ಭಾನುವಾರ (ಫೆ.22) ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದ ನಂಗರ್‌ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ. ಆ ಪ್ರದೇಶಗಳಲ್ಲಿರುವ ಟಿಟಿಪಿ ಮತ್ತು ಐಎಸ್‌ಕೆಪಿ ಭಯೋತ್ಪಾದಕ ಸಂಘಟನೆಗಳ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಈ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 17 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಹೇಳಿಕೊಂಡಿದೆ. ಪಾಕ್ ಸೇನೆಯ ಕ್ರಮಕ್ಕೆ ಪ್ರತ್ಯುತ್ತರ ನೀಡುವುದಾಗಿಯೂ ಎಚ್ಚರಿಕೆ ನೀಡಿದೆ.
2021ರಲ್ಲಿ ಅಫ್ಘಾನ್ ಆಡಳಿತವನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಪರಸ್ಪರ ಸಹಕಾರದಿಂದಿದ್ದ ಅಫ್ಘಾನ್ ಮತ್ತು ಪಾಕ್ ನಡುವೆ ಕಳೆದ ಕೆಲವು ತಿಂಗಳುಗಳಿಂದ ಸಂಘರ್ಷ ಭುಗಿಲೆದ್ದಿದೆ. 2025ರ ಅಕ್ಟೋಬರ್‌ನಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಗಡಿ ಘರ್ಷಣೆ ನಡೆಸಿದ್ದರು. ಪಾಕಿಸ್ತಾನದ 12 ಸೈನಿಕರನ್ನು ಅಫ್ಘಾನ್ ತಾಲಿಬಾನ್‌ಗಳು ಹತ್ಯೆಗೈದಿದ್ದರು. ಅಂದಿನಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಇದೆ. ಇದೀಗ, ಅಫ್ಘಾನ್ ಮೇಲೆ ಪಾಕ್ ದಾಳಿ ಮಾಡಿದೆ.
ಅಂದಹಾಗೆ, ಅಫ್ಘಾನ್‌ನಲ್ಲಿ ಮೂಲಭೂತವಾದಿ, ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಅನ್ನು ಬೆಳೆಸಿದ್ದೇ ಪಾಕಿಸ್ತಾನ ಎಂಬುದು ಸುಳ್ಳಲ್ಲ. 1990ರ ದಶಕದಲ್ಲಿ ಪಾಕಿಸ್ತಾನದ ಐಎಸ್‌ಐ ಗುಪ್ತಚರ ಸಂಸ್ಥೆಯು ತಾಲಿಬಾನ್ ರಚನೆಗೆ ನೇರವಾಗಿ ಸಹಾಯ ಮಾಡಿತ್ತು. ಅಫ್ಘಾನ್‌ನಲ್ಲಿ 1996ರಿಂದ 2001ರವರೆಗೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಅವರ ಆಡಳಿತವನ್ನು ಗುರುತಿಸಿದ ಮತ್ತು ಸಹಕಾರ ನೀಡಿದ ಮೂರು ರಾಷ್ಟ್ರಗಳಲ್ಲಿ ಪಾಕಿಸ್ತಾನವೂ (ಸೌದಿ, ಯುಎಇ- ಉಳಿದ ಎರಡು) ಒಂದಾಗಿತ್ತು. ಆ ಸಮಯದಲ್ಲಿ ಪಾಕ್ ಸಹಕಾರವನ್ನು ‘ಸ್ಟ್ರಾಟಜಿಕ್ ಡೆಪ್ತ್’ (ತಂತ್ರಗಾರಿಕೆ) ಎಂದು ಕರೆಯಲಾಗಿತ್ತು. ಭಾರತದ ವಿರುದ್ಧ ಅಫ್ಘಾನಿಸ್ತಾನದಲ್ಲಿ ಬೆಂಬಲಿತ ಶಕ್ತಿಯನ್ನು ಹೊಂದುವುದು ಪಾಕ್‌ನ ಉದ್ದೇಶವೆಂದೇ ಹೇಳಲಾಗಿತ್ತು. 2001ರಲ್ಲಿ ಅಮೆರಿಕ ನೇತೃತ್ವದ ‘ವಾರ್ ಆನ್ ಟೆರರ್’ ಗುಂಪಿಗೆ ಪಾಕಿಸ್ತಾನ ಸೇರಿಕೊಂಡರೂ, ತಾಲಿಬಾನ್‌ಗೆ ಪಾಕ್ ಗುಪ್ತವಾಗಿ ಆಶ್ರಯ-ಬೆಂಬಲ ನೀಡುತ್ತಿದೆ. ತಾಲಿಬಾನ್ ತಮ್ಮ ನಾಯಕರನ್ನು ಪಾಕಿಸ್ತಾನದಲ್ಲಿ ಮರೆಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು ಎಂಬ ಆರೋಪಗಳು ಇದ್ದವು.
