ಭಾರತವು ಬಾಂಗ್ಲಾ ಜೊತೆಗೆ ಸ್ನೇಹ ಸಂಬಂಧ ಬಯಸುತ್ತದೆ. ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಚುನಾವಣೆ ನಡೆಸಲು ಭಾರತವು ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಬಾಂಗ್ಲಾದೇಶವು ಕಳೆದ ಒಂದು ವರ್ಷದಿಂದ ಉದ್ವಿಗ್ನತೆಯಲ್ಲಿದೆ. ಪದೇ-ಪದೇ ಹಿಂಸಾಚಾರ ನಡೆಯುತ್ತಿದೆ. ಭಾರತದಲ್ಲಿ ರಕ್ಷಣೆ ಪಡೆದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶ ಒತ್ತಾಯಿಸಿದೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಲಾಗಿದೆ. 17 ವರ್ಷಗಳ ನಂತರ ಬಿಎನ್‌ಪಿ ನಾಯಕ ತಾರಿಕ್ ರೆಹಮಾನ್ ಢಾಕಾಗೆ ಮರಳಿದ್ದಾರೆ. ಇದೆಲ್ಲವೂ ಬಾಂಗ್ಲಾ ರಾಜಕೀಯದಲ್ಲಿ ಭಾರೀ ತಲ್ಲಣ ಉಂಟುಮಾಡಿದೆ. ಇದೆಲ್ಲದರ ನಡುವೆ ಬಾಂಗ್ಲಾ ಜೊತೆಗಿನ ಸಂಬಂಧದ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಸಂದರ್ಭದಲ್ಲಿ, ನಾವು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಬಯಸುತ್ತೇವೆ. ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಯುತ ಮತ್ತು ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆಯ ಚುನಾವಣೆಗಳನ್ನು ನಾವು ಬೆಂಬಲಿಸುತ್ತೇವೆ. ಇದೇ ಸಂಧರ್ಭದಲ್ಲಿ ಲಂಡನ್‌ನಿಂದ ಬಿಎನ್‌ಪಿ ನಾಯಕನ ಮರಳುವಿಕೆಯನ್ನು ಗಮನಿಸಬೇಕಿದೆ” ಎಂದಿದ್ದಾರೆ.
“ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅಡಿಯಲ್ಲಿ ಬಾಂಗ್ಲಾದಲ್ಲಿ ಭಾರತದ ವಿಚಾರವಾಗಿ ಉದ್ವಿಗ್ನತೆ ವಾತಾವರಣ ಸೃಷ್ಟಿಯಾಗಿದೆ. ಇದರ ಹೊರತಾಗಿಯೂ, ಬಾಂಗ್ಲಾದೇಶದೊಂದಿಗೆ ಭಾರತದ ಸಾಲ ಮತ್ತು ಅಭಿವೃದ್ಧಿ ಸಹಕಾರವು ಮುಂದುವರಿಯುತ್ತದೆ” ಎಂದಿದ್ದಾರೆ.
“ನಾವು ಬಾಂಗ್ಲಾದೇಶದ ಜನರೊಂದಿಗೆ ಬಲವಾದ ಸಂಬಂಧಗಳನ್ನು ಹೊಂದಲು ಮತ್ತು ಮುಂದುವರೆಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
“ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಮಧ್ಯಂತರ ಸರ್ಕಾರ ಭಾರತಕ್ಕೆ ಪತ್ರ ಬರೆದಾಗಿನಿಂದ, ಭಾರತ ಅದನ್ನು ಪರಿಶೀಲಿಸುತ್ತಿದೆ. ನಾವು ಶಾಂತಿ ಮತ್ತು ಸ್ಥಿರತೆ ಪರ ನಿಲ್ಲುತ್ತೇವೆ” ಎಂದಿದ್ದಾರೆ.




