ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಕೊಂದವರು ಯಾರು?’ ಸಹಿ ಸಂಗ್ರಹ ಅಭಿಯಾನ(who killed women in Dharmasthala?) ನಡೆಯುತ್ತಿದೆ. ದೇಶದಾದ್ಯಂತ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನವೂ ಮುಂದುವರೆದಿದೆ.
ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಮುಂದುವರಿಸಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಬುಧವಾರವಷ್ಟೇ ತಂಡವು ಸದ್ಯ ಹಲವು ಶವಗಳನ್ನು ಹೂತಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಉಳ್ಳವರ ಪರ ಬ್ಯಾಟ್ ಬೀಸುವ ಮಾಧ್ಯಮಗಳು!
ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ‘ಕೊಂದವರು’ ಯಾರು? ಎಂಬ ಸತ್ಯವನ್ನು ಸರ್ಕಾರ ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಈ ಹಿಂದೆ ಕನ್ನಡ ರಾಜ್ಯೋತ್ಸವ ದಿನದಂದು ಮಹಿಳಾ ಸಂಘಟನೆಗಳು, ಹೋರಾಟಗಾರರು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಹಿಳೆಯರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಇದರ ಭಾಗವಾಗಿ ಈಗಾಗಲೇ ಬೀದರ್, ಕಲಬುರಗಿ, ವಿಜಯನಗರ, ಕೊಪ್ಪಳ, ಬಿಜಾಪುರ, ದಾವಣಗೆರೆ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಉತ್ತರ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಸದ್ಯ ಸಹಿ ಸಂಗ್ರಹ ನಡೆಯುತ್ತಿದೆ.

ಈ ಬಗ್ಗೆ ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಮಹಿಳಾಪರ ಹೋರಾಟಗಾರ್ತಿ ಜ್ಯೋತಿ ಎ, “ಬಹುತೇಕ ಜಿಲ್ಲೆಗಳಲ್ಲಿ ಕೊಂದವರು ಯಾರು? ಅಭಿಯಾನದ ಭಾಗವಾಗಿ ಸಹಿ ಸಂಗ್ರಹ ನಡೆಯುತ್ತಿದೆ. ಸದ್ಯ ಆಯಾ ಜಿಲ್ಲೆಯ ಮಹಿಳಾ ಸಂಘಟನೆ ಮುಖಂಡರು, ಕಾರ್ಯಕರ್ತರು ಮುತುವರ್ಜಿ ತೆಗೆದುಕೊಂಡು ಸಹಿ ಸಂಗ್ರಹ ನಡೆಸುತ್ತಿದ್ದು ಮೊದಲ ಹಂತದಲ್ಲಿ ಡಿಸೆಂಬರ್ 5ರವರೆಗೆ ನಡೆದ ಸಹಿ ಸಂಗ್ರಹದ ಮಾಹಿತಿಯನ್ನು ನೀಡಲಿದ್ದಾರೆ. ಪ್ರತ್ಯೇಕವಾಗಿ ಭಾರತದಾದ್ಯಂತ ಆನ್‌ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನವೂ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಏನಿದು ಕೊಂದವರು ಯಾರು ಅಭಿಯಾನ?
ಸದ್ಯ ಧರ್ಮಸ್ಥಳ ಆಸುಪಾಸಿನಲ್ಲಿ ಹಲವು ಮೃತದೇಹಗಳನ್ನು ಅಕ್ರಮವಾಗಿ ಹೂತಿರುವ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಆದರೆ ಈ ತನಿಖಾ ತಂಡವೇ ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ-ಕೊಲೆ, ನಾಪತ್ತೆ ಮೊದಲಾದ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ಮಹಿಳಾಪರ ಹೋರಾಟಗಾರರು ಆಗ್ರಹಿಸಿದ್ದಾರೆ.

ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಎಸ್‌ಐಟಿ ಮುಖ್ಯಸ್ಥರಿಗೆ ʼಕೊಂದವರು ಯಾರು?ʼ ಆಂದೋಲನದಿಂದ ಹಕ್ಕೊತ್ತಾಯ ಸಲ್ಲಿಕೆ
“ಎಸ್‌ಐಟಿಗೆ ಯಾವ ಒತ್ತಡವೂ, ತೊಡಕೂ ಇಲ್ಲದೆ, ಯಾರೂ ಮೂಗು ತೂರಿಸದೆ ಮುಕ್ತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹಾಗೂ ಧರ್ಮಸ್ಥಳದ ವ್ಯಾಪ್ತಿಯಲ್ಲಿ ದಾಖಲಾದ ಮಹಿಳೆಯರ/ಯುವತಿಯರ ಮೇಲಿನ ಅತ್ಯಾಚಾರ, ಕೊಲೆಗಳ ಎಲ್ಲ ಪ್ರಕರಣಗಳ ಸಮಗ್ರ ತನಿಖೆ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು. ಅಲ್ಲಿ ನಡೆದಿರುವ ಈ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿಗಳ ಅನುಮಾನಾಸ್ಪದ ಸಾವುಗಳನ್ನೂ ಎಸ್‌ಐಟಿ ತನಿಖೆ ನಡೆಸಬೇಕು” ಎಂಬುದು ಹೋರಾಟಗಾರರ ಆಗ್ರಹವಾಗಿದೆ.

ಈ ಹೋರಾಟದ ಭಾಗವಾಗಿ ದೇಶದ ಹಲವು ಜಿಲ್ಲೆಗಳಲ್ಲಿ ಸಹಿ ಸಂಗ್ರಹ, ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸಹಿ ಸಂಗ್ರಹ ಅಭಿಯಾನವನ್ನು ಮಹಿಳಾ ಹೋರಾಟಗಾರ್ತಿಯರು, ಬರಹಗಾರರಾದ ಡಾ.ವಸುಂಧರಾ ಭೂಪತಿ, ಡಾ. ದು ಸರಸ್ವತಿ, ಇಂದಿರಾ ಕೃಷ್ಣಪ್ಪ, ಡಾ. ಕೆ.ಶರೀಫಾ, ಡಾ.ಎನ್ ಗಾಯತ್ರಿ, ಚಂಪಾವತಿ, ಗೌರಮ್ಮ, ಮೀನಾಕ್ಷಿ, ಇಂದ್ರಮ್ಮ, ಜ್ಯೋತಿ ಎ., ಕೆ.ಎಸ್. ವಿಮಲಾ, ಶಾಂತಮ್ಮ, ಮಧು ಭೂಷಣ್, ಮಮತಾ ಯಜಮಾನ್, ಗೌರಿ, ಗೀತಾ ಸಾಧನಾ, ವೀಣಾ ಹರಿಗೋವಿಂದ್, ಮಲ್ಲಿಗೆ ಸಿರಿಮನೆ, ಸುಷ್ಮಾ ವರ್ಮಾ ಮೊದಲಾದವರು ಮುನ್ನಡೆಸುತ್ತಿದ್ದಾರೆ.
ಇನ್ನು ಈ ಆಂದೋಲನದ ಭಾಗವಾಗಿ ನಿರ್ಭಯ ಪ್ರಕರಣ ನಡೆದ ದಿನವಾದ ಡಿಸೆಂಬರ್ 16ರಂದು ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು, ಎಲ್ಲ ಶೋಷಿತ, ದಮನಿತ ಮಹಿಳೆಯರಿಗೂ ನ್ಯಾಯ ಮತ್ತು ಘನತೆಯ ಬದುಕು ಖಾತ್ರಿಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ಗಳು ನಡೆಯಲಿವೆ.





