1929ರಲ್ಲಿ ಆರಂಭವಾದ ಆಸ್ಕರ್ ಇಂದು ಜಗತ್ತಿನ ಅತಿ ದೊಡ್ಡ ಚಲನಚಿತ್ರ ವೈಭವದ ಕಾರ್ಯಕ್ರಮವಾಗಿದೆ. ಆಸ್ಕರ್ ಪ್ರತಿಮೆ ಕೇವಲ ಲೋಹದ ಶಿಲ್ಪವಲ್ಲ- ಅದು ಕಥೆ ಹೇಳುವ ಕಲೆಯ ಮಹತ್ವವನ್ನು, ಮಾನವ ಅನುಭವದ ವೈವಿಧ್ಯತೆಯನ್ನು ಮತ್ತು ಸಿನೆಮಾದ ಶಾಶ್ವತ ಪ್ರಭಾವವನ್ನು ಪ್ರತಿನಿಧಿಸುವ ಸಂಕೇತವಾಗಿದೆ.
ಪ್ರತಿ ವರ್ಷದ ಫೆಬ್ರುವರಿ ತಿಂಗಳು ಬಂತೆಂದರೆ ಜಗತ್ತಿನ ಬಹುತೇಕ ಚಿತ್ರಾಸಕ್ತರು ಆಸ್ಕರ್ ಪ್ರಶಸ್ತಿ ಎಂದು ಜನಪ್ರಿಯವಾಗಿರುವ ‘ಅಕಾಡೆಮಿ ಅವಾರ್ಡ್ ಆಫ್ ಮೆರಿಟ್’ನ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಕಾತರರಾಗುತ್ತಾರೆ. ಅಮರಾವತಿಯಲ್ಲಿದ್ದಿರಬಹುದಾದ ದೇವೇಂದ್ರನ ಸಭೆ ಪುಷ್ಕರಮಾಲಿನಿಯನ್ನು ಹೋಲುವ, ಆಧುನಿಕ ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಿ ರೂಪಿಸಲಾದ ವೇದಿಕೆಯಲ್ಲಿ ಅಕಾಡೆಮಿ ಪ್ರಶಸ್ತಿ ಗಳಿಸಿದವರು ತಮ್ಮ ಬದುಕಿನ ಸಾರ್ಥಕ ಕ್ಷಣಗಳಲ್ಲಿ ಮಿಂದೇಳುತ್ತಾರೆ. ಆ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡ ತಂಡದ ಸದಸ್ಯರು ಆ ಅಪೂರ್ವವಾದ ಕ್ಷಣಗಳನ್ನು ಆನಂದಿಸುತ್ತಾರೆ. ಶತಮಾನ ಪೂರೈಸಲು ತುಂಬಾ ಹತ್ತಿರದಲ್ಲಿರುವ ಆಸ್ಕರ್‌ಗಳು ಕೇವಲ ಪ್ರಶಸ್ತಿಗಳು ಮಾತ್ರವಲ್ಲ; ಅವು ಚಿತ್ರ ಸಂಸ್ಕೃತಿಯ ಸಂಕೇತಗಳಾಗಿ, ವೃತ್ತಿಬದುಕನ್ನು ರೂಪಿಸುವ ಶಕ್ತಿಯಾಗಿ ಮತ್ತು ಜಾಗತಿಕ ಚಲನಚಿತ್ರ ಪ್ರವೃತ್ತಿಗಳನ್ನು ನಿರ್ಧರಿಸುವ ಮಾನದಂಡಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಜಾಗತಿಕ ಪ್ರಸಿದ್ಧಿ, ಸ್ವರ್ಗದ ವೈಭವ, ಪ್ರಶಸ್ತಿಯೊಂದು ಸೃಷ್ಟಿಸುವ ಅಪೂರ್ವ ಆಕರ್ಷಣೆ, ಎಣೆಯಿಲ್ಲದ ಚರ್ಚೆ, ತೀವ್ರವಾದ ವಿವಾದ, ವಾಣಿಜ್ಯ ಸಂಸ್ಕೃತಿಯನ್ನು ಉತ್ತೇಜಿಸಿ ಸಿನೆಮಾ ಕಲೆಗೆ ಮಾಡುವ ಅಪಮಾನವೆಂದು ಚಲನಚಿತ್ರರಂಗದ ಒಂದುವರ್ಗ ತೋರುವ ಉಪೇಕ್ಷೆ- ಇತ್ಯಾದಿಗಳ ನಡುವೆಯೂ ಎಲ್ಲರ ಕುತೂಹಲ ಕೆರಳಿಸುವ ಆಸ್ಕರ್ ಪ್ರಶಸ್ತಿ ಸೃಷ್ಟಿಸಿರುವ ಮಾಯೆಗೆ ಎಣೆಯಿಲ್ಲ. ಪ್ರಶಸ್ತಿ ವಿಜೇತರ ಹರುಷದ ಅಲೆಯಲ್ಲಿ ತೇಲಿ, ವಿವಾದದ ಉಬ್ಬರವನ್ನೂ ದಾಟಿ, ತಂಡದ ಸೃಷ್ಟಿ ಎನಿಸಿದ ಚಲನಚಿತ್ರದ ಹಲವು ವಿಭಾಗಗಳಲ್ಲಿ ದುಡಿಯುವವರ ಪ್ರತಿಭೆ ಮತ್ತು ಕಲ್ಪನಾಶಕ್ತಿಗೆ ಸಲ್ಲುವ ಅತ್ಯತ್ತಮ ಗೌರವವೆಂದು ಪರಿಗಣಿತವಾಗಿರುವ ಆಸ್ಕರ್ ಪ್ರಶಸ್ತಿಯ ಆಕರ್ಷಣೆ, ಹಂಬಲ, ಸೊಬಗು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಇಂಥ ಜಗತ್ಪ್ರಸಿದ್ಧ ಪ್ರಶಸ್ತಿಯನ್ನು ನೀಡುವ ಪರಂಪರೆ ಆರಂಭವಾದದ್ದೂ ವಿಚಿತ್ರವಾದ ಸನ್ನಿವೇಶದಲ್ಲಿ. 1920ರ ದಶಕದಲ್ಲಿ ಹಾಲಿವುಡ್ ಚಿತ್ರರಂಗ ತೀವ್ರವಾಗಿ ಬೆಳೆಯಿತು. ಉಳಿದ ರಾಷ್ಟ್ರಗಳಲ್ಲಿ ಮೊದಲ ಮಹಾಯುದ್ಧವು ಚಲನಚಿತ್ರರಂಗ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೂ ಹಾಲಿವುಡ್ ಆ ಸಂಕಷ್ಟದಿಂದ ಪಾರಾಗಿ ಜಗತ್ತಿಗೆ ಕನಸುಗಳನ್ನು ಮಾರುವ ಉದ್ದಿಮೆಯಾಗಿ ವೇಗವಾಗಿ ವಿಸ್ತರಿಸುತ್ತಿತ್ತು. ಸ್ಟುಡಿಯೋ ವ್ಯವಸ್ಥೆ ಬಲವಾಗುತ್ತಿತ್ತು. ಆದರೆ ಕಲಾವಿದರು, ಲೇಖಕರು ಮತ್ತು ತಾಂತ್ರಿಕ ವರ್ಗದವರು ಉತ್ತಮ ವೇತನ ಮತ್ತು ಕೆಲಸದ ಪರಿಸ್ಥಿತಿಗಳಿಗಾಗಿ ಹೋರಾಟ ನಡೆಸುತ್ತಿದ್ದರು. ಕಾರ್ಮಿಕ ಸಂಘರ್ಷಗಳು ಮತ್ತು ಉದ್ಯಮದ ಒಳಗಿನ ಒತ್ತಡಗಳೂ ಹೆಚ್ಚತೊಡಗಿದವು. ಈ ಸಂದರ್ಭದಲ್ಲೇ ಉದ್ಯಮವು ತನ್ನ ಗೌರವ ಉಳಿಸಿಕೊಳ್ಳುವ ಮತ್ತು ಸಾರ್ವಜನಿಕ ಮನ್ನಣೆ ಹೆಚ್ಚಿಸಿಕೊಳ್ಳುವ ದಾರಿಯನ್ನು ಹುಡುಕುತ್ತಿತ್ತು.
ಇದನ್ನು ಓದಿದ್ದೀರಾ?: ಸಿರಾಟ್- ಸೌಂದರ್ಯ ಮತ್ತು ಭೀತಿಯ ನಡುವೆ ಅಳಿಸಿ ಹೋಗಿರುವ ಗಡಿ
ಕಾರ್ಮಿಕ ಸಂಘರ್ಷಗಳನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಮಧ್ಯವರ್ತಿ ಸಂಸ್ಥೆಯೊಂದನ್ನು ಸ್ಥಾಪಿಸಬೇಕಾದ ಅಗತ್ಯವನ್ನು ಆಗ ಚಿತ್ರ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ಎಂಜಿಎಂನ ಸ್ಟುಡಿಯೋ ಮುಖ್ಯಸ್ಥ ಲೂಯಿಸ್ ಬಿ. ಮೇಯರ್ ಮನಗಂಡರು. ಈ ಬಗ್ಗೆ ಚರ್ಚಿಸಲು 1927ರ ಜನವರಿ 11ರಂದು ಲಾಸ್ ಏಂಜಲೀಸ್‌ನ ಅಂಬಾಸಡರ್ ಹೋಟೆಲ್‌ನಲ್ಲಿ ಚಲನಚಿತ್ರ ಉದ್ಯಮದ ವಿವಿಧ ವಿಭಾಗದ ಪ್ರಮುಖ ನಾಯಕರನ್ನು ಭೋಜನ ಕೂಟಕ್ಕೆ ಆಹ್ವಾನಿಸಿದರು. ಅಲ್ಲಿ ನಡೆಸಿದ ಚರ್ಚೆಯಲ್ಲಿ ತಾವು ಸ್ಥಾಪಿಸಲು ಉದ್ಧೇಶಿಸಿರುವ ಸಂಸ್ಥೆಯ ನುಡಿಚಿತ್ರವನ್ನು ಬಿಡಿಸಿದರು. ಕಾರ್ಮಿಕ ಸಂಘರ್ಷಗಳನ್ನು ಮಧ್ಯಸ್ಥಿಕೆ ಮೂಲಕ ನಿಯಂತ್ರಿಸುವ, ಯೂನಿಯನ್ ಒತ್ತಡವನ್ನು ಕಡಿಮೆ ಮಾಡುವ, ಉದ್ಯಮದ ಸಾರ್ವಜನಿಕ ಇಮೇಜನ್ನು ಉತ್ತಮಗೊಳಿಸುವ, ಚಲನಚಿತ್ರದ ಕಲಾತ್ಮಕ ಮತ್ತು ತಾಂತ್ರಿಕ ಗುಣಮಟ್ಟವನ್ನು ಉತ್ತೇಜಿಸುವ ಮತ್ತು ಚಿತ್ರೋದ್ಯಮದ ವಿವಿಧ ವಿಭಾಗಗಳನ್ನು ಒಗ್ಗೂಡಿಸುವ ಕೆಲಸಗಳನ್ನು ನಿಭಾಯಿಸಲು ಅಕಾಡೆಮಿಯೊಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಮುಂದುವರೆದು ಕಲಾವಿದರು, ನಿರ್ದೇಶಕರು, ಲೇಖಕರು, ನಿರ್ಮಾಪಕರು ಮತ್ತು ತಾಂತ್ರಿಕ ತಜ್ಞರ ಪ್ರತಿನಿಧಿತ್ವವಿದ್ದ 36 ಮಂದಿ ಸ್ಥಾಪಕ ಸದಸ್ಯರು 1927ರ ಮೇ 4ರಂದು ಅಕಾಡೆಮಿಯೊಂದನ್ನು ಅಧಿಕೃತವಾಗಿ ನೋಂದಾಯಿಸಿದರು. ಚಲನಚಿತ್ರರಂಗದ ಕಲಾತ್ಮಕ (Arts) ಮತ್ತು ತಾಂತ್ರಿಕ (Sciences) -ಎರಡೂ ಅಂಶಗಳ ಒಗ್ಗೂಡುವಿಕೆಯನ್ನು ಸಂಕೇತಿಸುವಂತೆ ”Academy of Motion Picture Arts and Sciences” ಎಂಬ ಹೆಸರಿನಿಂದ ಅಕಾಡೆಮಿಯನ್ನು ಸ್ಥಾಪಿಸಲಾಯಿತು.