ಈ ಮಟ್ಟಿಗೆ, ತಾಲಿಬಾನ್‌ಗೆ ಬೆನ್ನೆಲುಬಾಗಿ ನಿಂತಿದ್ದ ಪಾಕಿಸ್ತಾನ, ಇದೀಗ ತಾಲಿಬಾನ್ ಆಡಳಿತದ ಆಫ್ಘಾನ್ ವಿರುದ್ಧ ಗಡಿ ಸಂಘರ್ಷ ನಡೆಸುತ್ತಿದೆ. ಇದಕ್ಕೆ, ಈ ಹಿಂದೆ ಅಫ್ಘಾನ್ ಸರ್ಕಾರ ಹುಟ್ಟುಹಾಕಿದ್ದ ‘ಟೆಹ್ರೀಕ್-ಇ-ತಲಿಬಾನ್ ಪಾಕಿಸ್ತಾನ’ (ಟಿಟಿಪಿ) ಸಂಘಷನೆಗೆ ಇಂದಿನ ತಾಲಿಬಾನ್ ಸರ್ಕಾರವೂ ಬೆಂಬಲ ನೀಡುತ್ತಿದೆ ಎಂಬುದೇ ಮುಖ್ಯ ಕಾರಣವೂ ಆಗಿದೆ.
ಗಮನಾರ್ಹವಾಗಿ, ಈ ಅಫ್ಘಾನ್-ಪಾಕ್ ನಡುವಿನ ಗಡಿ ಸಂಘರ್ಷ ಇಂದು-ನಿನ್ನೆಯದಲ್ಲ. ಅದು, ಬರೋಬ್ಬರಿ 130 ವರ್ಷಗಳಷ್ಟು ಹಳೆಯದು. ಈ ಘರ್ಷಣೆಯ ಕೇಂದ್ರಬಿಂದು ಉಭಯ ರಾಷ್ಟ್ರಗಳ ನಡುವಿನ 2,600 ಕಿ.ಮೀ ಉದ್ದದ ಗಡಿ ರೇಖೆ ‘ಡ್ಯುರಾಂಡ್ ಲೈನ್’. 1893ರಲ್ಲಿ ಭಾರತದ ಬ್ರಿಟಿಷ್ ಅಧಿಕಾರಿ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನ್ ಎಮಿರ್ ಅಬ್ದುರ್ ರಹ್ಮನ್ ಖಾನ್ ನಡುವಿನ ಒಪ್ಪಂದದಿಂದ ರೂಪುಗೊಂಡ ಗಡಿ ‘ಡ್ಯುರಾಂಡ್ ಲೈನ್’. ಈ ಗಡಿಯು ಪಶ್ತೂನ್ ಜನರನ್ನು ಪಾಕ್-ಅಫ್ಘಾನ್ ಗಳ ನಡುವೆ ವಿಭಜಿಸಿದೆ. ಅಫ್ಘಾನಿಸ್ತಾನವು ಈ ಗಡಿಯನ್ನು ತನ್ನ ಮೇಲೆ ಹೇರಲಾದ ‘ಬಲವಂತದ ಗಡಿ’ ಎಂದು ಭಾವಿಸಿದೆ. ಆ ಗಡಿಯನ್ನು ದಾಟಿ, ಪಾಕ್ ಪ್ರದೇಶವನ್ನೂ ಒಳಗೊಂಡು ‘ಪಶ್ತೂನಿಸ್ತಾನ್’ ಎಂಬ ಸ್ವತಂತ್ರ ರಾಜ್ಯ ರಚನೆಯ ಗುರಿ ಹೊಂದಿದೆ.
