ದಕ್ಷಿಣ ಕೆರೊಲಿನಾದ ಸೇಂಟ್ ಹೆಲೆನಾ ದ್ವೀಪದಲ್ಲಿರುವ ಜನದಟ್ಟಣೆ ಇರುವ ಬಾರ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದ್ದಾರೆ.
ಭಾನುವಾರ ಮುಂಜಾನೆ ವಿಲ್ಲೀಸ್ ಬಾರ್ ಮತ್ತು ಗ್ರಿಲ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಹಲವು ಮಂದಿ ಗುಂಡೇಟಿನಿಂದ ಗಾಯಗೊಂಡಿರುವುದು ಕಂಡುಬಂದಿದೆ ಎಂದು ಬ್ಯೂಫೋರ್ಟ್ ಕೌಂಟಿ ಶೆರಿಫ್ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಗುಂಡಿನ ದಾಳಿ; ಯುವಕನಿಗೆ ಗಂಭೀರ ಗಾಯ
ಹಲವು ಮಂದಿ ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಹತ್ತಿರದ ಸ್ಥಳಗಳಿಗೆ ಓಡಿಹೋಗಿದ್ದಾರೆ. ಘಟನಾ ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಗಾಯಗೊಂಡ 20 ಮಂದಿಯಲ್ಲಿ ನಾಲ್ವರು ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಶೆರಿಫ್ ಕಚೇರಿ ಈ ಘಟನೆಯನ್ನು ‘ದುರಂತ’ ಎಂದು ಬಣ್ಣಿಸಿದೆ. ಹಾಗೆಯೇ ತನಿಖೆ ಮುಂದುವರೆದಿದೆ ಎಂದು ಹೇಳಿದೆ. ಮೃತರ ಅಥವಾ ಗಾಯಾಳುಗಳ ಹೆಸರುಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ.





