ಎಪ್ಪತ್ನಾಲ್ಕು ವರ್ಷ ವಯಸ್ಸಿನ ವೃದ್ಧೆಯೊಬ್ಬರನ್ನು ಅಪಹರಿಸಿ ಹೋಟೆಲ್‌ನಲ್ಲಿ ಬಂಧಿಯಾಗಿಸಿ 2 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದ ಆರೋಪಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಸ್ಥಳೀಯ ನ್ಯಾಯಾಲಯ 394 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಸ್ಯಾನ್ ಮೇಟಿಯೊ ಕೌಂಟಿ ಜಿಲ್ಲಾ ಅಟಾರ್ನಿ ಸ್ಟೀವ್ ವ್ಯಾಗ್‌ಸ್ಟಾಫೆ ಕಚೇರಿ ಪ್ರಕಾರ, ನ್ಯಾಯಾಧೀಶರು ಓಕ್ಲ್ಯಾಂಡ್‌ನ 58 ವರ್ಷದ ಇಯಾನ್ ಎಡಾರ್ಡ್ ಕ್ರೋ ಅವರಿಗೆ 394 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಫೆಬ್ರವರಿಯಲ್ಲಿ ಇಯಾನ್ ಎಡಾರ್ಡ್ ಕ್ರೋ ಅವರಿಗೆ 33 ಅಪರಾಧಗಳ ಆರೋಪ ಹೊರಿಸಲಾಯಿತು. ಇದರಲ್ಲಿ ಅತ್ಯಾಚಾರ, ಚಿತ್ರಹಿಂಸೆ, ಹಿರಿಯರ ಮೇಲಿನ ದೌರ್ಜನ್ಯವೂ ಸೇರಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ಆಗಸ್ಟ್ 2020 ರಿಂದ ಆಗಸ್ಟ್ 2022 ರವರೆಗೆ ಬೆಲ್ಮಾಂಟ್ ಹಯಾತ್ ಹೋಟೆಲ್‌ನಲ್ಲಿ 74 ವರ್ಷದ ವೃದ್ಧೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಸಂತ್ರಸ್ತೆ ಆತನ ತಾಯಿಯ ಸ್ನೇಹಿತೆಯಾಗಿದ್ದರು. ಕ್ರೋ ತಾಯಿ 2016 ರಲ್ಲಿ ನಿಧನರಾದ ನಂತರ ಆತ ಸಂತ್ರಸ್ತೆಯ ಜತೆ ಹೆಚ್ಚು ಸ್ನೇಹ ಬೆಳೆಸಿಕೊಂಡಿದ್ದ. ತನ್ನ ಜತೆ ಬರಲು ಒತ್ತಾಯಿಸಿದ್ದ. ಅಂತಿಮವಾಗಿ ಹೋಟೆಲ್ನೊಳಗೆ ಕರೆದೊಯ್ದು ಬಂಧಿಯಾಗಿರಿಸಿ ಅತ್ಯಾಚಾರವೆಸಗಿದ್ದಾನೆ.
ಕ್ರೋ ವೃದ್ಧೆಯ ಬಳಿಯಿದ್ದ ಹಣವೆಲ್ಲವನ್ನೂ ಖಾಲಿ ಮಾಡಿದ್ದ. ಹೋಟೆಲ್‌ನಲ್ಲಿ, ಸಂತ್ರಸ್ತೆಯನ್ನು ಎಂಟು ತಿಂಗಳ ಕಾಲ ಕೊಠಡಿಯಿಂದ ಹೊರಗೆ ಹೋಗಲು ಬಿಡಲಿಲ್ಲ ಮತ್ತು ಹೊರಗೆ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
2021 ರಲ್ಲಿ ಸಂತ್ರಸ್ತೆಯ ಪಾದದ ಮೂಳೆ ಮುರಿದಿತ್ತು ಮತ್ತು ತೀವ್ರವಾದ ನೋವಿನ ಹೊರತಾಗಿಯೂ ಆಕೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿಲ್ಲ ಎಂದು ಡಿಎ ಕಚೇರಿ ತಿಳಿಸಿದೆ. ನ್ಯೂ ಮೆಕ್ಸಿಕೋದಲ್ಲಿರುವ ಸ್ನೇಹಿತೆಯನ್ನು ರಹಸ್ಯವಾಗಿ ಸಂಪರ್ಕಿಸಿದ ನಂತರ, ಪೊಲೀಸರು ಹೋಟೆಲ್ ಕೊಠಡಿಯ ಮೇಲೆ ದಾಳಿ ನಡೆಸಿ ಮಹಿಳೆಯನ್ನು ರಕ್ಷಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಕ್ರೋ ಎದೆನೋವೆಂದು ನಟಿಸುವುದು, ಹುಚ್ಚನಂತೆ ವರ್ತಿಸಿ ಶಿಕ್ಷೆ ಪ್ರಕಟವನ್ನು ಮುಂದೂಡಲು ಯತ್ನಿಸಿದ್ದ. ಇಷ್ಟು ದಿನ ಜೀವವನ್ನು ಕಾಪಾಡಿಕೊಂಡು ಬಂದಿದ್ದೇನೆ, ನಾನು ಬದುಕುತ್ತೇನೆ ಎನ್ನುವ ಯಾವ ಭರವಸೆಯೂ ನನಗೆ ಇರಲಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಅಪರಾಧಿಯನ್ನು 10 ವರ್ಷಗಳ ಕಾಲ ಯಾರೂ ಕೂಡ ಸಂಪರ್ಕಿಸದಂತೆ ನ್ಯಾಯಾಲಯ ಸೂಚಿಸಿದೆ.





