ರಾಜ್ಯದಲ್ಲಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ದಿನಗಳ ಮುಟ್ಟಿನ ರಜೆ (Menstrual Leave) ಕಡ್ಡಾಯವಾಗಿದ್ದು, ಈ ನಿರ್ಧಾರಕ್ಕೆ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ “ರಾಜ್ಯದ ಎಲ್ಲಾ ಕ್ಷೇತ್ರಗಳ ಪುರುಷ ನೌಕರರಿಗೆ ಲಿಂಗ ಸಂವೇದನಾಶೀಲ ತರಬೇತಿ ಅತ್ಯಗತ್ಯ” ಎಂದು ಮಹಿಳಾಪರ ಹೋರಾಟಗಾರರು ಹೇಳಿದ್ದಾರೆ.
ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಬಾಣದ ರಂಗಯ್ಯ ಅವರ ನೇತೃತ್ವದಲ್ಲಿ ನೌಕರರು ಈ ಕುರಿತಾಗಿ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಧ್ಯಯನ ನಡೆಸದೆಯೇ ಮುಟ್ಟಿನ ರಜೆ ಜಾರಿ ಮಾಡಿರುವುದು ಸರಿಯಲ್ಲ. ಈಗಾಗಲೇ ಇರುವ ರಜೆಯನ್ನೇ ಮಹಿಳಾ ನೌಕರರು ಮುಟ್ಟಾದ ಸಂದರ್ಭದಲ್ಲಿ ಬಳಸಿಕೊಳ್ಳಬಹುದು ಎಂದು ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್: ತಪ್ಪು ಕಲ್ಪನೆ ಬಿಡಿ; ಹೆಣ್ಣುಮಕ್ಕಳಿಗೆ ಬಳಕೆ ತರಬೇತಿ ನೀಡಿ
ಅಷ್ಟು ಮಾತ್ರವಲ್ಲದೆ ಮಹಿಳಾ ನೌಕರರಿಗೆ ರಜೆ ನೀಡುವುದರಿಂದ ಪುರುಷ ನೌಕರರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಇದರಿಂದ ಮನಸ್ತಾಪ ಹೆಚ್ಚಾಗುವ ಸಾಧ್ಯತೆಯಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಅಧಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿ ರಜೆ ನೀಡಿದರೆ ಕೆಲಸಗಳು ಬಾಕಿ ಉಳಿಯುತ್ತದೆ, ಪುರುಷರ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದೂ ಹೇಳಿದ್ದಾರೆ.
ಆದರೆ ಪುರುಷ ನೌಕರರ ಈ ನಡೆಯು ಚರ್ಚೆಗೆ ಗ್ರಾಸವಾಗಿದೆ. ಪುರುಷಪ್ರಧಾನ ಸಮಾಜದಲ್ಲಿಯೇ ಬೆಳೆದಿರುವ ಈ ನೌಕರರಿಗೆ ಲಿಂಗ ಸಂವೇದನಾಶೀಲ ತರಬೇತಿ ಅಗತ್ಯವಾಗಿದೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗೆ ಮಾನಸಿಕ, ದೈಹಿಕವಾಗಿ ಉಂಟಾಗುವ ಹಿಂಸೆಯ ಬಗ್ಗೆ ಶಾಲೆಯ ಪಠ್ಯಕ್ರಮದಲ್ಲೇ ಪಾಠವನ್ನು ಸೇರಿಸಬೇಕು ಎಂದು ಮಹಿಳಾಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಜನವಾದಿ ಮಹಿಳಾ ಸಂಘಟನೆಯ (ಜೆಎಂಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಂಡ್ಯ, “ಇದು ಪುರುಷಪ್ರಧಾನ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಯಾವಾಗಲೂ ಹೆಣ್ಣುಮಕ್ಕಳನ್ನು ಬಿಟ್ಟಿಯಾಗಿ, ಸಂಬಳವಿಲ್ಲದೆ ದುಡಿಸಿಕೊಳ್ಳಲಾಗಿದೆ. ಮುಟ್ಟಾದರೆ, ಗರ್ಭಿಣಿಯಾದರೆ, ಮಗು ಹೆತ್ತರೆ ಏನೇ ಸಂದರ್ಭ ಬಂದರೂ ಆಕೆ ಕೆಲಸ ಮಾಡಲೇಬೇಕೆಂಬ ಮನಸ್ಥಿತಿ ಈ ಪುರುಷಪ್ರಧಾನ ವ್ಯವಸ್ಥೆಯಲ್ಲಿದೆ. ಹೆಣ್ಣನ್ನು ಭೋಗದ ವಸ್ತುವಾಗಿ, ಎರಡನೇ ದರ್ಜೆಯ ಪ್ರಜೆಯಾಗಿ ನೋಡಲಾಗುತ್ತಿದೆ. ನೋವು ಅನುಭವಿಸುವುದು ಅವಳ ಕರ್ಮ ಎಂಬಂತೆ ನೋಡಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹೆಣ್ಣುಮಕ್ಕಳು ಮುಟ್ಟಾದ ಸಂದರ್ಭದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗುತ್ತಾಳೆ ಮತ್ತು ರಕ್ತಸ್ರಾವ, ನೋವು ಇರುತ್ತದೆ, ಹಿಂಸೆಯಾಗುತ್ತಿರುತ್ತದೆ. ಅದರಲ್ಲೂ 35 ವರ್ಷ ಮೇಲ್ಪಟ್ಟವರಿಗೆ ಹಾರ್ಮೋನ್ ವ್ಯತ್ಯಾಸದಿಂದ ಇನ್ನಷ್ಟೂ ಸಮಸ್ಯೆಯಾಗುತ್ತದೆ. ಆದರೆ ಈ ಹಿಂಸೆಯನ್ನು ಹಿಂಸೆಯೇ ಅಲ್ಲ ಎಂಬಂತೆ ನೋಡಲಾಗುತ್ತಿದೆ, ಮುಟ್ಟಾಗುವುದು ಸಹಜ, ನೋವು ಸಹಜ. ಅದನ್ನು ಮಹಿಳೆ ಅನುಭವಿಸಬೇಕು, ಆಕೆಗೆ ರಜೆಯ ಅಗತ್ಯವೇ ಇಲ್ಲ ಎಂಬ ಮನಸ್ಥಿತಿ ಹೆಚ್ಚಾಗುತ್ತಿದೆ. ಅದಕ್ಕೆ ಜನವಾದಿ ಮಹಿಳಾ ಸಂಘಟನೆ ಪುರುಷರಿಗೆ ಲಿಂಗ ಸಂವೇದನಾಶೀಲ ತರಬೇತಿಯ ಅಗತ್ಯವಿದೆ ಎಂದು ಹೇಳುತ್ತಿದೆ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ; ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಬೆಂಗಳೂರು ಹೋಟೆಲ್‌ಗಳ ಸಂಘ ಅರ್ಜಿ
“ಪುರುಷರಿಗೆ ತಲೆನೋವು, ಜ್ವರ, ಹೊಟ್ಟೆನೋವು ಬಂದಾಗ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ಅದೇ ರೀತಿ ಮಹಿಳೆಯರಿಗೆ ನೋವಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ. ನನಗಾದರೆ ನೋವು, ಹೆಣ್ಣಿಗಾದರೆ ಅದು ನೋವಲ್ಲ, ಆಕೆ ಸಹಿಸಬೇಕು ಎಂಬ ಮನಸ್ಥಿತಿ ಬಿಡಬೇಕು. ಮಹಿಳೆಯರಿಗೆ ಆಗುವ ನೋವುಗಳನ್ನು ಪುರುಷರು ಅರ್ಥಮಾಡಿಕೊಳ್ಳಲು ಮತ್ತು ಅರ್ಥಮಾಡಿಸಲು ಸಾಧ್ಯವಾಗಬೇಕು. ಈ ವ್ಯವಸ್ಥೆಯನ್ನು ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು” ಎಂದು ಹೇಳಿದರು.
“ಗ್ರಾಮಪಂಚಾಯಿತಿ ನೌಕರರಿಂದ ಹಿಡಿದು, ಗಾರ್ಮೇಟ್ ನೌಕರರು, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಲಿಂಗ ಸಂವೇದನಾಶೀಲ ತರಬೇತಿ ಅತ್ಯಗತ್ಯವಾಗಿದೆ. ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಲ್ಲಿ ಈ ಪಠ್ಯ ಒಳಗೊಳ್ಳಬೇಕಾಗಿದೆ. ಸರ್ಕಾರ ಅಲ್ಲಲ್ಲಿ ಲಿಂಗ ಸಂವೇದನಾಶೀಲ ಕಾರ್ಯಕ್ರಮಗಳನ್ನು ರೂಪಿಸಬೇಕು” ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು 2025ರ ನವೆಂಬರ್ 12ರಂದು ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ನೋಂದಾಯಿತ ಖಾಸಗಿ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವುದು ಕಡ್ಡಾಯವಾಗಿದೆ. ಐಟಿ/ಬಿಟಿ ಕಂಪನಿಗಳು, ಬಹುರಾಷ್ಟ್ರೀಯ ಸಂಸ್ಥೆಗಳು (MNC), ಗಾರ್ಮೆಂಟ್ಸ್, ಕಾರ್ಖಾನೆಗಳು ಮತ್ತು ಅಂಗಡಿ ಮುಂಗಟ್ಟು ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲಾ ಖಾಸಗಿ ಘಟಕಗಳಿಗೆ ಇದು ಅನ್ವಯಿಸುತ್ತದೆ.
ಆದರೆ ಆರಂಭದಲ್ಲಿ ಈ ಆದೇಶಕ್ಕೆ ಬೆಂಗಳೂರು ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿತ್ತು. ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಸೇರಿದಂತೆ ಕೆಲವು ಉದ್ಯೋಗದಾತರ ಒಕ್ಕೂಟಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆರಂಭದಲ್ಲಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ ಗಂಟೆಗಳಲ್ಲೇ ತಡೆಯಾಜ್ಞೆ ಆದೇಶವನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ಹಿಂಪಡೆದಿದೆ. ಇದೀಗ ಮುಟ್ಟಿನ ರಜೆಗೆ ಪುರುಷ ನೌಕರರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.





