ರಾಜಕೀಯ ಆಸ್ಥಿರತೆ, ಜೆನ್-ಝಿ ಪ್ರತಿಭಟನೆ, ಪ್ರಧಾನಿಯ ರಾಜೀನಾಮೆ, ಮಾಜಿ ಪ್ರಧಾನಿಗೆ ಮರಣದಂಡನೆ ಶಿಕ್ಷೆ, ಆಂತರಿಕ ಕಚ್ಚಾಟ, ಹಿಂದೂ ಯುವಕರ ಹತ್ಯೆ ಹೀಗೆ ಸಾಲು ಸಾಲು ಘಟನೆಗಳಿಗೆ ಸಾಕ್ಷಿಯಾಗಿದ್ದು ಬಾಂಗ್ಲಾದೇಶ.
ಕಳೆದ ಒಂದೂವರೆ ವರ್ಷಗಳಿಂದ ಬಾಂಗ್ಲಾದೇಶದ ಪರಿಸ್ಥಿತಿ ಉದ್ವಿಗ್ನವಾಗಿತ್ತು. 2024ರ ಆಗಸ್ಟ್ ತಿಂಗಳಿನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಬೇಕಾಯಿತು. ಇದರಿಂದ 15 ವರ್ಷಗಳ ದೀರ್ಘ ಆಡಳಿತ ಕೊನೆಗೊಂಡಿತು. ಇವರ ರಾಜೀನಾಮೆಯ ನಂತರ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರವನ್ನು ರಚಿಸಿ ರಾಷ್ಟ್ರವನ್ನು ಮುನ್ನಡೆಸಿದರು.
2024ರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದ್ದ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) “ಮಾನವೀಯತೆ ವಿರುದ್ಧ ನಡೆಸಿರುವ ಹಿಂಸಾಚಾರ” ಎಂದು ಪರಿಗಣಿಸಿ ಶೇಖ್ ಹಸೀನಾ ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತು.
ಇದನ್ನು ಓದಿ : ಬಾಂಗ್ಲಾದೇಶ ಹಿಂಸಾಚಾರ: ಭಾರತದ ವಿರುದ್ಧ ಘೋಷಣೆಗಳು ಕೇಳಿಬರುತ್ತಿರುವುದೇಕೆ?
ಇಷ್ಟೆಲ್ಲ ಘಟನೆಗಳಿಗೆ ಸಾಕ್ಷಿಯಾಗಿರುವ ಬಾಂಗ್ಲಾದೇಶವು ಈಗ ಮತ್ತೆ ಚುನಾವಣೆಯನ್ನು ಎದುರಿಸಿದೆ. ಇದೇ ಫೆ.12 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಗೆಲುವು ಸಾದಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಕೆಳಗಿಳಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಒಟ್ಟು 300 ಸದಸ್ಯರ ಬಲದ ಬಾಂಗ್ಲಾ ಸಂಸತ್ತಿನಲ್ಲಿ ಬಿಎನ್‌ಪಿ 209 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಎನ್‌ಪಿ ಮತ್ತು ಜಮಾತ್-ಎ-ಇಸ್ಲಾಮಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಸ್ಪರ್ಧಿಸಲು ಅವಕಾಶ ಕೊಟ್ಟಿಲ್ಲ.
ಬಿಎನ್‌ಪಿ ಪಕ್ಷ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರು ಪ್ರಧಾನಿ ಅಭ್ಯರ್ಥಿ ಎಂದು ಮೊದಲೇ ಘೋಷಿಸಿತ್ತು. ಅದರಂತೆ ಸ್ಪಷ್ಟ ಬಹುಮತ ಪಡೆದ ಬಿಎನ್‌ಪಿ ಪಕ್ಷ ತಾರಿಕ್ ರೆಹಮಾನ್ ಅವರನ್ನು ಪ್ರಧಾನಿ ಮಾಡಲಿದೆ. ಸುಮಾರು 17ಕ್ಕೂ ಹೆಚ್ಚು ವರ್ಷಗಳ ಕಾಲ ದೇಶದಲ್ಲೇ ಇರದೆ, ವಿದೇಶದಲ್ಲಿದ್ದ ತಾರಿಕ್ ರೆಹಮಾನ್ ಅವರಿಗೆ ಪ್ರಧಾನಿಯಾಗುವ ಅವಕಾಶ ಒಲಿದು ಬಂದಿದೆ.
