ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿ ಸೋಮವಾರ ತಡರಾತ್ರಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ 9 ಮಕ್ಕಳು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಆಡಳಿತ ತಿಳಿಸಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು, “ಸೋಮವಾರ ರಾತ್ರಿ 12 ಗಂಟೆಯ ಸುಮಾರಿಗೆ ಪಾಕಿಸ್ತಾನದ ಆಕ್ರಮಣಕಾರಿ ಪಡೆಗಳು ಖೋಸ್ಟ್ ಪ್ರಾಂತ್ಯದ ಗೆರ್ಬಾಜ್ ಜಿಲ್ಲೆಯ ಮುಘಲ್‌ಗೈ ಪ್ರದೇಶದಲ್ಲಿರುವ ಸ್ಥಳೀಯ ನಿವಾಸಿ ಖಾಜಿ ಮಿರ್ ಅವರ ಪುತ್ರ ವಿಲಾಯತ್ ಖಾನ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿವೆ. ಇದರಿಂದ 9 ಮಕ್ಕಳು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?
ಇದೇ ವೇಳೆ ಕುನಾರ್ ಮತ್ತು ಪಕ್ತಿಕಾ ಗಡಿಭಾಗಗಳಲ್ಲೂ ಪಾಕಿಸ್ತಾನ ವಾಯುದಾಳಿ ನಡೆಸಿದ್ದು, ನಾಲ್ವರು ನಾಗರಿಕರು ಗಾಯಗೊಂಡಿರುವುದಾಗಿ ಮುಜಾಹಿದ್ ಹೇಳಿದ್ದಾರೆ.
ಈ ವಾಯುದಾಳಿಯು ಪಾಕಿಸ್ತಾನದ ಪೇಶಾವರ್‌ನಲ್ಲಿ ಉಗ್ರರು ದಾಳಿ ನಡೆಸಿದ ಕೆಲವು ಗಂಟೆಗಳಲ್ಲಿ ನಡೆಸಲಾಗಿದೆ. ರಾಯಿಟರ್ಸ್ ವರದಿ ಪ್ರಕಾರ, ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದರು.





