ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸುತ್ತಿದ್ದು, ಈ ಬೆಳವಣಿಗೆ ನಡುವೆ ಯುರೋಪ್, ಅಮೆರಿಕ, ಕೆನಡಾಕ್ಕೆ ಹಾರಲಿದ್ದ 28 ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ.
ಹಲವು ವಾಯುಮಾರ್ಗ ಮುಚ್ಚಲಾಗಿದೆ. ವಿಮಾನಯಾನ ಸಂಸ್ಥೆಗಳು ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯುವುದು ಕಷ್ಟಕರ. ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಬದಲಾಗುತ್ತಿರುವುದರಿಂದ ಮಾರ್ಚ್ 1ರಂದು ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇದನ್ನು ಓದಿದ್ದೀರಾ? ಇಸ್ರೇಲ್-ಅಮೆರಿಕ ದಾಳಿ: ಇರಾನ್ ಪರಮೋಚ್ಛ ನಾಯಕ ಖಮೇನಿ ಹತ್ಯೆ
“ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಬದಲಾಗುತ್ತಿರವ ಕಾರಣ ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯ ಹಿತದೃಷ್ಟಿಯಿಂದ, ಮಾರ್ಚ್ 1ರಂದು ನಿಗದಿಯಾಗಿದ್ದ ಈ ಕೆಳಗಿನ ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ” ಎಂದು ಏರ್‌ಲೈನ್ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.
ವಿಮಾನಯಾನ ಸಂಸ್ಥೆಯು ದೆಹಲಿ ಮತ್ತು ಮುಂಬೈನಿಂದ ಲಂಡನ್ ಹೀಥ್ರೂಗೆ, ಅಮೃತಸರದಿಂದ ಲಂಡನ್ ಗ್ಯಾಟ್ವಿಕ್‌ಗೆ ಮತ್ತು ದೆಹಲಿ, ಮುಂಬೈನಿಂದ ನ್ಯೂಯಾರ್ಕ್‌ಗೆ ವಿಮಾನಗಳನ್ನು ರದ್ದುಗೊಳಿಸಿದೆ. ಮುಂಬೈ-ನ್ಯೂವಾರ್ಕ್, ದೆಹಲಿ-ಚಿಕಾಗೋ, ದೆಹಲಿ-ಟೊರೊಂಟೊ, ದೆಹಲಿ-ಫ್ರಾಂಕ್‌ಫರ್ಟ್, ಮುಂಬೈ-ಫ್ರಾಂಕ್‌ಫರ್ಟ್ ಮತ್ತು ದೆಹಲಿ-ಪ್ಯಾರಿಸ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಈ ಸ್ಥಳಗಳಿಂದ ಭಾರತಕ್ಕೆ ಬರುವ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಸೇನಾ ದಾಳಿ ನಡೆಸಿವೆ. ಈ ಕಾರ್ಯಾಚರಣೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿವೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಜತೆಗೆ ಅವರ ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ.





