ರಾಜ್ಯದಲ್ಲಿ ಮದ್ಯದಂಗಡಿಗಳನ್ನು ಕಡಿಮೆ ಮಾಡುವಂತೆ, ಮದ್ಯ ಮಾರಾಟ ಕಡಿಮೆ ಮಾಡುವಂತೆ ಮತ್ತು ಹೊಸ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಬಾರದೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು, “ಕಲಬುರಗಿ, ಶಿವಮೊಗ್ಗ, ಬೀದರ್, ತುಮಕೂರು ಹಾಗೂ ಹಾಸನ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮತ್ತು ಹೆಚ್ಚುತ್ತಿರುವ ಮದ್ಯದಂಗಡಿಗಳ ವಿಷಯದ ಬಗ್ಗೆ ಮಹಿಳೆಯರು ಹೆಚ್ಚಿನ ಅಹವಾಲುಗಳನ್ನು ಸಲ್ಲಿಸಿದ್ದಾರೆ” ಎಂದು ತಿಳಿಸಿದ್ದಾರೆ.
“2024ರ ಜುಲೈ 29ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು, ರೇವನೂರು ತಾಂಡಕ್ಕೆ ಖುದ್ದು ಭೇಟಿ ನೀಡಿ, ತಾಂಡದ ಮಹಿಳೆಯರನ್ನು ಸಂದರ್ಶಿಸಿದಾಗ, ತಾಂಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಗಂಡಸರು ಮದ್ಯ ಕುಡಿದು ಹೆಂಗಸರ ಮೇಲೆ ಹಲ್ಲೆ ಮಾಡುವುದು, ಕೆಲಸ ಕಾರ್ಯಗಳಿಗೆ ಹೋಗದೆ ಹೆಂಗಸರು ಮತ್ತು ಮಕ್ಕಳ ದುಡಿಮೆಯಿಂದ ಕುಡಿದು, ಹಿಂಸಿಸುತ್ತಿರುವುದು ಅಲ್ಲಿನ ಪ್ರಮುಖ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿತ್ತು” ಎಂದು ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ | ‘ಕೊಂದವರು ಯಾರು?’ ಜನಾಂದೋಲನ ಆರಂಭ, ಮಹಿಳಾ ಆಯೋಗ ಭೇಟಿಯಾದ ನಿಯೋಗ
“ಆದ್ದರಿಂದ ತಾಂಡದ ಸುತ್ತಮುತ್ತಲಿನ ಗ್ರಾಮಗಳ ಕಿರಾಣಿ ಅಂಗಡಿಗಳ ಮೇಲೆ ಏಕ ಕಾಲದಲ್ಲಿ ತಪಾಸಣೆ ನಡೆಸಿ, ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಲು ಅಲ್ಲಿನ ಮಹಿಳೆಯರು ಮನವಿ ಸಲ್ಲಿಸಿದ್ದರು. ಈ ಸಂಬಂಧ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸಿ. ಕೈಗೊಂಡ ಕ್ರಮದ ವರದಿಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕಳುಹಿಸುವಂತೆ ಉಪ ಆಯುಕ್ತರು, ಅಬಕಾರಿ ಇಲಾಖೆ, ಕಲಬುರಗಿ ಜಿಲ್ಲೆ, ಇವರಿಗೆ ಉಲ್ಲೇಖ(1)ರಲ್ಲಿ ಬರೆಯಲಾಗಿತ್ತು” ಎಂದೂ ತಿಳಿಸಿದ್ದಾರೆ.