ಆದ್ದರಿಂದಲೇ, 1919ರಲ್ಲಿ ಅಫ್ಘಾನಿಸ್ತಾನದ ಎಮಿರ್ ಅಮಾನುಲ್ಲಾ ಖಾನ್ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಯುದ್ಧ (ಮೂರನೇ ಆಂಗ್ಲೋ-ಅಫ್ಘಾನ್ ಯುದ್ಧ) ಘೋಷಿಸಿದರು. ಡ್ಯುರಾಂಡ್ ಲೈನ್‌ನ ನಿಯಂತ್ರಣವನ್ನು ಭೇದಿಸಿ, ಪಶ್ತೂನಿಗಳು ವಾಸಿಸುತ್ತಿದ್ದ ಪ್ರದೇಶವನ್ನು ತನ್ನ ತೆಕ್ಕೆಗೆ ಪಡೆಯಲು ಯತ್ನಿಸಿತು. ಆದಾಗ್ಯೂ, ರಾವಲ್ಪಿಂಡಿ ಒಪ್ಪಂದದ (1919) ಮೂಲಕ ಅಫ್ಘಾನಿಸ್ತಾನ ಸ್ವಾತಂತ್ರ್ಯ ಪಡೆಯಿತು. ಆದರೆ, ಗಡಿ ವಿವಾದ ಹಾಗೆಯೇ ಉಳಿಯಿತು.
ಒಪ್ಪಂದದ ಮುಗಿದ ಬಳಿಕ, 1920–1940ರ ನಡುವೆ, ಪಶ್ತೂನ್ ರಾಷ್ಟ್ರೀಯತಾವಾದವು ಅಫ್ಘಾನಿಸ್ತಾನದಲ್ಲಿ ತೀವ್ರಗೊಂಡಿತು. ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹ ನಾಯಕರು ಬ್ರಿಟಿಷ್ ಭಾರತದ ಭಾಗವಾಗಿದ್ದ (ಈಗಿನ ಪಾಕ್ ಭಾಗ) ಖೈಬರ್ ಪಕ್ತುಂಕ್ವಾ ಮತ್ತು ಅಫ್ಘನ್‌ನ ಕೆಲವು ಪ್ರಾಂತ್ಯಗಳನ್ನು ಒಳಗೊಂಡು ‘ಪಶ್ತೂನಿಸ್ತಾನ್’ ಎಂಬ ಸ್ವತಂತ್ರ ರಾಜ್ಯ ನಿರ್ಮಾಣದ ಆಲೋಚನೆಯನ್ನು ಹುಟ್ಟುಹಾಕಿದರು. ಈ ಪ್ರಸ್ತಾಪವನ್ನು ಅಫ್ಘಾನ್ ಸರ್ಕಾರ ಬೆಂಬಲಿಸಿತು. ಪರಿಣಾಮ, ಬ್ರಿಟಿಷರ ಜೊತೆಗಿನ ಸಂಘರ್ಷ ಮುಂದುವರೆಯಿತು.
