ಅಮೆರಿಕ ಮತ್ತು ಬ್ರಿಟನ್ ಮಾಧ್ಯಮಗಳು ಜಾಗತಿಕ ಮಟ್ಟದಲ್ಲಿ ಇರಾನ್ ಅನ್ನು ಒಂದು 'ದುಷ್ಟ ರಾಷ್ಟ್ರ' ಎಂಬಂತೆ ಬಿಂಬಿಸುತ್ತಲೇ ಬಂದಿದೆ. ಸಿರಿಯಾ, ಲೆಬನಾನ್ ಮತ್ತು ಯೆಮನ್ ದೇಶಗಳಲ್ಲಿ ಇರಾನ್‌ನ ಪ್ರಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕವು ಸ್ಥಳೀಯ ಗುಂಪುಗಳಿಗೆ ಹಣಕಾಸು ಸಹಾಯ ಮಾಡುತ್ತಿದೆ, ಶಸ್ತ್ರಾಸ್ತ್ರಗಳನ್ನು ನೀಡುತ್ತಿವೆ.
ಇರಾನ್ ಮತ್ತು ಪಾಶ್ಚಿಮಾತ್ಯ ದೇಶಗಳಾದ ಅಮೆರಿಕ, ಬ್ರಿಟನ್ ನಡುವಿನ ಸಂಘರ್ಷವು ಕೇವಲ ರಾಜತಾಂತ್ರಿಕ ಸಂಘರ್ಷವಲ್ಲ. ನಾವು ಶಾಂತಿ ಪ್ರಿಯರು ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಈ ದೇಶಗಳು ದಶಕಗಳಿಂದ ಇರಾನ್ ಮೇಲೆ ದುಷ್ಟ ಸಂಚುಗಳನ್ನು ರೂಪಿಸುತ್ತಲೇ ಬಂದಿದೆ. ಅಷ್ಟಕ್ಕೂ ಈ ಪಿತೂರಿಯ ಆಳ ಅರಿಯಲು ಹೋದರೆ ಅಮೆರಿಕದ ಯುದ್ಧದ ಹಪಾಹಪಿಯನ್ನಷ್ಟೇ ಅಲ್ಲ ಅಧಿಕಾರ ರಾಜಕಾರಣ, ತೈಲ ಹಿತಾಸಕ್ತಿ ಮತ್ತು ಗೂಢಚಾರಿ ತಂತ್ರಗಳ ಇತಿಹಾಸವನ್ನು ಮೆಲುಕು ಹಾಕಬೇಕಾಗುತ್ತದೆ.
ಬ್ರಿಟನ್, ಅಮೆರಿಕ ಇತರೆ ದೇಶಗಳ ಸಾರ್ವಭೌಮತ್ವವನ್ನು ಹತ್ತಿಕ್ಕಲು ನಿರಂತರವಾಗಿ ‘ದುಷ್ಟ ಸಂಚು’ಗಳನ್ನು ರೂಪಿಸುತ್ತಲೇ ಬಂದಿವೆ. ತನ್ನ ಈ ಕುತಂತ್ರಗಳ ಮೂಲಕ ಇರಾನ್ ಅನ್ನು ಏಕಾಂಗಿಯನ್ನಾಗಿಸಿ ಸಂಪೂರ್ಣವಾಗಿ ಹಿಡಿತಕ್ಕೆ ಪಡೆದುಕೊಳ್ಳುವುದು ಅಮೆರಿಕದ ಉದ್ದೇಶ. ತೈಲವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವುದು ಅಮೆರಿಕದ ಉದ್ದೇಶ. ಅದರಿಂದಾಗಿಯೇ ಇಸ್ರೇಲ್ ಮುಖಾಂತರ ಯುದ್ಧಕ್ಕೆ ಇಳಿದಿದೆ. ಆದರೆ ಇರಾನ್‌ಗೆ ಇತ್ತ ಚೀನಾ, ರಷ್ಯಾ ಮೊದಲಾದ ದೇಶಗಳ ಬೆಂಬಲವೂ ಇದೆ.