ತಾರಿಕ್ ರೆಹಮಾನ್ ಕಳೆದ 17 ವರ್ಷಗಳಿಂದ ಲಂಡನ್‌ನಲ್ಲಿ ವಾಸವಿದ್ದರು. ಎರಡು ತಿಂಗಳ ಹಿಂದೆ ಚುನಾವಣೆಗಾಗಿ ಸ್ವದೇಶಕ್ಕೆ ಬಂದಿದ್ದರು. ಅಲ್ಲಿನ ಬಹುದೊಡ್ಡ ಪಕ್ಷ ಬಿಎನ್‌ಪಿಯ ನೇತೃತ್ವವನ್ನು ವಹಿಸಿಕೊಂಡಿದ್ದರು.
ʼಒಟ್ಟು 50 ಪಕ್ಷಗಳಿಂದ 1,755 ಅಭ್ಯರ್ಥಿಗಳು ಮತ್ತು 273 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಎನ್‌ಪಿ ಪಕ್ಷವೇ ಅತಿಹೆಚ್ಚು ಅಂದರೆ 291 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಮುಕ್ತ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸಲು ದೇಶದಾದ್ಯಂತ ಸುಮಾರು 9 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಸೂಕ್ಷ ಮತದಾನ ಕೇಂದ್ರಗಳಲ್ಲಿ ಶೇ.90 ರಷ್ಟು ಸಿ.ಸಿ.ಟಿ.ವಿ ಕ್ಯಾಮೆರಾ ಇರಿಸಲಾಗಿತ್ತುʼ ಎಂದು ಚುನಾವಣಾ ಆಯುಕ್ತ ಅಬ್ದುಲ್ ಫಝುಲ್ ಮೊಹಮ್ಮದ್ ಸನಾವುಲ್ಲಾ ತಿಳಿಸಿದ್ದರು.
ಯಾರು ಈ ತಾರಿಕ್ ರೆಹಮಾನ್?
ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ಬಿಎನ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜಿಯಾವುರ್ ರೆಹಮಾನ್ ದಂಪತಿಯ ಪುತ್ರ ತಾರಿಕ್ ರೆಹಮಾನ್. 1965ರ ನವೆಂಬರ್ 20ರಂದು ಢಾಕಾದಲ್ಲಿ ಜನಿಸಿದ ಇವರು, ಢಾಕಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಅಧ್ಯಯನದ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣದ ನಂತರ ತಂದೆ ತಾಯಿಯಂತೆ ರಾಜಕೀಯ ಪ್ರವೇಶ ಮಾಡದೆ, ಸ್ವಉದ್ಯೋಗದ ದಾರಿ ಹಿಡಿಯುತ್ತಾರೆ. ಅದರಂತೆ ಜವಳಿ ಮತ್ತು ಕೃಷಿ ಉತ್ಪನ್ನಗಳ ಉದ್ಯಮವನ್ನು ಪ್ರಾರಂಭಿಸುತ್ತಾರೆ.
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖಲೀದಾ ಜಿಯಾ 2001-2006ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ವೇಳೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ಬಾಂಗ್ಲಾದೇಶದ ಮಿಲಿಟರಿ ಸರ್ಕಾರವು ಅವರನ್ನು ಬಂಧನ ಮಾಡಿತ್ತು. 2008ರಲ್ಲಿ ಬಿಡುಗಡೆಯಾದ ಅವರು, ವೈದ್ಯಕೀಯ ಚಿಕಿತ್ಸೆ ನೆಪವೊಡ್ಡಿ ಬಾಂಗ್ಲಾದೇಶ ತೊರೆದು ಲಂಡನ್‌ಗೆ ತೆರಳಿದ್ದರು. ಇವರು ಜೊತೆ ಮಗ ತಾರಿಕ್ ರೆಹಮಾನ್ ಸಹ ಲಂಡನ್‌ಗೆ ಹೋಗಿದ್ದರು.
