AI ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದೆ. ಆದರೆ, ಆ ಭವಿಷ್ಯ ಹೇಗಿರಬೇಕು ಎಂಬುದನ್ನು ನಾವು ಇಂದು ತೆಗೆದುಕೊಳ್ಳುವ ನಿರ್ಧಾರ- ತಂತ್ರಜ್ಞಾನ ಮಾನವನ ಸೇವಕವಾಗಬೇಕೋ ಅಥವಾ ಮಾನವನೇ ತಂತ್ರಜ್ಞಾನಕ್ಕೆ ದಾಸನಾಗಬೇಕೋ ಎಂಬ ಆಯ್ಕೆ ನಮ್ಮ ಮುಂದಿಯೇ ಇದೆ.
ಇಂದು AI ಮಾನವನ ಕೈಯಲ್ಲಿರುವ ಅತ್ಯಂತ ಶಕ್ತಿಶಾಲಿ ಸಾಧನ. ಅದೇ ಸಮಯದಲ್ಲಿ, ಅದು ಸೂಕ್ತ ಮಾರ್ಗದರ್ಶನ ಇಲ್ಲದೆ ಹೋದರೆ ಅತ್ಯಂತ ಅಪಾಯಕಾರಿ ಅಸ್ತ್ರವಾಗುವ ಆತಂಕವೂ ಇದೆ. ಈ ಎರಡು ತುದಿಗಳ ನಡುವೆ ಸಮತೋಲನ ಸಾಧಿಸುವ ಪ್ರಯತ್ನವೇ ಈ ಶೃಂಗಸಭೆಯ ಕೇಂದ್ರಬಿಂದು.
ʼಇಂಡಿಯಾ–AI ಇಂಪ್ಯಾಕ್ಟ್ ಶೃಂಗಸಭೆ-2026ʼಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಾಕ್ಷಿಯಾಗುತ್ತಲಿದೆ. ನಿನ್ನೆಯಿಂದ (ಫೆ.16-20) ಐದು ದಿನಗಳ ಕಾಲ ನಡೆಯಲಿರುವ ಈ ಜಾಗತಿಕ ಸಮಾವೇಶವು ಗ್ಲೋಬಲ್ ಸೌತ್ ದೇಶದಲ್ಲಿ ಆಯೋಜಿಸಲಾಗುತ್ತಿರುವ ಮೊದಲ ಜಾಗತಿಕ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ ಎಂಬ ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಮಹತ್ವದ ಶೃಂಗಸಭೆ, ಜಾಗತಿಕ ಮಟ್ಟದಲ್ಲಿ AI ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತದ ಪಾತ್ರವನ್ನು ಇನ್ನಷ್ಟು ಬಲಪಡಿಸುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ AI ಸಹಕಾರಕ್ಕೆ ಭಾರತವನ್ನು ಪ್ರಮುಖ ಸಂಯೋಜಕ ಮತ್ತು ಪಾಲುದಾರರಾಗಿ ಸ್ಥಾಪಿಸುವ ಯೋಜನೆ ಹಾಕಿಕೊಂಡಿದೆ. AIಗೆ ಸಂಬಂಧಿಸಿದ ಸಾಮಾನ್ಯ ಮಾನದಂಡಗಳು, ಸಹಯೋಗದ ಚೌಕಟ್ಟುಗಳು ಹಾಗೂ ಸಾರ್ವಜನಿಕ ಹಿತಕ್ಕಾಗಿ ಬಳಕೆಯಾಗುವ ಹಾಗೂ ವಿಸ್ತರಿಸಬಹುದಾದ ಪರಿಹಾರಗಳನ್ನು ಒಟ್ಟಾಗಿ ರೂಪಿಸುವ ಗುರಿಯೊಂದಿಗೆ ಈ ಶೃಂಗಸಭೆ ನಡೆಯುತ್ತಿದೆ.
