ಬಾಂಗ್ಲಾದೇಶದಲ್ಲಿ ಕಳೆದ 18 ತಿಂಗಳಿನಿಂದ ನಡೆಯುತ್ತಿರುವ ರಾಜಕೀಯ ಬದಲಾವಣೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿನ ರಾಜಕೀಯವು ಭಾರತದ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಬಾರಿ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆ ಬಹಳ ಮುಖ್ಯವಾಗುತ್ತದೆ.
2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಪರಿಣಾಮವಾಗಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ ನಂತರ, ಇದೇ ಫೆ.12 ರಂದು ಬಾಂಗ್ಲಾದೇಶವು ಚುನಾವಣೆಯನ್ನು ಎದುರಿಸಿತು. ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಮಗ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಬಹುಮತ ಪಡೆದು ಜಯಗಳಿಸಿದೆ. ಬಾಂಗ್ಲಾದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.
ಬಿಎನ್‌ಪಿ ನೇತೃತ್ವ ವಹಿಸಿದ್ದ ತಾರಿಕ್ ರೆಹಮಾನ್ ಅವರನ್ನು ರಾಜಕೀಯ ವಿಶ್ಲೇಷಕರು ಡಾರ್ಕ್ ಪ್ರಿನ್ಸ್ (ಕಪ್ಪು ರಾಜಕುಮಾರ) ಎಂದು ಕರೆದಿದ್ದಾರೆ. ರಾಜಕೀಯ ಕುಟುಂಬದಿಂದ ಬಂದ 60 ವರ್ಷದ ತಾರಿಕ್ ರೆಹಮಾನ್ ಅವರು ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಮಗ. ತಾರಿಕ್ ರೆಹಮಾನ್ ಅವರು ರಾಜಕೀಯ ಪ್ರವೇಶ ಮಾಡುತ್ತಿದ್ದಂತೆ ಅವರ ಮೇಲೆ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅನೇಕ ಆರೋಪಗಳಿದ್ದವು. 2008ರಲ್ಲಿ ದೇಶ ತೊರೆದ ಅವರ ಸುಮಾರು 17 ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸವಿದ್ದರು. ಚುನಾವಣೆಗಾಗಿ ಕೇವಲ ಎರಡು ತಿಂಗಳ ಹಿಂದೆ, ಅಂದರೆ 2025 ಡಿಸೆಂಬರ್ 25ರಂದು ಸ್ವದೇಶಕ್ಕೆ ಮರಳಿದ್ದರು. ಈಗ ದೇಶದ ಉನ್ನತ ಅಧಿಕಾರವಾದ ʼಪ್ರಧಾನಿʼ ಹುದ್ದೆಯನ್ನು ಏರುತ್ತಿದ್ದಾರೆ.
ರೆಹಮಾನ್ ಸ್ವದೇಶಕ್ಕೆ ಮರಳಿದಾಗ ಬೃಹತ್ ಜನಸಮೂಹ ಭಾವನಾತ್ಮಕವಾಗಿ ಸ್ವಾಗತಿಸಿದೆ. ಮೊದಲೆಲ್ಲ ಅಬ್ಬರದ ಭಾಷಣಗಳಿಗೆ ಖ್ಯಾತಿ ಹೊಂದಿದ್ದ ತಾರಿಕ್, 17 ವರ್ಷಗಳ ನಂತರ ಸ್ವದೇಶಕ್ಕೆ ಮರಳಿ ಬಂದ ಮೇಲೆ ಉದ್ವೇಗಕ್ಕೆ ಒಳಗಾಗಿ ಪ್ರಚೋದನಕಾರಿ ಭಾಷಣ ಮಾಡದೆ, ಶಾಂತಿಯುತ ಭಾಷಣಗಳನ್ನು ಮಾಡಿ ಜನರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ʼಉತ್ತಮ ಬಾಂಗ್ಲಾದೇಶವನ್ನು ರೂಪಿಸಲು ನನ್ನ ಬಳಿ ಯೋಜನೆ ಇದೆʼ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ಬಾಂಗ್ಲಾ ಚುನಾವಣೆ : ಭಾರತದ ನಿಲುವು ಎಷ್ಟು ಸರಿ?