‘ಪಶ್ತೂನಿಸ್ತಾನ್’ ರಚನೆಯ ವಾದವು ಮುನ್ನೆಲೆಯಲ್ಲಿದ್ದ ಸಮಯದಲ್ಲಿಯೇ 1947ರಲ್ಲಿ ಭಾರತದಿಂದ ವಿಭಜನೆಗೊಂಡು ಪಾಕಿಸ್ತಾನ ರಚನೆಯಾಯಿತು. ಆಗಲೂ, ‘ಡ್ಯುರಾಂಡ್ ಲೈನ್’ ಬದಲಾವಣೆಗಾಗಿ ಅಫ್ಘಾನಿಸ್ತಾನ ಒತ್ತಾಯಿಸಿತು. ಮಾತ್ರವಲ್ಲದೆ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡಬಾರದೆಂದು ಪಟ್ಟುಹಿಡಿಯಿತು. ಆ ಸಂದರ್ಭದಲ್ಲಿ, ಅಫ್ಘಾನ್ ರಾಜ ಜಹೀರ್ ಶಾ ಅವರು ‘ಗ್ರೇಟರ್ ಪಶ್ತೂನಿಸ್ತಾನ್’ ಕಲ್ಪನೆಯನ್ನು ಮುಂದಿಟ್ಟರು. ಇದು ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಮತ್ತು ಬಲೂಚಿಸ್ತಾನದ ಭಾಗವನ್ನು ಒಳಗೊಂಡ ರಾಜ್ಯ ನಿರ್ಮಾಣವನ್ನು ಪ್ರಸ್ತಾಪಿಸಿತು.
ಈ ಲೇಖನ ಓದಿದ್ದೀರಾ?: ʼರೆಸಾರ್ಟ್ ಲಾಬಿʼಗೆ ಮಣಿದ ಸರ್ಕಾರದಿಂದ ಬಂಡೀಪುರ-ನಾಗರಹೊಳೆ ಸಫಾರಿ ಪುನರಾರಂಭ: ರೈತರ ಆರೋಪ
1949-50ರಲ್ಲಿ ಅಫ್ಘಾನ್-ಪಾಕ್ ಗಡಿಯಲ್ಲಿ ನಿರಂತರ ಗಡಿಯಾಚೆಗಿನ ದಾಳಿಗಳು ನಡೆದವು. ಅಫ್ಘಾನ್ ಬೆಂಬಲಿತ ಪಶ್ತೂನ್ ಗಿರಿಜನ ಗುಂಪುಗಳು ಪಾಕ್ ಗಡಿಯಲ್ಲಿ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏರ್ ಸ್ಟ್ರೈಕ್‌ಗಳ ಮೂಲಕ ಪ್ರತೀಕಾರ ತೀರಿಸಿತು.
1963ರಲ್ಲಿ ಅಫ್ಘಾನ್ ಪ್ರಧಾನಿ ಮೊಹಮ್ಮದ್ ದಾವೂದ್ ಖಾನ್ ಅವರು ‘ಪಶ್ತೂನ್ ರಾಷ್ಟ್ರೀಯತಾವಾದ’ವನ್ನು ತೀವ್ರಗೊಳಿಸಿದರು. ಇದರಿಂದ ಗಡಿ ಘರ್ಷಣೆಗಳು ಹೆಚ್ಚಾದವು. 1973ರಲ್ಲಿ ರಾಜಕೀಯ ಒತ್ತಡದಿಂದಾಗಿ ದಾವೂದ್ ಅವರು ಅಧಿಕಾರದಿಂದ ಕೆಳಗಿಳಿದರು. ಆದರೂ, ಪಶ್ತೂನ್ ರಾಷ್ಟ್ರೀಯತಾವಾದ ಬೆಂಕಿಯ ಉಂಡೆಯಾಗಿಯೇ ಉಳಿಯಿತು.
ಇದೆಲ್ಲದರ ನಡುವೆ, ಸೋವಿಯತ್ ಒಕ್ಕೂಟವು 1979ರಲ್ಲಿ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿತು. ಈ ಸಂದರ್ಭದಲ್ಲಿ ಅಫ್ಘಾನ್ ನಲ್ಲಿ ಪಾಕ್ ಚಟುವಟಿಕೆಗಳು ಹೆಚ್ಚಾಯಿತು. ಜೊತೆಗೆ, ಅಫ್ಘಾನ್ ಜನರಲ್ಲಿ ಪಾಕ್ ವಿರೋಧಿ ಭಾವನೆಯೂ ಹೆಚ್ಚಿತು.
ಅಫ್ಘಾನ್ -ಸೋವಿಯನ್ ಯುದ್ಧದಲ್ಲಿ ಸುಮಾರು 30 ಲಕ್ಷ ಅಫ್ಘಾನ್ ಶರಣಾರ್ಥಿಗಳು ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡರು. ಇದು ಗಡಿ ಪ್ರದೇಶಗಳಲ್ಲಿ ಜನಸಂಖ್ಯಾ ಒತ್ತಡ ಮತ್ತು ಜಾತೀಯ ಒಡಕುಗಳನ್ನು ಹೆಚ್ಚಿಸಿತು.