ಹಿಂದಿನ ಪ್ರಧಾನಿ ಶೇಖ್ ಹಸೀನಾ, ತಮ್ಮ ಆಡಳಿತದ ಸಂದರ್ಭದಲ್ಲಿ ತಾರಿಕ್ ಭ್ರಷ್ಟಾಚಾರ ಪ್ರಕರಣಗಳ ಕೇಂದ್ರ ಬಿಂದುವಾಗಿದ್ದರು. ಶೇಖ್ ಹಸೀನಾ ಸಿಕ್ಕಸಿಕ್ಕ ವೇದಿಕೆಗಳ ಮೇಲೆ ತಾರಿಕ್ ಅವರನ್ನು ಗುರಿಯಾಗಿಸಿ ಮಾತನಾಡುತ್ತಿದ್ದರು. 2004ರಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಅನೇಕರ ಸಾವು ನೋವುಗಳಿಗೆ ತಾರಿಕ್ ಕಾರಣರಾಗಿದ್ದರು ಎಂದು 2018ರ ರಾಜಕೀಯ ರ್ಯಾಲಿಯೊಂದರಲ್ಲಿ ಹಸೀನಾ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಸಿದ ತಾರಿಕ್ ರೆಹಮಾನ್, ಇದೊಂದು ರಾಜಕೀಯ ಪ್ರೇರಿತ ಎಂದು ತಿರುಗೇಟು ಕೊಟ್ಟಿದ್ದರು.
ಬಾಲ್ಯದ ದಿನದಿಂದಲೂ ಬಾಂಗ್ಲಾದೇಶದ ರಾಜಕಾರಣವನ್ನು ನೋಡುತ್ತ ಬೆಳೆದ ತಾರಿಕ್ ಅವರಿಗೆ ಈಗ ಪ್ರಧಾನಿ ಆಗುವ ಅವಕಾಶ ಒಲಿದು ಬಂದಿರುವುದು ಆಶ್ಚರ್ಯವೇನಲ್ಲ. ಹೇಗಾದರೂ ಮಾಡಿ ಬಿಎನ್‌ಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಆಶಯದಿಂದಲೇ ಸ್ವದೇಶಕ್ಕೆ ತಾರಿಕ್ ಮರಳಿ ಬಂದಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಬಾಂಗ್ಲಾದೇಶದಲ್ಲಿನ ದೊಡ್ಡ ಪಕ್ಷವೆಂದರೆ ಬಿಎನ್‌ಪಿ ಮತ್ತು ಅವಾಮಿ ಲೀಗ್. 2024ರ ಆಗಸ್ಟ್‌ನಲ್ಲಿ ಬಿಎನ್‌ಪಿ ಶತ್ರು ಪಕ್ಷವಾದ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಯುವಕರು ದಂಗೆ ಏಳುತ್ತಾರೆ. ಆ ಸಂದರ್ಭದಲ್ಲಿ ದಂಗೆ ಎದ್ದ ಯುವಕರಿಗೆ ಬಿಎನ್‌ಪಿ ಪಕ್ಷದ ನಾಯಕರು ಬೆಂಬಲಿಸುತ್ತಾರೆ. ಶೇಖ್ ಹಸೀನಾ ಪೊಲೀಸರನ್ನು ಬಳಸಿ ಪ್ರತಿಭಟನಕಾರರ ಮೇಲೆ ಗುಂಡುಗಳನ್ನು ಹಾರಿಸಲು ಆದೇಶ ಹೊರಡಿಸುತ್ತಾರೆ. ಪ್ರತಿಭಟನಕಾರರಿಗೆ ಬಿಎನ್‌ಪಿ ರಾಜಕೀಯ ಬೆಂಬಲ ಸಿಗುತ್ತಿದ್ದಂತೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತದೆ. ಇದಾದ ಬಳಿಕ ಸರ್ಕಾರ ಪತನಗೊಂಡು, ಮಧ್ಯಂತರ ಸರ್ಕಾರ ರಚನೆಯಾಗುತ್ತದೆ.
ಇವೆಲ್ಲ ಪ್ರತಿಭಟನೆಗಳಿಗೆ ತಾರಿಕ್ ರೆಹಮಾನ್ ಅವರ ಬಿಎನ್‌ಪಿ ಪಕ್ಷ ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದೆ ಎಂದು ಹಲವು ವರದಿಗಳು ಹೇಳಿವೆ. ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಬಿಎನ್‌ಪಿ ಸಿಗುತ್ತಿರುವ ಜನಬೆಂಬಲ ನೋಡಿ ಬೆಚ್ಚಿಬಿದ್ದಿತು. ಜನಬೆಂಬಲದಿಂದ ತಾರಿಕ್‌ನ ಒಡೆತನದಲ್ಲಿ ಬಿಎನ್‌ಪಿ ಚುನಾವಣೆಯನ್ನು ಎದುರಿಸಿ ಸ್ಪಷ್ಟಬಹುಮತವನ್ನು ಪಡೆದಿದೆ.