ತಾರಿಕ್ ರೆಹಮಾನ್ ಅವರ ಪಕ್ಷ ಗೆದ್ದ ನಂತರ ಭಾರತ ಸೇರಿದಂತೆ ಅನೇಕ ದೇಶಗಳ ನಾಯಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ “ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷವನ್ನು ಬಹುಮತದತ್ತ ಕೊಂಡೊಯ್ದ ತಾರಿಕ್ ರೆಹಮಾನ್ ಅವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವು ತಾರಿಕ್ ಅವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಭಾರತ ಬೆಂಬಲಿಸುತ್ತದೆ. ನಮ್ಮ ಬಹುಮುಖ ಸಂಬಂಧಗಳನ್ನು ಬಲಪಡಿಸಲು ಹಾಗೂ ಅಭಿವೃದ್ಧಿಯ ಗುರಿಗಳನ್ನು ತಲುಪುವ ಉದ್ದೇಶದಿಂದ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಮಿತ್ರ ರಾಷ್ಟ್ರಗಳನ್ನು ಮತ್ತು ನೆರೆಹೊರೆಯ ರಾಷ್ಟ್ರಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಉತ್ತಮ. ಬಾಂಗ್ಲಾದೇಶವು ಚೀನಾ ಮತ್ತು ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವುದು, ಕಳೆದ ಹಲವು ತಿಂಗಳುಗಳಿಂದ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಹತ್ಯೆ ನಡೆದಿರುವುದು, 18 ತಿಂಗಳ ಹಿಂದೆ ಅಂದರೆ, 2024ರ ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯನ್ನು ಗಣನೆಗೆ ತೆಗೆದುಕೊಂಡು, ದಶಕಗಳಷ್ಟು ಹಳೆಯದಾದ ಮಿತ್ರರಾಷ್ಟ್ರದ ಜೊತೆ ಉತ್ತಮ ಸಂಬಂಧ ಖಾತ್ರಿಪಡಿಸಿಕೊಳ್ಳುವುದನ್ನು ಪ್ರಧಾನಿ ಮೋದಿ ಅವರ ಸಂದೇಶ ಧ್ವನಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಿಎನ್‌ಪಿ ಗೆಲುವು – ಭಾರತದ ಮೇಲಿನ ಪರಿಣಾಮ?
ಬಾಂಗ್ಲಾದೇಶದಲ್ಲಿ ಕಳೆದ 18 ತಿಂಗಳಿನಿಂದ ನಡೆಯುತ್ತಿರುವ ರಾಜಕೀಯ ಬದಲಾವಣೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿನ ರಾಜಕೀಯವು ಭಾರತದ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಬಾರಿ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯೂ ಬಹಳ ಮುಖ್ಯವಾಗುತ್ತದೆ.
ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶವು ಭಾರತವನ್ನು ಸುತ್ತುವರೆದಿರುವುದರಿಂದ ತಾರಿಕ್ ರೆಹಮಾನ್ ಅವರ ಆಡಳಿತವು ಮುಂಬರುವ ದಿನಗಳಲ್ಲಿ ದೆಹಲಿಯ ಜೊತೆ ಯಾವ ರೀತಿ ಸಂಬಂಧವನ್ನು ಹೊಂದಿರುತ್ತದೆ ಎಂಬುದು ಮುಖ್ಯವಾಗುತ್ತದೆ. ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದ ಮೈತ್ರಿಯೂ ದಕ್ಷಿಣ ಏಷ್ಯಾದ ಮೇಲಿನ ದೆಹಲಿಯ ಹಿಡಿತವನ್ನು ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ.