ಇದೇ ಹೊತ್ತಿನಲ್ಲಿ, ಪಾಕಿಸ್ತಾನದ ಐಎಸ್‌ಐ ಬೆಂಬಲದೊಂದಿಗೆ, 1994ರಲ್ಲಿ ತಾಲಿಬಾನ್ ಎಂಬ ಉಗ್ರಗಾಮಿ ಸಂಘಟನೆ ಹುಟ್ಟಿಕೊಂಡಿತು. ತಾಲಿಬಾನ್‌ಗೆ ಪಾಕಿಸ್ತಾನ ಆಶ್ರಯ ನೀಡಿತು. ಅಗತ್ಯ ನೆರವನ್ನೂ ಒದಗಿಸಿತು. ಪರಿಣಾಮವಾಗಿ, 1996ರಲ್ಲಿ ಕಾಬುಲ್‌ಅನ್ನು ತಾಲಿಬಾನ್ ವಶಪಡಿಸಿಕೊಂಡಿತು. ಇದನ್ನು ಅಫ್ಘಾನ್ ಜನರು ‘ಪಾಕ್ ಆಕ್ರಮಣ’ವೆಂದು ಭಾವಿಸಿದರು. ಆದಾಗ್ಯೂ, ತಾಲಿಬಾನ್ ಕೂಡ ಅಫ್ಘಾನ್ -ಪಾಕ್ ನಡುವಿನ ಗಡಿ ಸಂಘರ್ಷವನ್ನು ಕೊನೆಗಾಣಿಸಲಿಲ್ಲ.
ತಾಲಿಬಾನ್ ನಿಯಂತ್ರಣದಲ್ಲಿದ್ದ ಅಫ್ಘಾನ್ ಮೇಲೆ 2001ರಲ್ಲಿ ಅಮೆರಿಕ ದಾಳಿ ನಡೆಸಿತು. ತಾಲಿಬಾನ್ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಿ, ಪ್ರಜಾತಾಂತ್ರಿತ ಸರ್ಕಾರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿತು. ಆದರೆ, ಅಮೆರಿಕದ ಮಿತ್ರ ರಾಷ್ಟ್ರವೇ ಆಗಿದ್ದ ಪಾಕಿಸ್ತಾನವು ತಾಲಿಬಾನ್ ಮತ್ತು ಅಲ್-ಖೈದಾ ನಾಯಕರಿಗೆ ಆಶ್ರಯ ನೀಡಿತು.
ತಾಲಿಬಾನ್ ವಿರುದ್ಧ ಅಫ್ಘಾನಿಸ್ತಾನವು ‘ಟೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ’ (ಟಿಟಿಪಿ) ಸಂಘಟನೆಯನ್ನು ಹುಟ್ಟುಹಾಕಿತು. ಇದು, ಅಫ್ಘಾನ್ ಗಡಿಯಲ್ಲಿ ಆಶ್ರಯ ಪಡೆದು, ಪಾಕ್ ಮೇಲೆ ನಿರಂತರ ದಾಳಿ ನಡೆಸಿತು. 2014ರಲ್ಲಿ ಪೇಶಾವರ್ ಸ್ಕೂಲ್ ಮೇಲೆ ಟಿಟಿಪಿ ನಡೆಸಿದ ಭೀಕರ ದಾಳಿಯಲ್ಲಿ 141 ಮಕ್ಕಳು ಹತರಾದರು.
ಈ ಲೇಖನ ಓದಿದ್ದೀರಾ?: ಭಾರತದಲ್ಲಿ ಮಾವೋವಾದ ಅಳಿಯಿತೇ; ಕಮ್ಯೂನಿಸ್ಟ್ ವಿಚಾರಧಾರೆಗೆ ಸಂಘಪರಿವಾರ ಭಯಪಡುವುದೇಕೆ?