ಇದನ್ನು ಓದಿದ್ದೀರಾ? ನಲುಗಿದ ಇರಾನ್ | 30 ಗಂಟೆಗಳಲ್ಲಿ 2,000ಕ್ಕೂ ಹೆಚ್ಚು ಬಾಂಬ್ ದಾಳಿ
1953ರ ‘ಆಪರೇಷನ್ ಅಜಾಕ್ಸ್’ (Operation Ajax)
ಒಂದು ದೇಶದ ಪ್ರಜಾಪ್ರಭುತ್ವವನ್ನು ವಿದೇಶಿ ಶಕ್ತಿಗಳು ಹೇಗೆ ಹತ್ತಿಕ್ಕಬಹುದು ಎಂಬುದಕ್ಕೆ ದೊಡ್ಡ ಉದಾಹರಣೆಯೇ 1953ರ ‘ಆಪರೇಷನ್ ಅಜಾಕ್ಸ್’ ಆಗಿದೆ. ಅಂದಿನ ಇರಾನ್‌ನ ಪ್ರಧಾನಿ ಮೊಹಮ್ಮದ್ ಮೊಸಾದೆಕ್ ಅಲ್ಲಿನ ತೈಲ ಉದ್ಯಮವನ್ನು ಬ್ರಿಟಿಷರ ಹಿಡಿತದಿಂದ ಮುಕ್ತಗೊಳಿಸಿ ರಾಷ್ಟ್ರೀಕರಣಗೊಳಿಸಿದರು. ಆದರೆ ಇದರಿಂದ ಕೆರಳಿದ ಬ್ರಿಟನ್‌ನ ವಿದೇಶಿ ಗುಪ್ತಚರ ಸಂಸ್ಥೆ MI6 ಮತ್ತು ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (CIA) ಜಂಟಿಯಾಗಿ ಸಂಚು ರೂಪಿಸಿತು. ಅಮೆರಿಕವು ಇರಾನ್‌ನ ಪತ್ರಿಕೆಗಳಿಗೆ ಹಣ ನೀಡಿ ಮೊಸಾದೆಕ್ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿಸಿತ್ತು. ಜನಸಾಮಾನ್ಯರ ಸೋಗಿನಲ್ಲಿ ಗೂಂಡಾಗಳನ್ನು ಬೀದಿಗೆ ಇಳಿಸಿ ಗಲಭೆ ಸೃಷ್ಟಿಸಿತ್ತು. ಮಿಲಿಟರಿ ಶಕ್ತಿಯನ್ನು ಬಳಸಿ ಮೊಸಾದೆಕ್ ಸರ್ಕಾರವನ್ನು ಉರುಳಿಸಿತು. ಇರಾನ್‌ನ ಮೇಲೆ ಪಾಶ್ಚಿಮಾತ್ಯ ಪರವಾಗಿದ್ದ ‘ಶಾ’ (Shah) ಆಡಳಿತವನ್ನು ಹೇರಲಾಯಿತು.
