ ದೇವರೇ, ಇದು ಮಹಿಳೆ’ ಎಂದು ಹೇಳಿದರು. ಅದಾದ ಬಳಿಕ ಖಂಡಿತವಾಗಿಯೂ ಚಾಲಕಿಯ ಅನುಭವ ಕೇಳಬೇಕಲ್ಲವೆ” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು ಬಂದ್ | ಫ್ರೀಡಂ ಪಾರ್ಕ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಆಟೋ, ಕ್ಯಾಬ್ ಚಾಲಕರು
ಜತೆಗೆ ತಮ್ಮ ಪ್ರಯಾಣದಲ್ಲಿ ಚಾಲಕಿಯೊಂದಿಗೆ ನಡೆದ ಸಂಭಾಷಣೆಯ ಬಗ್ಗೆ ತಿಳಿಸಿದ್ದಾರೆ. “ನಮ್ಮ ಯಾತ್ರಿಯು ಈ ಮಹಿಳೆಗೆ 40 ದಿನಗಳ ಕಾಲ ತರಬೇತಿ ನೀಡಿದ್ದಾಗ ಮಹಿಳೆ ಹೇಳಿದ್ದಾರೆ. ಹಾಗೆಯೇ ಎಲೆಕ್ಟ್ರಿಕ್ ಆಟೋ ಓಡಿಸುವುದು ಸುಲಭ ಎಂದು ತಿಳಿಸಿದ್ದಾರೆ. ಸಾಲ ಮಾಡಿ ಆಟೋ ಖರೀದಿಸಿ, ಈಗಾಗಲೇ 2.5 ಲಕ್ಷ ರೂಪಾಯಿ ಮರುಪಾವತಿ ಮಾಡಿದ್ದಾರಂತೆ ಮತ್ತು ಮಾಸಿಕವಾಗಿ 45 ಸಾವಿರ ರೂಪಾಯಿ, ಕೆಲವೊಮ್ಮೆ ಅದಕ್ಕೂ ಅಧಿಕ ಗಳಿಸುತ್ತಾರಂತೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
“ಕೋರಮಂಗಲದಾದ್ಯಂತ ಸರಿಸುಮಾರು 300 ಮಹಿಳೆಯರು ಆಟೋ ಚಲಾಯಿಸುತ್ತಿದ್ದಾರೆ. ಅವರೆಲ್ಲರೂ ಒಂದೇ ಗುಂಪಾಗಿದ್ದಾರೆ. ಅವರಿಗೆ ಎಂದಿಗೂ ಕಿರುಕುಳ ನಡೆದಿಲ್ಲ. ಜನರು ಬೆಂಬಲಿಸುತ್ತಾರೆ. ಹೆಚ್ಚಾಗಿ ಯುವಕರು ಸಿಗ್ನಲ್‌ಗಳಲ್ಲಿ ಮಾತನಾಡುತ್ತಾರೆ. ಹೆಚ್ಚಾಗಿ ಹೆಣ್ಣು ಮಕ್ಕಳು ಹೆಮ್ಮೆಯಿಂದ ಮಾತನಾಡುತ್ತಾರೆ, ಸಂತೋಷಪಡುತ್ತಾರೆ, ಕೈ ಬೀಸುತ್ತಾರೆ, ನಗುತ್ತಾರೆ” ಎಂದು ಆಟೋ ಚಾಲಕಿ ತಿಳಿಸಿರುವುದಾಗಿ ಸ್ನೇಹಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಆಟೋ ಚಾಲಕಿಗೆ ಯಾವುದೆ ಸಬ್ಸಿಡಿ ಸಿಗದಿರುವ ವಿಚಾರವನ್ನೂ ಉಲ್ಲೇಖಿಸಿದ್ದಾರೆ. “ಅವರಿಗೆ ಯಾವುದೇ ಸಾಲಕ್ಕೂ ಸಬ್ಸಿಡಿ ಸಿಕ್ಕಿಲ್ಲ. ವಿಶೇಷ ಬಡ್ಡಿದರವೂ ಇಲ್ಲ. ಇದು ಎಲೆಕ್ಟ್ರಿಕ್ ಆಟೋ ಆಗಿದ್ದರೂ ಸಬ್ಸಿಡಿ ಸಿಕ್ಕಿಲ್ಲ. ಹಾಗಿದ್ದರೂ ಅವರು ಸಂತೋಷ ಮತ್ತು ಆತ್ಮವಿಶ್ವಾಸದಿಂದ ಇದ್ದರು. ಆದರೆ ಮಹಿಳೆಯರಿಗೆ ಬೆಂಬಲ ಸಿಗಬೇಕೆಂದು ನಾನು ಭಾವಿಸುತ್ತೇನೆ” ಎಂದು ಸ್ನೇಹಾ ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ನಗರ ಪರವಾನಿಗೆ ರಿಕ್ಷಾ ಚಾಲಕರಿಗೆ ಅನ್ಯಾಯ ? ಬಗೆಹರಿಯದ ಸಮಸ್ಯೆ !
ಈ ಪೋಸ್ಟ್ ತ್ವರಿತವಾಗಿ ನೆಟ್ಟಿಗರ ಗಮನ ಸೆಳೆದಿದೆ. ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದು, ಮಹಿಳಾ ಆಟೋ ಅಥವಾ ಕ್ಯಾಬ್ ಚಾಲಕರೊಂದಿಗಿನ ತಮ್ಮ ಉತ್ತಮ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ ಇನ್ನು ಕೆಲವು ಬಳಕೆದಾರರು ಮಹಿಳೆಯರ ಐಡಿ ಮೂಲಕ ಪುರುಷರು ಆಟೋ ಚಲಾಯಿಸುವ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು, ವಿಶೇಷವಾಗಿ ರಾತ್ರಿಯಲ್ಲಿ ಸುಧಾರಿಸುವಲ್ಲಿ ಮಹಿಳಾ ಚಾಲಕರು ವಹಿಸಬಹುದಾದ ಪಾತ್ರದ ಬಗ್ಗೆಯೂ ನೆಟ್ಟಿಗರು ಕಾಮೆಂಟ್ ಮೂಲಕ ಚರ್ಚಿಸಿದ್ದಾರೆ. “ನಮ್ಮ ದೇಶದಲ್ಲಿ ಮಹಿಳಾ ಆಟೋ ಮತ್ತು ಕ್ಯಾಬ್ ಚಾಲಕರು ನಿಧಾನವಾಗಿಯಾದರೂ ಸ್ಥಿರವಾಗಿ ಹೆಚ್ಚುತ್ತಿದ್ದಾರೆ ಎಂದು ತಿಳಿಯಲು ಸಂತೋಷವಾಗುತ್ತದೆ. ಇದರಿಂದಾಗಿ ವಿಶೇಷವಾಗಿ ರಾತ್ರಿಯಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಇದು ನಿಜವಾಗಿಯೂ ಸಹಕಾರಿಯಾಗುತ್ತದೆ” ಎಂದು ನೆಟ್ಟಿಗರು ಹೇಳಿದ್ದಾರೆ. ಹಾಗೆಯೇ “ವಾಹನ ಚಾಲನೆ ಬರೀ ಪುರುಷರ ಕೆಲಸ ಎಂಬ ತಪ್ಪು ಕಲ್ಪನೆ ಬದಲಾಗಬೇಕು” ಎಂದು ಕೆಲವು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.





