ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಖುಲ್ನಾ ಮತ್ತು ರಾಜಶಾಹಿಯಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು (ಐವಿಎಸಿ) ಗುರುವಾರ ಮುಚ್ಚಲಾಗಿದೆ. ಆದರೆ, ರಾಜಧಾನಿ ಢಾಕಾದಲ್ಲಿನ ವೀಸಾ ಕೇಂದ್ರವು ತಾತ್ಕಾಲಿಕ ಸ್ಥಗಿತದ ನಂತರ ಇದೀಗ ಮತ್ತೆ ಕಾರ್ಯಾರಂಭ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರದಂದು ಬೃಹತ್ ಗುಂಪೊಂದು ಭಾರತೀಯ ಹೈಕಮಿಷನ್ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರಣ, ಢಾಕಾದ ವೀಸಾ ಕೇಂದ್ರವನ್ನು ಮುಚ್ಚಲಾಗಿತ್ತು. ಪೊಲೀಸರು ಪ್ರತಿಭಟನಾಕಾರರನ್ನು ತಡೆದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಗುರುವಾರದಿಂದ ಢಾಕಾ ಕೇಂದ್ರವು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಐವಿಎಸಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ.
ಆದರೆ, ‘ಭದ್ರತಾ ಕಾರಣಗಳಿಗಾಗಿ’ ಖುಲ್ನಾ ಮತ್ತು ರಾಜಶಾಹಿ ಕೇಂದ್ರಗಳನ್ನು ಮುಚ್ಚಲಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಐವಿಎಸಿ, “ಪ್ರಸ್ತುತದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಎರಡು ಕೇಂದ್ರಗಳನ್ನು ಮುಚ್ಚಲಾಗಿದೆ. ಇಂದಿಗೆ ನಿಗದಿಯಾಗಿದ್ದ ಎಲ್ಲ ಪೂರ್ವಾನುಮತಿಗಳಿಗೆ ಮುಂದಿನ ದಿನಗಳಲ್ಲಿ ಹೊಸ ಸಮಯವನ್ನು ನಿಗದಿಪಡಿಸಲಾಗುವುದು” ಎಂದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಭಾರತವು ಒಟ್ಟು ಐದು ವೀಸಾ ಕೇಂದ್ರಗಳನ್ನು ಹೊಂದಿದೆ. ಪ್ರಸ್ತುತ ಢಾಕಾ (ಜಮುನಾ ಫ್ಯೂಚರ್ ಪಾರ್ಕ್) ಮತ್ತು ಚಟ್ಟೋಗ್ರಾಮ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಖುಲ್ನಾ ಮತ್ತು ರಾಜಶಾಹಿ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಸಿಲ್ಹೆಟ್‌ನಲ್ಲಿ ಐದನೇ ಕೇಂದ್ರವಿದೆ.
ಭಾರತದ ತೀವ್ರ ಆಕ್ಷೇಪ
ಭಾರತೀಯ ಹೈಕಮಿಷನ್ ಕಚೇರಿಗೆ ಮುತ್ತಿಗೆ ಹಾಕುವ ಬೆದರಿಕೆಗಳು ಮತ್ತು ಭದ್ರತಾ ಸವಾಲುಗಳ ಕುರಿತು ಭಾರತ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. ಬುಧವಾರವಷ್ಟೇ ವಿದೇಶಾಂಗ ಸಚಿವಾಲಯವು (ಎಂಇಎ) ದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮಿಷನರ್ ರಿಯಾಜ್ ಹಮಿದುಲ್ಲಾ ಅವರನ್ನು ಕರೆಸಿ, ರಾಜತಾಂತ್ರಿಕ ಕಚೇರಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದೆ. ಮಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ರಾಜತಾಂತ್ರಿಕ ನಿಯಮಗಳ ಪ್ರಕಾರ ಭಾರತೀಯ ನಿಯೋಗಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಭಾರತ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನೇಕೆ ಮಾಡುತ್ತಿಲ್ಲ?
ಬಾಂಗ್ಲಾ ಸರ್ಕಾರದ ಭರವಸೆ:
ಈ ನಡುವೆ, ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಅಸದ್ ಆಲಂ ಸಿಯಾಮ್ ಅವರು ಗುರುವಾರ ವಿದೇಶಿ ರಾಯಭಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜತಾಂತ್ರಿಕ ಕಚೇರಿಗಳಿಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಮುಂದಿನ ವರ್ಷದ ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಅವರು ತಿಳಿಸಿದ್ದಾರೆ.