ಭಾರತಕ್ಕೆ ಆಕ್ರಮ ವಲಸೆ, ಶೇಖ್ ಹಸೀನಾ ಅವರ ಅಧಿಕಾರ ಪತನದ ನಂತರ ಭುಗಿಲೆದ್ದ ಹಿಂದೂ ವಿರೋಧಿ ಅಲೆ, ಅಲ್ಪಸಂಖ್ಯಾತ ಹಿಂದೂಗಳ ಹತ್ಯೆ, ಗಡಿ ವಿವಾದ, ಆಂತರಿಕ ಭದ್ರತೆಯ ಪರಿಣಾಮಗಳನ್ನು ಹೊಸ ಪ್ರಧಾನಿ ತಾರಿಕ್ ಅವರು ಯಾವ ರೀತಿಯಲ್ಲಿ ನಿಭಾಯಿಸಬಹುದು ಎಂಬುದು ಸಹ ಚರ್ಚಾರ್ಹ.
ಭಾರತವು ಸುಮಾರು 10 ಬಿಲಿಯನ್ ಯುಸ್ ಡಾಲರ್‌ನಷ್ಟು ಹತ್ತಿಯನ್ನು ಉತ್ಪಾದಿಸುತ್ತದೆ. ಬಾಂಗ್ಲಾದೇಶವು ಸಿದ್ದ ಉಡುಪು ಉದ್ಯಮಕ್ಕೆ 80 ಪ್ರತಿಶತಕ್ಕಿಂತ ಹೆಚ್ಚಿನ ಕಚ್ಚಾ ಹತ್ತಿಯನ್ನು ಭಾರತದಿಂದ ತರಿಸಿಕೊಳ್ಳುತ್ತದೆ. ಇದು ರಾಷ್ಟ್ರೀಯ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಆರ್ಥಿಕ ಒಪ್ಪಂದವು ಪರಿಣಾಮದ ಬಗ್ಗೆಯೂ ಗಮನಹರಿಸಬೇಕಾಗುತ್ತದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಲ್ಲಿದ್ದಾಗ, ಬಾಂಗ್ಲಾ ಮತ್ತು ಭಾರತದ ನಡುವೆ ಉತ್ತಮ ಸ್ಥಿರ ಸಂಬಂಧವನ್ನು ಹೊಂದಿದ್ದರು. ಆದರೆ ಈ ಚುನಾವಣೆಯಲ್ಲಿ ಅವರ ಪಕ್ಷ ಅವಾಮಿ ಲೀಗ್ ನಿಷೇಧಿಸಲ್ಪಟ್ಟಿತ್ತು.
ಈಗ ಅಧಿಕಾರ ಹಿಡಿದಿರುವ ಬಿಎನ್‌ಪಿ ಸರ್ಕಾರವು ಭಾರತವನ್ನು ಗೌರವಿಸುವುದಾಗಿ ಹೇಳಿದೆ. ತಾರಿಕ್ ರೆಹಮಾನ್ ಅವರ ಸರ್ಕಾರವು ಭಾರತದ ಜೊತೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಎನ್‌ಪಿ ಮತ್ತು ಜಮಾತೆ-ಇ-ಇಸ್ಲಾಮಿ ಪಕ್ಷವು ನೇರಾನೇರ ಪೈಪೋಟಿಯಲ್ಲಿದ್ದವು. ಒಂದು ವೇಳೆ ಇಸ್ಲಾಮಿಕ್ ಸಂಘಟನೆಯಾದ ಜಮಾತೆ-ಇ-ಇಸ್ಲಾಮಿ ಪಕ್ಷವು ಅಧಿಕಾರಕ್ಕೆ ಬಂದಿದ್ದರೆ, ಭಾರತಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಅಸ್ಥಿರಗೊಳಿಸುವ ಸಾಧ್ಯತೆ ಹೆಚ್ಚಿತ್ತು. ಇಸ್ಲಾಮಿಕ್ ಸಂಘಟನೆಯೂ ಪಾಕಿಸ್ತಾನಕ್ಕೆ ಹೆಚ್ಚು ಹತ್ತಿರವಾಗಿರುವುದರಿಂದ, ಪಾಕಿಸ್ತಾನ ಅಥವಾ ಬೆಂಬಲಿತ ಭಯೋತ್ಪಾದಕ ಗುಂಪುಗಳು ಭಾರತದ ಈಶಾನ್ಯ ಭಾಗದಲ್ಲಿ ದಾಳಿ ಮಾಡಲು ಬಾಂಗ್ಲಾದೇಶವನ್ನು ಬಳಸಿಕೊಳ್ಳುವ ಸಾಧ್ಯತೆ ಇತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ.