ಅಕಾಡೆಮಿಯ ಮುಖ್ಯ ಪ್ರವರ್ತಕರಾಗಿ ಲೂಯಿಸ್ ಬಿ. ಮೇಯರ್, ಸ್ಥಾಪಕ ಅಧ್ಯಕ್ಷರಾಗಿ ಮೂಕಿ ಚಿತ್ರಗಳ ತಾರೆ ಡಗ್ಲಾಸ್ ಫೇರ್‍ಬ್ಯಾಂಕ್ ನೇಮಕಗೊಂಡರು. ಸ್ಥಾಪಕ ಸದಸ್ಯರಲ್ಲಿ ಹಾಲಿವುಡ್‍ನ ಜನಪ್ರಿಯ ನಟಿ ಮೇರಿ ಫಿಕ್‍ಫೋರ್ಡ್, ಪ್ರಸಿದ್ಧ ನಿರ್ದೇಶಕ-ನಿರ್ಮಾಪಕ ಸೆಸಿಲ್ ಡಿ ಮೆಲ್, ಚಿತ್ರಮಂದಿರಗಳ ಮಾಲೀಕ ಸಿಡ್ನಿ ಗ್ರಾಮನ್ ಮತ್ತು ಎಂಜಿಎಂನ ಪ್ರಮುಖ ನಿರ್ಮಾಪಕ ಇರ್ವಿಂಗ್ ಥಾಲ್‍ಬರ್ಗ್ ಮೊದಲಾದವರಿದ್ದರು.

ಅಕಾಡೆಮಿಯು ಕಾರ್ಮಿಕ ಸಂಘರ್ಷಗಳನ್ನು, ಉದ್ಯಮದ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಯಶಸ್ವಿಯಾಯಿತು. ಈ ಯಶಸ್ಸಿನಿಂದ ಉತ್ತೇಜಿತರಾದ ಅಕಾಡೆಮಿಯ ಪ್ರಮುಖರು ನಡೆಸುತ್ತಿದ್ದ ಚರ್ಚೆಗಳಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ನೀಡುವ ಕಲ್ಪನೆ ಮೂಡಿತು. ಹಾಲಿವುಡ್ ಚಲನಚಿತ್ರಗಳ ಕಲಾತ್ಮಕ ಮಾನದಂಡಗಳನ್ನು ಉನ್ನತ ಮಟ್ಟಕ್ಕೆ ಏರಿಸಲು, ಚಿತ್ರಗಳ ಗುಣಮಟ್ಟವನ್ನು ಉತ್ತೇಜಿಸಲು, ಆಯಾ ವರ್ಷದಲ್ಲಿ ಬಿಡುಗಡೆಯಾದ ಶ್ರೇಷ್ಠ ಚಿತ್ರಗಳ ವಿಶೇಷವನ್ನು ಗುರುತಿಸಿ ಗೌರವಿಸಲು ಪ್ರಶಸ್ತಿ ಸ್ಥಾಪನೆಗೆ ಅಕಾಡೆಮಿ ಮುಂದಾಯಿತು. 1928ರಲ್ಲಿ ಅಕಾಡೆಮಿಯ ಮಂಡಳಿಯು ವಾರ್ಷಿಕ ಪ್ರಶಸ್ತಿಗಳನ್ನು ನೀಡುವ ಆಲೋಚನೆಯನ್ನು ಅಧಿಕೃತವಾಗಿ ಅನುಮೋದಿಸಿತು.
ಮೊದಲ ಅಕಾಡೆಮಿ ಪ್ರಶಸ್ತಿ ಸಮಾರಂಭವು 1929ರ ಮೇ 16ರಂದು ಹಾಲಿವುಡ್‌ನ ರೂಸ್‌ವೆಲ್ಟ್ ಹೋಟೆಲ್‌ನಲ್ಲಿ ನಡೆಯಿತು. ಸುಮಾರು 270 ಮಂದಿ ಅತಿಥಿಗಳು ಭಾಗವಹಿಸಿದ್ದ ಸರಳ ಭೋಜನ ಸಮಾರಂಭದಲ್ಲಿ ಮೊದಲೇ ಘೋಷಿಸಲಾದ ಪ್ರಶಸ್ತಿ ವಿಜೇತರಿಗೆ ‘ಅಕಾಡೆಮಿ ಅವಾರ್ಡ್ ಆಫ್ ಮೆರಿಟ್’ ಪ್ರತಿಮೆ ನೀಡಿ ಗೌರವಿಸಿದರು. ಆದರೆ ಇಂದು ಜಗತ್ತಿನಾದ್ಯಂತ ಈ ಪ್ರಶಸ್ತಿಯನ್ನು ”ಆಸ್ಕರ್” ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಈ ಹೆಸರು ಹುಟ್ಟಿದ ಬಗ್ಗೆ ನಿಖರವಾದ ಮೂಲ ಸ್ಪಷ್ಟವಾಗಿಲ್ಲ. ಆದರೆ ಕೆಲವು ಜನಪ್ರಿಯ ಕಥನಗಳು ಇವೆ.