ಈ ಶೃಂಗಸಭೆಗೆ ವಿಶ್ವದ 100ಕ್ಕೂ ಹೆಚ್ಚು ದೇಶಗಳನ್ನು ಆಹ್ವಾನಿಸಲಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಜನರು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಸುಮಾರು 20 ದೇಶಗಳ ರಾಷ್ಟ್ರಾಧ್ಯಕ್ಷರು ಮತ್ತು ಸರ್ಕಾರದ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲೂಲಾ ಡಾ ಸಿಲ್ವಾ, ಸ್ಪೇನ್ ಅಧ್ಯಕ್ಷ ಪೆಡ್ರೋ ಸಾಂಚೆಜ್, ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷ ಗೈ ಪಾರ್ಮೆಲಿನ್, ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಡಿಕ್ ಸ್ಕೂಫ್, ಯುಎಇ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲೇದ್ ಬಿನ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಹ್ಯಾನ್, ಮಾರಿಷಸ್ ಪ್ರಧಾನಿ ಡಾ. ನವೀನ್‌ಚಂದ್ರ ರಾಮ್‌ಗೂಲಾಮ್, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ, ಸೀಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಲ್ಲೇ ಹಾಗೂ ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಅವರು ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜತೆಗೆ ಬೊಲಿವಿಯಾ, ಕ್ರೊಯೇಷಿಯಾ, ಎಸ್ಟೋನಿಯಾ, ಫಿನ್ಲ್ಯಾಂಡ್, ಗ್ರೀಸ್, ಗಯಾನಾ, ಕಜಕಿಸ್ತಾನ್, ಲಿಚ್ಟನ್‌ಸ್ಟೈನ್, ಸರ್ಬಿಯಾ ಮತ್ತು ಸ್ಲೋವಾಕಿಯಾ ದೇಶಗಳ ನಾಯಕರು ಕೂಡ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 45ಕ್ಕೂ ಹೆಚ್ಚು ದೇಶಗಳಿಂದ ಸಚಿವ ಮಟ್ಟದ ನಿಯೋಗಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ವಿಶ್ವಸಂಸ್ಥೆಯ ಮಹಾಸಚಿವರು ಹಾಗೂ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಹಿರಿಯ ಅಧಿಕಾರಿಗಳೂ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇಂಡಿಯಾ–AI ಇಂಪ್ಯಾಕ್ಟ್ ಶೃಂಗಸಭೆಯು ಜನ (People), ಭೂಮಿ (Planet) ಮತ್ತು ಪ್ರಗತಿ (Progress) ಎಂಬ ಮೂರು ಮೂಲಭೂತ ತತ್ವಗಳ ಮೇಲೆ ಆಧಾರಿತವಾಗಿದೆ. ಈ ತತ್ವಗಳ ಅಡಿಯಲ್ಲಿ ಜಾಗತಿಕ AI ಸಹಕಾರಕ್ಕೆ ದಿಕ್ಕು ನೀಡುವ ಪ್ರಯತ್ನ ನಡೆಯುತ್ತಿದೆ. ಶೃಂಗಸಭೆಯ ಚರ್ಚೆಗಳನ್ನು ಏಳು ಪರಸ್ಪರ ಸಂಬಂಧಿತ ವಿಷಯಗಳಡಿ ರೂಪಿಸಲಾಗಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾಮಾಜಿಕ ಸಬಲೀಕರಣ ಮತ್ತು ಒಳಗೊಳ್ಳುವಿಕೆ, ಸುರಕ್ಷಿತ ಮತ್ತು ನಂಬಿಕಸ್ಥ AI, ವಿಜ್ಞಾನ ಮತ್ತು ಸಂಶೋಧನೆ, ಸಂಕಷ್ಟ ನಿರ್ವಹಣೆಯಲ್ಲಿನ ಸ್ಥೈರ್ಯ, ನಾವೀನ್ಯತೆ ಮತ್ತು ಕಾರ್ಯಕ್ಷಮತೆ, ಹಾಗೂ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಹಿತಕ್ಕಾಗಿ AI ಬಳಕೆ ಎಂಬ ಅಂಶಗಳು ಇದರಲ್ಲಿ ಸೇರಿವೆ.
ಭಾರತವು “ಅತ್ಯಂತ ಯಶಸ್ವಿ ಉದಯೋನ್ಮುಖ ಆರ್ಥಿಕತೆ”ಯಾಗಿದ್ದು, ಜಾಗತಿಕ ವ್ಯವಹಾರಗಳಲ್ಲಿ ದಿನೇದಿನೇ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಅದೇ ಕಾರಣಕ್ಕೆ ಭಾರತವೇ AI ಶೃಂಗಸಭೆ ಆಯೋಜಿಸಲು ʼಸರಿಯಾದ ಸ್ಥಳʼ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರೆಸ್ ಹೇಳಿದ್ದಾರೆ.