ತಾರಿಕ್ ರೆಹಮಾನ್ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗಡಿ ನಿಯಂತ್ರಣದ ಮೇಲೆಯೂ ಪರಿಣಾಮ ಬೀರಬಹುದು. ಆಕ್ರಮವಾಗಿ ಗಡಿ ದಾಟುವಿಕೆ ಮತ್ತು ಗಡಿಯಾಚೆಗಿನ ಹತ್ಯೆಗಳು ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ನಿಯಂತ್ರಿಸುವ ಜೊತೆಗೆ, ಆಂತರಿಕ ರಾಜಕೀಯದ ಮೇಲೆ ಪರಿಣಾಮ ಬೀರಬಲ್ಲ ಬಗ್ಗೆ ಚರ್ಚೆ ನಡೆಯುವುದು ಉತ್ತಮ ಎಂದು ಸೂಚಿಸುತ್ತಿದೆ.
ಭಾರತ ಮತ್ತು ಬಾಂಗ್ಲಾದೇಶವು 4,100 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಇದು ಜನನಿಬಿಡ ಮತ್ತು ರಾಜಕೀಯವಾಗಿ ಸೂಕ್ಷ್ಮ ಪ್ರದೇಶವಾಗಿದೆ. ಬಾಂಗ್ಲಾದೇಶವು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯದ ಗಡಿಯನ್ನು ಹಂಚಿಕೊಂಡಿದೆ. ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಈ ಎರಡೂ ರಾಜ್ಯಗಳಲ್ಲಿ ಪ್ರಮುಖವಾಗಿ ಎದ್ದಿರುವ ವಿಷಯವೆಂದರೆ, ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರನ್ನು ರಕ್ಷಿಸಿದೆ ಎಂಬ ಆರೋಪದ ಮೇಲೆ ಟಿಎಂಸಿ ಪಕ್ಷವು ಟೀಕೆಗೆ ಗುರಿಯಾಗಿದ್ದು ಮತ್ತು ಅಸ್ಸಾಂನಲ್ಲಿ ಅಕ್ರಮ ವಲಸಿಗರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದು ಎಂದು ಬಿಜೆಪಿ ಪ್ರತಿಜ್ಞೆ ಮಾಡಿದ್ದು ಗಂಭೀರ ವಿಷಯವಾಗಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡಿಸಿಕೊಳ್ತೀರಲ್ಲ, ಆಗ ಜಾತಿ ಯಾಕೆ ಮುಖ್ಯ ಆಗುವುದಿಲ್ಲ?
ಈಗ ಬಾಂಗ್ಲಾದಲ್ಲಿ ಅಧಿಕಾರಕ್ಕೆ ಏರಿರುವ ತಾರಿಕ್ ರೆಹಮಾನ್ ಅವರ ಸರ್ಕಾರವು ಭಾರತದ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಬಗ್ಗೆ ನಿರೀಕ್ಷೆಯಿದೆ. ಆದರೆ ಭಾರತವು ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತದಲ್ಲಿ ಆಶ್ರಯ ನೀಡಿರುವುದರಿಂದ, ತಾರಿಕ್ ರೆಹಮಾನ್ ಏನು ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಕುತೂಹಲದ ಸಂಗತಿಯಾಗಿದೆ.





