ಅಮೆಜಾನ್ ಸಂಸ್ಥೆಯು ತನ್ನ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇದೀಗ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಒಡೆತನದ ಸುದ್ದಿ ಸಂಸ್ಥೆ ‘ವಾಷಿಂಗ್ಟನ್ ಪೋಸ್ಟ್’ನಲ್ಲೂ ಉದ್ಯೋಗಿಗಳನ್ನು ಹೊರಗಟ್ಟುವ ಪ್ರಕ್ರಿಯೆ ನಡೆಯುತ್ತಿದೆ. ಬುಧವಾರ, ಸುಮಾರು 500 ಮಂದಿಯನ್ನು ಸಂಸ್ಥೆ ಹೊರಹಾಕಿದೆ. ಅವರಲ್ಲಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ ಇಶಾನ್ ತರೂರ್ ಕೂಡ ಸೇರಿದ್ದಾರೆ.
ವಾಷಿಂಗ್ಟನ್ ಪೋಸ್ಟ್‌ನ ಸ್ಥಳೀಯ ವರದಿಗಾರರು, ಕ್ರೀಡಾ ವಿಭಾಗ, ವಿದೇಶಿ ಬ್ಯುರೋಗಳು ಹಾಗೂ ವ್ಯಾಪಾರ ವಿಭಾಗದ ಅನೇಕ ಪತ್ರಕರ್ತರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತು ಅಂಕಣಗಳನ್ನು ಬರೆಯುತ್ತಿದ್ದ ಇಶಾನ್ ತರೂರ್ ಅವರನ್ನೂ ಹೊರಹಾಕಲಾಗಿದೆ. ಸಂಸ್ಥೆಯ ಈ ನಿರ್ಧಾರವು ‘ಜಾಗತಿಕ ಪತ್ರಿಕೋದ್ಯಮದ ಕರಾಳ ದಿನ’ವೆಂದು ವಜಾಗೊಂಡ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಸುದ್ದಿ ಸಂಸ್ಥೆಯು ಏಕಾಏಕಿ ಸಿಬ್ಬಂದಿಗಳನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಹೇಳಿದ್ದಾರೆ.
ಕೆಲಸದಿಂದ ವಜಾಗೊಂಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಇಶಾನ್ ತರೂರ್, “ನನ್ನ ಹೃದಯ ಒಡೆದುಹೋಗಿದೆ. ನಾನೂ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. ನಾವೆಲ್ಲರೂ ಸುಮಾರು 12 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈಗ, ಭಾರವಾದ ಮನಸ್ಸಿನಿಂದ ಹೊರ ನಡೆದಿದ್ದೇವೆ” ಎಂದು ಹೇಳಿದ್ದಾರೆ.
“2017ರಿಂದ ಪ್ರತಿ ವಾರವೂ ಹಲವಾರು ಅಂಕಣಗಳನ್ನು ಬರೆದಿದ್ದೇನೆ. ನನ್ನ ಅಂಕಣಗಳನ್ನು ಓದುತ್ತಿದ್ದ ನನ್ನ 5 ಲಕ್ಷಕ್ಕೂ ಹೆಚ್ಚು ನಿಷ್ಠಾವಂತ ಓದುಗರಿಗೆ ನಾನು ಕೃತಜ್ಞನಾಗಿದ್ದೇನೆ. ಇಂದು ಪ್ರಜಾಪ್ರಭುತ್ವವು ಕತ್ತಲಿನಲ್ಲಿ ಸತ್ತಿದೆ. ಇದು ಕೆಟ್ಟ ದಿನ” ಎಂದು ಅವರು ಹೇಳಿದ್ದಾರೆ.