“ಈ ಶೃಂಗಸಭೆಯನ್ನು ಆಯೋಜಿಸುತ್ತಿರುವುದಕ್ಕಾಗಿ ಭಾರತವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. AI ಎಲ್ಲೆಡೆ, ಎಲ್ಲರ ಹಿತಕ್ಕಾಗಿ ಅಭಿವೃದ್ಧಿಯಾಗುವುದು ಅತ್ಯಂತ ಅಗತ್ಯ. ಗ್ಲೋಬಲ್ ಸೌತ್‌ನ ದೇಶಗಳೂ AI ನ ಲಾಭದಲ್ಲಿ ಸಮಾನವಾಗಿ ಪಾಲ್ಗೊಳ್ಳಬೇಕು. AI ಮಾನವಕುಲದ ಒಟ್ಟಾರೆ ಹಿತಕ್ಕಾಗಿ ಬಳಸಲಾಗುವ ಒಂದು ವಿಶ್ವವ್ಯಾಪಿ ಸಾಧನವಾಗುವುದು ಅತ್ಯಂತ ಅಗತ್ಯ” ಎಂದು ಅವರು ಒತ್ತಿ ಹೇಳಿದ್ದಾರೆ.

ಜಾಗತಿಕ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ ಕೇವಲ ತಂತ್ರಜ್ಞಾನ ಸಮ್ಮೇಳನವಲ್ಲದೆ, ಮಾನವನ ಭವಿಷ್ಯದ ದಿಕ್ಕು ಎತ್ತ ಹೊರಳುತ್ತದೆ ಎಂಬುದನ್ನು ನಿರ್ಧರಿಸುವ ಮಹತ್ವದ ಜಾಗತಿಕ ವೇದಿಕೆಯಾಗಿದೆ ಎಂದು ವ್ಯಾಖ್ಯಾನಿಸಲ್ಪಡುತ್ತಿದೆ. ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು, ನೀತಿ ನಿರೂಪಕರು, ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು, ಸಂಶೋಧಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿ, “AIಯನ್ನು ಹೇಗೆ ಬಳಸಬೇಕು, ಹೇಗೆ ನಿಯಂತ್ರಿಸಬೇಕು ಮತ್ತು ಯಾರ ಹಿತಕ್ಕಾಗಿ ಅಭಿವೃದ್ಧಿಪಡಿಸಬೇಕು?” ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಆಡಳಿತ ಮತ್ತು ನ್ಯಾಯವ್ಯವಸ್ಥೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ರೋಗಗಳನ್ನು ವೇಗವಾಗಿ ಮತ್ತು ನಿಖರವಾಗಿ ಗುರುತಿಸುವುದು, ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆ ಮಾದರಿಗಳನ್ನು ರೂಪಿಸುವುದು, ಬೆಳೆ ಉತ್ಪಾದನೆಗೆ ಮುನ್ಸೂಚನೆ ನೀಡುವುದು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಸ್ವಯಂಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಲ್ಲವೂ AI ಶಕ್ತಿಯ ಉದಾಹರಣೆಗಳೇ.
ಆದರೆ ಇದೇ AI, ಉದ್ಯೋಗ ಕಳೆದುಕೊಳ್ಳುವ ಭೀತಿ, ವೈಯಕ್ತಿಕ ಗೌಪ್ಯತೆ ಉಲ್ಲಂಘನೆಯ ಅಪಾಯ, ಸುಳ್ಳು ಮಾಹಿತಿ ಹಾಗೂ ಡೀಪ್‌ಫೇಕ್‌ಗಳ ಮೂಲಕ ಸವಾಲು ಮತ್ತು ಯಂತ್ರಗಳು ಮಾನವನ ಮೇಲೆ ಹಿಡಿತ ಸಾಧಿಸಬಹುದೆಂಬ ಆತಂಕವನ್ನು ಸಹ ಮುಂದೊಡ್ಡಿದೆ.
