ಪಾಕಿಸ್ತಾನ ಮತ್ತು ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ಥಾನ ನಡುವೆ ಮತ್ತೆ ಗಡಿ ಸಂಘರ್ಷ ಉದ್ವಿಗ್ನಗೊಂಡಿದೆ. ಶನಿವಾರ ರಾತ್ರಿ ಉಭಯ ರಾಷ್ಟ್ರಗಳ ನಡುವೆ ನಡೆದ ಘರ್ಷಣೆಯಲ್ಲಿ ಪಾಕಿಸ್ಥಾನದ 12 ಸೈನಿಕರನ್ನು ಅಫ್ಘಾನ್ ತಾಲಿಬಾನ್‌ಗಳು ಹತ್ಯೆಗೈದಿದ್ದಾರೆ.
ಎರಡೂ ರಾಷ್ಟ್ರಗಳ ನಡುವಿನ ಡುರಾಂಡ್ ರೇಖೆಯ ಉದ್ದಕ್ಕೂ ಇರುವ ಹಲವಾರು ಪಾಕಿಸ್ತಾನಿ ಸೇನಾ ಹೊರಠಾಣೆಗಳನ್ನು ತಾಲಿಬಾನ್ ನೇತೃತ್ವದ ಅಫ್ಘಾನ್ ಸೇನೆಗಳು ವಶಪಡಿಸಿಕೊಂಡಿವೆ. ಅಸ್ಥಿರ ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಹೆಚ್ಚಿನ ಘರ್ಷಣೆ ನಡೆದಿದೆ ಎಂದು ಅಫ್ಘಾನಿಸ್ಥಾನದ ರಕ್ಷಣಾ ಸಚಿವಾಲಯ ತಿಳಿಸಿದೆ.
ಎರಡೂ ರಾಷ್ಟ್ರಗಳ ಸೈನಿಕರು ಘರ್ಷಣೆಯಲ್ಲಿ ಕನಿಷ್ಠ 12 ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ‘ಟೋಲೋನ್ಯೂಸ್’ ವರದಿ ಮಾಡಿದೆ.
ಅಫ್ಘಾನಿಸ್ಥಾನದ ಪಡೆಗಳು ಏಕಾಏಕಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಅಫ್ಘಾನ್ ದಾಳಿಗೆ ಪಾಕ್ ಪಡೆಗಳು ದಿಟ್ಟತನದಿಂದ ಪ್ರತಿಕ್ರಿಯಿಸುತ್ತಿವೆ ಎಂದು ಪಾಕಿಸ್ಥಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.