ಈ ಹೆಸರು ಹುಟ್ಟಲು ಕಾರಣವೆಂದು ಹೆಚ್ಚು ಹೇಳಲಾಗುವ ವ್ಯಕ್ತಿ ಎಂಜಿಎಂನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಾರ್ಗರೇಟ್ ಹೆರಿಕ್. ಆಕೆ ಈ ಪ್ರತಿಮೆಯನ್ನು ಮೊದಲ ಬಾರಿ ನೋಡಿದಾಗ ”ಇದು ನನ್ನ ಅಂಕಲ್ ಆಸ್ಕರ್‌ರಂತೆ ಕಾಣುತ್ತದೆ” ಎಂದು ಹೇಳಿದರಂತೆ. ಹಾಲಿವುಡ್ ಪತ್ರಕರ್ತ ಸಿಡ್ನಿ ಸ್ಕೋಲ್ಸ್ಕಿ 1934ರಲ್ಲಿ ತಮ್ಮ ಲೇಖನದಲ್ಲಿ ”Oscar” ಎಂಬ ಪದವನ್ನು ಬಳಸಿದರು. ಈ ಲೇಖನದಿಂದಲೇ ಈ ಹೆಸರು ಸಾರ್ವಜನಿಕವಾಗಿ ಹೆಚ್ಚು ಪ್ರಸಿದ್ಧಿಯಾಯಿತು ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. 1939ರಲ್ಲಿ ಅಕಾಡೆಮಿ ಈ ಹೆಸರನ್ನು ಅಧಿಕೃತವಾಗಿ ಸ್ವೀಕರಿಸಿತು. ಆ ಬಳಿಕ ಈ ಹೆಸರು ಜಾಗತಿಕ ಬ್ರ್ಯಾಂಡ್ ಆಯಿತು.
ಇದನ್ನು ಓದಿದ್ದೀರಾ?: ಅಲೆಕ್ಸಾಂಡ್ರೆ ಕೊಬೆರಿಡ್ಜೆ ಅವರ ‘ಡ್ರೈ ಲೀಫ್’
ಅಕಾಡೆಮಿ ಪ್ರಶಸ್ತಿಯ ಪ್ರತಿಮೆಯ ವಿನ್ಯಾಸ ರೂಪಿಸಿದವರು ಎಂಜಿಎಂ ಸಂಸ್ಥೆಯ ಕಲಾನಿರ್ದೇಶಕ ಸೆಡ್ರಿಕ್ ಗಿಬ್ಬನ್ಸ್. ಮೂಲ ಶಿಲ್ಪವನ್ನು ಕಡೆದವರು ಶಿಲ್ಪಿ ಜಾನ್ ಸ್ಟ್ಯಾನ್ಲಿ. ಕಲಾನಿರ್ದೇಶಕ ಗಿಬ್ಬನ್ಸ್ ಅವರು ”ಕ್ರೂಸೇಡರ್” ಶೈಲಿಯ ಅಂದರೆ, ಒಂದು ಮೌಲ್ಯವನ್ನು ರಕ್ಷಿಸಲು ಶಪಥ ಮಾಡಿದ ಯೋಧನ ಕಲ್ಪನೆಯನ್ನು ಆರಿಸಿಕೊಂಡರು. ಪ್ರತಿಮೆಯ ಪೀಠದಂತಿರುವ ರೀಲಿನ ಡಬ್ಬದ ಮೇಲೆ ಕತ್ತಿಯ ಮೊನೆಯನ್ನು ಇಳಿಬಿಟ್ಟು ಎದೆಯ ಹತ್ತಿರ ಹಿಡಿ ಹಿಡಿದು ನಿಂತಿರುವ ವೀರಯೋಧ(Knight)ನ ಪ್ರತಿಮೆ. ದಾಳಿ ಮಾಡಲು ಸಿದ್ಧನಾದ ಯೋಧನಲ್ಲ; ಮೌಲ್ಯಗಳನ್ನು ಕಾಪಾಡಲು ನಿಂತಿರುವ ರಕ್ಷಕ. ಕಪ್ಪು ರೀಲಿನ ಡಬ್ಬದ ಚಕ್ರದಲ್ಲಿ ಕಾಣುವ ಐದು ಕಡ್ಡಿಗಳು ಚಿತ್ರರಂಗದ ಪ್ರಮುಖ ಬಾಗಗಳಾದ ಕಲಾವಿದರು, ಲೇಖಕರು, ತಂತ್ರಜ್ಞರು, ನಿರ್ಮಾಪಕರು ಮತ್ತು ನಿರ್ದೇಶಕರನ್ನು ಸಂಕೇತಿಸುತ್ತವೆ. ಹದಿಮೂರುವರೆ ಅಂಗುಲ ಎತ್ತರದ ಪ್ರತಿಮೆ ಮತ್ತು ಪೀಠದ ಭಾಗ(ರೀಲಿನ ಡಬ್ಬ)ವನ್ನು ಸಂಪೂರ್ಣ ಲೋಹದಿಂದ ತಯಾರಿಸುತ್ತಾರೆ. ಪೀಠದ ಭಾಗಕ್ಕೆ ಕಪ್ಪು ಲೋಹ ಬಳಸಿದರೆ, ವೀರಯೋಧನನ್ನು ಕಂಚಿನಿಂದ ಎರಕ ಹೊಯ್ದು, ನಯಗೊಳಿಸಿ, 24 ಕ್ಯಾರಟ್‍ನ ಚಿನ್ನದ ಲೇಪನದಿಂದ (ಗೋಲ್ಡ್ ಪ್ಲೇಟೆಡ್) ಹೊಳಪುಗೊಳಿಸುತ್ತಾರೆ. ಈ ಪ್ರತಿಮೆ 13.5 ಇಂಚು ಎತ್ತರ, 3.8 ಕೆಜಿ ತೂಕವಿದ್ದು ಸುಮಾರು ಶತಮಾನಕ್ಕೂ ಸಮೀಪವಾದ ಪರಂಪರೆಯನ್ನು ತನ್ನೊಳಗೆ ಹೊತ್ತುಕೊಂಡಿದೆ. ಜಾಗತಿಕ ಸಿನೆಮಾ ಲೋಕದಲ್ಲಿ ಪ್ರತಿನಿಧಿಸುವ ಪ್ರತಿಷ್ಠೆ, ಮಾನ್ಯತೆ ಮತ್ತು ಇತಿಹಾಸವೇ ಆಗಿದೆ.