ಭಾರತಕ್ಕೆ ಕೃತಕ ಬುದ್ಧಿಮತ್ತೆ ಹೊಸ ವಿಷಯವಲ್ಲ. ಸ್ಟಾರ್ಟ್‌ಅಪ್‌ಗಳು, ಐಟಿ ಕ್ಷೇತ್ರ ಮತ್ತು ಸಾರ್ವಜನಿಕ ಸೇವೆಗಳಲ್ಲಿ AI ಪ್ರಯೋಗಗಳು ಈಗಾಗಲೇ ನಡೆಯುತ್ತಿವೆ. ಆದರೆ ಈ ಶೃಂಗಸಭೆಯ ಮೂಲಕ ಭಾರತ ತನ್ನನ್ನು ಕೇವಲ ತಂತ್ರಜ್ಞಾನ ಬಳಕೆದಾರನಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ AI ನೀತಿ ರೂಪಿಸುವ ಪ್ರಮುಖ ನಿಯಂತ್ರಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದೆ.
ಭಾರತದಂತಹ ಭಾರೀ ಜನಸಂಖ್ಯೆ ಮತ್ತು ವೈವಿಧ್ಯತೆಗಳುಳ್ಳ ದೇಶದಲ್ಲಿ AIಯ ಪರಿಣಾಮಗಳು ಬಹಳ ಗಂಭೀರವಾಗಿರಬಹುದು. ಒಂದು ತಪ್ಪಾದ ಅಥವಾ ಪಕ್ಷಪಾತಪೂರ್ಣ ಅಲ್ಗೋರಿದಮ್ ಲಕ್ಷಾಂತರ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಶಕ್ತಿ ಹೊಂದಿದೆ. ಆದ್ದರಿಂದ ಪಕ್ಷಪಾತ ರಹಿತ ಅಲ್ಗೋರಿದಮ್‌ಗಳು, ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಹೊಂದಿಕೊಳ್ಳುವ AI ವ್ಯವಸ್ಥೆಗಳು ಹಾಗೂ ಬಡವರು ಮತ್ತು ಹಿಂದುಳಿದ ಸಮುದಾಯಗಳಿಗೆ ತಂತ್ರಜ್ಞಾನ ಲಾಭ ತಲುಪುವ ವ್ಯವಸ್ಥೆ ಎಲ್ಲವೂ ಚರ್ಚೆಯ ಪ್ರಮುಖ ಅಂಶಗಳಾಗಿವೆ.
AI ಯಾವುದೇ ಗಡಿಗಳ ಅರಿವಿರುವುದಿಲ್ಲ. ಒಂದು ದೇಶದಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನ ಕ್ಷಣಾರ್ಧದಲ್ಲಿ ಮತ್ತೊಂದು ದೇಶದಲ್ಲಿ ಬಳಕೆಯಾಗಬಹುದು. ಈ ಹಿನ್ನೆಲೆಯಲ್ಲಿ “ಒಂದು ದೇಶ-ಒಂದು ನಿಯಮ” ಎಂಬ ವಿಧಾನ ಸಾಕಾಗುವುದಿಲ್ಲ ಎಂಬ ನಿಲುವು ಬಲವಾಗುತ್ತಿದೆ. ಜಾಗತಿಕ AI ನಿಯಂತ್ರಣಕ್ಕೆ ನಿರ್ದಿಷ್ಟ ಚೌಕಟ್ಟು ಸಾಧ್ಯವೇ ಎಂಬುದು ಶೃಂಗಸಭೆಯ ಪ್ರಮುಖ ಚರ್ಚಾ ವಿಷಯವಾಗಿದೆ. ಕೆಲವು ರಾಷ್ಟ್ರಗಳು ಕಟ್ಟುನಿಟ್ಟಾದ ನಿಯಮಗಳನ್ನು ಒತ್ತಾಯಿಸುತ್ತಿದ್ದರೆ, ಇನ್ನೂ ಕೆಲವು ಹೊಸ ಆವಿಷ್ಕಾರಗಳಿಗೆ ನಿಯಂತ್ರಣಗಳು ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಿವೆ. ಈ ಪರಸ್ಪರ ಭಿನ್ನಾಭಿಪ್ರಾಯಗಳ ನಡುವೆ, ಮಾನವ ಹಕ್ಕುಗಳು, ಗೌಪ್ಯತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಎಂಬ ಮೌಲ್ಯಗಳು ಮುಖ್ಯವಾಗಬೇಕು ಎಂಬ ಅಭಿಪ್ರಾಯಗಳು ಶೃಂಗಸಭೆಯ ಘನತೆ ಹೆಚ್ಚಿಸಿವೆ.

