ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದಲ್ಲಿ ಶನಿವಾರ ಭಾರೀ ತೀವ್ರತೆಯ ಸರಣಿ ಭೂಕಂಪನ ಸಂಭವಿಸಿದೆ. ಸುಮಾರು 2,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಆಡಳಿತ ಹೇಳಿದೆ. ಮೃತದಲ್ಲಿ ಶೇ.90ರಷ್ಟು ಮಂದಿ ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಫ್ಘಾನ್‌ನ ಹೆರಾತ್ ಪ್ರಾಂತ್ಯದಲ್ಲಿ 6.3 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿತ್ತು. ಭೂಕಂಪನದ ಕುರಿತು ವಿಶ್ವಸಂಸ್ಥೆ ವರದಿ ಬಿಡುಗಡೆ ಮಾಡಿದ್ದು, 1,294 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 1,688 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
“ಶುಕ್ರವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಆ ವೇಳೆ, ಮಹಿಳೆಯರು ಮತ್ತು ಮಕ್ಕಳು ಮನೆಯಲ್ಲಿದ್ದರು. ಪುರುಷರು ಉದ್ಯೋಗಕ್ಕಾಗಿ ಇರಾನ್‌ಗೆ ವಲಸೆ ಹೋಗಿದ್ದರು. ಹೀಗಾಗಿ, ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ. ಒಂದು ವೇಳೆ, ರಾತ್ರಿ ಭೂಕಂಪ ಸಂಭವಿಸಿದ್ದರೆ ಸಾವಿನ ಸಂಖ್ಯೆಗೆ ಲೆಕ್ಕವೇ ಇರುತ್ತಿರಲಿಲ್ಲ” ಎಂದು ವಿಶ್ವಸಂಸ್ಥೆಯ ಅಫ್ಘಾನಿಸ್ತಾನದ ಪ್ರತಿನಿಧಿ ಜೈಮ್ ನಡಾಲ್ ಹೇಳಿದ್ದಾರೆ.
ಭೂಕಂಪದಿಂದ ಇಡೀ ಹಳ್ಳಿಯೇ ನಾಶಗೊಂಡಿದೆ. ನೂರಾರು ಮನೆಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು ನೆಲಸಮಗೊಂಡಿವೆ. ವಿಶ್ವಸಂಸ್ಥೆಯು ಆಂಬುಲೆನ್ಸ್‌ಗಳನ್ನು ಒದಗಿಸಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿಶ್ವ ಆಹಾರ ಕಾರ್ಯಕ್ರಮದಡಿ 81 ಟನ್ ಆಹಾರವನ್ನು ಕಳುಹಿಸುತ್ತಿದೆ ಎಂದು ವಿಶ್ವಸಂಸ್ಥೆ ವಕ್ತಾರರು ತಿಳಿಸಿದ್ದಾರೆ.