1980-88ರ ಇರಾನ್-ಇರಾಕ್ ಯುದ್ಧದಲ್ಲಿನ ಕುತಂತ್ರ
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಅಮೆರಿಕವು ಇರಾನ್‌ನಲ್ಲಿ ತನ್ನ ಪರವಾಗಿದ್ದ ‘ಶಾ’ ಆಡಳಿತವನ್ನು ಕಳೆದುಕೊಂಡಿತು. ಅದಾದ ಬಳಿಕ ಇರಾನ್‌ನ ಹೊಸ ಸರ್ಕಾರವನ್ನು ಹತ್ತಿಕ್ಕಲು ಅಮೆರಿಕ ಮತ್ತು ಬ್ರಿಟನ್ ಪ್ರಯತ್ನಿಸಿತು. ಅಮೆರಿಕಕ್ಕೆ ಇರಾನ್ ಮೇಲಿನ ತನ್ನ ಪ್ರಭಾವ ಕುಸಿಯುವ ಭೀತಿ ಎದುರಾಗುತ್ತಿದ್ದಂತೆ ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅನ್ನು ಇರಾನ್ ವಿರುದ್ಧ ದಾಳ ಇಟ್ಟಿತು. ಇರಾಕ್ ಅನ್ನು ಇರಾನ್ ವಿರುದ್ಧ ಎತ್ತಿಕಟ್ಟಿ ನಡೆಸಿದ ರಾಜಕೀಯ ಆಟವು ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ಅಧ್ಯಾಯ. ಇರಾಕ್‌ನ ಸದ್ದಾಂ ಹುಸೇನ್ ಇರಾನ್ ಮೇಲೆ ದಾಳಿ ಮಾಡಿದಾಗ, ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಇರಾಕ್‌ಗೆ ಗುಪ್ತಚರ ಮಾಹಿತಿ, ಹಣಕಾಸು ಮತ್ತು ಶಸ್ತ್ರಾಸ್ತ್ರಗಳ ಸಹಾಯವನ್ನು ನೀಡಿತು. ಇರಾನ್‌ಗೆ ಆರ್ಥಿಕ ದಿಗ್ಬಂಧನ ವಿಧಿಸಿತು. ಈ ಯುದ್ಧವು ಇರಾನ್‌ನ ಆರ್ಥಿಕತೆ ಕುಸಿತಕ್ಕೆ ಮತ್ತು 10ರಿಂದ 15 ಲಕ್ಷ ಇರಾನ್ ಜನತೆ ಸಾವನ್ನಪ್ಪಿದ್ದರೆ, 5-7ರಿಂದ ಲಕ್ಷ ಇರಾಕ್ ಜನರು ಮೃತಪಟ್ಟಿದ್ದಾರೆ. ಈ ಯುದ್ಧದ ನಂತರ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಬಲಿಷ್ಠವಾಗಿ ಹೊರಹೊಮ್ಮುತ್ತದೆ.

ಅಮೆರಿಕ ನೀಡಿದ ರಾಸಾಯನಿಕ ಅಸ್ತ್ರಗಳನ್ನು ಬಳಸಿಕೊಂಡು ಸದ್ದಾಂ ಇರಾನ್‌ನಲ್ಲಿ ಕುರ್ದಿಷ್ ಜನರ ಮಾರಣಹೋಮ ನಡೆಸಿದ್ದಾರೆ. 4,000 ಕುರ್ದಿಷ್ ಹಳ್ಳಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. 50,000 ರಿಂದ 1,82,000 ಕುರ್ದಿಗಳನ್ನು ಇರಾಕ್ ಕೊಂದಿದೆ. ಇದಾಗುತ್ತಿದ್ದಂತೆ ಕುವೈತ್ ಇರಾಕ್‌ನಿಂದ ತೈಲ ಕದಿಯುತ್ತಿದೆ ಎಂಬ ಕಾರಣಕ್ಕೆ ಸದ್ದಾಂ ಹುಸೇನ್ ನೇತೃತ್ವದಲ್ಲಿ ‘ಗಲ್ಫ್ ಯುದ್ಧ’ ನಡೆಯಿತು. ಈ ದಾಳಿಯಿಂದಾಗಿ ವಿಶ್ವದ 20% ತೈಲ ನಿಕ್ಷೇಪಗಳು ಇರಾಕ್ ಕೈವಶವಾದವು. ತೈಲ ಅಮೆರಿಕದ ಬದಲಾಗಿ ಇರಾಕ್ ಹತೋಟಿಗೆ ಬರುತ್ತಿದ್ದಂತೆ ಅಮೆರಿಕ ಮಧ್ಯಪ್ರವೇಶಿಸಿ ಕುವೈತ್ ಅನ್ನು ಇರಾಕ್‌ನಿಂದ ಮುಕ್ತಗೊಳಿಸಿತು. ಇನ್ನೂ ವಿಪರ್ಯಾಸವೆಂದರೆ, 2003ರಲ್ಲಿ ಅಮೆರಿಕವು ಇರಾಕ್ ಬಳಿ ಸಾಮೂಹಿಕ ವಿನಾಶಕಾರಿ ಅಸ್ತ್ರಗಳನ್ನು ಹೊಂದಿದೆ ಎಂದು ಇರಾಕ್ ವಿರುದ್ಧ ಯುದ್ಧ ಸಾರಿತು. ಆದರೆ ಈ ಅಸ್ತ್ರಗಳನ್ನು ಒದಗಿಸಿರುವುದೇ ಅಮೆರಿಕ. ಕೊನೆಗೆ 2006ರ ಡಿಸೆಂಬರ್ 30ರಂದು ಸದ್ದಾಂ ಹುಸೇನ್ ಅನ್ನು ಇರಾಕ್‌ನ ಬಾಗ್ದಾದ್‌ನಲ್ಲಿ ಗಲ್ಲಿಗೇರಿಸಲಾಯಿತು.
