2026ನೇ ಸಾಲಿನಲ್ಲಿ ಜಗತ್ತಿನಾದ್ಯಂತ ಜನಿಸುವ ಒಟ್ಟು ಶಿಶುಗಳಲ್ಲಿ 85%ರಷ್ಟು ಮಕ್ಕಳು ಕೇವಲ ಎರಡು ಖಂಡಗಳಲ್ಲಿಯೇ ಜೀವ ಪಡೆಯಲಿವೆ. ಅದರಲ್ಲೂ ಏಷ್ಯಾ ಬರೋಬ್ಬರಿ 49% ಪಾಲುಹೊಂದಿದ್ದು, ಸರಾಸರಿ ಅರ್ಧದಷ್ಟು ಜನನಗಳು ಈ ಖಂಡದಲ್ಲೇ ಆಗಿವೆ. ಎರಡನೇ ಸ್ಥಾನದಲ್ಲಿ ಆಫ್ರಿಕಾ ಖಂಡವಿದ್ದು, ಅದು 35.9% ಪಾಲು ಹೊಂದಿದೆ ಎಂದು ವರದಿಯೊಂದು ಹೇಳಿದೆ.
ವಿಶ್ವಸಂಸ್ಥೆಯ ಜನಸಂಖ್ಯಾ ಮುನ್ಸೂಚನೆಯ ಆಧಾರದ ಮೇಲೆ ಈ ವರ್ಷದ ಜನನಗಳ ಕುರಿತು ಅಂಕಿಅಂಶಗಳನ್ನು ಸಿದ್ದಪಡಿಸಲಾಗಿದೆ. “ಒಬ್ಬ ವ್ಯಕ್ತಿಯು ಎಲ್ಲಿ ಜನಿಸುತ್ತಾನೆ ಎಂಬುದು ಅವನ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ದೀರ್ಘಕಾಲದ ಆರ್ಥಿಕ ಅವಕಾಶಗಳ ಲಭ್ಯತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ವಿಶ್ವಸಂಸ್ಥೆ ಹೇಳಿದೆ.
2026ರಲ್ಲಿ ಏಷ್ಯಾದಲ್ಲಿ ಸುಮಾರು 6.49 ಕೋಟಿ ಜನನಗಳು ಸಂಭವಿಸುವ ನಿರೀಕ್ಷೆಯಿದೆ. ಇದು ಜಗತ್ತಿನ ಒಟ್ಟು ಜನನಗಳ ಸುಮಾರು 49%ರಷ್ಟಾಗಿದೆ. ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಜನನ ಪ್ರಮಾಣ ಕುಸಿಯುತ್ತಿದ್ದರೂ ಸಹ, ಭಾರತದಲ್ಲಿಯೇ ಸುಮಾರು 2 ಕೋಟಿಗೂ ಅಧಿಕ ಶಿಶುಗಳು ಜನಿಸುವ ನಿರೀಕ್ಷೆಯಿದೆ.
| ಖಂಡ | ಜನನಗಳು (ಕೋಟಿಗಳಲ್ಲಿ) | ಜಾಗತಿಕ ಜನನದ ಪಾಲು |
| ಏಷ್ಯಾ | 6.49 C | 49.0% |
| ಆಫ್ರಿಕಾ | 4.76 C | 35.9% |
| ಯುರೋಪ್ | 0.61 C | 4.6% |
| ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ | 0.93 C | 7.0% |
| ಉತ್ತರ ಅಮೇರಿಕಾ | 0.40 C | 3.0% |
| ಓಷಿಯಾನಿಯಾ | 0.07 C | 0.5% |
| ಅಂಟಾರ್ಟಿಕಾ | 0.0 C | 0.0% |
| ಜಾಗತಿಕ (ಒಟ್ಟು) | 13.25 M | 100% |
ವಿಶೇಷವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಭಾಗಗಳು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಜನನಗಳಿಗೆ ಸಾಕ್ಷಿಯಾಗುತ್ತಿವೆ. ಇದರ ಫಲವಾಗಿ, 2026ರಲ್ಲಿ ಜನಿಸುವ ಪ್ರತಿ ಇಬ್ಬರಲ್ಲಿ ಒಬ್ಬರು ಏಷ್ಯಾದಲ್ಲಿ ಜನಿಸಿದವರಾಗಿರುತ್ತಾರೆ.