ಆರಂಭದಲ್ಲಿ ಅಮೆರಿಕಾದಲ್ಲಿ ಬಿಡುಗಡೆಯಾಗುತ್ತಿದ್ದ ಇಂಗ್ಲಿಷ್ ಭಾಷೆಯ ಚಿತ್ರಗಳು ಮಾತ್ರ ಅಕಾಡೆಮಿ ಪುರಸ್ಕಾರ ಸ್ಪರ್ಧೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತಿದ್ದವು. ಕ್ರಮೇಣ ಜಗತ್ತಿನ ಚಿತ್ರನಿರ್ಮಾಣ ದೇಶಗಳಿಗೂ ಪ್ರಾತಿನಿಧ್ಯ ನೀಡಲು ಅತ್ಯುತ್ತಮ ವಿದೇಶೀ ಚಿತ್ರ ಸ್ಪರ್ಧಾ ವಿಭಾಗವನ್ನು ಅಕಾಡೆಮಿಯು 1956ರಲ್ಲಿ ಆರಂಭಿಸಿತು(ಫೆಲಿನಿ ಅವರ ಲಾ ಸ್ಟ್ರಾಡ ಈ ಪ್ರಶಸ್ತಿ ಗೆದ್ದ ಮೊದಲ ಚಿತ್ರ). ಅದಕ್ಕೂ ಮೊದಲು 1945ರಿಂದ 1956ರವರೆಗೆ ಅಕಾಡೆಮಿಯ ವಿಶೇಷ ಗೌರವಕ್ಕೆ ಅತ್ಯುತ್ತಮ ವಿದೇಶೀ ಚಿತ್ರವೊಂದನ್ನು ಅಕಾಡೆಮಿಯ ಸದಸ್ಯರು ಆರಿಸುತ್ತಿದ್ದರು. ಆದರೆ ಅದು ಸ್ಪರ್ಧಾ ವಿಭಾಗವಾಗಿರಲಿಲ್ಲ. ವಿಶೇಷ ಗೌರವ, ಅಷ್ಟೇ. 1929ರಲ್ಲಿ ನಡೆದ ಮೊದಲ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಹನ್ನೆರಡು ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿತ್ತು. ಅನಂತರ ಕಾಲ ಸರಿದಂತೆ ಹೊಸ ಹೊಸ ವಿಭಾಗಗಳನ್ನು ಸೇರಿಸುತ್ತಾ, ಕೆಲವನ್ನು ತೆಗೆಯುತ್ತಾ ಅಥವಾ ಮಾರ್ಪಡಿಸುತ್ತಾ ಈಗ 23 ಸ್ಪರ್ಧಾ ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದೆ. ಜೊತೆಗೆ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮದ ಬೆಳವಣಿಗೆಗೆ ಸಲ್ಲಿಸಿದ ಅಮೋಘ ಸೇವೆಯನ್ನು ಸ್ಮರಿಸಿ ಜೀವಮಾನ ಸಾಧನೆಯ ಗೌರವ ಪ್ರಶಸ್ತಿಯನ್ನು ಜಗತ್ತಿನ ಚಿತ್ರೋದ್ಯಮಿಗಳಿಗೆ ನೀಡುತ್ತಾ ಬಂದಿದೆ. ಈ ಪ್ರಶಸ್ತಿ ಪುರಸ್ಕೃತರಲ್ಲಿ ಬರ್ಗ್‍ಮನ್, ಕುರಸೊವ, ಸತ್ಯಜಿತ್ ರೇ, ಫೆಲಿನಿ, ಮೈಕಲೇಂಜಲೋ ಆಂಟೋನಿಯಾನಿ, ಜಾನ್ ರೆನ್ವಾ, ಹಯಾಯೋ ಮಿಯಾಕಾಜಿ– ಹಾಲಿವುಡ್ ಜಗತ್ತಿಗೆ ಸೇರದ ನಿರ್ದೇಶಕರೂ ಸೇರಿದ್ದಾರೆ.