ಇದನ್ನು ಓದಿದ್ದೀರಾ? ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ: ಜಾಗತಿಕ ಇಂಧನ ಪೂರೈಕೆಗೆ ಅಡ್ಡಿ; ತೈಲ ಬೆಲೆ ತೀವ್ರ ಏರಿಕೆ
ಪರಮಾಣು ಕೇಂದ್ರಗಳ ಮೇಲೆ ಕಣ್ಣು
2015ರಲ್ಲಿ ಇರಾನ್ ಪರಮಾಣು ಒಪ್ಪಂದಕ್ಕೆ (JCPOA) ಸಹಿ ಹಾಕಿತ್ತು. ಯುರೇನಿಯಂ ಪುಷ್ಟೀಕರಣದ ಮಟ್ಟವನ್ನು ಶೇ. 3.67ಕ್ಕೆ ಸೀಮಿತಗೊಳಿಸುವುದು, ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಕಟ್ಟುನಿಟ್ಟಾದ ತಪಾಸಣೆಗೆ ಒಪ್ಪುವುದು, ತನ್ನಲ್ಲಿರುವ ಸೆಂಟ್ರಿಫ್ಯೂಜ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸುವುದು ಈ ಒಪ್ಪಂದ ಭಾಗವಾಗಿತ್ತು. ಇವೆಲ್ಲವನ್ನು ಒಪ್ಪಿ ಇರಾನ್ ಸಹಿ ಹಾಕಿತ್ತು. ಹಾಗಿದ್ದರೂ 2018ರಲ್ಲಿ ಅಮೆರಿಕ ಏಕಪಕ್ಷೀಯವಾಗಿ ಈ ಒಪ್ಪಂದದಿಂದ ಹೊರಬಂದು ಮತ್ತೆ ನಿರ್ಬಂಧಗಳನ್ನು ಹೇರಿತು. ಅಷ್ಟು ಮಾತ್ರವಲ್ಲದೆ ಇರಾನ್ ಬಾಂಬ್ ತಯಾರಿಸುತ್ತಿದೆ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಆದರೆ ತನ್ನ ಇಂಧನ ಅಗತ್ಯಕ್ಕಾಗಿ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಇರಾನ್ ಹೇಳುತ್ತಿದೆ. ಅಣುಶಕ್ತಿ ಕಾರ್ಯಕ್ರಮದ ಮೇಲೆ ಅಮೆರಿಕ ದಾಳಿಯನ್ನೂ ನಡೆಸಿದೆ. ‘ಸ್ಟಕ್ಸ್‌ನೆಟ್’ (Stuxnet) ಎಂಬ ಕಂಪ್ಯೂಟರ್ ವೈರಸ್ ಮೂಲಕ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಡಿಜಿಟಲ್ ದಾಳಿಯನ್ನು ನಡೆಸಲಾಗಿದೆ. ಇರಾನ್‌ನ ಪ್ರಮುಖ ಪರಮಾಣು ವಿಜ್ಞಾನಿಗಳಾದ ಮೊಹ್ಸೆನ್ ಫಕ್ರಿಜಾದೆಹ್ ಸೇರಿ ಹಲವರ ಹತ್ಯೆಗಳೂ ನಡೆದಿದೆ. ಇವೆಲ್ಲವುದರ ಹಿಂದೆ ಪಾಶ್ಚಿಮಾತ್ಯ ಗೂಢಚಾರಿ ಸಂಸ್ಥೆಗಳ ಕೈವಾಡವಿದೆ ಎಂಬುದು ಇರಾನ್‌ನ ಆರೋಪ.