ಇನ್ನು, 2026ರಲ್ಲಿ ಆಫ್ರಿಕಾದಲ್ಲಿ 4.76 ಕೋಟಿ ಜನನಗಳು ದಾಖಲಾಗುವ ಮುನ್ಸೂಚನೆ ಇದೆ. ಇದು ಜಾಗತಿಕ ಒಟ್ಟು ಜನನದ 35.9% ರಷ್ಟಿದೆ. ಇದು ಆ ಖಂಡದ ಹೆಚ್ಚಿನ ಜನನ ದರ ಮತ್ತು ಯುವ ಜನಸಂಖ್ಯಾ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಈ ಲೇಖನ ಓದಿದ್ದೀರಾ?: ಏನಿದು ಕಾಶ್ಮೀರದ ‘ಕುನನ್ – ಪೋಶ್ಪೋರ ಕಗ್ಗತ್ತಲ ರಾತ್ರಿ’? ಎಬಿವಿಪಿ ತಗಾದೆ ಯಾಕೆ?
ಅನೇಕ ಆಫ್ರಿಕನ್ ದೇಶಗಳು ಇನ್ನೂ ಜನಸಂಖ್ಯಾ ಪರಿವರ್ತನೆಯ (ನಿಯಂತ್ರಣ) ಆರಂಭಿಕ ಹಂತದಲ್ಲಿವೆ. ಅಲ್ಲಿ ಜನನ ದರದಲ್ಲಿ ಇನ್ನೂ ಹೆಚ್ಚಿನ ಇಳಿಕೆ ಕಂಡುಬಂದಿಲ್ಲ. ಜನಸಂಖ್ಯೆಯ ಬೆಳವಣಿಗೆಯು ವೇಗವಾಗಿರುವುದರಿಂದ, ಜಾಗತಿಕ ಜನನಗಳಲ್ಲಿ ಆಫ್ರಿಕಾದ ಪಾಲು ಸ್ಥಿರವಾಗಿ ಏರುತ್ತಿದೆ. ಈ ಶತಮಾನದ ಅಂತ್ಯದ ವೇಳೆಗೆ ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಜಾಗತಿಕ ಜನನಗಳಲ್ಲಿ ಉಳಿದ ಖಂಡಗಳ ಪಾಲು ತುಲನಾತ್ಮಕವಾಗಿ ಕಡಿಮೆಯಿದೆ. ಲ್ಯಾಟಿನ್ ಅಮೇರಿಕ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ 93 ಲಕ್ಷ (7%) ಜನನಗಳು ನಿರೀಕ್ಷಿತವಾಗಿದ್ದರೆ, ಯುರೋಪ್ ಕೇವಲ 46 ಲಕ್ಷದಷ್ಟು ಪಾಲನ್ನು ಹೊಂದಿದೆ. ಉತ್ತರ ಅಮೇರಿಕದ ಪಾಲು 3% ರಷ್ಟಿದ್ದು, ವಲಸೆಯಿಂದಾಗಿ ಜನಸಂಖ್ಯೆ ಬೆಳೆಯುತ್ತಿದ್ದರೂ ಸಹ ಅಲ್ಲಿನ ಕಡಿಮೆ ಜನನ ದರವನ್ನು ಇದು ತೋರಿಸುತ್ತದೆ. ಓಷಿಯಾನಿಯಾ 0.5% ರಷ್ಟು ಜನನಗಳನ್ನು ಹೊಂದಿದರೆ, ಯಾವುದೇ ಕಾಯಂ ಜನಸಂಖ್ಯೆಯಿಲ್ಲದ ಅಂಟಾರ್ಟಿಕಾದಲ್ಲಿ ಯಾವುದೇ ಜನನಗಳು ದಾಖಲಾಗುವುದಿಲ್ಲ ಎಂದು ವರದಿ ಹೇಳಿದೆ.




