ಹಾಂಗ್‌ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಬೆಂಕಿ ಇನ್ನೂ ಹೊಗೆಯಾಡುತ್ತಿದೆ.
ಸುಮಾರು 2,000 ಅಪಾರ್ಟ್‌ಮೆಂಟ್ ಘಟಕಗಳನ್ನು ಹೊಂದಿರುವ ಎಂಟು ಕಟ್ಟಡಗಳ ಸಂಕೀರ್ಣದಲ್ಲಿ ಬುಧವಾರ ಮಧ್ಯಾಹ್ನ ಅಗ್ನ ಅವಘಡ ಸಂಭವಿಸಿದೆ. ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತಿ ಎತ್ತರದ ವಸತಿ ಬ್ಲಾಕ್‌ಗಳನ್ನು ಹೊಂದಿರುವ ಪ್ರದೇಶ ಇದಾಗಿದೆ. ಗುರುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅಗ್ನಿಶಾಮಕ ಇಲಾಖೆಯು ಸಾವಿನ ಸಂಖ್ಯೆ 36 ರಿಂದ 44 ಕ್ಕೆ ಏರಿದೆ ಎಂದಿದೆ.
ಇದನ್ನು ಓದಿದ್ದೀರಾ? ಹಾಂಗ್‌ಕಾಂಗ್ ಸಾಂಸ್ಕೃತಿಕ ಉತ್ಸವದಲ್ಲಿ ತುಮಕೂರಿನ ʼಸ್ವರವಿ ಕಲಾ ಕೇಂದ್ರʼದಿಂದ ಭರತನಾಟ್ಯ ಪ್ರದರ್ಶನ
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅವರು ಯಾವ ರೀತಿಯಲ್ಲಿ ಈ ಅವಘಡಕ್ಕೆ ಕಾರಣರಾಗಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿಲ್ಲ.
ಇನ್ನು ಈ ಬಗ್ಗೆ ಎಎಫ್‌ಪಿಗೆ ಮಾಹಿತಿ ನೀಡಿರುವ ನೆರೆಹೊರೆಯ ಕಟ್ಟಡದಲ್ಲಿ ವಾಸಿಸುವ ಯುಯೆನ್, “ನಿರ್ವಹಣೆಯ ಕಾರಣದಿಂದಾಗಿ ಕಿಟಕಿಗಳನ್ನು ಮುಚ್ಚಲಾಗಿತ್ತು. ಕೆಲವರಿಗೆ ಬೆಂಕಿ ಅನಾಹುತ ನಡೆದಿದೆ ಎಂಬುದೂ ತಿಳಿದಿರಲಿಲ್ಲ. ನೆರೆಹೊರೆಯವರು ಫೋನ್ ಕರೆಗಳ ಮೂಲಕ ಕಟ್ಟಡಕ್ಕೆ ಬೆಂಕಿ ಹತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವು ಮನೆಗಳಲ್ಲಿ ವಯಸ್ಸಾದವರಿದ್ದು, ಅವರು ಸಂಪರ್ಕಕ್ಕೂ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.
ಸದ್ಯ 900ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ನೆಲೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸಹಾಯ ಕೋರಿದವರನ್ನು ತಲುಪಲು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಬೆಂಕಿ ಅಷ್ಟೊಂದು ಆವರಿಸಿದೆ ಎಂದು ವರದಿಯಾಗಿದೆ.





