ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಜಿ ಪ್ರಧಾನಿ, ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ ಅಧ್ಯಕ್ಷೆ ಬೇಗಂ ಖಾಲಿದಾ ಝಿಯಾ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದ ಜೊತೆಗೆ ಹೃದಯ ಸಮಸ್ಯೆ ಹೊಂದಿದ್ದ ಖಾಲಿದಾ ಅವರು, ಮಂಗಳವಾರ ಬೆಳಗ್ಗೆ 6ರ ಸುಮಾರಿಗೆ ಕೊನೆಯುಸಿರೆಳೆದಿರುವುದಾಗಿ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ(BNP)ಯ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
1991ರಲ್ಲಿ ಖಾಲಿದಾ ಝಿಯಾ ಅವರು ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಬಾಂಗ್ಲಾದೇಶದ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಗುರುತಿಸಿದ್ದ ಖಾಲಿದಾ ಅವರು, ಮಾಜಿ ಪ್ರಧಾನಿ, ಸಂಘರ್ಷದ ಬಳಿಕ ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರೊಂದಿಗೆ ಪೈಪೋಟಿಗೆ ಹೆಸರುವಾಸಿಯಾಗಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖಾಲಿದಾ ಝಿಯಾ ಅವರು, ಢಾಕಾದ ಎವರ್ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಖಾಲಿದಾ ಝಿಯಾ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ 2018ರಲ್ಲಿ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಪ್ರಧಾನಿಯಾಗಿದ್ದ ಶೇಖ್ ಹಸೀನಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದ ಬೆನ್ನಲ್ಲೇ, ಬಾಂಗ್ಲಾದೇಶದ ಸೇನೆ ದೇಶದ ಅಧಿಕಾರ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಈ ನಡುವೆ ಮಾಜಿ ಪ್ರಧಾನಿ ಹಾಗೂ ಪ್ರತಿಪಕ್ಷ ನಾಯಕಿ ಖಾಲಿದಾ ಝಿಯಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಆದೇಶಿಸಿದ್ದರಿಂದ ಜೈಲಿನಿಂದ ಬಿಡುಗಡೆ ಹೊಂದಿದ್ದರು.

ಕಳೆದ ವರ್ಷ ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಸಾಮೂಹಿಕ ಪ್ರತಿಭಟನೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಎಂಬಾತನ ಹತ್ಯೆಯ ನಂತರ ಬಾಂಗ್ಲಾದಲ್ಲಿ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆ ತೀವ್ರಗೊಂಡಿದೆ. ಇದರ ಮಧ್ಯೆಯೇ 17 ವರ್ಷಗಳ ಕಾಲ ಸ್ವಯಂ ಗಡಿಪಾರಿನ ನಂತರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ)ದ ಹಂಗಾಮಿ ಅಧ್ಯಕ್ಷ, ಖಾಲಿದಾ ಝಿಯಾ ಅವರ ಮಗ ತಾರಿಕ್ ರೆಹಮಾನ್ ಇತ್ತೀಚೆಗಷ್ಟೇ ಸ್ವದೇಶಕ್ಕೆ ಮರಳಿದ್ದರು.





