ಸೋಮವಾರ ಮುಂಜಾನೆ ಉತ್ತರ ಅಫ್ಘಾನಿಸ್ತಾನದ ಮಜಾರ್-ಎ ಷರೀಫ್ ನಗರದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಸುಮಾರು 150 ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸುಮಾರು 523,000 ಜನಸಂಖ್ಯೆಯನ್ನು ಹೊಂದಿರುವ ಮಜಾರ್-ಎ ಷರೀಫ್ ಬಳಿ 28 ಕಿಮೀ (17.4 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ, ಸಾವಿನ ಸಂಖ್ಯೆ 2,205ಕ್ಕೆ ಏರಿಕೆ
“ಇಂದು ಬೆಳಿಗ್ಗೆ ಭೂಕಂಪವಾಗಿದ್ದು 7 ಮಂದಿ ಮೃತಪಟ್ಟಿದ್ದಾರೆ. 150 ಮಂದಿ ಗಾಯಗೊಂಡಿದ್ದು ಅವರನ್ನು ಆರೋಗ್ಯ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ” ಎಂದು ಮಜಾರ್-ಎ ಷರೀಫ್ ಬಳಿಯ ಪರ್ವತ ಉತ್ತರ ಪ್ರಾಂತ್ಯದ ಸಮಂಗನ್‌ನಲ್ಲಿರುವ ಆರೋಗ್ಯ ಇಲಾಖೆಯ ವಕ್ತಾರ ಸಮೀಮ್ ಜೋಯಂಡಾ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಭೂಕಂಪಗಳ ಪ್ರಭಾವದ ಬಗ್ಗೆ ಮಾಹಿತಿಯನ್ನು ನೀಡುವ USGS(ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ) ಪೇಜರ್‌ನಲ್ಲಿ ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ. ಹಾಗೆಯೇ ಸಾವು ನೋವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸೂಚಿಸಿದೆ.
“ಭೂಕಂಪವು ಮಜರ್-ಇ-ಶರೀಫ್‌ನ ಪವಿತ್ರ ದೇವಾಲಯದ ಭಾಗವನ್ನು ನಾಶಪಡಿಸಿದೆ” ಎಂದು ಬಾಲ್ಖ್ ಪ್ರಾಂತ್ಯದ ವಕ್ತಾರ ಹಾಜಿ ಜೈದ್ ಹೇಳಿದ್ದಾರೆ. ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಸಾವುನೋವುಗಳು ಮತ್ತು ಹಾನಿಯ ವರದಿಗಳನ್ನು ಶೀಘ್ರವೇ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.
ಭೂಕಂಪ ಪೀಡಿತ ಅಫ್ಘಾನಿಸ್ತಾನದಲ್ಲಿ ಆಗಸ್ಟ್‌ನಲ್ಲಿ 6.0 ತೀವ್ರತೆಯ ಭೂಕಂಪವಾಗಿದ್ದು 2,200 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತ ತಿಳಿಸಿದೆ. 2015ರಲ್ಲಿ ಈಶಾನ್ಯ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಫ್ಘಾನಿಸ್ತಾನ ಮತ್ತು ಹತ್ತಿರದ ಉತ್ತರ ಪಾಕಿಸ್ತಾನದ ನೂರಾರು ಮಂದಿ ಸಾವನ್ನಪ್ಪಿದ್ದರು. 2023ರಲ್ಲಿ ಸಂಭವಿಸಿದ ಭೂಕಂಪ ಕನಿಷ್ಠ ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿದೆ.





