ಮುಟ್ಟಿನ ನೈರ್ಮಲ್ಯದ ಹಕ್ಕನ್ನು ಸಂವಿಧಾನದ 21ನೇ ವಿಧಿಯಡಿ ‘ಜೀವಿಸುವ ಹಕ್ಕು ಮತ್ತು ಘನತೆ’ಯ ಅವಿಭಾಜ್ಯ ಅಂಗವೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಈ ತೀರ್ಪನ್ನು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಸ್ವಾಗತಿಸಿದೆ.
ಮುಟ್ಟಿನ ಆರೋಗ್ಯವನ್ನು ಜೀವನದ ಹಕ್ಕು, ಗೌರವದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳೊಂದಿಗೆ (ಸಂವಿಧಾನದ ವಿಧಿಗಳು 14, 21 ಮತ್ತು 21A) ಜೋಡಿಸಿರುವ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಜೆ.ಬಿ. ಪಾರ್ದೀ ವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠವು, ದೀರ್ಘಕಾಲದಿಂದ ಬಾಲಕಿಯರನ್ನು ಶಾಲೆಗೆ ಗೈರುಹಾಜರಾಗುತ್ತಿರುವ ಮತ್ತು ಶಾಲೆ ಬಿಟ್ಟು ಹೋಗುವ ಸ್ಥಿತಿಗೆ ತಂದೊಡ್ಡುತ್ತಿರುವ ಅನ್ಯಾಯವನ್ನು ಸ್ಪಷ್ಟವಾಗಿ ಗುರುತಿಸಿದೆ” ಎಂದು ಜೆಎಂಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದ.ಕ ಜಿಲ್ಲಾ ಸಮ್ಮೇಳನ
‘ದೋಷವು ಬಾಲಕಿಯರಲ್ಲ, ವ್ಯವಸ್ಥೆಯಲ್ಲಿದೆ’ ಎಂಬ ನ್ಯಾಯಾಲಯದ ಸಂವೇದನಾಶೀಲ ಮತ್ತು ಪ್ರಗತಿಪರ ಅಭಿಪ್ರಾಯವನ್ನು ಜನವಾದಿ ಮಹಿಳಾ ಸಂಘಟನೆ ಮೆಚ್ಚುತ್ತದೆ. ಸರ್ಕಾರಿ ಹಾಗೂ ಖಾಸಗಿ ಎಲ್ಲಾ ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪಿಕಿನ್‌ಗಳನ್ನು ಒದಗಿಸುವುದು, ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು, ವಿಶೇಷ ಆರೋಗ್ಯ ನಿರ್ವಹಣಾ ಕಿಟ್‌ಗಳನ್ನು ನೀಡುವುದು ಕಡ್ಡಾಯವೆಂದು ನ್ಯಾಯಾಲಯ ಆದೇಶ ನೀಡಿದ್ದು, ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದೂ ಹೇಳಿದೆ.
“ಈ ತೀರ್ಪು, ತಲೆಮಾರುಗಳಿಂದ ಬಾಲಕಿಯರನ್ನು ಅಂಚಿನಲ್ಲಿಟ್ಟಿದ್ದ ಸಾಮಾಜಿಕ ಕಲಂಕ ಮತ್ತು ಸಂಸ್ಥಾತ್ಮಕ ನಿರ್ಲಕ್ಷ್ಯದ ವಿರುದ್ಧದ ಮಹತ್ವದ ಜಯವಾಗಿದೆ. ಪುರುಷ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಂವೇದನಶೀಲತೆ ಮೂಡಿಸುವಂತೆ ನ್ಯಾಯಾಲಯ ನೀಡಿದ ಸೂಚನೆಗಳು, ಶಾಲೆಗಳನ್ನು ಸಹಾನುಭೂತಿಯುತ ಹಾಗೂ ಸುರಕ್ಷಿತ ಸ್ಥಳಗಳಾಗಿಸಲು ಅತ್ಯಂತ ಅಗತ್ಯವಾದ ಕ್ರಮವಾಗಿದೆ. ಆದರೆ, ಈ ಐತಿಹಾಸಿಕ ತೀರ್ಪು ಕಟ್ಟುನಿಟ್ಟಾಗಿ ಜಾರಿಯಾದರೆ ಮಾತ್ರ ಯಶಸ್ಸಾಗುತ್ತದೆ” ಎಂದು ತಿಳಿಸಿದೆ.
ಹಾಗೆಯೇ, ಜನವಾದಿ ಮಹಿಳಾ ಸಂಘಟನೆ ಹಲವು ಬೇಡಿಕೆಗಳನ್ನು ಹೊಂದಿದೆ. “ಈ ಆದೇಶವನ್ನು ತಕ್ಷಣ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ಸ್ಪಷ್ಟ ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಪರಿಸರ ಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್‌ಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಲು ಸಮರ್ಪಿತ ಬಜೆಟ್ ಅನ್ನು ಒದಗಿಸಬೇಕು. ಬಾಲಕಿಯರು ಮತ್ತು ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗಾಗಿ ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸಲು ಕಾಲಬದ್ಧ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು” ಎಂದು ಆಗ್ರಹಿಸಿದೆ.