ತಾರಿಕ್ ರೆಹಮಾನ್ ಮೊದಲೆಲ್ಲ ಅಬ್ಬರದ ಭಾಷಣಗಳಿಗೆ ಹೆಚ್ಚು ಖ್ಯಾತಿ ಹೊಂದಿದ್ದರು. ಆದರೆ ಕಳೆದ ಎರಡು ತಿಂಗಳ ಹಿಂದೆ ಸ್ವದೇಶಕ್ಕೆ ಮರಳಿದ ಮೇಲೆ ಉದ್ವೇಗಕ್ಕೆ ಒಳಗಾಗಿ ಪ್ರಚೋದನಕಾರಿ ಭಾಷಣ ಮಾಡದೆ, ಶಾಂತಿಯುತ ಭಾಷಣಗಳನ್ನು ಮಾಡಿ ಜನರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಪ್ರಮುಖವಾಗಿ ಭಾಷಣದಲ್ಲಿ ʼಸೇಡು ಯಾರಿಗೆ ಏನು ತಂದುಕೊಡುತ್ತದೆ? ಸೇಡಿನ ರಾಜಕಾರಣವನ್ನು ಬಿಟ್ಟು ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಮಾತನಾಡಬೇಕು. ಸೇಡು ಯಾರಿಗೂ ಒಳಿತನ್ನು ಮಾಡುವುದಿಲ್ಲʼ ಎಂದು ಹೇಳಿರುವುದು ಹೆಚ್ಚು ವೈರಲ್ ಆಗಿತ್ತು.
ಪ್ರಧಾನಿ ಮೋದಿ ಬೆಂಬಲ
ಆಗಸ್ಟ್ 2024ರಲ್ಲಿ ಅವಾಮಿ ಲೀಗ್ ಸರ್ಕಾರ ಪತನಗೊಂಡ ನಂತರ ನಡೆದ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷ ಭರ್ಜರಿ ಬಹುಮತ ಪಡೆದಿರುವ ಬಗ್ಗೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ “ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷವನ್ನು ಬಹುಮತದತ್ತ ಕೊಂಡೊಯ್ದ ತಾರಿಕ್ ರೆಹಮಾನ್ ಅವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವು ತಾರಿಕ್ ಅವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಭಾರತ ಬೆಂಬಲಿಸುತ್ತದೆ. ನಮ್ಮ ಬಹುಮುಖ ಸಂಬಂಧಗಳನ್ನು ಬಲಪಡಿಸಲು ಹಾಗೂ ಅಭಿವೃದ್ಧಿಯ ಗುರಿಗಳನ್ನು ತಲುಪುವ ಉದ್ದೇಶದಿಂದ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾ ಪ್ರತಿಭಟನಕಾರರು ಅಧಿಕಾರಿದಿಂದ ಕೆಳಗಿಳಿಸದ ತಕ್ಷಣ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಭಾರತವು ಅವರಿಗೆ ರಕ್ಷಣೆಯನ್ನು ಕೊಟ್ಟಿತ್ತು. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದ ನಂತರವೂ ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ಅವರನ್ನು ಮರಳಿ ಕಳುಹಿಸಿ ಕೊಡುವ ಬಗ್ಗೆ ಭಾರತ ಮೌನವಹಿಸಿತ್ತು. ಈಗಲೂ ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಬಾಂಗ್ಲಾದಲ್ಲಿ ಹಸೀನಾ ಅವರ ಅವಾಮಿ ಲೀಗ್‌ನ ಖಟ್ಟರ್ ರಾಜಕೀಯ ವಿರೋಧಿಯಾಗಿರುವ ಬಿಎನ್‌ಪಿ ಗೆಲುವನ್ನು ಭಾರತ ಶಿಷ್ಟಾಚಾರಕ್ಕೆ ಸ್ವೀಕರಿಸಿದೆ. ಒಂದು ಕಡೆ ಶೇಖ್ ಹಸೀನಾ ಅವರಿಗೆ ಭಾರತದಲ್ಲಿ ಆಶ್ರಯ, ಮತ್ತೊಂದು ಕಡೆ ಬಿಎನ್‌ಪಿ ಜೊತೆ ಕೆಲಸ ಮಾಡುವ ಉತ್ಸುಕತೆಯನ್ನು ತೋರಿದ್ದಾರೆ. ಹಸೀನಾ ಅವರು ಭಾರತದಲ್ಲಿಯೇ ಇರುವುದರಿಂದ ಬಾಂಗ್ಲಾದೇಶದ ಹೊಸ ಸರ್ಕಾರ ಏನು ತೀರ್ಮಾನ ಕೈಗೊಳ್ಳಬಹುದು ಎಂಬ ಆಂತಕವಿದೆ.