ಅಫ್ಘಾನ್ ಜೊತೆಗಿನ ಗಡಿ ಸಂಘರ್ಷ ಮತ್ತು ಟಿಟಿಪಿ ದಾಳಿಗಳಿಂದ ಬಳಲಿರುವ ಪಾಕಿಸ್ತಾನ, 2017ರಲ್ಲಿ ‘ಡ್ಯುರಾಂಡ್ ಲೈನ್’ನಲ್ಲಿ ಗಡಿ ನಿರ್ಮಾಣ ಮಾಡಲು ಆರಂಭಿಸಿತು. ಗಡಿಯುದ್ದಕ್ಕೂ ಮುಳ್ಳಿನ ತಂತಿ ಅಳವಡಿಕೆಯನ್ನು ಆರಂಭಿಸಿತು. ಪಾಕ್ ನಡೆಯನ್ನು ಅಫ್ಘಾನ್ ವಿರೋಧಿಸಿತು. ರಾಜಕೀಯ ಒತ್ತಡ ಹಾಕಲು ಆರಂಭಿಸಿತು. ಆದಾಗ್ಯೂ, ಗಡಿ ನಿರ್ಮಾಣ ಕಾಮಗಾರಿಯನ್ನು ಪಾಕ್ ಬಹುತೇಕ ಮುಗಿಸಿದೆ. ಈವರೆಗೆ, 4,468 ಕೋಟಿ ರೂ. ವೆಚ್ಚ ಮಾಡಿದೆ. ಸೈನಿಕರ ಸಂಖ್ಯೆಯನ್ನೂ ಹೆಚ್ಚಿಸಿದೆ.
ಈ ನಡುವೆ, ಅಫ್ಘಾನ್ ಅನ್ನು 2021ರಲ್ಲಿ ತಾಲಿಬಾನ್ ಮತ್ತೆ ವಶಕ್ಕೆ ಪಡೆದು, ಅಧಿಕಾರ ಸ್ಥಾಪಿಸಿತು. ಪಾಕಿಸ್ತಾನವೂ ನೆರವು ನೀಡಿತು. ಆದರೆ, ಕಳೆದ ವರ್ಷದಿಂದ ಅಫ್ಘಾನ್ ಮತ್ತು ಪಾಕ್ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ಏರಿಕೆಯಾಗಿದೆ. ಟಿಟಿಪಿ ದಾಳಿಗೆ ತಾಲಿಬಾನ್ ಬೆಂಬಲ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. 2025ರಲ್ಲಿಯೇ ಟಿಟಿಪಿ ಪಾಕ್ ಮೇಲೆ ಸುಮಾರು 200 ದಾಳಿಗಳನ್ನು ನಡೆಸಿದ್ದು, 194 ಮಂದಿಯನ್ನು ಕೊಂದಿದೆ.
ಕಳೆದ 130 ವರ್ಷಗಳಲ್ಲಿ, ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧಗಳು ಡ್ಯುರಾಂಡ್ ಲೈನ್ ವಿವಾದದಿಂದ ಹಿಡಿದು ಭಯೋತ್ಪಾದನೆಯವರೆಗೆ ವಿವಿಧ ಹಂತಗಳಲ್ಲಿ ಉದ್ವಿಗ್ನಗೊಂಡಿದೆ. ಈ ಸಂಘರ್ಷವನ್ನು ಕೊನೆಗಾಣಸಲು ವಿಶ್ವಸಂಸ್ಥೆಯ ಮಧ್ಯಪ್ರವೇಶಿಕೆ, ಗಡಿ ಮಾತುಕತೆಗಳು, ಚೀನಾ ಮಧ್ಯಸ್ಥಿಕೆಗಳು ಹೆಚ್ಚಾದರೆ ಗಡಿ ಸಂಘರ್ಷ ಕೊನೆಗೊಳ್ಳಬಹುದು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶ ಇದ್ದಂತೆ ಕಾಣುತ್ತಿಲ್ಲ ಎಂಬುದೂ ಸ್ಪಷ್ಟವಾಗಿ ಗೋಚರಿಸುತ್ತಿದೆ.