ಅಕಾಡೆಮಿಯ ಸ್ಪರ್ಧೆಯಲ್ಲಿ ಪ್ರವೇಶ ಪಡೆಯಲು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುವ ಅರ್ಹತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದೆ. ಈಗ ಜಗತ್ತಿನ ಯಾವುದೇ ಭಾಷೆಯ ಚಲನಚಿತ್ರವನ್ನು ನಿರ್ಮಾಣಕಾರರು ಅಕಾಡೆಮಿ ಪ್ರಶಸ್ತಿಗೆ ನೇರವಾಗಿ ಸಲ್ಲಿಸಬಹುದು. ಅಂಥ ಚಿತ್ರಗಳು ಅಕಾಡೆಮಿ ವಿಧಿಸಿರುವ ಮಾನದಂಡಗಳಿಗೆ ಅನುಗುಣವಾಗಿರಬೇಕು. ಅವೆಂದರೆ ಲಾಸ್ ಏಂಜಲೀಸ್ ಪ್ರಾಂತ್ಯದಲ್ಲಿರುವ ವಾಣಿಜ್ಯ ಚಿತ್ರಮಂದಿರದಲ್ಲಿ ಕನಿಷ್ಠ ಏಳು ನಿರಂತರ ದಿನಗಳ ಪ್ರದರ್ಶನವಾಗಿರಬೇಕು. ಬಿಡುಗಡೆ ವರ್ಷವು (ಜನವರಿ 1ರಿಂದ ಡಿಸೆಂಬರ್ 31ರೊಳಗೆ) ಅರ್ಹತಾ ವರ್ಷದೊಳಗೆ ಇರಬೇಕು. ನಲವತ್ತು ನಿಮಿಷಕ್ಕಿಂತ ಹೆಚ್ಚು ಅವಧಿಯ ಚಿತ್ರವಾಗಿರಬೇಕು. ಅಕಾಡೆಮಿಯ ತಾಂತ್ರಿಕ ಪ್ರದರ್ಶನ ಮಾನದಂಡಗಳನ್ನು ಪೂರೈಸಿರಬೇಕು. ಅನುಮೋದಿತ ಡಿಜಿಟಲ್ ಅಥವಾ ಫಿಲ್ಮ್ ಫಾರ್ಮ್ಯಾಟ್‌ನಲ್ಲಿ ಇರಬೇಕು. ಒಂದು ವೇಳೆ ಥಿಯೇಟರಿನಲ್ಲಿ ಬಿಡುಗಡೆ ಕಾಣದಿದ್ದರೆ ಅಕಾಡೆಮಿಯ ಸ್ಕ್ರೀನಿಂಗ್ ರೂಂನಲ್ಲಿ 12,500 ಡಾಲರ್ ಪಾವತಿಸಿ ಪ್ರದರ್ಶನ ಏರ್ಪಡಿಸಬಹುದು. ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಬಿಡುಗಡೆಯಾದ ಚಿತ್ರಗಳೂ ಅಕಾಡೆಮಿಯ ಥಿಯೇಟ್ರಿಕಲ್ ಪ್ರದರ್ಶನ ನಿಯಮಗಳನ್ನು ಪೂರೈಸಬೇಕು ಅಥವಾ ವಿಶೇಷ ನಿಯಮಾವಳಿಗೆ ಒಳಪಟ್ಟಿರಬೇಕು. ನಮ್ಮ ‘ರಂಗಿ ತರಂಗ’, ‘ಕಾಂತಾರ’, ಅನುಪಮ್ ಖೇರ್ ಅವರ ‘ತನ್ವಿ ದಿ ಗ್ರೇಟ್’ ಆಸ್ಕರ್ ಪ್ರವೇಶ ಪಡೆದದ್ದು ಈ ದಾರಿಯಲ್ಲಿ. ಅಂತಾರಾಷ್ಟ್ರೀಯ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅಕಾಡೆಮಿಯು ಆಯಾ ರಾಷ್ಟ್ರದಲ್ಲಿ ಮಾನ್ಯತೆ ನೀಡಿರುವ ಚಿತ್ರಸಂಸ್ಥೇಯು ಶಿಫಾರಸ್ಸು ಮಾಡಿ ಕಳಿಸುತ್ತದೆ. ನಮ್ಮಲ್ಲಿ ಫಿಲಂ ಫೆಡರೇಷನ್ ಆಫ್ ಇಂಡಿಯಾ ಈ ಹೊಣೆಯನ್ನು ಹೊತ್ತಿದೆ.
ಇದನ್ನು ಓದಿದ್ದೀರಾ?: ಕೈರೋ ಸ್ಟೇಷನ್: ಅರಬ್ ಸಿನೆಮಾದ ಆಧುನಿಕತೆಯ ಉದಯ ಮತ್ತು ಅಲಕ್ಷಿತ ಮಾನವನ ದುರಂತ
ಅಕಾಡೆಮಿಯಲ್ಲಿ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ನಿರ್ದೇಶಕರನ್ನೊಳಗೊಂಡ ಹತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದೂ ಸುಮಾರು 9,500ಕ್ಕೂ ಹೆಚ್ಚು ಮತದಾನ ಹಕ್ಕುಳ್ಳ ಸದಸ್ಯರಿರುತ್ತಾರೆ. ಅವರನ್ನು ನಟನೆ ಶಾಖೆ, ಬರಹಗಾರರ ಶಾಖೆ… ಹೀಗೆ ಚಲನಚಿತ್ರಕ್ಕೆ ಸಂಬಂಧಿಸಿದ 17 ತಜ್ಞ ಶಾಖೆಗಳಿಗೆ ಸದಸ್ಯರನ್ನಾಗಿ ನೇಮಿಸುತ್ತಾರೆ. ಚಲನಚಿತ್ರ ಪ್ರದರ್ಶನವನ್ನು ಅಕಾಡೆಮಿ, ಹಲವು ಸಮಯ ಚಿತ್ರದ ನಿರ್ಮಾಪಕರು, ವಿತರಕರು, ಸದಸ್ಯರಿಗೆ ವಿಶೇಷ ಪ್ರದರ್ಶನ ವ್ಯವಸ್ಥೆಗೊಳಿಸುವುದೂ ಇದೆ. ಈ ಶಾಖೆಯ ಸದಸ್ಯರು ಅರ್ಹ ಚಿತ್ರಗಳನ್ನು ನೋಡಿ ತಮ್ಮ ಶಾಖೆಗೆ ನಿರ್ದೇಶಿಸಿದ ವಿಭಾಗಕ್ಕೆ ಚಿತ್ರಗಳನ್ನು/ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುತ್ತಾರೆ. ಉದಾ, ಛಾಯಾಗ್ರಾಹಕ ಶಾಖೆಯವರು ಛಾಯಾಗ್ರಹಣ, ಸಂಗೀತ ಶಾಖೆಯವರು ಸಂಗೀತ… ಹೀಗೆ. ಆದರೆ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಎಲ್ಲ ಸದಸ್ಯರೂ ನಾಮನಿರ್ದೇಶನಕ್ಕೆ ಮತ ಹಾಕಬಹುದು. ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಮತ್ತು ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮ ನಿರ್ದೇಶನ ಮಾಡಲು ಆಯ್ದ ತಜ್ಞರ ವಿಶೇಷ ಸಮಿತಿಯ ಸದಸ್ಯರು ನಾಮನಿರ್ದೇಶನ ಮಾಡುತ್ತಾರೆ. ಅಂತಿಮವಾಗಿ ಹೆಚ್ಚು ಮತ ಪಡೆದ ನಿರ್ದಿಷ್ಟ ಸಂಖ್ಯೆಯ(ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಹತ್ತು, ಉಳಿದ ವಿಭಾಗದಲ್ಲಿ ತಲಾ ಐದು) ಚಿತ್ರಗಳು ನಾಮನಿರ್ದೇಶನಗೊಳ್ಳುತ್ತವೆ. ಅಂತಿಮ ಸುತ್ತಿನಲ್ಲಿ ಎಲ್ಲಾ ಸದಸ್ಯರು ಎಲ್ಲಾ ವಿಭಾಗಗಳಲ್ಲಿ ಮತ ಹಾಕುತ್ತಾರೆ. ಮತಗಳ ಎಣಿಕೆಯನ್ನು ಅಕಾಡೆಮಿಯ ಸ್ವತಂತ್ರ ಸಂಸ್ಥೆ ಕಟ್ಟುಪಾಡಿನಿಂದ ನಿರ್ವಹಿಸುತ್ತದೆ. ಫಲಿತಾಂಶಗಳು ಸಮಾರಂಭದವರೆಗೆ ರಹಸ್ಯವಾಗಿರುತ್ತವೆ. ಕೊನೆಗೆ ಅತಿ ಹೆಚ್ಚು ಮತ ಪಡೆದವರನ್ನು ವಿಜೇತರೆಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುವ ನೇರ ಪ್ರಸಾರದಲ್ಲಿ ”ಅಂಡ್ ದಿ ಆಸ್ಕರ್ ಗೋಸ್ ಟು…” ಎನ್ನುವ ನುಡಿಯಿಂದ ಘೋಷಣೆಯಾಗುತ್ತದೆ. ಪ್ರಶಸ್ತಿ ವಿಜೇತರು ಗರಿಷ್ಠ 45 ಸೆಕೆಂಡುಗಳ ಅವಧಿಯಲ್ಲಿ ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣ ಮುಗಿಸಬೇಕು. ಅವಧಿ ಮೀರಿ ಮಾತನಾಡಿದರೆ ಮೈಕ್ ಆಫ್ ಆಗುತ್ತದೆ! 1953ರಲ್ಲಿ ದೂರದರ್ಶನ ಪ್ರಸಾರ ಆರಂಭವಾದ ನಂತರ, ಆಸ್ಕರ್‌ಗಳು ಕೇವಲ ಉದ್ಯಮದ ಕಾರ್ಯಕ್ರಮವಲ್ಲ, ಜಾಗತಿಕ ವೈಭವದ ಕಾರ್ಯಕ್ರಮವಾಗಿದೆ.
ಆಸ್ಕರ್‌ಗಳ ಖ್ಯಾತಿಯ ಜೊತೆಗೆ ಹಲವು ವಿವಾದಗಳೂ ಎದುರಾಗಿವೆ. ಮೊದಲು ಅಕಾಡೆಮಿಯಲ್ಲಿ ಕಪ್ಪು ಜನರ ಪ್ರಾತಿನಿಧ್ಯವೇ ಇಲ್ಲದಿರುವ ಬರೀ ಬಿಳಿಯರ ಗುಂಪೆಂಬ ಟೀಕೆ ಎದುರಿಸಿತು. ಜೊತೆಗೆ ಕಪ್ಪು ಕಲಾವಿದರ, ಮುಖ್ಯವಾಗಿ ಕಪ್ಪು ಕಲಾವಿದೆಯರ ಅಭಿನಯವನ್ನು ಗಣನೆಗೆ ತೆಗೆದುಕೊಳ್ಳದ ಸಕಾರಣ ಆರೋಪ, ಪ್ರತಿಭಟನೆ ನಡೆಯಿತು. ವಿಶೇಷವಾಗಿ ”ಬೆಸ್ಟ್ ಡೈರೆಕ್ಟರ್” ವಿಭಾಗದಲ್ಲಿ ಮಹಿಳೆಯರ ಪ್ರತಿನಿಧಿತ್ವ ಕಡಿಮೆಯಿದೆ ಎಂಬ ಟೀಕೆ ಈಗಲೂ ಇದೆ. ನಂತರ ಅಕಾಡೆಮಿ ಸದಸ್ಯತ್ವದಲ್ಲಿ ವೈವಿಧ್ಯವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿತು. ಕಪ್ಪು ಕಲಾವಿದರನ್ನು ಉಪೇಕ್ಷೆ ಮಾಡುವ ವಿಧಾನ ಕೊನೆಯಾಯಿತು.
ಸಮಾರಂಭವು ಅತಿಯಾದ ಜಾಹೀರಾತು ಮತ್ತು ವೈಭವಕ್ಕೆ ಒತ್ತು ನೀಡುತ್ತಿದ್ದು ಸಿನೆಮಾ ಕಲಾತ್ಮಕತೆಯ ಸ್ಥಾನದಲ್ಲಿ ವಾಣಿಜ್ಯ ಸಂಗತಿಗಳೇ ರಾರಾಜಿಸುತ್ತವೆ ಎಂಬ ಆರೋಪವೂ ಇದೆ.

