ರಷ್ಯಾ ಆಕ್ರಮಿತ ಖೆರ್ಸನ್ ಪ್ರಾಂತ್ಯದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ಕನಿಷ್ಠ 24 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾ ಗುರುವಾರ ತಿಳಿಸಿದೆ.
ರಷ್ಯಾ ನಿಯಂತ್ರಣದಲ್ಲಿರುವ ಕ್ರೈಮಿಯಾ ಪರ್ಯಾಯ ದ್ವೀಪದ ಸಮೀಪವಿರುವ ಕರಾವಳಿ ಗ್ರಾಮವಾದ ‘ಖೋರ್ಲಿ’ಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾ ನೇಮಿತ ಖೆರ್ಸೆನ್ ಪ್ರಾಂತ್ಯದ ಗವರ್ನರ್ ವ್ಲಾದಿಮಿರ್ ಸಾಲ್ಡೊ, ” ಜನರು ಹೊಸ ವರ್ಷವನ್ನು ಸಂಭ್ರಮಿಸುತ್ತಿದ್ದ ಹೋಟೆಲ್ ಮತ್ತು ಕೆಫೆಯೊಂದರ ಮೇಲೆ ಉಕ್ರೇನ್‌ನ ಡ್ರೋನ್ ಅಪ್ಪಳಿಸಿದೆ,” ಎಂದು ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ದಾಳಿಯ ಬೆನ್ನಲ್ಲೇ ರಷ್ಯಾ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿದೆ. ವಾಯುವ್ಯ ರಷ್ಯಾದಲ್ಲಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸದ ಬಳಿ ಉಕ್ರೇನ್ ಡ್ರೋಣ್ ಒಂದನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಇದಕ್ಕೆ ಪುರಾವೆಯಾಗಿ ರಾತ್ರಿ ವೇಳೆ ಸೆರೆಹಿಡಿದ ಡ್ರೋಣ್ ಅವಶೇಷಗಳ ವಿಡಿಯೋವನ್ನು ಅದು ಬಿಡುಗಡೆ ಮಾಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?
ಡಿಸೆಂಬರ್ 28–29ರ ರಾತ್ರಿ ನವ್ಗೊರೊಡ್ ಪ್ರದೇಶದಲ್ಲಿರುವ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಬರೋಬ್ಬರಿ 91 ಡ್ರೋನ್‌ಗಳನ್ನು ಉಡಾವಣೆ ಮಾಡಿತ್ತು. ನಮ್ಮ ವಾಯು ರಕ್ಷಣಾ ವ್ಯವಸ್ಥೆ ಇವೆಲ್ಲವನ್ನು ತಡೆದಿದೆ ಎಂದು ರಷ್ಯಾ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಹಿಮದ ನಡುವೆ ಬಿದ್ದಿರುವ ಮಾನವರಹಿತ ವೈಮಾನಿಕ ವಾಹನದ ದೃಶ್ಯಾವಳಿಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, “ವಶಪಡಿಸಿಕೊಳ್ಳಲಾದ ಡ್ರೋನ್ ಆರು ಕೆಜಿ ಸ್ಪೋಟಕವನ್ನು ಹೊಂದಿತ್ತು. ಆದರೆ ಅಧ್ಯಕ್ಷರ ನಿವಾಸಕ್ಕೆ ಯಾವುದೇ ಹಾನಿಯಾಗಿಲ್ಲ” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಘಟನೆಯನ್ನು “ಯೋಜಿತ ಭಯೋತ್ಪಾದಕ ಕೃತ್ಯ” ಮತ್ತು ಪುಟಿನ್ ಮೇಲಿನ ವೈಯಕ್ತಿಕ ದಾಳಿ” ಎಂದು ಮಾಸ್ಕೋ ತಿಳಿಸಿದೆ.
ರಷ್ಯಾದ ಈ ಆರೋಪಗಳನ್ನು ಕೀವ್ (ಉಕ್ರೇನ್ ರಾಜಧಾನಿ) ಮೂಲಗಳು ಕಟುವಾಗಿ ನಿರಾಕರಿಸಿವೆ. ಪುಟಿನ್ ನಿವಾಸದ ಮೇಲಿನ ದಾಳಿಯ ಕಥೆ “ಸಂಪೂರ್ಣ ಕಟ್ಟುಕತೆ ಎಂದು ಉಕ್ರೇನ್ ಹೇಳಿದೆ. ಆದರೆ ಪುಟಿನ್ ನಿವಾಸದ ಮೇಲಿನ ದಾಳಿಯ ವರದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.





