ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕಾಗಿ ತಾವೇ ಮಧ್ಯಸ್ಥಿಕೆ ವಹಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿಕೊಂಡಿದ್ದಾರೆ. ಉಭಯ ರಾಷ್ಟ್ರಗಳ ಸಂಘರ್ಷದ ಸಮಯದಲ್ಲಿ 8 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದಿರುವ ಟ್ರಂಪ್, ತಮ್ಮ ಹಿಂದಿನ ಹೇಳಿಕೆಯ 7 ಜೆಟ್ ಎಂಬುದನ್ನು 8 ಎಂದು ಪರಿಷ್ಕರಿಸಿದ್ದಾರೆ. ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಮೇ ತಿಂಗಳಿನಲ್ಲಿ ಸಂಘರ್ಷಕ್ಕಿಳಿದಾಗ, ಅವುಗಳ ಜೊತೆಗಿನ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ ನಂತರವೇ, ಕದನ ವಿರಾಮಕ್ಕೆ ಒಪ್ಪಿಸಿಕೊಂಡರು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಮಿಯಾಮಿಯಲ್ಲಿ ನಡೆದ ‘ಅಮೆರಿಕ ಬ್ಯುಸಿನೆಸ್ ಫೋರಂ’ನಲ್ಲಿ ಟ್ರಂಪ್ ಮಾತನಾಡಿದರು. “ನಾನು ಭಾರತ ಮತ್ತು ಪಾಕಿಸ್ತಾನದೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ನಡೆಸುತ್ತಿದ್ದೆ. ಅದೇ ಸಮಯದಲ್ಲಿ, ಅವರು ಯುದ್ಧಕ್ಕೆ ಹೋಗುತ್ತಿದ್ದಾರೆಂದು ನಾನು ಕೇಳಿದೆ. ಸಂಘರ್ಷದಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಮತ್ತು ಎಂಟನೆಯದು ತೀವ್ರವಾಗಿ ಹಾನಿಯಾಗಿದೆ ಎಂಬುದು ನನಗೆ ತಿಳಿಯಿತು. ಎಂಟು ವಿಮಾನಗಳನ್ನು ಅಕ್ಷರಶಃ ಹೊಡೆದುರುಳಿಸಲಾಗಿದೆ. ಅವೆರಡೂ ಪರಮಾಣು ರಾಷ್ಟ್ರಗಳು. ‘ನೀವು ಶಾಂತಿಗೆ ಒಪ್ಪದ ಹೊರತು ನಾನು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ’ವೆಂದು ನಾನು ಅವರಿಗೆ ಹೇಳಿದೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ
“ಎರಡು ರಾಷ್ಟ್ರಗಳು ‘ಇಲ್ಲ. ವ್ಯಾಪಾರ ಒಪ್ಪಂದಕ್ಕೂ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ…’ ಎಂದು ಹೇಳಿದರು. ನಾನು ಹೇಳಿದೆ, ‘ಎಲ್ಲ ರೀತಿಯ ಸಂಬಂಧವೂ ಇದೆ. ನೀವು ಪರಮಾಣು ಶಕ್ತಿಗಳು. ನೀವು ಪರಸ್ಪರ ಯುದ್ಧದಲ್ಲಿದ್ದರೆ ನಾವು ನಿಮ್ಮೊಂದಿಗೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ಮರುದಿನ ಎರಡು ದೇಶಗಳು ಶಾಂತಿ ಒಪ್ಪಂದ ಮಾಡಿಕೊಂಡಿವೆ ಎಂದು ನನಗೆ ಕರೆ ಬಂದಿತು. ನಾನು ‘ಧನ್ಯವಾದಗಳು. ವ್ಯಾಪಾರ ಮಾಡೋಣ’ ಎಂದು ಹೇಳಿದೆ. ಅದು ಉತ್ತಮವಲ್ಲವೇ?” ಎಂದು ಟ್ರಂಪ್ ಹೇಳಿದ್ದಾರೆ.
ಮೇ 10ರಂದು ಕದನ ವಿರಾಮ ಘೋಷಣೆಯಾದ ಬಳಿಕ, ಈವರೆಗೆ ಟ್ರಂಪ್ ಅವರು ಸುಮಾರು 60 ಬಾರಿ ತಮ್ಮಿಂದಲೇ ಕದನ ವಿರಾಮ ಘೋಷಣೆಯಾಯಿತು ಎಂದು ಹೇಳಿಕೊಂಡಿದ್ದಾರೆ. ಅಂದು ಕೂಡ ಕದನ ವಿರಾಮದ ಕುರಿತು ಟ್ರಂಪ್ ಅವರೇ ಮೊದಲು ಪೋಸ್ಟ್ ಹಂಚಿಕೊಂಡಿದ್ದರು. ಟ್ರಂಪ್ ಅವರು ಹೇಳಿಕೆಯನ್ನು ಭಾರತವು ನಿರಾಕರಿಸಿದೆ. ಆದರೆ, ಪ್ರಧಾನಿ ಮೋದಿ ಅವರು ಟ್ರಂಪ್ ಹೇಳಿಕೆಗಳಿಗೆ ಈವರೆಗೆ ಪ್ರತಿಕ್ರಿಯಿಸಿಲ್ಲ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದಿದ್ದರು. ಪ್ರತೀಕಾರವಾಗಿ ಮೇ 7 ರಂದು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತವು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತು. ನಾಲ್ಕು ದಿನಗಳ ಸಂಘರ್ಷದ ಬಳಿಕ, ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.