ಆರ್ಥಿಕ ನಿರ್ಬಂಧಗಳೆಂಬ ಅಸ್ತ್ರ ಪ್ರಯೋಗ
ಅಮೆರಿಕವು ಕಳೆದ ಹಲವು ದಶಕಗಳಿಂದ ಇರಾನ್ ಮೇಲೆ ಕಠಿಣವಾದ ಆರ್ಥಿಕ ನಿರ್ಬಂಧಗಳನ್ನು (Sanctions) ಹೇರುತ್ತಲೇ ಬಂದಿದೆ. ವಿಶ್ವದ ಇತಿಹಾಸದಲ್ಲೇ ಅತಿ ಕಠಿಣವಾದ ಆರ್ಥಿಕ ನಿರ್ಬಂಧಗಳನ್ನು ಅಮೆರಿಕವು ಇರಾನ್ ಮೇಲೆ ವಿಧಿಸಿದೆ. ಇರಾನ್‌ನ ತೈಲ ರಫ್ತನ್ನು ತಡೆಯುವುದು, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದು ಮತ್ತು ಆ ಮೂಲಕ ದೇಶದ ಆರ್ಥಿಕತೆಯನ್ನು ಕುಸಿಯುವಂತೆ ಮಾಡುವ ಉದ್ದೇಶದಿಂದಲೇ ಅಮೆರಿಕ ಈ ಕುತಂತ್ರಗಳನ್ನು ಹೆಣೆದಿದೆ. ಇವೆಲ್ಲವುದರ ಪ್ರಭಾವ ಸಾಮಾನ್ಯ ಜನರ ಮೇಲೆ ಬಿದ್ದಿರುವುದು. ಇರಾನ್ ಇದನ್ನು ‘ಆರ್ಥಿಕ ಭಯೋತ್ಪಾದನೆ’ ಎಂದು ಕರೆದಿದೆ.
ಅಮೆರಿಕ ಮತ್ತು ಬ್ರಿಟನ್ ಮಾಧ್ಯಮಗಳು ಜಾಗತಿಕ ಮಟ್ಟದಲ್ಲಿ ಇರಾನ್ ಅನ್ನು ಒಂದು ‘ದುಷ್ಟ ರಾಷ್ಟ್ರ’ ಎಂಬಂತೆ ಬಿಂಬಿಸುತ್ತಲೇ ಬಂದಿದೆ. ಸಿರಿಯಾ, ಲೆಬನಾನ್ ಮತ್ತು ಯೆಮನ್ ದೇಶಗಳಲ್ಲಿ ಇರಾನ್‌ನ ಪ್ರಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕವು ಸ್ಥಳೀಯ ಗುಂಪುಗಳಿಗೆ ಹಣಕಾಸು ಸಹಾಯ ಮಾಡುತ್ತಿದೆ, ಶಸ್ತ್ರಾಸ್ತ್ರಗಳನ್ನು ನೀಡುತ್ತಿವೆ ಎಂಬ ಆರೋಪಗಳಿವೆ. ಈ ಎಲ್ಲ ಕುತಂತ್ರಗಳನ್ನು ದಾಟಿ ಈಗ ಇರಾನ್ ಅನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವ ದುರಾಸೆಯಲ್ಲಿ ಅಮೆರಿಕ, ಇಸ್ರೇಲ್ ಯುದ್ಧಕ್ಕಿಳಿದಿದೆ. ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಇದರಿಂದಾಗಿ ಇಡೀ ವಿಶ್ವವೇ ಆರ್ಥಿಕವಾಗಿ ತತ್ತರಿಸುವಂತಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