ಪ್ರಶಸ್ತಿ ಸ್ವೀಕಾರ ಭಾಷಣಗಳಲ್ಲಿ ರಾಜಕೀಯ ಅಭಿಪ್ರಾಯಗಳು ವ್ಯಕ್ತವಾಗುವುದರಿಂದ ”ಕಲೆ ಮತ್ತು ರಾಜಕೀಯದ ಸಂಬಂಧ” ಕುರಿತು ಚರ್ಚೆಗಳು ಬಿರುಸು ಪಡೆದ ಉದಾಹರಣೆಗಳಿವೆ. 1973ರಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ‘ಗಾಡ್‍ಫಾದರ್’ ಚಿತ್ರದ ನಟನೆಗೆ ನೀಡಿದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಿರಾಕರಿಸಿದ ನಟ ಮರ್ಲಾನ್ ಬ್ರಾಂಡೋ ತನ್ನ ಪರವಾಗಿ ರೆಡ್ ಇಂಡಿಯನ್ ಮಹಿಳೆಯನ್ನು ಸಮಾರಂಭಕ್ಕೆ ಕಳುಹಿಸಿ ರೆಡ್ ಇಂಡಿಯನ್ನರನ್ನು ಅನಾಗರಿಕರು, ಕಾಮುಕರು, ಹಿಂಸಾ ಪಿಶಾಚಿಗಳು ಎನ್ನುವ ರೀತಿಯಲ್ಲಿ narrative ಕಟ್ಟಿದ ಹಾಲಿವುಡ್ ಸಿನೆಮಾ ಪ್ರವೃತ್ತಿಯನ್ನು ಖಂಡಿಸುವ ಪತ್ರ ಓದಿಸಿದರು.
ಅನೇಕ ಸಂದರ್ಭದಲ್ಲಿ ಪ್ರಶಸ್ತಿಗೆ ನಿಜವಾಗಿಯೂ ಅರ್ಹವಾದ ಚಿತ್ರಗಳು ಲಾಬಿಯ ದೆಸೆಯಿಂದಲೋ, ರಾಜಕೀಯ ಒತ್ತಡದಿಂದಲೋ ಪ್ರಶಸ್ತಿಯಿಂದ ವಂಚಿತವಾಗಿರುವ ಉದಾಹರಣೆಗಳೂ ಇವೆ. ಮೀರಾಮ್ಯಾಕ್ಸ್ ಕಂಪನಿಯ ಕುಪ್ರಸಿದ್ಧ ನಿರ್ಮಾಪಕ ಹಾರ್ವೆ ವೇನ್ಸ್‌ಸ್ಟೀನ್ ತನ್ನ ಆಕ್ರಮಣಕಾರಿ ಪ್ರಚಾರ, ತೀವ್ರ ಲಾಬಿ ಮತ್ತು ಸದಸ್ಯರನ್ನು ಸಂಪರ್ಕಿಸಿ ಪ್ರಭಾವ ಬೀರುವ ಕಲೆಯಿಂದಲೇ ಪ್ರಶಸ್ತಿ ಗಳಿಸುತ್ತಿದ್ದನೆಂಬ ಆರೋಪವೂ ಇದೆ.
ಭಾರತ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮುಂತಾದ ದೇಶಗಳಿಗೆ ತಮ್ಮದೇ ಪ್ರಮುಖ ಪ್ರಶಸ್ತಿಗಳಿದ್ದರೂ, ಆಸ್ಕರ್ ಪ್ರಶಸ್ತಿಗೆ ಹೆಚ್ಚು ಆದ್ಯತೆ ನೀಡುತ್ತವೆ. ಸರ್ಕಾರದ ಸಂಸ್ಥೆಗಳೇ ಮುಂದಾಗಿ ತಮ್ಮ ದೇಶದ ಚಿತ್ರಗಳ ಪರ ಪ್ರಚಾರಕ್ಕಿಳಿಯುತ್ತವೆ. ಹಾಗಾಗಿ ಆ ದೇಶದ ಚಿತ್ರಗಳು ಆಸ್ಕರ್ ಸ್ಪರ್ಧೆಯಲ್ಲಿ ಸದಾ ಮುಂದಿರುತ್ತವೆ. ಆದರೂ ಆಸ್ಕರ್‌ಗಳು ಹಾಲಿವುಡ್ ಮೌಲ್ಯಗಳನ್ನು ಹೆಚ್ಚು ಪ್ರತಿಬಿಂಬಿಸುತ್ತವೆ ಎಂಬ ಟೀಕೆಗಳೂ ಮುಂದುವರಿದಿವೆ. ಹಾಗಿದ್ದರೂ, ಚಲನಚಿತ್ರ ಕಲೆಯ ಶ್ರೇಷ್ಠತೆಯ ಸಂಕೇತವಾಗಿ ಆಸ್ಕರ್‌ಗಳ ಸ್ಥಾನ ಅಬಾಧಿತವಾಗಿ ಮುಂದುವರೆದಿದೆ.
1929ರಲ್ಲಿ ಆರಂಭವಾದ ಸರಳ ಭೋಜನ ಸಮಾರಂಭವು ಇಂದು ಜಗತ್ತಿನ ಅತಿ ದೊಡ್ಡ ಚಲನಚಿತ್ರ ವೈಭವದ ಕಾರ್ಯಕ್ರಮವಾಗಿದೆ. ಅಕಾಡೆಮಿ ಪ್ರಶಸ್ತಿಗಳು ಕಲಾತ್ಮಕ ಸಾಧನೆಗಳನ್ನು ಗೌರವಿಸುವುದರ ಜೊತೆಗೆ ಜಾಗತಿಕ ಚಲನಚಿತ್ರ ಸಂಸ್ಕೃತಿಯನ್ನು ರೂಪಿಸುವ ಶಕ್ತಿಯಾಗಿವೆ.
ಆಸ್ಕರ್ ಪ್ರತಿಮೆ ಕೇವಲ ಲೋಹದ ಶಿಲ್ಪವಲ್ಲ- ಅದು ಕಥೆ ಹೇಳುವ ಕಲೆಯ ಮಹತ್ವವನ್ನು, ಮಾನವ ಅನುಭವದ ವೈವಿಧ್ಯತೆಯನ್ನು ಮತ್ತು ಸಿನೆಮಾದ ಶಾಶ್ವತ ಪ್ರಭಾವವನ್ನು ಪ್ರತಿನಿಧಿಸುವ ಸಂಕೇತವಾಗಿದೆ.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.




