ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಮಾಸಿಕ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮುಟ್ಟಿನ ರಜೆಯ ಆದೇಶವನ್ನು ಪ್ರಶ್ನಿಸಿ ಇತ್ತೀಚೆಗೆ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್ ಮೆಟ್ಟಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ಮುಟ್ಟಿನ ರಜೆ ನಿಯಮಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.
ಇದನ್ನು ಓದಿದ್ದೀರಾ? ಮುಟ್ಟಿನ ರಜೆಗೆ ಬೆಂಗಳೂರು ಹೋಟೆಲ್‌ಗಳ ಸಂಘ ವಿರೋಧ; ಹೋರಾಟಗಾರ್ತಿಯರ ಖಂಡನೆ
ಅರ್ಜಿ ವಿಚಾರಣೆ ವೇಳೆ ವಾದಿಸಿ ಅರ್ಜಿದಾರರ ಪರ ವಕೀಲರು 18-52 ವರ್ಷದ ಮಹಿಳಾ ಉದ್ಯೋಗಿಗಳಿಗೆ ಮಾಸಿಕವಾಗಿ ಒಂದು ದಿನ ಋತುಚಕ್ರದ ರಜೆ ನೀಡಲು ಸರ್ಕಾರ ಆದೇಶಿಸಿದೆ. ಆದರೆ, ಈಗಾಗಲೇ ರೂಪಿಸಿರುವ ಕಾಯಿದೆಯಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠವು, “ಸರ್ಕಾರ ನೀತಿ ರೂಪಿಸುವಾಗ ಸಂಬಂಧಿತರ ಜೊತೆ ಸಭೆ ನಡೆಸಿದೆಯೇ? ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆಯೇ” ಎಂದು ಪ್ರಶ್ನಿಸಿದ್ದು, ಇದಕ್ಕೆ ಅರ್ಜಿದಾರರ ಪರ ವಕೀಲರು ಇಲ್ಲ ಎಂದು ಉತ್ತರಿಸಿದ್ದಾರೆ.
ಈ ವಾದವನ್ನು ಆಲಿಸಿದ ಹೈಕೋರ್ಟ್, ಸರ್ಕಾರದ ಅಧಿಸೂಚನೆಗೆ ತಡೆ ನೀಡಿದೆ. ಹಾಗೆಯೇ ಮಧ್ಯಂತರ ಆದೇಶ ತೆರವಿಗೆ ಕೋರುವ ಸ್ವಾತಂತ್ರ್ಯ ಸರ್ಕಾರಕ್ಕೆ ಇದೆ ಎಂದು ಹೇಳಿದೆ. ಜತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
ಚಳಿಗಾಲದ ರಜೆಯ ಬಳಿಕ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಹೈಕೋರ್ಟ್ ಸೂಚಿಸಿದೆ.





