ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಗೆಲುವು ಸಾಧಿಸಿದೆ. ಪಕ್ಷದ ಅಧ್ಯಕ್ಷ ತಾರೀಖ್ ರೆಹಮಾನ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಅವರು ಬಾಂಗ್ಲಾದೇಶದ ಜನರ ಹಿತಾಸಕ್ತಿಯೇ ತಮಗೆ ಆದ್ಯತೆಯೆಂದು ಹೇಳಿಕೊಂಡಿದ್ದು, ದೇಶದಲ್ಲಿನ ಏಕತೆಗೆ ಕರೆಕೊಟ್ಟಿದ್ದಾರೆ.
ಶನಿವಾರ, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೆಹಮಾನ್, “ಬಾಂಗ್ಲಾದೇಶದ ಹಿತಾಸಕ್ತಿಗಾಗಿ ದೇಶದ ಎಲ್ಲ ಪ್ರಜೆಗಳು ಒಗ್ಗಟ್ಟಿನಿಂದ ಇರಬೇಕು” ಎಂದಿದ್ದಾರೆ. ತಮ್ಮ ಪಕ್ಷದ ಗೆಲುವನ್ನು ‘ಪ್ರಜಾಪ್ರಭುತ್ವಕ್ಕಾಗಿ ಬಲಿದಾನ ಮಾಡಿದ ಜನರಿಗೆ’ ಅರ್ಪಿಸುತ್ತೇವೆ ಎಂದಿದ್ದಾರೆ.
“ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ನಾವು ದಾರಿ ಮಾಡಿಕೊಟ್ಟಿದ್ದೇವೆ. ಸರ್ವಾಧಿಕಾರಿ ಆಡಳಿತದಿಂದ ಎದುರಾಗಿರುವ ದುರ್ಬಲ ಆರ್ಥಿಕತೆ, ಸಾಂವಿಧಾನಿಕ ಮತ್ತು ರಚನಾತ್ಮಕ ಸಂಸ್ಥೆಗಳ ದುರ್ಬಲತೆ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ತೊಡಕುಗಳನ್ನು ನಿವಾರಿಸುವ ಪ್ರಯಾಣವನ್ನು ನಾವು ಆರಂಭಿಸಲಿದ್ದೇವೆ” ಎಂದು ಹೇಳಿದ್ದಾರೆ.
ಭಾರತದೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ ರೆಹಮಾನ್, “ವಿದೇಶಾಂಗ ನೀತಿಯ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ವಿದೇಶಾಂಗ ನೀತಿಯಲ್ಲಿ ಬಾಂಗ್ಲಾದೇಶ ಮತ್ತು ಬಾಂಗ್ಲಾದೇಶದ ಜನರ ಹಿತಾಸಕ್ತಿಗೆ ಮೊದಲ ಆದ್ಯತೆಯಾಗಿರಲಿದೆ. ಈ ಅದ್ಯತೆಯ ಆಧಾರದಲ್ಲಿಯೇ ವಿದೇಶಾಂಗ ನೀತಿಗಳು ಇರುತ್ತವೆ” ಎಂದು ಹೇಳಿದ್ದಾರೆ.