AI ಯುಗದಲ್ಲಿ ಉದ್ಯೋಗ ಮತ್ತು ಸಮಾಜದ ಭವಿಷ್ಯವೂ ದೊಡ್ಡ ಪ್ರಶ್ನೆಯಾಗಿದೆ. ಯಂತ್ರಗಳು ಮಾನವನ ಕೆಲಸಗಳನ್ನು ಕಸಿದುಕೊಳ್ಳುತ್ತವೆಯೇ, ಅಥವಾ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆಯೇ ಎಂಬ ಚರ್ಚೆಯೂ ಸದ್ಯ ತೀವ್ರ ಸ್ವರೂಪ ಪಡೆದಿದೆ. ತಜ್ಞರ ಅಭಿಪ್ರಾಯಗಳು ವಿಭಿನ್ನವಾಗಿದ್ದರೂ, ಭವಿಷ್ಯದ ಉದ್ಯೋಗಗಳಿಗೆ ಹೊಸ ಕೌಶಲ್ಯಗಳು ಅಗತ್ಯ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಮುಂದಿನ ದಶಕದಲ್ಲಿ ಮನುಷ್ಯ ಮತ್ತು ಯಂತ್ರಗಳ ನಡುವಿನ ಸಹಕಾರವೇ ಕೆಲಸದ ಸ್ವರೂಪವನ್ನು ನಿರ್ಧರಿಸಲಿದೆ. ಇದಕ್ಕಾಗಿ ಶಿಕ್ಷಣ ವ್ಯವಸ್ಥೆ, ತರಬೇತಿ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಭದ್ರತಾ ನೀತಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಸ್ವರಗಳೊಂದಿಗೆ ಸ್ಪರ್ಧೆಗಿಳಿದ AI; ಭಾವಕ್ಕೆ ಬರುವುದೇ ಜೀವ?
AIಗೆ ನೈತಿಕತೆ ಕಲಿಸಬಹುದೇ, ಅಥವಾ ಅದು ಅದನ್ನು ಬಳಸುವ ಮಾನವನ ಮೌಲ್ಯಗಳ ಮೇಲೆ ಅವಲಂಬಿತವೇ ಎಂಬ ಪ್ರಶ್ನೆ ಶೃಂಗಸಭೆಯ ತತ್ವ ಚರ್ಚೆಗಳ ಹೃದಯಭಾಗದಲ್ಲಿದೆ. ಯಂತ್ರಗಳಿಗೆ ಸ್ವತಃ ಮಾನವೀಯ ಮೌಲ್ಯಗಳು ಇರುವುದಿಲ್ಲ. ಆದರೆ ಅವುಗಳನ್ನು ರೂಪಿಸುವವರು, ತರಬೇತಿ ನೀಡುವವರು ಮತ್ತು ಬಳಸುವವರು ಹೊಂದಿರುವ ಮೌಲ್ಯಗಳು AIನ ನಿರ್ಧಾರಗಳಲ್ಲಿ ಪ್ರತಿಬಿಂಬಿಸುತ್ತವೆ. ಅದಕ್ಕಾಗಿ AI ಅಭಿವೃದ್ಧಿಯಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಮಾನವ ಮೇಲ್ವಿಚಾರಣೆ ಅತ್ಯಾವಶ್ಯಕ ಎಂಬ ಸಂದೇಶ ರವಾನೆಯಾಗುತ್ತಿದೆ.
AI ನಮ್ಮ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದೆ. ಆದರೆ, ಆ ಭವಿಷ್ಯ ಹೇಗಿರಬೇಕು ಎಂಬುದನ್ನು ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳೇ ನಿರ್ಧರಿಸುತ್ತವೆ. ತಂತ್ರಜ್ಞಾನ ಮಾನವನ ಸೇವಕವಾಗಬೇಕೋ, ಅಥವಾ ಮಾನವನೇ ತಂತ್ರಜ್ಞಾನಕ್ಕೆ ದಾಸನಾಗಬೇಕೋ ಎಂಬ ಆಯ್ಕೆ ನಮ್ಮ ಮುಂದಿಯೇ ಇದೆ. ಆ ಆಯ್ಕೆಯನ್ನು ವಿವೇಚನೆಯಿಂದ ಕೈಗೊಳ್ಳುವ ದಿಕ್ಕಿನಲ್ಲಿ ಈ ಶೃಂಗಸಭೆ ಒಂದು ಮಹತ್ವದ ಹೆಜ್ಜೆಯಾಗಿದೆ.





