ಇಸ್ರೇಲ್ ಮತ್ತು ಅಮೆರಿಕ, ಇರಾನ್ ಮೇಲೆ ದಾಳಿ ಮುಂದುವರೆಸಿದ್ದು, ಈವರೆಗೆ ಅಮೆರಿಕ ಸೇನೆಯು ಇರಾನಿನ ಜಲಾಂತರ್ಗಾಮಿ ನೌಕೆ ಸೇರಿದಂತೆ ಇರಾನಿನ 17 ಹಡಗುಗಳನ್ನು ನಾಶಪಡಿಸಿದೆ ಎಂದು ಮಧ್ಯಪ್ರಾಚ್ಯದಲ್ಲಿನ ಯುಎಸ್ ಪಡೆಗಳ ಕಮಾಂಡರ್ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದು, “ಸರಳವಾಗಿ ಹೇಳುವುದಾದರೆ ನಮ್ಮ ಮೇಲೆ ದಾಳಿ ಮಾಡಲು ಯಾವೆಲ್ಲ ಅಸ್ತ್ರವನ್ನು ಬಳಸಲಾಗುತ್ತದೆಯೋ ಅವೆಲ್ಲಾವನ್ನು ನಾನು ನಾಶ ಮಾಡುವತ್ತ ಗಮನಹರಿಸಿದ್ದೇವೆ” ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್ – ಇಸ್ರೇಲ್ ಯುದ್ಧ | ಭಾರತಕ್ಕೇನು ನಷ್ಟ?
“ನಾವು ಇರಾನಿನ ಇಡೀ ನೌಕಾಪಡೆಯನ್ನು ಮುಳುಗಿಸುತ್ತಿದ್ದೇವೆ. ಇಲ್ಲಿಯವರೆಗೆ, ನಾವು 17 ಇರಾನಿನ ಹಡಗುಗಳನ್ನು ನಾಶಪಡಿಸಿದ್ದೇವೆ. ಅದರಲ್ಲಿ ಇರಾನಿನ ಜಲಾಂತರ್ಗಾಮಿ ನೌಕೆ ಕೂಡಾ ಒಂದಾಗಿದೆ. ದಶಕಗಳಿಂದ, ಇರಾನಿನ ಆಡಳಿತವು ಅಂತಾರಾಷ್ಟ್ರೀಯವಾಗಿ ಅಗತ್ಯ ವಸ್ತುಗಳ ಸಾಗಾಟ ವಿಚಾರದಲ್ಲಿ ಕಿರುಕುಳ ನೀಡಿದೆ. ಇಂದು, ಅರೇಬಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿ ಅಥವಾ ಓಮನ್ ಕೊಲ್ಲಿಯಲ್ಲಿ ಒಂದೇ ಒಂದು ಇರಾನಿನ ಹಡಗು ಕೂಡ ನಡೆಯುತ್ತಿಲ್ಲ. ನಾನು ಬಿಡುವುದಿಲ್ಲ” ಎಂದೂ ಹೇಳಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 50,000ಕ್ಕೂ ಹೆಚ್ಚು ಅಮೆರಿಕದ ಸೈನಿಕರು ಮತ್ತು 200 ಕ್ಕೂ ಹೆಚ್ಚು ಯುದ್ಧ ವಿಮಾನಗಳು ಭಾಗಿಯಾಗಿವೆ ಮತ್ತು ದಿನದ 24 ಗಂಟೆಯೂ ದಾಳಿಗಳು ನಡೆಯುತ್ತಿವೆ ಎಂದೂ ಹೇಳಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಸೇನಾ ದಾಳಿ ನಡೆಸಿವೆ. ಈ ಕಾರ್ಯಾಚರಣೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿವೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಜತೆಗೆ ಅವರ ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್‌ನ ಟೆಲ್ ಅವಿವ್ ಮತ್ತು ಮಧ್ಯಪ್ರಾಚ್ಯ ಕತಾರ್, ಯುಎಇ, ಬಹ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ಬೇಸ್‌ಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ದಾಳಿ ಪ್ರತಿದಾಳಿಗಳು ಮುಂದುವರೆದಿದೆ.





