ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಅಭೂತಪೂರ್ವ ಗೆಲುವು ಸಾಧಿಸಿದೆ. ಜಯ ಸಾಧಿಸಿದ ಬೆನ್ನಲ್ಲೇ, ಭಾರತದಲ್ಲಿ ರಕ್ಷಣೆ ಪಡೆದಿರುವ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾಗೆ ಗಡಿಪಾರು ಮಾಡುವಂತೆ ಭಾರತ ಸರ್ಕಾರವನ್ನು ಬಿಎನ್‌ಪಿ ಒತ್ತಾಯಿಸಿದೆ.
ಹಸೀನಾ ಅವರನ್ನು ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಮರಳಿ ತರಲು ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳನ್ನು ಪಕ್ಷವು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಬಿಎನ್‌ಪಿ ನಾಯಕ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ.
“ಕಾನೂನಿನ ಪ್ರಕಾರ ಹಸೀನಾರನ್ನು ಹಸ್ತಾಂತರಿಸುವಂತೆ ನಾವು ಭಾರತವನ್ನು ಒತ್ತಾಯಿಸುತ್ತೇವೆ. ಎರಡು ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ವಿಚಾರಣೆ ಎದುರಿಸಲು ಅವರನ್ನು ವಾಪಸ್ ಕಳುಹಿಸುವಂತೆ ನಾವು ಭಾರತ ಸರ್ಕಾರವನ್ನು ಕೇಳಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಗುರುವಾರ, ಬಾಂಗ್ಲಾ ಚುನಾವಣೆ ನಡೆದಿದ್ದು, ಶುಕ್ರವಾರ ಫಲಿತಾಂಶ ಪ್ರಕಟವಾಗಿದೆ. ಒಟ್ಟು 350 ಸಂಸತ್ ಸ್ಥಾನಗಳ ಪೈಕಿ ಬಿಎನ್‌ಪಿ 209 ಸ್ಥಾನಗಳನ್ನು ಗೆದಿದ್ದರೆ, ಜಮಾಅತೆ ಇಸ್ಲಾಮಿ 68 ಸ್ಥಾನಗಳನ್ನು ಗಳಿಸಿದೆ. ಉಳಿದ ಸ್ಥಾನಗಳನ್ನು ಇತರರು ಗೆದ್ದಿದ್ದಾರೆ ಎಂದು ವರದಿಯಾಗಿದೆ.




