ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸವಾದ ವಾಷಿಂಗ್ಟನ್‌ನ ಶ್ವೇತಭವನದ (ವೈಟ್ ಹೌಸ್) ಸಮೀಪದ ಜನನಿಬಿಡ ಪ್ರದೇಶದಲ್ಲಿ ಬುಧವಾರ ಇಬ್ಬರು ನ್ಯಾಷನಲ್ ಗಾರ್ಡ್ ಸದಸ್ಯರ ಮೇಲೆ ಗುಂಡು ಹಾರಿಸಲಾಗಿದೆ. ಘಟನೆ ನಡೆದಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿದ್ದರು ಮತ್ತು ಮುಂಜಾಗ್ರತಾ ಕ್ರಮವಾಗಿ ಶ್ವೇತಭವನವನ್ನು ಲಾಕ್‌ಡೌನ್ ಮಾಡಲಾಗಿದೆ.
ಗುಂಡಿನ ದಾಳಿಗೆ ಒಳಗಾದ ನ್ಯಾಷನಲ್ ಗಾರ್ಡ್ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಂಕಿತ ದಾಳಿಕೋರನಿಗೂ ಗುಂಡೇಟು ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಆದರೆ ಕಾನೂನು ಜಾರಿ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದ ಪ್ರಕಾರ, ಶಂಕಿತನು ಉದ್ದೇಶಪೂರ್ವಕವಾಗಿಯೇ ಗಾರ್ಡ್ ಸೈನಿಕರನ್ನು ಗುರಿಯಾಗಿಸಿಕೊಂಡಿದ್ದನು ಎಂದು ಹೇಳಲಾಗಿದೆ.
ಡೊನಾಲ್ಡ್ ಟ್ರಂಪ್ ಫ್ಲೋರಿಡಾದ ಪಾಮ್ ಬೀಚ್ ರೆಸಾರ್ಟ್‌ನಲ್ಲಿದ್ದಾರೆ ಹಾಗೂ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೆಂಟಕಿಯಲ್ಲಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಶಂಕಿತ ದಾಳಿಕೋರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಹಾಗೆಯೇ ನ್ಯಾಷನಲ್ ಗಾರ್ಡ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಸಮರ್ಪಣೆ- ಬಿಜೆಪಿ ಆಡುವುದೊಂದು, ಮಾಡುವುದು ಮತ್ತೊಂದು!
ಶ್ವೇತಭವನದಿಂದ ಕೆಲವೇ ಬ್ಲಾಕ್‌ಗಳಷ್ಟು ದೂರದಲ್ಲಿರುವ, ಕಚೇರಿ ಉದ್ಯೋಗಿಗಳ ಪ್ಬರಮುಖ ಸ್ಥಳದ ಬಳಿ ಈ ಘಟನೆ ನಡೆದಿದೆ. ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ಜನರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ಮೈಕ್ ರಯಾನ್ ಪ್ರಕಾರ, ಗುಂಡಿನ ಶಬ್ದ ಕೇಳಿದ ನಂತರ ಸ್ಥಳಕ್ಕೆ ಹೋದಾಗ ಇಬ್ಬರು ನ್ಯಾಷನಲ್ ಗಾರ್ಡ್ ಸದಸ್ಯರು ನೆಲದ ಮೇಲೆ ಬಿದ್ದಿದ್ದರು ಮತ್ತು ಇತರ ಸದಸ್ಯರು ಒಬ್ಬ ವ್ಯಕ್ತಿಯನ್ನು (ಆರೋಪಿಯನ್ನು) ನೆಲಕ್ಕೆ ಒತ್ತಿ ಹಿಡಿದಿದ್ದರು. ಗಾಯಗೊಂಡ ಸದಸ್ಯರೊಬ್ಬರನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯುತ್ತಿರುವುದನ್ನು ಮತ್ತು ಅವರ ತಲೆ ರಕ್ತಸಿಕ್ತವಾಗಿದ್ದನ್ನು ಕಂಡಿರುವುದಾಗಿ ಹೇಳಿದ್ದಾರೆ.
ಅಪರಾಧಗಳ ವಿರುದ್ಧದ ಹೋರಾಟದ ಭಾಗವಾಗಿ ಟ್ರಂಪ್ ಆಡಳಿತ ಆಗಸ್ಟ್‌ನಿಂದ ವಾಷಿಂಗ್ಟನ್ ಬೀದಿಗಳಲ್ಲಿ ನ್ಯಾಷನಲ್ ಗಾರ್ಡ್‌ಗಳನ್ನು ನಿಯೋಜಿಸಿದ್ದಾರೆ. ಬುಧವಾರದ ಅಂಕಿಅಂಶದ ಪ್ರಕಾರ, ಸುಮಾರು 2,200 ನ್ಯಾಷನಲ್ ಗಾರ್ಡ್ ಪಡೆ ವಾಷಿಂಗ್ಟನ್‌ನಲ್ಲಿವೆ. ಈ ಘಟನೆಯ ನಂತರ, ವಾಷಿಂಗ್ಟನ್‌ಗೆ ಹೆಚ್ಚುವರಿಯಾಗಿ 500 ಗಾರ್ಡ್ ಸೈನಿಕರನ್ನು ನಿಯೋಜಿಸಲು ಟ್ರಂಪ್ ಸೂಚಿಸಿದ್ದಾರೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.





