ಖಾನಾಪುರದ ಮಾಜಿ ಶಾಸಕಿ, ಕಾಂಗ್ರೆಸ್ ಗೋವಾ ಪ್ರಭಾರಿ ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನದಲ್ಲಿ ತೆರಳುತ್ತಿದ್ದಾಗ ದಿಢೀರ್ ಆಗಿ ಅಸ್ವಸ್ಥಗೊಂಡ ಅಮೆರಿಕಾದ ಮಹಿಳೆಗೆ ಚಿಕಿತ್ಸೆ ನೀಡಿ ಪಾಣ ಉಳಿಸಿದ್ದು, ಸದ್ಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಗೋವಾದಿಂದ ದೆಹಲಿಗೆ ಹಾರುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಕ್ಯಾಲಿಫೋರ್ನಿಯಾ ನಗರದ ಮಹಿಳೆ ಜೆನ್ನಿ ಮೂರ್ಛೆ ಹೋಗಿದ್ದು ಇದನ್ನು ಗಮನಿಸಿದ ಅಂಜಲಿ ನಿಂಬಾಳ್ಕರ್ ಅವರು ತಕ್ಷಣ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹೃದಯ ಸಮಸ್ಯೆಗೆ ನೀಡುವ ‘ಕಾರ್ಡಿಯೋ ಪಲ್ಮನರಿ ರಿಸಸ್ಸಿಟೇಶನ್(ಸಿಪಿಆರ್) ಎಂಬ ತುರ್ತು ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣವನ್ನು ಡಾ. ಅಂಜಲಿ ಉಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಕ ಲೋಕಸಭಾ ಕ್ಷೇತ್ರ: ಅಂಜಲಿ ನಿಂಬಾಳ್ಕರ್ ಕನಸಿಗೆ ಕೊಳ್ಳಿಯಾದೀತೆ ಕುಮಟಾ ಕಾಂಗ್ರೆಸ್ ಅನಾಯಕತ್ವ?
ಆರಂಭದಲ್ಲಿ ಮಹಿಳೆ ಸುಧಾರಿಸಿಕೊಂಡರೂ ಅರ್ಧ ಗಂಟೆಯಲ್ಲಿ ಮತ್ತೆ ಅದೇ ರೀತಿ ಮೈ ನಡುಕ ಉಂಟಾಗಿ ನಿತ್ರಾಣಗೊಂಡರು. ಈ ವೇಳೆ ಡಾ. ಅಂಜಲಿ ರೋಗಿಯ ಬಳಿಯೇ ನಿಂತು ನಿರಂತರ ಚಿಕಿತ್ಸೆ ನೀಡಿದ್ದಾರೆ. ವಿಮಾನ ಇಳಿಯುವಾಗ ರನ್‌ವೇಯಲ್ಲಿಯೇ ಆಂಬುಲೆನ್ಸ್ ಇರುವಂತೆ ವಿಮಾನ ಸಿಬ್ಬಂದಿಗೆ ತಿಳಿಸಿ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ.
ಸದ್ಯ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಗೋವಾ-ಹೊಸದಿಲ್ಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿಯಾದ ಡಾ. ಅಂಜಲಿ ನಿಂಬಾಳ್ಕರ್ ಅವರು ಅಮೆರಿಕಾದ ಮಹಿಳೆಯೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಯನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಅತ್ಯಂತ ಶ್ಲಾಘನೀಯ” ಎಂದು ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ. ನೂರುಕಾಲ ಅಂಜಲಿಯವರಿಗೆ ಆಯಸ್ಸು ಆರೋಗ್ಯ ನೀಡಿ, ಕಷ್ಟದಲ್ಲಿರುವ ಜೀವಗಳಿಗೆ ಅವರಿಂದ ಇನ್ನಷ್ಟು ನೆರವು ಸಿಗುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.