“ಬೆಂಗಳೂರಿನ ಬಾಗಲಗುಂಟೆ ವಾರ್ಡ್ ನಂ:14ರ ಮಂಜುನಾಥನಗರ, ಕಾಟರಾಯನಗರದಲ್ಲಿ ಹೊಸದಾಗಿ ಮದ್ಯದಂಗಡಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿರುವುದಾಗಿ ಹಾಗೂ ಒಂದೇ ಕಟ್ಟಡದಲ್ಲಿ ಎರಡು ಮದ್ಯದಂಗಡಿಗಳು ಇರುವುದರ ಕುರಿತು ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದರು. ಆ ಜಾಗದ ಸಮೀಪದಲ್ಲಿ ಸೇಂಟ್ ಜಾನ್ ಪಬ್ಲಿಕ್ ಸ್ಕೂಲ್ ವಿದ್ಯಾ ಸಂಸ್ಥೆ ಇದ್ದು, ಇಲ್ಲಿ ಮದ್ಯದಂಗಡಿ ತೆರೆದರೆ, ಶಾಲಾ ಮಕ್ಕಳು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಕೂಲಿ ಕಾರ್ಮಿಕರು, ನಿರಾತಂಕವಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಉಲ್ಲೇಖ(2)(3)(4)ರ ಪತ್ರದ ಮೂಲಕ ಅಬಕಾರಿ ಇಲಾಖೆಗೆ ಕೋರಲಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
“ಹಾಸನ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಕೆಂಕೆರೆ ಗ್ರಾಮದಲ್ಲಿ ಅಕ್ರಮವಾಗಿ ಕೆಲವು ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಪುರುಷರು ಹಾಗೂ ಓದುತ್ತಿರುವ ಮಕ್ಕಳು ದುಶ್ಚಟಗಳಿಗೆ ದಾಸರಾಗಿದ್ದು, ಗ್ರಾಮದ ಮಹಿಳೆಯರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹಾಗೂ ಇದನ್ನು ತಡೆಗಟ್ಟುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮವಹಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈ ಸಂಬಂಧ ಗ್ರಾಮದ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಜರುಗಿಸುವಂತೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ 15 ದಿನಗಳಲ್ಲಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಕೋರಲಾಗಿರುತ್ತದೆ. ಉಲ್ಲೇಖ(6)ರಂತೆ, ಶಿವಮೊಗ್ಗ ಜಿಲ್ಲೆ, ಹೊಸ ನಗರ ತಾಲ್ಲೂಕು, ಸಂತೆಕಟ್ಟೆ ಗ್ರಾಮದಲ್ಲಿ, ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಕೋರಿ ಉಪ ಆಯುಕ್ತರು, ಅಬಕಾರಿ ಇಲಾಖೆ, ಶಿವಮೊಗ್ಗ ಜಿಲ್ಲೆ, ಇವರಿಗೆ ದಿನಾಂಕ:06-12-2025ರಂದು ಪತ್ರ ಬರೆಯಲಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಮದ್ಯ ನಿಷೇಧಕ್ಕೆ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಆಗ್ರಹ; ಸಿಎಂಗೆ ಹಕ್ಕೊತ್ತಾಯ ಸಲ್ಲಿಕೆ
“ಅಕ್ರಮ ಮದ್ಯ ಮಾರಾಟ ಹಾಗೂ ಹೆಚ್ಚಾಗುತ್ತಿರುವ ಮದ್ಯದಂಗಡಿಗಳಿಂದಾಗಿ ರಾಜ್ಯಾದ್ಯಂತ ಮದ್ಯ ವ್ಯಸನಿಗಳು ಹೆಚ್ಚಾಗುತ್ತಿದ್ದು, ಇದರಿಂದ ಮಹಿಳೆಯರ ಜೀವನದ ಮೇಲೆ ಜನರ ಹಣ, ಆರೋಗ್ಯ, ಕುಟುಂಬ ನೆಮ್ಮದಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಇದನ್ನು ಕೂಡಲೇ ಕಡಿವಾಣ ಹಾಕಿ. ಮದ್ಯದಂಗಡಿಗಳನ್ನು ಕಡಿಮೆ ಮಾಡಲು ಹಾಗೂ ಹೊಸ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಬಾರದೆಂದು ಹಾಗೂ ಶಾಲಾ, ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಏರ್‌ಪೋರ್ಟ್, ಸರ್ಕಾರಿ ಕಛೇರಿ, ಆಸ್ಪತ್ರೆಗಳು ಹಾಗೂ ಜನದಟ್ಟಣೆ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದು” ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.
“ನಾನು ಪ್ರವಾಸ ಮಾಡಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಳೆಯರು ಮದ್ಯವನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತೆ ಹಾಗೂ ವ್ಯಸನ ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವಂತೆ ಕೋರಿ ಮನವಿ ಸಲ್ಲಿಸಿರುತ್ತಾರೆ. ಹಾಗಾಗಿ ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಚಿಂತನೆ ನಡೆಸಿ, ಹಂತ ಹಂತವಾಗಿ ಮಾರಾಟವನ್ನು ಕಡಿಮೆ ಮಾಡುತ್ತಾ ಹಾಗೂ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ವಿನಂತಿಸಿದ್ದಾರೆ.





